ಕನ್ನಡಿಗರನ್ನು ನಿರ್ಲಕ್ಷಿಸಿತೆ ಆರ್‌ಸಿಬಿ?
ವಿರಾಟ್ ಕೊಹ್ಲಿ ಹುಡುಗರು ಎಡವಿದ್ದೆಲ್ಲಿ?
Team Udayavani, May 11, 2019, 6:02 AM IST
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಶ್ವಶ್ರೇಷ್ಠ ಆಟಗಾರರನ್ನು ಒಳಗೊಂಡಿದ್ದರೂ ತನ್ನ “ರಾಯಲ್’ ಖ್ಯಾತಿಗೆ ತಕ್ಕ ಆಟವಾಡದೆ 12ನೇ ಆವೃತ್ತಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಕೂಟದಿಂದ ಹೊರಬಿದ್ದು ಟೀಕೆಗೆ ಗುರಿಯಾಗಿದೆ.
ಗೆಲ್ಲುವ ಹಲವಾರು ಅವಕಾಶ ಇದ್ದಾಗಿಯೂ ಪ್ಲೇಆಫ್ ಪ್ರವೇಶಿಸಲು ಕೊಹ್ಲಿ ಪಡೆ ವಿಫಲವಾಗಿರುವುದು ಕೋಟ್ಯಂತರ ಅಭಿಮಾನಿಗಳಿಗೆ ನಿರಾಶೆ ತರಿಸಿದೆ. ಮಾತ್ರವಲ್ಲ, ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ. ಇದೀಗ ಸ್ವತಃ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್‌ಮನ್ ಎಬಿಡಿ ವಿಲಿಯರ್ ರಾಯಲ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಆರ್‌ಸಿಬಿ
ಫಿನಿಕ್ಸ್‌ನಂತೆ ಎದ್ದು ಬರಲಿದೆ ಎನ್ನುವ ಆಶ್ವಾಸನೆಯನ್ನು ನೀಡಿದ್ದಾರೆ.
ಇದೆಲ್ಲದರ ನಡುವೆ ಕನ್ನಡಿಗರನ್ನು ಆರ್‌ಸಿಬಿ ಕಡೆಗಣಿಸಿರುವುದಕ್ಕೆ ರಾಜ್ಯ ಕ್ರಿಕೆಟ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಬೆಂಗಳೂರು ಎನ್ನುವ ಹೆಸರು ಇಟ್ಟ ಮೇಲೆ ಒಬ್ಬನಾದರೂ ಕನ್ನಡಿಗನನ್ನು ಆಡಿಸದಿದ್ದರೆ ಹೇಗೆ? ಅತ್ತ ಕೋಲ್ಕತ ನೈಟ್ ರೈಡರ್ ತಂಡದಲ್ಲಿ ರಾಬಿನ್ ಉತ್ತಪ್ಪ, ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕೆ.ಗೌತಮ್, ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಮನೀಶ್ ಪಾಂಡೆ ಪ್ರಚಂಡ ಆಟ ಪ್ರದರ್ಶಿಸುತ್ತಿದ್ದಾರೆ. ಇವರೆಲ್ಲ ಕನ್ನಡಿಗರಲ್ಲವೆ? ಇಂತಹ ಒಳ್ಳೆಯ ಆಟಗಾರರನ್ನು ಇಟ್ಟುಕೊಂಡು ಕೋಟ್ಯಂತರ ರೂ. ದುಡ್ಡು ಸುರಿದು ವಿದೇಶಿ ಆಟಗಾರರನ್ನು ಆರ್‌ಸಿಬಿ ಖರೀದಿಸಿರುವ ಫ್ರಾಂಚೈಸಿ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.
