![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 10, 2018, 2:17 PM IST
ಮಹಾಶಿವರಾತ್ರಿಗೆ ಉಳಿದಿರುವುದು ಕೇವಲ ಮೂರೇ ದಿನ. ಈ ನೆಪದಲ್ಲಿ ನಾವು ನಮ್ಮ ಸುತ್ತಲಿರುವ ಶಿವದೇವಾಲಯಕ್ಕೆ ಎಡತಾಕುತ್ತೇವೆ. ಇದಕ್ಕಿಂತ ರುದ್ರನಾಥ ಕೇದಾರಗಳಲ್ಲಿರುವ ಶಿವನ ದರ್ಶನವೇ ಒಂದು ದಿವ್ಯ ಅನುಭವ. ಡಾ .ಹೆಚ್.ಎಸ್ . ಪ್ರೇಮಾ ಅವರು ಶಿವರಾತ್ರಿಯ ನೆಪದಲ್ಲಿ ನಿಮ್ಮನ್ನು ರುದ್ರನಾಥಕ್ಕೆ ಕರೆದುಕೊಂಡು ಹೋಗುತ್ತಾರೆ. ಬನ್ನಿ. ಅವರೊಂದಿಗೆ ಒಂದು ರೌಂಡ್ ಹೊಡೆಯೋಣ…
ದೃಶ್ಯಕ್ಕೆ ಮೀರಿದ ಅನುಭಾವಕ್ಕೆ ಹತ್ತಿರವಾದ ಪಂಚಕೇದಾರಗಳಲ್ಲಿ ರುದ್ರನಾಥವೂ ಒಂದು. ಕೇದಾರ್ ಕಾದಿರಿಸಿದ ಕಾಡಿನಲ್ಲಿರುವ ಕಠಿಣಾತಿ ಕಠಿಣವಾದ ಜಾಗ. ಗೋಪೇಶ್ವರದಲ್ಲಿ ಚಳಿಗಾಲದಲ್ಲಿ ವಾಸ್ತವ್ಯ ಹೂಡುವ ರುಧ್ರನಾಥ ಅಲ್ಲಿಂದ 27 ಕಿ.ಮಿ.ಗಳ ದೂರದ ಪರ್ವತದ ಮೇಲೆ ಉಳಿದ 6 ತಿಂಗಳು ಭಕ್ತರ ಭಕ್ತಿಯನ್ನು ಪರೀಕ್ಷಿಸಲು ನೆಲಸುತ್ತಾನೆ. ಗೋಪೇಶ್ವರದಿಂದ 5 ಕಿ.ಮೀ ದೂರದ ಸಾಗರ್ ನಿಂದ ಮೇಲಕ್ಕೆ 22 ಕಿ.ಮಿಗಳಷ್ಟು ದಾರಿಯೇ ಇಲ್ಲದ ದಾರಿಯಲ್ಲಿ ಊದ್ವìಮುಖ ನಡಿಗೆಯನ್ನುಒಟ್ಟು ಮೂರು ದಿನಗಳಲ್ಲಿ ಮಾಡಬೇಕು. ಇಲ್ಲಿಯದು ಹೆಮ್ಮರಗಳಿಂದ ಮತ್ತು ಒತ್ತೂತ್ತಾದ ಶ್ರೇಣಿಗಳಿಂದ ಕೂಡಿದ ಕಾಡಲ್ಲ. ಆದರೆ ಸುಮಾರು 3 ಸಾವಿರ ಅಡಿಗಳ ಎತ್ತರದಿಂದ ಪ್ರಾರಂಭವಾಗುವ ನಡಿಗೆಯನ್ನು 11,500 ಅಡಿ ಎತ್ತರಕ್ಕೆ ಬರೇ 11 ಕಿ.ಮೀ.ಗಳಲ್ಲಿ ಮುಟ್ಟಬೇಕು. ಅಂದರೆ ಈ ಜಾಗದ ಕಠಿಣತೆಯನ್ನು ಊಹಿಸಿಕೊಳ್ಳಿ. ಅಲ್ಲಲ್ಲಿ 3ಇಲ್ಲ 4ಅಡಿ ಎತ್ತರಕ್ಕೆ ಹೆಜ್ಜೆಗಳನ್ನು ಎತ್ತಿಡಬೇಕಾಗುತ್ತದೆ. ಆವೇಳೆಗಾಗಲೇ ನಾನು 70 ಕಿಮಿಗಳಷ್ಟು ಕಠಿಣವಾದ ಕಾಲ್ನಡಿಗೆಯ ಯಾತ್ರೆ ಮಾಡಿದ್ದೆ. ಈಗ ನನಗೆ ಕುದುರೆ.
