ಸೌರವ್ ಗಂಗೂಲಿ ಅದ್ಭುತ, ಅಪರಿಪೂರ್ಣ ಅಧ್ಯಾಯ
Team Udayavani, Apr 21, 2018, 3:25 AM IST
ಸೌರವ್ ಗಂಗೂಲಿ…ಭಾರತೀಯ ಕ್ರಿಕೆಟ್‌ನ ಒಂದು ವರ್ಣರಂಜಿತ ಅಧ್ಯಾಯ, ಒಂದು ಅಪರಿಪೂರ್ಣ ಹೆಸರು, ಒಂದು ಹೊಸ ಆಯಾಮ, ಒಂದು ನಿತ್ಯಸ್ಫೂರ್ತಿ, ಸದಾ ಕಾಡುವ ನೋವು, ಒಂದು ದುರಂತ, ಒಂದು ಅದ್ಭುತ…! ಎಲ್ಲವೂ ಇದ್ದೂ ಏನೂ ಇಲ್ಲದ, ಏನೂ ಇಲ್ಲದೆಯೂ ಎಲ್ಲವನ್ನೂ ಗಳಿಸಿಕೊಂಡ ಅಧ್ಯಯನ ಯೋಗ್ಯ ವ್ಯಕ್ತಿ ಈ ಸೌರವ್ ಗಂಗೂಲಿ.
ಭಾರತೀಯ ಕ್ರಿಕೆಟ್‌ನ ಮೇರುಶಿಖರ ಅಂದರೆ ಸಚಿನ್ ತೆಂಡುಲ್ಕರ್. ಇವರ ಬಗ್ಗೆ ವಿವರಿಸುವಾಗ ದಾಖಲೆಗಳೆಂಬ ಏಕಮುಖ ದಾರಿಯಿರುತ್ತದೆ. ಗಂಗೂಲಿಯನ್ನು ನೀವು ಬರೀ ಅಂಕಿಅಂಶಗಳಿಂದ ಅಳೆಯಲು ಸಾಧ್ಯವೇ ಇಲ್ಲ. ಅಂಕಿಗಳ ಲೆಕ್ಕಾಚಾರದಲ್ಲಿ ಅದ್ಭುತ ಎನಿಸಿಕೊಂಡೂ ಅದನ್ನು ಮೀರುವ, ಅದು ಮುಖ್ಯವಲ್ಲ ಎನಿಸುವಂತಹ ಕ್ರಿಕೆಟಿಗ ಗಂಗೂಲಿ. ಇವರು ತಮ್ಮ ವೃತ್ತಿಜೀವನದಲ್ಲಿ ಒಂದು ಕ್ರಿಕೆಟ್ ತಂಡದ ಮಾನಸಿಕತೆಯನ್ನು, ರೂಪವನ್ನು ಬದಲಾಯಿಸಿದ ಶಕ್ತಿ. ಅದಕ್ಕೊಂದು ಪ್ರಾಮಾಣಿಕ, ಪ್ರಬುದ್ಧ, ವೃತ್ತಿಪರ ರೂಪವನ್ನು ಕೊಡುತ್ತಾ, ಅಲ್ಲಿರುವ ರಾಜಕೀಯ ಲೆಕ್ಕಾಚಾರಗಳನ್ನು ನಿರ್ನಾಮ ಮಾಡುತ್ತಾ ಅದೇ ರಾಜಕೀಯಕ್ಕೆ ಬಲಿಯಾಗಿ ಅವಧಿಗಿಂತ ಮುನ್ನವೇ ಕ್ರಿಕೆಟ್ ಬಾಳ್ವೆಯನ್ನು ಬಲಿಕೊಟ್ಟ ತ್ಯಾಗಿ.
