ಸ್ಯಾಕ್ಸ್ ಸೇವಕನ ಶಾರದೆ ಧ್ಯಾನ
ವೀಣಾಪಾಣಿಯ ಪದತಲದಲ್ಲಿ ಕದ್ರಿ
Team Udayavani, Oct 19, 2019, 4:11 AM IST
ಯಾವುದೇ ಕಛೇರಿ ಇರಲಿ… ಅದರ ಆರಂಭಕ್ಕೂ ಮುನ್ನ, ಕಣ್ಮುಚ್ಚಿಕೊಂಡು ಶಾರದೆಯನ್ನು ಧ್ಯಾನಿಸಿಯೇ, ಕದ್ರಿಯವರು ಸ್ಯಾಕ್ಸೋ ಮೂತಿಗೆ ತುಟಿಯೊಡ್ಡುತ್ತಿದ್ದರು. ಕದ್ರಿಯವರ ಬದುಕಿನಲ್ಲಿ ಶಾರದಾಂಬೆ ಹೇಗೆಲ್ಲ ಪ್ರಭಾವ ಬೀರಿದ್ದಳು? ಲೇಖಕರು ಕಂಡಂತೆ, ಒಂದು ಆಪ್ತನೋಟ…
ಒಬ್ಬಳು ವಿದೇಶಿ ಮಹಿಳೆ, ಕದ್ರಿ ಗೋಪಾಲನಾಥರವರ ಬಳಿ ಸ್ಯಾಕ್ಸೋಫೋನ್ ಅಭ್ಯಾಸಕ್ಕೆಂದು ಬಂದಿದ್ದಳು. ಕದ್ರಿಯವರು ಆಕೆಗೆ, “ನೀನು ಶೃಂಗೇರಿಗೆ ಹೋಗಿ ಬಾ. ಅಲ್ಲಿ ಶಾರದಾಂಬೆ ಮತ್ತು ಗುರುಗಳ ದರ್ಶನ ಪಡೆದು, ಮತ್ತೆ ಇಲ್ಲಿಗೆ ಬಾ. ನಾನು ವಾದನ ಕಲಿಸುತ್ತೇನೆ’ ಎಂದು ಸೂಚಿಸಿದ್ದರು. “ಅಲ್ಲಿ ಅಂಥ ವಿಶೇಷ ಏನಿದೆ?’, ಅವಳ ಪ್ರಶ್ನೆ. “ನಿಮಗೆಲ್ಲಾ ವ್ಯಾಟಿಕನ್ ಸಿಟಿ ಹೇಗೆ ಪುಣ್ಯಸ್ಥಳವೋ, ನಮಗೆ ಅಂಥ ಪರಮೋಚ್ಚ ಶ್ರದ್ಧಾಕೇಂದ್ರ ಶೃಂಗೇರಿ’ ಎಂದರು.
ಒಂದೆರಡು ದಿನದಲ್ಲೇ ಆಕೆ, ಶಾರದಾಂಬೆಯ ಸನ್ನಿಧಿಯಲ್ಲಿದ್ದಳು! ಶೃಂಗೇರಿ ಶಾರದೆಯ ದರ್ಶನದ ಬಳಿಕವೇ ಆಕೆಗೆ, ಕದ್ರಿಯವರು ಸ್ಯಾಕ್ಸೋ ವಿದ್ಯೆ ಹೇಳಿಕೊಟ್ಟರು. ಯಾವುದೇ ಕಛೇರಿ ಇರಲಿ… ಅದರ ಆರಂಭಕ್ಕೂ ಮುನ್ನ, ಕಣ್ಮುಚ್ಚಿಕೊಂಡು ಶಾರದೆಯನ್ನು ಧ್ಯಾನಿಸಿಯೇ, ಕದ್ರಿಯವರು ಸ್ಯಾಕ್ಸೋ ಮೂತಿಗೆ ತುಟಿಯೊಡ್ಡುತ್ತಿದ್ದರು. ಹೇಳಿಕೇಳಿ, ವೀಣಾಪಾಣಿ ಶಾರದೆ ನಮ್ಮ ಲಲಿತ ಕಲೆಗಳಿಗೆ ಅಧಿದೇವತೆ ಎಂಬುದು ನಂಬಿಕೆ. ಇಲ್ಲಿ ವೀಣಾಪಾಣಿಯ ಪದತಲದಲ್ಲಿ ಸ್ಯಾಕ್ಸ್ ವಾದಕ ಕದ್ರಿ ಅವರು ಅಕ್ಷರಶಃ ಸೇವಕರೇ ಆಗಿರುತ್ತಿದ್ದರು.
