ರಂಗ ಶಂಕರ: ಪ್ರಾತಃಕಾಲೇ ಪೂಜೆ,ಸಂಧ್ಯಾಕಾಲೇ ನಾಟಕಂ
Team Udayavani, Feb 25, 2017, 3:20 PM IST
ಇವರಿಗೆ ದೇವರಷ್ಟೇ ಪ್ರೀತಿ ನಾಟಕ. ಕಳೆದ 25 ವರ್ಷಗಳಿಂದ ಅಭಿಷೇಕ, ಪೂಜೆ, ಮಂಗಳಾರತಿಗೆ ತೋರುವ ಭಕ್ತಿಯನ್ನು ದುರ್ಯೋಧನ, ಜರಾಸಂಧನ ಪಾತ್ರಕ್ಕೂ ತೋರುವ ಮೂಲಕ ದೇವರನ್ನು ಕಾಣುತ್ತಾರೆ ಶಂಕರ್.
“ಅಪ್ಪನ ರೀತಿನೇ ಆಗಬೇಕಲ್ಲ. ದೇವರೇ ನನ್ನನ್ನು ಈ ರೀತಿ ಮಾಡಪ್ಪಾ’ ಶಂಕರ್ ಘಾಟಿ ಸುಬ್ರಮಣ್ಯ ದೇವರ ಮುಂದೆ ಈ ರೀತಿ ಕೇಳಿಕೊಳ್ಳುವ ಹೊತ್ತಿಗೇ ವಯಸ್ಸು 10 ದಾಟಿತ್ತು. ಈ ರೀತಿ ಕೇಳಲು ಕಾರಣ ಅಪ್ಪನೇ. ಅಪ್ಪ ಆದಿನಾರಾಯಣಪ್ಪ ದೊಡ್ಡಬಳ್ಳಾಪುರದ ಬಳಿಯ ಶ್ರೀ ಘಾಟಿ ಸುಬ್ರಮಣ್ಯ ದೇವಸ್ಥಾನದ ಪರಿಚಾರಕರು, ಅವರು ಕೂಡ ತಂದೆಯ ಕೆಲಸವನ್ನು ಬಿಡದೇ ಪಾಲಿಸುತ್ತಿದ್ದರು. ರಾತ್ರಿ ಆದರೆ ಸಾಕು ಇದರ ಜೊತೆಗೆ ಬಣ್ಣ ಹಚ್ಚಿ ನಾಟಕ ಮಾಡುತ್ತಿದ್ದರು. ಶಂಕರನಿಗೆ ಇದೇ ಹುಚ್ಚು. ಅಪ್ಪನನ್ನು ಡಂಬಾಸುರ, ಜರಾಸಂಧನ ಪಾತ್ರದಲ್ಲಿ ನೋಡಿದ ಮೇಲೆ ತಾನೂ ಹೀಗೆ ಆಗಬೇಕು ಅನಿಸಿತು. ಅಪ್ಪನ ಹಿಂದೆ ದೊಡ್ಡಬಳ್ಳಾಪುರ, ತುಮಕೂರುಗಳಿಗೆಲ್ಲಾ ಹೋಗುತ್ತಿದ್ದರು. ಅಲ್ಲಿ ಅಹೋರಾತ್ರಿ ನಾಟಕ. ಆಗೆಲ್ಲಾ ವಸ್ತ್ರಾಭರಣಗಳು ಕಡಿಮೆ. ಬದಲಾಗಿ ಸೀರೆಗಳನ್ನು ಸುತ್ತಿ ನಾಟಕವಾಡುತ್ತಿದ್ದರು.
ಮಗನ ಕಣ್ಣುಗಳು ಅಪ್ಪನ ಹಾವಾಭಾವದ ಮೇಲೂ, ಬಣ್ಣಹಚ್ಚಿಕೊಳ್ಳುವ ರೀತಿಯ ಕಡೆಗೂ ವಾಲಿತು. ಶಂಕರರನ್ನು ಎವೆಇಕ್ಕದೆ ಎಲ್ಲವನ್ನು ನೋಡನೋಡುತ್ತಲೇ ಪಾತ್ರವಾಗುತ್ತಿದ್ದರು. ಅಪ್ಪ ರಾವಣನ ರೌದ್ರತೆ, ಸಂಭಾಷಣೆಯಲ್ಲಿ ತೋರುತ್ತಿದ್ದ ಭಾವಾಭಿವ್ಯಕ್ತಿ, ವೇದಿಕೆಯ ಮೇಲೆ ಕಲಾವಿದನಿಗೆ ಇರಬೇಕಾದ ಕನಿಷ್ಟ ಜ್ಞಾನಗಳೆಲ್ಲವೂ ಅರಿಯುತ್ತಾ ಹೋಯಿತು.
