ಮಾಸ್ಟರ್ ಆಫ್ ಹಾರ್ಟ್
Team Udayavani, May 11, 2019, 6:00 AM IST
ಜಗದ ಅಂಕುಡೊಂಕುಗಳ ಮೇಲೆ ವಿಡಂಬನೆಯ ಬ್ಯಾಟರಿ ಬಿಡುತ್ತಿದ್ದ ಹಿರಣ್ಣಯ್ಯನವರ ಮನಸ್ಸಲ್ಲಿ ಪ್ರೀತಿಯ ನದಿಯೂ ಹರಿಯುತ್ತಿತ್ತು. ಆ ದಂಡೆಯ ಮೇಲೆ ಪ್ರೇಮದ ಗೂಡು ಕಟ್ಟಿ, ಸಂಬಂಧಗಳ ಮೊಗ್ಗುಗಳು ಅರಳಿದ್ದವು. ಬದುಕಿನ ಪೂರ್ತಿ “ಪ್ರೀತಿ’ ಎಂಬ ಮಧುರ ಬಳ್ಳಿ ಹಬ್ಬಿದ್ದೇ ಈ ಮಾಸ್ಟರ್‌ರ ನೆಮ್ಮದಿ ಬದುಕಿನ ಸೀಕ್ರೆಟ್. ಅವರೇ ರಟ್ಟು ಮಾಡಿಕೊಂಡ ಇನ್ನೊಂದಷ್ಟು ಗುಟ್ಟು ಇಲ್ಲಿದೆ…
ಪ್ರೀತಿಯಂಥ ಅಟ್ಯಾಚ್‌ಮೆಂಟ್‌ಗಳಿಗೆ ಕಾರಣ ಬೇಕಿಲ್ಲ; ನೆಪ ಇರಬೇಕಿಲ್ಲ. ನಮ್ಮಲ್ಲಿ ಪ್ರೀತಿಗೆ ನಾನಾ ಮುಖಗಳಿವೆ. ಅಣ್ಣ ತಂಗಿ, ಅಣ್ಣ ತಮ್ಮ, ಮಕ್ಕಳು, ಮೊಮ್ಮಕ್ಕಳು, ಮಗುವಿನ ನಗು, ಅಮ್ಮನ ಕೋಪ, ಮಡದಿಯ ಹುಸಿ ಮುನಿಸು ಹೀಗೆ… ಪ್ರೀತಿ ಎಂದರೆ ಕೇವಲ ಹುಡುಗ, ಹುಡುಗಿ ಸುತ್ತ ಗೆರೆ ಎಳೆಯುವಂಥದ್ದಲ್ಲ. ಇಂತಿಪ್ಪ ಪ್ರೀತಿ ನಿಮ್ಮಲ್ಲೂ ಇತ್ತಾ? ಅಂತ ಕೇಳಿದಾಗ ಮಾಸ್ಟರ್ ಹಿರಣ್ಣಯ್ಯ ಹೇಳಿದ್ದು-
“ಪ್ರೀತಿ ಇಲ್ಲದೇ ಇದ್ದರೆ, ಅದು ಜನರೇ ಇಲ್ಲದ ಮನೆ ಆಗಿಬಿಡುತ್ತದೆ. ಅಲ್ಲಿ ಬರೀ ಕಸವಿರುತ್ತದೆ ಅಷ್ಟೇ . ನನಗೆ 5 ಮಕ್ಕಳು, 11 ಜನ ಮೊಮ್ಮಕ್ಕಳು. ನಮ್ಮ ಮನೆಯಲ್ಲಿ 11 ಜನ ಇದ್ದೀವಿ. ಹಬ್ಬ ಹರಿದಿನ ಬಂದರೆ ಬರೋಬ್ಬರಿ 200 ಜನರ ಸಂತೆ. ವಾರಕ್ಕೊಮ್ಮೆ ಸೇರ್ತೀವಿ, ಒಟ್ಟಿಗೆ ಊಟ ಮಾಡ್ತೀವಿ. ಇವರೆಲ್ಲ ಏಕೆ ಬರ್ತಾರೆ?
