ಜತೆಗಿರುವಳು “ಚಂದ್ರ’
Team Udayavani, May 12, 2018, 12:32 PM IST
ಮಗುವಿಗೆ ಸಣ್ಣ ಜ್ವರ ಬಂದರೂ ಅಮ್ಮನ ಜೀವ ಚಡಪಡಿಸುತ್ತದೆ. ಮಗುವಿನ ಹಣೆ ಬೆಚ್ಚಗಾದರೆ ಅಮ್ಮನ ಎದೆಗೆ ಬೆಂಕಿ ತಾಗುತ್ತದೆ. ಜಗತ್ತಿನ ಎಲ್ಲ ತಾಯಂದಿರೂ ಹಾಗೆಯೇ…ಚಂದ್ರರೇಖಾ ಕೂಡ ಅವರಲ್ಲೊಬ್ಬರು. ಇವರು, ಟೆಕ್ವಾಂಡೊನಲ್ಲಿ ಸಾಧನೆ ಮಾಡುತ್ತಿರುವ ಲವನ್‌ನ ಹೆಮ್ಮೆಯ ಅಮ್ಮ. ಮಗನಿಗೆ ಗುಣಪಡಿಸಲಾಗದ ರೋಗವಿದೆ. ಚಿಕಿತ್ಸೆಯ ಖರ್ಚು ತಿಂಗಳಿಗೆ ಲಕ್ಷ ಮುಟ್ಟುತ್ತಿದೆ. ಆದರೆ, ಆ ನೋವು ಅವನನ್ನೂ, ಇವರನ್ನೂ ಕುಗ್ಗಿಸಿಲ್ಲ. ದುಬಾರಿ ಚಿಕಿತ್ಸೆ ಕೊಡಿಸುತ್ತಲೇ, ತರಬೇತಿಯನ್ನೂ ನೀಡುತ್ತಾ ನೋಡಿಕೊಳ್ಳುತ್ತಾ, ಅವನ ಸಾಧನೆಯ ಹಾದಿಗೆ ಮೆಟ್ಟಿಲುಗಳನ್ನಿಡುತ್ತಿದ್ದಾರೆ…
”ದೇವರು ನಮ್ಮ ಆರೋಗ್ಯವನ್ನೂ ಇವನಿಗೇ ಕೊಟ್ಟು ಬಿಡಲಿ. ಅದೊಂದನ್ನು ಬಿಟ್ಟು ಬೇರೆ ಏನನ್ನೂ ಕೇಳ್ಳೋದಿಲ್ಲ ನಾವು. ಜಗತ್ತಲ್ಲಿ ಏನೇನೋ ಪವಾಡುಗಳು ನಡೆಯುತ್ತವಂತೆ. ಅಂಥದ್ದೊಂದು ಪವಾಡ ಇವನ ಆರೋಗ್ಯದಲ್ಲಿ ಆಗಿಬಿಡಲಿ…’ ಎಂದರು ಚಂದ್ರರೇಖಾ. ಹಾಗೆ ಹೇಳುವಾಗ ನೋವಿನ ಎಳೆಯೊಂದು ಅವರ ಕಣ್ಣಲ್ಲಿತ್ತು. ಜೊತೆಗೇ ಮಗನ ಸಾಧನೆಯ ಬಗ್ಗೆ ಹೆಮ್ಮೆಯೂ.