ಅರ್ಧದಲ್ಲಿ ಸಿಡಿದ ಅಲಿ
ಇಂಗ್ಲೆಂಡ್ ಮೂಲದ ಬ್ಯಾಟ್ಸ್‌ಮನ್ ಮೋಯಿನ್ ಅಲಿ ಮೇಲೆ ಹೆಚ್ಚಿನ ಭರವಸೆ ಇಡಲಾಗಿತ್ತು. ಆದರೆ ಅದೆಲ್ಲವನ್ನು ಆರಂಭದಲ್ಲಿ ಅವರು ನುಚ್ಚು ನೂರು ಮಾಡಿದರು. ಇವರ ಕಳಪೆ ಪ್ರದರ್ಶನ ಕಾರಣದಿಂದ ಬೆಂಗಳೂರು ಆರಂಭದ ಕೆಲವು ಲೀಗ್ ಪಂದ್ಯಗಳನ್ನು ಕಳೆದುಕೊಂಡಿತ್ತು. ಇನ್ನೇನು ಲೀಗ್ ಪಂದ್ಯಗಳು ಮುಕ್ತಾಯವಾಗುತ್ತಿವೆ ಎನ್ನುವಷ್ಟರಲ್ಲಿ ಮೊಯಿನ್ ಅಲಿ ಇದ್ದಕ್ಕಿದ್ದಂತೆ ಫಾರ್ಮ್ಕಂಡುಕೊಂಡರು. ಕೆಲವು ಪಂದ್ಯಗಳಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದರು. ಜತೆಗೆ ಬೌಲಿಂಗ್‌ನಲ್ಲೂ ಪರಿಣಾಮಕಾರಿ ದಾಳಿ ನಡೆಸಿ ಬೆಂಗಳೂರು ತಂಡಕ್ಕೆ ನೆರೆವಾದರು. ಆದರೆ ಮಾಡು ಇಲ್ಲವೆ ಮಡಿ ಪಂದ್ಯ ಬಂದಾಗ ಇವರು ವಿಶ್ವಕಪ್ ಕೂಟಕ್ಕೆ ತಯಾರಿ ನಡೆಸುವುದಕ್ಕಾಗಿ ತಮ್ಮ ತವರಿಗೆ ತೆರಳಿದರು. ಒಂದು ಲೆಕ್ಕದಲ್ಲಿ ಬೆಂಗಳೂರು ಪಾಲಿಗೆ ಇದು ತುಂಬಲಾರದ ನಷ್ಟವಾಯಿತು. ಒಟ್ಟಾರೆ 11 ಪಂದ್ಯ ಆಡಿದ್ದ ಮೊಯಿನ್ ಅಲಿ 220 ರನ್ ಹಾಗೂ 6 ವಿಕೆಟ್ ಕಬಳಿಸಿದರು.
ಕೈಕೊಟ್ಟ ಅಕ್ಷದೀಪ್ ನಾಥ್
ಐಪಿಎಲ್ ಹರಾಜು ನಡೆಯುವ ವೇಳೆ ಬೆಂಗಳೂರು ಫ್ರಾಂಚೈಸಿ ನಿರ್ದಿಷ್ಟವಾಗಿ ಅಕ್ಷದೀಪ್ ನಾಥ್ ರನ್ನು ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿತ್ತು. ಅಕ್ಷದೀಪ್ ದೇಶಿ ಪಂದ್ಯದಲ್ಲಿ ನೀಡಿರುವ ಅಮೋಘ ಪ್ರದರ್ಶನದಿಂದ ಅವರಿಗೆ ಆರ್‌ಸಿಬಿ ಮಣೆ ಹಾಕಿತ್ತು. ಆದರೆ ಅದೆಲ್ಲವನ್ನು ಅಕ್ಷದೀಪ್ ಮಣ್ಣು ಪಾಲು ಮಾಡಿದರು. ಒಟ್ಟು 8 ಪಂದ್ಯ ಆಡಿದ ಅವರು ಕೇವಲ 61 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ನಿರೀಕ್ಷೆ ಹುಸಿಯಾಗಿಸಿದ
ಕಿವೀಸ್ ತಾರೆಯೆರು
ನ್ಯೂಜಿಲೆಂಡ್ ಆಲ್‌ರೌಂಡರ್ ಕಾಲಿನ್ ಗ್ರ್ಯಾನ್‌ಹೋಮ್ ತಮ್ಮ ಖ್ಯಾತಿಗೆ ತಕ್ಕಂತೆ ಆಡಲಿಲ್ಲ. ಒಟ್ಟು 4 ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಅವರು ಕೇವಲ 46 ರನ್ ಅಷ್ಟೇ ಬಾರಿಸಿದ್ದಾರೆ. ನಾಲ್ಕೂ ಪಂದ್ಯ ಗಳಲ್ಲೂ ಯಾವುದೇ ವಿಕೆಟ್ ಪಡೆ ಯಲು ಸಾಧ್ಯವಾಗಲಿಲ್ಲ. ಇನ್ನು ಕಿವೀಸ್‌ನವರೇ ಆದ ವೇಗದ ಬೌಲರ್ ಟಿಮ್ ಸೌದಿಯದ್ದು ಅದೇ ಕಥೆ. 3 ಪಂದ್ಯದಲ್ಲಿ ಅವರು ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ.