ಸಚಿನ್ ತೆಂಡುಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದಾಗ ಬರೀ 16 ವರ್ಷ. ಈ ಹಂತದಲ್ಲಿ ಗಂಗೂಲಿಗೆ 19 ವರ್ಷ. ತೆಂಡುಲ್ಕರ್‌ಗೆ ಮಹಾರಾಷ್ಟ್ರವೆಂಬ ಭಾರತೀಯ ಕ್ರಿಕೆಟ್ ಶಕ್ತಿಕೇಂದ್ರದ ಬೆಂಬಲವಿದ್ದರೆ, ಗಂಗೂಲಿ ಏಕಾಂಗಿಯಾಗಿ ಒಳಗಡಿಯಿಟ್ಟು, ಹಾಗೆಯೇ ಹೊರಬಿದ್ದ ಏಕಾಂಗಿ.
ದುರಂತ ಕಥೆ ಹೀಗೆ ಆರಂಭ
ಅಂದಿನ ಬಿಸಿಸಿಐ ಆಯ್ಕೆಗಾರ ರುಸಿ ಜೀಜಿಬಾಯಿ ಅವರ ಪ್ರಬಲ ಬೆಂಬಲದೊಂದಿಗೆ 1991-92ರ ಆಸ್ಟ್ರೇಲಿಯಾ ಪ್ರವಾಸಕ್ಕೆ ಸೌರವ್ ಗಂಗೂಲಿ ಆಯ್ಕೆಯಾದರು. ಪಾಕಿಸ್ತಾನ 19 ವಯೋಮಿತಿ ತಂಡದ ವಿರುದ್ಧ ಗಂಗೂಲಿ ಬಾರಿಸಿದ ಶತಕ ಈ ಆಯ್ಕೆಗೆ ಸ್ಫೂರ್ತಿ. ಆದರೆ ಇಂತಹ ಸಂತಸ ಒಂದು ದುರಂತದೊಂದಿಗೆ ಮುಗಿದುಹೋಯಿತು. ಆಗ ಭಾರತೀಯ ಕ್ರಿಕೆಟ್‌ನ ನಾಯಕ ಮೊಹಮ್ಮದ್ ಅಜರುದ್ದೀನ್. ಈ ಪ್ರವಾಸ ಒಟ್ಟಾರೆ ನಡೆದಿದ್ದು 4 ತಿಂಗಳು. ಇಡೀ ಪ್ರವಾಸದಲ್ಲಿ ಗಂಗೂಲಿ ಆಡಿದ್ದು ಒಂದು ಏಕದಿನ ಪಂದ್ಯ ಮಾತ್ರ. ಒಬ್ಬ ಬ್ಯಾಟ್ಸ್‌ಮನ್ ಆಗಿ ತಂಡಕ್ಕೆ ಪ್ರವೇಶ ಕೊಟ್ಟ ಅವರಿಗೆ ಇಡೀ ಪ್ರವಾಸದಲ್ಲಿ ಸಿಕ್ಕಿದ್ದು ನೆಟ್‌ಬೌಲರ್ ಪಾತ್ರ. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲೂ ಜಾಗವಿಲ್ಲ, ಮುಂದಿನ ತ್ರಿಕೋನ ಏಕದಿನ ಸರಣಿಯಲ್ಲಿ ಸರಕ್ಕನೆ ಒಂದು ಪಂದ್ಯಕ್ಕೆ ಕರೆ ಬಂದಾಗ ಗಂಗೂಲಿ ಬ್ಯಾಟಿಂಗ್ ಅಭ್ಯಾಸ ನಡೆಸದೇ 2 ತಿಂಗಳಾಗಿತ್ತು! ಆಗ ತಂಡದ ವ್ಯವಸ್ಥಾಪಕರ ಬಳಿ, ಕೆಲ ಓವರ್‌ಗಳಾದರೂ ಬ್ಯಾಟಿಂಗ್ ಅಭ್ಯಾಸಕ್ಕೆ ಅವಕಾಶ ಕೊಡಿ ಎಂದು ಗಂಗೂಲಿ ಬೇಡಿಕೊಂಡರಂತೆ! ಈ ದಯನೀಯ ಮೊರೆ ಗಟಾರ ಸೇರಿತು. ಇಂತಹ ಸ್ಥಿತಿಯಲ್ಲಿ ಬ್ಯಾಟ್ ಹಿಡಿದು ಹೋದ ಗಂಗೂಲಿ 3 ರನ್‌ಗೆ ಔಟಾಗಿ ಮರಳಿದರು. ಆಗ ಎದುರಾಳಿ ವೆಸ್ಟ್ ಇಂಡೀಸ್ ತಂಡದಲ್ಲಿದ್ದದ್ದು ವಿಶ್ವದ
ಸಾರ್ವಕಾಲಿಕ ಶ್ರೇಷ್ಠ ವೇಗಿಯಾದ ಮಾಲ್ಕಂ ಮಾರ್ಷ್ ಎನ್ನುವುದನ್ನು ಮರೆಯದಿರಿ.
