ಸೈನಾ ನೆಹ್ವಾಲ್ ದೈಹಿಕ ಫಿಟ್‌ನೆಸ್ ದೊಡ್ಡ ಸವಾಲ್!
Team Udayavani, Jan 28, 2017, 3:55 AM IST
ರಿಯೋ ಒಲಂಪಿಕ್ಸ್‌ನ ಲೀಗ್ ಪಂದ್ಯದಲ್ಲಿ 61ನೇ ಶ್ರೇಯಾಂಕಿತೆ ಯುಕ್ರೇನ್‌ನ ಮಾರಿಯಾ ಯೆಲಿಬಿನಾ ಎದುರು ಸೋತ ಭಾರತದ ಸೈನಾ ನೆಹ್ವಾಲ್ ಪತ್ರಿಕಾ ಸಂವಾದ ಕಾರ್ಯಕ್ರಮದ ವೇಳೆ ಕಣ್ಣೀರು ಹರಿಸಿದ್ದರು. ಒಲಂಪಿಕ್ಸ್‌ಗೆ
10 ದಿನ ಮುನ್ನ ಆದ ಬಲ ಮೊಣಕಾಲಿನ ಜಾಯಿಂಟ್‌ನಲ್ಲಿನ ಗಾಯ ನಂತರದಲ್ಲಿ ತರಬೇತಿ ಹಾಗೂ ಪಂದ್ಯದಲ್ಲಿ ಪಾಲ್ಗೊಂಡಿದ್ದರಿಂದ ಹೆಚ್ಚು ಗಂಭೀರವಾಗಿತ್ತು. ಇಂತಿಪ್ಪ ಸೈನಾ ಸರ್ಜರಿಗೊಳಗಾದರು. ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ನಾನು ಸುಧಾರಿಸಲಿ ಎಂದು ಪ್ರಾರ್ಥಿಸಿ ಎಂದು ಪ್ರಾರ್ಥಿಸಿದರು. ಬೇಗ ಗುಣಮುಖ ರಾಗಿ ಅಂಕಣಕ್ಕೆ ಮರಳುವುದು ಕಷ್ಟ ಎಂದರು. ಮತ್ತೆ ವೃತ್ತಿಪರವಾಗಿ ಬ್ಯಾಡ್ಮಿಂಟನ್ ಆಡುವುದೇ ಕಠಿಣ ಎಂತಲೂ ಹೇಳಿದರು. ಇವೆಲ್ಲ ಆದಮೇಲೆ, ಕಳೆದ ವಾರ ಮಲೇಷಿಯಾ ಮಾಸ್ಟರ್ನಲ್ಲಿ ವಿಜೇತರಾದರು!
ಬ್ಯಾಡ್ಮಿಂಟನ್ ಎಂದರೆ ಪ್ರಕಾಶ್ ಪಡುಕೋಣೆ ಮಾತ್ರ ನೆನಪಾಗುತ್ತಿದ್ದ ಭಾರತೀಯ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಅದಕ್ಕೊಂದು ಮಹಿಳಾ ಸ್ವರೂಪ ಕೊಟ್ಟಿದ್ದು ಸೈನಾ. ಭಾರತದ ಮಟ್ಟಿಗೆ ಟಾಪ್ ಒನ್ ಸ್ಥಾನ ತಲುಪಿದ ಎರಡನೇ ಬ್ಯಾಡ್ಮಿಂಟನ್ ಪ್ರತಿಭೆ. ಮೂರು ಒಲಂಪಿಕ್ಸ್‌ಗಳಲ್ಲಿ ಆಡಿದ್ದು ಹಾಗೂ 2012ರ ಲಂಡನ್ ಒಲಂಪಿಕ್ಸ್‌ನಲ್ಲಿ ಕಂಚಿನ ಪದಕ ಪಡೆದಿದ್ದು ಈಗ ಐತಿಹಾಸಿಕ. 10 ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಪಡೆದಿರುವುದು ಸಾಮಾನ್ಯದ ಮಾತಲ್ಲ. 2009ರಿಂದ ಈ ಗಾಯ, ಸೋಲು, ಸಮಸ್ಯೆಗಳ ಹೊರತಾಗಿಯೂ ಟಾಪ್ 10ರಲ್ಲಿ ಸ್ಥಾನ ಉಳಿಸಿಕೊಂಡಿರುವುದಕ್ಕೆ ಹ್ಯಾಟ್ಸ್‌ಆಫ್!
