![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 4, 2017, 10:33 AM IST
ಹೊಸಪೇಟೆ ನಗರದಿಂದ ಕೇವಲ 2 ಕಿ.ಮೀ ಅಂತರದಲ್ಲಿರುವ ಲೋಹಾದ್ರಿಯ ನಡುವೆ ಜಂಬುನಾಥ ಸ್ವಾಮಿಯ ಸುಂದರ ಪ್ರಾಚೀನ ದೇವಾಲಯವಿದೆ.ಜಂಬುನಾಥ ಗುಡ್ಡ ಎಂದೇ ಕರೆಯಲ್ಪಡುವ ಈ ಬೆಟ್ಟದ ಆರಾಧ್ಯ ದೈವ ಈಶ್ವರ. ವಿಜಯನಗರ ಸಾಮ್ರಾಜ್ಯದೊಂದಿಗೆ ಸಂಬಂಧವುಳ್ಳ ಈ ಜಂಬುನಾಥ ದೇವಸ್ಥಾನ ಆ ಕಾಲದ ವಾಸ್ತುಶಿಲ್ಪಕ್ಕೆ ಉತ್ತಮ ಮಾದರಿ ಎಂದೇ ಹೇಳಬಹುದು. ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಸ್ಥಾನದಲ್ಲಿ ಶಿವ ಬಂದು ನೆಲೆಸಲು ಒಂದು ಐತಿಹ್ಯವೇ ಇದೆ.
ಸ್ಥಳ ಪುರಾಣ
ಪಂಪಾಕ್ಷೇತ್ರದ (ಹಂಪಿ) ದಕ್ಷಿಣ ದ್ವಾರ ಎನ್ನುವ ಈ ಪ್ರದೇಶದಲ್ಲಿ ಜಾಂಬುವಂತನು ಜಿತೇಂದ್ರಿಯಾಗಿ ಹತ್ತು ವರ್ಷಗಳ ಕಾಲ ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಪಂಪಾ ವಿರೂಪಾಕ್ಷನ ಕರುಣೆಗೆ ಪಾತ್ರನಾದನು ಎಂಬ ಪ್ರತೀತಿ ಇದೆ. ಎಷ್ಟೋ ಯುಗಗಳು ಕಳೆದರೂ ಜಾಂಬುವಂತನ ತಪ ಮುಗಿಯಲಿಲ್ಲ. ತಪೋ ಜಾÌಲೆ ಮೂರು ಲೋಕಗಳನ್ನು ಸುಡತೊಡಗಿದಾಗ ಶಿವ ಪ್ರತ್ಯಕ್ಷನಾಗಿ ಜಾಂಬವಂತನ ಜೊತೆಯಲ್ಲಿ ಈ ಬೆಟ್ಟದ ಮೇಲೆ ನೆಲೆಸಿದನೆಂದು ಹೇಳಲಾಗುತ್ತಿದೆ. ಅಲ್ಲಿರುವ ಶಿವಲಿಂಗ ಉದ್ಭವಗೊಂಡಿರುವುದೇ ಇದಕ್ಕೆ ಸಾಕ್ಷಿ. ಈ ದೇವಸ್ಥಾನದ ವಾಸ್ತುಶಿಲ್ಪ ವಿಜಯನಗರ ಶೈಲಿಯಲ್ಲಿದ್ದು ನೋಡುಗರ ಕಣ್ಮನ ಸೆಳೆಯುತ್ತಿದೆ. ಈ ದೇವಾಲಯ ಸ್ಥಳೀಯರ ಧಾರ್ಮಿಕ ಭಾವನೆಯ ದೈ ವೀಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಪೂರ್ವಾಭಿಮುಖವಾಗಿರುವ ಈ ದೇವಾಲಯ ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖ ಮಂಟಪಗಳನ್ನು ಹೊಂದಿದ್ದು ಪ್ರಾಕಾರ ಗೋಡೆಗಳಿಂದ ಸುತ್ತುವರಿದಿದೆ.