ಮೈಸೂರಲ್ಲೊಂದು ಮಾಯಾಲೋಕ !
Team Udayavani, Aug 5, 2017, 4:27 PM IST
ಮೈಸೂರಿನಲ್ಲಿ ಏನೇನಿದೆ ಅಂತ ಹುಡುಕಲು ಹೊರಟರೆ ಅರಮನೆ, ಮೃಗಾಲಯ, ಕೆಆರ್‌ಎಸ್, ಚಾಮುಂಡಿ ಬೆಟ್ಟ ಹೀಗೆ ಪಟ್ಟಿ ಬೆಳೆಯುತ್ತದೆ. ಈ ಪಟ್ಟಿಗೆ ಹೊಸ ಸೇರ್ಪಡೆಯಾಗಿ ಈ ಮ್ಯೂಸಿಯಮ್ ಅನ್ನೂ ಸೇರಿಸಿಕೊಳ್ಳಿ. ಇದು ಕಾರಂಜಿ ಕೆರೆಯ ದಂಡೆಯ ಮೇಲಿದೆ. ಮೈಸೂರಿಗೆ ಕಾಲಿಟ್ಟರೆ ಇಲ್ಲಿಗೆ ಎಡತಾಕುವುದನ್ನು ಮರೆಯದಿರಿ.
ಒಳಹೊಕ್ಕಂತೆಯೇ ಬೃಹತ್ ಗಾತ್ರದ ಆನೆಗಳು ನಿಮ್ಮನ್ನು ಸ್ವಾಗತಿಸುತ್ತವೆ. ಬಲಕ್ಕೆ ಕುತೂಹಲ ಕೇಂದ್ರ (ಕ್ಯೂರಿಯಾಸಿಟಿ ಸೆಂಟರ್ ಇದೆ) ಬಲಕ್ಕೆ ಅನ್ವೇಷಣ ಕೇಂದ್ರ (ಡಿಸ್ಕವರಿ ಸೆಂಟರ್) ಇದೆ. ಮುಂದೆ ಇತರ ಪ್ರದರ್ಶನಿಕೆಗಳಿವೆ. ಎಲ್ಲಿ ಹೋಗುವುದು ಎಂಬ ಸಂಶಯ ಮೂಡುತ್ತದೆ. ನಿಧಾನವಾಗಿ ಒಂದೊಂದು ಕಡೆಯೂ ಹೋಗಿ ಬಂದ ಮೇಲೆ ಛೇ! ಇಷ್ಟು ದಿನ ಇದನ್ನು ನೋಡಿರಲಿಲ್ಲವಲ್ಲ ಎನಿಸದಿರದು.
ವೃಕ್ಷಗಳಿಂದ ನಮಗಾಗುವ ಪ್ರಯೋಜನ, ಹಕ್ಕಿ ಪಕ್ಷಿಗಳು ಮಾಡಿಕೊಂಡಿರುವ ಹೊಂದಾಣಿಕೆ, ಉಷ್ಣವಲಯದ ಕಾಡುಗಳು, ಮೀನು ಹಾಗೂ ಸಾಗರಜೀವಿಗಳ ವಿಶೇಷತೆ ಎಲ್ಲ ವಿಶೇಷ ಸಂಗತಿಗಳನ್ನು ನೋಡಿ ತಿರುಗಿದಂತೆಯೇ ಬೆಚ್ಚಿ ಬೀಳುವಂತೆ ಮಾಡುವುದು ಹುಲಿ, ಚಿರತೆ, ಕಾಡು ನಾಯಿಯ ಹೊಟ್ಟುತುಂಬಿದ ಪ್ರತಿಕೃತಿಗಳು!
ಇದಾದ ನಂತರ ಜೀವ ವಿಕಾಸದ ಹಂತಗಳನ್ನು ತೋರಿಸುವ ಪಟ್ಟಿಕೆಗಳಿವೆ. ಭೂಮಿಯ ಉಗಮ ಹಾಗೂ ಯುಗಗಳನ್ನು ಕುರಿತ ಮಾಹಿತಿ ನಿಧಾನವಾಗಿ ಒಂದೊಂದೇ ಪ್ರದರ್ಶಕ ಕೋಠಿಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಮಾಹಿತಿಯಿದ್ದರೆ ಅದರ ಹಿಂಭಾಗದಲ್ಲಿ ಅಂದಿನ ಯುಗವನ್ನು ತೋರಿಸುವ ಯುಕ್ತ ಮಾದರಿಗಳಿವೆ. ಹೀಗೆ ಕೋಟ್ಯಂತರ ವರ್ಷಗಳ ಪಯಣದ ದರ್ಶನವನ್ನು ಮುಗಿಸಿ ಬರುವ ಹೊತ್ತಿಗೆ ಮಾನವನ ವಿಕಾಸವನ್ನೂ ನೋಡಿ ಬಂದಿರುತ್ತೇವೆ.
