ಭಾರತದ ದಕ್ಷಿಣ ಏಷ್ಯನ್ ಸಾಧನೆ ಒಲಿಂಪಿಕ್ಸ್‌ನಲ್ಲಿ ಏಕಿಲ್ಲ?
Team Udayavani, Dec 14, 2019, 6:04 AM IST
ನೇಪಾಳದ ಕಠ್ಮಂಡು ಆತಿಥ್ಯದ ದಕ್ಷಿಣ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯರು ಪರಾಕ್ರಮ ಮೆರೆದಿದ್ದಾರೆ. ಪದಕಗಳ ತ್ರಿಶತಕ ಸಮೀಪದಲ್ಲಿದ್ದಾರೆ. ಬರೋಬ್ಬರಿ 143 ಚಿನ್ನ ಸೇರಿದಂತೆ ಪದಕ ಬಾಚುವುದು ಸಾಮಾನ್ಯ ಸಾಧನೆಯಲ್ಲ. ಇದಕ್ಕಾಗಿ ಅಖಂಡ ಭಾರತೀಯ ಕ್ರೀಡಾಪಟುಗಳಿಗೆ ಉಘೇ ಅನ್ನಲೇಬೇಕು. ಪದಕ ಪಟ್ಟಿಯಲ್ಲಿ ಒಟ್ಟಾರೆ 269 ಪದಕ ಗೆದ್ದಿರುವ ಭಾರತೀಯರು ಅಗ್ರಸ್ಥಾನದಲ್ಲಿ ನಾಗಾಲೋಟ ಮಾಡಿದ್ದಾರೆ.
ನಾವು ಇಷ್ಟು ಸಾಧನೆ ಮಾಡಲು ಸಮರ್ಥರೂ ಎಂದ ಮೇಲೆ ಒಲಿಂಪಿಕ್ಸ್‌ನಲ್ಲಿ ನಮಗೆ ಏಕೆ ಇಂತಹ ಸಾಹಸಗಳನ್ನು ಮೆರೆಯಲಾಗುತ್ತಿಲ್ಲ?, ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್‌ನಲ್ಲಿ ನಮ್ಮ ಪದಕಗಳು ಒಂದೆರಡಕ್ಕೆ ಮಾತ್ರ ಸೀಮಿತವಾಗುವುದೇಕೆ?, ನಮಗೆ ಅನುಭವ ಕೊರತೆ ಇದೆಯೆ? ಅಥವಾ ನಾವು ಪಡೆಯುತ್ತಿರುವ ತರಬೇತಿಯಲ್ಲಿ ದೋಷ ಇದೆಯೆ? ಇಂತಹ ಸಾಮಾನ್ಯ ಪ್ರಶ್ನೆಗಳು ಪ್ರತಿಯೊಬ್ಬ ಕ್ರೀಡಾಭಿಮಾನಿಗಳ ಮನಸ್ಸಿನಲ್ಲಿ ಮೂಡುವುದು ಸಹಜ. ಈ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗಿದೆ.
ಒಲಿಂಪಿಕ್ಸ್‌ನಲ್ಲಿ ಸ್ವರ್ಣವಿಲ್ಲದೆ ಒಂದು ದಶಕ!: ಭಾರತಕ್ಕೆ ಕೊನೆಯದಾಗಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಸಿಕ್ಕಿದ್ದು 2008ರಲ್ಲಿ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಅಭಿನವ್ ಬಿಂದ್ರಾ ಚಿನ್ನಕ್ಕೆ ಗುರಿ ಇಟ್ಟಿದ್ದರು. ಇದಾದ ಬಳಿಕ ಲಂಡನ್ ಒಲಿಂಪಿಕ್ಸ್ ನಡೆಯಿತು. ರಿಯೋ ಒಲಿಂಪಿಕ್ಸ್ ಮುಗಿಯಿತು. ಚಿನ್ನ ಮರೀಚಿಕೆಯಾಯಿತು. 1 ದಶಕ ಕಳೆದಿದ್ದರೂ ಭಾರತಕ್ಕೆ ಚಿನ್ನ ಸಿಕ್ಕಿಲ್ಲ!, ಇದು ವಿಪರ್ಯಾಸವೇ ಸರಿ. 2012 ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತ 2 ಬೆಳ್ಳಿ, 4 ಕಂಚಿನ ಪದಕ ಗೆದ್ದಿತ್ತು. 2016 ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದದ್ದು 1 ಬೆಳ್ಳಿ ಹಾಗೂ 1ಕಂಚು ಸೇರಿದಂತೆ ಕೇವಲ 2 ಪದಕ ಮಾತ್ರ. ಈ ಎರಡೂ ಪದಕಗಳನ್ನು ಹೆಣ್ಣು ಮಕ್ಕಳು ಗೆದ್ದರು. ಭಾರತದ ಮಾನ ಕಾಪಾಡಿದರು ಎನ್ನುವುದು ವಿಶೇಷ. ಬ್ಯಾಡ್ಮಿಂಟನ್‌ನಲ್ಲಿ ಸಿಂಧು ಬೆಳ್ಳಿ ಹಾಗೂ ಕುಸ್ತಿ ಸ್ಪರ್ಧೆಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಜಯಿಸಿದ್ದರು.
