ಶಿರಸಂಗಿ ಶ್ರೀ ಕಾಳಿಕಾ ಕ್ಷೇತ್ರ
12ನೇ ಶತಮಾನದ ದೇಗುಲವಿದು
Team Udayavani, May 18, 2019, 10:25 AM IST
ಶಿರಸಂಗಿಯ ಕಾಳಿಕಾ ದೇವಾಲಯಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಈ ಸ್ಥಳಕ್ಕೆ ರಾಮ-ಲಕ್ಷ್ಮಣರು ಬಂದು ಹೋದರೆಂದೂ ಹೇಳಲಾಗುತ್ತದೆ. ಇಲ್ಲಿ ಕಾಳಿಕಾ ದೇವಿಯ ದೇಗುಲಕ್ಕೆ ಅಭಿಮುಖವಾಗಿ ಕಾಲಭೈರವನ ದೇಗುಲವೂ ಇದೆ.
ಬೆಳಗಾವಿ ಜಿಲ್ಲೆ ಸವದತ್ತಿ ಎಂದಾಕ್ಷಣ ಎಲ್ಲಮ್ಮನ ಕ್ಷೇತ್ರ ನೆನಪಾಗುವುದು ಸ್ವಾಭಾವಿಕ. ಹಾಗೆಯೇ, ಸವದತ್ತಿಯಿಂದ ಕೇವಲ 23 ಕಿ.ಮೀ. ದೂರದಲ್ಲಿರುವ ಶಿರಸಂಗಿಯ ಕಾಳಿಕಾ ದೇವಿಯ ದೇವಸ್ಥಾನವು ರಾಜ್ಯದ ಪ್ರಮುಖ ಶಕ್ತಿ ಕ್ಷೇತ್ರಗಳಲ್ಲಿ ಒಂದಾಗಿದೆ.
ಪುರಾತನ ಕಾಲದಲ್ಲಿ ಮುನಿಗಳಾದ ಋಷ್ಯಶೃಂಗರನ್ನು ಜಮದಗ್ನಿ, ಭಾರ್ಗವ ಇತ್ಯಾದಿ ಋಷಿಗಳು ಸತ್ಕರಿಸಿ ಗೌರವಿಸಿದರು. ಅವರ ಬಿನ್ನಹಕ್ಕೆ ಒಪ್ಪಿದ ಋಷ್ಯಶೃಂಗರು, ಈಗಿನ ಶಿರಸಂಗಿ ಪ್ರದೇಶದಲ್ಲಿ 10 ವಷìಗಳ ಕಾಲ ಕಠೊರ ತಪಸ್ಸನ್ನೂ ಆಚರಿಸಿದರು. ಈ ಮುನಿಗಳ ಯಜ್ಞಯಾಗಗಳನ್ನು ಕೆಡಿಸಲು ಐವರು ರಾಕ್ಷಸರು ನಲುಂದಾಸುರ (ನವಲಗುಂದ), ನರುಂದಾಸುರ (ನರಗುಂದ), ಹಿರಿಕುಂಬಾಸುರ (ಹಿರೇಕುಂಬಿ), ಚಿಕ್ಕುಂಬಾಸುರ (ಚಿಕ್ಕುಂಬಿ) ಹಾಗೂ ಬೆಟ್ಟಾಸುರ (ಬೆಟಸೂರ) ಮತ್ತೆ ಮತ್ತೆ ಪ್ರಯತ್ನಿಸಿದರು. ಆಗ, ಋಷ್ಯಶೃಂಗ ಮುನಿಯ ಪ್ರಾರ್ಥನೆಯ ಮೇರೆಗೆ ಹಾಗೂ ಆತನ ತಪಸ್ಸನ್ನು ಮೆಚ್ಚಿ ಕಾಳಿಕಾ ರೂಪದಿಂದ ಪ್ರತ್ಯಕ್ಷಳಾಗಿ, ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದ ಕ್ರೂರ ರಾಕ್ಷಸರನ್ನು ಸಂಹರಿಸುತ್ತಾಳೆ. ನಂತರ, ಋಷ್ಯಶೃಂಗನ ಬಿನ್ನಹದ ಮೇರೆಗೆ ಅದೇ ರೂಪದಲ್ಲಿ ಆ ಸ್ಥಳದಲ್ಲಿ ಸ್ಥಿರವಾಗಿ ನೆಲೆಸಿದಳೆಂಬುದು ಪೌರಾಣಿಕ ಐತಿಹ್ಯ. ರಾಮ-ಲಕ್ಷ್ಮಣರು ಇಲ್ಲಿಗೆ ಭೇಟಿ ನೀಡಿದ್ದರು ಎಂದೂ ಹೇಳಲಾಗುತ್ತದೆ.