ಪತಿ ರಮೇಶ್‌ಗೆ ಗೈಡ್‌ನ ಜೊತೆ ನಡಿಗೆ. ಇಷ್ಟೆಲ್ಲಾ ಕಷ್ಟ ಇದೆ ಎಂದು ಗೊತ್ತಾದ ಮೇಲೂ ಯಾತ್ರಿಗಳು ಅಲ್ಲಿಗೆ ಹೊರಡುತ್ತಾರೆ ಎಂದರೆ ಆ ಜಾಗದ ಮಹಿಮೆಯೇ ಅಂತಾದ್ದು.
ಕೆಳಗಿನ 5 ಮತ್ತು 7 ಸಾವಿರ ಅಡಿಗಳಷ್ಟು ಎತ್ತರದವರೆಗೂ ಕಾಣುವ ಬೇಲಾಳು ಕಾಡು ವಿರಳವಾಗಿದೆ. ಇಲ್ಲಿ ಎಲೆಗಳ ದಟ್ಟಣಿ ಇಲ್ಲದೆ ಬಗೆಬಗೆಯ ಪಕ್ಷಿಗಳನ್ನು ನೋಡಬಹುದು. ದಾರಿಯುದ್ದಕ್ಕೂ ಬಿಳಿಗುಲಾಬಿ ಬಳ್ಳಿಗಳು ಹೂ ಚಪ್ಪರ ಹಾಸಿರುತ್ತವೆ. ಗುಲಾಬಿಯ ಪರಿಮಳವನ್ನು ಆಸ್ವಾದಿಸುತ್ತಾ, ಪಕ್ಷಿಗಳ ಇಂಚರವನ್ನು ಕೇಳುತ್ತಾ, ದಣಿದ ದೇಹಕ್ಕೆ ನಾವೇ ತಯಾರಿಸಿಕೊಂಡ ಎನರ್ಜಿಡ್ರಿಂಕ್ಸ್ ಕುಡಿಯುತ್ತಾ, ಆಕಾಶಕ್ಕೇ ಹೆಜ್ಜೆಗಳನ್ನು ಇಡುತ್ತಾ ಮೇಲೆ ಮೇಲೇ ಹೋಗುವ ಅನುಭವ ಅನನ್ಯ. ನಡು ನಡುವೆ ಗೈಡ್‌ನ ಎಚ್ಚರಿಸುವ ಮಾತು. ಎಚ್ಚರ ಬೇಲಾಳು ಗಿಡಗಳಿರುವ ಕಡೆ ಕರಡಿಗಳು ಜಾಸ್ತಿ. ಬೇಗಬೇಗ ಹೊರಡಿ . ಮಾಜಿ, ಆನೇವಾಲಾ ರಾಸ್ತಾ ದಿವಾರ್ ಜೈಸಾ ಬಹುತ್ ಕಟಿಣ… ಹೈ. ಆಪಕೊ ಓ ದಿವಾರ್ ಬರಾಬರ್ ಆರ್ಧ ಕಿ.ಮೀ. ಚಡನೇ ಕಾ ಹೈ. ಗೋಡಾ ಹುಡಗ ಸವಾರಿ ನಿಯಮಗಳನ್ನು ಹೇಳಿದ-ಕುದುರೆ ನಡೆಯುವ ಹಾದಿ ಎರಡು ಇಲ್ಲ ಮೂರು ಅಡಿ ಎತ್ತರಕ್ಕೆ ಹೆಜ್ಜೆಯನ್ನು ಎತ್ತಿ ಇಡುವಾಗ ಹೆದರಬೇಡಿ. ನಿಮ್ಮ ಭಾರವನ್ನು ಕುದುರೆಯ ತಲೆಯ ಕಡೆ ಬರುವಂತೆ ಬಗ್ಗಿ ಕುಳಿತಿರಿ. ಯಾವುದೇ ಕಾರಣಕ್ಕೂ ಕುದರೆಯ ಜೀನನ್ನು ಕೈಯಿಂದ ಬಿಡಬೇಡಿ.
