ಭಾರತ-ದ.ಆಫ್ರಿಕಾ ಕ್ರಿಕೆಟ್ ವಿವಾದಗಳ ನೆನಪು
ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಿದ್ದೇ ಭಾರತ-ದ.ಆಫ್ರಿಕಾ ನಡುವಿನ ಪಂದ್ಯದ ನಂತರ!
Team Udayavani, Sep 21, 2019, 5:40 AM IST
ದ.ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಈಗ ಮೊದಲಿನ ತಾಕತ್ತಿಲ್ಲ ಎನ್ನುವುದು ಸತ್ಯವೇ. ಆದರೆ ಅದು ಈ ತಾತ್ಕಾಲಿಕ ದುಸ್ಥಿತಿಯಿಂದ ಹೊರಬಂದು ಮತ್ತೆ ವಿಶ್ವದ ಪ್ರಬಲ ತಂಡಗಳಲ್ಲಿ ಒಂದಾಗುವುದು ಕಷ್ಟವೇನಲ್ಲ. ಆ ತಂಡ ಮತ್ತು ಭಾರತದ ನಡುವಿನ ಕ್ರಿಕೆಟ್‌ಗೆ ಒಂದು ವಿಶೇಷ ಇತಿಹಾಸವಿದೆ. ಅಷ್ಟೇ ವಿವಾದಗಳು ನಡೆದಿವೆ. ಪ್ರಸ್ತುತ ಮತ್ತೆ ದ.ಆಫ್ರಿಕಾ ಕ್ರಿಕೆಟ್ ತಂಡ ಭಾರತಕ್ಕೆ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳ ನಡುವೆ ನಡೆದ ಮರೆಯಲಾರದ ಕೆಲವು ವಿವಾದಗಳು ಇಲ್ಲಿವೆ.
ಕಪಿಲ್ ಮಂಕಡ್ ಔಟ್, ಬ್ಯಾಟ್ ಒಗೆದ ವೆಸೆಲ್ಸ್
ವರ್ಣಭೇದದ ಹಿನ್ನೆಲೆಯಲ್ಲಿ ಹೇರಲಾಗಿದ್ದ ಸುದೀರ್ಘ ನಿಷೇಧದಿಂದ 1991ರಲ್ಲಿ ದ.ಆಫ್ರಿಕಾ ಕ್ರಿಕೆಟ್ ತಂಡ ಮುಗಿಸಿಕೊಂಡಿತ್ತು. ವರ್ಣಭೇದದ ಹಿನ್ನೆಲೆಯಲ್ಲಿ ಆ ದೇಶದ ಮೇಲೆ ನಿಷೇಧ ಹೇರಲಾಗಿತ್ತು. ನಿಷೇಧದಿಂದ ಹೊರಬಂದ ಮೇಲೆ ಅದು ಮಾಡಿದ ಮೊದಲ ಪ್ರವಾಸ ಭಾರತಕ್ಕೆ. ಅದರ ಬೆನ್ನಲ್ಲೇ ಭಾರತ, ದ.ಆಫ್ರಿಕಾಕ್ಕೆ ಪ್ರವಾಸ ಹೋಯಿತು. ಈ ಪ್ರವಾಸದಲ್ಲಿ ಕಪಿಲ್ ದೇವ್ ಎಂದೂ ಸಿಟ್ಟಾಗುವುದಿಲ್ಲ ಎಂಬ ನಂಬಿಕೆ ಸುಳ್ಳಾಯಿತು. ಪೋರ್ಟ್ ಎಲಿಜಬೆತ್‌ನಲ್ಲಿ 2ನೆ ಏಕದಿನ ಪಂದ್ಯ ನಡೆಯುತ್ತಿತ್ತು. ಭಾರತ ತಾನು ದ.