ಬಿಸಿಸಿಐ ಇರಲಿ ಬಿಡಲಿ,ಭಾರತೀಯ ಕ್ರಿಕೆಟ್ ಅಜೇಯ!
Team Udayavani, Jan 7, 2017, 12:12 PM IST
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಹಾಗೂ ದೇಶದ ಪರಮೋತ್ಛ ನ್ಯಾಯಾಲಯದ ನಡುವಣ ಸಂಗ್ರಾಮ ಒಂದು ಸುತ್ತು ಸುತ್ತಿದೆ. ಸಾಮಾನ್ಯರಲ್ಲಿ ಸಾಮಾನ್ಯರು ಕೆಳ ಹಂತದ ನ್ಯಾಯಾಲಯದ ಆದೇಶ, ಸೂಚನೆಗಳಿಗೆ ತತ್ತರಿಸುವಾಗ ಬಿಸಿಸಿಐ ಸುಮಾರು 12 ತಿಂಗಳ ಕಾಲ ಸುಪ್ರೀಂಕೋರ್ಟ್‌ನ ಚಾಟಿಯೇಟುಗಳ ನಡುವೆಯೂ ತನ್ನ ಮೂಗಿನ ನೇರಕ್ಕೆ ಆಡಳಿತ ನಡೆಸಿದೆ ಎಂದರೆ ಅದರ ಭಂಡತನ, ಆರ್ಥಿಕ ತಾಕತ್ತನ್ನು ಅಂದಾಜಿಸಬಹುದು. ಈಗ ಅದರ ಹೆಸರಿನಲ್ಲಿದ್ದ “ನಿಯಂತ್ರಣ ತುಸು ಮಾರ್ಪಾಡಾಗಿ “ನಿತ್ರಾಣ ಆಗಿದೆ ಎಂದರೆ ಖಂಡಿತಾ ಕುಚೋದ್ಯವಲ್ಲ!
ಬಿಸಿಸಿಐನ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಉಪಾಧ್ಯಕ್ಷ ಅಜಯ್ ಶಿರ್ಕೆ ಅವರನ್ನು ತನ್ನ ಆದೇಶವೊಂದರ ಮೂಲಕ ಪದಚ್ಯುತಿಗೊಳಿಸಿರುವುದು ಸುಪ್ರೀಂಕೋರ್ಟ್‌ನ ಬ್ರಹ್ಮಾಸ್ತ್ರ. ಬದಲಿ ಸಮಿತಿ ಮಾಡುವ ಕುರಿತು ಕೂಡ ಅದೇ ತನ್ನ ಮಂತ್ರ ಪ್ರಯೋಗಿಸಿದೆ. ಕೇಂದ್ರ ಸರ್ಕಾರವನ್ನೂ ಕೂಡ ಆಡಿಸಬಲ್ಲ ತಾಕತ್ತನ್ನು ಹೊಂದಿದ್ದು ಬಿಸಿಸಿಐ ತನ್ನ ಕಾಲ ಮೇಲೆ ತಾನೇ ಚಪ್ಪಡಿ ಎಳೆದುಕೊಂಡಿದೆ. ಇದೆಲ್ಲದವರ ಆರಂಭ 2013 ಮೇನಲ್ಲಿ ಮೊಳಕೆಯೊಡೆದಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಸ್.ಶ್ರೀಶಾಂತ್, ಅಂಕಿತ್ ಚವನ್ ಮತ್ತು ಅಜಿತ್ ಚಾಂಡಿಲಾ ಮ್ಯಾಚ್ ಫಿಕ್ಸಿಂಗ್‌ನಲ್ಲಿ ತೊಡಗಿದ್ದುದು ಬಯಲಾಗಿತ್ತು. ಈ ಸಂದರ್ಭದಲ್ಲಿ ಉತ್ಛ ನಾಯಾಲಯ ಜಸ್ಟೀಸ್ ಮುಕುಲ್ ಮುದ್ಗಲ್ ನೇತೃತ್ವದ ಸಮಿತಿ ರಚಿಸಿ ತನಿಖೆಗೆ ಆದೇಶಿಸಿತು. ಐಪಿಎಲ್ ಲಲಿತ್ ಮೋದಿ ಎಂಬ ಇನ್ನೋರ್ವ ಮೋದಿಯ ಕನಸಿನ ಕೂಸು. ಕೇವಲ ಹಣ ತಂದುಕೊಡುವ ಯೋಚನೆ, ಬಹುಷಃ ಗುಜರಾತಿನ ವ್ಯಾವಹಾರಿಕ ಬುದ್ಧಿ ಐಪಿಎಲ್‌ನಲ್ಲಿ ಹಾರಾಡಿದ ಮ್ಯಾಚ್‌ಫಿಕ್ಸಿಂಗ್ ಭೂತದ ಜನ್ಮಕ್ಕೆ ಕಾರಣವಾಗಿರಬಹುದು. ದುರಂತವೆಂದರೆ, ಬಿಸಿಸಿಐ ಈ ಘೋರ ಪ್ರಕರಣವನ್ನು ಕೂಡ ಲಘುವಾಗಿಯೇ ಪರಿಗಣಿಸಿತು.
