ಹೊಂಡದ ಊರು…
Team Udayavani, Jun 16, 2018, 3:41 PM IST
ಚಿತ್ರದುರ್ಗ ಮತ್ತು ವಿಜಯಪುರ. ಈ ಎರಡೂ ನಗರಗಳು ರಾಜ್ಯದ ಹೆಮ್ಮೆ. ಎರಡರಲ್ಲೂ ಕೋಟೆಕೊತ್ತಲುಗಳಿವೆ. ವಿಜಯಪುರವನ್ನು ಇಡೀ ಕೋಟೆಯೇ ಆವರಿಸಿದೆ. ದುರ್ಗದಲ್ಲಿ ಹೊಂಡಗಳು ನೀರ ಹಾಡು ಹಾಡುತ್ತಿದೆ. ಆದರೆ ಈ ಎರಡೂ ನಗರಗಳಲ್ಲಿ ಐತಿಹಾಸಿಕ ಸ್ಮಾರಕಗಳು ಹೇಗಿವೆ, ಸ್ಥಳೀಯರಿಗೆ ಇದು ಹೆಮ್ಮೆಯೇ, ಅದನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದಾರೆಯೇ? ಇಲ್ಲಿದೆ ಮಾಹಿತಿ.
ಚಿತ್ರದುರ್ಗವು ಕೋಟೆಯ ನಾಡು ಸರಿ.ಅದು ಹೊಂಡ, ಪುಷ್ಕರಣಿಗಳ ಬೀಡು ಕೂಡ. ಇಲ್ಲಿನ ಪುಷ್ಕರಣಿಗಳಲ್ಲೇ ಅತ್ಯಂತ ವಿಶಾಲ ಮತ್ತು ದೊಡ್ಡದಾದದ್ದು ಸಂತೇಹೊಂಡ. ನಂತರ ದಳವಾಯಿ ಹೊಂಡ, ಆನಂತರದ ಸ್ಥಾನದಲ್ಲಿ ಸಿಹಿ ನೀರು ಹೊಂಡ ನಿಲ್ಲತ್ತದೆ.
ಸಂತೇ ಹೊಂಡ- ಚಿತ್ರದುರ್ಗದ ಅತ್ಯಂತ ದೊಡ್ಡ ಪುಷ್ಕರಣಿ. ನೂರಾರು ಅಡಿಗಳ ಉದ್ದಗಲ, ಅಷ್ಟೇ ಆಳವಾಗಿರುವ ಸಂತೇಹೊಂಡ ಅತ್ಯಂತ ಸುಂದರ ಮತ್ತು ಆಕರ್ಷಕವಾಗಿದೆ. ಬೆಟ್ಟದ ಮೇಲೆ ಸುರಿದ ಮಳೆ ನೀರು ಗೋಪಾಲಸ್ವಾಮಿ ಹೊಂಡ, ಅಕ್ಕ-ತಂಗಿ ಹೊಂಡ, ತಣ್ಣೀರು ದೋಣಿ ಮೂಲಕ ಹಾದು ಸಿಹಿ ನೀರು ಹೊಂಡ ಸೇರಿ ಅಲ್ಲಿಂದ ಸುರಂಗ ಮಾರ್ಗವಾಗಿ ಸಂತೇಹೊಂಡಕ್ಕೆ ಮಳೆ ನೀರು ಸೇರಲಿದೆ.
ದಳವಾಯಿ ಹೊಂಡ- ಕೇವಲ ಮದಕರಿ ನಾಯಕ ವಂಶಸ್ಥರೇ ಹೊಂಡ, ಪುಷ್ಕರಣಿ ನಿರ್ಮಿಸಲಿಲ್ಲ. ಅವರ ಆಳ್ವಿಕೆಯಲ್ಲಿ ದಳವಾಯಿಯಾಗಿದ್ದ ದಳವಾಯಿ ಚುಕ್ಕಣ್ಣನವರೂ ನಗರದ ಹೊರ ವಲಯದ ಕವಾಡಿಗರ ಹಟ್ಟಿಯಲ್ಲಿ ನಿರ್ಮಿಸಿದ್ದಾರೆ. ಚಿತ್ರದುರ್ಗದ ಸುತ್ತ ಮುತ್ತ ಕಂಡ ಬರುವ ಹೊಂಡಗಳಲ್ಲೇ ದಳವಾಯಿ ಚುಕ್ಕಣ್ಣನ ಹೊಂಡ 2ನೇ ಅತಿ ದೊಡ್ಡದು. ಒಂದು ಎಕರೆಗಿಂತ ಹೆಚ್ಚಿನ ವಿಶಾಲ ಪ್ರದೇಶದಲ್ಲಿ ವಿಶೇಷವಾದ ಕಲ್ಲು, ಬಂಡೆಗಳಿಂದ ನಿರ್ಮಾಣವಾಗಿರುವ ಈ ಹೊಂಡಕ್ಕೆ ಏಳು ಬಾಗಿಲು ಇದೆ. ಇಡೀ ಚಿತ್ರದುರ್ಗದಲ್ಲಿ ಕಂಡು ಬರುವ ಯಾವ ನೀರಿನ ಹೊಂಡಕ್ಕೂ ಈ ರೀತಿಯ ಏಳು ಬಾಗಿಲುಗಳಿಲ್ಲ. ನಾಲ್ಕು ದಿಕ್ಕುಗಳಿಂದ ಈ ಹೊಂಡದೊಳಗೆ ಪ್ರವೇಶ ಮಾಡಲು ವಿಶೇಷವಾದ ಮಾರ್ಗಗಳಿವೆ (ಬಾಗಿಲು). ಅಂದು ಇಡೀ ಕವಾಡಿಗರ ಹಟ್ಟಿ ಅಥವಾ ಚೋಳ ಗುಡ್ಡ ಸೇರಿದಂತೆ ಸುತ್ತ ಮುತ್ತಲ ಪ್ರದೇಶಗಳಿಗೆ ಈ ಹೊಂಡದಿಂದ ನೀರುಣಿಸಲಾಗುತ್ತಿತ್ತು. ಜೊತೆಯಲ್ಲಿ ಮಾವಿನ ತೋಪಿಗೂ ಹೊಂಡದ ನೀರು ಬಳಕೆಯಾಗುತ್ತಿತ್ತು.