ಪುರಾತತ್ವ ಇಲಾಖೆಯ ಪ್ರಕಾರ, ಕ್ರಿ.ಶ.12ನೇ ಶತಮಾನದಲ್ಲಿ ಕಾಳಿಕಾ ದೇವಸ್ಥಾನ ನಿರ್ಮಾಣಗೊಂಡಿದೆ. ಈ ದೇವಾಲಯವನ್ನು ಹೇಮಾಡನೆಂಬುವನು ಕಟ್ಟಿಸಿದ್ದು, ದೇವಿಯ ಗರ್ಭಗುಡಿಯು ಬೇರೆಯಾಗಿದ್ದು ಮಂಟಪವು ದೊಡ್ಡದಿದೆ. ಕಾಳಿಕಾದೇವಿಯ ಮೂರ್ತಿಯು ಸಾಲಿಗ್ರಾಮ ಶಿಲೆಯಾಗಿದ್ದು, ಕುಳಿತ ಭಂಗಿಯಲ್ಲಿ ಒಂದು ಆಳು ಎತ್ತರ ಪ್ರಮಾಣದಲ್ಲಿದೆ. ಕಾಳಿಕಾ ದೇವಿಯ ಎದುರಿನಲ್ಲಿ ದೇವಿಗೆ ಆಭಿಮುಖವಾಗಿ ಕಾಲಭೈರವ ದೇವಾಲಯವಿದೆ. ಈ ದೇವಾಲಯವನ್ನು ಕ್ರಿ.ಶ.11ನೆಯ ಶತಮಾನದಲ್ಲಿ ಚಾಲುಕ್ಯ ಅರಸರ ಮಾಂಡಲಿಕನಾಗಿದ್ದ ಹೆಬ್ಬೆಯ ನಾಯಕನು ಕಟ್ಟಿಸಿದ್ದನು ಎನ್ನುತ್ತದೆ ಇತಿಹಾಸ.
ದೇವಸ್ಥಾನದ ಬದಿಯಲ್ಲಿ ಕಮಠೇಶ್ವರ ಹಾಗೂ ಭೈರವೇಶ್ವರ ದೇವಾಲಯಗಳಿವೆ. ಕಮಠೇಶ್ವರ ದೇವಾಲಯದ ಮುಂಭಾಗದಲ್ಲಿ ಬ್ರಹ್ಮದೇವರ ವೇದಿಕೆ ಇದೆ. ಪೂರ್ವಾಭಿಮುಖವಾಗಿರುವ ಮಹಾದ್ವಾರವನ್ನು ದಾಟಿದ ಕೂಡಲೇ ಒಳಗೆ ಎಡಬದಿಗೆ, ಬುತ್ತಿ ಹಾರಿಸುವ ವೇದಿಕೆ ಇದೆ. ಕಾಳಿಕಾ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಎಡಬದಿಗೆ ಬನ್ನಿ ಮಹಾಂಕಾಳಿ ಎಂಬ ಹೆಸರಿನ ಚಿಕ್ಕ ಗುಡಿಯಿದೆ.