ಶಿವನ ರುದ್ರ ರೂಪ. ಕಾಲು ನೀಗಿಕೊಳ್ಳಲೂ ಜಾಗವಿಲ್ಲದಂತೆ ನೇರವಾಗಿ ನಿಂತ ಪರ್ವತದ ಗೋಡೆಗಳು. ನೆರಳೇ ಇಲ್ಲದೆ, ಆಕಾಶವೇ ಚಾವಣಿಯಾದಾಗ ನಿರ್ದಯೆಯಿಂದ ಚುಚ್ಚುವ ಅಲ್ಟ್ರಾ ವಾಯ್ಲೆಟ್ ಕಿರಣಗಳು. ಆಮ್ಲಜನಕದ ಕೊರತೆ. ಕೊರೆಯುವ ಚಳಿ! ಬಂಡೆಕಲ್ಲುಗಳ ನಡುವೆ, ಮರಳುಮರಳು ಮಣ್ಣು. ಹೆಜ್ಜೆ ತಪ್ಪಿದರೆ, ಬಂಡೆಕಲ್ಲುಗಳಿಂದ ಆವೃತವಾದ ತಳ ಕಾಣದ ಪ್ರಪಾತದಲ್ಲಿ ಬಿದ್ದು ಜಜ್ಜಿ ಹೋಗುವ ನಾವು. ಇಷೆಲ್ಲಾ ನಡೆದ ಮೇಲೆ ಕಲ್ಪನೆಗೂ ಮೀರಿದ ಮನೆಯ ಮಾಡಿನಂತಿರುವ ಪನಾರ… ಎಂಬ ಬುಗಿಯಾಲಿಗೆ ಬಂದು ನಿಲ್ಲುತ್ತೇವೆ. ಅದುವರೆಗೂ ಎಲ್ಲಿಯೋ ಇದ್ದ ಹಿಮಚ್ಛಾದಿತ ಪರ್ವತಶ್ರೇಣಿಗಳ ಸಾಲುಸಾಲೇ ನಮ್ಮನ್ನು ಸ್ವಾಗತಿಸಲು ನಿಂತುಕೊಳ್ಳುತ್ತದೆ. ಚೌಕಾಂಬ, ಕೇದಾರ್, ನಂದಾದೇವಿ, ಹಾಥಿ, ತ್ರಿಶೂಲ್ ಹೀಗೆ ಹತ್ತು ಹಲವಾರು ಭವ್ಯ ಶ್ರೇಣಿಗಳ ಅಮೋಘ ದರ್ಶನ. ಸದಾ ಸರ್ವದ ಗ್ಲೆàಶಿಯರ್‌ಗಳ ಹಿಮದ ಕಿರೀಟ ತೊಟ್ಟ ಪರ್ವತಗಳನ್ನು ಹತ್ತಿರದಿಂದ ನೋಡುವ ಪುಣ್ಯ. ಮಾಡಿನ ಒಂದು ಭಾಗ ಜಾರುಬಂಡೆಯಂತೆ ಆಗಿ ಒಂದು ಕಣಿವೆಯಲ್ಲಿ ಮುಗಿಯುತ್ತದೆ. ಕಣಿವೆಯಲ್ಲಿ ಸೂಜಿ ಹಾಕಲೂ ಜಾಗವಿಲ್ಲದಂತೆ ನೀಲಿ ಮತ್ತು ಬಿಳಿ ಬುರಾನ್ಸ್ ಹೂಗಳ ದಟ್ಟ ತೋಪು. ದಣಿದಿದ್ದ ನಾನು ಹುಲ್ಲು ಹಾಸಿಗೆ ಬೆನ್ನು ಹಾಕಿ ಹೊಳೆವ ಶಿಖರಗಳನ್ನು ಎಷ್ಟು ಹೊತ್ತು ನೋಡುತ್ತಿದ್ದೆನೊ; ಎಲ್ಲವೂ ಅರಿವಿಗೆ ಬರುವ ಮೊದಲೇ ತ್ರಿಶೂಲ… ಪರ್ವತದ ಹಿಂಭಾಗದಿಂದ ಪೂರ್ಣಚಂದ್ರ ಒಮ್ಮೆಗೆ ಮೇಲೇರಿಬಂದ.
