ವರ್ಷಕ್ಕೊಂದು ಬಾರಿ ಕಾವೇರಿಗೆ ಬಾಗಿನ ಕೊಟ್ಟರೆ ಸಾಕೇ?
Team Udayavani, Sep 2, 2017, 1:35 PM IST
ಜನರ ಮನಸ್ಸಿನಲ್ಲಿ ಹೂಳೆತ್ತೆವು ಮೂಲಕ ನದಿಗಳನ್ನು ಉಳಿಸಲು ಶ್ರೀ ಜಗ್ಗಿವಾಸುದೇವ್- ಸದ್ಗುರು 16 ರ್ಯಾಲಿ ಹಮ್ಮಿಕೊಂಡಿದ್ದಾರೆ. ಸೆ.8ರಂದು ಮೈಸೂರಿನಲ್ಲಿ, 9ರಂದು ಬೆಂಗಳೂರಿನಲ್ಲಿ ರ್ಯಾಲಿ ಜರುಗಲಿದೆ. ಈ ಹಿನ್ನೆಲೆಯಲ್ಲಿ ನೀರು ನಮಗೆ ಎಷ್ಟು ಮುಖ್ಯ ಅನ್ನೋದನ್ನು ಇಲ್ಲಿ ವಿವರಿಸಿದ್ದಾರೆ.
ಇವತ್ತಿನ ಪರಿಸ್ಥಿತಿ ಹೇಗಿದೆ ಎಂದರೆ, ಮುಂದಿನ ಜನಾಂಗಕ್ಕೆ ನಾವು ಆಸ್ತಿ ಮಾಡಬೇಕಿಲ್ಲ. ನೀರು ಕೊಟ್ಟರೆ ಸಾಕು.
ನಮ್ಮ ನರ್ಮದಾ ಶೇ.60ರಷ್ಟು ಬತ್ತಿದೆ. ಕೃಷ್ಣ ಶೇ. 60ರಷ್ಟು. ಕಾವೇರಿ ಶೇ.40ರಷ್ಟು. ಎಲ್ಲದರಲ್ಲೂ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ. ನಮ್ಮ ದೇಹ ಶೇ.80ರಷ್ಟು ನೀರಿನಿಂದ ಆವೃತ್ತವಾಗಿದೆ. ಆದರೆ ನಮಗೇ ನೀರಿಲ್ಲದ ಪರಿಸ್ಥಿತಿ ಎದುರಾಗಿದೆ. ನಮ್ಮ ಜನಸಂಖ್ಯೆ , ಅಗತ್ಯಗಳು ಏರುತ್ತಿವೆ. ಹಾಗಾದರೆ ನೀರಿನ ಮೂಲ ಎಲ್ಲಿದೆ, ನಾವು ಅದಕ್ಕೆ ಏನು ಮಾಡಿದ್ದೇವೆ? ಈ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ.
ನಮ್ಮ ಪ್ರಮುಖ ನಗರಗಳಲ್ಲಿರುವ 20 ವರ್ಷದ ಯುವಕರಲ್ಲಿ ಶೇ. 80ರಷ್ಟು ಜನ ನದಿಯನ್ನೇ ನೋಡಿಲ್ಲ. ನೀರು ಬರುವುದೇ ನಲ್ಲಿಯಿಂದ ಅಂತ ಅವರೆಲ್ಲಾ ತಿಳಿದಿದ್ದಾರೆ.