ಚಂದ್ರರೇಖಾ, ಟೆಕ್ವಾಂಡೊ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬೆಂಗಳೂರಿನ ಲವನ್‌ಕುಮಾರ್‌ನ ತಾಯಿ. 8 ವರ್ಷದ ಮಗನ ಸಾಧನೆಯ ಖುಷಿಯ ಜೊತೆಗೇ ಅವರನ್ನು ಕಾಡುತ್ತಿರುವುದು ಮಗನ “ಕ್ರೋನ್’ ಎಂಬ ಉದರಸಂಬಂಧಿ ಕಾಯಿಲೆ. ಅಪರೂಪದ ಪ್ರತಿಭೆಯ ಲವನ್‌ಗೆ ಅತಿ ಸಣ್ಣ ವಯಸ್ಸಿನಲ್ಲಿಯೇ ಈ ಅಪರೂಪದ ಕಾಯಿಲೆಯೂ ಜೊತೆಯಾಗಿದೆ. ತಿಂದ ಆಹಾರವೆಲ್ಲ ಜೀರ್ಣವಾಗದೇ ವಿಸರ್ಜನೆಯಾಗುವುದು, ಅತಿಯಾದ ನಿಶ್ಶಕ್ತಿ, ಹೊಟ್ಟೆಯ ಹುಣ್ಣು ಹಾಗೂ ಉರಿ “ಕ್ರೋನ್’ ಕಾಯಿಲೆಯ ಲಕ್ಷಣಗಳು. ಯುರೋಪ್ ದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ರೋಗ ಭಾರತದಲ್ಲಿ ಅಪರೂಪ. ಈ ರೋಗಕ್ಕೆ ಇಂಥದ್ದೇ ಔಷಧಿ ಎಂದು ಇನ್ನೂ ಯಾರೂ ಕಂಡುಹಿಡಿದಿಲ್ಲವಂತೆ. ಲವನ್, ಜೀವನಪರ್ಯಂತ ಇಂಜೆಕ್ಷನ್, ಚಿಕಿತ್ಸೆಯ ಬಲದಿಂದಲೇ ನೋವು ನುಂಗಬೇಕು. ಕಾಯಿಲೆಯೊಂದಿಗೆ ಹೋರಾಡುತ್ತಲೇ, ಟೆಕ್ವಾಂಡೊನಲ್ಲಿ ಪದಕಗಳನ್ನು ಚುಂಬಿಸುತ್ತಿರುವ ಹುಡುಗನಿಗೆ ತಾಯಿಯೇ ಮಾರ್ಗದರ್ಶಕಿ.
ಚಂದ್ರರೇಖಾರ ಪತಿ ಉದಯಕುಮಾರ್ ಸಿಟಿ ಮಾರ್ಕೆಟ್‌ನಲ್ಲಿ ಹಣ್ಣಿನ ವ್ಯಾಪಾರಿ. ದಿನಕ್ಕೆ ಸಾವಿರ ರೂ. ಆದಾಯ ಬಂದರೆ ಅದೇ ಹೆಚ್ಚು. ಬಂದ ದುಡ್ಡಲ್ಲೇ ಮನೆಯ ಖರ್ಚು, ಮಗನ ದುಬಾರಿ ಚಿಕಿತ್ಸೆ, ಅವನ ತರಬೇತಿ, ಆರೋಗ್ಯದ ಕಾಳಜಿಯನ್ನು ಸರಿದೂಗಿಸುತ್ತಿರುವವರು ಬಿ.ಕಾಂ. ಪದವೀಧರೆಯಾಗಿರುವ ಚಂದ್ರರೇಖಾ. ಮಕ್ಕಳಿಗೆ ತಮ್ಮ ಸಂಪೂರ್ಣ ಸಮಯ ನೀಡುವ ಸಲುವಾಗಿ ಕೆಲಸಕ್ಕೂ ಹೋಗದೆ ಮನೆಯಲ್ಲೇ ಉಳಿದ ಚುರುಕಿನ ಗೃಹಿಣಿ.
ಪ್ರತಿ ತಿಂಗಳು 2 ಇಂಜೆಕ್ಷನ್ ಕೊಡಿಸಬೇಕು. ಒಂದು ಇಂಜೆಕ್ಷನ್‌ಗೆ 25 ಸಾವಿರ ರೂ. ತಿಂಗಳಿಗೆ ಅಂದಾಜು 70 ಸಾವಿರ ರೂ. ಇವನ ಚಿಕಿತ್ಸೆಗೇ ಖರ್ಚಾಗುತ್ತದೆ. ನಾವು ಬಡವರು. ಇವನು ಆರೋಗ್ಯವಾಗಿರಬೇಕು. ಜೊತೆಗೆ ಸಾಧನೆಯನ್ನೂ ಮಾಡಬೇಕು. ಅದಕ್ಕೆ ಏನು ಮಾಡಲೂ ನಾವು ಸಿದ್ಧರಿದ್ದೇವೆ ಎನ್ನುತ್ತಾರೆ ಅವರು. ಲವನ್‌ನ ತರಬೇತಿಯ ಹಾಗೂ ಆರೋಗ್ಯದ ಸಲುವಾಗಿ ಮನೆಯ ದಿನಚರಿಯಲ್ಲಿ, ಸೇವಿಸುವ ಆಹಾರದಲ್ಲಿ ಕೆಲವು ಬದಲಾವಣೆಗಳಾಗಿವೆ. ಬೆಳಗ್ಗೆ 5.30-7ರವರೆಗೆ ಟೆಕ್ವಾಂಡೊ ಕ್ಲಾಸ್ ನಡೆಯುತ್ತದೆ. ನಂತರ ಶಾಲೆ. ಅವನದ್ದು ಕರುಳಿನ ಸಮಸ್ಯೆಯಾಗಿದ್ದರಿಂದ ಊಟ- ತಿಂಡಿಯಲ್ಲಿ ಅತಿಯಾದ ಕಾಳಜಿ ಬೇಕು. 