ಸಾಲು ಮರದ ಶಿವಣ್ಣ
Team Udayavani, Apr 7, 2018, 10:31 AM IST
ರಸ್ತೆಯುದ್ದಕ್ಕೂ ಗಿಡಮರಗಳನ್ನು ಬೆಳೆಸಿ, ಅವುಗಳನ್ನು ಮಕ್ಕಳಂತೆಯೇ ಸಲಹಿದ ಸಾಲು ಮರದ ತಿಮ್ಮಕ್ಕನ ಬಗ್ಗೆ ನಮಗೆಲ್ಲಾ ಗೊತ್ತಿದೆ. ಅಂಥದೇ ಆಪ್ತ ಹಿನ್ನೆಲೆಯ, ಶಿವಣ್ಣ ಎಂಬ ಸಾಧಕನ ಕಥೆ ಇದು. ಕೇವಲ 7ನೇ ತರಗತಿವರೆಗಷ್ಟೇ ಓದಿರುವ ಶಿವಣ್ಣ, ಶಿರಾ ತಾಲೂಕಿನಲ್ಲಿ ಸಾವಿರ ಸಾವಿರ ಗಿಡಗಳನ್ನು ನೆಟ್ಟು, ಬೆಳೆಸಿ, ರಕ್ಷಿಸಿದ್ದಾರೆ. ಈ ಕೆಲಸವನ್ನು ಅವರು ಶ್ರದ್ಧಾಭಕ್ತಿಯಿಂದ 30 ವರ್ಷಗಳಿಂದಲೂ ಮಾಡುತ್ತಿದ್ದಾರೆ.
ಬರಗಾಲದ ಬೀಡು ಎಂದೇ ಹೆಸರಾಗಿರುವ ಶಿರಾ ತಾಲೂಕಿನಲ್ಲಿ ಜನ ಜಾನುವಾರುಗಳಿಗೆ ಕುಡಿಯಲು, ಬೆಳೆ ಬೆಳೆಯಲು ನೀರಿಲ್ಲದೆ ಪರದಾಡುವಂತಹ ಪರಿಸ್ಥಿತಿ ಇದೆ. ಇಂತಹದರಲ್ಲಿ ಸಸಿ ನೆಟ್ಟು, ಅದಕ್ಕೆ ನೀರು ಹಾಕಿ ಲಾಲನೆ ಪಾಲನೆ ಮಾಡಿ ಹೆಮ್ಮರವಾಗಿ ಬೆಳೆಸುವುದು ಕಷ್ಟದ ಕೆಲಸ. ಇದೆಲ್ಲಾ ಗೊತ್ತಿದ್ದರೂ ದುರ್ಭರ ಪರಿಸ್ಥಿತಿಯಲ್ಲೂ ಸಸಿಗಳನ್ನು ನೆಟ್ಟು ಅದನ್ನು ಪಾಲನೆ ಮಾಡುತ್ತಾ ತನ್ನ ಕೈಲಾದ ಮಟ್ಟಿಗೆ ರೈತರಿಗೆ, ರಸ್ತೆಯಲ್ಲಿ ಓಡಾಡುವವರಿಗೆ, ಸಾರ್ವಜನಿಕರಿಗೆ ನೆರಳು, ಉತ್ತಮ ಗಾಳಿ, ಪರಿಸರ ಕಲ್ಪಿಸಬೇಕೆಂಬ ಆಸೆಯಿಂದ ಸಾವಿರಾರು ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ ಅರಣ್ಯ ಇಲಾಖೆಯ ಕಾವಲುಗಾರ ಶಿವಣ್ಣ.
ಇವರು ಓದಿದ್ದು ಕೇವಲ 7 ತರಗತಿ. ಆದರೆ, ಇವರ ಪರಿಸರ ಕಾಳಜಿ ಯಾವ ವಿಜ್ಞಾನಿಗಿಂತಲೂ ಕಡಿಮೆಯಿಲ್ಲ. ಶಿರಾ ತಾಲೂಕಿನ ಮೇಲುಕುಂಟೆ ಗ್ರಾಮದ ಶಿವಣ್ಣನವರಿಗೆ ಒಟ್ಟು 6 ಜನ ಅಣ್ಣತಮ್ಮಂದಿರು. ಬಡತನದಲ್ಲೇ ಬೆಳೆದು ಬಂದ ಶಿವಣ್ಣಗೆ ಸರಿಯಾಗಿ ಕಿವಿ ಕೇಳುವುದಿಲ್ಲ. ಮನೆಕಡೆ ಹಣಕಾಸಿನ ಸಮಸ್ಯೆ ಇದ್ದ ಕಾರಣ ಶಾಲೆಯನ್ನು ಅರ್ಧಕ್ಕೇ ಮೊಟಕುಗೊಳಿಸಿದರು.