ಕಾಮನ ಬಾವಿ ಹೊಂಡ-ಕೋಟೆಯ ಮೂರನೆಯ ಸುತ್ತಿನ ಬಾಗಿಲ ಸಮೀಪ ಕಾಮನಬಾವಿ ಹೊಂಡವಿದೆ. ಇತರೆ ಪುಷ್ಕರಣಿಗಳಿಗೆ ನಾಲ್ಕು ಭುಜಗಳಿದ್ದರೆ, ಈ ಪುಷ್ಕರಣಿಗೆ ಅಷ್ಟ ಭುಜಗಳಿವೆ. ನೋಡಲು ಸುಂದರವಾಗಿದ್ದು ಪ್ರವಾಸಿಗರನ್ನು ಸೆಳೆಯುತ್ತಿದೆ.
ಸಿ.ಕೆ ಪುರದ ಚೆನ್ನಕೇಶವಸ್ವಾಮಿ ಪುಷ್ಕರಣಿ-ಚಿತ್ರದುರ್ಗ ಕೆಳಗೋಟೆಯ ಸಿ.ಕೆ.ಪುರ ಬಡಾವಣೆಯಲ್ಲಿ ಇತಿಹಾಸ ಪ್ರಸಿದ್ಧ ಚೆನ್ನಕೇಶವಸ್ವಾಮಿ ದೇವಸ್ಥಾನವಿದೆ. ಆ ದೇವಸ್ಥಾನದ ಹಿಂಭಾಗದಲ್ಲಿ ಚನ್ನಕೇಶವಸ್ವಾಮಿ ಪುಷ್ಕರಣಿ ಇದೆ. ಇದು ನಗರದಲ್ಲಿ ಅಂತರ್ಜಲ ಹೆಚ್ಚಳದ ಪ್ರಮುಖ ಮೂಲವಾಗಿದೆ.
ಕೆಂಚಪ್ಪನ ಹೊಂಡ(ಬಾವಿ)-ನಗರದ ಸ್ಮಶಾನ ಪ್ರದೇಶದಲ್ಲಿ ಕೆಂಚಪ್ಪನ ಹೊಂಡವಿದೆ. ಶವಸಂಸ್ಕಾರದ ನಂತರ ಸಾರ್ವಜನಿಕರು ಈ ಹೊಂಡದಲ್ಲಿನ ನೀರು ಬಳಸುತ್ತಿದ್ದರು. ಕೆಂಚಮಲ್ಲಪ್ಪನ ಹೊಂಡ- ನಗರದ ಎಲ್‌ಐಸಿ ಕಚೇರಿ ಪಕ್ಕದಲ್ಲಿದೆ.
ಚಂದ್ರಮೌಳೇಶ್ವರ(ಹೊಂಡ), ಸರ್ಕಾರಿ ಬಸ್ ನಿಲ್ದಾಣದ ಬಳಿ ಈ ಹೊಂಡವಿದೆ. ಬಸ್ ನಿಲ್ದಾಣದ ಪಕ್ಕದಲ್ಲೇ ಇದ್ದು ದೊಡ್ಡ ಕಸದ ತಿಪ್ಪೆಯಾಗಿ ಮಾರ್ಪಟ್ಟಿದೆ. ಬೆನ್ನತ್ತಿ ಹೊಂಡ, ತುರುವನೂರು ರಸ್ತೆಯ ವೆಂಕಟೇಶ್ವರ ದೇಗುಲದ ಸಮೀಪದ ಹೊಂಡ,ಕಬೀರಾನಂದ ಬಡಾವಣೆಗೆ ಹೊಂದಿಕೊಂಡಿರುವ ದೊಡ್ಡ ಅಗಳು, ಕೆಂಚಪ್ಪನ ಗುಡಿ ಅಗಳು, ಸುಣ್ಣದ ಗುಮ್ಮಿ ಅಗಳು, ಎಲ್‌ಐಸಿ ಕಚೇರಿ ಸಮೀಪದ ಕೆಂಚಪ್ಪನ ಬಾವಿ, ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗದ ಕಲ್ಯಾಣಿ, ಸಂಗಪ್ಪ ಲೇ ಔಟ್‌ನಲ್ಲಿರುವ ಕಲ್ಯಾಣಿ, ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಕ್ಕೆ ಹೊಂದಿಕೊಂಡಿರುವ ಕಲ್ಯಾಣಿ, ಚನ್ನಕ್ಕಿ ಹೊಂಡ, ತುರುವನೂರು ರಸ್ತೆಯ ವೆಂಕಟೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿರುವ ಹೊಂಡ, ಕೋಟೆ ಮೇಲ್ಭಾಗದಲ್ಲಿರುವ ಗೋಪಾಲಸ್ವಾಮಿ, ಅಕ-ತಂಗಿ, ಹೊಂಚಗಳು ಹೀಗೆ ಹಲವಾರು ಹೊಂಡಗಳನ್ನು ಕಾಣಬಹುದಾಗಿದೆ.
