ಮೇಲೆದ್ದು ಕುಳಿತ ಪಾರ್ಶ್ವನಾಥ!
Team Udayavani, May 20, 2017, 11:57 AM IST
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಮೂಲೆಯಲ್ಲಿ ಶಿಶಿಲವೆಂಬ ಮತ್ಸ್ಯ ಕ್ಷೇತ್ರವಿದೆ.ಇಲ್ಲಿನ ಶಿಶಿಲೇಶ್ವರನಿಗೆ ಮತ್ಸ್ಯಗಳೇ ಕಾವಲುಪಡೆಯಂತೆ! ಇಲ್ಲಿನ ಮೀನುಗಳು ದೇವರ ಮೀನುಗಳೆಂದೇ ಪ್ರಸಿದ್ಧಿ…
ನಮ್ಮ ಭಾರತ ಎಷ್ಟು ಶ್ರೀಮಂತ ರಾಷ್ಟ್ರವಾಗಿತ್ತೆನ್ನುವುದಕ್ಕೆ ಇತಿಹಾಸವೇ ನಮಗೆ ಸಾಕ್ಷಿ. ಇಲ್ಲೊಂದು ವಿಶೇಷ ಬಸದಿ ಬಗ್ಗೆ ಹೇಳಲೇಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಒಂದು ಮೂಲೆಯಲ್ಲಿ ಶಿಶಿಲವೆಂಬ ಮತ್ಸ್ಯಕ್ಷೇತ್ರವಿದೆ.ಇಲ್ಲಿನ ಶಿಶಿಲೇಶ್ವರನಿಗೆ ಮತ್ಸ್ಯಗಳೇ ಕಾವಲುಪಡೆಯಂತೆ! ಇಲ್ಲಿನ ಮೀನುಗಳು ದೇವರ ಮೀನುಗಳೆಂದೇ ಪ್ರಸಿದ್ಧಿ. ಈ ಮೀನುಗಳನ್ನು ಯಾರೂ ಹಿಡಿಯುವಂತಿಲ್ಲ. ಶೃಂಗೇರಿಯಲ್ಲಿರುವಂತೆ ಇಲ್ಲಿ ಕೂಡ ದೇವಾಲಯಕ್ಕೆ ಆಗಮಿಸುವ ಭಕ್ತರು ಮೀನುಗಳಿಗೆ ಅಕ್ಕಿ ಅಥವಾ ಭತ್ತದ ಅರಳು ತಿನಬಡಿಸುತ್ತಾರೆ. ಇಲ್ಲಿನ ಮೀನುಗಳಿಗೆ ಅಕ್ಕಿ ಹಾಕಿ, ಅವುಗಳ ಸ್ಪರ್ಶ ಮಾಡಿದರೆ ದೀರ್ಘ ಕಾಲದಿಂದ ವಾಸಿಯಾಗದ ಚರ್ಮರೋಗಗಳು ವಾಸಿ ಯಾಗುತ್ತವೆಂಬ ನಂಬಿಕೆ ಇದೆ. ಇಂಥ ಪಾರಂಪರಿಕ ತಾಣದ ಅರ್ಧ ಕಿಲೋಮೀಟರು ದೂರದಲ್ಲಿ ವಿಶೇಷವಾದ ಜೈನ ಬಸದಿ ಉತ್‌ಖನನ ಸಮಯದಲ್ಲಿ ಪತ್ತೆಯಾಗಿದೆ.
ಸುಮಾರು 1320 ವರ್ಷಗಳ ಹಿಂದೆ ಈ ಕಲ್ಲಿನ ಬಸದಿಯ ನಿರ್ಮಾಣವಾಗಿದ್ದು, ಇನ್ನೂರರಿಂದ ಮುನ್ನೂರು ವರ್ಷಗಳ ಹಿಂದೆ ಪೂಜೆ ನಿಂತಿರುವುದು, ತರುವಾಯ ಬಸದಿ ಪೂರ್ತಿ ಮಣ್ಣಿನೊಳಗೆ ಹೂತು ಹೋಗಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಮೂರು ವರ್ಷಗಳ ಹಿಂದೆ ಬಸದಿಯ ಕುರುಹು ಸಿಕ್ಕಿದ್ದು, ಇದೀಗ ಧರ್ಮಸ್ಥಳದ ಧರ್ಮಾಧಿಕಾರಿಗಳ ಯೋಜನೆಯಾದ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಈ ಬಸದಿಯ ಪುನರ್ನಿರ್ಮಾಣ ನಡೆಯುತ್ತಿದೆ. ಅಷ್ಟು ಹಳೆಯ ಕಲ್ಲಿನ ಕಟ್ಟಡ ಹೆಚ್ಚಿನ ಹಾನಿ ಇಲ್ಲದೆ ಮಣ್ಣೊಳಗಿಂದ ಅಚಾನಕ್ ಪ್ರತ್ಯಕ್ಷವಾಗಿದ್ದನ್ನು ಕಂಡರೆ ಒಮ್ಮೆ ರೋಮಾಂಚನವಾಗುತ್ತದೆ.