ಪ್ರೀತಿಗೆ…ಒಲುಮೆಗೆ… ನನ್ನ ಈ ಬದುಕಿನ ಸುದೀರ್ಘ ಪಯಣದ ಗುಟ್ಟು ಏನು ಅನ್ನೋ ಕುತೂಹಲದ ಹಿಂದೆ ನಿಷ್ಕಾಮ ಪ್ರೀತಿ ಇದೆ. ನನ್ನ ಜೀವನ ತೆರೆದ ಕ್ಯಾಲೆಂಡರ್ ಹಾಗೆ. ಮನೆಯವರೆಲ್ಲರೂ ಯಾವಾಗ ಬೇಕಾದರೂ ನೋಡಬಹುದು. ಇಲ್ಲಿ ಮುಚ್ಚಿಟ್ಟು, ಎತ್ತಿಟ್ಟು ಬದುಕುವಂತದ್ದು ಏನೂ ಇಲ್ಲ’ ಅಂದರು.
ಮಾಸ್ಟರ್ ಪ್ರಕಾರ, ಪ್ರೀತಿ ಕೊಡುವುದಾದರೆ ನಿರೀಕ್ಷೆ ಇರಬಾರದು. ಅದರೊಳಕೆ ಬಯಕೆ ಇಟ್ಟು ಪ್ರೀತಿ ಕೊಡಬಾರದು. ಇದೆಲ್ಲಾ ಅವರಿಗೆ ಬದುಕು ಕಲಿಸಿದ ಪಾಠವಂತೆ. “ನಿಮ್ಮ ಪ್ರೀತಿ ನಿಷ್ಕಲ್ಮಶವಾಗಿದ್ದರೆ ಬೇರೆ ದಾರಿನೇ ಇಲ್ಲ. ಅದಕ್ಕೆ ಪ್ರತಿಯಾಗಿ ಪ್ರೀತಿ ವಾಪಸು ಸಿಕ್ಕೇ ಸಿಗುತ್ತದೆ. ಮನಸ್ಸಲ್ಲಿ ಪ್ರತಿ ನಿರೀಕ್ಷೆಗಳನ್ನು ಇಟ್ಟುಕೊಂಡರೆ ಬೇರೆಯವರಿಗೆ ನಾವು ಪ್ರೀತಿ ಕೊಡಕ್ಕಾಗಲ್ಲ. ಇದೊಂಥರಾ ಪರೀಕ್ಷೇಲಿ ರಿಸಲ್ಟ್ ಹೀಗೇ ಬರಬೇಕು ಅಂತ ಬಯಸಿದಂತೆ. ರಿಸಲ್ಟ್ ಕೊಡೋದು ಒಂದು ವ್ಯವಹಾರ; ಅದು ಪ್ರೀತಿಯಲ್ಲ’ ಹೀಗೆ ಎಚ್ಚರಿಸುತ್ತಾ ಹೋದರು.
ಹಾಗಾದರೆ, ಬರೀ ಮಾತುಗಳನ್ನು ಬ್ಲಾಸ್ಟ್ ಮಾಡುವ ಹಿರಣ್ಣಯ್ಯನವರ ಜೀವನದಲ್ಲಿ ಪ್ರೀತಿ ಹೇಗೆಲ್ಲಾ ಇರಬಹುದು? ಈ ಕುತೂಹಲಕ್ಕೂ ಉತ್ತರ ಕೊಟ್ಟರು.
“ನನ್ನ ಜೀವನದಲ್ಲಿ ಪ್ರೀತಿ ಅನ್ನೋದು ಬ್ಯಾಂಕ್ ಅಕೌಂಟ್ ಇದ್ದ ಹಾಗೆ. ಓಪನ್ ಮಾಡಿ ಟ್ರಾಂಜಾಕ್ಷನ್ ಮಾಡಲಿಲ್ಲ ಅಂದರೆ ಹೇಗೆ ಬ್ಯಾಂಕ್‌ನವರು ಅಕೌಂಟ್ ಕ್ಲೋಸ್ ಮಾಡಿ, ಬಾಕಿ ಚುಕ್ತಾ ಮಾಡ್ತಾರೋ ಹಾಗೇನೇ ಇದು. ನನ್ನ ಹೆಂಡತಿ, ಮಕ್ಕಳು, ಮೊಮ್ಮಕ್ಕಳಿಗೆ ನನ್ನೊಂದಿಗೆ ಏಕೆ ಅನ್ಯೋನ್ಯ ಪ್ರೀತಿ ಇದೆ ಅಂದರೆ, ನಾನೂ ಕಾಲಕ್ಕೆ ತಕ್ಕಂತೆ ಚೇಂಜ್ ಆಗಿದ್ದೇನೆ. ನನ್ನ ಚೌಕಟ್ಟಿನಲ್ಲಿ ಸಾಧ್ಯವಾದಷ್ಟು ಕಲಿತಿದ್ದೇನೆ. ತಪ್ಪುಗಳನ್ನು ಗುರುತಿಸಿ, ಒಪ್ಪಿಕೊಂಡು ಅವುಗಳನ್ನು ತಿದ್ದುಕೊಂಡಿದ್ದೇನೆ.