ಹಲವು ಪ್ರಥಮಗಳಿಗೆ 2006ರಿಂದ ಕ್ಯಾರಿಯರ್ ಆರಂಭಿಸಿದ ಸೈನಾ ಸಹಿ ಹಾಕಿದ್ದಾರೆ. 2008ರ ಕಾಮನ್‌ವೆಲ್ತ್ ಯೂತ್ ಚಾಂಪಿಯನ್‌ಶಿಪ್‌ನಲ್ಲಿ, ಅದೇ ವರ್ಷ ಪುಣೆಯಲ್ಲಿನ ವಿಶ್ವ ಕಿರಿಯರ ಚಾಂಪಿಯನ್‌ಶಿಪ್‌ನ ಚಿನ್ನದ ಪದಕ ಹಾಗೂ 2010ರ ದೆಹಲಿ ಕಾಮನ್‌ವೆಲ್ತ್ ಕ್ರಿಡಾಕೂಟದ ಚಿನ್ನ ಸೈನಾ ಸಂಪಾದನೆ. ಸೂಪರ್ ಸೀರೀಸ್ ಪ್ರೀಮಿಯರ್‌ನಲ್ಲಿ ಇಂಡೋನೇಷಿಯಾ ಓಪನ್, ಡೆನ್ಮಾರ್ಕ್ ಓಪನ್ ಹಾಗೂ ಚೀನಾ ಓಪನ್ ಗೆದ್ದ ಧೀರೆ ಈಕೆ. ಒಂದರ್ಥದಲ್ಲಿ ಅನಗತ್ಯವಾದರೂ, ಹೋಲಿಕೆ ಹೆಚ್ಚು ಪರಿಣಾಮಕಾರಿ. ಭಾರತದ ಇನ್ನೋರ್ವ ಬ್ಯಾಡ್ಮಿಂಟನ್ ಪ್ರತಿಭೆ ಪಿ.ವಿ.ಸಿಂಧು ಮೊನ್ನೆ ಮೊನ್ನೆಯಷ್ಟೇ ತಮ್ಮ ಚೊಚ್ಚಲ ಸಾಧನೆಯಾಗಿ ಒಂದು ಸೂಪರ್ ಸೀರೀಸ್ ಪ್ರೀಮಿಯರ್‌ನ್ನು ಚೀನಾ ಓಪನ್ ರೂಪದಲ್ಲಿ ಗೆದ್ದಿದ್ದಾರೆ. ಸೈನಾ ಸಾಧನೆಗೆ ಪದ್ಮಶ್ರೀ, ಪದ್ಮಭೂಷಣ, ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಳೆಲ್ಲ ಸಂದಿವೆ.
ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ನ ಟೂರ್ನಿಗಳನ್ನು ನಾಲ್ಕು ಮಾದರಿಗಳಾಗಿ ವಿಂಗಡಿಸಬಹುದು. ಪ್ರೀಮಿಯರ್ ಸೂಪರ್ ಸೀರೀಸ್, ಸೂಪರ್ ಸೀರೀಸ್, ಗ್ರಾಂಡ್ ಫಿಕ್ಸ್ ಗೋಲ್ಡ್ ಹಾಗೂ ಗ್ರಾಂಡ್ ಫಿಕ್ಸ್. ಸೈನಾ ಪ್ರೀಮಿಯರ್ ಸೂಪರ್ ಸೀರೀಸ್‌ನ ಮೂರು ಪ್ರಶಸ್ತಿ ಸೇರಿದಂತೆ ಸೂಪರ್ ಸೀರೀಸ್‌ನ 7, ಗ್ರಾಂಡ್‌ಫಿಕ್ಸ್ ಗೋಲ್ಡ್‌ನ 9 ಹಾಗೂ ಗ್ರಾಂಡ್‌ಫಿಕ್ಸ್‌ನ ಒಂದು ಪ್ರಶಸ್ತಿ ಗಳಿಸಿದ್ದಾರೆ. ಇದರ ಜೊತೆ ಇಂಡಿಯಾ ಏಷಿಯಾ ಸ್ಯಾಟಲೈಟ್‌ನ ಮೂರು ಪ್ರಶಸ್ತಿಗಳನ್ನು ಕೂಡ ಸೇರಿಸಬಹುದು.