ಅಂದಹಾಗೇ ಇವೆಲ್ಲ ಎಲ್ಲಿವೆ ಅಂದಿರಾ? ಕರ್ನಾಟಕದ ಮಟ್ಟಿಗೆ ಅದ್ಭುತ ಎನ್ನಬಹುದಾದ ಪ್ರಕೃತಿ ವಿಜ್ಞಾನದ ಮ್ಯೂಸಿಯಂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿದೆ. 1995ರ ಮೇ 20 ರಂದು ಆರಂಭವಾದ ಇದು ಕಾರಂಜಿ ಕೆರೆಯ ದಂಡೆಯ ಮೇಲೆ, ಟಿ ನರಸೀಪುರ ರಸ್ತೆಯಲ್ಲಿದೆ. ಮೈಸೂರಿಗೆ ಹೋದಾಗ ನೋಡಿ ಬರಲು ದೊಡ್ಡ ಕಾರಣ ಇದಾಗಿದೆ.
ಮ್ಯೂಸಿಯಂ ಹೊರಗೆ ಸಧ್ಯ ಭಾರತದಲ್ಲಿನ ಕೃಷಿ ಪದ್ಧತಿಗಳು, ಕೃಷಿ ಸಾಮಗ್ರಿಗಳು ಹಾಗೂ ಮನೆಗಳ ಮಾದರಿಯನ್ನು ಇರಿಸಲಾಗಿದೆ. ಮರಗಳ ಮಾದರಿಗಳನ್ನು ಇರಿಸಲಾಗಿದೆ. ಇದೂ ಮಕ್ಕಳ ಜೊತೆ ಹಿರಿಯರೂ ಅಗತ್ಯವಾಗಿ ನೋಡಬೇಕಾದ ಮ್ಯೂಸಿಯಂ ಎನ್ನಲು ಅಡ್ಡಿಯಿಲ್ಲ.
ಇಲ್ಲಿನ ವಿಶೇಷತೆ ಎಂದರೆ ಸಾಧ್ಯವಾದಷ್ಟು ಮಟ್ಟಿಗೆ ಇಲ್ಲಿ ಇಡೀ ಭಾರತ ಉಪಖಂಡದ ಸಸ್ಯ ಮತ್ತು ಪ್ರಾಣಿಗಳನ್ನು ಕುರಿತ ಸಮೃದ್ಧ ಮಾಹಿತಿ ಲಭ್ಯವಿದೆ. ಪ್ರತಿಕೃತಿ, ಹತ್ತಿ ತುಂಬಿದ ಪ್ರಾಣಿಗಳ ನೈಜ ಮಾದರಿ, ಅತ್ಯುತ್ತಮ ಚಿತ್ರಗಳು, ಪ್ರತಿಮಾದರಿಗಳ ಮೂಲಕ ಸಮರ್ಥವಾಗಿ ಪ್ರದರ್ಶಿಸಿರುವುದು.