ಮದಕರಿ ನಾಯಕರ ಕ್ರಿ.ಶ 1549-1779ರಲ್ಲಿನ ಆಳ್ವಿಕೆಯ ಕಾಲದಲ್ಲಿ, ಬಿಚ್ಚುಗತ್ತಿ ಭರಮಣ್ಣ ನಾಯಕರ ಆಳ್ವಿಕೆಯಲ್ಲಿ ಹಲವಾರು ಹೊಂಡ, ಪುಷ್ಕರಣಿಗಳನ್ನು ನಿರ್ಮಿಸಿ ಬಿದ್ದ ಮಳೆ ನೀರಿನ ಹನಿಯೂ ಪೋಲಾಗದಂತೆ ನೀರಿನ ಮರುಪೂರಣಕ್ಕೆ ಆ ಕಾಲದಲ್ಲಿಯೇ ಅಗತ್ಯ ವೈಜಾnನಿಕ ಕ್ರಮ ಅನುಸರಿಸಲಾಗಿದೆ.
ಮದಕರಿ ನಾಯಕರ ಆಳ್ವಿಕೆ ಕಾಲದಲ್ಲಿ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದಾರೆ. ನಿರ್ಮಾಣದ ಹೊಂಡ, ಪುಷ್ಕರಣಿಗಳ ಮಾಹಿತಿ ಕೆದಕುತ್ತ ಹೋದಲ್ಲಿ, ಒಂದೊಂದೇ ರೋಚಕ ಸಂಗತಿಗಳು ಬೆಳಕಿಗೆ ಬರುತ್ತವೆ. ಬರಪೀಡಿತ ನಾಡಿನಲ್ಲಿ ಜೀವಸೆಲೆ ಕಂಗೊಳಿಸಲು 18ಕ್ಕೂ ಹೆಚ್ಚಿನ ಹೊಂಡ, ಪುಷ್ಕರಣಿಗಳನ್ನು ನಾಯಕರು ನಿರ್ಮಿಸಿದ್ದಾರೆ. ತಂತ್ರಜಾnನ-ಆಧುನಿಕ ತಂತ್ರಜಾnನ ಮೇಳೈಸದ ಆ ದಿನಗಳಲ್ಲಿ, ಪಾರಂಪರಿಕ ಪದ್ಧತಿಯಲ್ಲೇ ಅತ್ಯಂತ ಸರಳ, ಸುಂದರ, ವೈಜಾnನಿಕ ಮಾದರಿಯಲ್ಲಿ ಹೊಂಡಗಳನ್ನು ನಿರ್ಮಿಸಲಾಗಿದೆ. ಒಂದೊಂದು ನೀರು ಸಂಗ್ರಹಗಾರ ಹೊಂಡಗಳೂ ಒಂದೊಂದು ಆಕೃತಿಯಿಂದ ಕೂಡಿವೆ.
ಸೈಜು ಕಲ್ಲುಗಳ ಬಳಕೆ
ಪುಷ್ಕರಣಿಗಳನ್ನು ನಿರ್ಮಿಸಲು ಬಳಸಿರುವ ಉದ್ದನೆಯ, ದೊಡ್ಡ ಗಾತ್ರದ, ಸೈಜು ಕಲ್ಲಿನ ನಾಲ್ಕು ಮುಖಗಳನ್ನೂ ಒಂದೇ ಸಮನಾಗಿರುವಂತೆ ನೋಡಿಕೊಳ್ಳಲಾಗಿದೆ. ಅರ್ಧ ಎಕರೆಗಿಂತ ಹೆಚ್ಚಿನ ಪ್ರದೇಶ ಬಳಸಿಕೊಂಡು ಇಳಿಜಾರು ಮಾದರಿಯಲ್ಲಿ ಕಲ್ಲಿನ ಮೆಟ್ಟಿಲುಗಳನ್ನು ಹಾಕಲಾಗಿದೆ. 10-15 ಮೆಟ್ಟಿಲುಗಳ ನಂತರ ಹಾಸು ಬಂಡೆಗಳನ್ನ ಹಾಕಿ ಮತ್ತಷ್ಟು ಮೆರಗು ನೀಡಲಾಗಿದೆ.
