” ನಾವು ಗೆದ್ದೇ ಗೆಲ್ಲುವೆವು’
ಬೆಂಗಳೂರು ಬುಲ್ಸ್ ನಾಯಕ ರೋಹಿತ್ ವಿಶ್ವಾಸ
Team Udayavani, Aug 17, 2019, 5:00 AM IST
ಪ್ರೊ ಕಬಡ್ಡಿ ಏಳನೇ ಆವೃತ್ತಿ ಅದ್ಧೂರಿ ಯಶಸ್ಸು ಕಾಣುತ್ತಿದೆ. ಪ್ರತಿ ತಂಡಗಳೂ ಒಬ್ಬರಿಗಿಂತ ಒಬ್ಬರು ಮಿಗಿಲಾದ ಪ್ರದರ್ಶನ ನೀಡುತ್ತಿವೆ. ಒಟ್ಟು 12 ತಂಡಗಳ ಹಣಾಹಣಿ ರೋಚಕತೆಯ ತುತ್ತ ತುದಿಗೆ ತಲುಪಿದೆ. ಅಭಿಮಾನಿಗಳಿಗಂತೂ ಫುಲ್ ಖುಷಿಯಾಗಿದ್ದಾರೆ. ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ಈ ಸಲವೂ ಪ್ರಚಂಡ ಪ್ರದರ್ಶನ ನೀಡುತ್ತಿದ್ದು ಕಪ್ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಪ್ರಸಕ್ತ ಕೂಟದಲ್ಲಿ ಬೆಂಗಳೂರು ಬುಲ್ಸ್ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಇದೇ ಖುಷಿಯಲ್ಲಿ ತಂಡದ ನಾಯಕ ರೋಹಿತ್ ಕುಮಾರ್ ಉದಯವಾಣಿ ಜತೆಗೆ ಮಾತನಾಡಿದ್ದಾರೆ. ಒಟ್ಟಾರೆ ಸವಾಲುಗಳು, ತಂಡದ ಪ್ರದರ್ಶನ, ಒತ್ತಡ, ಕೋಚಿಂಗ್, ಶಕ್ತಿ ಸಾಮರ್ಥ್ಯದ ಬಗ್ಗೆ ರೋಹಿತ್ ಪೂರ್ಣ ಮನಸ್ಸಿನಿಂದ ಸಂದರ್ಶನ ನೀಡಿದ್ದಾರೆ. ಸಂದರ್ಶನದ ಪೂರ್ಣ ವಿವರ ಇಲ್ಲಿದೆ ನೋಡಿ.
*ಹಾಲಿ ಚಾಂಪಿಯನ್ ಬೆಂಗಳೂರು ತಂಡ ಈ ಸಲವೂ ಕಪ್ ಗೆಲ್ಲುವ ವಿಶ್ವಾಸ ಇದೆಯಾ?
ಖಂಡಿತಾ ಇದೆ…ನಮ್ಮ ತಂಡ ತಾರಾ ಆಟಗಾರರನ್ನು ಒಳಗೊಂಡಿದೆ. ಸಂಘಟಿತ ಪ್ರದರ್ಶನ ನಮ್ಮ ಯಶಸ್ಸಿನ ಗುಟ್ಟು. ಈ ಸಲವೂ ಶ್ರೇಷ್ಠ ಆಟ ಸಂಘಟಿಸುವುದರೊಂದಿಗೆ ಕಪ್ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗಿದೆ.
*ಉಳಿದಿರುವ ಪಂದ್ಯಗಳಲ್ಲಿ ನೀವು ತಂಡದಿಂದ ಯಾವ ರೀತಿಯ ಪ್ರದರ್ಶನ ನಿರೀಕ್ಷಿಸುತ್ತೀರಿ?
ನಾವು ಹಾಲಿ ಚಾಂಪಿಯನ್ಸ್. ಖ್ಯಾತಿಗೆ ತಕ್ಕಂತೆ ಆಡುತ್ತೇವೆ. ಯಾವುದೇ ಪಂದ್ಯವನ್ನೂ ಲಘುವಾಗಿ ಪರಿಗಣಿಸಬಾರದು ಎಂದು ಸಹ ಆಟಗಾರರಿಗೆ ಸೂಚಿಸಿದ್ದೇನೆ, ಪ್ರತಿ ಪಂದ್ಯವೂ ಮಾಡು ಇಲ್ಲವೆ ಮಡಿ ಪಂದ್ಯ ಎಂದು ಅಂದುಕೊಂಡರೆ ನಮಗೆ ಯಾವುದೂ ಕಷ್ಟವಾಗಲಾರದು. ನನ್ನ ತಂಡ ಹಾಗೂ ಆಟಗಾರರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ.