ನನ್ನ 74ನೇ ವಯಸ್ಸಲ್ಲಿ ಕಂಪ್ಯೂಟರ್ ಕಲಿತೆ. “ಮೊಮ್ಮಕ್ಕಳು, ತಾತಾ ಇದು ತಪು’³ ಅಂದಾಗ ಕಿವಿಗೊಡುವ ವ್ಯವಧಾನ ಗಳಿಸಿಕೊಂಡೆ. ಕಾಂಪ್ರಮೈಸ್ ಮಾಡಿಕೊಳ್ಳುವ ಮನಸ್ಸು ಬೆಳೆಸಿಕೊಂಡೆ. ನಿಮೂY ಗೊತ್ತಿರಬಹುದಲ್ವಾ? ನಾನೂ ಕುಡೀತಿದ್ದೆ, ಸಿಗರೇಟು ಸೇದುತ್ತಿದ್ದೆ ಅನ್ನೋದು. ನನಗೆ 5 ಜನ ಬೀಗರು. ಅವರಲ್ಲಿ ಯಾರೂ ಕುಡಿಯಲ್ಲ; ಸಿಗರೇಟು ಸೇದಲ್ಲ. ಹೆಚ್ಚೆಂದರೆ ಸೋಡಾ ಕುಡೀಬಹುದು ಅಷ್ಟೇ. ಅವರ ಮುಂದೆ ಬಾಟಲಿ ಹಿಡಿದು ಕೂತರೆ ಚೆನ್ನಾಗಿರುತ್ತಾ? ಕುಡಿಯುವುದನ್ನು ಮೊಮ್ಮಕ್ಕಳು ನೋಡಿದರೆ, ನನ್ನ ಚಟ ಅವರಿಗೆ ಮಾದರಿಯಾಗಲ್ವಾ? ಅದಕ್ಕೇ ಕಾಲ ಬದಲಾದಂತೆ ಚಟಗಳನ್ನು ಬಿಟ್ಟು, ನನ್ನನ್ನು ತಿದ್ದಿಕೊಂಡೆ. ಬೌದ್ಧಿಕವಾಗಿ ಅಪ್‌ಡೇಟ್ ಆದೆ. ನನ್ನ ಈ ನಡೆಗಳಿಂದ ಮನೆಯಲ್ಲಿ ಪ್ರೀತಿ ಹೆಚ್ಚಾಯಿತು. ಈಗ ಮೊಮ್ಮಕ್ಕಳೂ ತಾತಾ ಬಹಳ ಅಪ್‌ಡೇಟ್ ಅಂತಾರೆ; ಪ್ರೀತಿ ಅಲ್ಲೂ ಇದೆ ನೋಡಿ’ ಮಾಸ್ಟರ್ ಸತ್ಯ ಬಿಚ್ಚಿಟ್ಟರು.
