ವೃಕ್ಷೋದ್ಯಾನ
ಮಣಿಪಾಲದಲ್ಲೊಂದು ಹಸಿರ ಅಚ್ಚರಿ
Team Udayavani, May 11, 2019, 6:00 AM IST
ಮಣಿಪಾಲದಲ್ಲಿ ಸಾಲು ಮರದ ತಿಮ್ಮಕ್ಕನ ಹೆಸರಿನ ಉದ್ಯಾನವನ ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದೆ. ನೀವು ಅತ್ತ ಕಡೆ ಹೋದರೆ, ಪಾರ್ಕ್‌ಗೆ ಹೋಗಲು ಮರೆಯಬೇಡಿ. ಪಶ್ಚಿಮಘಟ್ಟದ ದರ್ಶನ ಇಲ್ಲಿ ಆಗುತ್ತದೆ…
ಉಡುಪಿಯ ಮಣಿಪಾಲದಲ್ಲಿ ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ಒಂದು ವೃಕ್ಷ ಉದ್ಯಾನವನವಿದೆ. ಕರಾವಳಿ ಪ್ರವಾಸಕ್ಕೆಂದು ಬಂದವರ ಪಟ್ಟಿಗೆ ಇದು ಹೊಸ ಆಕರ್ಷಣೆ. ಒಟ್ಟು 6.5 ಎಕರೆಯಲ್ಲಿ, 1 ಕೋಟಿ ರುಪಾಯಿ ವೆಚ್ಚದಲ್ಲಿ ಈ ಉದ್ಯಾನವನ ನಿರ್ಮಿಸಿದ್ದಾರೆ. ಇನ್ನೂ ಆರೇಳು ಎಕರೆ ಅರಣ್ಯ ಇಲಾಖೆ ಭೂಮಿಯಲ್ಲಿ ಇದನ್ನು ವಿಸ್ತರಿಸಿ ಮಂಗಳೂರಿನ ಪಿಲಿಕುಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯೂ ಇದೆ.
ಮಾಹಿತಿ ಕಣಜ
ಉದ್ಯಾನವನವನ್ನು ನೈಸರ್ಗಿಕ ಮಾಹಿತಿಯ ಕಣಜದಂತೆ ರೂಪಿಸಲಾಗಿದೆ. ಪ್ರವೇಶದ್ವಾರದಲ್ಲಿ ಮರದಲ್ಲಿ ಮಾನವಾಕೃತಿಯನ್ನು ರಚಿಸಲಾಗಿದೆ. ರಾಷ್ಟ್ರೀಯ ಪಕ್ಷಿ ನವಿಲು, ರಾಜ್ಯ ಪಕ್ಷಿ ನೀಲಕಂಠ, ಹುಲಿ, ಆನೆ, ಕಂಬಳದ ಕೋಣ, ಜಾನಪದ ನೃತ್ಯ ಮುಂತಾದ ಆಕೃತಿಗಳನ್ನು ರಚಿಸಲಾಗಿದೆ. ರಾಷ್ಟ್ರ ವೃಕ್ಷ ಆಲ, ರಾಜ್ಯ ವೃಕ್ಷ ಶ್ರೀಗಂಧದ ಸಸಿಗಳನ್ನು ನೆಡಲಾಗಿದೆ. ಇದರ ಜೊತೆಗೆ ಆಮೆ, ಮುಂಗುಸಿ, ಮೊಸಳೆ ಇತ್ಯಾದಿಗಳ ಮಾಹಿತಿಯನ್ನು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಫಲಕದಲ್ಲಿ ಬರೆಸಿ ಹಾಕಲಾಗಿದೆ. ಇಲ್ಲಿ ಅಕೇಶಿಯಾ ಮರಗಳಿದ್ದರೂ ಪಶ್ಚಿಮಘಟ್ಟದಲ್ಲಿರುವ ಸಸ್ಯಪ್ರಭೇದಗಳನ್ನು ನೆಡಲಾಗಿದೆ. ಕ್ರಮೇಣ ಅಕೇಶಿಯಾ ಗಿಡಗಳ ಬದಲು ಇತರ ಉತ್ತಮ ಜಾತಿಯ ಗಿಡಗಳನ್ನು ನೆಡುವ ಗುರಿ ಇದೆಯಂತೆ. ಹಸಿರು ಕ್ರಾಂತಿಯ ಮಹತ್ವವನ್ನು ಸಾರಲು ಹಸಿರಿನಿಂದ ಕೂಡಿದ ಕರ್ನಾಟಕದ ಚಿತ್ರಣವಿದೆ.