ಆಫ್ರಿಕಾಕ್ಕೆ ನೀಡಿದ್ದ 147 ರನ್‌ಗಳ ಸಣ್ಣ ಗುರಿಯನ್ನು ಉಳಿಸಿಕೊಳ್ಳಬೇಕಿತ್ತು. ಆಗ ಆಫ್ರಿಕಾ 9 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 20 ರನ್‌ಗಳಿಸಿ ಆತಂಕದಲ್ಲಿತ್ತು. ಅದೇ ಹಂತದಲ್ಲಿ ಮಂಕಡ್ ಮಾದರಿಯಲ್ಲಿ (ಇನ್ನೊಂದು ತುದಿಯಲ್ಲಿರುವ ಬ್ಯಾಟ್ಸ್‌ಮನ್, ಬೌಲರ್ ಚೆಂಡನ್ನು ಕೈಬಿಡುವ ಮುಂಚೆಯೇ ಓಡಿಬಿಡುವುದು, ಆಗ ಬೌಲರ್ ಚೆಂಡನ್ನು ಎಸೆಯದೇ ವಿಕೆಟ್ ಎಗರಿಸಿ ಔಟ್ ಮಾಡುವುದು) ವೇಗಿ ಕಪಿಲ್, ಪೀಟರ್ ಕರ್ಸ್ಟನ್ ಅವರ ವಿಕೆಟ್ ಹಾರಿಸಿದರು. ಈ ಘಟನೆ ಬ್ಯಾಟಿಂಗ್ ಮಾಡುತ್ತಿದ್ದ ದ.ಆಫ್ರಿಕಾ ನಾಯಕ ಕೆಪ್ಲರ್ ವೆಸೆಲ್ಸ್ ಹಾಗೂ ಔಟಾದ ಪೀಟರ್ ಕರ್ಸ್ಟನ್ ಇಬ್ಬರಿಗೂ ಸಿಟ್ಟು ಬರಿಸಿತು. ಕಪಿಲ್ ದೇವ್ ತಮ್ಮ ತೋರು ಬೆರಳು ತೋರಿಸಿ, ವೆಸೆಲ್ಸ್‌ರತ್ತ ಕಿಡಿಕಾರಿದರು. ಕಪಿಲ್ ಹೀಗೆ ಮಾಡುವ ಮುನ್ನ, ಎರಡು ಬಾರಿ ಕರ್ಸ್ಟನ್ ಕ್ರೀಸ್ ಬಿಟ್ಟು ಓಡಿದ್ದರಂತೆ. ಇದರಿಂದ ಸಿಟ್ಟಾಗಿ ತಾನು ಹೀಗೆ ಔಟ್ ಮಾಡಿದ್ದೆ ಎಂದು ಕಪಿಲ್ ಹೇಳಿದ್ದರು. ಈ ಘಟನೆಗೆ ಕೆಪ್ಲರ್ ಮತ್ತೂಂದು ರೀತಿ ಸೇಡು ತೀರಿಸಿಕೊಂಡರು. ಅವರು ರನ್‌ಗಾಗಿ ಓಡುವಾಗ ಬ್ಯಾಟನ್ನು ಕಪಿಲ್ ಮೊಳಕಾಲಿಗೆ ಬಡಿಯುವಂತೆ ಕೈಬಿಟ್ಟಿದ್ದರು. ಇದು ನೋಡುವಾಗ ಸಹಜ ಘಟನೆಯೆಂಬಂತೆ ಕಂಡರೂ, ಗಮನಿಸಿದರೆ ಉದ್ದೇಶಪೂರ್ವಕವಾಗಿರುವುದು ಕಣ್ಣಿಗೆ ಕಟ್ಟುತ್ತದೆ. ಆದರೆ ವೆಸೆಲ್ಸ್ ಅಂದು ಶಿಕ್ಷೆಯಿಂದ ಪಾರಾಗಿದ್ದರು.
