![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Oct 13, 2018, 1:26 PM IST
ವಿಜಯನಗರವು ಕೃಷ್ಣ ದೇವರಾಯನ ಕಾಲದಲ್ಲಿ ಅತ್ಯಂತ ವೈಭವೋಪೇತವಾದ ಸಾಮ್ರಾಜ್ಯವಾಗಿತ್ತು. ಅಲ್ಲಿ ನಡೆಯುತ್ತಿದ್ದ ಆಚರಣೆಗಳು, ಹಬ್ಬಗಳು ವಿಜಯನಗರ ಅರಸರ ಆಡಳಿತದ ವೈಖರಿಯನ್ನು ಬಿಂಬಿಸುತ್ತಿದ್ದವು. ಅದರಲ್ಲೂ ವಿಜಯದಶಮಿ ಬಂತೆಂದರೆ, ವಿಜಯನಗರದ ದೊರೆಗಳು ದೊಡ್ಡದೊಂದು ಉತ್ಸವ ನಡೆಸಲು ಸನ್ನದಟಛಿರಾಗಿರುತ್ತಿದ್ದರು. ಯುದ್ದದ ಗೆಲುವುಗಳನ್ನು ಆಚರಿಸಲೆಂದೇ ಮಹಾನವಮಿ ದಿಬ್ಬದಂಥ ಮೇರು ಕಲಾಕೃತಿಯನ್ನು ಕಟ್ಟಡದ ರೂಪದಲ್ಲಿ ನಿರ್ಮಿಸಿದ್ದು ವಿಜಯನಗರ ಅರಸರ ಹೆಚ್ಚುಗಾರಿಕೆ. ಕೃಷ್ಣ ದೇವರಾಯನ ಆಡಳಿತದ ಕಾಲಾವಧಿಯಲ್ಲಿ ಡೋಮಿಂಗೋ ಪ್ಯಾಸ್ ವಿಜಯನಗರಕ್ಕೆ ಭೇಟಿ ನೀಡಿದ್ದನು. ಅವನು ಭೇಟಿ ನೀಡಿದ್ದ ಕಾಲದಲ್ಲಿ ವಿಜಯದಶಮಿ ಹಬ್ಬ ನಡೆಯುತ್ತಿತ್ತು. ಆ ಉತ್ಸವದಲ್ಲಿ ರಾಜಾತಿಥ್ಯ ಪಡೆದು ಉತ್ಸವವನ್ನು ತೀರಾ ಹತ್ತಿರದಿಂದ ವೀಕ್ಷಿಸಿದೆ ಎಂದು ಪ್ಯಾಸ್ ಬರೆದುಕೊಂಡಿದ್ದಾನೆ. ಅತ್ಯಂತ ವಿಜೃಂಭಣೆಯಿಂದ 9 ದಿನ ವಿಜಯದಶಮಿ ಹಬ್ಬ ಆಚರಿಸಿದ ನಂತರ.ಕೊನೆಯ 10 ನೇ ದಿನ ಸೇನಾ ಪರಿವೀಕ್ಷಣೆಯ ದಿನವಾಗಿತ್ತು ಎಂದು ತಿಳಿಸಿದ್ದಾನೆ.
10 ನೇ ದಿನ ಕೃಷ್ಣ ದೇವರಾಯನು ಅರಮನೆಯಿಂದ ಪೂರ್ವಕ್ಕೆ ಅಂಬಾರಿಯ ಮೇಲೆ ವಿಜಯನಗರ ಪಟ್ಟಣದ ಕೋಟೆ ಗೋಡೆಗಳ ಹೊರಗೆ ( ಇದು ಕೊನೆಯ ಸುತ್ತಿನ ಕೋಟೆ ಇರಬಹುದು. ಈಗಲೂ ಅಳ್ಳಿಕೆರೆ ಕೆರೆಯ ಏರಿಯ ಮೇಲೆ ನಿಂತು ಉತ್ತರಕ್ಕೆ ನೋಡಿದರೆ, ಕೋಟೆಯ ಅವಶೇಷಗಳು ಕಾಣಸಿಗುತ್ತವೆ) ಒಂದು ಲೀಗ್‌ನಷ್ಟು ದೂರ ಬರುತ್ತಾನೆ. ಅವನ ಮುಂದೆ ಬಂಗಾರದ ಕವಚ ಹೊಂದಿದ ಪಲ್ಲಕ್ಕಿಯಲ್ಲಿ ಪವಿತ್ರ ಮೂರ್ತಿ (ವಿರೂಪಾಕ್ಷ) ಯನ್ನು ಬೋವಿಗಳು ಪಲ್ಲಕ್ಕಿಯಲ್ಲಿ ಹೊತ್ತು ತರುತ್ತಾರೆ.