ಈ ಪ್ರವಾಸದಲ್ಲಿ ಗಂಗೂಲಿಗೆ ಸಿಕ್ಕಿದ್ದು ಅವಕಾಶಗಳ ಬದಲು ಕಳಂಕ. ನೀರು ಕೊಡಲು ಹೇಳಿದರೆ ಕೊಡದೇ
ಅಹಂಕಾರ ಮಾಡಿದ್ದಾರೆಂದು ವಿನಾಕಾರಣ ಹಬ್ಬಿಸ ಲಾಯಿತು. ಅದೇ ವೇಳೆ ಆಗಿನ ಖ್ಯಾತ ಕ್ರಿಕೆಟಿಗ ಸಂಜಯ್‌ಮಾಂಜ್ರೆàಕರ್ ಕೂಡ ಗಂಗೂಲಿಯನ್ನು ತಮ್ಮ ಕೊಠಡಿಗೆ ಕರೆದು ನಿನ್ನ ಸ್ವಭಾವ ಬದಲಿಸಿಕೋ ಎಂದು ಬೈದರು. ಏಕೆ ಬೈಯುತ್ತಿದ್ದಾರೆಂದು ಅರ್ಥವೂ ಆಗದ ನಾಚಿಕೆಯ ಸ್ವಭಾವ ಗಂಗೂಲಿಯದ್ದು. ಇಂತಹದ್ದೆಲ್ಲ ಪಿತೂರಿಗಳ ಪರಿಣಾಮ ಮುಂದಿನ 4 ವರ್ಷ ಕಾಲ ಒಬ್ಬ ಯುವ ಕ್ರಿಕೆಟಿಗನಿಗೆ ರಾಷ್ಟ್ರೀಯ ತಂಡದ ಬಾಗಿಲು ಮುಚ್ಚಿತು.
ಇಂಗ್ಲೆಂಡ್‌ನಲ್ಲಿ ವಿಶ್ವ ವಿಕ್ರಮ
1996ರಲ್ಲಿ ಗಂಗೂಲಿ ಮತ್ತೆ ಭಾರತ ತಂಡಕ್ಕೆ ಆಯ್ಕೆಯಾದರು. ಇಲ್ಲಿ ತಾನು ಆಡದಿದ್ದರೆ ಅದು ತನ್ನ ಕ್ರಿಕೆಟ್ ಭವಿಷ್ಯದ ಅಂತ್ಯ ಎನ್ನುವುದು ಗಂಗೂಲಿಗೆ ಗೊತ್ತಿತ್ತು. ಅಭ್ಯಾಸ ಪಂದ್ಯದಲ್ಲಿ ಅಸಾಮಾನ್ಯವಾಗಿ ಆಡಿದ್ದು, ನವಜೋತ್ ಸಿಧು ನಾಯಕ ಅಜರುದ್ದೀನ್ ಜೊತೆ ಗಲಾಟೆ ಮಾಡಿಕೊಂಡು ಭಾರತಕ್ಕೆ ಮರಳಿದ್ದು ಸೌರವ್ ಗಂಗೂಲಿ, ಅದೇ ವೇಳೆ ರಾಹುಲ್ ದ್ರಾವಿಡ್ ಭಾಗ್ಯದ ಬಾಗಿಲನ್ನು ತೆರೆಯಿತು. ಲಾರ್ಡ್ಸ್ ಅಂಕಣದಲ್ಲಿ 2ನೇ ಕ್ರಮಾಂಕದಲ್ಲಿ ಮೈದಾನಕ್ಕೆ ತೆರಳಿದ ಗಂಗೂಲಿ 301 ಎಸೆತಗಳನ್ನು ಎದುರಿಸಿ ನಿಂತು 131 ರನ್ ಗಳಿಸಿದರು. ಟ್ರೆಂಟ್‌ಬ್ರಿಜ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲೂ ಶತಕ ಬಾರಿಸಿ ಪಾದಾರ್ಪಣೆ ಮಾಡಿದ ಆರಂಭದ ಎರಡೂ ಟೆಸ್ಟ್‌ನಲ್ಲಿ ಶತಕ ಬಾರಿಸಿದ ದಾಖಲೆ ನಿರ್ಮಿಸಿದರು.
