ಆಫ್ರಿಕನ್ ಕುದುರೆ ಪರಾರಿ ಮತ್ತು ರಾಯರು
ದ್ವಾರಕೀಶ್ ಬದುಕಲ್ಲಿ ರಾಯರ ಅನುಭೂತಿ
Team Udayavani, Aug 10, 2019, 5:00 AM IST
ಕನ್ನಡ ಚಿತ್ರರಂಗದಲ್ಲಿ ಹಲವು ಕಲಾವಿದರು, ಗುರು ರಾಯರ ಅನುಗ್ರಹಕ್ಕೆ ಪಾತ್ರರಾದಂಥವರು. ಕನ್ನಡದ ಹಿರಿಯ ನಟ, ನಿರ್ಮಾಪಕ ಮತ್ತು ನಿರ್ದೇಶಕ ಬಿ.ಎಸ್. ದ್ವಾರಕೀಶ್ ಕೂಡ, ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರು. ರಾಯರ ಆರಾಧನೆಯ ಈ ಹೊತ್ತಿನಲ್ಲಿ (ಆ.14- ಆ.20) ಅವರಿಗಾದ ರಾಯರ ಅನುಭೂತಿಯ ಚಿತ್ರ, ಅವರದ್ದೇ ಮಾತುಗಳಲ್ಲಿ…
ಅದು “ಆಫ್ರಿಕಾದಲ್ಲಿ ಶೀಲಾ’ ಸಿನಿಮಾದ ಚಿತ್ರೀಕರಣದ ಹೊತ್ತು. ನಾನು, ನನ್ನ ತಂಡವನ್ನು ಕಟ್ಟಿಕೊಂಡು ದೂರದ ಆಫ್ರಿಕಾಕ್ಕೆ ಹೋಗಿದ್ದೆ. ಒಂದು ದೃಶ್ಯದ ಚಿತ್ರೀಕರಣಕ್ಕೆ, ಕುದುರೆಯ ಅವಶ್ಯಕತೆ ಇತ್ತು. ಯಾರಧ್ದೋ ಸಲಹೆಯಂತೆ, ಅಲ್ಲೇ ಒಬ್ಬ ವ್ಯಕ್ತಿಯ ಬಳಿ ಹೋಗಿ, ಕುದುರೆಯನ್ನು ಬಾಡಿಗೆಗೆ ತಂದೆವು. ಆ ಮನುಷ್ಯ ನೋಡಲು, ಬಹಳ ಸ್ಟ್ರಾಂಗ್ ಅಂತ ಅನ್ನಿಸುತ್ತಿದ್ದ.
ಕುದುರೆಯನ್ನೇನೋ ತಂದೆವು. ಆದರೆ, ನಾವು ಆಚೆ- ಈಚೆ ನೋಡುವಷ್ಟರಲ್ಲಿ ಆ ಕುದುರೆ ಪರಾರಿ! ಅದು ಸೀದಾ ಓಡುತ್ತಾ, ಕಾಡಿನೊಳಕ್ಕೆ ಸೇರಿಬಿಟ್ಟಿತು!