ಒಂದು ಮಕಮಲ್ಲಿನ ಡೇರಿಯಲ್ಲಿ ಬ್ರಾಹ್ಮಣ ನೋರ್ವ ಪೂಜೆ ಮಾಡುತ್ತಾನೆ. ನಂತರ ಅರಸನು ಸೇನಾ ಪಡೆಗಳ ವೀಕ್ಷಣೆ ಮಾಡುತ್ತಾನೆ.ಇದು, ನಾನು ಕಂಡ ಮಹಾನವಿಮಿ ಉತ್ಸವ ಎಂದಿದ್ದಾನೆ ಪ್ಯಾಸ್.
ಜಾನ್ ಫ್ರಿಟ್ಜ್ ಪ್ಯಾಸ್ ವರ್ಣಿಸಿ ವಿವರಿಸಿದ ಸ್ಥಳವನ್ನು ಪರಿವೀಕ್ಷಣೆ ಮಾಡಿ, ಕಮಲಾಪುರ ಪಟ್ಟಣದಿಂದ ಪೂರ್ವ ದಿಕ್ಕಿನಲ್ಲಿರುವ ಅಳ್ಳಿಕೆರೆ ಪ್ರದೇಶವೆಂದು ಗುರುತಿಸಿದ್ದಾರೆ. ಇದು ಈಗಿನ ಹಂಪಿ ವಿಶ್ವವಿದ್ಯಾಲಯದ ಸುತ್ತಲಿನ ಪ್ರದೇಶ. ಈ ಕೆರೆಯ ಸಮೀಪವೇ ದೇವರ ಪೂಜೆಗೆಂದು ಗುಡಾರವನ್ನು ಹಾಕಲಾಗುತ್ತೆಂದು ಪ್ಯಾಸ್ ಬರೆದಿದ್ದಾನೆ, ಆದರೆ ಫ್ರಿಟ್ಜ…ವರು ಅದು ಗುಡಾರವಲ್ಲ ಅದು ಕಲ್ಲಿನಿಂದ ಕಟ್ಟಿದ ಮಂಟಪವೆಂದಿದ್ದಾರೆ.
ಪ್ಯಾಸ್ ಬರೆದಂತೆ ಇದು ಸೈನಿಕ ವೀಕ್ಷಣೆಯ ಸ್ಥಳವೇ ಆಗಿರಬೇಕು. ಏಕೆಂದರೆ, ವಿಜಯನಗರದ ಅರಸರ ಸಾಮಂತ ಪಡೆ ದೊಡ್ಡದಾಗಿದ್ದಿತು.ಆ ಎಲ್ಲಾ ಸೈನಿಕರಿಗೆ ಪಟ್ಟಣದಲ್ಲಿ (ಆಚರಣೆಯ ಸಂದರ್ಭದಲ್ಲಿ) ಆಶ್ರಯ ನೀಡಲು ಸಾಧ್ಯವಿರಲಿಲ್ಲ.ಕೆರೆಯ ಸಮೀಪ ಡೇರೆಗಳನ್ನು ಹಾಕಿಕೊಂಡು ಹಬ್ಬ ಆಚರಣೆಯ ನಂತರ ಅವರೆಲ್ಲ ತಮ್ಮ ತವರು ಪ್ರದೇಶಕ್ಕೆ ಹೊರಟು ಹೋಗುತ್ತಿದ್ದರು.