ಇಲ್ಲಿಂದ ಗಂಗೂಲಿ ಜೀವನವೇ ಬದಲಾಯಿತು. ಅವರು ಏನು ಮಾಡಿದರೂ ಅವೆಲ್ಲವೂ ಯಶಸ್ವಿ ಕಥನ ಗಳು. ಇಂತಹ ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಗಂಗೂಲಿಗೆ ಮತ್ತೆ ಬರ ಸಿಡಿಲು. ಮತ್ತೂಂದು ಪಿತೂರಿಗೆ ಬಲಿ!
ಟೊರಂಟೋದಲ್ಲಿ ನಡೆದ 5 ಪಂದ್ಯಗಳ ಸರಣಿಯ 3ನೇ ಏಕದಿನದಲ್ಲಿ ವಿನೋದ್ ಕಾಂಬ್ಳಿಗೆ ಜಾಗ ಮಾಡಿಕೊಡಲು ಗಂಗೂಲಿಯನ್ನು ಕೈಬಿಡಲಾಯಿತು. ಮುಂದೆ ವೆಸ್ಟ್‌ಇಂಡೀಸ್ ಪ್ರವಾಸದಲ್ಲಿ ಯಶಸ್ವಿ ಸ್ಕೋರರ್ ಆಗಿದ್ದರೂ ಕೊನೆಯ ಟೆಸ್ಟ್‌ನಲ್ಲಿ ಹೆಚ್ಚುವರಿ ಬೌಲರ್‌ಗಾಗಿ ಗಂಗೂಲಿಯನ್ನು ಕೈಬಿಡಲಾಯಿತು. ಗಂಗೂಲಿ ವೇಗದ ಬೌಲರ್ ಕೂಡ ಹೌದಾದರೂ ಅದನ್ನು ತಂಡದ ನಿರ್ಣಾಯಕ ಬಳಗ ಪರಿಗಣಿಸಲಿಲ್ಲ. ಈ ಲೆಕ್ಕಾಚಾರಗಳೆಲ್ಲ ಗಂಗೂಲಿಯನ್ನು ತೀರಾ ಗೊಂದಲಕ್ಕೀಡು ಮಾಡಿತು. ಆಗ ತಂಡದ ನಾಯಕ ಸಚಿನ್ ತೆಂಡುಲ್ಕರ್, ಕೋಚ್ ಸಂದೀಪ್ ಪಾಟೀಲ್.