ದಕ್ಷಿಣ ಭಾರತದ ಬಹುತೇಕ ಸಂಗೀತ ದಿಗ್ಗಜರು, ಶೃಂಗೇರಿ ಶ್ರೀಮಠದ ಆಸ್ಥಾನ ವಿದ್ವಾಂಸರು. ಬಾಲಮುರಳಿ, ಜೇಸುದಾಸ್, ಕುನ್ನಕ್ಕುಡಿ ಮೊದಲಾದವರಂತೆ ಕದ್ರಿಯವರೂ ಶೃಂಗೇರಿ ಮಠದ ಆಸ್ಥಾನ ವಿದ್ವಾಂಸರು. ಆದರೆ, ಈ ಸ್ಥಾನಕ್ಕೆ ತಕ್ಕಂತೆ ಶೃಂಗೇರಿ ಜೊತೆಗೆ ಅವಿನಾಭಾವ ಸಂಬಂಧ ಹೊಂದಿರುವುದು ಕದ್ರಿ ಮಾತ್ರ. ಕಳೆದ ವರ್ಷದವರೆಗೂ ಕದ್ರಿ, ಪ್ರತಿ ನವರಾತ್ರಿಯಲ್ಲೂ ಶೃಂಗೇರಿಯಲ್ಲಿ ಕಛೇರಿ ನೀಡಿದ್ದಿದೆ. ಸಂಜೆ ವೇದಿಕೆಯಲ್ಲೂ ಸ್ಯಾಕ್ಸೋ ನುಡಿಸಿ, ರಾತ್ರಿ ನಡೆಯುವ ಗುರುಗಳ ದರ್ಬಾರಿನಲ್ಲೂ ಅವರ ಸೇವೆ ನಡೆಯುತ್ತಿತ್ತು.
ಈ ಖಾಸಗಿ ದರ್ಬಾರಿನಲ್ಲಿ, ಅವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಕುಳಿತು, ಸಂಗೀತ ನುಡಿಸುತ್ತಿದ್ದರು. “ನನಗೆ ಶೃಂಗೇರಿಗೆ ಬರುವುದೆಂದರೆ, ಅಹಂಕಾರವನ್ನು ಕಳಚಿಟ್ಟು ಶಾರದೆಯ ಎದುರು ತಲೆಬಾಗುವ ಪ್ರಕ್ರಿಯೆ’ ಎಂದು ಒಮ್ಮೆ ನನ್ನ ಬಳಿ ಅವರು ಹೇಳಿಕೊಂಡಿದ್ದರು. “ನಾನು ಶೃಂಗೇರಿಗೆ ಬರುವುದು ರೀಚಾರ್ಜ್ ಆಗಲು. ಇಲ್ಲಿ ಶಾರದಾಂಬೆಯ- ಗುರುಗಳ ದರ್ಶನ ಮಾಡಿದ ಮೇಲೆ ಒಂದಷ್ಟು ದಿನಕ್ಕಾಗುವಷ್ಟು ನೆಮ್ಮದಿ, ಶಕ್ತಿ ತುಂಬಿಕೊಳ್ಳುತ್ತೇನೆ’ ಎನ್ನುವಾಗ, ಅವರ ಕಣ್ಣಲ್ಲಿ ಭಕ್ತಿ ಮಿನುಗುತ್ತಿತ್ತು.
ಕದ್ರಿಯವರಿಗೆ ಅವರ ಯೋಗ್ಯತೆಗೆ ತಕ್ಕಂತೆ ಸಾಕಷ್ಟು ಬಿರುದು ಬಾವಲಿಗಳು ಬಂದಿವೆ. ಅವುಗಳನ್ನೆಲ್ಲ ಹೆಸರಿನೊಂದಿಗೆ ಹಾಕಿಕೊಳ್ಳುವುದೆಂದರೆ ಅವರಿಗೊಂದು ಸಂಭ್ರಮ ಕೂಡ. ಕಛೇರಿಗೆ ಬರುವಾಗ ಅವರು ಧರಿಸುವ ವೇಷಭೂಷಣಗಳೇ ಅವರ ವರ್ಣರಂಜಿತ ವ್ಯಕ್ತಿತ್ವವನ್ನು ಸಾರುತ್ತಿದ್ದವು. ನಿರೂಪಕಿ ತಮ್ಮ ಹೆಸರು ಹೇಳುವಾಗ, ಬಿರುದುಗಳನ್ನೂ ಹೇಳಬೇಕು ಎನ್ನುವುದು ಅವರ ಮನದಾಸೆ. ಆದರೆ, ಶೃಂಗೇರಿಗೆ ಬಂದಾಗ, ಅವೆಲ್ಲ ಭಾವವನ್ನೂ ಕದ್ರಿ ಕಳಚಿಡುತ್ತಿದ್ದರು.