ನಂತರ ಗ್ರಾಮಕ್ಕೆ ಸಮೀಪದಲ್ಲೇ ಇದ್ದ ಅರಣ್ಯ ಇಲಾಖೆಯ ನರ್ಸರಿಯಲ್ಲಿ ದಿನಗೂಲಿ ನೌಕರರಾಗಿ ಸೇರಿಕೊಂಡರು. ಇವರ ಕೆಲಸವನ್ನು ಮೆಚ್ಚಿಕೊಂಡ ವಲಯ ಅರಣ್ಯಾಧಿಕಾರಿ ಮಲ್ಲಿಕ್ ಇವರನ್ನು ಅರಣ್ಯ ಕಾವಲುಗಾರನಾಗಿ ನೇಮಿಸಿದ್ದರು. 1987ರಲ್ಲಿ ಗುತ್ತಿಗೆ ಆಧಾರದ ಮೇಲೆ 100 ರೂ. ತಿಂಗಳ ಸಂಬಳಕ್ಕೆ ಕಾವಲುಗಾರರಾಗಿ ಸೇರಿಕೊಂಡ ಶಿವಣ್ಣ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಸುಮಾರು ಲಕ್ಷಕ್ಕೂ ಹೆಚ್ಚು ಸಸಿ ನೆಟ್ಟು ಪೋಷಿಸಿದ್ದಾರೆ.
ಹತ್ತಾರು ಕಿ.ಮೀ. ದೂರದಿಂದ ರೈತರ ಬೋರ್‌ವೆಲ್, ಕೈಪಂಪು, ಕೆರೆ, ರಸ್ತೆ ಪಕ್ಕದಲ್ಲಿ ಗುಂಡಿಯಲ್ಲಿ ನಿಂತಿದ್ದ ಅಲ್ಪ ಸ್ವಲ್ಪ ಮಳೆ ನೀರನ್ನೇ ಸೈಕಲ್‌ನಲ್ಲಿ ತಂದು ಗಿಡಗಳಿಗೆ ಹಾಕಿ, ಅವುಗಳನ್ನು ಕುರಿ ಮೇಕೆ ತಿನ್ನದಂತೆ ನೋಡಿಕೊಂಡು ಹೆಮ್ಮರವಾಗಿ ಬೆಳೆಸಿದ್ದಾರೆ. ಶಿರಾ- ತುಮಕೂರು ಮಧ್ಯೆ ಬರುವ ಸೀಬಿ ಗ್ರಾಮದ ಲಕ್ಷ್ಮೀ ನರಸಿಂಹ ಸ್ವಾಮಿ ದೇಗುಲದ ಬಳಿ ಇವರು ಬೆಳೆಸಿರುವ ಹತ್ತಾರು ಆಲದ ಮರಗಳು ಇಂದಿಗೂ ಸಾವಿರಾರು ಭಕ್ತರು, ಕುರಿಗಾಹಿಗಳಿಗೆ ನೆರಳು ನೀಡುತ್ತಿವೆ. ಇಲ್ಲಿನ ಜನ ಈಗಲೂ ಶಿವಣ್ಣನನ್ನು ನೆನೆಯುತ್ತಾರೆ.
30 ವರ್ಷಗಳಿಂದ ಅರಣ್ಯ ರಕ್ಷಣೆ, ಸಸಿ ನೆಟ್ಟು ಮರಗಿಡಗಳನ್ನು ಬೆಳೆಸುವುದಕ್ಕೇ ತಮ್ಮ ಜೀವನ ಮುಡುಪಿಟ್ಟಿರುವ ಶಿವಣ್ಣರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ಇತ್ತೀಚೆಗೆ ಸರ್ಕಾರ ಅವರ ಸೇವೆಯನ್ನು ಕಾಯಂ ಮಾಡಿದೆ. ಆದರೆ, ಇನ್ನೂ ಆದೇಶ ಬಂದಿಲ್ಲ ಎಂದು ನೊಂದು ನುಡಿಯುತ್ತಾರೆ ಶಿವಣ್ಣ.
