ರೀನಾ ಅಡ್ಡಾದಲ್ಲಿ ಕ್ರೀಡಾ ತಾರೆಯರು ಲಾಕ್!
Team Udayavani, Feb 9, 2019, 12:40 AM IST
ದೇಶದ ಜನಪ್ರಿಯ ಕ್ರೀಡಾ ಟೀವಿ ನಿರೂಪಕಿ ಮಂಗಳೂರಿನ ಹುಡುಗಿ ರೀನಾ ಡಿಸೋಜಾ ಇದೀಗ ಯೂ ಟ್ಯೂಟ್‌ನಲ್ಲಿ ಬಾರೀ ಸದ್ದು ಮಾಡುತ್ತಿದ್ದಾರೆ.
ತಮ್ಮದೇ ಬ್ಯಾನರ್‌ನಡಿ “ದಿ ರೀನಾ ಡಿಸೋಜಾ ಶೋ’ ಯೂ ಟ್ಯೂಬ್ ಟಾಕ್ ಶೋ ಆರಂಭಿಸಿದ್ದಾರೆ. ಟಾಕ್ ಶೋ ಅಡ್ಡಾದಲ್ಲಿ ಕ್ರಿಕೆಟಿಗರು, ಅಥ್ಲೀಟ್‌ಗಳು ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಹಲವಾರು ಸಾಧಕರನ್ನು ರೀನಾ ಮಾತಿಗೆಳೆಯುತ್ತಾರೆ. ಮಸ್ತ್ ಹರಟೆಯ ಜತೆಗೆ ಕ್ರೀಡಾಪಟುಗಳು ಸಾಧನೆಯ ಹಾದಿಯಲ್ಲಿ ಪಟ್ಟ ಕಷ್ಟ, ಖುಷಿಯ ಕ್ಷಣಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ರೀನಾ ಪ್ರಶ್ನೆ ಕೇಳುತ್ತಾರೆ. ಜತೆಗೆ ಗೇಮಿಂಗ್ ಸೆಗೆ¾ಂಟ್, ಫುಡ್ ಸೆಗೆ¾ಂಟ್‌ನಂತಹ ಥ್ರಿಲ್ಲಿಂಗ್ ಆಟವನ್ನೂ ಅತಿಥಿಗಳಿಂದ ಆಡಿಸುತ್ತಾರೆ. ಇಂತಹದೊಂದು ಪ್ರಯತ್ನಕ್ಕೆ ಈಗ ವೀಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶೋ ದಿನೇ ದಿನೇ ವೀಕ್ಷಕರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುತ್ತಿದೆ.
ಕ್ರಿಕೆಟಿಗರಾದ ಯಜುವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ದೇವದತ್ ಪಡೀಕ್ಕಲ್, ಕರುಣ್ ನಾಯರ್, ಪ್ಯಾರಾಲಿಂಪಿಕ್ಸ್ ಈಜು ತಾರೆ ನಿರಂಜನ್ ಮುಕುಂದನ್, ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತ ವೇಟ್‌ಲಿಫ್ಟರ್ ಸತೀಶ್ ಶಿವಲಿಂಗಂ, ಖ್ಯಾತ ಅಥ್ಲೀಟ್ ವಿಜಯ ಕುಮಾರಿ ಸೇರಿದಂತೆ ಹಲವು ಕ್ರೀಡಾ ತಾರೆಯರನ್ನು ರೀನಾ ಸಂದರ್ಶನ ನಡೆಸಿದ್ದಾರೆ. ಇನ್ನಷ್ಟು ಕ್ರೀಡಾ ಪ್ರತಿಭೆಗಳನ್ನು “ರೀನಾ ಡಿಸೋಜಾ ಶೋ” ಮಾತಿನ ಮಂಟಪಕ್ಕೆ ಕರೆತರಲು ರೀನಾ ಚಿಂತನೆ ನಡೆಸಿದ್ದಾರೆ.
ತಿಂಗಳಿಗೆ 4 ಶೋ: ಹಿಂದಿಯ ಪ್ರಮುಖ ಟೀವಿ ನಿರೂಪಕರು ಇದೀಗ ಯೂ ಟ್ಯೂಟ್‌ನಲ್ಲಿ ಟ್ರೆಂಡ್ ಆರಂಭಿಸಿದ್ದಾರೆ. ಕರ್ನಾಟಕದಿಂದ ಇಂತಹದೊಂದು ಕ್ರೀಡಾ ಟಾಕ್ ಶೋ ಪ್ರಯತ್ನ ನಡೆದಿರುವುದು ಇದೇ ಮೊದಲು. ರೀನಾ ಜತೆಗೆ 25ಕ್ಕೂ ಹೆಚ್ಚು ಮಂದಿ ಸಿಬ್ಬಂದಿಗಳು ಟಾಕ್ ಶೋ ಹಿಂದೆ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ಶನಿವಾರ ಟಾಕ್ ಶೋ ಯೂ ಟ್ಯೂಟ್‌ನಲ್ಲಿ ಪ್ರಕಟವಾಗುತ್ತದೆ. ಈ ಬಗ್ಗೆ ಉದಯವಾಣಿ ಜತೆಗೆ ರೀನಾ ಖುಷಿ ಹಂಚಿಕೊಂಡು ಹೇಳಿದ್ದು ಹೀಗೆ, “ಸ್ಟಾರ್ ನ್ಪೋರ್ಟ್ಸ್ ಕನ್ನಡ ಚಾನೆಲ್‌ನಲ್ಲಿ ನಿರೂಪಕಿಯಾಗಿರುವ ನಾನು ಹೊಸ ಪ್ರಯತ್ನಕ್ಕೆ ಏಕೆ ಕೈ ಹಾಕಬಾರದು ಎಂದು ಯೋಚಿಸಿದೆ. ಈ ವಿಷಯವನ್ನು ಸ್ನೇಹಿತರು, ಕುಟುಂಬದವರ ಜತೆ ಚರ್ಚಿಸಿದೆ. ಟಾಕ್ ಶೋ ನಡೆಸಲು ಎಲ್ಲರಿಂದಲೂ ಬೆಂಬಲ ಸಿಕ್ಕಿತು. ಕೊನೆಗೂ “ದಿ ರೀನಾ ಡಿಸೋಜಾ ಶೋ’ ಆರಂಭಿಸಿದೆ. ಆರಂಭದಲ್ಲಿ ವೀಕ್ಷಕರ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು. ಇದೀಗ ಎಪಿಸೋಡ್‌ವೊಂದಕ್ಕೆ ಕಡಿಮೆ ಎಂದರೂ 50 ಸಾವಿರಕ್ಕೂ ಹೆಚ್ಚು ವೀಕ್ಷಕರಿದ್ದಾರೆ. ಮುಂದಿನ ದಿನಗಳಲ್ಲಿ ವೀಕ್ಷಕರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಕರಾವಳಿ ಮೂಲದ ಹುಡುಗಿ: ರೀನಾ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರು. ರೋಟರಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ, ಆಳ್ವಾಸ್‌ನಲ್ಲಿ ಪಿಯು ಶಿಕ್ಷಣ, ಎಂಐಟಿಇ ಮಿಜಾರಿನಲ್ಲಿ ಎಂಜಿನೀಯರಿಂಗ್ ಶಿಕ್ಷಣವನ್ನು ಪೂರೈಸಿದರು. ಬಳಿಕ ಅವರಿಗೆ ಮಲ್ಟಿ ನ್ಯಾಷನಲ್ ಕಂಪೆನಿಯಲ್ಲಿ ಕೈ ತುಂಬ ಸಂಬಳ ಸಿಗುವ ಕೆಲಸ ಸಿಕ್ಕಿತು. ಕೆಲವೇ ದಿನದಲ್ಲಿ ರೀನಾಗೆ ಕೆಲಸ ಬೇಸರ ತರಿಸಿತು. ತಕ್ಷಣ ಕೆಲಸಕ್ಕೆ ರಾಜೀನಾಮೆ ನೀಡಿದರು. ಅದಾಗಲೇ ಅವರಲ್ಲಿ ನಿರೂಪಕಿಯಾಗುವ ಕನಸು ಚಿಗುರಿತ್ತು. ತಡ ಮಾಡದೆ ಪ್ರಯತ್ನವನ್ನು ಮುಂದುವರಿಸಿದರು. ಅದರಲ್ಲಿ ಅಕ್ಷರಶಃ ಯಶಸ್ವಿಯಾದರು. ಆರಂಭದಲ್ಲಿ ಕಾರ್ಪೋರೇಟ್ ಲೋಕದಲ್ಲಿ ಕೆಲವು ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕೆಲಸ ನಿರ್ವಹಿಸಿದರು. ದಿನ ಹೋದಂತೆ ಅವರನ್ನು ಮತ್ತಷ್ಟು ಅವಕಾಶಗಳು ಬೆನ್ನಟ್ಟಿಕೊಂಡು ಬಂದವು, ಮುಂದೆ ಇವರು ಭರವಸೆಯ ಕ್ರೀಡಾ ನಿರೂಪಕಿಯಾಗಿ ಬೆಳೆದರು. ಇವರಿಗೆ ಸ್ಟಾರ್ ನ್ಪೋರ್ಟ್ಸ್ ಸಮೂಹ ಉತ್ತಮ ವೇದಿಕೆಯನ್ನು ನೀಡಿತು. ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳು ನಡೆದಾಗ ಸ್ಟಾರ್ ನ್ಪೋರ್ಟ್ಸ್ ಕನ್ನಡ ಚಾನಲ್‌ನಲ್ಲಿ ಅಚ್ಚ ಕನ್ನಡದಲ್ಲಿ ರೀನಾ ಕರ್ನಾಟಕದ ಕ್ರಿಕೆಟ್ ತಜ್ಞರ ಜತೆ ಚರ್ಚಿಸುವುದನ್ನು ನೋಡಬಹುದಾಗಿದೆ.
ಒಟ್ಟು 9 ವರ್ಷಗಳ ಅನುಭವ: ರೀನಾ ಒಟ್ಟು 9 ವರ್ಷಗಳಿಂದ ಟೀವಿ, ಸ್ಟೇಜ್ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇಂಗ್ಲಿಷ್, ಹಿಂದಿ, ಕನ್ನಡ, ತುಳು, ಮಂಗಳೂರು-ಗೂವಾ ಕೊಂಕಣಿ, ಮರಾಠಿ, ತಮಿಳು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಬಲ್ಲವರಾಗಿದ್ದಾರೆ. ದೇಶ-ವಿದೇಶಗಳಲ್ಲಿ ಸೇರಿದಂತೆ ಒಟ್ಟು 1000 ಸಾವಿರಕ್ಕೂ ಅಧಿಕ ಶೋಗಳಲ್ಲಿ ರೀನಾ ನಿರೂಪಕಿಯಾಗಿ ಕೆಲಸ ನಿರ್ವಹಿಸಿದ್ದಾರೆ.
ಹಳ್ಳಿಯಿಂದ ಬಂದವಳಾದ ನಾನು ದೇಶ-ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೆಲಸ ಮಾಡಿರುವುದು ನನಗೆ ಹೆಮ್ಮೆಯ ವಿಷಯ. ಇಂದು ಸ್ಟಾರ್ ನ್ಪೋರ್ಟ್ಸ್ ಕನ್ನಡ ಚಾನೆಲ್ ತನಕ ಬಂದು ನಿಂತಿದ್ದೇನೆ. ಮುಂದೆ ನಂ.1 ನಿರೂಪಕಿಯಾಗುವ ಕನಸು ಇದೆ.
ರೀನಾ ಡಿಸೋಜಾ, ಕ್ರೀಡಾ ನಿರೂಪಕಿ
ಹೇಮಂತ್ ಸಂಪಾಜೆ