“ಶಾರದೆಯ ಮುಂದೆ, ನಾನು ಒಬ್ಬ ಸಾಮಾನ್ಯ ಮನುಷ್ಯ. ಬಿರುದು- ಬಾವಲಿ ಹೇಳುವುದು ಬೇಡ’ ಎನ್ನುವ ವಿನೀತ ಭಾವ. ಶ್ರೀಗಳ ಮುಂದೆ ಸ್ಯಾಕ್ಸ್ ನುಡಿಸುವ ಅವಕಾಶದ ಮುಂದೆ, ಜಗತ್ತಿನ ಯಾವ ವೇದಿಕೆಯೂ ಸಮವಲ್ಲ’ ಎಂದು ಕದ್ರಿ ಭಾವಿಸುತ್ತಿದ್ದರು. ವರ್ಷವಿಡೀ ಸುತ್ತಾಟ. ಸಾಕಷ್ಟು ಕಲಾವಿದರ ಒಡನಾಟ. ಹೀಗಿದ್ದರೂ, ಅವರ ನೆನಪಿನ ಶಕ್ತಿ ಮತ್ತೂಂದು ಅದ್ಭುತ. “ಸ್ಥಳೀಯ ಕಲಾವಿದರನ್ನೂ ಚೆನ್ನಾಗಿ ಗುರುತಿಟ್ಟುಕೊಳ್ಳುತ್ತಿದ್ದ ಸಹೃದಯಿ, ಕದ್ರಿ.
ಯಾರಾದರೂ ಕಛೇರಿಗೆ ಗೈರಾಗಿದ್ದರೆ, ಮರುವರ್ಷ ಬಂದಾಗ, ನೀವೇಕೆ ಅಂದು ಕಛೇರಿಗೆ ಬರಲಿಲ್ಲ ಎಂದು ಕೇಳುತ್ತಿದ್ದರು’ ಎನ್ನುತ್ತಾ, ಸ್ಥಳೀಯ ಮೃದಂಗ ವಾದಕ ನೆಭಿ ಪ್ರಭಾಕರ್, ಸ್ಯಾಕ್ಸೋ ಗಾರುಡಿಗನನ್ನು ನೆನೆಯುತ್ತಾರೆ. ಶೃಂಗೇರಿಯೆಂದರೆ, ನನಗೊಂದು ಅವ್ಯಕ್ತವಾದ ವೈಬ್ರೇಷನ್ ಎಂದು ಕದ್ರಿ ಸದಾ ತಮ್ಮ ಆಪ್ತರಲ್ಲಿ ಹೇಳಿಕೊಂಡಿದ್ದಿದೆ. ನಾದರೂಪಿಣಿ ಶೃಂಗೇರಿ ಶಾರದೆಯ ಸಂಗೀತ ಸೇವೆಗೆ ಕದ್ರಿ ಒಂದು ಅನುಪಮ ರೂಪಕ.
ಶಾರದೆಯ ಮುಂದೆ ಇದೇ ರಾಗ…: ಶೃಂಗೇರಿಯಲ್ಲಿ ಅವರು “ಶ್ರೀಚಕ್ರರಾಜಸಿಂಹಾಸನೇಶ್ವರಿ’ ಎಂಬ ರಾಗಮಾಲಿಕೆಯ ಕೃತಿಯನ್ನು ನುಡಿಸದೇ ಇರುತ್ತಿರಲಿಲ್ಲ. ಕ್ಲಾಸ್ ಮತ್ತು ಮಾಸ್ ಅನ್ನು ಏಕಕಾಲಕ್ಕೆ ನಾದಸುಧೆಯಿಂದ ತೃಪ್ತಿಪಡಿಸುವ ಚಾಕಚಕ್ಯತೆ ಅವರದಾಗಿತ್ತು.
* ರಮೇಶ್ ಬೇಗಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.