ಇಷ್ಟೆಲ್ಲಾ ಹರಿಕತೆ ಹೇಳ್ತಾರಲ್ಲ, ಇವರ ಮನೇಲೇನು ಜಗಳವೇ ಆಡ್ತಾನೇ ಇರಲಿಲ್ಲವಾ? ಎಂಬ ಅನುಮಾನ ಮೂಡೋದು ಸಹಜ. ಅದಕ್ಕೆ ಹಿರಣ್ಣಯ್ಯ ಹೇಳಿದ್ದು ಹೀಗೆ-
” ನಾವು ಗಂಡ ಹೆಂಡತಿ ಜಗಳ ಆಡಿಲ್ಲ ಅಂತಲ್ಲ, ಆಡಿದ್ದೀವಿ; ಅವಳು ಅತ್ತಿದ್ದಾಳೆ; ನಾನೂ ಅತ್ತಿದ್ದೇನೆ; ಅವಳು ನಕ್ಕಿದ್ದಾಳೆ. ನಾನೂ ನಕ್ಕಿದ್ದೇನೆ. ನಾನು ಶೋಕಿ ಮಾಡಿದ್ದೀನಿ, ಅವಳೂ ಮಾಡಿದ್ದಾಳೆ. ಇವೆಲ್ಲ ನೋಡಿದರೆ, ನನ್ನ ಮಕ್ಕಳು ಮಾಡಿದ್ದೆಲ್ಲಾ ಸೆಕೆಂಡ್ ಹ್ಯಾಂಡ್ ಅನಿಸಿಬಿಡುತ್ತದೆ. ಅದಕ್ಕೇ ಅವರ ಹತ್ತಿರ ಏನನ್ನೂ ಮುಚ್ಚಿಟ್ಟಿಲ್ಲ. ಮುಚ್ಚಿಟ್ಟು ನನ್ನ ಜೀವನ ಹಳಸಲು ಮಾಡಿಕೊಂಡಿಲ್ಲ. ಬಹುತೇಕರು ಮಾಡೋ ತಪ್ಪು ಇದೇ. ಜೀವನ ಅನ್ನೋದು 70-80 ವರ್ಷಗಳ ಸುದೀರ್ಘ ಪಯಣ. ಮುಚ್ಚಿಟ್ಟರೆ ಗಂಡ ಹೆಂಡತಿಯದ್ದೂ- ಬಸ್ಟಾಪ್‌ನಲ್ಲಿ ಸಿಗುವ ಗೆಳೆಯನನ್ನು “ಹಾಯ್, ಹಲೋ’ ಅನ್ನುವ ಸ್ನೇಹ ಆಗುತ್ತದೆ.
ಸತ್ಯ ಏನೆಂದರೆ, ಯಜಮಾನರು ಕುಡೀತಾರೆ ಅನ್ನೋದು ಪಕ್ಕದ ಮನೆಯವರಿಂದ ಹೆಂಡತಿ ಕಿವಿಗೆ ಬಿದ್ದರೆ, ಅವರು ರಿಪೋರ್ಟ್ ಮಾಡುವಾಗ ತಮ್ಮ ಸ್ವಾರ್ಥದ ಮಸಾಲೆಯನ್ನೂ ಸೇರಿಸಿ ಹೇಳಿದರೆ, ಪರಿಸ್ಥಿತಿ ಕಾದ ಬಾಣಲೆ ಆಗುತ್ತದೆ. ಇದ್ದದ್ದನ್ನು ನಾವೇ ನೇರವಾಗಿ ಹೆಂಡತಿಗೆ ಹೇಳಿ ಬಿಟ್ಟರೆ, ಆಕೆ ಸ್ವಲ್ಪ ಹೊತ್ತು ಅಳಬಹುದು, ಕೋಪ ಮಾಡಿಕೊಳ್ಳಬಹುದು. ಆನಂತರ ಸತ್ಯದ ಅರಿವಾಗಿ ಅವಳ ಕಡೆಯಿಂದ ನಿಷ್ಕಲ್ಮಶ ಪ್ರೀತಿ ಹರಿಯೋಕೆ ಶುರುವಾಗುತ್ತದೆ. ಅದಕ್ಕೇ ಹೇಳ್ಳೋದು, ಈ ಪ್ರೀತಿ ಅನ್ನೋದು ಕೊಳ ಇದಾØಗೆ. ಅದಕ್ಕೆ ಕಲ್ಲು ಹೊಡೆದು ಏಕೆ ರಾಡಿ ಎಬ್ಬಿಸಬೇಕು ಹೇಳಿ?