ಬಿಸಿಸಿಐ ಆಡಳಿತ ಸಮರ್ಪಕವಾಗಿಲ್ಲ ಎಂಬ ಪ್ರಾಥಮಿಕ ಅನಿಸಿಕೆಯ ಹಿನ್ನೆಲೆಯಲ್ಲಿ ನ್ಯಾಯಾಲಯ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಾಧೀಶ ಆರ್.ಎಂ.ಲೋಧಾ ಸಮಿತಿಯನ್ನು ಕಳೆದ 2015ರ ಜನವರಿಯಲ್ಲಿ ನೇಮಿಸಿತು. ಒಂದು ವರ್ಷ, 2016ರ ಜನವರಿ ನಾಲ್ಕರಂದು ಲೋಧಾ ಸಮಿತಿ ಸಲ್ಲಿಸಿದ ವರದಿ ಬಿಸಿಸಿಐ ಪಾಲಿಗೆ ವಜಾÅಘಾತವಾಗಿತ್ತು. ಅದರಲ್ಲೂ ಮೂರು ಮುಖ್ಯ ಸಲಹೆಗಳು ಜೀರ್ಣಿಸಿಕೊಳ್ಳಲಾಗದ್ದು. ಒಂದು ರಾಜ್ಯ ಒಂದು ಮತ, ಪದಾಧಿಕಾರಿಗಳಿಗೆ 70 ವರ್ಷದ ನಿವೃತ್ತಿ ವಯಸ್ಸು, 9 ವರ್ಷದ ಗರಿಷ್ಠ ಸೇವೆ ಮಿತಿಯ ಸಲಹೆ ಬಿಸಿಸಿಐಗೆ ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿಯಿದೆ. ಕೊನೆಪಕ್ಷ ಅಂತಹ ಮನಸ್ಥಿತಿಯಿದೆ.
ಪ್ರಜಾತಾಂತ್ರಿಕವಲ್ಲದ ಸಲಹೆ?
9 ವರ್ಷ ಹಾಗೂ 70ರ ವಯಸ್ಸಿನ ಎರಡು ನಿಯಮಗಳು ಏಕಕಾಲದಲ್ಲಿ ಪ್ರಸ್ತಾಪಿಸುವುದರಲ್ಲಿಯೇ ದ್ವಂದ್ವವಿದೆ. 9 ವರ್ಷಕ್ಕಿಂತ ಹೆಚ್ಚು ಕಾಲ ಪದಾಧಿಕಾರ ಅನುಭವಿಸಬಾರದು ಎಂದರೆ ಏಕಸ್ವಾಮ್ಯ ತಡೆಗದು ಅನಿವಾರ್ಯ. ಆದರೆ 70 ವರ್ಷದ ನಿವೃತ್ತಿ ಎಂಬುದು ಮೊದಲಿನ ಅಂಶದ ಹಿನ್ನೆಲೆಯಲ್ಲಿ ಅನಗತ್ಯ. ಒಬ್ಬ 65ರ ವಯಸ್ಸಿನಲ್ಲಿ ಬಿಸಿಸಿಐ ಅಧಿಕಾರಕ್ಕೆ ಬಂದರೆ ಆತ 74ರವರೆಗೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ಸಮ್ಮತ. ಅವನಿಗೆ 70ಕ್ಕೇ ಮನೆಗೆ ಹೋಗು ಎಂದರೆ? ಅಥವಾ 60ರ ಸಂದರ್ಭದಲ್ಲಿ ಬಿಸಿಸಿಐ ಒಳಗೆ ಬಂದಾತ 69ಕ್ಕೇ ಮೊದಲ ನಿಯಮ ಪ್ರಕಾರ ಹಿಂಸರಿಯಲೇಬೇಕು. ಅಷ್ಟಕ್ಕೂ 70 ದಾಟಿದವರು ಬಿಸಿಸಿಐ “ಸೇವಾ ಆಡಳಿತದಲ್ಲಿ ಭ್ರಷ್ಟಾಚಾರವನ್ನೇ ಮಾಡುತ್ತಾರೆ ಎಂದು ಲೋಧಾ ಸಮಿತಿ ತೀರ್ಮಾನಿಸುವುದು ತೀರಾ ಅಸಹಜ.