ನಿರ್ಲಕ್ಷ್ಯ- ಅಭಿವೃದ್ಧಿ ಹೆಸರಿನಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ನಡೆದಂತೆ ಹೊಂಡ-ಪುಷ್ಕರಣಿಗಳು ನಿರ್ಲಕ್ಷ್ಯಕ್ಕೆ ತುತ್ತಾಗಿವೆ. ಕಸ, ಕಡ್ಡಿ ಇತರೆ ಘನ ತ್ಯಾಜ್ಯದ ಸಂಗ್ರಹಗಾರ ತೊಟ್ಟಿಗಳಾಗಿ ಪುಷ್ಕರಣಿಗಳು ಮಾರ್ಪಟ್ಟಿದ್ದು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಂಚಿನಲ್ಲಿವೆ. ಕೆಲವೇ ವರ್ಷಗಳಲ್ಲಿ ಅವು ತಮ್ಮ ಇರುವಿಕೆಯ ಗುರುತನ್ನೇ ಕಳೆದುಕೊಂಡು ಇತಿಹಾಸದ ಪುಟಕ್ಕೆ ಸೇರುವ ಸಾಧ್ಯತೆ ನಿಚ್ಚಳವಾಗಿದೆ.
ಎಷ್ಟು ಹೊಂಡಗಳಿವೆ?
ಪುಷ್ಕರಣಿಗಳು- ಕೋಟೆ ಮೇಲ್ಭಾಗದ ಗೋಪಾಲಸ್ವಾಮಿ ಹೊಂಡ, ಅಕ್ಕ-ತಂಗಿ ಹೊಂಡ, ಸಿಹಿ ನೀರು ಹೊಂಡ, ಸಂತೇಹೊಂಡ, ಚನ್ನಕೇಶ್ವರ ಹೊಂಡ ಹೀಗೆ 18ಕ್ಕೂ ಹೆಚ್ಚಿನ ಹೊಂಡಗಳು ನಗರ ಪ್ರದೇಶಗದಲ್ಲೇ ಇವೆ. 50 ರಿಂದ ನೂರಾರು ಮೆಟ್ಟಿಲುಗಳನ್ನು ಹೊಂದಿರುವ ಈ ಪುಷ್ಕರಣಿಗಳಲ್ಲಿ ಸದಾ ನೀರು ತುಂಬಿರುತ್ತದೆ. ಈ ಹಿಂದೆ ಇಡೀ ನಗರಕ್ಕೆ ಈ ಪುಷ್ಕರಣಿಗಳಿಂದಲೇ ನೀರು ಪೂರೈಕೆಯಾಗುತ್ತಿತ್ತು. ಬಹುತೇಕ ಮಂದಿ ಈ ನೀರನ್ನು ಬಳಸುತ್ತಿದ್ದರು. ಆದರೆ ಇಂದು ಕಸದ ಸಂಗ್ರಹ ತೊಟ್ಟಿಯಾಗಿರುವುದರಿಂದ ನೀರು ಬಳಕೆ ಮಾಡುತ್ತಿಲ್ಲ.
ಸುರಂಗ ಮಾರ್ಗ-ಕೋಟೆ ಮೇಲ್ಭಾಗದಲ್ಲಿ ಹಲವು ಜಲ ಸಂಗ್ರಹಣಾ ವ್ಯವಸ್ಥೆಯಿದೆ. ಕೋಟೆ ನೆತ್ತಿಯ ಮೇಲೆ ಬಿದ್ದ ನೀರು ಅಲ್ಲಿನ ಕಲ್ಲು ಬಂಡೆ ಕೊರಕಲು, ಅಗಳು, ಹೊಂಡದಲ್ಲಿ ಸಂಗ್ರಹವಾಗಿ ಇತರೆ ಜಲ ಸಂಗ್ರಹಾರಗಳಿಗೆ ಸುರಂಗ ಮಾರ್ಗದ ಮೂಲಕ ಅಂತರ್ಮುಖೀಯಾಗಿ ಹರಿಯುತ್ತದೆ. ಕೋಟೆ ನೆತ್ತಿಯಿಂದ ಕೆಳಗಿನ ಹಂತದ ಹೊಂಡಗಳಿಗೆ ಬೃಹತ್ ಕಲ್ಲು ಬಂಡೆಗಳಿಂದ ಆವೃತ್ತವಾಗಿ ಸಿಹಿ ನೀರು ಹೊಂಡ, ಸಂತೇಹೊಂಡ, ಕೆರೆ, ಕಟ್ಟೆ ಬಾವಿ, ಕಂದಕಗಳಿಗೆ ನೀರು ಸೇರುತ್ತದೆ.