ಒಂದು ದಿನ ನಾನೇಕೆ ನಾಟಕ ಮಾಡಬಾರದು? ಘಾಟಿಯ ಸುಬ್ರಮಣ್ಯ ದೇವಾಲಯದ ಕೆಲಸಗಾರರನ್ನು ಸೇರಿಸಿ ಸುಬ್ರಮಣ್ಯ ಕೃಪಾ ಪೋಷಕ ನಾಟಕ ಮಂಡಳಿ ಎಂಬ ತಂಡ ಕಟ್ಟಿಕೊಂಡರು. ಅದರಲ್ಲಿ ಶಂಕರರಿಗೆ “ಮೂರುವರೆ ವಜ್ರಗಳು’ ನಾಟಕದಲ್ಲಿ ಭೀಮನ ಪಾತ್ರ. ಶಂಕರರ ಅಭಿನಯ ನೋಡಿ ಇಡೀ ಊರಿಗೆ ಊರೇ ಚಪ್ಪಾಳೆ ತಟ್ಟಿತು. ಅಲ್ಲಿಂದ ಶುರುವಾಯ್ತು ಇವರ ರಂಗಯಾತ್ರೆ. ಒಂದು ಕಡೆ ಅಪ್ಪ ಹೆಗಲ ಮೇಲೆ ಇಟ್ಟಿದ್ದ ದೇವಾಲಯದ ಪರಿಚಾರಕರ ಜವಾಬ್ದಾರಿ. ಇನ್ನೊಂದು ಕಡೆ ನಾಟಕದ ಹವ್ಯಾಸ.
ಅಪ್ಪನಿಗೂ ಗೊತ್ತಾಯ್ತು. ಇವನ ಒಳಗೊಬ್ಬ ಕಲಾವಿದ ಇದ್ದಾನೆ ಅಂತ. ಆಗಲೇ ಪರಕಾಯ ಪ್ರವೇಶದ ಗುಟ್ಟುಗಳನ್ನು, ಸ್ಟೇಜು, ಎದುರಿಗಿರುವ ಪ್ರೇಕ್ಷಕರನ್ನು ನಿಭಾವಣೆ ರೀತಿ, ಪಾತ್ರ ಮಾಡುವಾಗ ಹುಮ್ಮಸ್ಸು ತಂದು ಕೊಳ್ಳುವ ಬಗೆ ಎಲ್ಲವನ್ನು ಹೇಳಿಕೊಟ್ಟರು.
ಇವೆಲ್ಲವೂ ಶಂಕರರ ಸ್ಟೇಜ್‌ಫಿಯರ್ ಎನ್ನುವ ಭೂತವನ್ನು ಓಡಿಸುವಲ್ಲಿ ನೆರವಾಯಿತು. ಈ ಹೊತ್ತಿಗೆ- ಅಣ್ಣ ವೀರಭದ್ರ ಪ್ರಸಾದ್ ಮೈಕೋದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೂ ಇದೇ ರೀತಿಯ ನಾಟಕದ ಗೀಳು. ಬೆಂಗಳೂರಲ್ಲಿ ಸಾಮಾಜಿಕ ನಾಟಕಗಳನ್ನು ಆಡುತ್ತಿದ್ದರು. ನಾಗಾಭರಣ, ಉಮಾಶ್ರೀ ಇಂಥವರ ಜೊತೆ ಪಳಗಿದ್ದರು. ಅಣ್ಣನ ನಾಟಕಾಭಿರುಚಿ ಕೂಡ ಶಂಕರರ ಮೇಲಾಗಿ ಪ್ರಬುದ್ಧವಾಗುತ್ತಾ ಹೋದರು. ಶಂಕರರ ಧ್ವನಿ, ಭಾವಗಳು ಭೀಮ, ರಾವಣ, ದುರ್ಯೋಧನರಂಥ ಘೋರ ಪಾತ್ರಗಳಿಗೆ ಹೇಳಿಮಾಡಿಸಿದಂತಿದೆ. ಈ ಕಾರಣಕ್ಕೆ ಬೇರೆ, ಬೇರೆ ಕಂಪೆನಿಗಳವರು “ನಮ್ಮಲ್ಲೂ ದುರ್ಯೋದನನಾಗಿ ಬನ್ನಿ’ ಅಂತ ಕರೆಯುತ್ತಾರೆ. ಶಂಕರರು ದೇವಸ್ಥಾನದ ಪೂಜೆಯ ಜೊತೆ, ಜೊತೆಗೆ ನಾಡಿನಾದ್ಯಂತ ನಾಟಕವಾಡುತ್ತಲೇ ಅಭಿರುಚಿ ಉಳಿಸಿಕೊಂಡಿದ್ದಾರೆ.