ಹೇಳಿ ಕೇಳಿ, ಅಪರಿಚಿತನ ಕುದುರೆ. ಆ ಪಾರ್ಟಿ, ಕುದುರೆಯನ್ನು ಶೂಟಿಂಗ್‌ಗೆ ಕೊಟ್ಟಿದ್ದೇ ದೊಡ್ಡದು ಎನ್ನುವಂತಿತ್ತು ಅವನ ಗತ್ತು- ಗೈರತ್ತು. ಕಠಿಣ ಸ್ವಭಾವದ ಮನುಷ್ಯನಂತೆ ತೋರುತ್ತಿದ್ದ. ಗೊತ್ತಿಲ್ಲದ ದೇಶ ಬೇರೆ. ಕಾಡಿನ ವಿಚಾರದಲ್ಲಿ ಅಲ್ಲಿನ ಕಾನೂನೂ ಅಷ್ಟೇ ಕಠಿಣವಿತ್ತು. ಅನ್ಯ ಪ್ರಾಣಿಗಳನ್ನು ಕಾಡಿನೊಳಕ್ಕೆ ಬಿಡುವುದು ಶಿಕ್ಷಾರ್ಹ ಅಪರಾಧ ಅಂತ ಪಕ್ಕದಲ್ಲಿದ್ದವನ್ಯಾರೋ ಕಾನೂನು ತಜ್ಞನಂತೆ ಹೇಳಿ, ನನ್ನೊಳಗೆ ನಡುಕ ಹುಟ್ಟಿಸಿಬಿಟ್ಟಿದ್ದ. ಕೆಲ ಕ್ಷಣ ತಲೆ ಮೇಲೆ ಕೈಹೊತ್ತು ಕುಳಿತುಬಿಟ್ಟೆ. ಈಗಿನಂತೆ, ತಕ್ಷಣಕ್ಕೆ ರಾಯಭಾರಿ ಕಚೇರಿಯನ್ನು ಸಂಪರ್ಕಿಸುವುದು, ಅವರ ಸಹಕಾರ ಪಡೆದುಕೊಳ್ಳುವುದು ಅಂದು ಕಷ್ಟದ ಮಾತೇ ಆಗಿತ್ತು. ಬೇರೆ ದಾರಿ ತೋಚದೇ, ಶ್ರೀ ಗುರು ರಾಯರನ್ನು ಸ್ಮರಿಸುತ್ತಾ ಕುಳಿತೆ. ಕೆಲ ಕ್ಷಣದಲ್ಲಿ ಏನೋ ಧೈರ್ಯ ಬಂದಹಾಗೆ ಆಯಿತು. ತಡಮಾಡದೇ, ಕುದುರೆ ಪಾರ್ಟಿಯೆದುರು ಹೋಗಿ ನಿಂತೆ.
“ಕ್ಷಮಿಸಿ ಸರ್, ನೀವು ಕೊಟ್ಟ ಕುದುರೆ ತಪ್ಪಿಸಿಕೊಂಡು, ಕಾಡೊಳಗೆ ಓಡಿ ಹೋಗಿದೆ. ನಮಗೆ ಗೊತ್ತೇ ಆಗಲಿಲ್ಲ?’, ಎನ್ನುತ್ತಾ ವಿನಂತಿಯ ಕಂಗಳಿಂದಲೇ ಆತನನ್ನು ಮಾತಾಡಿಸಿದೆ. ಆತ ಸಿಟ್ಟಾಗಬಹುದು ಅಂತಲೇ ಅಂದಾಜಿಸಿದ್ದೆ. ಆದರೆ, ಹಾಗೆ ಆಗಲಿಲ್ಲ. “ಅಷ್ಟೇ ಅಲ್ವಾ? ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಬೇಡಿ’ ಅಂದುಬಿಟ್ಟ. ಅಲ್ಲಿಯತನಕ ನನ್ನ ಮೊಗದಲ್ಲಿ ಮಡುಗಟ್ಟಿದ ಚಿಂತೆಯೊಂದು, ಅಲ್ಲೇ ಕಳಚಿಬಿತ್ತು. ಮನಸ್ಸು ಹಗುರ ಆಗಿತ್ತು. ಅಲ್ಲಿಂದಲೇ ರಾಯರಿಗೆ ಒಂದು ಧನ್ಯವಾದ ಹೇಳಿದ್ದೆ.
ನನ್ನ ಮತ್ತು ರಾಯರ ಭಕ್ತಿಯ ಸಂಬಂಧದಲ್ಲಿ ಇಂಥ ಅದೆಷ್ಟೋ ವಿಸ್ಮಯಗಳು ನೆನಪಾಗುತ್ತವೆ. ನನಗೆ ತಿಳಿದ ಮಟ್ಟಿಗೆ, ನಮ್ಮ ಮನೆಯಲ್ಲಿ ಮೊದಲಿನಿಂದಲೂ ಎಲ್ಲರೂ ಶ್ರೀ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದರು. ನಿತ್ಯವೂ ಅವರಿಗೆ ಆರಾಧನೆ ನೆರವೇರುತ್ತಿತ್ತು. ಆದರೆ, ನಾನು ಮಾತ್ರ ಯಾವತ್ತೂ ಮಡಿ ಬಟ್ಟೆ ಉಟ್ಟವನಲ್ಲ. ಧ್ಯಾನ ಮಾಡಿದವನಲ್ಲ ಅಥವಾ ಮಂತ್ರಾಲಯಕ್ಕೆ ಹೋಗಿ, ಲೆಕ್ಕ ಇಟ್ಟು ಪ್ರದಕ್ಷಿಣೆ ಮಾಡಿದವನೂ ಅಲ್ಲ. ಅದ್ಯಾವುದನ್ನೂ ಮಾಡದೆಯೇ ರಾಯರ ಮಹಿಮೆ ನನಗೆ ನಿರಂತರ ದಕ್ಕುತ್ತಾ ಹೋಯಿತು.
