ಗೊಲ್ಲ ಕರೆದ ದನಿಯ ಕೇಳಿ…
ಕೃಷ್ಣಾಷ್ಟಮಿ ಬಂತು, ಗೋಪಾಲಕ ಕಾಣಲಿಲ್ಲ
Team Udayavani, Aug 24, 2019, 5:00 AM IST
“ಧರಣಿ ಮಂಡಲ ಮಧ್ಯದೊಳಗೆ… ಎಳೆಯ ಮಾವಿನ ಮರದ ಕೆಳಗೆ…’- ಎನ್ನುತ್ತಾ “ಪುಣ್ಯಕೋಟಿ’ಯ ಹಾಡನ್ನು ಕೋರಸ್‌ನೊಂದಿಗೆ ಹಾಡುವಾಗ, ಅಂದಿನ ಮಕ್ಕಳ ಕಣ್ಣೆದುರು, ಕಾಡಿನ ಚಿತ್ರಗಳು ಮೂಡುತ್ತಿದ್ದವು. ಶಾಲೆಯಿಂದ ಮನೆಗೆ ಬಂದಾದ ಮೇಲೂ, ಊಟದ ಹೊತ್ತಲ್ಲೂ ಅದೇ ಹಾಡು. ನಿದ್ದೆಗಣ್ಣಲ್ಲಿ ಅದೇ ಹುಲಿಯ ಚಿತ್ರ ಕನಸಿನಲ್ಲಿ ಮೂಡಿದಾಗ, ಅಮ್ಮನನ್ನು ತಬ್ಬಿಕೊಂಡ ಬೆಚ್ಚಗಿನ ನೆನಪೆಲ್ಲ, ನಮ್ಮೊಳಗಿನ ಹಳೇ ಕ್ಯಾಸೆಟ್ಟಿನಲ್ಲಿ ಅವಿತಂತೆ ತೋರುತ್ತಿದೆ…
“ನಮ್ಮೂರಲ್ಲೂ ಅಷ್ಟೇ… ರೋಡ್ ಮಧ್ಯೆ, ಅಕ್ಕಪಕ್ಕದಲ್ಲಿಯೇ ಟ್ರಾಫಿಕ್ ಪೊಲೀಸ್ರು ನಿಂತಿರ್ತಾರೆ. ಒಂದ್ ಪೈಸಾ ಲಂಚ ತಗೊಳ್ಳಲ್ಲ’ ಎನ್ನುವುದು “ಅಮೆರಿಕ ಅಮೆರಿಕ’ ಸಿನಿಮಾದ ಒಂದು ತಮಾಷೆ ಸಂಭಾಷಣೆಯ ಸಾಲು. ನಾಯಕ ತನ್ನ ನೆಲದ ಸಂಸ್ಕೃತಿಯನ್ನು ಪರಿಚಯಿಸುತ್ತಾ, ರಸ್ತೆ ನಡುವೆ ಎದುರಾದ ದನಕರುಗಳ ಹಿಂಡನ್ನು ಉದ್ದೇಶಿಸಿ ಹಾಗೆ ನಗೆ ಉಕ್ಕಿಸುತ್ತಾನೆ. ಇನ್ನಾéವುದೋ ಚಿತ್ರದಲ್ಲಿ, ಕಾರಿನಲ್ಲಿ ಬಂದ ಅಪರಿಚಿತನಿಗೆ, ಊರಿನ ಹಾದಿ ಹೇಳುವುದು ಅಲ್ಲಿನ ಗೋಪಾಲಕ… ಇಂದಿನ ಸಿನಿಮಾಗಳಲ್ಲಿ ಇವೆಲ್ಲ ದೃಶ್ಯಗಳೂ ಕಣ್ಮರೆ. ಇಂದು ಆ ಪ್ರಮಾಣದಲ್ಲಿ ಗೋವುಗಳೂ ಇಲ್ಲ, ಅದನ್ನು ಕಾಯುವ ಪಾಲಕ ಹುಡುಗರೂ ಕಣ್ಣಿಗೆ ಬೀಳುವುದಿಲ್ಲ.