ಯೆ ಕೌನ್ ಚಿತ್ರಕಾರ್ ಹೈ
ಕಣ್ಣುಗಳಿಗೆ ಹೀಗೊಂದು ಹಬ್ಬವಾಗುವ ಕಲ್ಪನೆಯೂ ನನಗಿರಲಿಲ್ಲ. ಪರ್ವತಗಳ ಬೆನ್ನೇರಿ ನೀಲ ನಭದಲ್ಲಿ ತೇಲುತ್ತಿದ್ದ ಪೂರ್ಣಚಂದಿರ. ಸುತ್ತ ಮಿಸುಕಾಡದೆ ಮಲಗಿದ್ದ ಕುರಿಗಳ ಹಿಂಡು, ನಡುವೆ ನಾನು, ಹಿಮಾವೃತವಾದ ನಂದಾದೇವಿ, ತ್ರಿಶೂಲ,ಚೌಕಾಂಬ. . . ಎಲ್ಲವೂ ಬೆಳದಿಂಗಳಿನಲ್ಲಿ ಕಲಸಿ ಹೋಗಿತ್ತು. ಈ ಸ್ಥಬ್ಧ ಚಿತ್ರವನ್ನು ಬಿಡಿಸಿದವರಾರು? ಜಟೆಯಲ್ಲಿ ಚಂದ್ರಮನನ್ನು ಮುಡಿದ, ಸೃಷ್ಟಿ, ಸ್ಥಿತಿ, ಲಯಗಳ ಮೂಲವಾದ ಪರಬ್ರಹ್ಮನೇ ಆದ ಶಿವ ಪ್ರಜ್ವಲಿಸುತ್ತಾ ನೀಲಾಕಾಶಾದಲ್ಲಿ ನಿಂತಿದ್ದ
ಅತಿಥಿದೇವೂ ಭವ – ಅಲ್ಲಿದ್ದ ಒಂದು ಮುರಿದುಬಿದ್ದ ಆರ್ಮಿ ಬಂಕರು ನಮ್ಮ ಸಪ್ತತಾರಾ ಹೋಟೆಲ…. ಒಣಹುಲ್ಲಿನ ಮೇಲೆ ಹಾಸಿದ್ದ ಕುರಿಯ ಬೆಚ್ಚನೆಯ ಕಂಬಳಿ ಮೇಲೆ ನಿದ್ದೆ ಚೀಲದಲ್ಲಿ ತೂರಿ ಮಲಗಲು ಅನುವು ಮಾಡಿದ್ದ ಏಕೈಕ ಕೊಠಡಿ. ಅದಕ್ಕೆ ಒಂದು ಬಾಗಿಲೂ ಸಹ ಇತ್ತು. ನಡುರಾತ್ರಿಯಲ್ಲಿ ಬಾಗಿಲಿಗೆ ಅಡ್ಡಲಾಗಿ ಇಟ್ಟಿದ್ದ ನಮ್ಮ ಚೀಲಗಳನ್ನೂ ಯಾರೊ ದೂಡುತ್ತಿರುವಂತೆ ಆಯಿತು.
ಧೈರ್ಯವಹಿಸಿ ಟಾರ್ಚ್‌ಹಾಕಿ ನೋಡಿದರೆ ಕುರಿಗಳು! ನಮಗೆ ಹೆದರದೆ, ಕರೆಯದೇ ಬಂದ ಅತಿಥಿಗಳು. ಹೊರಗಿನ ಹೆಪ್ಪುಗಟ್ಟಿದ ಚಳಿಯನ್ನು ತಾಳದೆ ಒಳಗೆ ಬಂದ ಕುರಿಗಳಿಗೆ ಅಲ್ಲೇ ಮೂಲೆಯಲ್ಲಿ ಒಂದಿಷ್ಟು ಜಾಗವನ್ನೂ ಹಂಚಿದ್ದಾಯಿತು.
ಮುರುದಿನದ 8 ಕಿ.ಮೀ. ಅನ್ನು ಕಣಿವೆಯ ತುತ್ತ ತುದಿಯ ಅಂಚಿನ ಮೇಲೆ ನಡೆದರೆ ದೇಗುಲಕ್ಕೆ ದಾರಿ. ಬೋಗುಣಿಯಂತಿದ್ದ ಕಣಿವೆಯ ಹುಲ್ಲೆಲ್ಲಾ ಮೇತಿಂಗಳ ಬಿಸಿಲಿಗೆ ಒಣಗಿ ಹೊಂಬಣ್ಣಕ್ಕೆ ತಿರುಗಿ ಗಾಳಿಗೆ ತೊಯ್ದಾಡುತ್ತಿತ್ತು. ಬಿಸಿಲಿಗೆ ಬೆಂದ ಹುಲ್ಲಿನ ಬೀಜಗಳ ಹಿತವಾದ ಘಮಲು. ಕುದುರೆಗೂ ಮುಂದೆ ಹೆಜ್ಜೆ ಇಡಲು ಆಸೆ ಇಲ್ಲ. ಅಲ್ಲಲ್ಲೇ ನಿಂತು ಹುಲ್ಲಿಗೆ ಬಾಯಿಹಾಕುವ ಆತುರ. ಗೋಡಾ ಹುಡುಗನ ಹೇ ಹೋ ಎಂಬ ಕೂಗಿಗೂ ಜಗ್ಗದ ಮೊಂಡು ಕುದುರೆ. ಅದರ ಊಟ ಅದು ತಿನ್ನಲಿ ಬಿಡು ಎಂದದಕ್ಕೇ ಹುಡುಗ ಹೇಳಿದ್ದು ಅದನ್ನು ಹಾಗೆ ಬಿಟ್ಟರೆ ನೀವಿವತ್ತು ರುಧ್ರನಾಥ್‌ಗೆ ಹೋಗೋಲ್ಲ ಅಷ್ಟೇ. ಕಣಿವೆಯೆ ತಳಭಾಗವೆಲ್ಲಾ ನೀಲಿ ಬುರಾನ್ಸ್ ಮೇಲೆ ಬಂಗಾರದ ಹುಲ್ಲಿನ ಹಾಸು. ನಡುವೆ ಅಲ್ಲಲ್ಲಿ ಮಂಜಿನ ರಾಶಿ. ಇದ್ದಕ್ಕಿದ್ದಂತೆ ಹೋಗುವ ದಾರಿಗೆ ಅಡ್ಡಲಾಗಿ ಇಟ್ಟಿದ್ದ ಒಂದು ಮರದ ವಾಡೆ. ತಲೆ ಬಗ್ಗಿಸಿಯೇ ಹೋಗಬೇಕು. ಇದುವೇ ಪಿತೃಧಾರಾ. ಹುಡುಗ ಶೂ ಕಳಚಿ ನೆಲಕ್ಕೆ ಹಣೆ ಮುಟ್ಟಿಸಿ ನಮಸ್ಕರಿಸಿದ. “ಮಾಜೀ, ಬಗ್ಗಿ ನೋಡಿ. ಅಲ್ಲಿ ಪ್ರಪಾತದ ತಳದಲ್ಲಿ ಸರೋವರ ಕಾಣಲ್ವಾ? ಅಲ್ಲಿಯೇ ನಮ್ಮೆಲ್ಲ ಸತ್ತ ಹಿರಿಯರ ಪಿಂಡ ಪ್ರದಾನ ಮಾಡಿ ತರ್ಪಣ ಬಿಡುವ ಜಾಗ. ಇದು ಪಿತೃಗಳ ಆವಾಸಸ್ಥಾನ. ಇಲ್ಲೆಲ್ಲಾ ಸ್ವರ್ಗ ಸೇರಲು ತವಕಿಸುತ್ತಿರುವ ಸೂಕ್ಷ್ಮ ಜೀವಗಳು ಓಡಾಡುತ್ತಾ ಇರತ್ತವೆ.’ ನನ್ನ ಬೆನ್ನು ಹುರಿಯಲ್ಲಿ ಛಳ್ ಎಂಬ ಛಳುಕು. ಮುಂದೆ ಹೋದಂತೆ ಬೋಗುಣಿಯ ಹೊನ್ನ ಬಣ್ಣದ ಹಲ್ಲಿನ ನಡುವೆ ಅಲ್ಲಲ್ಲಿ ಕರಿಗಪ್ಪು ಬಣ್ಣದ ಶಿಲಾವಿನ್ಯಾಸಗಳು ಇನ್ನೇನು ಬಿದ್ದೇ ಬಿಡುವುದೇನೊ ಎಂಬಂತೆ ಮುಂದಕ್ಕೆ ಚಾಚಿಕೊಂಡು ನಿಂತಿತ್ತು. ಕಣಿವೆ ತುಂಬಾ ಆಳವಾಗಿ ಇದ್ದದ್ದರಿಂದ ಗಾಳಿ ಮೇಲೆ ಸಂಚರಿಸದೆ ಸ್ಥಬ್ಧವಾಗಿ ನಿಶ್ಚಲವಾಗಿತ್ತು. ನೀರವತೆಯ ಅನುಭವ. ನಿಶಬ್ಧಗಳಾಚಿಗಿನ ಶಬ್ಧಗಳನ್ನು ಆಲಿಸುವ, ಮೌನವನ್ನೂ ಮೀರಿದ ಗಾಢತೆಯನ್ನು ಅನುಭವಿಸುವ ಪರಿ. ವಿಚಿತ್ರ ಭಾಸ. ದಾರಿ ಇನ್ನೆಷ್ಟು ದೂರ, ಎಷ್ಟು ಸಮಯ, ಎಷ್ಟು ಕಠಿಣ ಎಂಬ ಯೋಚನೆಗಳಿಲ್ಲದ ನಿರುಮ್ಮಳವಾದ ಚಿತ್ತ.
ರುದ್ರನ ದರ್ಶನ
ಪ್ರಪಾತದ ಅಂಚಿನಲ್ಲಿ ಪ್ರದಕ್ಷಿಣೆ ಹಾಕಲೂ ಸಾಧ್ಯವಿಲ್ಲದಂಥ ಕೋಡುಗಳಲ್ಲಿನ ಮೇಲೆ ಇಟ್ಟಿಗೆಯಲ್ಲಿ ಕಟ್ಟಿದ ದೇಗುಲದಲ್ಲಿ ಶಿವನ ಪ್ರತಿರೂಪ. ದೇಗುಲ ಬಾಗಿಲು ಹಾಕಿತ್ತು. ತುಸು ದೂರದಲ್ಲಿ ನಿಂತಿದ್ದ ಒಂದಿಷ್ಟು ಜನರ ಗುಜುಗುಜು. ಅರ್ಚಕರು ಯಾಕೊ ತುಂಬಾ ದುಗುಡ, ಕೋಪ, ನಿರಾಸೆಗಳ ಭಾವದಲ್ಲಿದ್ದಂತೆ ಕಂಡರು. ಯಾವ ಆಸೆ ಆಕಾಂಕ್ಷೆಗಳನ್ನೂ ಇಟ್ಟುಕೊಳ್ಳದ, ಆ ಪರಿಸರ ಹೇಗಿದೆಯೊ ಹಾಗೆ ಉಳಿಸಿಕೊಂಡು ಬರುತ್ತಿರುವ ಇಂತಹ ಅರ್ಚಕರನ್ನು ಹೆದರಿಸಿ ಅಲ್ಲಿನ ಅಮೂಲ್ಯವಾದ ಮೂಲಿಕೆಗಳನ್ನೂ ಹಾಗೂ ಕದ್ದು ಮುಚ್ಚಿ ಹೋಟಲನ್ನು ನಡೆಸಲು ಒಂದು ಗುಂಪು ಪ್ರಯತ್ನಿಸುತ್ತಿರುವುದಾಗಿ ನಮ್ಮ ಗೈಡ್ ಹೇಳಿದ. ಕಡೆಗೆ ನಾವು ದೂರದ ಬೆಂಗಳೂರಿನ ಯಾತ್ರಿಗಳೆಂದು, ಯಾವುದೇ ಎನ್.