ಕಾಯ್ದಿಟ್ಟ ಅರಣ್ಯ, ಗುಂಡು ತೋಪು, ರಸ್ತೆ ಬದಿಗಳಲ್ಲಿ ಸಹಸ್ರಾರು ಸಸಿಗಳನ್ನು ನೆಟ್ಟು ಪೋಷಿಸುತ್ತಿರುವ ಶಿವಣ್ಣ, ರೇಂಜರ್ ಸುರೇಶ್ ಅವರ ಸಹಕಾರದಿಂದಾಗಿ ಶಿರಾ-ಅಮರಾಪುರ ಮತ್ತು ತಾವರೇಕೆರೆ ಸಂಪರ್ಕಿಸುವ ಭೂತಪ್ಪನಗುಡಿ ರಸ್ತೆಯ ಎರಡೂ ಬದಿಯಲ್ಲಿ ಸುಮಾರು 6 ಕಿ.ಮೀ.ವರೆಗೆ 1000 ಬೇವು, 200 ನೇರಳೆ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಕಳೆದ ಮುಂಗಾರು ಮಳೆಗಾಲದಲ್ಲಿ ನೆಟ್ಟಿದ್ದ ಸಸಿಗಳು ಈಗ ಉತ್ತಮವಾಗಿ ಬೆಳೆದಿವೆ. ಇವುಗಳಿಗೆ ಔಷಧಿ ಸಿಂಪಡಿಸಿ, ಅಕ್ಕಪಕ್ಕದ ರೈತರ ಬೋರ್‌ವೆಲ್‌ನಿಂದ ನೀರು ಖರೀದಿಸಿ ಸಕಾಲಕ್ಕೆ ಟ್ಯಾಂಕರ್‌ನಲ್ಲಿ ತಂದು ಸಸಿಗಳಿಗೆ ಹಾಕುತ್ತಿದ್ದಾರೆ.
ಇದಕ್ಕೇನೋ ಇಲಾಖೆ ಹಣ ಕೊಡುತ್ತದೆ. ಆದರೆ, ಸಸಿ ನೆಡಲು, ಗುಂಡಿ ತೋಡಲು, ಗಾಳಿ ಮಳೆಗೆ ಮುರಿದು ಬೀಳದಂತೆ ಗಿಡಗಳಿಗೆ ಕಡ್ಡಿಗಳನ್ನು ಕಟ್ಟಲು, ಇತರೆ ಸಣ್ಣಪುಟ್ಟ ಕೆಲಸಗಳಿಗೆ ಕೂಲಿಯಾಳು ಬೇಕಾಗುತ್ತಾರೆ. ಇವರಿಗೆಲ್ಲ ಶಿವಣ್ಣ ತಮ್ಮ ಕೈಯಿಂದಲೇ ಹಣ ನೀಡುತ್ತಾರೆ. ತಮಗೆ ಬರುವ 13 ಸಾವಿರ ರೂ. ವೇತನದಲ್ಲಿ ಸಂಸಾರ ನಡೆಸುವುದೇ ದುಸ್ತರ. ಇಂತಹದರಲ್ಲಿ, ರೈತರಿಗೆ ಅನುಕೂಲವಾಗಲಿ, ಜನರಿಗೆ ನೆರಳಿನ ವ್ಯವಸ್ಥೆಯಾಗಲಿ ಎಂಬ ಕಾರಣಕ್ಕೆ ಕೈಯಿಂದಲೇ ಹಣ ಖರ್ಚು ಮಾಡಿಕೊಂಡು ಸಸಿಗಳನ್ನು ಬೆಳೆಸುತ್ತಿದ್ದೇನೆ ಎನ್ನುತ್ತಾರೆ ಶಿವಣ್ಣ.
ಕುರಿ ಮೇಕೆಗಳ ಕಾಟ
ಈಗ 1200 ಸಸಿ ನೆಟ್ಟು ಪೋಷಿಸುತ್ತಿರುವ ಶಿವಣ್ಣನವರಿಗೆ ಕುರಿ, ಮೇಕೆಗಳ ಕಾಟವೇ ಹೆಚ್ಚು. ಸಮರ್ಪಕ ಮಳೆಯಾಗದ ಕಾರಣ ಕುರಿ ಮೇಕೆಗಳಿಗೆ ಮೇವು ಸಿಗುತ್ತಿಲ್ಲ. ಹೀಗಾಗಿ ಕುರಿಗಾಹಿಗಳು ಕೆಲವೊಮ್ಮೆ ತಾವು ಕಷ್ಟಪಟ್ಟು ಬೆಳೆಸಿದ್ದ ಗಿಡಗಳನ್ನೇ ಕಡಿದು ಕುರಿ ಮೇಕೆಗಳಿಗೆ ಹಾಕುತ್ತಾರೆ. ಇವರನ್ನು ಜೋರಾಗಿ ಗದರಿದರೆ ಬೆಳಗಾಗುವುದರೊಳಗೆ ಗಿಡವನ್ನೇ ಇಲ್ಲವಾಗಿಸುತ್ತಾರೆ. ಹೀಗಾಗಿ ತಾವು ಯಾರನ್ನೂ ಎದುರುಹಾಕಿಕೊಳ್ಳದೇ ಪ್ರೀತಿಯಿಂದ ಗಿಡಗಳನ್ನು ಕಡಿಯದಂತೆ ಮನವಿ ಮಾಡುತ್ತೇನೆ ಎನ್ನುತ್ತಾರೆ ಕಾವಲುಗಾರ ಶಿವಣ್ಣ.