“ಧರಣಿ ಮಂಡಲ ಮಧ್ಯದೊಳಗೆ… ಎಳೆಯ ಮಾವಿನ ಮರದ ಕೆಳಗೆ…’- ಎನ್ನುತ್ತಾ “ಪುಣ್ಯಕೋಟಿ’ಯ ಹಾಡನ್ನು ಕೋರಸ್‌ನೊಂದಿಗೆ ಹಾಡುವಾಗ, ಅಂದಿನ ಮಕ್ಕಳ ಕಣ್ಣೆದುರು, ಕಾಡಿನ ಚಿತ್ರಗಳು ಮೂಡುತ್ತಿದ್ದವು. ಶಾಲೆಯಿಂದ ಮನೆಗೆ ಬಂದಾದ ಮೇಲೂ, ಊಟದ ಹೊತ್ತಲ್ಲೂ ಅದೇ ಹಾಡು. ನಿದ್ದೆಗಣ್ಣಲ್ಲಿ ಅದೇ ಹುಲಿಯ ಚಿತ್ರ ಕನಸಿನಲ್ಲಿ ಮೂಡಿದಾಗ, ಅಮ್ಮನನ್ನು ತಬ್ಬಿಕೊಂಡ ಬೆಚ್ಚಗಿನ ನೆನಪೆಲ್ಲ, ನಮ್ಮೊಳಗಿನ ಹಳೇ ಕ್ಯಾಸೆಟ್ಟಿನಲ್ಲಿ ಅವಿತಂತೆ ತೋರುತ್ತಿದೆ.
ದಟ್ಟ ಅಡವಿ. ನಡುವೆ ನೂರಾರು ಗೋವುಗಳು. ಅವುಗಳನ್ನು ಮೇಯಿಸುವ ಕಾಯಕದಲ್ಲಿ ನಿರತನಾದ ಗೋಪಾಲಕ… ಇಳಿ ಸಂಜೆಯ ಗೋಧೂಳಿ ಮುಹೂರ್ತದಲ್ಲಿ ಅವುಗಳನ್ನು ಕರೆಯುತ್ತಾ ಮನೆದಾರಿ ಹಿಡಿಯುವ ಆತನ ನಿಷ್ಠೆ…. ಹೀಗೆ ಅಂದಿನ ದಿನಗಳ ಊರಿನ ಸೌಂದರ್ಯಕ್ಕೆ ಬಹುಬೇಗನೆ ದೃಷ್ಟಿ ಆಗುತ್ತಿತ್ತು.
ದನಗಾಹಿಗಳು ತಮ್ಮ ಕೆಲಸಕ್ಕೆ ನಸುಕಿನಲ್ಲಿಯೇ ಎದ್ದುಹೊರಡುತ್ತಿದ್ದರು. ಊರಿನ ಮೊದಲ ಕೊಟ್ಟಿಗೆಯಿಂದ ಆತ ದನಗಳನ್ನು ಬಿಡುವ ಮೊದಲು ಜೋರಾಗಿ ಕೂಗು ಹಾಕುತ್ತಿದ್ದ. ಆ ಊರಿನ ಮನೆಗಳಿಗೆ ಅದೇ ಸೈರನ್ನು. ಕೂಗನ್ನು ಕೇಳಿ, ಪ್ರತಿಯೊಬ್ಬರೂ ತಮ್ಮ ತಮ್ಮ ಕೊಟ್ಟಿಗೆಗಳಿಂದ ದನಗಳನ್ನು ಬಿಡುತ್ತಿದ್ದರು. ಹಾಗೆ ಗುಂಪುಗುಂಪಾಗಿ ಸೇರುವ ದನಗಳು, ರಸ್ತೆಯಲ್ಲಿ ಕಾಲಿಡಲೂ ಜಾಗವಿಲ್ಲದೇ, ಮೆರವಣಿಗೆ ಹೊರಡುತ್ತಿದ್ದವು. ಕಚಪಿಚ ಕೆಸರು ಮಾಡುತ್ತಾ, ಬಾಲ ಬಡಿಯುತ್ತಾ, ಸಗಣಿ ಹಾಕುತ್ತಾ, ಒಂದು ದನವನ್ನು ಮತ್ತೂಂದು ಮುದ್ದಿಸುತ್ತಾ ಹೋಗುವಾಗ, ಹಿಂದೆ ಗೋಪಾಲಕ ಕಂಬಳಿ- ಕೋಲನ್ನು ಹೆಗಲ ಮೇಲೆ ಹಾಕ್ಕೊಂಡು, ಹೆಜ್ಜೆ ಹಾಕುತ್ತಿದ್ದ. ಬಾಯಿಯಲ್ಲಿ ಕವಳ. ಅದರ ನಡುವೆಯೂ ನಾಲಿಗೆಯಲ್ಲಿ ಅಡಿಮೇಲಾಗುವ ಯಾವುದೋ ಚಿತ್ರದ ಹಾಡು… ನಡುವೆ “ಹೈ ಹೈ’ ಎನ್ನುತ್ತಾ ದನಗಳಿಗೆ ಕೊಡುತ್ತಿದ್ದ ವಾರ್ನಿಂಗು…
ದನಗಳ ಆ ಗುಂಪು ಎಲ್ಲೋ ಗೋಮಾಳ ತಲುಪುತ್ತದೆ. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಅವುಗಳಿಗೆ “ಲಂಚ್‌ಬ್ರೆಕ್’! ಮೇಯುವುದು ನಿಲ್ಲಿಸಿ, ನೀರು ಕುಡಿದು, ಕೆರೆಯ ದಂಡೆಯಲ್ಲಿ ಕೆಲ ಹೊತ್ತು ವಿರಮಿಸುತ್ತಿದ್ದವು. ಅಲ್ಲೇ ನೆರಳನ್ನು ಆಶ್ರಯಿಸುವ ಗೋಪಾಲಕ, ಯಾರಧ್ದೋ ಮನೆಯವರು ಕೊಟ್ಟ ಬುತ್ತಿಯ ಗಂಟನ್ನು ಬಿಚ್ಚಿ, ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ. ದನಗಳ ಚಿಕ್ಕಪುಟ್ಟ ಕಾದಾಟ, ಎಳೆ ಹೋರಿಗಳ ಪ್ರೇಮದಾಟ, ಆತನಿಗೊಂದು ಮನರಂಜನೆ. ಯಾವ ದನದ ಸ್ವಭಾವ ಹೇಗೆ ಎನ್ನುವುದನ್ನು ಚೆನ್ನಾಗಿ ಬಲ್ಲ ಆತ. ಮತ್ತೆ ಆತ “ಹೈ’ ಅಂದುಬಿಟ್ಟರೆ, ಅದು ದನಗಳಿಗೆ ಅಲ್ಲಿಂದ ಹೊರಡುವ ಸಂಕೇತ. ಬಿದ್ದ ಸಗಣಿಯನ್ನೆಲ್ಲ ಒಟ್ಟುಗೂಡಿಸಿ, ಅದನ್ನು ಗೊಬ್ಬರವಾಗಿ, ಯಾರಾದರೂ ರೈತರಿಗೆ ಮಾರಿ, ಚಿಲ್ಲರೆ ಪಡೆಯುತ್ತಿದ್ದ. ಪುನಃ ಕಾಡು ಮೇಡುಗಳಲ್ಲಿ ಸಂಜೆಯ ತನಕ ಮೇಯಿಸಿ, ಗೋಧೊಳಿಯ ವೇಳೆಗೆ ಜಾನುವಾರುಗಳನ್ನು ಕೊಟ್ಟಿಗೆಗೆ ಮುಟ್ಟಿಸುತ್ತಿದ್ದ.