ಮ್ಯಾಚ್‌ಫಿಕ್ಸಿಂಗ್: ಕ್ರಿಕೆಟ್ ಇತಿಹಾಸದ ಅತಿದೊಡ್ಡ ಹಗರಣ
ಕ್ರಿಕೆಟ್ ಇತಿಹಾಸವನ್ನೇ ನಡುಗಿಸಿದ, ಅತಿದೊಡ್ಡ ಹಗರಣವೊಂದು 2000ನೆ ವರ್ಷದಲ್ಲಿ ಬೆಳಕಿಗೆ ಬಂತು. ಆ ವರ್ಷ ಈಗಲೂ ನಿತ್ಯ ಕಾಡುತ್ತಿರುವ ಕಟುಸತ್ಯವೊಂದು ಬೆಳಕಿಗೆ ಬಂತು. ಅದು ಸಂಭವಿಸಿದ್ದು ದ.ಆಫ್ರಿಕಾ ತಂಡದ ಭಾರತ ಪ್ರವಾಸದ ವೇಳೆ ಎನ್ನುವುದು ಅರಗಿಸಿಕೊಳ್ಳಲೇಬೇಕಾದ ಸತ್ಯ. ಈ ಘಟನೆ ಬೆಳಕಿಗೆ ಬಂದ ತರುವಾಯ ಕ್ರಿಕೆಟ್ ಜಗತ್ತಿನ ಹಲವು ಮಹಾತಾರೆಗಳು ತಮ್ಮ ಅಸ್ತಿತ್ವವನ್ನು ಶಾಶ್ವತವಾಗಿ ಕಳೆದುಕೊಂಡವು. ಆ ಕಾಲದಲ್ಲಿ ಅತಿ ಬಲಿಷ್ಠ ತಂಡವಾಗಿದ್ದ ದ.ಆಫ್ರಿಕಾ, ಆ ಘಟನೆಯ ನಂತರ ಬಲಿಷ್ಠವಾಗಿ ಬೆಳೆದ ಭಾರತ ಎರಡೂ ತಂಡಗಳ ಹಲವು ದಿಗ್ಗಜರು ತಮ್ಮ ಭವಿಷ್ಯವನ್ನೇ ಇಲ್ಲ ಮಾಡಿಕೊಂಡರು. ಈ ಎಲ್ಲ ಪ್ರಕರಣದ ಕೇಂದ್ರಬಿಂದು ಅಂದಿನ ಆಫ್ರಿಕಾ ನಾಯಕ ಹ್ಯಾನ್ಸಿ ಕ್ರೋನ್ಯೆ. ಈತ ದ.ಆಫ್ರಿಕಾ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ, ಅಷ್ಟು ಮಾತ್ರವಲ್ಲ. ವಿಶ್ವ ನಾಯಕರ ಪಟ್ಟಿಯಲ್ಲೂ ಅದ್ಭುತ ಎನಿಸಿಕೊಂಡಿದ್ದಾರೆ. ಅಂತಹ ವ್ಯಕ್ತಿ ಫಿಕ್ಸಿಂಗ್ ನಡೆಸಿದ್ದಾರೆಂದು ದೆಹಲಿ ಪೊಲೀಸರು 2000ನೆ ವರ್ಷ ಏಪ್ರಿಲ್ ತಿಂಗಳಲ್ಲಿ ಆರೋಪಿಸಿದರು. ಪ್ರಾರಂಭದಲ್ಲಿ ಇದನ್ನು ಎಲ್ಲರೂ ನಿರಾಕರಿಸಿದರು. ಮುಂದೆ ಹಲವು ವಿಚಾರಣೆಗಳ ನಂತರ ಸ್ವತಃ ಕ್ರೋನ್ಯೆ ಫಿಕ್ಸಿಂಗ್ ನಡೆಸಿದ್ದು ಹೌದೆಂದು ಬಾಯ್ಬಿಟ್ಟರು. ದ.ಆಫ್ರಿಕಾ ಕ್ರಿಕೆಟ್ ಮಂಡಳಿ ಅವರನ್ನು ಆಜೀವ ನಿಷೇಧಿಸಿತು.