ಶಂಕರ್ ಸುಮಾರು 25 ವರ್ಷಗಳಿಂದ ರಂಗಭೂಮಿಯಲ್ಲಿದ್ದಾರೆ. ಸುತ್ತಮುತ್ತಲ ಜಿಲ್ಲೆ, ಹಳ್ಳಿಯವರಿಗೆಲ್ಲಾ ಚಿರಪಚಿತರು. ಶಂಕರ್ ಅನ್ನೋದಕ್ಕಿಂತ ಹೆಚ್ಚಾಗಿ ದುರ್ಯೋಧನನಾಗಿ ಒಂದು ಸಲ ಅವರ ಘರ್ಜನಾಯುಕ್ತ ಪಾತ್ರವನ್ನು ನೋಡಿದವರಿಗೆ ಮನದಲ್ಲಿ ಅಚ್ಚೊತ್ತುತ್ತದೆ. “ನನಗೆ ಸಿನಿಮಾದಲ್ಲೂ ಅವಕಾಶ ಬಂದಿತ್ತು. ಆದರೆ ದೇವಸ್ಥಾನದ ಜವಾಬ್ದಾರಿ ಹೆಚ್ಚಿದೆ. ಅದನ್ನು ಬಿಡುವಹಾಗಿಲ್ಲ. ಪ್ರತಿದಿನ ಬೆಳಗ್ಗೆ ದೇವರ ಪೂಜೆ ಸಾಮಗ್ರಿ ಸಿದ್ಧ ಮಾಡಬೇಕು, ನೀರು ತರಬೇಕು, ಅಭಿಷೇಕ, ಅಲಂಕಾರ, ಮಂಗಳಾರತಿ ಸಮಯದಲ್ಲಿ ಅಣಿಮಾಡುವ ಜವಾಬ್ದಾರಿ ಇರುತ್ತದೆ. ಆದ್ದರಿಂದ ನಾನೇ ಹಿಂದೆ ಸರಿದೆ’ ಅಂತಾರೆ ಶಂಕರ್.
ಹಾಗಂತ ನಾಟಕದ ನಂಟನ್ನು ಬಿಟ್ಟಿಲ್ಲ. ದೇವಸ್ಥಾನದ ಪೂಜೆ ಪುನಸ್ಕಾರದ ಜೊತೆ ರಿಹರ್ಸಲ್ ಮಾಡೋದು, ನಾಟಕವಾಡೋದು ಹೀಗೆ ಕಂಬಿಯ ಮೇಲಿನ ನಡಿಗೆ ಜೋರಾಗೇ ಇದೆ.
“ನನಗೆ ಮನೆಯವರ ನೆರವಿನ ಜೊತೆಗೆ ದೇವಸ್ಥಾನದ ಸಿಬ್ದಂದಿಯ ನೆರವು ಚೆನ್ನಾಗಿದೆ. ಅದಕ್ಕೆ ಇಷ್ಟು ವರ್ಷಗಳ ಕಾಲ ದುರ್ಯೋಧನ, ಜರಾಸಂಧನಾಗಿರೋದು’ ಅಂತಾರೆ ಶಂಕರ್.
ಗುರುರಾಜ್
ಚಿತ್ರಗಳು- ಡಿ. ಸಿ. ನಾಗೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.