ಎ ಸೆಂಚುರಿ ಈಸ್ ನಾಟ್ ಎನಫ್
ಇಂತಹ ಹೊತ್ತಿನಲ್ಲೇ ತಮ್ಮ ಆತ್ಮಕಥೆಯ ಶೀರ್ಷಿಕೆ ಗಂಗೂಲಿಗೆ ಹೊಳೆದಿದ್ದು…. ಎ ಸೆಂಚುರಿ ಈಸ್ ನಾಟ್ ಇನಫ್! ಇಂತಹ ವೃತ್ತಿಪರವಲ್ಲದ, ರಾಜಕೀಯವೇ ತುಂಬಿಕೊಂಡಿದ್ದ ಭಾರತೀಯ ಕ್ರಿಕೆಟ್‌ನಲ್ಲಿ ಬರೀ ಅತ್ಯುತ್ತಮ ಪ್ರದರ್ಶನ ಸಾಲುವುದಿಲ್ಲ ಎನ್ನುವುದು ಮನವರಿಕೆಯಾಯಿತು. ಈ ಮನಸ್ಥಿತಿಯನ್ನು ಬದಲಿಸಲು ಮುಂದೆ ಇದೇ ಗಂಗೂಲಿ ಪಣತೊಟ್ಟರು. ಅವರ ಕೈಗೆ ನಾಯಕತ್ವದ ಚುಕ್ಕಾಣಿ ಸಿಕ್ಕಿದಾಗ ಆಯ್ಕೆ ಪದ್ಧತಿಯನ್ನೇ ಬದಲಿಸಿದರು. ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ ವಲಯ ಇಂತಹ ಪದ್ಧತಿಗಳಿಗೆ ಜೋತು ಬೀಳದೇ ಪ್ರತಿಭೆಗಳು ಎಲ್ಲೆಲ್ಲಿ ಸಿಕ್ಕಿದರೂ ತಂಡಕ್ಕೆ ಸೇರಿಸಿಕೊಂಡರು. ಅವರ ಬೆಂಗಾವಲಿಗೆ ನಿಂತು ವೈಫಲ್ಯಕ್ಕೆ ಹೆದರಬೇಡಿ, ಬೆಂಬಲಕ್ಕೆ ನಾನಿದ್ದೇನೆ ಎಂಬ ಭರವಸೆ ತುಂಬಿದರು. ಹಾಗೆ ಹುಟ್ಟಿಕೊಂಡಿದ್ದೇ ಯುವರಾಜ್ ಸಿಂಗ್, ವೀರೇಂದ್ರ ಸೆಹವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಇರ್ಫಾನ್ ಪಠಾಣ್, ಆಶೀಷ್ ನೆಹ್ರಾ, ಮಹೇಂದ್ರ ಸಿಂಗ್ ಧೋನಿ. ಸೆಹವಾಗ್ ಅವರನ್ನು ಆರಂಭಿಕನನ್ನಾಗಿಸಿ ಅವರಿಗೆ ತಮ್ಮ ಸ್ಥಾನವನ್ನೇ ಬಿಟ್ಟುಕೊಟ್ಟಿದ್ದು, ಹರ್ಭಜನ್ ಸಿಂಗ್‌ಗೆ ಸ್ಥಾನ ನೀಡಲೇಬೇಕೆಂದು ಹಟ ಹಿಡಿದಿದ್ದು, ಅನಿಲ್ ಕುಂಬ್ಳೆಯನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಸೇರಿಸಿಕೊಳ್ಳದಿದ್ದರೆ ತಂಡದ ಪಟ್ಟಿಗೆ ಸಹಿ ಹಾಕಲ್ಲವೆಂದಿದ್ದು, ದ್ರಾವಿಡ್‌ರನ್ನು ಕೀಪರ್ ಮಾಡಿ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಪಾರು ಬಚಾವ್ ಮಾಡಿದ್ದು ಇವೆಲ್ಲ ಗಂಗೂಲಿ ನಾಯಕತ್ವದ ತಾಕತ್ತುಗಳು.
ಗ್ರೆಗ್ ಚಾಪೆಲ್-ತಾನೇ ತೋಡಿಕೊಂಡ ಹಳ್ಳ!