ನೀರು ಹರಿವಿಗೆ ಮಾಡಲಾದ ಕಾಲುವೆಯಂಥ ಒಳರಚನೆ(ಸುರಂಗ ಮಾರ್ಗ)ಗಳನ್ನೂ ಕಾಣಬಹುದು. ಕೆರೆ, ಕಟ್ಟೆ, ಒಡ್ಡು, ಹೊಂಡ, ಅಗಳುಗಳಿಗೆ ಕೋಟೆಯ ಸುತ್ತಮುತ್ತಲಿನ ಇತರೆ ಗುಡ್ಡ ಬೆಟ್ಟಗಳಿಂದ ಹರಿದು ಬರುವ ನೀರು ಸೇರಿ ಸಮೃದ್ಧ ಜಲಾಗಾರ ನಿರ್ಮಾಣ ಮಾಡಲಾಗಿದೆ. ನೀರು ಹರಿಯುವ ಅಂತರ್ಮುಖೀ ಕಾಲುವೆಗೆ (ಕಂದಕ)ಕಲ್ಲು, ಕಸ, ಕಡ್ಡಿ, ಘನ ತ್ಯಾಜ್ಯ ಸೇರದಂತೆ, ಕೊಳಚೆ ನೀರು ಒಳ ಸೇರಿದಂತೆ ನೀರು ಮಲಿನಗೊಳ್ಳದಂತೆ ಭೂಮಿಯೊಳಗೆ ವಿನ್ಯಾಸ ಮಾಡಿ ಕಾಲುವೆ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಗಂಡು ಮೆಟ್ಟಿದ ಕೋಟೆ ನಾಡು ಚಿತ್ರದುರ್ಗ ನಗರದಲ್ಲಿ ಜಲಕ್ಷಾಮದಿಂದ ನಲುಗದಂತೆ, ನೀರಿನ ಬವಣೆ ನೀಗಿಸುವ ಕಾರ್ಯ ಮಾಡಲಾಗಿದೆ.
ಜಲ ವಿನ್ಯಾಸ ರಚನೆ
ಹೊಂಡದಿಂದ ಹೊಂಡಕ್ಕೆ, ಅಗಳಿನಿಂದ ಅಗಳಿಗೆ, ಒಡ್ಡಿನಿಂದ ಒಡ್ಡಿಗೆ ಏಕೆ ಇಡೀ ಕೋಟೆ, ಕೊತ್ತಲುಗಳಲ್ಲಿನ ಹೊಂಡಗಳ ನೀರು ಹರಿಯುವ ಲಿಂಕ್ ಕೊಂಡಿಗಳನ್ನು ಊಹೆಗೂ ನಿಲುಕದಂತೆ ರಚನೆ ಮಾಡಲಾಗಿದೆ.
ವೈಜಾnನಿಕ ತಂತ್ರಜ್ಞರು ಇಲ್ಲದ ಕಾಲದಲ್ಲಿ ತಂತ್ರಜಾnನ ಬಳಸದೆ ಪಾರಂಪರಿಕ ವಿಧಾನದಲ್ಲಿ ಅಂತರ್ಜಲ ಮಟ್ಟಕ್ಕೆ ಯಾವುದೇ ತೊಂದರೆಯಾಗದಂತೆ ವಿಶ್ವದ ಯಾವುದೇ ಜಲ ವಿನ್ಯಾಸಗಾರನ ಕಲ್ಪನೆಗೂ ಮೀರಿದಂತೆ ಮೇಲ್ಮೆ ಜಲ ಸಂಪನ್ಮೂಲ ಹಾಗೂ ಅಂತರ್ಜಲ ಸಂಪನ್ಮೂಲದ ಸಮರ್ಪಕ ಬಳಕೆ ಮತ್ತು ಮಾರ್ಗೊ³ಪಾಯಗಳನ್ನು ಮಾಡಿರುವುದು ಹಲವು ಸಂಶೋಧನೆಗೆ ಎಡೆ ಮಾಡಿಕೊಟ್ಟಿವೆ. ಹೊಂಡದ ಸಮೀಪ ಕಡ್ಡಾಯವಾಗಿ ಕಾವಲುಗಾರರ ನೇಮಕ ಮಾಡಿ ಕಸ, ಕಡ್ಡಿ, ಇತರೆ ಘನ ತ್ಯಾಜ್ಯ ಹಾಕದಂತೆ ಕ್ರಮ ಜರುಗಿಸಬೇಕು. ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆಗೊಳಿಸುವ ಅನುದಾನವನ್ನು ಈ ರೀತಿಯ ವಿನೂತನ ಕಾರ್ಯಕ್ಕೆ ಸದ್ಬಳಕೆ ಮಾಡಿಕೊಂಡು ಐತಿಹಾಸಿಕ ಸ್ಥಳಗಳನ್ನು ಸಂರಕ್ಷಿ$ಸಿಕೊಳ್ಳಬೇಕಾಗಿದೆ ಎನ್ನುತ್ತಾರೆ ಖ್ಯಾತ ಸಂಶೋಧಕ ಡಾ|ಬಿ.ರಾಜಶೇಖರಪ್ಪ.
