ಹಾಡೋ ಹಕ್ಕಿ: 2000 ಜನಪದ ಹಾಡುಗಳ ಮೆಮೋರಿ ಕಾರ್ಡು
Team Udayavani, Dec 16, 2017, 12:42 PM IST
ಕಂಚಿನ ಕಂಠ. ಆಕೆ ಅನಕ್ಷರಸ್ಥೆ. ಹಳ್ಳಿಯ ಹೆಂಗಸು. ಆದರೆ ಆಕೆಯದ್ದು ಕೋಗಿಲೆಯ ಕಂಠ. ಒಂದೊಮ್ಮೆ ಹಾಡಲು ನಿಂತರೆ ಒಂದೇ.. ಎರಡೇ… ನೂರಾರು ಹಾಡುಗಳನ್ನು ಹಾಡುವವರೆಗೂ ನಿಲ್ಲುವ ಮಾತೇ ಇಲ್ಲ.. ಎಫ್ಎಂನಂತೆ ದಿನದ 24 ಗಂಟೆಯೂ ಹಾಡುವಷ್ಟು ಹಾಡುಗಳನ್ನು ತನ್ನ ಮೆಮೋರಿಯಲ್ಲಿ ಆಕೆ ಇಟ್ಟು ಕೊಂಡಿದ್ದಾರೆ. ಅವರಿಗೆ ಪುಸ್ತಕ ಹಿಡಿದು ಹಾಡಿ ಅಭ್ಯಾಸವೇ ಇಲ್ಲವಂತೆ..
ಎಲ್ಲವೂ ನೆನಪಿನಂಗಳದಿಂದಲೇ ಪುಟಿ ಪುಟಿದು ಬರುತ್ತವೆ.. ಒಂದರ ಮೇಲೊಂದು ಹಾಡು..!! ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಮರತೂರಿನ ತಾರಾಬಾಯಿ ದೊಡ್ಡಿ ಮುಂದೆ ಕುಂತರೆ ಅದೊಂಥರ ಎಫ್ ಎಂ ರೇಡಿಯೋ ಪಕ್ಕದಲ್ಲಿ ಇದ್ದಂಗೆ. ಈ ನಿಟ್ಟಿನಲ್ಲಿ ಬಳ್ಳಾರಿಯ ನಾಡೋಜ ದರೋಜಿ ಈರಮ್ಮ ಕೂಡ ನೆನಪಾಗಬಹುದು. ಈರಮ್ಮ ಅವರು ಸಾವಿರ ಹಾಡುಗಳನ್ನು ನೆನಪಿನಲ್ಲಿ ಇಟ್ಟು ಕೊಂಡು ಹಾಡುತ್ತಿದ್ದರು.
ತಾರಾಬಾಯಿ ಕೂಡ ಅದೇ ರೀತಿ ಹಾಡುತ್ತಾರೆ. ಇವರ ಬಳಿ ಎರಡು ಸಾವಿರ ಹಾಡುಗಳಿವೆ. ಇವರೇ ಸ್ವತಃ ಪದಬಳಕೆ ಮಾಡಿ ಹಾಡು ಕಟ್ಟಿ ರಾಗ, ತಾಳ ಹಾಕಿ ಹಾಡಿದ್ದಾರೆ. ಆದ್ದರಿಂದ ಇವರು ಕೂಡ ದರೋಜಿ ಈರಮ್ಮನಂತೆ ಅಪ್ಪಟ ಗ್ರಾಮೀಣ ಸಾಧಕಿ. ಬಳಪ ಹಿಡಿದು ಅಕ್ಷರ ಕಲಿಯದಿದ್ದರೇನಾಯಿತು. ಮನಸ್ಸು ಹಚ್ಚಿ ಕೇಳುವ ಗುಣ ಇರುವ ತಾರಾಬಾಯಿ, ಬದುಕಿನುದ್ದಕ್ಕೂ ಸವೆಸಿದ ಕ್ಷಣಗಳಿಗೆ, ಕಣ್ಣು ಕಂಡ ದೃಶ್ಯ, ಘಟನಾವಳಿಗಳಿಗೆ ಅಕ್ಷರದ ಜೊತೆ ಮಾಡಿ ಕಾವ್ಯ ಕಟ್ಟಿ ಹಾಡಿದ್ದಾರೆ. ಸಂಗೀತ ಕಲಿಯದಿದ್ದರೂ ಶಾರದೆಯ ವರಪುತ್ರಿ ಎನ್ನಿಸಿದ್ದಾರೆ.