ಒಂದು ವಿಷಯ ಗೊತ್ತಾ? ಪ್ರೀತಿಗೆ ಯಾವ ಅಡ್ಡೀನು ಇಲ್ಲ. ಪ್ರೀತಿ ಮಾಡ್ತೀನಿ ಅನ್ನಿ. ಪ್ರಶ್ನೆಗಳೇ ಏಳೊಲ್ಲ. ಆದರೆ ದ್ವೇಷಿಸ್ತೀನಿ ಅಂತ ಹೇಳಿ ಏಕೆ, ಏನು ಅನ್ನೋ ನೂರಾರು ಪ್ರಶ್ನೆಗಳು ಎದ್ದು ನಿಲ್ತವೆ. ಪ್ರೀತಿ-ಋಣ ಅನ್ನೋದೆಲ್ಲಾ ಬೆನ್ನಿಗೆ ಬೆನ್ನು ಕೊಡುವ ಸಂಬಂಧಗಳು. ಋಣ ನಮ್ಮಲ್ಲಿ ಜೀವನ ಪರ್ಯಂತ ಇರುವ ಅಂಟು. ಪ್ರೀತಿಯನ್ನು ಹಂಚಿಕೊಳ್ಳೋದು, ಸ್ನೇಹವನ್ನು ಬೆಳೆಸಿಕೊಳ್ಳೋದು ಈ ಋಣದ ಭಾಗ. ಈ ವಿಚಾರದಲ್ಲೆಲ್ಲಾ ನಾವೇ ಪುಣ್ಯವಂತರು. ವಿದೇಶದಲ್ಲಿ ಈ ಋಣದ ಪ್ರಶ್ನೆಯೇ ಇಲ್ಲ. 18 ವರ್ಷ ಸರ್ಕಾರ ಓದಿಸುತ್ತದೆ. ನಂತರ ತಾವೇ ದುಡಿದು ಜೀವನ ಮಾಡುತ್ತಾರೆ. ತಾವೇ ಗಂಡು/ಹೆಣ್ಣು ಹುಡುಕಿಕೊಂಡು ಮದುವೆಯಾಗುತ್ತಾರೆ. ತಂದೆ, ತಾಯಿಯ ಹಂಗು ಇರೋಲ್ಲ. ಸಂಪೂರ್ಣ ಸ್ವತಂತ್ರ. ಆದರೆ ನಾಳೆ ಏನಪ್ಪ ಅನ್ನೋ ಪೆಡಂಭೂತದ ಭಯವಿದೆ. ಅದಕ್ಕೆ ಅಪ್ಪನದಿನ, ಅಮ್ಮನ ದಿನ ಅಂತೆಲ್ಲಾ ಮಾಡ್ತಾರೆ. ಮಂಡೇಫೀವರ್ ಸಂಡೇನೇ ಶುರುವಾಗುತ್ತೆ. ಮಂಡೇ ಆಫೀಸಿಗೆ ಹೋದಾಗ ಫೈರಿಂಗ್ ಆರ್ಡರ್ ಇಲ್ಲ ಅಂದ್ರೆಒಂದು ವಾರ ಬದುಕಿದಹಾಗೆ. ಹೀಗಾಗಿ, ಜಾಬ್, ಲ್ಯಾಂಡ್ ಕೊನೆಗೆ ಲೈಫ್ ಸೆಕ್ಯುರಿಟಿ ಕೂಡ ಇಲ್ಲ ಅವರಿಗೆ. ಹೀಗಿದ್ದರೆ ಪ್ರೀತಿ, ಬಾಂಧವ್ಯಗಳ ಬಳ್ಳಿಗಳನ್ನು ಹಬ್ಬಿಸಿಕೊಳ್ಳಲು ಹೇಗೆ ಸಾಧ್ಯ? ಅದಕ್ಕೇ ಹೇಳಿದ್ದು ನಾವೇ ಪುಣ್ಯವಂತರು ಅಂತ’ ಅಂದರು.
ಮಾಸ್ಟರ್ ಹಿರಣ್ಣಯ್ಯ ಕೊನೆಗೆ ಒಂದು ಸತ್ಯ ಹೇಳಿದರು-
” ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ. ನನ್ನ ಪ್ರೀತಿ ಜಂಗಮ. ಸ್ಥಾವರವಲ್ಲ. ಅದಕ್ಕೇ ಅರ್ಧ ಶತಕ ದಾಟಿದರೂ ನನ್ನ ವೈವಾಹಿಕ ಜೀವನ ಮುಂದೋಡುತ್ತಿದೆ’ ಅಂತ ಬದುಕಿನ ಸತ್ಯವನ್ನು ಬೆರಗು ಗಣ್ಣುಗಳಿಂದ ವಿವರಿಸಿದರು ಹಿರಣ್ಣಯ್ಯ. ಅಲ್ಲಿಗೆ ಅವರ ಮಾತು ನಿಂತಿತು. ಅವರ ನಿಧನದ ನೆಪದಲ್ಲಿ ಈಗ ಎಲ್ಲವನ್ನೂ ಮತ್ತೆ ಕೇಳುವಂತಾಯಿತು.
ಚಿತ್ರಗಳು- ಡಿ.ಸಿ.ನಾಗೇಶ್
-ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.