ಅಪಾಯದ ಸಂಕೇತ ವೆಂದರೆ ನಮ್ಮಲ್ಲಿ ಕಾಡುಗಳಿಗೆ ನೀರನ್ನು ಹಿಡಿಯುವ ತಾಕತ್ತು ಕಡಿಮೆಯಾಗುತ್ತಿದೆ. ಈ ಕಾರಣದಿಂದ ನದಿಗಳೂ ಕೂಡ ಸೀಸನಲ್ ಆಗಿ ಹರಿಯುತ್ತದೆ. ಕನ್ನಡ ನಾಡಿನ ಜೀವನದಿ ಎಂದೇ ಹೆಸರಾಗಿದ್ದ ಕಾವೇರಿ ಕೂಡ ಮಳೆ ಬಂದಾಗ ಮಾತ್ರ ಹರಿಯುವ ಸ್ಥಿತಿಗೆ ಬಂದು ಬಿಟ್ಟಿದೆ. ವರ್ಷಕ್ಕೆ ಮೂರೂವರೆ ತಿಂಗಳು ಕಾವೇರಿ ಸಮುದ್ರಕ್ಕೆ ಹರಿಯುವುದಿಲ್ಲ. ಕಾಡಿಲ್ಲ, ಸಣ್ಣ ಕ್ಯಾಚ್‌ಮೆಂಟ್ ಏರಿಯಾದಿಂದ ವರ್ಷ ಪೂರ್ತಿ ಕಾವೇರಿನ ಹರಿಸೋಕೆ ಆಗುತ್ತದೆಯೇ? ಯೋಚನೆ ಮಾಡಿ.
ವಿಶ್ವದ 10 ನದಿಗಳ ಪಟ್ಟಿಯಲ್ಲಿ ನಮ್ಮ ಸಿಂಧು-ಗಂಗಾ ನದಿಗಳು ಸೇರಿವೆ. ನಿಮಗೆ ಒಂದು ಘಟನೆ ಹೇಳ್ತೀನಿ. ಉಜ್ಜಯನಿಯಲ್ಲಿ ನದಿ ಬರಿದಾಗಿದ್ದರಿಂದ ಕಳೆದ ವರ್ಷದ ಕುಂಬಮೇಳಕ್ಕೆ ನರ್ಮದೆಯಿಂದ ನೀರನ್ನು ಹರಿಸುವ ಮೂಲಕ ಕೃತಕ ನದಿಯನ್ನು ನಿರ್ಮಾಣ ಮಾಡಿದ್ದರು. ಇದು ನಮ್ಮ ಭವಿಷ್ಯದ ಎಚ್ಚರಿಕೆ ಗಂಟೆ ಅಂತಲೇ ಪರಿಗಣಿಸಬೇಕು.
ನದಿ ಬರಡಾಗೋದು ಅಂದರೆ ಅದು ನಮ್ಮ ಮಾನವ ಕುಲದ ವಿನಾಶದ ಸೂಚನೆ ಅಂತ ತಿಳಿಯಬೇಕು.
ನಮ್ಮಲ್ಲಿ ಮೂಲತಃ ಎರಡು ರೀತಿಯ ನದಿಗಳಿವೆ. ಹಿಮಮೂಲದ ನದಿಗಳು ಮತ್ತು ಅರಣ್ಯ ಮೂಲದ ನದಿಗಳು. ಭೂಮಿಯ ತಾಪಮಾನ ಏರಿಕೆಯು ಒಂದು ಜಾಗತಿಕ ವಿದ್ಯಮಾನವಾದ್ದರಿಂದ ಹಿಮಮೂಲ ನದಿಗಳು ಪರಿಸ್ಥಿತಿ ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿಲ್ಲ. ವರ್ಷ ಪೂರ್ತಿ ಹಿಮಚ್ಛಾದಿತವಾಗಿರುತ್ತಿದ್ದ ಹಿಮಾಲಯ ಶ್ರೇಣಿಯ ಪರ್ವತಗಳು ಈಗ ಬೋಳಾಗತೊಡಗಿವೆ. ಗಂಗಾ ಹಾಗೂ ಭಾಗೀರಥಿ ನದಿಗಳ ಉಗಮ ಸ್ಥಾನದವಾದ ಗೋಮುಖವೆಂದು ಕರೆಸಿಕೊಳ್ಳುವ ನೀರ್ಗಲ್ಲು ಬಂಡೆ ಕಳೆದ ಮೂರು ದಶಕಗಳಲ್ಲಿ ಒಂದು ಕಿಲೋಮೀಟರಿನಷ್ಟು ಹಿಂದೆ ಸರಿದಿದೆ. ಕರಗುತ್ತಿರುವ ನೀರ್ಗಲ್ಲುಗಳು, ಬೋಳಾಗುತ್ತಿರುವ ಹಿಮಾಲಯ ಪರ್ವತಗಳು ಬದಲಾದ ಹವಾಮಾನದ ಎಚ್ಚರಿಕೆಯಾಗಿ ಕಾಣುತ್ತಿವೆ. ಇದನ್ನು ತೆರೆದ ಕಣ್ಣುಗಳಲ್ಲಿ ನೋಡಬೇಕಷ್ಟೆ.
ನಾವೆಲ್ಲ ಎಷ್ಟು ತಪ್ಪು ಮಾಡುತ್ತಿದ್ದೇವೆ ಗೊತ್ತಾ?
ನದಿ ಪಾತ್ರದುದ್ದಕ್ಕೂ ಅಲ್ಲಲ್ಲಿ ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ಹಲವು ರಾಜ್ಯಗಳಲ್ಲಿ ನದಿಗಳನ್ನು ಕೆರೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇನ್ನೂ ಹಲವು ಕಡೆ ನದಿಗಳು ಹರಿಯುವ ಜಾಗಗಳಲ್ಲಿ ಗುಂಡಿಗಳನ್ನು ತೋಡಿ ಅದರಲ್ಲಿ ಕಲ್ಲು ಬಂಡೆಗಳನ್ನು ತುಂಬಲಾಗುತ್ತಿದೆ. ಈ ಮೂಲಕ ನದಿಯ ನೀರು ಅಂತರ್ಜಲವನ್ನು ಹೆಚ್ಚಿಸಿ ಸುತ್ತಲಿರುವ ಬಾವಿಗಳಿಗೆ ಮರುಜೀವ ತುಂಬುತ್ತಿವೆ. ಇಂಥ ಮಾರ್ಗಗಳು ನದಿ ನೀರನ್ನು ದುರ್ಬಳಕೆ ಮಾಡಿಕೊಳ್ಳಲು ಸಹಕಾರಿಯಾಗಿವೆಯೇ ಹೊರತು ಅವುಗಳನ್ನು ರಕ್ಷಿಸುವುದಕ್ಕಲ್ಲ. ಈ ಮಾರ್ಗಗಳು ನದಿಗಳನ್ನು ವಿನಾಶದಂಚಿಗೆ ಕೊಂಡೊಯ್ಯುವುದು ನಿಶ್ಚಿತ.
ನಮ್ಮ ಸಂಸೃತಿಯಲ್ಲಿ ನದಿಗಳನ್ನು ಕೇವಲ ಜಲ ಮೂಲಗಳೆಂದಷ್ಟೇ ಭಾವಿಸಿರಲಿಲ್ಲ. ನದಿಗಳನ್ನು ನಾವು ಜೀವ ನೀಡುವ ದೇವತೆಗಳಂತೆ ಕಾಣುವೆವು. ತರ್ಕಕ್ಕೆ ಅಂಟಿಕೊಂಡಿರುವ ಮನಸ್ಸಿಗೆ ನದಿಯನ್ನು ದೇವರ ಪಟ್ಟಕ್ಕೇರಿಸುವುದು ಹುಚ್ಚತನವೆನಿಸಬಹುದು. ಇಂಥಹ ಮನಸ್ಸಿನ ವ್ಯಕ್ತಿಯನ್ನು ನೀರು ಕೊಡದೆ ಮೂರು ದಿನ ಕೊಠಡಿಯೊಂದರಲ್ಲಿ ಕೂಡಿಹಾಕಿ ಮೂರನೆ ದಿನ ಒಂದು ಲೋಟ ನೀರನ್ನು ತೋರಿಸಿದರೆ ಅವನು ಆ ಒಂದು ಲೋಟ ನೀರಿಗೆ ನಮಸ್ಕರಿಸುತ್ತಾನೆ. ಒಂದಿಡೀ ನದಿಯಾಗಲ್ಲ. ಕೇವಲ ಒಂದು ಲೋಟ ನೀರಿಗೆ. ನೀರು, ಅನ್ನ, ಗಾಳಿ, ಮತ್ತು ಭೂಮಿ ಕೇವಲ ವ್ಯಾಪಾರದ ಸರಕುಗಳಲ್ಲ. ನಾವು ನದಿಗಳನ್ನು ಎಂದಿಗೂ ಕೇವಲ ಭೌಗೋಳಿಕ ಅಸ್ವಿತ್ವವೆಂದು ಪರಿಗಣಿಸಿಲ್ಲ. ನದಿಗಳನ್ನು ನಾವು ಜೀವವೀಯುವ ಅಮೃತದಂತೆ ಕಂಡೆವು. ಏಕೆಂದರೆ ನಮ್ಮ ದೇಹವು ಶೇ. 70 ನೀರಿನಿಂದಾದದ್ದು. ನಾವು ಎಲ್ಲಿಯಾದರೂ ಜೀವದ ಅಸ್ವಿತ್ವವಿದೆಯೇ ಎಂದು ಅರಸುವಾಗ ಮೊದಲು ಹುಡುಕುವುದೇ ನೀರನ್ನು.
