ಮಾನಸಿ ಜೋಷಿ ಅಪ್ಪಟ ಚಿನ್ನ
ಕೃತಕ ಕಾಲಲ್ಲಿ ಪ್ಯಾರಾ ವಿಶ್ವಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದ ಸಾಧಕಿ
Team Udayavani, Sep 7, 2019, 5:03 AM IST
ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ, ಮುಂಬೈನ ಮಾನಸಿ ಜೋಷಿ ಬದುಕಿನಲ್ಲೀಗ ಸ್ವರ್ಣಕಾಲ. ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆದ್ದ ಮಾನಸಿ ಒಂಟಿ ಕಾಲಿನ ಆಟಗಾರ್ತಿ. ಪ್ಯಾರಾ ವಿಶ್ವಕೂಟದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಸಾಧಕಿ. ಅವರ ಬದುಕು ಅಂಗವಿಕಲ ಕ್ರೀಡಾಪಟುಗಳ ಪಾಲಿಗೆ ಸ್ಫೂರ್ತಿ, ಚೈತನ್ಯ.
ಕೃತಕ ಕಾಲಿನ ಮೂಲಕವೂ ಕ್ರೀಡಾಲೋಕದಲ್ಲಿ ಅಸಾಮಾನ್ಯ ಸಾಧನೆಗೈಯಬಹುದು ಎಂಬುದಕ್ಕೆ ಮಾನಸಿಯ ಕಳೆದ 8 ವರ್ಷಗಳ ಯಶೋಗಾಥೆಯೇ ಸಾಕ್ಷಿ. 2011ರಲ್ಲೊಂದು ದಿನ ಟ್ರಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಾನಸಿ ಮುಂಬೈನ ಆಸ್ಪತ್ರೆಗೆ ದಾಖಲಾಗುತ್ತಾರೆ. ಸಾಕಷ್ಟು ಶಸ್ತ್ರಚಿಕಿತ್ಸೆ ಬಳಿಕ ಎಡಗಾಲಿಗೆ ಕತ್ತರಿ ಹಾಕಲೇಬೇಕಾದ ಅನಿವಾರ್ಯತೆ ಎದುರಾಗುತ್ತದೆ. 6ನೇ ವರ್ಷದಲ್ಲೇ ಆರಂಭಿಸಿದ ತನ್ನ ಪ್ರೀತಿಯ ಬ್ಯಾಡಿಂಟನ್ ದೂರಾಗುತ್ತದಲ್ಲ ಎಂದು ಆಕೆ ಚಿಂತಿಸಲೇ ಇಲ್ಲ. 2012ರಲ್ಲಿ ಕೃತಕಕಾಲಿನ ಮೂಲಕ ನಡೆಯಲಾರಂಭಿಸಿದ ಮಾನಸಿ, ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಬದಲಾದರು. ಇಂಟರ್-ಕಂಪೆನಿ ಟೂರ್ನಿಯಲ್ಲಿ ಭಾಗವಹಿಸಿ ಚಿನ್ನ ಗೆದ್ದರು. ಈ ಸಾಧನೆ, ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿತು. ತಾನು ವಿಶ್ವ ಮಟ್ಟದಲ್ಲೂ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಅವರಲ್ಲಿ ಮನೆಮಾಡಿತು.
ಸಾಧನೆಯ ಮೆಟ್ಟಿಲು…
2014ರಲ್ಲೇ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸಿದರೂ ಆಯ್ಕೆ ಆಗಲಿಲ್ಲ. ಅದೇ ವರ್ಷ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್‌ನಲ್ಲಿ ಆಡಿ ಬೆಳ್ಳಿ ಪದಕ ಗೆದ್ದರು. 2015ರ ಸ್ಪ್ಯಾನಿಶ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ 5ನೇ ಸ್ಥಾನಿಯಾದರು. 2015ರ ಸ್ಟೋಕ್ ಮಾಂಡ್ವಿಲ್ಲೆ ಪ್ಯಾರಾ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್ ಮಿಶ್ರಡಬಲ್ಸ್‌ನಲ್ಲಿ ಬೆಳ್ಳಿ ಪದಕ, 2018ರ ಜಕಾರ್ತ ಏಷ್ಯಾಡ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಜಯಿಸಿದರು. ಸ್ಪೇನ್‌ನಲ್ಲಿ ಅವರಿಗೆ ಡಬಲ್ಸ್‌ನಲ್ಲಿ ಜತೆಯಾದವರು ರಾಕೇಶ್ ಪಾಂಡೆ. ಇಬ್ಬರಿಗೂ ಕೆಲವು ಮಾಜಿ ವಿಶ್ವ ಚಾಂಪಿಯನ್ನರ ವಿರುದ್ಧ ಆಡುವ ಅವಕಾಶ ಲಭಿಸಿತು. ಸಿಂಧು ಅವರಂತೆ ಮಾನಸಿ ಕೂಡ ಬಾಸೆಲ್ ಬ್ಯಾಡ್ಮಿಂಟನ್ ಕೂಟದಲ್ಲೇ ಇತಿಹಾಸ ನಿರ್ಮಿಸಿದ್ದು ಕಾಕತಾಳೀಯ. ಆದರೆ ಮಾನಸಿಯ ಸಾಧನೆ ತುಸು ವಿಳಂಬವಾಗಿ ಸುದ್ದಿಯಾಯಿತು. ಸಿಂಧು ಅವರಂತೆ ಮಾನಸಿ ಗುರಿ ಕೂಡ 2020ರ ಟೋಕ್ಯೋ ಒಲಿಂಪಿಕ್ಸ್.
ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವೀಧರೆ
30ರ ಹರೆಯದ ಮಾನಸಿ ಜೋಷಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವೀಧರೆ. ಮುಂಬೈನ ಕೆ.ಜೆ.ಸೋಮಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಓದು. ಪದವಿ ಪಡೆದ ಒಂದೇ ವರ್ಷದಲ್ಲಿ ಟ್ರಕ್ ರೂಪದಲ್ಲಿ ಆಘಾತ ಬಂದೆರಗಿತು. ತಂದೆ ಗಿರೀಶ್ಚಂದ್ರ ಜೋಷಿ, ಮುಂಬೈನ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್‌ನ ನಿವೃತ್ತ ವಿಜ್ಞಾನಿ. ಮಾನಸಿಯ ಬದುಕಿನಲ್ಲಿ ಇನ್ನೊಂದು ಕಾಲಿನ ಕೊರತೆಯನ್ನು ನೀಗಿಸಿದ ಛಲವಾದಿ. ವಿಶ್ವ ಪ್ಯಾರಾ ಕೂಟಕ್ಕೂ ಮುನ್ನ ಎರಡು ತಿಂಗಳ ಕಾಲ ಪುಲ್ಲೇಲ ಗೋಪಿಚಂದ್ ಅಕಾಡೆಮಿ, ಕೋಚ್ ಜೆ. ರಾಜೇಂದ್ರ ಕುಮಾರ್, ಟ್ರೇನರ್ ಎಲ್. ರಾಜು ಅವರೆಲ್ಲ ಸೇರಿ ಮಾನಸಿಯನ್ನು ಸಮರಕ್ಕೆ ಅಣಿಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.