ಗಿಡಮೂಲಿಕೆಗಳ ಮಹತ್ವ ಸಾರಲು ಋಷಿ ವನ ನಿರ್ಮಿಸಲಾಗಿದೆ. ನೆಟ್ಟ ಬಿದಿರು ಬೆಳೆದಾಗ ಉದ್ಯಾನದ ಅಂದ ಹೆಚ್ಚುತ್ತದೆ. ಕರಾವಳಿ ತೀರದಲ್ಲಿದ್ದು ಪರಿಸರಕ್ಕೆ ಪೂರಕವಾದ ಕಾಂಡ್ಲಾ ಗಿಡದ ಮಹತ್ವ ಸಾರುವ ಫಲಕವೂ ಇದೆ. ಮಚ್ಚಾನ್ ಪೋಸ್ಟ್, ಗಜೆಬೊ/ ಪೆರಗೊಲಾ, ಆ್ಯಂಪಿಥಿಯೇಟರ್, ಸೆಲ್ಫಿ ಝೋನ್, ಆಸನಗಳನ್ನು ರಚಿಸಿರುವುದರಿಂದ ಪ್ರವಾಸಿಗಳು ಖುಷಿಪಡಬಹುದು. ಮಕ್ಕಳ ಆನಂದಕ್ಕಾಗಿ ಜಿಪ್‌ಲೈನರ್ ಇದೆ. ಕೃತಕ ಸಣ್ಣ ಜಲಪಾತವನ್ನು ರಚಿಸಲಾಗಿದೆ. ಶುಚಿತ್ವ ಕಾಪಾಡಲು ಸುಸಜ್ಜಿತ ಶೌಚಾಲಯಗಳಿವೆ. ಹಸಿವು ನೀಗಿಸಿಕೊಳ್ಳಲು ಕ್ಯಾಂಟೀನ್ ಇದೆ.
ಆವೆಮಣ್ಣಿನ ಹೊಂಡದ ಗುಟ್ಟೇನು?
ಉದ್ಯಾನವನದಲ್ಲಿ ಚಿಕ್ಕ ಗಾತ್ರದ 10 ಮತ್ತು ದೊಡ್ಡ ಗಾತ್ರದ ಎರಡು ಹೊಂಡಗಳಿವೆ. ಇದರಲ್ಲಿ ಮುಂದೆ ತೇಲುವ ಹೂವು ಬಿಡುವ ಗಿಡ ಬಳ್ಳಿಗಳನ್ನು ಬೆಳೆಸುವ ಗುರಿ ಇದೆ. ಈ ಹೊಂಡಕ್ಕೆ ಆವೆಮಣ್ಣನ್ನು ಹಾಕಲಾಗಿದೆ. ಇದೇಕೆಂದರೆ ಹೊಂಡದಲ್ಲಿ ನೀರು ಬಹುಕಾಲ ಉಳಿಯುತ್ತದೆ. ಇದರ ಮೇಲ್ವಿಚಾರಣೆ ನಡೆಸುವ ಅರಣ್ಯ ಇಲಾಖೆಯ ಗಾರ್ಡ್ ಕೇಶವ ಪೂಜಾರಿಯವರ ಪ್ರಕಾರ ಆವೆಮಣ್ಣು ಮತ್ತು ಸೆಗಣಿಯನ್ನು ಮಿಶ್ರಣ ಮಾಡಿ ಹಾಕಿದರೆ ನೀರು ಬಹುಕಾಲ ಉಳಿಯುತ್ತದೆ. ಇಂತಹ ದೇಸೀ (ತಂತ್ರ)ಜ್ಞಾನದ ಪ್ರಯೋಗವನ್ನು ಅಗತ್ಯವಿರುವವರು ಮಾಡಿ ನೋಡಬಹುದು.