ಹಾಗೆಯೇ, ಇಲ್ಲಿರುವ ತರಬೇತಿ ಹೊಂದಿರುವ ತಜ್ಞ ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸರಿಯಾದ ಮಾರ್ಗದರ್ಶನ ನೀಡುತ್ತಾರೆ. ಇದು ಸಂಗ್ರಹಾಲಯದ ಒಂದು ಪ್ಲಸ್ ಪಾಯಿಂಟ್ . ಇಲ್ಲಿ ಅನ್ವೇಷಣಾ ಕೇಂದ್ರ, ಕುತೂಹಲ ಕೇಂದ್ರಗಳಿವೆ. ಶಾಶ್ವತ ಹಾಗೂ ಅಲ್ಪಕಾಲೀನ ಪ್ರದರ್ಶನಗಳಿವೆ. ಕಾಲಕಾಲಕ್ಕೆ ಬದಲಾಗುತ್ತಿರುವ ಒಂದು ಮ್ಯೂಸಿಯಮ… ಇದು. ಭೂವಿಜ್ಞಾನದ ಯುಗಗಳು, ಜೀವಿಗಳ ಉಗಮ, ವಿಕಾಸ, ಜೀವಿವೈವಿಧ್ಯತೆ, ಪಶ್ಚಿಮಘಟ್ಟಗಳು, ಪಕ್ಷಿ, ಸಾಗರಜೀವಿಗಳ ವೈವಿಧ್ಯ ಎಲ್ಲದ ದರ್ಶನವಾಗುತ್ತದೆ. ಭೂವಿಜ್ಞಾನದ ಯುಗಗಳನ್ನು ಪ್ರದರ್ಶನಕ್ಕೆ ಕತ್ತಲನ್ನು ಬಳಸಿಕೊಂಡಿದ್ದಾರೆ. ಇದರಿಂದಾಗಿ ಆಯಾ ಯುಗಕ್ಕೆ ಮಕ್ಕಳನ್ನು ಕರೆದುಕೊಂಡು ಹೋದ ಅನುಭವವಾಗುತ್ತದೆ. ಪ್ರಯೋಗಶಾಲೆಯೂ ಇದೆ. ಚಲನಚಿತ್ರ ಪ್ರದರ್ಶನವೂ ಇದೆ. ಇದಕ್ಕಾಗಿಯೇ ಮೈಸೂರಿಗೆ ಹೋಗಿಬರಲು ಸಾಕಷ್ಟು ಕಾರಣಗಳಿವೆ.
ಆ ಪಟ್ಟಿಯಲ್ಲಿ ಇದನ್ನೂ ಸೇರಿಸಿಕೊಳ್ಳಿ.
ಕಲ್ಗುಂಡಿ ನವೀನ್
ಉದ್ದೇಶ ಇದು
ದೇಶದ ಅನೇಕ ಕಡೆಗಳಲ್ಲಿ ಹಲವು ವಿಷಯಗಳನ್ನು ಕುರಿತ ಅನೇಕ ಸಂಗ್ರಹಾಲಯಗಳಿವೆ. ದೆಹಲಿಯ ರಾಷ್ಟ್ರೀಯ ಮ್ಯೂಸಿಯಂ, ಹೈದರಾಬಾದ್‌ನ ಸಾಲಾರ್‌ಜಂಗ್ ಮ್ಯೂಸಿಯಂ) ಹೀಗೆ ದೇಶದ ಅನೇಕ ಕಡೆ ಇವೆ.
ಇಂಥ ಅಗ್ರ ಪಂಕ್ತಿಯಲ್ಲಿ ಪ್ರಕೃತಿವಿಜ್ಞಾನಕ್ಕೆಂದೇ ವೀಸಲಾದ ಮ್ಯೂಸಿಯಂ ಇದಾಗಿದ್ದು, ಯಾರೇ ಆಗಲಿ ತಲೆದೂಗುವಂತಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದಂತಿದೆ. ಮ್ಯೂಸಿಯಂ ಮೂಲ ಉದ್ದೇಶಗಳು ಹೀಗಿದೆ…
1. ದಕ್ಷಿಣ ಭಾರತದ ಭೂವಿಜ್ಞಾನದ, ಸಸ್ಯ ಹಾಗೂ ಪ್ರಾಣಿ ವೈವಿಧ್ಯವನ್ನು ತೆರೆದಿಡುವುದು
2. ಸಸ್ಯ ಮತ್ತು ಪ್ರಾಣಿಗಳ ನಡುವಿನ ಸಂಬಂಧವನ್ನು ತೋರಿಸುವುದು ಹಾಗೂ ಪ್ರಕೃತಿ ಹಾಗೂ ಪ್ರಾಕೃತಿಕ ಸಂಪತ್ತಿನ ಸಂರಕ್ಷಣೆಯ ಅಗತ್ಯವನ್ನು ಮನದಟ್ಟು ಮಾಡುವುದು
3. ಶಾಲಾ ಮಕ್ಕಳಿಗೆ ಅವರ ಪಠ್ಯಕ್ರಮದಲ್ಲಿರುವ ಭೂವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳನ್ನು ಕುರಿತ ಮಾಹಿತಿಯನ್ನು ಪಾರಿಸಾರಿಕ ಹಿನ್ನೆಲೆಯಲ್ಲಿ ಒದಗಿಸುವುದು.
4. ಸಾರ್ವಜನಿಕರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಮೂಡಿಸುವುದು.
ಕಲ್ಗುಂಡಿ ನವೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.