ನಿಜ, ಇವೆಲ್ಲಕ್ಕೂ ಬಿಸಿಸಿಐನ ಅಂಧಾದುಂಧಿ ಆಡಳಿತ ಕಾರಣ ಎನ್ನುವುದನ್ನು ಮರೆಯುವಂತಿಲ್ಲ. ರಾಜ್ಯಗಳಿಗೆ ಕೊಡಬೇಕಾದ ಅನುದಾನಗಳಿರಬಹುದು, ಅಧಿಕಾರ ಹಂಚಿಕೆಯಿರಬಹುದು. ಬಿಸಿಸಿಐನಲ್ಲಿ ಸ್ವಜನಪಕ್ಷಪಾತ, ವಂಚನೆ ಎದ್ದುಕಾಣುವಂತದ್ದು. ಅದನ್ನು ನಿರ್ಬಂಧಿಸಲು ಕಠಿಣ ಕ್ರಮ ಬೇಕು. ವ್ಯವಹಾರ ಪಾರದರ್ಶಕವಾಗಿದ್ದರೆ ಸಾಕು. ಈ ಲೆಕ್ಕಾಚಾರದಲ್ಲಿ ಒಂದು ರಾಜ್ಯ, ಒಂದು ಮತ ಎಂಬ ನಿಯಮ ಮೇಲ್ನೋಟದಲ್ಲಿ ಸರಿ ಎನ್ನಿಸಬಹುದು. ಆದರೆ ನಾಳೆ ಮುಂಬೈ ಎನ್ನುವ ರಣಜಿ ತಂಡವೇ ಇಲ್ಲ, ಕೇವಲ ಮಹಾರಾಷ್ಟ್ರ ತಂಡ ದೇಶದ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತದೆ ಎಂತಾದರೆ ಅದು ಈ ಪರಂಪರೆಯನ್ನು ಅಣಕಿಸಿದಂತೆ. ಹಿಂದೆ ಮತಗಳ ಸೃಷ್ಟಿಗಾಗಿಯೇ ರೈಲ್ವೇಸ್, ಮುಂಬೈ ತರಹದ ತಂಡ, ಆಡಳಿತಗಳ ಸೃಷ್ಟಿಯಾಗಿರಬಹುದು. ಈಗ ಅವುಗಳನ್ನು ತೆಗೆದುಹಾಕುವುದು ಕೂಡ ಕಾಯಿಲೆಗೆ ಅವಯವ ಕತ್ತರಿಸುವಂತಹ ಮೂರ್ಖತನ.
ಬಿಸಿಸಿಐ ಎಂಬ ಪರ್ಯಾಯ ಸರ್ಕಾರ!
ಕೆಲ ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ ಪಾಕಿಸ್ತಾನಕ್ಕೆ ಸರಣಿ ಆಡಲು ಭಾರತ ಸರ್ಕಾರ ಅವಕಾಶ ನೀಡದ ಸಂದರ್ಭ ಎಂಬ ನೆನಪು. ಆ ವೇಳೆ ಬಿಸಿಸಿಐ ಕೇವಲ ಪ್ರವಾಸ ವಂಚಿತವಾಗಬಾರದು ಎಂದು ನಾವು ದೇಶವನ್ನು ಪ್ರತಿನಿಧಿಸುವ ತಂಡವೇನಲ್ಲ. ನಾವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತಂಡ ಎಂದು ವಾದಿಸಿತ್ತು. ದೇಶವನ್ನು ಅಧಿಕೃತವಾಗಿ ಪ್ರತಿನಿಧಿಸುವಂತ ಏಷಿಯನ್ ಗೇಮ್ಸ್‌ಗಿಂತ ಅದಕ್ಕೆ ಐಪಿಎಲ್ ಮುಖ್ಯ, ಬಿಟ್ಟರೆ ಐಸಿಸಿ ಕ್ರಿಕೆಟ್ ಕ್ಯಾಲೆಂಡರ್. 2014ರಲ್ಲಿ ನಡೆದ ಇಂಚಾನ್ ಏಷ್ಯಾಡ್‌ನಲ್ಲಿ ಭಾರತದಂತ ತಂಡ ಆಡಲೇ ಇಲ್ಲ!