ವಾಕಿಂಗ್ ಪಾತ್, ಸಣ್ಣ ಮಟ್ಟದ ಅರಣ್ಯ ಪ್ರದೇಶ, ಪರಿಸರಜ್ಞಾನ ಹೆಚ್ಚಿಸುವುದು ಸೇರಿದಂತೆ ಮಕ್ಕಳಿಂದ ಹಿರಿಯವರ ವರೆಗಿನವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿದ್ದೇವೆ. ಸಾಹಸ ಕ್ರೀಡೆ, ಅರಣ್ಯ, ಪ್ರಕೃತಿಗೆ ಸಂಬಂಧಿಸಿದ ಚಲನಚಿತ್ರಗಳ ಪ್ರದರ್ಶನದಂತಹ ವ್ಯವಸ್ಥೆ ಕಲ್ಪಿಸುವ ಯೋಜನೆ ಇದೆ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್.
“ಇರುವೆಗಳು ಎಷ್ಟೇ ಎತ್ತರದಿಂದ ಬಿದ್ದರೂ ಸಾಯುವುದಿಲ್ಲವಂತೆ. ಇದೇ ವೇಳೆ ಪ್ರಪಂಚದ 630 ಕೋಟಿ ಮನುಷ್ಯರಿಗಿಂತ ಹೆಚ್ಚು ತೂಕ ಪ್ರಪಂಚದಲ್ಲಿರುವ ಇರುವೆಗಳದ್ದಂತೆ. ಅಂದರೆ ಇರುವೆಗಳ ಸಂಖ್ಯೆ ಎಷ್ಟಿರಬಹುದು? ಬೆಂಗಳೂರಿನಲ್ಲಿ ಪ್ರತಿ 15-20 ಚದರಡಿಗೆ ಒಂದರಂತೆ ಹಾವುಗಳು ಭೂಮಿಯಡಿ ಇರುತ್ತವೆ ಎಂದು ಅಧ್ಯಯನಗಳು ಹೇಳುತ್ತಿವೆ. ಎಲ್ಲಿಯಾದರೂ ಇಷ್ಟೊಂದು ಸಂಖ್ಯೆಯ ಹಾವುಗಳು ಇಲ್ಲವಾದರೆ ಅಥವ ಅವು ಮೂರು ತಿಂಗಳು ಮುಷ್ಕರ ಹೂಡಿದರೆ ಮನುಷ್ಯರಿಗೆ ಊಟ ಮಾಡಲು ಧವಸಧಾನ್ಯಗಳು ಇಲಿಗಳಿಂದಾಗಿ ಇಲ್ಲವಾಗುವ ಸಾಧ್ಯತೆ ಇದೆ. ಚೇಳು ಅಗತ್ಯವಿದ್ದಾಗ ಒಂದು ವಾರ ಉಸಿರಾಡದೆ ಇರುತ್ತದೆ, ಒಂದು ವರ್ಷ ಆಹಾರವಿಲ್ಲದೆಯೂ ಬದುಕಬಲ್ಲದು. ಶಾರ್ಕ್ ಮೀನಿಗೆ ಕ್ಯಾನ್ಸರ್ ಸಹಿತ ಯಾವುದೇ ಕಾಯಿಲೆ ಬರೋದಿಲ್ಲ. ಸದಾ ನೀರಲ್ಲಿರುವ ಮೊಸಳೆಗೆ ಮರ ಹತ್ತಲೂ ಗೊತ್ತು. ಇಂತಹ ಅಪೂರ್ವ ಮಾಹಿತಿಗಳನ್ನು ಫಲಕಗಳ ಮೂಲಕ ಪ್ರಚುರಪಡಿಸಲಾಗುತ್ತದೆ’ ಎಂದು ವಿವರಿಸುತ್ತಾರೆ ವಲಯ ಉಡುಪಿಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ.