ಸೈನಾಗೆ ಗಾಯಗಳು ಹೊಸದಲ್ಲ. 2016ರಲ್ಲಿಯೂ ಆಕೆ ಹಲವು ಬಾರಿ ಗಾಯಾಳುವಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡಿರಲಿಲ್ಲ ಅಥವಾ ಫಿಟ್‌ನೆಸ್ ಕಾರಣಕ್ಕೆ ಹಲವು ಬಾರಿ ಶೇ.100ರ ಪ್ರದರ್ಶನ ನೀಡಲಾಗಿರಲಿಲ್ಲ. ಒಂದು ಫ್ಲಾಶ್‌ಬ್ಯಾಕ್‌ಗೆ ಹೋಗುವುದಾದರೆ, 2011ರಲ್ಲಿಯೇ ಒಂದು ಸೋಲಿನ ನಂತರ ಸೈನಾ ಕೋಚ್ ಪಿ.ಗೋಪಿಚಂದ್ ಬಳಿ, ನಾನು ಆಟದಿಂದ ಹಿಂದೆಸರಿಯುತ್ತೇನೆ ಎಂಬರ್ಥದ ಹೇಳಿಕೆಯನ್ನು ಕಣ್ಣೀರಧಾರೆ ಸಮೇತ ಹೇಳುತ್ತಾರೆ. ಆ ವೇಳೆಗೆ ರಾಷ್ಟ್ರೀಯ ಕೋಚ್ ಎಂದೆನಿಸಿಕೊಂಡಿದ್ದ ಗೋಪಿಚಂದ್, ಸೈನಾರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ. ಬೆಳಿಗ್ಗೆ ನಾಲ್ಕೂವರೆಯಿಂದ ಕಠಿಣ ತರಬೇತಿ ಆರಂಭವಾಗುತ್ತಿತ್ತು. ಸಿನೆಮಾ ಇಲ್ಲ, ತಡ ರಾತ್ರಿ ಟಿವಿ ಶೋ ವೀಕ್ಷಣೆ ಸಲ್ಲ, ರಾತ್ರಿ ಪಾರ್ಟಿಗಳಿಗಂತೂ ಅಕ್ಷರಶಃ ನಿಷೇಧ.
ವಾಸ್ತವವಾಗಿ ಇದು ಕೇವಲ ಸೈನಾಗೆ ಹಾಕಿದ್ದ ಕಡಿವಾಣವಾಗಿರಲಿಲ್ಲ. ಕೋಚ್ ಗೋಪಿಗೆ ಕೂಡ ಅನ್ವಯಿಸಿತ್ತು. ಸೈನಾರಿಗೆ ಲಂಡನ್ ಒಲಂಪಿಕ್ಸ್ ಪದಕ ಪಡೆದುಕೊಳ್ಳುವಂತೆ ಮಾಡಲು ಹೆಚ್ಚು ಶ್ರಮ ವಹಿಸುವ ಜವಾಬ್ದಾರಿ ತೆಗೆದುಕೊಳ್ಳುವ ಮುನ್ನ ಖುದ್ದು ಗೋಪಿ ತಮ್ಮ ತಂದೆತಾಯಿ ಹಾಗೂ ಪತ್ನಿಗೆ ಸಹಕರಿಸಲು ಕೇಳಿದ್ದರಂತೆ. ಸಿನೆಮಾ ಇಲ್ಲ, ತಡ ರಾತ್ರಿ ಟಿವಿ ಶೋ ವೀಕ್ಷಣೆ ಇಲ್ಲ, ರಾತ್ರಿ ಪಾರ್ಟಿಗಳಿಗಂತೂ ಅಕ್ಷರಶಃ ನಿಷೇಧ, ಗೋಪಿ ಕುಟುಂಬಕ್ಕೂ ಅನ್ವಯವಾಗಿತ್ತು!
ಸೈನಾ ದಾರಿ ಸುಗಮವಾಗೇನೂ ಇಲ್ಲ. ಮೊನ್ನೆ ಗೆದ್ದದ್ದು ಕೇವಲ ಗ್ರಾÂನ್ ಪ್ರಿ ಗೋಲ್ಡ್. ಫೈನಲ್‌ನಲ್ಲಿ ಸೈನಾ ಮಣಿಸಿದ ಥಾಯ್ಲೆಂಂಡ್‌ನ ಪೋರ್ನವಿ ಚೊಚುವಾಂಗ್ ಈವರೆಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ ಪರಮಾವಧಿ 38ನೇ ಸ್ಥಾನವನ್ನು 2016ರ ಜನವರಿಯಲ್ಲಿ ಮುಟ್ಟಿದ್ದರಷ್ಟೇ. ಅವರ ಮಟ್ಟಿಗೆ ಇತ್ತೀಚಿನ ಪ್ರದರ್ಶನವೇ ಅತ್ಯುತ್ತಮ. ಯಾವುದೇ ಗ್ರಾÂನ್ ಪ್ರಿ ಪ್ರಶಸ್ತಿ ಗಳಿಸಿಲ್ಲ. ಹೇಳಬೇಕಾದದ್ದು, ಸೈನಾ ಇನ್ನೂ ಟಾಪ್ 10 ಆಟಗಾರ್ತಿಯರ ಎದುರು ಸೆಣಸಿ ತಮ್ಮ ಸಾಮರ್ಥ್ಯ ತೋರಬೇಕಿದೆ. ಇವತ್ತಿನ ಮಲೇಷ್ಯಾ ಮಾಸ್ಟರ್ ಪ್ರದರ್ಶನ ಅವರಿಗೆ ಆತ್ಮವಿಶ್ವಾಸವನ್ನು ತಂದುಕೊಟ್ಟಿದೆ.