ಭಾರತ ಗೆದ್ದದ್ದು ಒಟ್ಟಾರೆ 28 ಪದಕ ಮಾತ್ರ: ನಾಲ್ಕು ವರ್ಷಕ್ಕೊಮ್ಮೆ ಒಲಿಂಪಿಕ್ಸ್ ನಡೆಯುತ್ತದೆ. ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳು ಭಾಗವಹಿಸುತ್ತವೆ. ಈ ಮಹಾಸಮರದಲ್ಲಿ ಇದುವರೆಗೆ ಭಾರತ ಗೆದ್ದಿರುವುದು 9 ಚಿನ್ನ, ಇದರಲ್ಲಿ ಬಹುತೇಕ ಪದಕಗಳು ಹಾಕಿಯಲ್ಲಿಯೇ ಸಿಕ್ಕಿದೆ. ಉಳಿದಂತೆ 7 ಬೆಳ್ಳಿ ಪದಕ, 12 ಕಂಚಿನ ಪದಕ ಲಭಿಸಿದೆ. ಭಾರತ ಇದುವರೆಗೆ ಒಟ್ಟಾರೆ 24 ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದೆ. ಗದ್ದಿರುವ ಪದಕಗಳ ಸಂಖ್ಯೆ ಕೇವಲ 28 ಮಾತ್ರ.
ಭಾರತ ಹಿನ್ನಡೆಗೆ ಕಾರಣಗಳೇನು?
ತರಬೇತಿ ಗುಣಮಟ್ಟ, ಕೋಚ್ ಕೊರತೆ: ಭಾರತೀಯರಿಗೆ ಸದ್ಯ ದೇಶೀಯ ಮಟ್ಟದಲ್ಲಿ ಸಿಗುತ್ತಿರುವ ತರಬೇತಿ ಹೆಚ್ಚು ಗುಣಮಟ್ಟದ್ದಾಗಿಲ್ಲ. ಒಲಿಂಪಿಕ್ಸ್‌ನಂತಹ ಕೂಟಗಳಿಗೆ ನಿರಂತರ ತಯಾರಿ ಅತ್ಯಗತ್ಯ. ವಿದೇಶಕ್ಕೆ ತೆರಳಿ ಅಲ್ಲಿನ ವಾತಾವರಣದಲ್ಲಿ ತರಬೇತಿ ಪಡೆಯಲೇಬೇಕಾಗುತ್ತದೆ. ಜತೆಗೆ ನಿಪುಣ ಕೋಚ್‌ಗಳ ಅಲಭ್ಯತೆಯೂ ಇದೆ.
ಆರ್ಥಿಕ ಅಡಚಣೆ: ಭಾರತದಲ್ಲಿನ ಹೆಚ್ಚಿನ ಕ್ರೀಡಾಪಟುಗಳು ಬಡ, ಮಧ್ಯಮ ವರ್ಗದ ಕುಟುಂಬದವರು. ಅವರಿಗೆ ಆರ್ಥಿಕ ಸಮಸ್ಯೆಗಳೇ ಹೆಚ್ಚು. ಕೋಚಿಂಗ್ ಹೋಗುವುದು, ವಿದೇಶಕ್ಕೆ ಕೂಟಕ್ಕೆ ತೆರಳುವುದು ಇದಕ್ಕೆಲ್ಲ ಲಕ್ಷಾಂತರ ರೂ. ಖರ್ಚಾಗುತ್ತದೆ. ಸರ್ಕಾರ ಸ್ವಲ್ಪ ಹಣ ನೀಡುತ್ತದೆಯಾದರೂ ಅದು ಸಾಲುತ್ತಿಲ್ಲ. ಜತೆಗೆ ತಳಮಟ್ಟದಲ್ಲಿ ತರಬೇತಿ ನೀಡಲು ಸೂಕ್ತ ಹಣದ ಕೊರತೆ ಎದುರಾಗಿದೆ.