ಈ ಕೆಲಸಕ್ಕೆ ಆತನಿಗೆ ವಾರ್ಷಿಕವಾಗಿ ಐವತ್ತೋ, ನೂರು ರೂಪಾಯಿ ಸಿಗುತ್ತಿತ್ತಷ್ಟೇ. ಇಂತಿಷ್ಟು ಅಂತೆಳಿ ಭತ್ತ ಕೊಡುತ್ತಿದ್ದರು. ಆಗಿನ ಗೋಪಾಲಕರು, ಹಸುಗಳಿಗೆ ಗಂಗೆ, ಗೌರಿ, ತುಂಗೆ, ಭದ್ರೆ ಎಂದು ಕರೆಯುತ್ತಿದ್ದರೆ, ಇಂದಿನ ಗೋಪಾಲಕ(ಕಾಳಿಂಗ)ರು ಗಿಡ್ಡಿ, ಕೌಲಿ, ಹೆಂಡಿ, ಕೆಂಪಿ, ಬೋಳಿ- ಹೀಗೆ ಅವರವರ ಭಾವನೆಗಳಿಗೆ ತಕ್ಕಂತೆ ಹೆಸರಿಡುತ್ತಾರೆ. ಆಗ ದನಗಾವಲು ಮಾಡಿದರೆ, ದಾರಿದ್ರ - ಗ್ರಹಚಾರದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಕೆಲವರಲ್ಲಿತ್ತು.
ಜಗತ್ತಿಗೆ ಗೀತಾಮೃತವನ್ನು ಬೋಧಿಸಿದ ಶ್ರೀಕೃಷ್ಣನ ಇಷ್ಟದ ವೃತ್ತಿ, ಗೋಪಾಲನೆ. ಕೃಷ್ಣನ ಹಾದಿಯಲ್ಲೇ ನಂಬಿಕೆ ಇಟ್ಟ ಅನೇಕರು, ಅಂದು ಅದರಲ್ಲಿಯೇ ಬದುಕನ್ನು ಕಂಡುಕೊಂಡಿದ್ದರು. ಕೃಷ್ಣಾಷ್ಟಮಿ ವೇಳೆ ಅವರಿಗೆ ವಿಶೇಷ ಆದರ ಸಿಗುತ್ತಿತ್ತು. ಆದರೆ, ಈಗ ದನಕಾಯುವ ಕುಲಕಸುಬನ್ನು ಒಪ್ಪಿಕೊಳ್ಳುವವರು ಬಹಳ ಅಪರೂಪ. ಹಾಗೆ ಒಪ್ಪಿಕೊಂಡರೂ ಅವರಿಗೆ 8-10 ಜಾನುವಾರುಗಳೂ ಸಿಗುತ್ತಿಲ್ಲ. ಎಲ್ಲ ಕಡೆ ಬೇಲಿ. ಗೋಮಾಳಗಳೇ ಕಾಣಿಸುತ್ತಿಲ್ಲ ಎನ್ನುವಂಥ ಸ್ಥಿತಿ.
ದನಗಾವಲು ನಮ್ಮ ಸಂಸ್ಕೃತಿಯಿಂದ ಹೀಗೆ ನಿಧಾನಕ್ಕೆ ಮರೆಯಾಗುತ್ತಿದೆ. ಹಳ್ಳಿ ಮನಸ್ಸುಗಳ ಅಮೂಲ್ಯ ನೆನಪೊಂದು ಕರಗಿದಂತೆ ಭಾಸಗೊಳ್ಳುತ್ತಿದೆ. ಆದರೂ ದನ ಕಾಯುವ ವೃತ್ತಿ ಈಗಲೂ ಶಾಲಾ ಶಿಕ್ಷಕರ ನಾಲಿಗೆಯ ಮೇಲೆ ಮಾತ್ರ ಇದ್ದೇ ಇದೆ. ನಿಧಾನ ಕಲಿಕೆಯ ಮಕ್ಕಳಿಗೆ ಇಂದೂ “ದನ ಕಾಯಲು ಹೋಗು…’ ಎಂದೇ ಅವರು ಬಯ್ಯುತ್ತಾರೆ!
– ಟಿ. ಶಿವಕುಮಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.