ನೀರಿಗೆ ಅಗಾಧವಾದ ಸ್ಮರಣಶಕ್ತಿ ಇರುವುದನ್ನು ನಾವು ವೈಜ್ಞಾನಿಕ ಪುರಾವೆಗಳ ಮೂಲಕ ಕಂಡುಕೊಳ್ಳಬಹುದು. ನಿಮ್ಮ ಅಲೋಚನೆಗಳ ಮೂಲಕ ನೀರಿನ ರಚನೆಯಲ್ಲಿ ಬದಲಾವಣೆಯನ್ನು ತರಬಹುದು. ನಮ್ಮ ಸಂಸ್ಕೃತಿಯಲ್ಲಿ ನಾವಿದನ್ನು ಎಂದೋ ಕಂಡುಕೊಂಡಿದ್ದೇನೆ.
ನೈಸರ್ಗಿಕವಾಗಿ ಹರಿಯುವ ನದಿಯು ತನ್ನದೇ ಆದ ವಿಶಿಷ್ಟ ಜೈವಿಕ ಪರಿಸರವನ್ನು ಹೊಂದಿರುತ್ತದೆ. ಮಳೆಕಾಡುಗಳಿಂದ ಭೂಮಿಯು ಆವೃತವಾಗಿದ್ದ ಸಂದರ್ಭಗಳಲ್ಲಿ ನೀರು ಸಹಜವಾಗಿ ನೆಲದೊಳಗೆ ಇಂಗಿ ಹಳ್ಳ, ಕೊಳ್ಳ ನದಿಗಳು ಬೋರ್ಗರೆಯುತ್ತಿದ್ದವು. ನದೀ ಪಾತ್ರದ ಸುತ್ತಲಿನ ಮಣ್ಣು ತೇವಾಂಶದಿಂದ ಕೂಡಿರುವುದು ಒಂದು ನದಿಗೆ ಅತಂÂತ ಅವಶ್ಯಕ. ನಾವಿಂದು ನಮಗೆ ಲಭ್ಯವಿರುವ ನೆಲವನ್ನೆಲ್ಲಾ ಅಗೆಯಲು ಹೊರಟ್ಟಿದ್ದೇವೆ. ಮರಗಳನ್ನು ಕಡಿಯುವುದು, ಪ್ರಾಣಿಗಳನ್ನು ಕೊಲ್ಲುವುದರ ಮೂಲಕ ಮಣ್ಣಿಗೆ ಅವಶ್ಯವಾದ ಮರುಪೂರಣವನ್ನು ನಿಲ್ಲಿಸಿಬಿಟ್ಟಿದ್ದೇವೆ.