ಇಂದು ಕ್ರೀಡೆಗಳೇ ದುಬಾರಿ: ಇಂದು ಕ್ರೀಡೆ ದುಬಾರಿಯಾಗಿದೆ. ನೀವು ನಂಬುತ್ತೀರೋ.. ಬಿಡುತ್ತಿರೋ.. ವೈದ್ಯಕೀಯ, ಇಂಜಿನಿಯರಿಂಗ್ ಓದುವುದಕ್ಕಿಂತ ಹೆಚ್ಚಿನ ಖರ್ಚು ಇಂದು ಕ್ರೀಡೆಗೆ ವ್ಯಯಿಸಬೇಕಾಗುತ್ತದೆ. ತರಬೇತಿ, ವಿದೇಶಿ ಕೋಚಿಂಗ್, ಡಯಟ್, ಕಿಟ್, ಜೆರ್ಸಿ ಇದೆಲ್ಲದರ ಖರ್ಚು ತಿಂಗಳಿಗೆ ಕನಿಷ್ಟ ಎಂದರೂ 10 ಸಾವಿರ ಆಗುತ್ತದೆ. ಇದನ್ನು ಭರಿಸಲು ಹೆಚ್ಚಿನ ಕ್ರೀಡಾಪಟುವಿನ ಹೆತ್ತವರಿಗೆ ಸಾಧ್ಯವಾಗುತ್ತಿಲ್ಲ. ಇದೇ ಕಾರಣದಿಂದ ಅದೆಷ್ಟೋ ಕ್ರೀಡಾಪಟುಗಳು ಕ್ರೀಡೆಯನ್ನೇ ತೊರೆದ ಉದಾಹರಣೆಗಳಿವೆ.
ಅಸೋಸಿಯೇಷನ್ ಒಳಜಗಳ: ಕ್ರಿಕೆಟ್ ಹೊರತುಪಡಿಸಿ ದೇಶದ ವಿವಿಧ ಕ್ರೀಡಾ ಸಂಸ್ಥೆಗಳಲ್ಲಿ ಹೆಚ್ಚಿನವುಗಳಲ್ಲಿ ಇಂದು ಒಳಜಗಳವೇ ತುಂಬಿ ತುಳುಕುತ್ತಿದೆ. ಹೊಲಸು ರಾಜಕೀಯ ಹರಿಯುತ್ತಿದೆ. ವೈಯಕ್ತಿಕ ಹಿತಾಸಕ್ತಿಗಾಗಿ ಕ್ರೀಡಾಪಟುಗಳ ಹಿತಾಸಕ್ತಿಯನ್ನೇ ಬಲಿಕೊಡಲಾಗುತ್ತಿದೆ. ಜವಾಬಾœರಿಯುತ ವ್ಯಕ್ತಿಗಳು ವೈಯಕ್ತಿಕ ಲಾಭಕ್ಕೋಸ್ಕರ ಬಡಿದಾಡಿಕೊಳ್ಳುತ್ತಿದ್ದಾರೆ. ಇದೆಲ್ಲವು ಕ್ರೀಡೆಯ ಸಮಗ್ರ ಅಭಿವೃದ್ಧಿಗೆ ಭಾರೀ ಹಿನ್ನಡೆಯಾಗಿ ಪರಿಣಮಿಸಿದೆ.
ಪ್ರಾಯೋಜಕರ ಕೊರತೆ: ಕ್ರಿಕೆಟ್‌ನಂತಹ ಆದಾಯ ಬರುವ ಕ್ರೀಡೆಯನ್ನು ಹೊರತುಪಡಿಸಿ ಬಹುತೇಕ ಎಲ್ಲ ಕ್ರೀಡೆಗಳು ಇದು ಪ್ರಾಯೋಜಕರ ಕೊರತೆ ಎದುರಿಸುತ್ತಿವೆ. ದೊಡ್ಡ ಸಂಸ್ಥೆಗಳ ಹೆಚ್ಚಿನ ಪ್ರಾಯೋಜಕರು ಗೆದ್ದ ಎತ್ತುಗಳ ಬಾಲವನ್ನೇ ಹಿಡಿಯುತ್ತಿದ್ದಾರೆ. ತಳಮಟ್ಟದಲ್ಲಿ ತರಬೇತಿ ಕೊಡುವ ಪ್ರಯತ್ನದಲ್ಲಿ ಪ್ರಾಯೋಜಕರ ಕೊಡುಗೆ ಶೂನ್ಯ. ಗೆದ್ದ ಮೇಲೆ ಚಪ್ಪಾಳೆ ತಟ್ಟಿ ಬೆಂಬಲಿಸುವುದಕ್ಕಿಂತ ಗೆಲ್ಲುವವರಿಗೆ ದಾರಿ ಮಾಡಿಕೊಡುವ ಹೊಣೆಗಾರಿಕೆಯನ್ನು ಪ್ರಾಯೋಜಕರು ಹೊತ್ತರೆ ಬಹುತೇಕ ಅರ್ಧ ಸಮಸ್ಯೆ ಪರಿಹಾರಗೊಳ್ಳುವುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.