ಜನಪದ, ಲಾವಣಿ, ಸೋಬಾನ, ಕುಟ್ಟುವ, ಬೀಸುವ..ಹಂತಿ ಪದಗಳು ಸೇರಿದಂತೆ ಸಾವಿರಾರು ಹಾಡುಗಳನ್ನು ತಾರಾಬಾಯಿ ಬಾಯಿಪಾಠ(ಕಂಠ) ಮಾಡಿಟ್ಟು ಕೊಂಡಿದ್ದಾರೆ. ಒಂದರ್ಥದಲ್ಲಿ ಈಕೆ ನಡೆದಾಡುವ ಮೆಮೋರಿಕಾರ್ಡು. 65ರ ಇಳಿ ವಯಸ್ಸಿನಲ್ಲೂ ಹುಮ್ಮಸ್ಸು ಕಮ್ಮಿಯಾಗಿಲ್ಲ. ಧ್ವನಿ ನಡುಗುವುದಿಲ್ಲ. ಪದಗಳು ಮರೆಯುವುದಿಲ್ಲ. ಉಚ್ಛಾರ ತಡವರಿಸಲ್ಲ.. ಪಕ್ಕಾ ಗ್ರಾಮೀಣ ಸೊಗಡಿನ ಹಾಡುಗಾರ್ತಿ, ಎನ್.. ಕಡಿತಾವ.. ತಂಗಿ.. ತೋಗರ್ಯಾನ ಹುಳ.. ಭಾಳ ಖೋಡಿ.. ಎನ್ನುವ ಹಾಡಂತೂ ಸುಗ್ಗಿಯ ರಂಗು ಹೆಚ್ಚಿಸುವಷ್ಟು ಸೊಗಸಾಗಿದೆ. ಇದನ್ನು ಚಿತ್ತಾಪುರ ಭಾಗದಲ್ಲಿ ಕೇಳದವರಿಲ್ಲ..
ಸಂಸ್ಕೃತಿ ಸಂರಕ್ಷಕಿ..: ತಾರಾಬಾಯಿ ದೊಡ್ಡ ಸಂಶೋಧಕರು, ಅಕ್ಷರ ಬಲ್ಲವರು ಮಾಡದಂತಹ ಸಾಧನೆಯನ್ನು ಈಕೆ ಜನಪದ ಲೋಕಕ್ಕೆ ಮಾಡಿದ್ದಾರೆ. ಅಳಿದು ಹೋಗುತ್ತಿರುವ ಹಂತಿ ಹಾಡುಗಳನ್ನು ತಮ್ಮ ಸ್ಮತಿ ಪಟಲದಲ್ಲಿ ರಕ್ಷಣೆ ಮಾಡಿ ಇಟ್ಟುಕೊಂಡಿದ್ದಾರೆ. ಅಲ್ಲದೆ, ನೂರಾರು ಸೋಬಾನ ಪದಗಳನ್ನೂ ನೆನಪಿಟ್ಟುಕೊಂಡಿದ್ದಾರೆ. ತೊಗರ್ಯಾನ ಹುಳ ಕಡಿತಾವ ಎನ್ನುವ ಹಾಡು ಬರೆದು ನಮ್ಮ ಮಧ್ಯೆ ರೈತರೂ ಇದ್ದಾರೆ ಎನ್ನುವ ಹಾಗೂ ಅವರ ಸಂಕಷ್ಟಗಳನ್ನು ಎತ್ತಿ ತೋರಿಸಿದ್ದಾರೆ. ಇದರಿಂದಾಗಿ ಅವರೊಬ್ಬ ಸಂಸ್ಕೃತಿ ಸಂರಕ್ಷಕಿ.