ನಮ್ಮ ರೈತರು 130 ಕೋಟಿ ಜನರಿಗೆ ಆಹಾರ ಒದಗಿಸುತ್ತಿರುವುದು ನಾವು ಹೆಮ್ಮೆ ಪಡಬಹುದಾದ ಬಹು ದೊಡ್ಡ ಸಾಧನೆ. ಆದರೆ ಈ ಸಂತೋಷ ಬಹುಕಾಲ ಉಳಿಯದು. ನಾವು ನಮ್ಮ ನೆಲ, ಜಲ ಸಂಪನ್ಮೂಲಗಳನ್ನು ತೀವ್ರವಾಗಿ ಹಾಳುಗೆಡವುತ್ತಿದ್ದೇವೆ. 1947ರಿಂದ ಈ ತನಕ ಸುಮಾರು ನಾಲ್ಕು ಪಟ್ಟು ಜನಸಂಖ್ಯೆ ಹೆಚ್ಚಾಗಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗಿದೆ. ಆದರೆ ನದಿ, ನೀರು ಮಾತ್ರ ಹೆಚ್ಚಾಗಿಲ್ಲ.
ಹಾಗೆ ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೇವರೆಂದು ಪೂಜಿಸಲ್ಪಡುವ ರಾಮ, ಕೃಷ್ಣ, ಶಿವ ಇವರೆಲ್ಲರೂ ಒಂದಾನೊಂದು ಕಾಲದಲ್ಲಿ ಈ ಭೂಮಿಯ ಮೇಲೆ ನಡೆದಾಡಿದವರು. ಮನುಷ್ಯರಾಗಿ ನಾವು ಅನುಭವಿಸುವಂತಹ ಕಷ್ಟ ಕಾರ್ಪಣ್ಯಗಳನ್ನು ಇವರೂ ಸಹ ಅನುಭವಿಸಿದರು. ಇವರ ಜೀವನದಲ್ಲಿ ಕ್ಲಿಷ್ಟಕರ ಸವಾಲುಗಳು ಎದುರಾದಾಗಲೂ, ಕಷ್ಟಗಳ ಮಳೆ ಸುರಿದಾಗಲೂ ತಮ್ಮೊಳಗಿನ ಸತ್ವಗುಣವನ್ನು ಇವರು ಎಂದೂ ಬಿಟ್ಟುಕೊಡಲಿಲ್ಲ. ಇದಕ್ಕಾಗಿಯೇ ನಾವು ಇಂದಿಗೂ ಕೂಡ ಇವರನ್ನು ದೇವರೆಂದು ಪೂಜಿಸುವುದು. ಎಂತಹ ವಿಷಮ ಸನ್ನಿವೇಶಗಳಿಗೂ ಕೂಡ ಇವರ ಅಂತರ್ಯವನ್ನು ಕದಡಿಸಲಾಗಲಿಲ್ಲ. ನಮ್ಮ ನದಿಗಳು ಸಹ ಇಂಥಹ ಶ್ರೇಷ್ಠ ಗುಣತ ಪ್ರತೀಕಗಳೇ ಹೌದು.
ನೀರಿನ ಲಾರಿಗಳು, ನೀರಿನ ರೈಲುಗಳನ್ನು ಕಟ್ಟಿಕೊಂಡು ನಾವು ಇನ್ನು ಎಷ್ಟು ದಿನ ಬದುಕಲು ಸಾಧ್ಯ? ದೇಶದ ಬಾಯಾರಿಕೆಯನ್ನು ನೀರಿನ ರೈಲುಗಳಿಂದ, ಕೊಳವೆಗಳಿಂದ ಮಾತ್ರ ತಣಿಸಲು ಸಾಧ್ಯವಿಲ್ಲ. ನೂರು ಕೋಟಿಗೂ ಹೆಚ್ಚು ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ನದಿಗಳು ಬತ್ತಿ ಹೋದರೆ ಜನರು ಏನು ಮಾಡಬೇಕು? ಮಂಜುಗಡ್ಡೆಯ ಪ್ರಮಾಣ, ಹಿಮಪಾತ ಇವರೆಡೂ
ಜಾಗತಿಕ ಆಗುಹೋಗುಗಳು. ನಮ್ಮ ಕೈಯಲ್ಲಿ ಇಲ್ಲ. ಆದರೆ ಕಾಡುಗಳಲ್ಲಿ ಹುಟ್ಟುವ ನದಿಗಳಿಗೆ ಖಂಡಿತವಾಗಿಯೂ ನಾವು ಜೀವ ತುಂಬಬಹುದು.