ತಲುಪುವುದು ಹೇಗೆ?
ಉದ್ಯಾನವನ ಪ್ರವೇಶಿಸುವವರಿಗೆ ದೊಡ್ಡವರಿಗೆ 20 ರೂ, ಮಕ್ಕಳಿಗೆ 10 ರೂ. ಕೆಲವು ಬಾರಿ ಮಕ್ಕಳಿಗೆ ವಿನಾಯಿತಿ ಕೊಡುವುದೂ ಇದೆ. ಸೋಮವಾರ ರಜಾ ದಿನ. ಮಣಿಪಾಲದಿಂದ ಅಲೆವೂರು ಮಾರ್ಗದ ರಸ್ತೆಯಲ್ಲಿ ಶಿವಳ್ಳಿ ಕೈಗಾರಿಕಾ ಪ್ರಾಂಗಣದ ಬಳಿ ಮಣಿಪಾಲ ಟಿ.ಎ.ಪೈ ಮೆನೇಜೆ¾ಂಟ್ ಇನ್‌ಸ್ಟಿಟ್ಯೂಟ್‌ಗೆ (ಟ್ಯಾಪ್ಮಿ) ಹೋಗುವ ತಿರುವಿನಿಂದ ಪೂರ್ವ ದಿಕ್ಕಿಗೆ 1.7 ಕಿ.ಮೀ. ಸಾಗಿದರೆ ಟ್ಯಾಪ್ಮಿ ಕಟ್ಟಡದ ಬಳಿಕ ಸಾಲುಮರ ತಿಮ್ಮಕ್ಕ ವೃಕ್ಷ ಉದ್ಯಾನವನ ಸಿಗುತ್ತದೆ. ಆದರೆ ಬಸ್ಸು ಸಿಗುವುದು ಕಷ್ಟ. ಶಿವಳ್ಳಿ ಕೈಗಾರಿಕಾ ಪ್ರಾಂಗಣದ ಬಳಿ ಟ್ಯಾಪ್ಮಿ ತಿರುವಿನಿಂದ ರಿಕ್ಷಾ ಸಿಗುತ್ತದೆಯಾದರೂ ಕೆಲವರಿಗೆ ಇದು ದುಬಾರಿ ಎನಿಸಬಹುದು. ಮಣಿಪಾಲದಿಂದ ರಿಕ್ಷಾ ಮಾಡಿದರೆ ಇನ್ನಷ್ಟು ದುಬಾರಿ ಆಗುತ್ತದೆ. ಮಣಿಪಾಲ ದಿಂದ ಕೈಗಾರಿಕಾ ಪ್ರಾಂಗಣ, ಟ್ಯಾಪ್ಮಿ ಮೂಲಕ ಪರ್ಕಳ ಮತ್ತು ಆತ್ರಾಡಿಗೆ ತೆರಳುವ ರಸ್ತೆ ಇದ್ದು ಈ ಮಾರ್ಗವಾಗಿ ಹೊಸ ಬಸ್ ಪರ್ಮಿಟ್ ಮಂಜೂರು ಮಾಡಿದರೆ ಉದ್ಯಾನವನಕ್ಕೆ ಹೋಗುವವರಿಗೆ ಅನುಕೂಲವಾಗುತ್ತದೆ.
ಚಿತ್ರಗಳು: ಆಸ್ಟ್ರೋ ಮೋಹನ್
– ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.