ಬೆಟ್ಟ, ಗುಡ್ಡ ಮತ್ತು ಎತ್ತರದ ದಿಣ್ಣೆಯ ಮೇಲೆಲ್ಲಾ ಸೈನಿಕರು ಸಮುದ್ರದಂತೆ ನಿಂತಿದ್ದರು ಎಂದಿದ್ದಾನೆ ಪ್ಯಾಸ್. ಮಂಟಪದ ಸುತ್ತಲೂ ನಾವು ಪ್ಯಾಸ್ ವರ್ಣಿಸಿದ ಪ್ರದೇಶ ನೋಡಬಹುದು. ಈಗಿನ ಹಂಪಿ ವಿಶ್ವವಿದ್ಯಾಲಯ ಇರುವುದು ಎತ್ತರದ ಪ್ರದೇಶ, ಕೆರೆಯ ಉತ್ತರಕ್ಕೆ ಎತ್ತರದ ಪ್ರದೇಶದಲ್ಲಿ ಮಂಟಪದ ಪಶ್ಚಿಮಕ್ಕೂ ಎತ್ತರದ ಪ್ರದೇಶವಿದೆ. ಆದುದರಿಂದ ಈ ಪ್ರದೇಶವೇ ಕೃಷ್ಣ ದೇವರಾಯನ ಸೈನಿಕ ಸ್ಥಳವಾಗಿತ್ತು ಎಂದು ಅಂದಾಜಿಸಬಹುದಾಗಿದೆ.
ಈ ಮಂಟಪಕ್ಕೆ ಮೆಟ್ಟಿಲುಗಳೇ ಇಲ್ಲ. ಮತ್ತು ಮಂಟಪದ ಯಾವ ಭಾಗದಲ್ಲೂ ಮೂರ್ತಿ ಕೆತ್ತನೆ ಕಾಣುವುದಿಲ್ಲ. ಕಟ್ಟಡದ ಉತ್ತರ ದಿಕ್ಕಿನಲ್ಲಿ ಮಾತ್ರ ಸುಮಾರು 9 ಅಡಿಗಳ ಮೇಲೆ ಪ್ರವೇಶ ದ್ವಾರವಿದೆ. ಮಂಟಪವನ್ನು ವಿಜಯನಗರ ಕಾಲದಲ್ಲಿ ಬಳಸುತ್ತಿದ್ದ ಬಂಜರು ಕಲ್ಲಿನಿಂದ ನಿರ್ಮಿಸಲಾಗಿದೆ. ರಾಜ, ಉತ್ತರ ದಿಕ್ಕಿನಿಂದ ಆನೆಯ ಮೇಲೇರಿ ಬಂದು ವಿರೂಪಾಕ್ಷನಿಗೆ ಪೂಜೆ ಸಲ್ಲಿಸಿ ತನ್ನ ಸಾಮಂತರ ಸೈನಿಕ ಶಕ್ತಿಯ ಸತ್ಯಾಸತ್ಯತೆಯನ್ನು ವೀಕ್ಷಿಸಿರಬೇಕು. ಇಂದು ಈ ಮಂಟಪ ಖಾಸಗಿ ಒಡೆತನದ ಜಮೀನಿನಲ್ಲಿದೆ. ಮಂಟಪದ ಪಕ್ಕದಲ್ಲಿಯೇ ಬೋರ್‌ವೆಲ್ ನೀರು ಸದಾ ಹರಿಯುತ್ತಿದೆ. ಇದರಿಂದ ಮಂಟಪದ
ತಳಪಾಯಕ್ಕೆ ಹಾನಿಯಾಗುವ ಸಂಭವವಿದೆ.
ಅಂಗಡಿ ಮಂಜುನಾಥ್ ಯರಬಳ್ಳಿ
You seem to have an Ad Blocker on.
To continue reading, please turn it off or whitelist Udayavani.