ಪಾರ್ಥಿವ್ ಕ್ಲಿಕ್, ಹೆಟ್‌ಮೈರ್ ವೈಫಲ್ಯ
ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಬೆಂಗಳೂರು ತಂಡದ ಪರ ಹೆಚ್ಚು ರನ್‌ಗಳಿಸಿದ 3ನೇ ಬ್ಯಾಟ್ಸ್‌ಮನ್. ಒಟ್ಟು 14 ಪಂದ್ಯ ಆಡಿದ ಅವರು 373 ರನ್ ಬಾರಿಸಿ ಭರವಸೆ ಉಳಿಸಿದರು. ಆದರೆ ಭಾರೀ ನಿರೀಕ್ಷೆ ಮೂಡಿಸಿದ್ದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್‌ಮೈರ್ ಕಳಪೆ ಪ್ರದರ್ಶನ ನೀಡಿ ಆರಂಭದ ಲೀಗ್ ಪಂದ್ಯಗಳನ್ನು ಕಳೆದು ಕೊಂಡರು. ಕೊನೆಯ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಸಿಡಿಯುವ ಮೂಲಕ ಬೆಂಗಳೂರಿಗೆ ಗೆಲುವು ತಂದುಕೊಟ್ಟದ್ದು ಇವರ ಏಕಮಾತ್ರ ಸಾಧನೆ.
ಹಾಗೆ ಬಂದು ಹೀಗೆ ಹೋದ ಸ್ಟೇನ್
ಆರ್‌ಸಿಬಿ ಕಳಪೆ ನಿರ್ವಹಣೆ ಮಿತಿ ಮೀರಿದ ಹಂತದಲ್ಲಿ ಹಠಾತ್ ಆಗಿ ಡೇಲ್ ಸ್ಟೇನ್ ತಂಡ ಕೂಡಿಕೊಂಡರು. ಮೊದಲ 2 ಪಂದ್ಯದಲ್ಲಿ ಒಟ್ಟಾರೆ 4 ವಿಕೆಟ್ ಕಿತ್ತು ಗಮನ ಸೆಳೆದರು. ಎಲ್ಲರ ಚಿತ್ತವು ಸ್ಟೇನ್‌ರತ್ತ ಹರಿದಿತ್ತು. ಆದರೆ ಅಷ್ಟೇ ವೇಗವಾಗಿ ಗಾಯಗೊಂಡು ತಂಡವನ್ನು ಬಿಟ್ಟು ತವರಿಗೆ ತೆರಳಿದರು.
ಚಹಲ್, ಸೈನಿ ಸಮಾಧಾನಕರ ಪ್ರದರ್ಶನ
ಒಂದು ಕಡೆ ಆರ್‌ಸಿಬಿ ಬೌಲರ್‌ಗಳು ಎದುರಾಳಿಗೆ ಸಿಹಿ ತಿಂಡಿಯಂತಾಗಿದ್ದರೆ ಇರುವುದರಲ್ಲಿ ಸ್ಪಿನ್ನರ್ ಯಜುವೇಂದ್ರ ಚಹಲ್ (14 ಪಂದ್ಯ, 18 ವಿಕೆಟ್) ಪರವಾಗಿಲ್ಲ ಎನ್ನುವಂತಹ ಪ್ರದರ್ಶನ ನೀಡಿದರು. ಮಧ್ಯಮ ವೇಗಿ ನವದೀಪ್ ಸೈನಿ (13 ಪಂದ್ಯ, 11 ವಿಕೆಟ್) ಆರ್‌ಸಿಬಿ ಪರ ಶ್ರೇಷ್ಠ ಪ್ರದರ್ಶನ ನೀಡಿದ ಎರಡನೇ ಬೌಲರ್ ಆಗಿದ್ದಾರೆ.
ಸಿಡಿದದ್ದು ಕೊಹ್ಲಿ, ಎಬಿಡಿ ಮಾತ್ರ
ಮೊದಲೇ ಹೇಳಿದಂತೆ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ ಆರ್‌ಸಿಬಿಯ ಪರ ಅದ್ಭುತವಾಗಿ ಸಿಡಿದಿದ್ದಾರೆ. 14 ಪಂದ್ಯ ಆಡಿರುವ ವಿರಾಟ್ ಕೊಹ್ಲಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಒಟ್ಟಾರೆ 464 ರನ್ ಸಿಡಿಸಿರುವ ಬೆಂಗಳೂರು ತಂಡದ ಅಗ್ರ ಬ್ಯಾಟ್ಸ್‌ಮನ್ ಆಗಿದ್ದಾರೆ. ಇನ್ನು 380 ಡಿಗ್ರಿ ಬ್ಯಾಟ್ ಬೀಸಬಲ್ಲ, ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ 13 ಪಂದ್ಯವನ್ನಾಡಿದ್ದಾರೆ. ಒಟ್ಟಾರೆ 442 ರನ್‌ಗಳಿಸಿ ಕೊಹ್ಲಿ ಬಳಿಕ ಅತ್ಯಧಿಕ ರನ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ನೆಗಿ, ಶಿವಂ ವಿಫಲ
ಪವನ್ ನೆಗಿ (7 ಪಂದ್ಯ, 3 ವಿಕೆಟ್), ಶಿವಂ ದುಬೆ (4 ಪಂದ್ಯ, 40 ರನ್) ಕೂಡ ತಮಗೆ ಸಿಕ್ಕಿದ ಚಿನ್ನದ ಅವಕಾಶವನ್ನು ಮಿಸ್ ಮಾಡಿಕೊಂಡರು.