ಸೈನಾ ಒಳ್ಳೆಯತನಕ್ಕೆ ಸೋತ ಟೀಕಾಕಾರರು
ಸೈನಾ ನೆಹ್ವಾಲ್‌ರ ಪ್ರತಿಭೆಗೆ ಪ್ರಶ್ನೆಗಳಿಲ್ಲದಿದ್ದರೂ ಅವರು ವಿಶ್ವದ ಇತರ ಅಗ್ರ ಆಟಗಾರರ ಎದುರು ಕಿಲ್ಲರ್ ಇನ್‌ಸ್ಟಿಂಗ್ಟ್ನ ಕೊರತೆ ಅನುಭವಿಸುತ್ತಾರೆ ಎಂಬ ಆರೋಪ ಪುರಾತನವಾದುದು. 2009ರಲ್ಲಿಯೇ 2ನೇ ರ್‍ಯಾಂಕಿಂಗ್‌ಗೆ ಬಡ್ತಿ ಪಡೆದ ಸೈನಾ ಅಗ್ರಪಟ್ಟ ಅಲಂಕರಿಸಿದ್ದು 2015ರಷ್ಟು ವಿಳಂಬವಾಗಿ. ಈ ಹಿನ್ನೆಲೆಯಲ್ಲಿ ಕಳೆದ ಒಲಂಪಿಕ್ಸ್‌ನ ಘಟನೆಯನ್ನು ಪ್ರಸ್ತಾಪಿಸಬೇಕು. ಭಾರತದ ಇನ್ನೋರ್ವ ಪ್ರತಿಭೆ ಪಿ.ವಿ.ಸಿಂಧು ಜಪಾನ್‌ನ ಓಕುಹರಾ ಅವರನ್ನು ಮಣಿಸಿ ಒಲಂಪಿಕ್ಸ್‌ನ ಫೈನಲ್ ಪ್ರವೇಶಿಸಿದರು. ಅಂದರೆ ಕೊನೆಪಕ್ಷ ಬೆಳ್ಳಿ ಖಚಿತ ಎಂದಾಗಿತ್ತು. ಇತ್ತ ಸೈನಾ ಲಂಡನ್ ಒಲಂಪಿಕ್ಸ್‌ನಲ್ಲಿ ಗೆದ್ದಿದ್ದು ಕೇವಲ ಕಂಚು.
ಈ ಹಂತದಲ್ಲಿ ಟ್ವೀಟರ್‌ನಲ್ಲಿ ಕಾಣಿಸಿದ ಸೈನಾ ಟೀಕಾಕಾರು ಬರೆದ, ನಿಮ್ಮ ಬ್ಯಾಗ್‌ಗಳನ್ನು ಪ್ಯಾಕ್ ಮಾಡಿಕೊಳ್ಳಿ ಸೈನಾ, ನಾವು ವಿಶ್ವದ ಟಾಪ್ ಆಟಗಾರ್ತಿಯರನ್ನು ಸೋಲಿಸಬಲ್ಲ ಸ್ವದೇಶದ ಪ್ರತಿಭೆಯನ್ನು ಕಂಡುಕೊಂಡಿದ್ದೇವೆ! ಸೈನಾ ಸಿಟ್ಟಾಗಲಿಲ್ಲ. “ಖಂಡಿತ. ಸಿಂಧು ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಇದು ಭಾರತಕ್ಕೂ ಗೌರವ…ಎಂದರು. ತಮ್ಮ ಟೀಕೆಗೆ ಈ ಮಾದರಿಯ ಉತ್ತರ ನೋಡಿದ ಟ್ವೀಟಿಗ ಸುಸ್ತಾಗಿ, ತಕ್ಷಣ ಕ್ಷಮೆ ಕೋರಿದ. ಸೈನಾ “ನೋ ಪ್ರಾಬ್ಲಿಮ್, ಫ್ರೆಂಡ್ ಎಂದರು. ಸಮಾಧಾನಗೊಳ್ಳದ ಟೀಕಾಕಾರ ಅಲವತ್ತುಗೊಂಡ, ನಾನು ಆಡಿದ ಮಾತುಗಳಿಗೆ ಕ್ಷಮೆ ಕೋರುತ್ತೇನೆ. ಅವು ಕೆಟ್ಟ ಅಭಿರುಚಿಯದಾಗಿತ್ತು. ಈ ಮಾತುಗಳನ್ನು ವಾಪಾಸು ಪಡೆಯುತ್ತೇನೆ. ನಾನು ಸೈನಾ ಅಭಿಮಾನಿ ಮತ್ತು ಯಾವತ್ತಿಗೂ! ಹಿಂಗೂ ಸೈನಾ ಗೆದ್ದಿದ್ದರು!
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.