ನುಗ್ಗಿಕೇರಿ ಆಂಜನೇಯ
Team Udayavani, Jun 8, 2019, 6:41 AM IST
ಪೇಡಾ ನಗರಿ, ಅವಳಿ ನಗರ ಎಂದೇ ಖ್ಯಾತಿ ಗಳಿಸಿರುವ ಧಾರವಾಡ- ಹುಬ್ಬಳ್ಳಿ ನಗರಗಳಲ್ಲಿ ಸಾಕಷ್ಟು ಆಂಜನೇಯನ ದೇವಸ್ಥಾನಗಳಿವೆ. ಅವುಗಳಲ್ಲಿ ಧಾರವಾಡ ನಗರದ ನುಗ್ಗಿಕೇರಿ ಆಂಜನೇಯ ಎಂದರೆ ಜನರಿಗೆ ಅದೇನೋ ಭಕ್ತಿ. ಇಲ್ಲಿನ ಜನರು ಕಷ್ಟಕಾರ್ಪಣ್ಯಗಳಿಂದ ಮುಕ್ತಿ ಕಾಣಲು ಈ ಆಂಜನೇಯನ ಮೊರೆ ಹೋಗುತ್ತಾರೆ. ಧಾರವಾಡದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಈ ದೇವಾಲಯವಿದೆ. ಶನಿವಾರವಂತೂ ಈ ದೇವಸ್ಥಾನಕ್ಕೆ ಹೋಗುವ ಭಕ್ತರಿಗಾಗಿಯೇ ವಿಶೇಷ ಬಸ್ಸುಗಳನ್ನು ಬಿಡಲಾಗುತ್ತದೆ. ದೇವಸ್ಥಾನಕ್ಕೆ 2 ಕಿ.ಮೀ ದೂರದವರೆಗೂ ದೇವಾಲಯದ ಗೋಪುರ ಎದ್ದು ಕಾಣಿಸುತ್ತದೆ.
ಸ್ಥಳ ಪುರಾಣ
ಜನಮೇಜಯ ಮಹಾರಾಜ ನಿರ್ಮಿಸಿದ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಹಿಂದೆ ಜನಮೇಜಯನ ತಂದೆ ಪರೀಕ್ಷಿತ ಮಹಾರಾಜ ಬೇಟೆಗೆಂದು ಬಂದದಿದ್ದಾªಗ ಅವನಿಗೆ ಹಸಿವು ಹಾಗೂ ಬಾಯಾರಿಕೆ ಆಯಿತಂತೆ. ಕಾಡಿನಲ್ಲಿ ಅಲೆದಾಡುತ್ತಿದ್ದ ಅವನು. ಒಬ್ಬ ಧ್ಯಾನಾಸಕ್ತನಾದ ಮುನಿಯನ್ನು ನೋಡುತ್ತಾನೆ. ಮುನಿಯ ಬಳಿ ಹೋಗಿ ಮಾತನಾಡಿಸುತ್ತಾನೆ. ಆದರೆ ತಪೋನಿರತನಾಗಿದ್ದ ಮುನಿ ಯಾವುದೇ ರೀತಿಯಲ್ಲೂ ಸ್ಪಂದಿಸುವುದಿಲ್ಲ. ಇದರಿಂದ ಕೋಪಗೊಂಡ ರಾಜ ಅಲ್ಲೇ ಹರಿದಾಡುತ್ತಿದ್ದ ಹಾವನ್ನು ತೆಗೆದು ಋಷಿಯ ಮೇಲೆ ಹಾಕುತ್ತಾನೆ. ಋಷಿಯ ಕೊರಳಿಗೆ ಹಾಕಿ ಹೋಗಿಬಿಡುತ್ತಾನೆ. ಸ್ವಲ್ಪ ಸಮಯದ ಬಳಿಕ ಎಚ್ಚರ ಗೊಂಡ ಋಷಿ, ತನ್ನನ್ನು ಅವಮಾನಿಸಿದ ರಾಜನಿಗೆ, ಹಾವಿಂದಲೇ ಸಾವು ಬರಲಿ ಎಂದು ಶಪಿಸುತ್ತಾನೆ. ಪರಿಣಾಮ, ಋಷಿಯ ತಪಸ್ಸು ಭಂಗವಾಗಿ ಹಾವಿನಿಂದ ಕಚ್ಚಲ್ಪಟ್ಟು ಪರೀಕ್ಷಿತ ಮಹಾರಾಜ ಸಾವನ್ನಪ್ಪುತ್ತಾನೆ. ವಿಷಯ ತಿಳಿದು ಕೋಪಗೊಂಡ ಜನಮೇಜಯ, ತಂದೆಯ ಸಾವಿಗೆ ಪ್ರತಿಕಾರಕ್ಕಾಗಿ ಸರ್ವ ಜಾತಿಯ ಹಾವುಗಳೆಲ್ಲಾ ಯಜ್ಞ ಕುಂಡದಲ್ಲಿ ಬಿದ್ದು ಸಾಯುವಂತೆ ಮಾಡುತ್ತಾನೆ. ಹಾವುಗಳೆಲ್ಲಾ ಯಜ್ಞ ಕುಂಡದಲ್ಲಿ ಬಿದ್ದು ಸಾಯುತ್ತಿರುವಾಗ ಅಲ್ಲೇ ಇದ್ದ ಸಣ್ಣ ಹಾವೊಂದು ಈ ಯಜ್ಞವನ್ನು ನಿಲ್ಲಿಸುವಂತೆ ದೇವರನ್ನು ಬೇಡುತ್ತದೆ. ಆಗ ಅಶರೀರವಾಣಿಯೊಂದು ಕೇಳಿ, ಯಜ್ಞವನ್ನು ನಿಲ್ಲಿಸುವಂತೆ ಜನಮೇಯಜನಿಗೆ ಹೇಳುತ್ತದೆ. ಇಲ್ಲವಾದಲ್ಲಿ ತಂದೆಯ ರೀತಿಯಲ್ಲೇ ನೀನೂ ಸಾವನ್ನಪ್ಪುವುದಾಗಿ ಹೇಳುತ್ತದೆ. ಆಗ ಜನಮೇಜಯ ರಾಜ ಯಜ್ಞವನ್ನು ನಿಲ್ಲಿಸುತ್ತಾನೆ. ಆದರೂ ಸರ್ಪದೋಷ ಜನಮೇಜಯನಿಗೆ ಸುತ್ತಿಕೊಳ್ಳುತ್ತದೆ. ತನ್ನ ತಪ್ಪಿನ ಪ್ರಾಯಶ್ಚಿತಕ್ಕಾಗಿ ಅವನು ಹಲವಾರು ದೇಗುಲಗಳನ್ನು ನಿರ್ಮಿಸುತ್ತಾನೆ. ಅದರಲ್ಲಿ ಈ ಆಂಜನೇಯ ದೇವಸ್ಥಾನವೂ ಒಂದು.
ಜೀರ್ಣೋದ್ದಾರ
ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣವಾದ ಈ ದೇವಾಲಯ, ಸಾಕಷ್ಟು ವಿಶಾಲವಾಗಿದ್ದು ಗರ್ಭಗುಡಿಯಲ್ಲಿರುವ ಕೇಸರಿ ಬಣ್ಣದ ಆಂಜನೇಯನ ವಿಗ್ರಹ ಎಲ್ಲರ ಕಣ್ಮನ ಸೆಳೆಯುತ್ತಿದೆ. ಹಿಂದೆ ಈ ದೇವಸ್ಥಾನವನ್ನು ವ್ಯಾಸರಾಯರು ಮರುಪ್ರತಿಷ್ಠಾಪಿಸಿದ್ದರು. ಆನಂತರ ಈ ದೇವಸ್ಥಾನದ ಉಸ್ತುವಾರಿಯನ್ನು ದೇಸಾಯಿ ಮನೆತನದವರು ಹೊತ್ತು ಕೊಂಡರು. ಇಲ್ಲಿ ಬೆಳಗ್ಗೆ ಮತ್ತು ಸಂಜೆ ಪ್ರಸಾದದ ವ್ಯವಸ್ಥೆ ಇದೆ. ಮಧ್ಯಾಹ್ನ ಅನ್ನಸಂತಪ್ರಣೆಯ ಕಾರ್ಯಕ್ರಮವೂ ನಡೆಯುತ್ತದೆ. ಸೇವೆಗಾಗಿ ದೂರದೂರಿನಿಂದ ಬರುವ ಭಕ್ತರಿಗೆ ದೇವಸ್ಥಾನದ ಆವರಣದಲ್ಲಿಯೇ ಉಳಿದುಕೊಳ್ಳುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಬೇಡಿ ಬಂದ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುವ ಕರುಣಾಮಯಿ ನುಗ್ಗೇಕೇರಿ ಆಂಜನೇಯ ಎಂದರೆ ಧಾರವಾಡದ ಜನರಿಗೆ ಅದೇನೋ ಭಕ್ತಿ. ಇವರು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಕಷ್ಟು ಹರಕೆಗಳನ್ನು ಹೊತ್ತುಕೊಂಡಿರುತ್ತಾರೆ. ಅವುಗಳಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳು. ತಾವು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಪಾಸಾದರೆ ಕಾಲ್ನಡಿಗೆಯಲ್ಲಿಯೇ ಹನುಮನ ದರ್ಶನಕ್ಕೆ ಬರುತ್ತೇವೆ ಎಂದೆಲ್ಲಾ ಹರಕೆ ಹೊತ್ತಿರುತ್ತಾರೆ. ಹಾಗೇ ಮದುವೆಯಾಗದವರು, ಮಕ್ಕಳಾಗದವರು, ರೋಗಿಗಳು, ಬಡವರು, ರಾಜಕಾರಣಿಗಳು, ಮನೆಯಲ್ಲಿನ ಸಮಸ್ಯೆಗಳಿರುವವರು, ಹೊಲಮನೆಯ ತಗಾದೆ… ಹೀಗೆ ಪ್ರತಿಯೊಬ್ಬರೂ ಕಷ್ಟಕಾರ್ಪಣ್ಯಗಳಿಂದ ಮುಕ್ತರಾಗಲು ನುಗ್ಗಿಕೇರಿ ಆಂಜನೇಯನ ಬಳಿ ದಾವಿಸಿ ಬರುತ್ತಾರೆ .
ಈ ದೇವಸ್ಥಾನದಲ್ಲಿ ಜಾತಿ – ಮತ ಬೇಧವಿಲ್ಲ. ದರ್ಶನಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಶನಿವಾರ ಆಂಜನೇಯನ ವಾರವಾಗಿರುವುದರಿಂದ ಇಲ್ಲಿಗೆ ಭಕ್ತರ ದಂಡೇ ಹರಿದು ಬರುತ್ತದೆ. ವಿಶೇಷ ದಿನಗಳಲ್ಲಿ ಆಂಜನೇಯನಿಗೆ ಬೆಣ್ಣೆ ಅಲಂಕಾರ, ಕುಂಕುಮದ ಅಲಂಕಾರ, ತುಳಸಿ ಮಾಲೆಯ ಅಲಂಕಾರ ನಡೆಯುತ್ತಲೇ ಇರುತ್ತವೆ. ಹನುಮ ಜಯಂತಿ, ರಾಮನವಮಿಯಂಥ ವಿಶೇಷ ಸಂದರ್ಭದಲ್ಲಿ ಈ ದೇವಸ್ಥಾನದ ಅಲಂಕಾರ ಬಹಳ ವೈಭವದಿಂದ ನಡೆಯುತ್ತದೆ. ಪ್ರಶಾಂತ ವಾತಾವರಣ ತುಂಬಿರುವ ಈ ದೇವಸ್ಥಾನದಲ್ಲಿ ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಹನುಮಾನ್ ಚಾಲೀಸಾ ಮಂತ್ರವನ್ನು ಪಠಿಸಲಾಗುತ್ತದೆ. ಬೆಳಗ್ಗೆ ಆರು ಗಂಟೆಗೇ ಭಕ್ತರು ದೇವಸ್ಥಾನದಲ್ಲಿ ಹಾಜರಿರುತ್ತಾರೆ.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.