ಬಿಸಿಸಿಐ ಒಳಗಿರುವ ಪದಾಧಿಕಾರಿಗಳು ರಾಜಕಾರಣಿಗಳೇ
ಶರದ್ ಪವಾರ್ ಸೇರಿದಂತೆ ಇಂತಹ ಜನಸೇವಕರು ಕೇಂದ್ರ, ರಾಜ್ಯ ಸರ್ಕಾರಗಳ ನೀತಿಗಳನ್ನು ಪ್ರಭಾವಿಸುತ್ತಲೇ ಬಂದಿದ್ದಾರೆ. ಐಸಿಸಿ ಕೂಡ ಬಿಸಿಸಿಐ ಮಾತಿನಂತೆ ನಡೆಯುವಾಗ ಸುಪ್ರೀಂಕೋರ್ಟ್ ಏನು ಮಹಾ ಎಂಬ ಭಾವ ಈ ಖಾಸಗಿ ವ್ಯವಸ್ಥೆಗೆ ಬಂದಿರಲಿಕ್ಕೆ ಸಾಕು. ಇದಕ್ಕೆ ಆಟಗಾರರು ಪದಾಧಿಕಾರಿಗಳು ಆದರೆ ಸರಿಹೋಗುತ್ತದೆ ಎಂಬ ಪ್ರತಿಪಾದನೆಯಿತ್ತು. ಕರ್ನಾಟಕದಲ್ಲಿ ನಾವು ಬ್ರಿಜೇಶ್ ಪಟೇಲ್‌ರಂತವರ ಆಡಳಿತ ನೋಡಿದ ಮೇಲೆ ಇಂತಹ ವ್ಯವಸ್ಥೆಗೆ ಬಂದ ಮೇಲೆ ಅವರೂ ವ್ಯವಸ್ಥೆಗೆ ಹೊಂದಿಕೊಳ್ಳಬೇಕು, ಹೊಂದಿಕೊಳ್ಳುತ್ತಾರೆ ಎಂಬುದನ್ನು ಅರಿತಿದ್ದೇವೆ!
ಕ್ರಿಕೆಟ್‌ಗೆನೂ ಆಗದು
ಬಿಸಿಸಿಐ ಇಂದೇ ಮುಚ್ಚಿ ಮನೆಗೆ ಹೋದರೂ ಭಾರತೀಯ ಕ್ರಿಕೆಟ್‌ಗೆ ಯಾವ ಘಾತವೂ ಆಗುವುದಿಲ್ಲ. ಕ್ರಿಕೆಟ್ ಅಭಿಮಾನಿಗೆ ಕ್ರಿಕೆಟ್ ಬೇಕೇ ವಿನಃ ಅದನ್ನು ನಿರ್ವಹಿಸುವ ಆಡಳಿತ ಮಂಡಳಿಯ ರಾಜಕೀಯ, ಅಪರಾತಪರ ಆಪ್ತವಲ್ಲ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕೂಡ ವಾಸ್ತವವನ್ನು ಅರ್ಥ ಮಾಡಿಕೊಂಡಿದೆ. ಬಿಸಿಸಿಐ ನ್ಯೂಜಿಲ್ಯಾಂಡ್ ಎದುರಿನ ಕ್ರಿಕೆಟ್ ಸರಣಿ ನಡೆಸುವುದೇ ಕಷ್ಟ, ರದ್ದು ಎಂಬ ಪರೋಕ್ಷ ಬೆದರಿಕೆ ಹಾಕಿದಾಗ, ಈ ಪಂದ್ಯಗಳ ಆಯೋಜನೆಗೆ ಬೇಕಾದ ಹಣ ಬಿಡುಗಡೆ ಮಾಡಲು ನ್ಯಾಯಾಲಯ ಮುಕ್ತ ಮನಸ್ಸು ತೋರಿತ್ತು. ಅಷ್ಟೇಕೆ, ಇಂಗ್ಲೆಂಡ್ ವಿರುದ್ಧ ಆಎಂಭವಾಗಲಿರುವ ಏಕದಿನ ಸರಣಿ ಏರ್ಪಡಿಸಲು ಬೇಕಾದ ಹಣಕಾಸನ್ನು ಕೂಡ ಒದಗಿಸಲು ನಿಯಮ ಸಡಿಲಿಸಿದೆ.