ಇದಕ್ಕೆ ಏನು ಮಾಡಬೇಕು?
ನದಿಪಾತ್ರದ ಎರಡೂ ಬದಿಗಳಲ್ಲಿ ದಡದಿಂದ ಒಂದು ಕಿ.ಮೀ. ಅಗಲದವರೆಗೆ ನಾವು ಉಳುಮೆ ಕೃಷಿ ಮಾಡುವುದು ಬೇಡ. ಏಕೆಂದರೆ ರೈತರು ನದಿಯ ದಂಡೆಗಳಲ್ಲಿ ಉಳುವುದರಿಂದ ರಸಗೊಬ್ಬರಗಳು ಮತ್ತು ಕೀಟನಾಶಕಗಳು ನೀರಿನಲ್ಲಿ ಸೇರಿಕೊಂಡು ಜೀವಜಗತ್ತಿಗೆ ಹಾನಿ ಉಂಟು ಮಾಡುತ್ತವೆ. ನಾವು ನಮ್ಮ ನದಿಗಳಿಗೆ ಮರಗಳ ದಾಸ್ತಾನು ಮಾಡಬೇಕು. ಒಂದು ಪಕ್ಷ ಸರ್ಕಾರಿ ಜಮೀನು ಅಂದರೆ ಕಾಡು ಇದ್ದರೂ ಪೂರ್ತಿ ಮರಗಳನ್ನು ಬೆಳೆಸಬಹುದು.
ರೈತರಿಗೆ ಇದರಿಂದ ಲಾಭ ಇದೆಯೇ ಎಂಬ ಪ್ರಶ್ನೆಯೂ ಇದೆ. ರೈತರಿಗೆ ಇನ್ನೊಂದು ಆಪ್ಷನ್ ಇದೆ. ನದಿ ತಟದ ತಮ್ಮ ಜಮೀನಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆದರೆ ಲಾಭವೂ ಹೆಚ್ಚಾಗುತ್ತದೆ. ಈಗಾಗಲೇ ಪ್ರಾಯೋಗಿಕವಾಗಿ ಈ ಕೆಲಸ ಮಾಡಿದ್ದೇವೆ. ರೈತರಿಗೆ ಹಣ್ಣುಗಳನ್ನು ಬೆಳೆಯುವುದರಿಂದ ಈಗ ತೆಗೆಯುತ್ತಿರುವ ಬೆಳೆಯಿಂದ 3ರಿಂದ 8 ಪಟ್ಟು ಹೆಚ್ಚು ಆದಾಯ ಸಿಗುತ್ತದೆ. ಇದು ನಮ್ಮ ದೇಶದಲ್ಲಿ ಸುಮಾರು ಕಡೆ ಪ್ರಯೋಗವಾಗಿದೆ. ಕಳೆದ ತಿಂಗಳು ವಿಯೆಟ್ನಾಂ ಜಲ ತಜ್ಞರ ಜೊತೆ ಮಾತುಕತೆ ನಡೆಸುತ್ತಿದ್ದೆ. ಅವರು ಹೇಳುತ್ತಿದ್ದರು-ಅಲ್ಲಿ ಭತ್ತದ ಬೆಳೆಯಿಂದ ರೈತರು ಹಣ್ಣುಗಳನ್ನು ಬೆಳೆಯಲಾರಂಭಿಸಿದ ನಂತರ ಶೇ. 20ರಷ್ಟು ಆದಾಯ ಹೆಚ್ಚಿದೆಯಂತೆ. ನಮ್ಮಲ್ಲಿ ಇದು ಏಕೆ ಸಾಧ್ಯವಿಲ್ಲ? ನಿಜ ಹೇಳಬೇಕಾದರೆ ತೋಟಗಾರಿಕಾ ಕೃಷಿಯಿಂದ ರೈತರಿಗೆ ಲಾಭ ಹೆಚ್ಚು. ಇದೇನು ನಮಗೆ ಗೊತ್ತಿಲ್ಲ ಅಂತಲ್ಲ. ಎಲ್ಲವೂ ತಿಳಿದಿದೆ. ಆದರೆ ಇವೆಲ್ಲಾ ಪರ್ಯಾಯ ಕೃಷಿ ನೀತಿ ದಾರಿಗಳು ನೂರಾರು ಎಂಬ ಹೆಡ್ಡಿಂಗ್‌ನಲ್ಲಿ ವಿಶ್ವವಿದ್ಯಾಲಯಗ ಕಡತಗಳಲ್ಲಿ ಮಾತ್ರ ಕೂತಿದೆಯೇ ಹೊರತೆ ರೈತರ ಭೂಮಿಗೆ ಇಳಿದಿಲ್ಲ.