ಆಗ ಕ್ರೋನ್ಯೆ ಹೇಳಿದ ಕೆಲವು ಸತ್ಯಗಳು ಭಾರತೀಯ ಕ್ರಿಕೆಟನ್ನೂ ಗಡಗಡ ನಡುಗಿಸಿತು. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ 1996ರಲ್ಲಿ, ನನಗೆ ಮುಖೇಶ್ ಗುಪ್ತಾ ಎಂಬ ಬುಕಿಯನ್ನು ಪರಿಚಯಿಸಿದರು. ಅದರ ಆಧಾರದ ಮೇಲೆ ತಾನು ಆಫ್ರಿಕಾ ತಂಡವನ್ನು ಫಿಕ್ಸ್ ಮಾಡಲು ಯತ್ನಿಸಿದೆ ಕ್ರೋನ್ಯೆ ತಿಳಿಸಿದರು. ಆಫ್ರಿಕಾ ಕಂಡ ಅಮೋಘ ಬ್ಯಾಟ್ಸ್‌ಮನ್ ಹರ್ಷಲ್ ಗಿಬ್ಸ್, ಬೌಲರ್ ಹೆನ್ರಿ ವಿಲಿಯಮ್ಸ್‌ರನ್ನು ಕ್ರೋನ್ಯೆ ಫಿಕ್ಸ್ ಮಾಡಲು ಯತ್ನಿಸಿದ್ದರು. ಕ್ರೋನ್ಯೆ ಬಾಯ್ಬಿಟ್ಟ ಸತ್ಯಗಳ ಪರಿಣಾಮ, ಮೊಹಮ್ಮದ್ ಅಜರುದ್ದೀನ್‌ರನ್ನು ಶಾಶ್ವತವಾಗಿ ನಿಷೇಧಿಸಲಾಯಿತು (ಮುಂದೆ ನಿಷೇಧಮುಕ್ತರಾದರು). ಆ ಕಾಲದಲ್ಲಿ ಭಾರತೀಯ ಕ್ರಿಕೆಟ್‌ನ ಅತ್ಯಂತ ಸುಂದರಶೈಲಿಯ ಆಟಗಾರ ಅಜಯ್ ಜಡೇಜ 5 ವರ್ಷ ನಿಷೇಧಕ್ಕೊಳಗಾಗಿ, ಶಾಶ್ವತವಾಗಿ ಭವಿಷ್ಯ ಕಳೆದುಕೊಂಡರು. ಮನೋಜ್ ಪ್ರಭಾಕರ್, ನಯನ್ ಮೊಂಗಿಯ ಕೂಡ ನಿಷೇಧ ಎದುರಿಸಿದರು.
ಆ ವೇಳೆ ದ.ಆಫ್ರಿಕಾ-ಭಾರತದ ನಡುವೆ 5 ಪಂದ್ಯಗಳ ಏಕದಿನ ಸರಣಿಯನ್ನು ಭಾರತ 3-2ರಿಂದ ಗೆದ್ದುಕೊಂಡಿತ್ತು. ಆಗಷ್ಟೇ ಸೌರವ್ ಗಂಗೂಲಿ ನೂತನ ನಾಯಕರಾಗಿ ಆಯ್ಕೆಯಾಗಿದ್ದರು. ಕ್ರೋನ್ಯೆ ನಾಯಕರಾಗಿದ್ದ ಆಫ್ರಿಕಾ ತಂಡದ ವಿರುದ್ಧದ ಸರಣಿ ಗೆಲುವು ಫಿಕ್ಸಿಂಗ್‌ನ ಫಲ ಎಂಬ ಅನುಮಾನ ಈಗಲೂ ಹೋಗಿಲ್ಲ.
ತೆಂಡುಲ್ಕರ್ ಮೇಲೆಯೇ ಚೆಂಡು ವಿರೂಪ ಆರೋಪ!
