ಶಿರಡಿ ಊಟಕೆ “ಬಾಬಾ’
ಏಷ್ಯಾದ ಮಹಾನ್ ಸೋಲಾರ್ ಅಡುಗೆಮನೆ
Team Udayavani, Mar 7, 2020, 6:09 AM IST
ಶಿರಡಿ ಸಾಯಿಬಾಬಾ, 19ನೇ ಶತಮಾನದಲ್ಲಿದ್ದ ಪವಾಡ ಪುರುಷ. ಭಕ್ತರ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಿ, ಸಾಂತ್ವನ ಹೇಳಿದ ಸಂತ. ದಿನವೂ ಸಹಸ್ರಾರು ಭಕ್ತರು ಬಾಬಾರ ದರ್ಶನಕ್ಕೆಂದು ಶಿರಡಿಗೆ ತೆರಳುತ್ತಾರೆ. ಅನ್ನದಾನದಲ್ಲಿ ಬಹಳ ನಂಬಿಕೆಯನ್ನು ಹೊಂದಿದ್ದ ಬಾಬಾ, ಸ್ವತಃ ತಾವೇ ಕೈಯ್ಯಾರೆ ಅಡುಗೆ ಮಾಡಿ ಭಕ್ತರಿಗೆ ಬಡಿಸುತ್ತಿದ್ದರು. ಮಹಾಸಂತನ ಈ ಸನ್ನಿಧಿಯಲ್ಲಿ 2009ರಿಂದ ಅನ್ನ ಸಂತರ್ಪಣೆ ನಡೆಯುತ್ತಿದೆ.
ತಿರುಪತಿಯ ನಂತರದ ಸ್ಥಾನದಲ್ಲಿ ನಿಲ್ಲುವ ಇಲ್ಲಿನ ಅಡುಗೆಮನೆ, ರುಚಿ- ಶುಚಿಗೆ ಮಹತ್ವ ನೀಡಿದೆ. ಹಲವಾರು ಬಾರಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದೆ. ಸಂಪೂರ್ಣ ಸೌರಶಕ್ತಿಯಿಂದಲೇ ನಡೆಯುವ ಏಷ್ಯಾದ ಮಹಾ ಅಡುಗೆಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಊಟದ ಸಮಯ: ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆ
ಭಕ್ಷ್ಯ ಸಮಾಚಾರ
– ಮಹಾರಾಷ್ಟ್ರ ಶೈಲಿಯ ಭೋಜನ. ಈ ಭಾಗದಲ್ಲಿ ಚಪಾತಿ ಬಳಕೆ ಜಾಸ್ತಿ.
– ಪ್ರತಿದಿನ ಅನ್ನ, ಸಾಂಬಾರ್, ಚಪಾತಿ ಅಥವಾ ಪೂರಿ.
– ದಾಲ್, ತರಕಾರಿ ಪಲ್ಯ ಮತ್ತು ಸ್ವೀಟ್ ಇರುತ್ತದೆ.
– ಸ್ಟೀಲ್ ತಟ್ಟೆಯಲ್ಲಿ ಊಟ ಬಡಿಸುವ ವ್ಯವಸ್ಥೆ.
ಹೆಚ್ಚು ಬಳಸುವ ತರಕಾರಿ: ಸೋರೆಕಾಯಿ, ನವಿಲುಕೋಸು, ಹೂಕೋಸು, ಬೀನ್ಸ್, ಸೊಪ್ಪು, ಕೋಸು ಗಡ್ಡೆ, ಟೊಮೇಟೊ.
ಬಾಣಸಿಗ ಬಾಬಾ!
– ಶ್ರೀಸಾಯಿ ಪ್ರಸಾದ ನಿಲಯ ಪ್ರವೇಶಿಸುತ್ತಿದ್ದಂತೆ, ಆಳೆತ್ತರದ ಒಲೆಯ ಮೇಲೆ ಅಡುಗೆ ಮಾಡುತ್ತಿರುವ ಸಾಯಿಬಾಬಾರ ಸುಂದರ ಮೂರ್ತಿ ಸ್ವಾಗತಿಸುತ್ತದೆ.