ಸ್ವತಃ ಅಂದಿನ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲಿ¾ಯಾ, ದಂತಕಥೆ ಸುನೀಲ್ ಗಾವಸ್ಕರ್ ವಿರೋಧಿಸಿದರೂ ಗ್ರೆಗ್ ಚಾಪೆಲ್‌ರನ್ನು ಭಾರತೀಯ ಕ್ರಿಕೆಟ್ ತಂಡದ ಕೋಚ್ ಮಾಡಲು ಗಂಗೂಲಿ ನಿರ್ಧರಿಸಿದರು. ಅದು ಗಂಗೂಲಿಯ ಪತನವನ್ನು ನಿರ್ಧರಿಸಿತು. 2005ರಲ್ಲಿ ಗ್ರೆಗ್ ಕೋಚ್, 2008 ನ.11ಕ್ಕೆ ಗಂಗೂಲಿ ವಿದಾಯ! ಭಾರತೀಯ ತಂಡವನ್ನು ಹಾಳು ಮಾಡಲೆಂದೇ ಗ್ರೆಗ್ ಬಂದಿದ್ದರು ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕಾಗುತ್ತದೆ.
ಚಾಪೆಲ್ ಬಂದ ಆರಂಭದಲ್ಲೇ ಗಂಗೂಲಿಯನ್ನು ನಾಯಕತ್ವದಿಂದ ಹೊರದಬ್ಬಿ, ತಂಡದಿಂದಲೂ ಕಿತ್ತಾಕಿದರು. ಅಷ್ಟು ಮಾತ್ರವಲ್ಲ ಸಚಿನ್ ತೆಂಡುಲ್ಕರ್, ಆಗಿನ ನಾಯಕ ರಾಹುಲ್ ದ್ರಾವಿಡ್ ಸೇರಿ ಎಲ್ಲರೂ ಹೆದರಿಬಿಟ್ಟಿದ್ದರು. ಅವರು ಯಾರಿಗೂ ತಮ್ಮ ಸ್ಥಾನದ ಬಗ್ಗೆ ಖಾತ್ರಿಯಿರಲಿಲ್ಲ. ಗಂಗೂಲಿಯಂತಹ ಅಸಾಮಾನ್ಯ ಬ್ಯಾಟಿಂಗ್ ಪ್ರತಿಭೆಯನ್ನು ಗ್ರೆಗ್ ಚಾಪೆಲ್ ಗೋಳಾಡಿಸುತ್ತಿದ್ದಾಗ ನಾಯಕ ದ್ರಾವಿಡ್ ಮೂಕಪ್ರೇಕ್ಷಕರಂತಾಗಿದ್ದರು! ಆಗ ಚಾಪೆಲ್ ಮಾಡಿದ ರಾಜಕೀಯ ಹೇಗೆಂದರೆ ತಂಡಕ್ಕೆ ಆಯ್ಕೆ ಮಾಡುವುದು, 11ರ ಬಳಗದಲ್ಲಿ ಸೇರಿಸಿಕೊಳ್ಳದಿರುವುದು. ತಂಡದಲ್ಲೂ ಸೇರಿಸುವುದು ಸೂಕ್ತ ಸಂದರ್ಭದಲ್ಲಿ ಬ್ಯಾಟಿಂಗ್‌ಗೆ ಕಳುಹಿಸದಿರುವುದು. ಒಂದೇ ಒಂದು ವೈಫಲ್ಯಕ್ಕೆ ತಂಡದಿಂದಲೇ ಹೊರಹಾಕುವುದು!
2 ವರ್ಷದ ಚಾಪೆಲ್ ಅವಧಿಯಲ್ಲಿ ಹೇಳಿಕೊಳ್ಳು ವಂತಹ ಯಾವುದೇ ಸಾಧನೆಯೂ ಆಗಲಿಲ್ಲ. 2007ರ ವಿಶ್ವಕಪ್ಪನ್ನು ಭಾರತ ಹೀನಾಯವಾಗಿ ಸೋತ ನಂತರ ಚಾಪೆಲ್‌ಗೆ ಅಧಿಕೃತ ವಿದಾಯ ಹೇಳಲಾಯಿತು! ಅಷ್ಟರಲ್ಲಾಗಲೇ ಗಂಗೂಲಿ ವಿನಾಕಾರಣ ನಾಯಕತ್ವ ಕಳೆದುಕೊಂಡು, ಕನಿಷ್ಠ ಸ್ಥಾನ ಪಡೆಯುವುದಕ್ಕಾಗಿ ಒದ್ದಾಡುವ ಹಂತ ಬಂದಿತ್ತು.