10.30ರ ಬ್ರೇಕ್ ಸಮಯಕ್ಕೆ, ಸುಲಭವಾಗಿ ಜೀರ್ಣವಾಗುವಂಥ, ಹೊಟ್ಟೆಗೆ ಹಾನಿಯಾಗದ ಆಹಾರ ತಯಾರಿಸಿ ಶಾಲೆಗೇ ತೆಗೆದುಕೊಂಡು ಹೋಗುತ್ತಾರೆ ಈ ತಾಯಿ. ಮಧ್ಯಾಹ್ನದ ಊಟದಲ್ಲೂ ಹೆಚ್ಚು ಉಪ್ಪು, ಖಾರ, ಎಣ್ಣೆ ಇರುವುದಿಲ್ಲ. ಅದೇ ಆಹಾರಕ್ಕೆ ಮನೆಮಂದಿಯೂ ಒಗ್ಗಿದ್ದೇವೆ ಎನ್ನುತ್ತಾರೆ ಚಂದ್ರರೇಖಾ. ಸಂಜೆ ಮತ್ತೆ 5-7 ಗಂಟೆಯವರೆಗೆ ನಡೆಯುವ ಟೆಕ್ವಾಂಡೊ ತರಗತಿಯಲ್ಲೂ ಮಗನಿಗೆ ಈಕೆ ಸಾಥ್ ಕೊಡುತ್ತಾರೆ.
3ನೇ ವಯಸ್ಸಿಗೆ ಲವನ್‌ನ ಟೆಕ್ವಾಂಡೊ ಕಲಿಕೆ ಶುರುವಾಯ್ತು, 6ಕ್ಕೆಲ್ಲ ಪದಕವನ್ನೂ ಗೆದ್ದ. ಏಳರ ವಯಸ್ಸಿಗೇ ಕಂಡು, ಕೇಳರಿಯದ ಕಾಯಿಲೆಯೂ ಬಂತು. ಅವನಿಗೆ ಏನಾಗಿದೆ ಅಂತ ಹೇಳುವುದಕ್ಕೇ ಬೆಂಗಳೂರಿನ ವೈದ್ಯರು ನಾಲ್ಕೈದು ತಿಂಗಳು ತೆಗೆದುಕೊಂಡರು. ಆ ಐದು ತಿಂಗಳು ನಾವು ಆಸ್ಪತ್ರೆಯಲ್ಲಿ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಅವನಿಗೆ ಏನಾಗ್ತಿದೆ, ಎಲ್ಲಿ ನೋವಾಗ್ತಿದೆ ಅಂತ ನಮಗೆ ಅರ್ಥ ಆಗ್ತಾ ಇರಲಿಲ್ಲ. ತಾಯಿಯಾಗಿಯೂ ಅವನ ನೋವನ್ನು ಹಂಚಿಕೊಳ್ಳಲಾಗದ ಅಸಹಾಯಕ ಸ್ಥಿತಿ ಅದು ಅಂತಾರೆ ಚಂದ್ರರೇಖಾ. ಖಾಸಗಿ ಆಸ್ಪತ್ರೆಯ ಡಾಕ್ಟರೊಬ್ಬರು, “ಈ ಪೋಷಕರಿಗೆ ಚಿಕಿತ್ಸೆಯ ಖರ್ಚನ್ನು ಭರಿಸಲು ಆಗುತ್ತಿಲ್ಲ’ ಎಂದು ಚೀಟಿ ಬರೆದು ಸರ್ಕಾರಿ ಆಸ್ಪತ್ರೆಗೆ ಕಳಿಸಿದರಂತೆ. “ಅಲ್ಲಂತೂ ಕೇಳುವವರೇ ಇರಲಿಲ್ಲ. ಒಂದು ಬೆಡ್‌ಶೀಟ್ ಕೊಟ್ಟು, ಅಲ್ಲೆಲ್ಲಾದರೂ ಖಾಲಿ ಬೆಡ್ ಇದ್ದರೆ ಮಲಗಿಸಿ ಅಂದುಬಿಟ್ಟರು. ಮುಟ್ಟಿಯೂ ನೋಡುವವರಿರಲಿಲ್ಲ. ಕೊನೆಗೆ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕರೆದೊಯ್ಯಲಾಯಿತು. ಅಲ್ಲಿನ ತಜ್ಞ ವೈದ್ಯರು ಆತನ ಕಾಯಿಲೆಯನ್ನು ಸರಿಯಾಗಿ ಗುರುತಿಸಿ, ನಮಗೆ ಮಾಹಿತಿ ನೀಡಿ ಚಿಕಿತ್ಸೆ ಶುರುಮಾಡಿದ ಮೇಲೆ ತುಸು ಚೇತರಿಸಿಕೊಂಡಿದ್ದಾನೆ ಲವನ್. ನೋವಿನ ಮಧ್ಯೆಯೂ ಟೆಕ್ವಾಂಡೊ ಕಲಿಕೆ, ಪದಕ ಗಳಿಕೆ ನಿಂತಿಲ್ಲ… ಅನ್ನುತ್ತಾರೆ ಚಂದ್ರರೇಖಾ.