ನಾನು ಮೊದಲು ಮಂತ್ರಾಲಯಕ್ಕೆ ಹೋಗಿದ್ದು, 1967ರ ಸುಮಾರಿನಲ್ಲಿ. ಅಲ್ಲಿನ ಪರಿಸರ ನನಗೆ ತುಂಬಾ ಕಾಡಿತು. ಆ ಹೊತ್ತಿಗೆ ಅಲ್ಲಿ ಒಂದೇ ಒಂದು ಛತ್ರ, ಎರಡು ಗೆಸ್ಟ್ ಹೌಸ್ ಮಾತ್ರವೇ ಇತ್ತು. ತುಂಗಾಭದ್ರಾ ನದಿಯ ಪರಿಸರದ ನಡುವೆ ನನ್ನದೂ ಒಂದು ಮನೆಯಿದ್ದರೆ ಎಷ್ಟು ಚೆಂದ ಅಂತನ್ನಿಸಿತು. ನನ್ನ ಆಸೆಯನ್ನು ರಾಯರ ಮುಂದಿಟ್ಟೆ. ಕೆಲವೇ ದಿನಗಳಲ್ಲಿ ಎಲ್ಲವೂ ಕೂಡಿಬಂದು, ಮಂತ್ರಾಲಯದಲ್ಲಿ ಒಂದು ಮನೆಯನ್ನೂ ಕಟ್ಟಿಬಿಟ್ಟೆ. ನನ್ನ ಬದುಕಿನಲ್ಲಿ ಹಲವು ಮನೆಗಳನ್ನು ಕಟ್ಟಿದ್ದೇನೆ, ಮಾರಿದ್ದೇನೆ. ಆದರೆ, ಮಂತ್ರಾಲಯದ ಮನೆಯನ್ನು ಇಂದಿಗೂ ಹಾಗೆಯೇ ಕಾಪಾಡಿಕೊಂಡಿದ್ದೇನೆ. ಅಲ್ಲಿಗೆ ಹೋದಾಗ, ಅದೇ ಮನೆಯಲ್ಲಿ ತಂಗಿ, ಮಠಕ್ಕೆ ಭೇಟಿ ಕೊಡುತ್ತೇನೆ.
ರಾಯರು ನನಗೆ, ಕಷ್ಟ ಬಂದಾಗಲೆಲ್ಲ “ನಾನಿದ್ದೇನೆ. ಚಿಂತೆ ಏಕೆ?’ ಎನ್ನುತ್ತಾ ಧೈರ್ಯ ಹೇಳಿದ್ದಾರೆ. ನನ್ನ ಪುತ್ರನ ಕಣ್ಣಿನಲ್ಲಿ ಸಮಸ್ಯೆ ಕಂಡುಬಂದಾಗ, ನಾನು ನೆನೆದಿದ್ದು ಅದೇ ರಾಯರನ್ನೇ. ಸ್ವತಃ ವೈದ್ಯರೇ ಅಚ್ಚರಿ ಪಡುವ ರೀತಿಯಲ್ಲಿ, ಮಗನ ದೃಷ್ಟಿಯ ಸಮಸ್ಯೆ ಮಾಯವಾಗಿತ್ತು. ಹೀಗೆ ಹತ್ತು ಹಲವು ಅನುಭೂತಿಯಿಂದಲೇ, ಅವರ ಇರುವಿಕೆ ನನಗೆ ವಿಸ್ಮಯ ಹುಟ್ಟಿಸುತ್ತಲೇ ಬಂದಿದೆ. ಇವತ್ತು ಚಿತ್ರರಂಗದಲ್ಲಿ ನಾನು ಏನೇ ಮಾಡಿದರೂ, ಅದು ನನ್ನದಲ್ಲ. ಅದೆಲ್ಲವೂ ಅವರ ಅನುಗ್ರಹ.
– ನಿರೂಪಣೆ: ಜಿ.ಎಸ್. ಕಾರ್ತಿಕ ಸುಧನ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.