ತಂಪನೆ ಕೊಳ
ಕೋಟೆಗೆ ಹೋಗುವ ದಾರಿಯಲ್ಲೇ ನೇರವಾಗಿ ಕಂದಕದ ದಾರಿ ಹಿಡಿದು ಸಾಗಿದರೆ, ಶ್ರೀ ರಾಮದೇವರ ಬಡ್ಡಿಗೆ ಹೋಗುವ ಮಾರ್ಗದಲ್ಲಿ, ಕರಿವರ್ತಿ ಈಶ್ವರ ದೇವಾಲಯವಿದೆ. ಈ ದೇವಾಲಯಕ್ಕೆ ಹೊಂದಿದಂತೆ ಒಂದು ಸುಂದರ ಪುಷ್ಕರಣಿ(ಕೊಳ)ಇದೆ. ಬಸವನ ಬಾಯಿಯಿಂದ ಜಲ ಒಸರುತ್ತದೆ. ಪುಷ್ಕರಣಿಯನ್ನು ಹಾಸುಗಲ್ಲುಗಳಿಂದ ಕಟ್ಟಲಾಗಿದೆ. ವಿಶೇಷವೆಂದರೆ, ಕಲ್ಯಾಣಿಯ ನಡುವೆ ಕಲ್ಲಿನ ಮಂಚದ ರಚನೆ ಇದೆ. ಬೇಸಿಗೆ ಕಾಲದಲ್ಲಿ ಪಾಳೆಯಗಾರರು ತಂಪನೆ ಕೊಳದ ಮಂಚದ ಮೇಲೆ ಮಲಗಿ ಸೆಖೆ ನಿವಾರಿಸಿಕೊಂಡು, ಶಿವಲಿಂಗ ದರ್ಶನಮಾಡಿಕೊಂಡು ಗುಪ್ತ ಮಾರ್ಗದಿಂದ ಅರಮನೆಗೆ ಹೋಗುತ್ತಿದ್ದರು ಎನ್ನಲಾಗುತ್ತಿದೆ.
ಹರಿಯಬ್ಬೆ ಹೆಂಜಾರಪ್ಪ
ಕೋಟೆಯ ನಾಡು
ಗುಮ್ಮಟ ನಗರಿ, ಸ್ಮಾರಕಗಳ ನಗರಿ ಎಂತಲೇ ಪ್ರಖ್ಯಾತಿ ಪಡೆದ ವಿಜಯಪುರದ ಇತಿಹಾಸದಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದವರು ಬಹುಮನಿ ಸುಲ್ತಾನರು. ಬಹುಮನಿ ಸಾಮ್ರಾಜ್ಯದಿಂದ ವಿಭಜನೆಯಾಗಿ ಹೊರಬಂದ 5 ರಾಜ್ಯಗಳಲ್ಲಿ ಆದಿಲ್ ಶಾ ರಾಜ್ಯವೂ ಒಂದು. ಮರಾಠರು, ವಿಜಯನಗರ ಸಾಮ್ರಾಜ್ಯ, ಮೊಗಲರು ಸೇರಿದಂತೆ ಹಲವಾರು ಶತೃ ರಾಜ್ಯಗಳಿಂದ ಸುತ್ತುವರಿದಿದ್ದ ಕಾರಣ ಮತ್ತು ನಿರಂತರ ದಾಳಿಗಳಿಂದ ತಮ್ಮ ರಾಜ್ಯವನ್ನು ರಕ್ಷಿಸಿಕೊಳ್ಳಲು ಆದಿಲ್ ಶಾ ದೊರೆಗಳು ವಿಜಯಪುರದಲ್ಲಿ ಬಲಿಷ್ಠ ಕೋಟೆಯನ್ನು ಕಟ್ಟಿದ್ದಾರೆ.
ಈ ಕೋಟೆಯು ದೀರ್ಘವೃತ್ತಾಕಾರವಾಗಿದ್ದು, ಸುತ್ತಳತೆಯು 10 ಕಿ.ಮೀ. ಉದ್ದವಿದೆ. ಕೋಟೆಯ ಪೂರ್ವ ವåತ್ತು ಪಶ್ಚಿಮ ದಿಕ್ಕುಗಳಲ್ಲಿರುವ ಗೋಡೆಗಳ ನಡುವಿನ ದೂರವೇ ಸರಿಸುಮಾರು 4 ಕಿ.ಮೀ. ಇದೆ. ಅಂದರೆ ಕೋಟೆ ಎಷ್ಟು ವಿಶಾಲವಾಗಿದೆ ಎಂದು ಊಹಿಸಬಹುದು. ಕೋಟೆಯ ಗೋಡೆಗಳು ಸುಮಾರು 50 ಅಡಿಯಷ್ಟು ಎತ್ತರವಾಗಿದ್ದು, ಇವುಗಳ ದಪ್ಪ ಸುಮಾರು 25 ಅಡಿಗಳಷ್ಟಿದೆ. ಇದರ ಗೋಡೆಗಳ ಬೃಹತ್ ಕಲ್ಲುಗಳನ್ನು ಚಪ್ಪಟೆಯಾಗಿ ಕತ್ತರಿಸಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಈ ಕೋಟೆಯನ್ನು ಸುಮಾರು 96 ಬ್ಯಾಸ್ಟಿಯನ್ (ಒರಗುಗಂಬ)ಗಳಿಂದ ಬಲಪಡಿಸಲಾಗಿದೆ. ಕೋಟೆಯ ಹೊರಭಾಗದ ಸುತ್ತಲೂ ಸುಮಾರು 40 ರಿಂದ 50 ಅಡಿ ಆಳವಾದ, ಅಗಲವಾದ ಕಂದಕ ವಿದೆ. ಇಲ್ಲಿಗೆ ಅಂದು ಕೋಟೆ ಕೆರೆಯಿಂದ ನೀರು ಹಾಯಿಸಲಾಗುತ್ತಿತ್ತಂತೆ. ಹಿಂದೆ ವಿಜಯಪುರ ನಗರವೆಂದರೆ ಈ ಕೋಟೆಯ ಒಳಗಡೆ ಇದ್ದ ಊರೇ ಆಗಿತ್ತು. ಈ ಕೋಟೆಯೊಳಗಡೆ ವಿಶ್ವವಿಖ್ಯಾತ ಗೋಳ ಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್, ಜುಮ್ಮಾ ಮಸೀದಿ,ಜೋಡ್ ಗುಮ್ಮಟ,ಗಗನ್ ಮಹಲ್, ಮೆಹ¤ರ್ ಮಹಲ್, ಸುಲ್ತಾನರು ಕಟ್ಟಿಸಿದ ಕೆರೆಗಳು ಸೇರಿದಂತೆ ಹಲವಾರು ನಯನ ಮನೋಹರ ವಾಸ್ತುಶಿಲ್ಪ ನಿದರ್ಶನಗಳಿವೆ.