– ಭಕ್ತರನ್ನು ಉಪಚರಿಸುವ ಸ್ವಯಂಸೇವಕರ ಗುಣ ಮೆಚ್ಚುವಂಥದ್ದು.
– ಸೌರಶಕ್ತಿ ಬಳಸಿ ಅಡುಗೆ ಮಾಡುವುದರಿಂದ, ಪ್ರತಿವರ್ಷ 58 ಲಕ್ಷ ರೂ.ನಷ್ಟು ಇಂಧನ ಉಳಿತಾಯ.
– 11550 ಚದುರಡಿಯ ಊಟದ ಹಾಲ್‌ನಲ್ಲಿ ಒಮ್ಮೆಲೇ 3600 ಜನ ಊಟ ಮಾಡಬಹುದು.
ಇದು ದೈವಿಕ ಭೋಜನ: ಇಲ್ಲಿ ದಿನವೂ ಬಾಬಾರಿಗೆ ಧೂಪಾರತಿ ಹಾಗೂ ಕಾಕಡಾರತಿ ಆದ ನಂತರ ಮಾಡುವ ನೈವೇದ್ಯವನ್ನು ಭಕ್ತಾದಿಗಳಿಗೆ ಬಡಿಸುವ ಪ್ರಸಾದದಲ್ಲಿ ಬೆರೆಸಿ, ನಂತರ ಬಡಿಸುತ್ತಾರೆ. ಹಾಗಾಗಿ, ಭೋಜನದಲ್ಲಿ ದೈವಿಕತೆ ಇರುತ್ತದೆ ಎಂದೇ ನಂಬಿರುವ ಭಕ್ತಾದಿಗಳು, ತಮ್ಮ ಸಕಲ ಕಷ್ಟಗಳು ಪರಿಹಾರವಾಗುತ್ತವೆ ಎನ್ನುವ ಕಾರಣಕ್ಕೆ, ಇಲ್ಲಿ ತಪ್ಪದೇ ಊಟ ಮಾಡುತ್ತಾರೆ.
ಸಂಖ್ಯಾ ಸೋಜಿಗ
6- ಟನ್ ಗೋದಿ ಹಿಟ್ಟಿನಿಂದ ಚಪಾತಿ
10- ಸ್ಟೀಮ್ ಬಾಯ್ಲರ್‌ಗಳಲ್ಲಿ ದಾಲ್ ತಯಾರಿ
120- ಬಾಣಸಿಗರಿಂದ ಅಡುಗೆ
3000- ಮಂದಿಗೆ ಬೆಳಗ್ಗಿನ ಉಪಾಹಾರದ ಪೊಟ್ಟಣ ವಿತರಣೆ
40,000- ಭಕ್ತರಿಗೆ ನಿತ್ಯ ಅನ್ನಸಂತರ್ಪಣೆ
6,00,000- ರೂ., ದಿನದ ಊಟದ ಖರ್ಚು
1,00,0000- ಲಡ್ಡುಗಳ ತಯಾರಿ
ಬಾಬಾ ಅವರ ದರ್ಶನಕ್ಕೆ ಬಂದ ಭಕ್ತರಾರೂ, ಹಸಿದ ಹೊಟ್ಟೆಯಲ್ಲಿ ಹಿಂತಿರುಗಬಾರದು. ಸಂತೃಪ್ತರಾಗಿಯೇ ಹೋಗಬೇಕು ಎಂಬುದು ನಮ್ಮ ಆಶಯ.
-ರಘುನಾಥ್ ಗೋಂದ್ಕರ್, ಸಾಯಿ ಪ್ರಸಾದ ನಿಲಯ
* ಪ್ರಕಾಶ್ ಕೆ. ನಾಡಿಗ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.