ಹಳೇ ಬ್ಯಾಟು ಹಳೇ ಚೆಂಡು
Team Udayavani, Jan 4, 2020, 7:03 AM IST
ಬ್ಯಾಟ್ ಇಲ್ಲದೇ ಹೋದವನು, ವಿಶ್ವದಾಖಲೆಯ ಶತಕ ಬಾರಿಸಿದ!
ಕ್ರಿಕೆಟ್ ಆಟಗಾರರಿಗೆ ಕೆಲವೊಂದು ನಂಬಿಕೆಗಳಿರುತ್ತವೆ. ಟೆಸ್ಟ್ ಪಂದ್ಯಕ್ಕೆ ಒಂದು, ಏಕದಿನ ಪಂದ್ಯಕ್ಕೆಂದು, ಟಿ20 ಪಂದ್ಯಕ್ಕೆ ಬೇರೊಂದು ಬ್ಯಾಟ್‌ಗಳನ್ನು ಕೊಂಡೊಯ್ಯುವ ಆಟಗಾರರಿದ್ದಾರೆ. ಬ್ಯಾಟ್ ಹಗುರವಾಗಿದ್ದರೆ, ನಮ್ಮ ಮಹೇಂದ್ರಸಿಂಗ್ ಧೋನಿ ಚೆನ್ನಾಗಿ ಆಡುವುದೇ ಇಲ್ಲ ಎಂಬ ಸಂಗತಿ, ಕ್ರೀಡಾಪ್ರೇಮಿಗಳಿಗೆಲ್ಲ ಗೊತ್ತಿದೆ. ನೀವೀಗ ಓದಲಿರುವ ಸುದ್ದಿ ಪಾಕಿಸ್ತಾನದ ಆಲ್‌ರೌಂಡ್ ಆಟಗಾರ ಶಾಹಿದ್ ಅಫ್ರಿದಿಗೆ ಸಂಬಂಧಿಸಿದ್ದು. ಏನೆಂದರೆ ಒಂದು ಸಂದರ್ಭದಲ್ಲಿ ಚೆಂದದ ಬ್ಯಾಟ್ ಇಲ್ಲದೇ ಶ್ರೀಲಂಕಾಗೆ ಹೋದ ಅಫ್ರಿದಿ, ಅಲ್ಲಿ ಬೇರೊಬ್ಬ ಆಟಗಾರನಿಂದ ಬ್ಯಾಟ್ ಪಡೆದು, ಅದರಲ್ಲೇ ಶತಕ ಹೊಡೆದದ್ದು!
ಅದಾಗಿದ್ದು ಹೀಗೆ: 1996ರಲ್ಲಿ ಪಾಕಿಸ್ತಾನ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿತ್ತು. ಈ ಸರಣಿಯಲ್ಲಿ ಒಬ್ಬ ಆಟಗಾರ ದಿಢೀರ್ ಗಾಯಾಳಾಗಿ ಕೂಟದಿಂದಲೇ ಹೊರಗೆ ಉಳಿಯುವಂತಾಯಿತು. ಬದಲೀ ಆಟಗಾರನಾಗಿ ತಕ್ಷಣ ಲಂಕಾದ ವಿಮಾನ ಹತ್ತುವಂತೆ, ಆಗ ವೆಸ್ಟ್ ಇಂಡೀಸ್‌ನಲ್ಲಿದ್ದ ಅಫ್ರಿದಿಗೆ ತುರ್ತು ಸಂದೇಶ ಬಂತು. ಆಗ, ಒಳ್ಳೆಯದೊಂದು ಬ್ಯಾಟ್ ಆಯ್ದುಕೊಳ್ಳಲೂ ಆಗದೆ ಅಫ್ರಿದಿ ವಿಮಾನ ಹತ್ತಿಬಿಟ್ಟ. ಲಂಕಾದಲ್ಲಿ ಆಟ ಶುರುವಾದಾಗ, ಹಿರಿಯ ಆಟಗಾರ ವಖಾರ್ ಯೂನಸ್, ತಮ್ಮಲ್ಲಿದ್ದ ಚೆಂದದ ಬ್ಯಾಟನ್ನು ಅಫ್ರಿದಿಗೆ ಕೊಟ್ಟರು.