ಒಂದು ತಲೆಮಾರಿನ ಸಾಂಸ್ಕೃತಿಕ ಲೋಕವನ್ನು ಮತ್ತೂಂದು ತಲೆಮಾರಿಗೆ ನೀಡುತ್ತಿರುವ ಸಂಗೀತ ವಂಶಸ್ಥೆ ಎಂದರೆ ತಪ್ಪಾಗಲಾರದು. ಸಂಗೀತಕ್ಕೆ ಜಾತಿ ಇಲ್ಲ ಎನ್ನುವುದನ್ನು ತಾರಾಬಾಯಿ ಸಾಬೀತು ಮಾಡಿದ್ದಾರೆ. ದಲಿತ ಕುಟುಂಬದಿಂದ ಬಂದಿದ್ದೇನೆ. ಅದಕ್ಕಾಗಿ ಸರಕಾರ ತಮ್ಮನ್ನು ಹಾಗೂ ತಮ್ಮ ಸಾಧನೆಯನ್ನು ಗಮನಿಸುತ್ತಿಲ್ಲ ಎನ್ನುವ ನೋವಿನ ಮಧ್ಯದಲ್ಲೂ ತನ್ನ ಸಂಗೀತದಿಂದ ಸಮಾಜದ ಸಂತೋಷ ಹೆಚ್ಚಿಸುತ್ತಿದ್ದಾರೆ.
ಜಾಗೃತಿಗಾಗಿ ಹಾಡು..: ಅಕ್ಷರ ಪರಿಚಯ ಇಲ್ಲದಿದ್ದರೂ ಸಾಕ್ಷರತೆ ಪ್ರಚಾರಕ್ಕೆ ಜನಪದ ದಾಟಿಯಲ್ಲಿ ಹಾಡುಗಳನ್ನು ಬರೆದಿದ್ದಾರೆ. ಅಕ್ಷರ ಕಲಿರಣ್ಣಾ..ಅಕ್ಷರ ಹಾಡು ಸಾಕ್ಷರತೆಯ ಪ್ರಚಾರದ ಪ್ರಮುಖ ಹಾಡಾಗಿದೆ. ಮೂಢನಂಬಿಕೆ, ದೇವದಾಸಿ ಪದ್ಧತಿ ಹಾಗೂ ಇತರೆ ಅನಿಷ್ಟ ಪದ್ಧತಿಗಳ ಜಾಗೃತಿಗಾಗಿ ಹಾಡುಗಳನ್ನು ಬರೆದು ಹಾಡಿದ್ದಾರೆ. ಆಕಾಶವಾಣಿ, ದೂರದರ್ಶನ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲೂ ಹಾಡಿದ್ದಾರೆ.
ತುಂಬು ಕುಟುಂಬದ ಅಜ್ಜಿ!: ತಾರಾಬಾಯಿಯ ಪತಿ ಶಿವಶರಣಪ್ಪ ದೊಡ್ಡಿ ಕಲಾವಿದರು. ಈಗ ಅವರಿಲ್ಲ.. ಆದರೆ, ಎರಡು ಗಂಡು, ಒಂದು ಹೆಣ್ಣು ಮಕ್ಕಳಲ್ಲದೆ 13ಜನ ಮೊಮ್ಮಕ್ಕಳಿರುವ ತುಂಬು ಕುಟುಂಬದ ಅಜ್ಜಿ. ಮೊಮ್ಮಕ್ಕಳಲ್ಲೂ ಕಲಾ ಆಸಕ್ತಿ ಇದೆಯಂತೆ.. ಆದರೆ, ಇನ್ನೂ ಯಾರೂ ಅಜ್ಜಿಯ ಹಾದಿ ಹಿಡಿದಿಲ್ಲ. ಶಾಲೆಗೆ ಹೋಗುತ್ತಿದ್ದಾರೆ. ಆದರೆ, ಮಗ ಮಲ್ಲಿಕಾರ್ಜುನ ದೊಡ್ಡಿ ಹೇಳುವುದೆ ಬೇರೆ..
“ಅಲ್ರೀ.. ನಮ್ಮ ತಾಯಿ ಜನಪದ ಲೋಕದ ಸಾಧಕಿ. ಸಾವಿರಾರು ಹಾಡುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಹಾಡುತ್ತಾರೆ. ಹಲವಾರು ಹಾಡುಗಳನ್ನು ತಾವೇ ರಚನೆ ಮಾಡಿದ್ದಾರೆ. ಯಾರಿಗೂ ನನ್ನವ್ವ ನೆನಪಾಗಲಿಲ್ಲವೇ? ಆಕೆಯ ಸಾಧನೆ ಇವರಿಗೆ ತೃಪ್ತಿ ತಂದಿಲ್ಲವೇ.. ಅಂತ ಬೇಜಾರು ಮಾಡಿಕೊಳ್ಳುತ್ತಾರೆ.
ಕೋಶ ಓದದೆ ದೇಶ ಸುತ್ತಿದೆ..: “ಕೋಶ ಓದು. ದೇಶ ಸುತ್ತು ‘ ಎನ್ನುವ ಮಾತನ್ನು ಉಲ್ಟಾ ಮಾಡಿರುವ ತಾರಾಬಾಯಿ ದೊಡ್ಡಿ ಕೋಶ ಓದದೆಯೇ. ದೇಶವನ್ನು ಸುತ್ತಿದ್ದಾರೆ. ಪುಣೆ, ದೆಹಲಿ, ಬೆಂಗಳೂರು, ಮುಂಬಯಿ ಎಲ್ಲಡೆಗಳಲ್ಲಿ ಓಡಾಡಿದ್ದಾರೆ. ಹಾಡು ಹಾಡಿದ್ದಾರೆ. ಸಭೀಕರನ್ನು ತಮ್ಮ ದನಿಯ ಆಲಾಪದಲ್ಲಿ ತೇಲಿಸಿದ್ದಾರೆ. ಇಂತಹ ಸಾಧಕಿ 60 ದಾಟಿದರೂ ಇನ್ನೂ ಮಾಶಾಸನ ದೊರೆಯುತ್ತಿಲ್ಲ ಎನ್ನುವ ನೋವು ತಾರಾಬಾು ಅವರನ್ನು ಕಾಡಿದೆ…
ಎನ್.. ಮಾಡೋದ್ರಿ… ಜೀವನ ಕವಲುದಾರಿ. ನಡೆದುಕೊಂಡು. ತೆವಳಿಕೊಂಡು. ಕಷ್ಟ ಕೂಟಲೇ ಸಹಿಸಿಕೊಂಡು ಹಾಡನ್ನೇ ದುಡಿವ ಶಕ್ತಿಯನ್ನಾಗಿಸಿಕೊಂಡು 60 ದಾಟಿದ್ದೇನೆ. ಇನ್ನೆಷ್ಟು ದಿನವೋ ಆ ದೇವರು ಹಾಡಿಸುತ್ತಾನೋ ಹಾಡಿಸಲಿ.. ಎನ್ನುತ್ತಾ ತಾರಾಬಾಯಿ ಭಾವುಕರಾಗುತ್ತಾರೆ. ಇಂತಹ ಒಬ್ಬ ಸಾಧಕಿಗೆ ಸಿಗಬೇಕಾಗಿರುವ ಸಾಮಾಜಿಕ, ಸರಕಾರಿ ಗೌರವಗಳು ಸಿಗಬೇಕಲ್ಲವೆ..?
* ಸೂರ್ಯಕಾಂತ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Podcast: ಗಾಂಧೀಜಿ ಎಂದೂ ಟೋಪಿ ಧರಿಸುತ್ತಿರಲಿಲ್ಲ, ಆದರೆ ದೇಶದಲ್ಲಿ “ಗಾಂಧಿ ಟೋಪಿ’ ಜನಜನಿತ!
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.