*ತಾರಾ ಆಟಗಾರ ಪವನ್ ಸೆಹ್ರಾವತ್ ಪ್ರದರ್ಶನ ಬಗ್ಗೆ ಏನನ್ನಿಸುತ್ತಿದೆ?
ನಮ್ಮ ತಂಡದ ಬಲವೇ ಪವನ್ ಸೆಹ್ರಾವತ್. ಪ್ರತಿಭಾವಂತ ಕಬಡ್ಡಿ ಪಟು. ಅವರು ನಮ್ಮ ತಂಡದಲ್ಲಿರುವುದು ನಮ್ಮ ಪುಣ್ಯವೇ ಸರಿ. ಅವರೊಬ್ಬ ಶ್ರೇಷ್ಠ ರೈಡರ್ ಎನ್ನುವುದು ಎಲ್ಲರಿಗೂ ಗೊತ್ತು. ಈಗ ರಕ್ಷಣಾ ಆಟಗಾರನಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಆಲ್‌ರೌಂಡರ್ ಆಟದಲ್ಲಿ ಯಶಸ್ಸನ್ನೂ ಸಾಧಿಸಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ಇವರು ಉತ್ತಮ ಪ್ರದರ್ಶನ ನೀಡುತ್ತಿರುವುದು ನಮ್ಮ ಒತ್ತಡವನ್ನು ಕಡಿಮೆ ಮಾಡಿದೆ.
*ಬೆಂಗಳೂರು ಬುಲ್ಸ್‌ಗೆ ಕೋಚಿಂಗ್ ಯಾವ ರೀತಿಯಲ್ಲಿ ನೆರವಾಗಿದೆ?
ಕೋಚ್ ರಣಧೀರ್ ಸಿಂಗ್ ತಂಡಕ್ಕೆ ಸೂಕ್ತ ಸಂದರ್ಭದಲ್ಲಿ ನೆರವಾಗಿದ್ದಾರೆ. ಸಂಕಷ್ಟದಲ್ಲಿ ತಂಡವನ್ನು ಪಾರು ಮಾಡಿದ್ದಾರೆ. ಅಲ್ಲದೆ ವೈಯಕ್ತಿಕವಾಗಿ ಪ್ರತಿಯೊಬ್ಬ ಆಟಗಾರನಿಗೂ ತಾಳ್ಮೆಯಿಂದ ಕಬಡ್ಡಿ ಕೌಶಲ್ಯವನ್ನು ಹೇಳಿಕೊಡುತ್ತಾರೆ. ಇದರಿಂದ ಎದುರಾಳಿ ತಂಡದ ಬಲ ಹಾಗೂ ದೌರ್ಬಲ್ಯವನ್ನು ಅರಿತು ಯೋಜನೆ ರೂಪಿಸುಕೊಳ್ಳಲು ಸಹಾಯವಾಗುತ್ತಿದೆ.
*ಒಟ್ಟಾರೆ ಪ್ರೊ ಕಬಡ್ಡಿಯಲ್ಲಿ ನೀವು 600 ಅಂಕವನ್ನು ಪಡೆದುಕೊಂಡಿದ್ದೀರಿ. ನಿಮ್ಮ ಈ ಸಾಧನೆ ಬಗ್ಗೆ ಹೇಳಿ?
ನನ್ನ ಜೀವನದಲ್ಲಿ ಇದೊಂದು ಅವಿಸ್ಮರಣೀಯ ಎಂದರೆ ತಪ್ಪಾಗಲಾರದು. ಆದರೆ ಈ ಸಾಧನೆಯನ್ನು ಇನ್ನೂ ಮೊದಲೇ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ನನಗೆ ಅನಿಸುತ್ತಿದೆ. ಏನೇ ಆದರೂ ಮುಂದೆ ಇದೇ ಪ್ರದರ್ಶನವನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ. ಫಿಟೆ°ಸ್ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದು ಪ್ರದರ್ಶವನ್ನು ಮತ್ತಷ್ಟು ಹರಿತ ಮಾಡಿಕೊಳ್ಳಲು ಕಸರತ್ತು ನಡೆಸುತ್ತಿರುವೆ.
* ಮುಂಬರುವ ಬೆಂಗಳೂರು ಚರಣದ ಬಗ್ಗೆ ತಿಳಿಸಿ?