ನದಿಯ ಪಾತ್ರದಲ್ಲಿ ಹಸಿರ ಹೊದಿಕೆ ಮಾಡಬೇಕು. ಹಾಗಂತ ಕಾಡುಗಳನ್ನು ತಂದಿಡೋಕೆ ಆಗೋಲ್ಲ. ಬದಲಾಗಿ ಸರ್ಕಾರಿ ಜಮೀನುಗಳು ಕಾಡಾಗಬೇಕು. ಬೇರೆ ದಾರೀನೇ ಇಲ್ಲ. ರೈತರ ಜಮೀನಿನಲ್ಲಿ ಹಣ್ಣುಗಳನ್ನು ಬೆಳೆ ಇಡುವಂತೆ ಮಾಡಬೇಕು. ಹೀಗೆ ಮಾಡಿ ಪ್ರಮುಖ ನದಿಗಳನ್ನು ಸೇರಿಸಿದರೆ ಭಾರತದಲ್ಲಿ 20ಸಾವಿರ ಕಿ.ಮೀ ಮೀಟರ್ ನೀರು ಸಿಕ್ಕಂತೆ ಆಗುತ್ತದೆ.
ನರ್ಮದಾ ದೇವಿ ನದಿಯ ಪೂರ್ತಿ ಓಡಾಡುತ್ತಾಳೆ ಅಂತ ಜನ ನಂಬಿದ್ದಾರೆ. ನಮ್ಮ ಕಾವೇರಿ ವಿಚಾರವಾಗಿ ಈ ರೀತಿಯ ಗಾಢವಾದ ನಂಟು ಕಾಣುತ್ತಿಲ್ಲ. ಕೊಡುಗಿನ ಭಾಗದಲ್ಲಿ ಇರಬಹುದು. ಆದರೆ ನದಿಯ ಪಾತ್ರದಲ್ಲಿರುವ ಪ್ರದೇಶಗಳಲ್ಲಿ ಇದು ಇಲ್ಲ. ಎಲ್ಲರೂ ಕಾವೇರಿಯನ್ನು ಹೇಗೆಲ್ಲಾ ಬಳಸಬಹುದು ಅಂತ ಯೋಚಿಸುತ್ತಾರೆಯೇ ಹೊರತು ಉಳಿಸುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ವರ್ಷಕ್ಕೊಂದು ಸಲ ಬಾಗಿನ ಕೊಟ್ಟು ಪೂಜೆ ಮಾಡಿತ್ತಿದ್ದೇವೆ ಅಷ್ಟೇ. ನೀರನ್ನು ದೇವರಂತೆ ನೋಡಿಕೊಳ್ಳುತ್ತಿಲ್ಲ. ಆದರೆ ನದಿಗಳೊಂದಿಗಿನ ಭಾವನಾತ್ಮಕ ನಂಟನ್ನೇ ಕಾನೂನಾಗಿ ಜಾರಿ ಮಾಡಲು ಆಗುವುದಿಲ್ಲ.