ಭಾರತ-ಆಫ್ರಿಕಾ ನಡುವಿನ ಇನ್ನೊಂದು ದೊಡ್ಡ ಕ್ರಿಕೆಟ್ ಗಲಾಟೆ 2001ರಲ್ಲಿ ಸಂಭವಿಸಿತು. ನ.16ರಿಂದ 20ರವರೆಗೆ ಪೋರ್ಟ್ ಎಲಿಜಬೆತ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಭಾರತದ ಆರು ಮಂದಿಯನ್ನು, ಅತಿಯಾಗಿ ಮನವಿ ಮಾಡಿದರೆಂದು ಪಂದ್ಯದ ರೆಫ್ರಿ ಮೈಕ್ ಡೆನಿಸ್ ಒಂದು ಟೆಸ್ಟ್ ಪಂದ್ಯಕ್ಕೆ ನಿಷೇಧಿಸಿದರು. ನಾಯಕ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ದೀಪ್ ದಾಸ್ ಗುಪ್ತ, ಶಿವಸುಂದರ್ ದಾಸ್ ಹಾಗೂ ಸಚಿನ್ ತೆಂಡುಲ್ಕರ್ ನಿಷೇಧಕ್ಕೊಳಗಾದವರು. ಈ ಕ್ರಮದಿಂದ ಮೊದಲೇ ಸಿಟ್ಟಾಗಿದ್ದ ಭಾರತೀಯರನ್ನು ಇನ್ನೂ ಕೆರಳಿಸಿದ್ದು, ಸಚಿನ್ ತೆಂಡುಲ್ಕರ್ ಚೆಂಡು ವಿರೂಪ ಮಾಡಿದ್ದಾರೆಂದು ಹೇಳಿದ್ದು. ಇಡೀ ದೇಶದಲ್ಲಿ ಪ್ರಕರಣ ಮಹತ್ವ ಪಡೆದುಕೊಂಡು, ಸಂಸತ್ತಿನಲ್ಲೂ ಚರ್ಚೆಯಾಯಿತು. ರೆಫ್ರಿ ಡೆನಿಸ್‌ರನ್ನು ತೆಗೆಯದಿದ್ದರೆ ತಾನು ಪ್ರವಾಸದಿಂದಲೇ ಹಿಂದೆ ಸರಿಯುವುದಾಗಿ ಭಾರತ ಕ್ರಿಕೆಟ್ ತಂಡ ಹೇಳಿತು. ಇದಕ್ಕೆ ಮಣಿದ ಐಸಿಸಿ ತನ್ನ ರೆಫ್ರಿಯನ್ನು ಹಿಂದಕ್ಕೆ ಪಡೆಯಿತು. ಆದರೆ 3ನೆ ಪಂದ್ಯದ ಮಾನ್ಯತೆಯನ್ನೂ ರದ್ದು ಮಾಡಿತು. ಆ ಪಂದ್ಯ ನಡೆದರೂ ಅದನ್ನು ಸ್ನೇಹ ಪಂದ್ಯವೆಂದು ಮಾತ್ರ ಪರಿಗಣಿಸಲಾಯಿತು. ಅನಂತರ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮೇಲಿನ ನಿಷೇಧವನ್ನು ಹಿಂದಕ್ಕೆ ಪಡೆಯಲಾಯಿತು. ಸೆಹ್ವಾಗ್ ಮೇಲಿನ ನಿಷೇಧವನ್ನು ಹಾಗೆಯೇ ಉಳಿಸಿಕೊಳ್ಳಲಾಯಿತು. ಅಂತೂ ಈ ಪಂದ್ಯ ಎರಡೂ ತಂಡಗಳಲ್ಲಿ ಒಂದು ಕಹಿಭಾವನೆಯನ್ನು ಹುಟ್ಟಿಸಿದ್ದಂತೂ ಸತ್ಯ.