ತವರಿನ ಅಂಗಳದಲ್ಲಿ ಎರಡು ವರ್ಷದ ಬಳಿಕ ಆಡುತ್ತಿದ್ದೇವೆ. ಇದು ನನಗೆ ಮಾತ್ರವಲ್ಲ ಒಟ್ಟಾರೆ ನಮ್ಮ ತಂಡಕ್ಕೆ ಖುಷಿಯ ಸಂಗತಿ. ತವರು ನೆಲದ ಅಭಿಮಾನಿಗಳ ಬೆಂಬಲದಲ್ಲಿ ಆಡುವುದೇ ಒಂದು ದೊಡ್ಡ ಆನಂದ. ಬೆಂಗಳೂರಲ್ಲಿ ಮೂರು ಅಥವಾ ನಾಲ್ಕು ಪಂದ್ಯ ಗೆಲ್ಲುವುದು ನಮ್ಮ ಗುರಿ. ಇದರಿಂದ ನಮ್ಮ ಆತ್ಮವಿಶ್ವಾಸ ಹೆಚ್ಚಾಗಬಹುದು.
* ರೈಡರ್‌ಗಳನ್ನು ಹೊರತುಪಡಿಸಿದಂತೆ ತಂಡದ ರಕ್ಷಣಾ ವಿಭಾಗದಲ್ಲಿರುವ ನಿಮ್ಮ ನಂಬಿಕೆಯ ಆಟಗಾರ ಯಾರು?
ಯುವ ಆಟಗಾರ ಅಮನ್ ನಂಬಿಕೆಯ ರಕ್ಷಣಾ ಆಟಗಾರ. ಅವರಲ್ಲಿ ಅತ್ಯುತ್ತಮ ಟ್ಯಾಕಲ್ ಮಾಡುವ ಗುಣವಿದೆ. ಅವರು ಆಡಿರುವ ಹಿಂದಿನ ಪಂದ್ಯಗಳಲ್ಲಿ ಎಲ್ಲವನ್ನು ಸಾಬೀತುಪಡಿಸಿದ್ದಾರೆ. ಅವರಿಗೆ ಒಳ್ಳೆಯ ಭವಿಷ್ಯವಿದೆ.
* ಯಾವ ತಂಡ ಬೆಂಗಳೂರಿಗೆ ಹೆಚ್ಚು ಅಪಾಯಕಾರಿ?
ಎಲ್ಲ ತಂಡಗಳು ಕೂಡ ಬಲಿಷ್ಠವಾಗಿದೆ. ಅವರು ದುರ್ಬಲ ಇವರು ಬಲಿಷ್ಠ ಎನ್ನುವ ಯಾವುದೇ ಯೋಚನೆಗಳಿಲ್ಲ. ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ. ಪ್ರತಿ ತಂಡವೂ ಬಲಿಷ್ಠ ಎಂದೇ ಅಂದುಕೊಂಡು ನಾವು ಆಡಬೇಕಿದೆ. ದುರ್ಬಲ ಎಂದು ಆಡಿದರೆ ನಾವು ಪಂದ್ಯ ಕಳೆದುಕೊಳ್ಳಬೇಕಾಗಿ ಬರಬಹುದು. ಹೀಗಾಗಿ ಈ ವಿಚಾರದಲ್ಲಿ ನಾವು ಹೆಚ್ಚು ಎಚ್ಚರಿಕೆಯಿಂದ ಇದ್ದೇವೆ.
* ಏಳನೇ ಆವೃತ್ತಿ ಕೂಟದಲ್ಲಿ ನಿಮ್ಮ ನೆಚ್ಚಿನ ಯುವ ಆಟಗಾರ ಯಾರು?
ಯುಪಿ ಯೋಧಾ ತಂಡದ ಲೆಫ್ಟ್ ಕಾರ್ನರ್ ಸುಮಿತ್ ನನ್ನ ನೆಚ್ಚಿನ ಯುವ ಆಟಗಾರ. ನನ್ನ ಪ್ರಕಾರವಾಗಿ ಅವರು ಉಳಿದೆಲ್ಲ ಆಟಗಾರರಿಗಿಂತ ಹೆಚ್ಚು ಲೆಕ್ಕಾಚಾರವಾಗಿ ಆಡುತ್ತಾರೆ. ಇದೇ ಪ್ರದರ್ಶನವನ್ನು ಅವರು ಕಾಯ್ದುಕೊಂಡು ಮುಂದುವರಿದರೆ ಮುಂದೊಂದು ದಿನ ಕಬಡ್ಡಿಯಲ್ಲಿ ಖ್ಯಾತನಾಮ ಆಟಗಾರನಾಗಿ ಗುರುತಿಸಿಕೊಳ್ಳುವ ಎಲ್ಲ ಅರ್ಹತೆಗಳೂ ಅವರಲ್ಲಿದೆ.