ಟ್ರಸ್ಟ್‌ನ ವತಿಯಿಂದ ಕಳೆದ ಕೆಲವು ವರ್ಷಗಳಿಂದ ಹಾಳುಬಿದ್ದಿರುವ ಗುಡಿ ಗೋಪುರಗಳ ಪುನರುತ್ಥಾನ ಕಾರ್ಯ ಕೈಗೊಂಡು ಕರ್ನಾಟಕದಲ್ಲಿ 27 ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಮುಗಿಸಿದ್ದಾಗಿದೆ. ಬೂದನೂರು ಎಂಬ ಊರಿನಲ್ಲಿ ಕಾಶಿ ವಿಶ್ವೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲಾಗಿದೆ. ಶಿಶಿಲದಲ್ಲಿರುವ ಬಸದಿ ಪಶ್ಚಿಮಾಭಿಮುಖ ದ್ವಾರವನ್ನು ಹೊಂದಿದ್ದು ಚಂದ್ರನಾಥ ಬಸದಿ ಎಂದು ಗುರುತಿಸಲಾಗಿದೆ. ಇಲ್ಲಿನ ಬಸದಿಯನ್ನು ಬಂಗರಸರೇ ಕಟ್ಟಿದ್ದಾಗಿ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಬಂಗರಸರು ನಂದಾವರ, ಮಂಗಳೂರು ಹಾಗೂ ಬಂಗಾಡಿಯಲ್ಲಿ ತಮ್ಮ ಅಧಿಪತ್ಯ ಹೊಂದಿದ್ದರು.
ಬಸದಿಯ ಕೆಲವು ಕಲ್ಲುಗಳು ಬಿದ್ದಿದ್ದು, ಅವನ್ನು ಊರವರು ಬಸದಿಯ ಕಲ್ಲುಗಳು ಎಂದು ಗೊತ್ತಿಲ್ಲದೇ ತಮ್ಮ ಉಪಯೋಗಕ್ಕೆ ಬಳಸಿಕೊಂಡಿದ್ದಾರೆ. ಪಾರ್ಶ್ವನಾಥ ಇಲ್ಲಿನ ಮುಖ್ಯ ದೇವರು. ದೇವಿ ಜ್ವಾಲಮಾಲಿ ಇದ್ದಿರಬೇಕು (ಇದರ ಕುರುಹು ಇನ್ನೂ ಸಿಕ್ಕಿಲ್ಲ). ಶೋಧ ಕಾರ್ಯ ಪ್ರಗತಿಯಲ್ಲಿದೆ. ಇವನ್ನೆಲ್ಲ ನೋಡುತ್ತಿದ್ದರೆ ನಮ್ಮ ಪೂರ್ವಜರ ಬಗ್ಗೆ ಅಭಿಮಾನ ಎದೆಯೊತ್ತಿ ಬರುತ್ತದೆ. ವಿದೇಶಿಗರ ಆಳ್ವಿಕೆ, ದಬ್ಟಾಳಿಕೆಗೆ ನಮ್ಮ ಮಂದಿರ ಬಸದಿಗಳು ಬಸವಳಿದಿವೆ. ನಮ್ಮ ಶ್ರೀಮಂತ ಭಂಡಾರವನ್ನು ಬ್ರಿಟಿಷರು ಹೊತ್ತೂಯ್ದರೂ ನಮ್ಮ ಭೂತಾಯಿ ತನ್ನ ಭೂಗರ್ಭದಲ್ಲಿ ಅಪಾರ ಸಂಪತ್ತನ್ನು ಅಡಗಿಸಿಟ್ಟಿದ್ದಾಳೆ ಎನ್ನುವುದು ಪುನಃ ಪುನಃ ಸಾಬೀತಾಗುತ್ತಿದೆ.
ರಶ್ಮಿ ಗೋಖಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.