ಆಮೇಲೇನಾಯ್ತು ಗೊತ್ತೇ? ಇನ್ನೊಬ್ಬರಿಂದ ಬ್ಯಾಟ್ ಪಡೆದ ಅಫ್ರಿದಿ, ಕೇವಲ 36 ಚೆಂಡುಗಳಲ್ಲಿಯೇ ಶತಕ ಹೊಡೆದು ವಿಶ್ವದಾಖಲೆ ನಿರ್ಮಿಸಿದರು. ವಿಶೇಷವೇನು ಗೊತ್ತೇ? ಆ ಬ್ಯಾಟ್ ಸಚಿನ್ ತೆಂಡುಲ್ಕರ್ ಅವರದ್ದು. ತಮ್ಮ ಬ್ಯಾಟ್ ರೀತಿಯದ್ದೇ ಬ್ಯಾಟ್‌ಗಳನ್ನು ತಯಾರಿಸಿಕೊಡಲು ಸಚಿನ್, ತಮ್ಮ ಬ್ಯಾಟನ್ನು ಪಾಕ್‌ನ ಅಂದಿನ ಖ್ಯಾತ ವೇಗಿ ವಖಾರ್ ಯೂನಸ್‌ಗೆ ಕೊಟ್ಟಿದ್ದರು (ಪಾಕಿಸ್ತಾನದ ಸಿಯಾಲ್ ಕೊಟ್ ಬ್ಯಾಟ್ ತಯಾರಿಕೆಗೆ ಹೆಸರುವಾಸಿ). ಅದನ್ನೇ ವಖಾರ್ ಅಫ್ರಿದಿಗೆ ಕೊಟ್ಟರು. ಅದರಿಂದಲೇ ಅವರು ಶತಕ ಚಚ್ಚಿದರು.
ನೂರು ಟೆಸ್ಟ್ ಆಡಿದರೂ…
ಯಾವುದೇ ರಾಷ್ಟ್ರದ ಆಟಗಾರನಾದರೂ ಸರಿ. ಆತ ನೂರು ಟೆಸ್ಟ್ ಆಡುವಂಥ ಅವಕಾಶ ಪಡೆಯಬೇಕೆಂದರೆ, ಅತ್ಯುತ್ತಮ ಕ್ರಿಕೆಟರ್ ಆಗಿರಲೇಬೇಕು. ಯಾವುದೇ ತಂಡಕ್ಕೆ ಒಂದು ವರ್ಷದಲ್ಲಿ ಹತ್ತು ಟೆಸ್ಟ್‌ಗಳನ್ನು ಆಡಲು ಅವಕಾಶ ಸಿಗುವುದೇ ದೊಡ್ಡ ವಿಚಾರ. ಚೆನ್ನಾಗಿ ಆಡುತ್ತಲೇ ಇದ್ದರೆ ಮಾತ್ರ ಖಾಯಂ ಆಗಿ ತಂಡದಲ್ಲಿರಲು ಸಾಧ್ಯ. ಅಂಥ ಆಟಗಾರರು ವಿರಳ. ಅದಕ್ಕೊಂದು ಅಪವಾದವೆಂದರೆ ಭಾರತ ಕ್ರಿಕೆಟ್ ಕಂಡ ಅಪ್ರತಿಮ ಆಟಗಾರರಾದ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್. ಅದರಲ್ಲೂ ಲಕ್ಷ್ಮಣ್ ಅವರನ್ನು ಕ್ರಿಕೆಟ್ ಪ್ರೇಮಿಗಳು ಮರೆಯುವಂತೆಯೇ ಇಲ್ಲ.
ಆಸ್ಟ್ರೇಲಿಯ, ನ್ಯೂಜಿಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾದ ಪ್ರಚಂಡ್ ಬೌಲರ್‌ಗಳ ಎದುರು ನೆಲಕಚ್ಚಿ ನಿಂತು ಆಡಿದವರಲ್ಲಿ, ತಮ್ಮ ಅಮೋಘ ಆಟದಿಂದ ತಂಡವನ್ನು ಗೆಲ್ಲಿಸಿದವರಲ್ಲಿ ಲಕ್ಷ್ಮಣ್‌ಗೆ ಮೊದಲಸ್ಥಾನ. ಇಲ್ಲೊಂದು ಸ್ವಾರಸ್ಯವಿದೆ. ಲಕ್ಷ್ಮಣ್, 12 ವರ್ಷಗಳ ಕಾಲ ಭಾರತ ತಂಡದಲ್ಲಿದ್ದು, ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದರು. ಏಕದಿನ ಪಂದ್ಯಗಳಲ್ಲಿಯೂ ಮಿಂಚಿದರು. ಅವರು ಆಡುತ್ತಿದ್ದ ಸಂದರ್ಭದಲ್ಲಿಯೇ ಎರಡು ವಿಶ್ವಕಪ್ ಕೂಟಗಳು ನಡೆದವು. ವಿಶ್ವದ ಅತ್ಯಂತ ಕಲಾತ್ಮಕ ಬ್ಯಾಟ್ಸ್‌ಮನ್ ಅನಿಸಿಕೊಂಡಿದ್ದ ಲಕ್ಷ್ಮಣ್‌ಗೆ, ವಿಶ್ವಕಪ್ ತಂಡದಲ್ಲಿ ಸ್ಥಾನವೇ ಸಿಗಲಿಲ್ಲ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.