ಬಿಸಿಸಿಐನಲ್ಲಿರುವ ರಾಜಕಾರಣಿಗಳು ಸುಲಭದಲ್ಲಿ ಸೋಲು ಒಪ್ಪಿಕೊಳ್ಳುವುದಿಲ್ಲ. ಅವರ ನೆರವಿಗೆ ದೇಶದ ಪ್ರತಿಷ್ಠಿತ ನ್ಯಾಯವಾದಿಗಳ ಬೆಂಬಲವೂ ಇರಲಿದೆ. ಪದಚ್ಯುತ ಬಿಸಿಸಿಐ ಅಧ್ಯಕ್ಷ, ನ್ಯಾಯಾಲಯ ಬಿಸಿಸಿಐನ ಆಡಳಿತವನ್ನು ಚೆನ್ನಾಗಿ ನಿರ್ವಹಿಸುತ್ತದೆ ಎಂಬ ಆಶಯವಿದೆ ಎಂದು ವ್ಯಂಗ್ಯವಾಡಿರುವುದು ಧಾರ್ಷ್ಟ್ಯದಿಂದ. ಅವರು ಹೋರಾಟ ಮುಂದುವರೆಸಲಿದ್ದಾರೆ. ನ್ಯಾಯಾಲಯಕ್ಕೂ ಇದು ತನ್ನ ಶಕ್ತಿಯನ್ನು ಪ್ರದರ್ಶಿಸಲೇಬೇಕಾದ ಕ್ಲಿಷ್ಟ ಸನ್ನಿವೇಶ. ನಾವು ಪ್ರೇಕ್ಷಕರು!
ಐಪಿಎಲ್ ಕಷ್ಟ ಕಷ್ಟ!
ಈಗಿನ ಅಂದಾಜುಗಳ ಪ್ರಕಾರ, ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯ ಆಯೋಜನೆ ಬಹುಪಾಲು ಕಷ್ಟ. ಈಗಾಗಲೇ ತಯಾರಿ ಕೂಡ ವಿಳಂಬವಾಗಿದೆ. ಸುಪ್ರೀಂನ ಛಾಟಿಯೇಟು ಮುಂದುವರೆದಿದ್ದು ಐಪಿಎಲ್‌ಗೆ ಸಮಸ್ಯೆಯಾಗಲಿದೆ. ಈ ಸಂಕೀರ್ಣ ಸ್ಥಿತಿಯಲ್ಲಿ ನೂರಾರು ಒಪ್ಪಂದಗಳು ಪ್ರಶ್ನೆಗೊಳಗಾಗಬಹುದು, ಉಲ್ಲಂಘನೆಯಾಗಬಹುದು. ಆದರೆ ಬಿಸಿಸಿಐ ವಿವಾದದಲ್ಲಿ ಒಂದರ್ಥದಲ್ಲಿ ಸುಪ್ರೀಂಕೋರ್ಟ್ ಕೂಡ ಒಂದು ಪಕ್ಷವಾಗಿರುವಾಗ ಅದು ಹಿಂದೆ ಹೆಜ್ಜೆ ಇರಿಸಲಿಕ್ಕಿಲ್ಲ.
ಐಪಿಎಲ್ ಇಲ್ಲ ಎಂಬುದು ತೀರಾ ನಿರಾಸೆಯ ಚಿತ್ರಣವಲ್ಲ. ಇದರ ಕಾರಣದಿಂದ ಪ್ರತಿಷ್ಠಿತ ದೇಶ ದೇಶಗಳ ಮುಖಾಮುಖೀಗೆ ಧಕ್ಕೆಯಾಗಿದೆ. ಭಾರತ ಏಕದಿನ ವಿಶ್ವಕಪ್‌ನ ಚಾಂಪಿಯನ್ ಆಗಿದ್ದನ್ನು ಸಂಭ್ರಮಿಸಲು ಅವಕಾಶ ಕೊಡದ ಐಪಿಎಲ್ ಭಾರತೀಯರ ಕೌಂಟಿ ಅನುಭವಕ್ಕೂ ಕಲ್ಲು ಹಾಕಿದೆ. ಐಪಿಎಲ್ ಕಾರಣಕ್ಕಾಗಿಯೇ ಪಿಚ್‌ಗಳ “ಡಾಕ್ಟರಿಂಗ್’ ನಡೆಯುತ್ತಿದೆ. ಆಟಗಾರರ ನೈಜ ಪ್ರತಿಭೆ ಗೊತ್ತಾಗುತ್ತಿಲ್ಲ. ಅದಕ್ಕೆ ಇಂಗ್ಲೆಂಡ್‌ನ ವೇಗಿಯೊಬ್ಬ ಹೇಳಿದ್ದು, ವಿರಾಟ್ ಕೊಹ್ಲಿ ಭಾರತೀಯ ಮಾದರಿಯ ಪಿಚ್‌ನ ಸಾಮ್ರಾಟ ಎಂದು! ಬರುವ ದಿನಗಳು ಕುತೂಹಲಕಾರಿ…
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.