ಅವನೇ ನಮ್ಮ ಅಸ್ತಿತ್ವ
“ನೀವು ಲವನ್‌ನ ಅಮ್ಮ ಅಲ್ವಾ?’ ಅಂತ ಜನ ನನ್ನನ್ನು ಗುರುತಿಸಿದಾಗೆಲ್ಲಾ ಮಗನ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತದೆ. ಕೆಲವು ಸಲ ಅವನು ನೋವು ತಡೆಯಲಾರದೆ ಅತ್ತು ಬಿಡುತ್ತಾನೆ. ಆಗ ಏನು ಮಾಡೋದು ಅಂತ ಗೊತ್ತಾಗದೇ ನಾನೂ ಕಣ್ಣೀರು ಹಾಕುತ್ತೇನೆ. ಕೊನೆಗೆ ಅವನೇ, “ನಂಗೇನೂ ಆಗಿಲ್ಲ ಅಮ್ಮಾ. ನಾನು ತುಂಬಾ ಸ್ಟ್ರಾಂಗ್ ಇದೀನಿ’ ಅಂತ ಸಮಾಧಾನ ಮಾಡುತ್ತಾನೆ. ಅಷ್ಟು ನೋವು ತಿಂದರೂ, ಟೆಕ್ವಾಂಡೊ ಬಗ್ಗೆ ಚೂರೂ ಆಸಕ್ತಿ ಕಳೆದುಕೊಂಡಿಲ್ಲ. ಆ ಸಮವಸ್ತ್ರ ಧರಿಸಿದ ಮೇಲೆ ಅವನು ನೋವಿರಲಿ, ತನ್ನನ್ನೇ ತಾನು ಮರೆತುಬಿಡುತ್ತಾನೆ. ಕಳೆದ ಏಪ್ರಿಲ್‌ನಲ್ಲಿ ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಬೇಕಿತ್ತು. ಆಗ ಡಾಕ್ಟರ್ ಬೇಡವೇ ಬೇಡ ಅಂದರು. ಭಾಗವಹಿಸಿದ್ದರೆ ಅಲ್ಲಿಯೂ ಪದಕ ಗೆಲ್ಲುವ ವಿಶ್ವಾಸವಿತ್ತು ಅವನಿಗೆ. ನನ್ನ ಮಗ ಈಗ ನಾಲ್ಕನೇ ತರಗತಿ ಓದುತ್ತಿದ್ದಾನೆ. ಅವನಿಗೆ ಐಪಿಎಸ್ ಮಾಡುವ ಕನಸಿದೆ. ಖಂಡಿತಾ ಅದನ್ನು ಮಾಡುತ್ತಾನೆ. ಅಷ್ಟು ಸ್ಥೈರ್ಯ ಇದೆ ಅವನಲ್ಲಿ. ತನ್ನಿಂದ ಅಪ್ಪ-ಅಮ್ಮನಿಗೆ ಕಷ್ಟ ಆಗ್ತಾ ಇದೆ ಅಂತಾನೂ ಬೇಜಾರು ಮಾಡಿಕೋತಾನೆ. ಆದರೆ, ನಾನು ಅವನ ಅಮ್ಮ ಅನ್ನೋದಕ್ಕಿಂತ ಅವನೇ ನನಗೆ ಅಮ್ಮನಾಗಿ ಸಮಾಧಾನ ಮಾಡಿದ ದಿನಗಳೇ ಹೆಚ್ಚು ಅಂತಾರೆ ಚಂದ್ರರೇಖಾ.
ಈ ದಂಪತಿಗೆ 6ನೇ ತರಗತಿಯಲ್ಲಿ ಓದುತ್ತಿರುವ ಮಾನ್ಯ ಎಂಬ ಮಗಳಿದ್ದು, ಆಕೆಯೂ ಟೆಕ್ವಾಂಡೊ ಕಲಿಯುತ್ತಿದ್ದಾಳೆ.
– ಪ್ರಿಯಾಂಕಾ ಎನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.