ಗಂಗೂಲಿಯನ್ನೇಕೆ ಅಧ್ಯಯನ ಮಾಡಬೇಕು?
ಗಂಗೂಲಿಯ ಜೀವನದಲ್ಲಿ ಕಂಡುಬರುವ ಎಲ್ಲರೂ ಗಮನಿಸಬೇಕಾದ, ಕಲಿಯಬೇಕಾದ ಸಂಗತಿಯೆಂದರೆ ಒತ್ತಡವನ್ನು ನಿಭಾಯಿಸಿದ ರೀತಿ. ನಿಮ್ಮ ಎಲ್ಲ ಅತ್ಯುತ್ತಮ ಪ್ರದರ್ಶನದ ನಂತರವೂ ಕಾಣದ, ಕಾಣಿಸಿಕೊಳ್ಳುವ ಕೈಗಳು ನಿಮ್ಮನ್ನು ಹಣ್ಣುಗಾಯಿ, ನೀರುಗಾಯಿ ಮಾಡಿ, ಅವಕಾಶವಂಚಿತರನ್ನಾಗಿ ಮಾಡಿ ನಿಮ್ಮನ್ನು ಹತಾಶರನ್ನಾಗಿ ಮಾಡಿ ಸೋಲಿನ ಅಂಚಿಗೆ ತಂದು ನಿಲ್ಲಿಸುವಾಗ ಗಂಗೂಲಿಯನ್ನು ಒಮ್ಮೆ ನೆನಪಿಸಿಕೊಳ್ಳಿ, ಎ ಸೆಂಚುರಿ ಈಸ್ ನಾಟ್ ಇನಫ್ ಓದಿ. ಮಹಾರಾಜನ ಸ್ಥಾನದಿಂದ ಪರದಾಟದ ಸ್ಥಿತಿಗೆ ತಲುಪಿದಾಗಲೂ ಅವರು ಹೋರಾಟದ ಮನೋಭಾವ ಬಿಡಲಿಲ್ಲ. ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಆಡುತ್ತಲೇ ಸಾಗಿ ತಮಗಿನ್ನೂ ಸಾಮರ್ಥ್ಯವಿದೆ ಎಂದು ಖಚಿತಪಡಿಸಿದರು.
ದಕ್ಷಿಣ ಪ್ರವಾಸದ ಮೂಲಕ ಮತ್ತೂಮ್ಮೆ ಭಾರತೀಯ ಕ್ರಿಕೆಟ್‌ಗೆ ತಾನೇಕೆ ಅನಿವಾರ್ಯ ಎಂದು ಮನವರಿಕೆ ಮಾಡಿಕೊಟ್ಟರು.
ಅವರ ಇಡೀ ಜೀವನ ಹಾವು-ಏಣಿಯಾಟದಂತೆ. ಅದನ್ನು ಅವರು ರೋಲರ್ ಕೋಸ್ಟರ್‌ಗೆ ಹೋಲಿಸಿ ಕೊಂಡಿದ್ದಾರೆ. ಒಮ್ಮೆ ಉತ್ತುಂಗಕ್ಕೇರುವುದು, ಇನ್ನೊಮ್ಮೆ ಪಾತಾಳಕ್ಕೆ ಕುಸಿಯುವುದು. ಅಲ್ಲಿಂದ ಹೆಜ್ಜೆ ಹೆಜ್ಜೆ ನಡೆದು ಮೇಲೆ ಹತ್ತಿ ಬಂದಾಗ ಇನ್ನಾರೋ ಒದೆದು ಕೆಳದಬ್ಬುವುದು. ಭಾರತೀಯ ಕ್ರಿಕೆಟನ್ನು ಪುನರೂಪಿಸಿದ ಮಹಾರಾಜನಿಗೆ ಇಂತಹ ಸವಾಲುಗಳು ಎಂದಾಗ ಈ ಬದುಕು ಸ್ಫೂರ್ತಿ. ಹೌದು ತಾನೇ?
ನಿರೂಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.