ವಿನಾಶದ ಅಂಚಿನಲ್ಲಿ ವಿಜಯಪುರ ಕೋಟೆಗಳು
ಐತಿಹಾಸಿಕ ಮಹತ್ವವುಳ್ಳ ವಿಜಯಪುರದ ಕೋಟೆಗಳು ಇನ್ನು ಕೆಲವೇ ವರ್ಷಗಳಲ್ಲಿ ಕಣ್ಮರೆಯಾದರೆ ಅಚ್ಚರಿಪಡಬೇಕಿಲ್ಲ.ಒಂದಾನೊಂದು ಕಾಲದಲ್ಲಿ ಶತೃಗಳಿಂದ ರಾಜ್ಯರಕ್ಷಣೆ ಮಾಡಿದ್ದ 500 ವರ್ಷಗಳ ಇತಿಹಾಸ ಹೊಂದಿರುವ ಕೋಟೆಗಳು, ಇಂದು ರಕ್ಷಕರಿಲ್ಲದೇ ಧರೆಗುರುಳುತ್ತಿವೆ. ಸ್ಥಳೀಯರು ಹಾಗೂ ಸರಕಾರದ ನಿರ್ಲಕ್ಷ್ಯದಿಂದಾಗಿ ಶಾಶ್ವತವಾಗಿ ಇತಿಹಾಸದ ಪುಟಸೇರುವ ಭೀತಿಯಲ್ಲಿವೆ. ಕೋಟೆಯ ಗೋಡೆಗಳ ಬಹುತೇಕ ಭಾಗ ನೆಲಸಮಗೊಂಡಿದೆ. ಕೋಟೆಯ ಮೇಲ್ಭಾಗದ ದಪ್ಪವಾದ ಗೋಡೆಯ ಭಾಗಗಳು ಉರುಳಿ ಬಿದ್ದಿವೆ. ಕೋಟೆಯ ಸುತ್ತಮುತ್ತಲಿನ ವಾತಾವರಣ ಬಯಲು ಶೌಚದ ತಾಣವಾಗಿದೆ. ಅಲ್ಲಲ್ಲಿ ಕೋಟೆಯ ಮೇಲೆ ಮಸೀದಿ, ದೇವಸ್ಥಾನ ಸೇರಿದಂತೆ ಹಲವಾರು ಆಧುನಿಕ ಕಟ್ಟಡಗಳು ತಲೆ ಎತ್ತಿದ್ದು ನಿಧಾನವಾಗಿ ಕೋಟೆಗಳ ಒತ್ತುವರಿಯೂ ನಡೆದಿದೆ. ಅಲ್ಲಲ್ಲಿ ಸ್ಥಳೀಯರು ಕೋಟೆ ಗೋಡೆಗಳನ್ನು ಸಗಣಿ ಭರಣಿ ತಟ್ಟುವುದಕ್ಕೇ ಬಳಸುತ್ತಿದ್ದರೂ ಯಾರು ಇದನ್ನು ಕೇಳುತ್ತಿಲ್ಲ.
ಕೋಟೆಯ ಮೇಲ್ಭಾಗ ಮತ್ತು ಸುತ್ತಮುತ್ತ ಜಾಲಿಗಿಡ, ಬಳ್ಳಿಗಳು ಬೆಳೆದು ಕೋಟೆಯನ್ನು ಮರೆಮಾಚಿವೆ.ಕೋಟೆಯ ಒಳಸುತ್ತುಗಳಲ್ಲಿ ಮೆಟ್ಟಿಲುಗಳೆಲ್ಲ ಕುಸಿದಿವೆ. ಅವುಗಳು ಈಗ ಹಂದಿ, ಬೀಡಾಡಿ ದನಗಳ ತಾಣವಾಗಿಬಿಟ್ಟಿವೆ. ಕೋಟೆಯ ಹೊರಭಾಗದ ಕಂದಕಗಳು ಅಕ್ಷರಶಃ ಚರಂಡಿಗಳಾಗಿ ಮಾರ್ಪಟ್ಟಿವೆ. ಕೋಟೆಯ ಕೆಲವು ಭಾಗಗಳು ಕೃತಕ ತ್ಯಾಜ್ಯ ಘಟಕಗಳಾಗಿವೆ. ಪ್ರತಿ ಸಲ ಜೋರಾದ ಮಳೆ ಬಂದಾಗಲೆಲ್ಲಾ ಕೋಟೆಯ ಭಾಗಗಳು ದಿನದಿಂದ ದಿನಕ್ಕೆ ಕುಸಿಯುತ್ತಲೇ ಇವೆ.ಇನ್ನೂ ಭಾರತೀಯ ಪುರಾತತ್ವ ಸಂರಕ್ಷಣಾ ಪ್ರಾಧಿಕಾರವು ಕೋಟೆಯ ಸುತ್ತಮುತ್ತ ಸಂರಕ್ಷಿ$ತ ಸ್ಮಾರಕ ಹಾಗೂ ಸ್ಮಾರಕಗಳನ್ನು ನಾಶಪಡಿಸಿದವರಿಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಫಲಕಗಳನ್ನು ಹಾಕಿ ಕೈತೊಳೆದುಕೊಂಡಿದೆ. ಹಾಸ್ಯಾಸ್ಪದ ವಿಷಯವೆಂದರೆ, ಈ ಫಲಕಗಳ ಸುತ್ತಮುತ್ತಲೂ ಸಹ ಜಾಲಿಗಿಡ, ಬಳ್ಳಿಗಳು ಬೆಳೆದು ಇವುಗಳನ್ನು ಮರೆಮಾಚಿಬಿಟ್ಟಿವೆ. ಸ್ವತಃ ಫಲಕಗಳಿಗೆ ತಮ್ಮನ್ನು ತಾವು ರಕ್ಷಿ$ಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ದುರ್ದೈವದ ಸಂಗತಿ.