ಮೂರು ವರ್ಷದ ನಂತರ ರೈತರಿಗೆ
ಶಿರಾ ತಾಲೂಕಿನ ಹುಳಿಗೆರೆ, ಗಿಡುಗನಹಳ್ಳಿ, ಭೂತಪ್ಪನ ಗುಡಿ, ಅಮರಾಪುರ ಹೀಗೆ ಹಲವು ರಸ್ತೆ ಬದಿಯಲ್ಲಿ ರೈತರ ಜಮೀನಿನಲ್ಲಿ ಸಸಿಗಳನ್ನು ನೆಟ್ಟಿರುವ ಸಸಿಗಳನ್ನು ಮೂರುವರ್ಷದವರೆಗೆ ಬೆಳೆಸಿ. ನಂತರ ಅವುಗಳನ್ನು ರೈತರ ಸುಪರ್ದಿಗೆ ನೀಡುತ್ತೇವೆ. ಅವುಗಳನ್ನು ಕಡಿಯಬೇಕಾದರೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು ಎನ್ನುತ್ತಾರೆ ಶಿವಣ್ಣ.
ಕಾವಲುಗಾರ ಶಿವಣ್ಣ ಒಳ್ಳೆಯ ಕೆಲಸಗಾರ, ನೆಟ್ಟ ಸಸಿಗಳನ್ನು ಉತ್ತಮವಾಗಿ ಪೋಷಣೆ ಮಾಡುತ್ತಾರೆ. ರಾತ್ರಿ ಗಾಳಿಮಳೆಗೆ ವಾಲಿದ್ದ ಗಿಡಗಳನ್ನು ಮುಂಜಾನೆಯೇ ಬಂದು ನೆಟ್ಟಗೆ ಕಟ್ಟಿ ಶಿಸ್ತಿನಿಂದ ಕಾರ್ಯ ನಿರ್ವಹಿಸುತ್ತಾರೆ. ಇವರ ಪ್ರಾಮಾಣಿಕ ಸೇವೆಯನ್ನು ಮೆಚ್ಚಿ ಇಲಾಖೆಯಿಂದ ಸನ್ಮಾನ ಕೂಡ ಮಾಡಿದ್ದೇವೆ.
-ಸುರೇಶ್, ವಲಯ ಅರಣ್ಯಾಧಿಕಾರಿ
ರೇಂಜರ್ ಸುರೇಶ್ ಅವರ ಸಹಕಾರದಿಂದ ಭೂತಪ್ಪನ ಗುಡಿ ರಸ್ತೆಯಲ್ಲಿ 1200 ಸಸಿ ನೆಟ್ಟು ಪೋಷಣೆ ಮಾಡುತ್ತಿದ್ದೇನೆ. ಸಕಾಲಕ್ಕೆ ಔಷಧಿ, ನೀರು ಹಾಕುತ್ತಿದ್ದೇನೆ. ಇದುವರೆಗೆ ಕೇವಲ ಒಂದು ಸಸಿ ಮಾತ್ರ ಒಣಗಿದೆ. ಉಳಿದ ಎಲ್ಲವೂ ಉತ್ತಮವಾಗಿಯೇ ಬೆಳೆದಿವೆ. ಮುಂದಿನ ಎರಡು ವರ್ಷದಲ್ಲಿ ಇವೆಲ್ಲಾ ದೊಡ್ಡ ದೊಡ್ಡ ಮರವಾಗಿ ರಸ್ತೆಯಲ್ಲಿ ಓಡಾಡುವರಿಗೆ ನೆರಳು ಕೊಡುತ್ತವೆ’
-ಕಾವಲುಗಾರ ಶಿವಣ್ಣ
* ಭೋಗೇಶ್ ಮೇಲುಕುಂಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.