ಸ್ಥಾನ ಕಳ್ಕೊಂಡ ಗಂಗೂಲಿ, ಮಧ್ಯದ ಬೆರಳು ತೋರಿದ ಗ್ರೆಗ್
ಈ ಪ್ರಕರಣಕ್ಕೂ ದ.ಆಫ್ರಿಕಾ ತಂಡಕ್ಕೂ ನೇರಸಂಬಂಧವಿಲ್ಲ. ಆದರೆ ಇದು ಆಫ್ರಿಕಾ ತಂಡ ಭಾರತ ಪ್ರವಾಸ ಮಾಡಿದ್ದ ವೇಳೆ ಸಂಭವಿಸಿದ್ದು. ಆ ವೇಳೆ ಎರಡೂ ತಂಡಗಳ ನಡುವೆ 5 ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸಲಾಗಿತ್ತು. ಸರಣಿಗೂ ಮುನ್ನವೇ ಗಂಗೂಲಿಯನ್ನು ನಾಯಕತ್ವದಿಂದ ಮಾತ್ರವಲ್ಲ ತಂಡದಿಂದಲೇ ಹೊರಹಾಕಲಾಗಿತ್ತು. ಅವರ ಕಳಪೆ ಪ್ರದರ್ಶನವೇ ಅದಕ್ಕೆ ಕಾರಣವಾಗಿತ್ತು. ತನ್ನ ಈ ಪರಿಸ್ಥಿತಿಗೆ ನೂತನ ತರಬೇತುದಾರ ಗ್ರೆಗ್ ಚಾಪೆಲ್ ಕಾರಣ ಎಂದು ಗಂಗೂಲಿ ನೇರವಾಗಿ ಆರೋಪಿಸಿದರು. ಪರಿಸ್ಥಿತಿ ಕೈಮೀರಿತು. ಎರಡೂ ತಂಡಗಳ ನಡುವೆ ಕೋಲ್ಕತದಲ್ಲಿ 3ನೇ ಏಕದಿನ ಏಕದಿನ ನಡೆದಾಗ, ಅಭಿಮಾನಿಗಳ ಗುಂಪೊಂದು ಚಾಪೆಲ್ ವಿರುದ್ಧ ಪ್ರತಿಭಟನೆ ನಡೆಸಿತು. ಚಾಪೆಲ್ ಆಗ ಮಧ್ಯದ ಬೆರಳನ್ನು ತೋರಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಮುಂದೆ ಪಂದ್ಯ ನಡೆಯುತ್ತಿದ್ದಾಗ ಅಭಿಮಾನಿಗಳು ಭಾರತೀಯ ತಂಡವನ್ನು ಹೀಯಾಳಿಸಿ, ದ.ಆಫ್ರಿಕಾವನ್ನು ಬೆಂಬಲಿಸಿದರು. ಅಲ್ಲಿ ಭಾರತ ಸೋಲನುಭವಿಸಿತು ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ!
ಕಾನ್ಪುರ ಟೆಸ್ಟ್ ಪಂದ್ಯದಲ್ಲಿ 3 ದಿನಕ್ಕೆ 32 ವಿಕೆಟ್ ಪತನ
ಕ್ರಿಕೆಟ್ ಮೈದಾನಗಳ ಗುಣಮಟ್ಟಕ್ಕೆ ಸಂಬಂಧಪಟ್ಟಂತೆ ಭಾರತ-ದ.ಆಫ್ರಿಕಾ ನಡುವೆ ನಡೆದ ಪ್ರಮುಖ ಗಲಾಟೆ 2008ರಲ್ಲಿ ನಡೆಯಿತು. ಅಂದು ಕಾನ್ಪುರ ಗ್ರೀನ್‌ಪಾರ್ಕ್‌ನಲ್ಲಿ 3ನೆ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಗಿಯಿತು! ಭಾರತ ಗೆದ್ದು ಸರಣಿಯನ್ನು 1-1ರಿಂದ ಸಮ ಮಾಡಿಕೊಂಡಿತು. ಆದರೆ ಪಂದ್ಯದಲ್ಲಿ ಮೂರು ದಿನಕ್ಕೆ 3 ವಿಕೆಟ್ ಉರುಳಿದ್ದರಿಂದ ಅಂಕಣದ ಗುಣಮಟ್ಟ ತೀವ್ರ ವಿರೋಧಕ್ಕೆ ಕಾರಣವಾಯಿತು. ಆಫ್ರಿಕಾ ತರಬೇತುದಾರ ಮಿಕಿ ಅರ್ಥರ್ ನೇರವಾಗಿ, ಇದು ಅತ್ಯಂತ ಕಳಪೆ ಅಂಕಣಗಳಲ್ಲೊಂದು ಎಂದು ಆರೋಪಿಸಿದರು. ಐಸಿಸಿ ಇದನ್ನು ಪರಿಶೀಲಿಸಿ, ಗುಣಮಟ್ಟ ತೀರಾ ಕಳಪೆ ಎಂದು ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.