ಐದು ಪ್ರವೇಶ ದ್ವಾರ
ವಿಜಯಪುರ ಕೋಟೆಯು 5 ಪ್ರವೇಶದ್ವಾರಗಳಿಂದ ಕೂಡಿದೆ. ಉತ್ತರದಲ್ಲಿ ಬಹಮನಿ ದರ್ವಾಜಾ, ವಾಯುವ್ಯದಲ್ಲಿ ಶಹಾಪುರ ದರ್ವಾಜಾ, ದಕ್ಷಿಣದಲ್ಲಿ ಮನಗೂಳಿ ದರ್ವಾಜಾ, ಪೂರ್ವದಲ್ಲಿ ಅಲ್ಲಾಪೂರ ದರ್ವಾಜಾ ಮತ್ತು ಪಶ್ಚಿಮದಲ್ಲಿ ಮೆಕ್ಕಾ ದರ್ವಾಜಾ. ದರ್ವಾಜಾ ಎಂದರೆ ಪ್ರವೇಶದ್ವಾರ ಎಂದರ್ಥ.ಪ್ರತಿಯೊಂದು ದ್ವಾರದ ಅಕ್ಕಪಕ್ಕದಲ್ಲಿ ಎರಡು ಬುರುಜ್‌ಗಳನ್ನು ನಿರ್ಮಿಸಲಾಗಿದೆ. ಇವುಗಳಲ್ಲಿ ದಕ್ಷಿಣದ ಮನಗೂಳಿ ದರ್ವಾಜಾ ಅತ್ಯಂತ ಬಲಿಷ್ಠವಾಗಿತ್ತು ಎನ್ನುತ್ತದೆ ಇತಿಹಾಸ. ಇದಕ್ಕೆ ಅತ್ಯಂತ ಬಲಿಷ್ಠವಾದ ಬಾಗಿಲು ಇತ್ತು. ಒಂದು ಅಡಿಯಷ್ಟು ಚೂಪಾದ ಮೊಳೆಗಳು ಈ ಬಾಗಿಲಿನಿಂದ ಹೊರಬರುತ್ತಿದ್ದವು. ಮೊಗಲ ದೊರೆ ಔರಂಗಜೇಬ ಕೂಡಾ ಈ ದ್ವಾರವನ್ನು ಪ್ರವೇಶಿಸಲು ಸಾಧ್ಯವಾಗದೇ ಕೋಟೆಯ ಗೋಡೆಯನ್ನು ಒಡೆದು ಬೇರೆ ದ್ವಾರಗಳಿಂದ ಒಳಕ್ಕೆ ನುಗ್ಗಿ, ಕೋಟೆಯಲ್ಲಿ ಒಳಗಿನಿಂದ ಈ ಬಾಗಿಲನ್ನು ತೆರೆಸಿದ ನಂತರವೇ ಅವನು ಒಳಗೆ ಹೋಗಿದ್ದನಂತೆ. ಈ ಪ್ರವೇಶದ್ವಾರಕ್ಕೇ ಫತೆ ದರ್ವಾಜಾ ಎಂದು ಹೆಸರಿಟ್ಟನಂತೆ. ಕೋಟೆಯ ಒಳಗಡೆ ಇನ್ನೊಂದು ಸುತ್ತಿನ ಕೋಟೆ ಇದೆ.ಈ ಕೋಟೆಯಲ್ಲಿ ಅರಮನೆ ಪ್ರಮೇಯವಿದೆ. ಇದನ್ನು ಅರಕಿಲ್ಲ ಎನ್ನುತ್ತಾರೆ. ಇಲ್ಲಿ ಸುಲ್ತಾನರ ರಾಜಪರಿವಾರದವರು ಮಾತ್ರ ವಾಸಿಸುತ್ತಿದ್ದರು.
ಹನಮಂತ ಕೊಪ್ಪದ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.