ಉಮೇಶ್, ಸಿರಾಜ್ ದುಬಾರಿ ಬೌಲರ್
ಉಮೇಶ್ ಯಾದವ್‌ಗೆ ಒಂದೊಳ್ಳೆ ಅವಕಾಶ ಸಿಕ್ಕಿತ್ತು. ಎಲ್ಲವನ್ನು ಕಳೆದುಕೊಂಡವರಂತೆ ಬೌಲಿಂಗ್ ನಡೆಸಿ ಟ್ವೀಟರ್‌ನಲ್ಲಿ ಹೆಚ್ಚು ಟೀಕೆಗೆ ಒಳಗಾದರು. 11 ಪಂದ್ಯಗಳಲ್ಲಿ ಕೇವಲ 3 ವಿಕೆಟ್ ಕಿತ್ತು ಅತ್ಯಂತ ಕಳಪೆ ಬೌಲರ್ ಎನಿಸಿಕೊಂಡರು. ಯುವ ವೇಗಿ ಮೊಹಮ್ಮದ್ ಸಿರಾಜ್ 9 ಪಂದ್ಯ ಆಡಿ 7 ವಿಕೆಟ್ ಪಡೆಯಲಷ್ಟೇ ಸಾಧ್ಯವಾಗಿದೆ. ಎದುರಾಳಿ ಬ್ಯಾಟ್ಸ್‌ಮನ್‌ಗಳಿಂದ ಇವರೂ ಕೂಡ ಹೆಚ್ಚು ದಂಡನೆಗೆ ಗುರಿಯಾಗಿದ್ದಾರೆ.
ಕನ್ನಡಿಗ ಪಡಿಕಲ್‌ಗೆ ಸಿಗಲಿಲ್ಲ ಅವಕಾಶ
ಕರ್ನಾಟಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕಲ್ ಬೆಂಗಳೂರು ತಂಡದಲ್ಲಿ ಸ್ಥಾನ ಪಡೆದಾಗ ಒಂದಷ್ಟು ಭರವಸೆಗಳು ಹುಟ್ಟಿಕೊಂಡಿದ್ದವು. ಆದರೆ ಇಡೀ ಲೀಗ್‌ನಲ್ಲಿ ಅವರಿಗೆ ಆಡುವ ಹನ್ನೊಂದರಲ್ಲಿ ಅವಕಾಶವೇ ಸಿಗಲಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ದೇವದತ್ ಪಡಿಕಲ್ ಅವರನ್ನು ತಂಡಕ್ಕೆ ತೆಗೆದುಕೊಳ್ಳಲಾಗಿತ್ತು. ಮೂಲಗಳ ಪ್ರಕಾರ, ಬೆಂಗಳೂರು ತಂಡದಲ್ಲಿ ಕನ್ನಡಿಗ ಇಲ್ಲ ಎನ್ನುವ ಕಾರಣಕ್ಕೆ ಕೇವಲ ಲೆಕ್ಕ ಭರ್ತಿಗೆ ದೇವದತ್ತ ಅವರನ್ನು ತಂಡಕ್ಕೆ ಸೇರಿಸಿಕೊಳ್ಳ ಲಾಗಿತ್ತು ಎನ್ನಲಾಗಿದೆ. ಆರ್‌ಸಿಬಿ ಹೈದರಾಬಾದ್ ವಿರುದ್ಧ ಆಡುವ ಮೊದಲು ಕೂಟದಿಂದ ಹೊರಕ್ಕೆ ಬಿದ್ದಿತ್ತು. ಹಾಗಾಗಿ ಆ ಪಂದ್ಯದಲ್ಲಾ ದರೂ ಪಡೀಕಲ್‌ಗೆ ಕೊಹ್ಲಿ ಅವಕಾಶ ನೀಡಬಹುದಿತ್ತು ಎನ್ನುವುದು ಅಭಿಮಾನಿಗಳ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.