ರೋಹಿತ್ ಸಾಧನೆ
ರೋಹಿತ್ ಕುಮಾರ್ ವೃತ್ತಿ ಪರ ಕಬಡ್ಡಿ ತಾರೆ. 2016ರಲ್ಲಿ ಏಷ್ಯನ್ ಕಬಡ್ಡಿ ಚಾಂಪಿಯನ್ ಆಗಿದ್ದ ಭಾರತ ತಂಡದಲ್ಲಿ ಇವರೂ ಕೂಡ ಸದಸ್ಯರಾಗಿದ್ದರು. 2018ರಲ್ಲಿ ದುಬೈ ಮಾಸ್ಟರ್ ಲೀಗ್‌ನಲ್ಲಿ ಪಾಲ್ಗೊಂಡಿದ್ದರು. ಪ್ರೊ ಕಬಡ್ಡಿ ಇವರಿಗೆ ಭಾರೀ ಜನಪ್ರಿಯತೆಯನ್ನೂ ತಂದುಕೊಟ್ಟಿತ್ತು. ಮೂರನೇ ಆವೃತ್ತಿಯಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು ಸೇರಿಕೊಂಡ ರೋಹಿತ್ ಕುಮಾರ್ ಓರ್ವ ಸಮರ್ಥ ರೈಡರ್ ಆಗಿ ಗುರುತಿಸಿಕೊಂಡರು. ಆಡಿದ ಮೊದಲ ಪಂದ್ಯದಲ್ಲೇ ಶ್ರೇಷ್ಠ ರೈಡರ್ ಪ್ರಶಸ್ತಿಯನ್ನು ರೋಹಿತ್ ಕುಮಾರ್ ಪಡೆದುಕೊಂಡರು. ಆನಂತರ ಇವರನ್ನು ಬೆಂಗಳೂರು ಬುಲ್ಸ್ ತಂಡ 81 ಲಕ್ಷ ರೂ.ಗೆ ಖರೀದಿಸಿತು. ಅಲ್ಲಿಂದ ಇಲ್ಲಿ ತನಕ ಬುಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ರೋಹಿತ್.
ಮತ್ತೆ ಟ್ರೋಫಿ ಗೆಲ್ಲುವ ಕನಸು
ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಆರಂಭವಾಗಿ ಐದು ಆವೃತ್ತಿಗಳಾಗಿದ್ದರೂ ಒಂದು ಸಲವೂ ಕಪ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಮೊದಲ ಆವೃತ್ತಿಯಲ್ಲಿ ನಾಲ್ಕನೇ ಸ್ಥಾನ, ಎರಡನೇ ಆವೃತ್ತಿಯಲ್ಲಿ ಮಿಂಚಿನ ಹೋರಾಟದ ಹೊರತಾಗಿಯೂ ರನ್ನರ್‌ಅಪ್ ಆಗಿತ್ತು ಬೆಂಗಳೂರು ಬುಲ್ಸ್ . ಮೂರನೇ ಆವೃತ್ತಿಯಲ್ಲಿ ಭಾರೀ ಕಳಪೆ ನಿರ್ವಹಣೆ ನೀಡಿ ಕೊನೆಯಲ್ಲಿ 7ನೇ ಸ್ಥಾನ ಪಡೆದಿತ್ತು. ನಾಲ್ಕನೇ ಆವೃತ್ತಿಯಲ್ಲೂ ಬೆಂಗಳೂರು ಬುಲ್ಸ್ ತಂಡ ಮತ್ತೆ ಎಡವಿ 6ನೇ ಸ್ಥಾನ ಪಡೆಯಲು ಮಾತ್ರ ಸಾಧ್ಯವಾಗಿತ್ತು. ಬೆಂಗಳೂರು ತಂಡವು 5ನೇ ಆವೃತ್ತಿಯಲ್ಲಿ ಮಿಂಚಿನ ಪ್ರದರ್ಶನ ನೀಡಿತಾದರೂ ಸೆಮಿಫೈನಲ್‌ನಲ್ಲಿ ಸೋತು ನಾಲ್ಕನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆದರೆ 6ನೇ ಆವೃತ್ತಿಯಲ್ಲಿ ಬುಲ್ಸ್ ಹಿಂದಿನ ಯಾವುದೇ ತಪ್ಪುಗಳನ್ನು ಮರುಕಳಿಸಲಿಲ್ಲ. ಎಲ್ಲಿಯೂ ತಪ್ಪೆಸಗಲಿಲ್ಲ. ಕೊನೆಗೂ ಪ್ರಶಸ್ತಿ ಗೆದ್ದು ರಾಜ್ಯ ಕಬಡ್ಡಿ ಅಭಿಮಾನಿಗಳ ಮನಸ್ಸನ್ನು ತಣಿಸುವಲ್ಲಿ ಯಶಸ್ವಿಯಾಯಿತು. ಇದೀಗ 7ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಸತತ ಎರಡನೇ ಬಾರಿಗೆ ಕಪ್ ಗೆಲ್ಲುವ ಕನಸನ್ನು ಬೆಂಗಳೂರು ಕಾಣುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.