ನಮ್ಮ ಮೂಲ ಗುರಿ ನೀರಿಗಾಗಿ ಪಾಲಿಸಿ ಆಗಬೇಕು. ಇದನ್ನು ಹೊರತಾಗಿ ನದಿ ಉಳಿಸಲು ಬೇರೆ ಬೇರೆ ಕಾರ್ಪೋರೇಟ್ ಸಂಸ್ಥೆಗಳು ತಾವೇ ಮುಂದೆ ಬಂದಿವೆ. ಕರ್ನಾಟಕದಲ್ಲಿ ಕರ್ನಾಟಕ ಬ್ಯಾಂಕ್ ಒಂದು ನದಿಯನ್ನು ಉಳಿಸಲು, ಮಹಾರಾಷ್ಟ್ರ ಸರ್ಕಾರದ ಜೊತೆ ಮುಂದಿನ ನಾಲ್ಕು ವರ್ಷಗಳಲ್ಲಿ 50 ಕೋಟಿ ಗಿಡ ನೆಟ್ಟು ಮರ ಮಾಡುವ ಒಡಂಬಂಡಿಕೆ ಮಾಡಿದ್ದೇವೆ. ಚಂದ್ರಭಾಗದ 100ಕಿ.ಮೀಯಷ್ಟು ಪ್ರದೇಶದಲ್ಲಿ ತೋಟಗಾರಿಕೆ ಕೆಲಸ ನಡೆಯುತ್ತಿದೆ. ಮಧ್ಯ ಪ್ರದೇಶದಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ನಡೆಯುತ್ತಿದೆ. ಈಗಾಗಲೇ 7ಸಾವಿರ ಗ್ರೀನ್ ಸ್ಕೂಲ್ ಕೆಲಸ ಶುರುವಾಗಿದೆ. ಅಲ್ಲಿ ಕಡಿಮೆ ಎಂದರೂ 10ಸಾವಿರ ಗಿಡ ನೆಡುವ ಕಾರ್ಯ ಚಾಲನೆಯಾಗಿದೆ. ಎಲ್ಲಾ ಸರ್ಕಾರದ ಜೊತೆ ಗಿಡ ನೆಟ್ಟು ಮರವಾಗಿಸುವ ಒಡಂಬಡಿಕೆ ಮಾಡಿಕೊಳ್ಳುತ್ತಿದ್ದೇವೆ.
ಇವತ್ತು ಪರ್‌ಕ್ಯಾಪಿಟ ನೀರು ಶೇ.21ರಷ್ಟಿದೆ. ಮುಂದೆ ಇದು ಶೇ.7.5ರಷ್ಟಾಗುತ್ತದೆ. ಒಂದು ಬಾಟಲ್ ನೀರೂ ಕೂಡ ಇಲ್ಲದೆ ಹೇಗೆ ಜೀವಿಸಬೇಕು ? ಮುಂದಿನ ಜನಾಂಗಕ್ಕೆ ನಾವು ಕೊಡುವ ಕೊಡುಗೆ ಇದೇನಾ? ನೀವು ಬಲಗಡೆ ಕೂತು ಡ್ರೈವ್ ಮಾಡ್ತಾ ಇರ್ತೀರಿ. ಸಡನ್ನಾಗಿ ಎಡಭಾಗದಲ್ಲಿ ಕೂತು ಕಾರ್ ಡ್ರೈವ್ ಮಾಡಿದರೆ 10 ನಿಮಿಷದಲ್ಲಿ ನಿಮಗೆ ಫೈನ್ ಹಾಕ್ತಾರೆ. ಇದು ನದಿಯ ವಿಚಾರದಲ್ಲೂ ಆಗಬೇಕು. ನದಿಯ ವಿಚಾರವಾಗಿ ತಪ್ಪು ಮಾಡಿದರೆ ತಕ್ಷಣ ದಂಡ ವಿಧಿಸವಂತಾಗಬೇಕು.
ಹೀಗಾದರೆ ಮಾತ್ರ ಭವಿಷ್ಯದ ಜನಾಂಗದ ಗಂಟಲು ಒದ್ದೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.