ಶ್ರೀ ಕಾಳಿಕಾದೇವಿ ಪಲ್ಲಕ್ಕಿಯು ಇಲ್ಲಿಯವರೆಗೂ ಬಂದು ಹೋಗುವ ಸಂಪ್ರದಾಯವಿದೆ. ಇದಕ್ಕೆ ಕಾಳಿಕಾ ಪಾದಗಟ್ಟೆ ಎನ್ನುವರು. ದೇವಸ್ಥಾನದಿಂದ ತುಸು ದೂರದಲ್ಲಿ ಭೀಮರಥಿ- ಖಡ್ಗ ತೀರ್ಥ ಎಂಬ ಹೊಂಡಗಳಿವೆ. ಪ್ರತಿದಿನವೂ ಮುಂಜಾನೆ ಹಾಗೂ ಸಾಯಂಕಾಲ, ದೇವಿಗೆ ಆರತಿ ಸೇವೆ ನಡೆಯುತ್ತದೆ. ಶುಕ್ರವಾರ ವಿಶೇಷವಾಗಿ ಬಣ್ಣ ಬಣ್ಣದ ಸೀರೆಗಳಿಂದ ದೇವಿಯನ್ನು ಅಲಂಕರಿಸುತ್ತಾರೆ. ಶ್ರಾವಣ ಮಾಸದಲ್ಲಿ ಪ್ರತಿದಿನ ಬೆಳಿಗ್ಗೆ 3 ಗಂಟೆಯಿಂದಲೇ ವೈಶಿಷ್ಟ್ಯಪೂರ್ಣ ಪೂಜೆಗಳು ನೆರವೇರುತ್ತದೆ.
ಪ್ರತಿ ವರ್ಷ ಯುಗಾದಿಯಂದು ಸುತ್ತಮುತ್ತಲಿನ ರೈತರು, ತಾವು ಬೆಳೆದ ಧಾನ್ಯಗಳನ್ನು ದೇವಿಗೆ ಅರ್ಪಿಸಿ, ಅದರಿಂದ ತಯಾರಿಸಿದ ಪ್ರಸಾದವನ್ನು ಚೈತ್ರ ಶುದ್ಧಪಂಚಮಿಯಂದು ಸ್ವೀಕರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಬೆಳಗ್ಗೆ 5ಗಂಟೆಗೆ ಬುತ್ತಿ ಹಾರಿಸುವ ಆಚರಣೆ ನಡೆಯುತ್ತದೆ. ಇದರ ವಿಶೇಷ ಏನೆಂದರೆ, ಅನ್ನವನ್ನು ರುಂಡದ ಆಕಾರದಲ್ಲಿ ಮಾಡಿ ಹಾರಿಸಲಾಗುತ್ತದೆ. ಈ ಬುತ್ತಿ ಯಾರಿಗೆ ಸಿಗುತ್ತದೋ ಅವರ ಜೀವನದಲ್ಲಿ ಅನ್ನ ಮತ್ತು ವಸ್ತ್ರದ ಕೊರತೆ ಎದುರಾಗುವುದಿಲ್ಲ ಎಂಬ ನಂಬಿಕೆ ಇದೆ.
ಪ್ರತಿ ವರ್ಷ ಯುಗಾದಿಯ ಅಮಾವಾಸ್ಯೆಯ ಪ್ರಾತಃ ಕಾಲ ಶ್ರೀದೇವಿಯ ಅಭಿಷೇಕದಿಂದ ಪ್ರಾರಂಭವಾಗುವ ಯಾತ್ರಾ ಮಹೋತ್ಸವವು ಚೈತ್ರಶುದ್ಧ ಪಂಚಮಿಯವರೆಗೆ ಅದ್ದೂರಿಯಿಂದ ನೆರವೇರುತ್ತದೆ. ಜಾತ್ರೆಯ ಸಮಯದಲ್ಲಿ ರಥೋತ್ಸವವಿಲ್ಲ. ಕೇವಲ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಪಲ್ಲಕ್ಕಿಯು ಬನ್ನಿ ಮಹಾಕಾಳಿ ಕಟ್ಟೆಯವರೆಗೆ ಹೋಗಿ, ಅಲ್ಲಿ ಅಭಿಷೇಕ, ಪೂಜೆ, ಮಂಗಳಾರತಿ ಮುಗಿದ ಮೇಲೆ ಪುನಃ ಮರಳಿ ಕಾಳಿಕಾ ದೇವಸ್ಥಾನಕ್ಕೆ ಬರುತ್ತದೆ. ದೇವಸ್ಥಾನದಲ್ಲಿ ಭಕ್ತರಿಗಾಗಿ ಅನ್ನ ಸಂತರ್ಪಣೆ ನಿತ್ಯವೂ ನಡೆಯುತ್ತದೆ.
ಸುರೇಶ ಗುದಗನವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.