ಇದೊಂದು ಅಪ್ಪಟ ವಿಜಯನಗರ ಶೈಲಿಯ ದೇವಸ್ಥಾನ ಎಂತಲೇ ಹೇಳಬಹುದು. ದೇಗುಲಕ್ಕೆ ತೆೆರಳಲು ನೂರಾ ಒಂದು ಮೆಟ್ಟಿಲುಗಳಿವೆ. ಇವನ್ನು ಹತ್ತಿ ತೆರಳುವುದು ಅತ್ಯಂತ ಶ್ರೇಷ್ಠ ಎಂಬುದೇ ಇಲ್ಲಿನ ಜನರ ನಂಬಿಕೆ. ಈ ಮೆಟ್ಟಿಲುಗಳನ್ನು ಹತ್ತುತ್ತಾ ಮೇಲೆ ಹೋದಂತೆ ಸುತ್ತಮುತ್ತಲಿನ ಸುಂದರ ಪ್ರಕೃತಿ ಸೌಂದರ್ಯ,ದಟ್ಟವಾದ ಕಾಡುಪ್ರದೇಶ ಕಣ್ಣಿಗೆ ಬೀಳುತ್ತದೆ. ಇಂತಹ ಬಿಸಿಲಿನ ನಾಡಿನಲ್ಲಿ ಮಲೆನಾಡಿನ ಅನುಭವ ನಮಗಾಗುತ್ತದೆ. ದೇಗುಲವನ್ನು ಪ್ರವೇಶಿಸಿದಾಗ ಎಡಭಾಗದಲ್ಲಿ ತಣ್ಣೀರಿನ ಬಾಯೊಂದಿದೆ. ವರ್ಷಪೂರ್ತಿ ಈ ಬಾಯಲ್ಲಿ ನೀರು ತುಂಬಿರುವುದು ಇಲ್ಲಿನ ಒಂದು ವಿಶೇಷ. ಎಷ್ಟೇ ಕಡು ಬಿಸಿಲಿದ್ದರೂ ಸೂರ್ಯನ ಕಿರಣಗಳು ಈ ಬಾವಿಯನ್ನು ಪ್ರವೇಶಿಸುವುದಿಲ್ಲ. ಇದೇ ಇದರ ಇನ್ನೊಂದು ವಿಶೇಷ. ಈ ತಣ್ಣೀರಿನ ಬಾವಿಗೆ ಹಿಂಬದಿಯ ಬೆಟ್ಟದ ಮೇಲಿಂದ ಒಂದು ಝರಿ ವರ್ಷಪೂರ್ತಿ ಹರಿದು ಬಂದು ಸೇರುತ್ತಲೇ ಇರುತ್ತದೆ. ಎಷ್ಟೇ ಬೇಸಿಗೆ ಇದ್ದರೂ ಹನಿ ಹನಿಯಾಗಿ ತೊಟ್ಟಿಕ್ಕುವ ಈ ಝರಿಯ ಮೂಲ ಎಲ್ಲಿದೆ ಎಂಬುದೇ ಇನ್ನೂ ನಿಗೂಢ. ಈ ಬಾವಿಯಲ್ಲಿ ಮಡಿಸ್ನಾನ ಮಾಡಿ ದೇವರ ದರ್ಶನ ಮಾಡಿಕೊಂಡರೆ ಮನಸ್ಸಿನಲ್ಲಿ ಅಂದುಕೊಂಡಿದ್ದು ಈಡೇರುತ್ತದೆ ಎಂಬ ನಂಬಿಕೆ ಇದ್ದು. ಸಾಕಷ್ಟು ಭಕ್ತಾದಿಗಳು ನಿತ್ಯ ಈ ಬಾವಿ ಸ್ನಾನ ಮಾಡಿ ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತಾರೆ. ಅದು ಸಂಪೂರ್ಣಗೊಂಡರೆ ಕುಟುಂಬ ಸಮೇತರಾಗಿ ಮತ್ತೆ ಬಂದು ಜಂಬುನಾಥನಿಗೆ ವಿಶೇಷ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ.
ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಹುಣ್ಣಿಮೆಯ ಮೊದಲ ದಿನ ಜಂಬುನಾಥನ ಜಾತ್ರೆಯ ಸಂಭ್ರಮ ಜೋರಾಗಿರುತ್ತದೆ. ಈ ಜಾತ್ರೆಯ ಸಂದರ್ಭದಲ್ಲಿ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಹಲವಾರು ಜಿಲ್ಲೆಗಳ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆಯ ಮುನ್ನ ಬೆಟ್ಟದಲ್ಲಿರುವ ಬಿಸಿಲು ಕಾಣದ ಬಾವಿಯನ್ನು ತೊಳೆದು ಶಿವನ ಪೂಜೆಗೆ ಅಲ್ಲಿನ ನೀರನ್ನು ಮೀಸಲಿಡುವ ಅಪರೂಪದ ಪರಂಪರೆ ಇಲ್ಲಿ ಬೆಳೆದು ಬಂದಿದೆ. ಪರ್ವತ ಶ್ರೇಣಿಯ ಈ ಬಾವಿಯ ನೀರು ಖನಿಜ ಲವಣಾಂಶದಿಂದ ಕೂಡಿದ್ದು ಆರೋಗ್ಯಕ್ಕೆ ಉತ್ತಮವಾಗಿದೆ.
ತಲುಪುವ ಮಾರ್ಗ
ದೇಶದ ಪ್ರಮುಖ ನಗರಗಳಿಂದ ಹೊಸಪೇಟೆಗೆ ಸಾಕಷ್ಟು ಬಸ್‌ಗಳು ಸೌಲಭ್ಯವಿದೆ. ಹೊಸಪೇಟೆ ಪಟ್ಟಣ ಬಸ್ ನಿಲ್ದಾಣದಿಂದ ದೇಗುಲ ತಲುಪಲು ನಗರ ಸಾರಿಗೆ ಬಸ್‌ಗಳಿವೆ. ಈ ಬಸ್‌ಗಳಲ್ಲಿ ತೆರಳಿದರೆ ದೇಗುಲದ ತಳದಲ್ಲಿರುವ ಜಂಬುನಾಥ ಬೈಪಾಸ್ ಕ್ರಾಸ್‌ನಲ್ಲಿ ಇಳಿದು ಅಲ್ಲಿಂದ ಒಂದು ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಿ ಬಳಿಕ ನೂರಾ ಒಂದು ಮೆಟ್ಟಿಲು ಹತ್ತಿ ಈ ಜಂಬುನಾಥ ದೇವಸ್ಥಾನ ತಲುಪಬಹುದು. ಇಲ್ಲವೇ ನೀವು ಸ್ವಂತ ವಾಹನದಲ್ಲಿ ಹೋಗುವವರಿದ್ದರೆ ಬಳ್ಳಾರಿ ಸರ್ಕಲ್‌ಗೆ ತೆರಳಿದರೆ ಅಲ್ಲಿಂದ ಬೆಟ್ಟಕ್ಕೆ ನೇರ ಮಣ್ಣಿನ ದಾರಿ ಇದೆ. ಆ ಮಣ್ಣಿನ ರಸ್ತೆ ಮೂಲಕ ಬೆಟ್ಟದ ತಪ್ಪಲಿನಲ್ಲಿ ಸಾಗಿದರೆ ನೇರ ದೇಗುಲದ ಪ್ರವೇಶದ್ವಾರಕ್ಕೆ ಹೋಗಬಹುದು.
ಆಶಾ ಎಸ್.ಕುಲಕರ್ಣಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.