ಜಿ.ಓ ಪ್ರತಿನಿಧಿಗಳಲ್ಲವೆಂದು ಖಚಿತವಾದ ಮೇಲೆ ಬಾಗಿಲು ತೆರದು, ಅಲ್ಲೇ ಪ್ರಪಾತದಲ್ಲಿ ಬೆಳೆದಿದ್ದ ಒಂದೆರಡು ಹೂಗಳನ್ನು ಕಿತ್ತು ತರುವಂತೆ ಹೇಳಿದರು. ಸುತ್ತಲೂ ಬಿಳಿಹೂಗಳ ರಾಶಿ. ಕೈಹಾಕಿ ಕೊಯ್ದರೆ ಹೂವಿನಿಂದ ಬಂದ ಸುಗಂಧ ಬೆಳ್ಳುಳ್ಳಿವಾಸನೆಯಂತಿತ್ತು. ಬೆಳ್ಳಿಯ ಮುಖವಾಡ ಹಾಕಿದ ದೊಡ್ಡ ದೊಡ್ಡ ಕಂಗಳ ಶಿವ ನಮ್ಮ ಒಳಗನ್ನು ನೋಡುತ್ತಿರುವಂತೆ ಅನಿಸುತ್ತದೆ. ಶಿವನಿಗೆ ಆರತಿ ಬೆಳಗಿ ಅರ್ಚಕರಿಗೆ ದಕ್ಷಿಣೆ ಕೊಟ್ಟಾಗ ಎಂಥದೂ ಸಮಾಧಾನ. ಎಷ್ಟೆಷ್ಟೋ ಶತಮಾನಗಳಿಂದ ಹೀಗೆ ಇರುವ, ಇನ್ನೆಷ್ಟೋ ಶತಮಾನಗಳು ಕಳೆದರೂ ಹೀಗೆ ಇರುವ, ಅಜಂ- ಇದ್ದಂಗೇ ಇರುವ, ಏನನನ್ನೂ ಬಿಡಿಸಲಾಗದ, ಮತ್ತೇನನ್ನೂ ಸೇರಿಸಲಾಗದ ಒಂದು ಕಲ್ಲಿನ ಮೂರ್ತಿಯೇ ಇವನು. ನಿರ್ವಿಕಲ್ಪ, ನಿರಾಕಾರ, ನಿರಾನಂದಮಾನಂದ ಅದೈತರೂಪಂ ರುದ್ರನಾಥಾ. ಕಾಡು ಕಡಿದು ದೇಗುಲಕ್ಕೆ ಹೋಗಲು ರಾಜಮಾರ್ಗಗಳನ್ನು ಮಾಡದೆ, ಹೆಲಿಕಾಪ್ಟರ್ ಹಾಕದೆ ರುಧ್ರನಾಥಾ ನೀನು ಹೇಗಿದ್ದೀಯೋ ಹಾಗೇ ಇರುವಂತೆ ಈ ಮನುಷ್ಯರು ನಿನ್ನನ್ನು ಬಿಟ್ಟಿರಲಿ ಎಂದು ಆಶಿಸುತ್ತಾ ಕೆಳಗಿಳಿದೆವು.
ಡಾ.H.S.ಪ್ರೇಮಾ.
You seem to have an Ad Blocker on.
To continue reading, please turn it off or whitelist Udayavani.