ಸಿರಿ”ಕೆರೆ’ಯಂ ಗೆಲ್ಗೆ: ಭರಮಸಾಗರ ಕೆರೆಯ ಕಥೆ!
Team Udayavani, Aug 11, 2018, 3:32 PM IST
“ನಿದ್ದೆ ಬರದ ಅದೆಷ್ಟೋ ವರ್ಷಗಳ ರಾತ್ರಿ ಕಳೆದಿದ್ದೇನೆ. ಅದೊಂದು ದಿನ,ರಾತ್ರಿ ಎಂದಿನಂತೆಯೇ ಮಮ್ಮಲ ಮರುಗುತ್ತಲೇ ಮಲಗಿದ್ದೆ. ಬೆಳಗಾಗುವ ಹೊತ್ತಿಗೆ, ಮೆಲ್ಲನೆ ಕಣ್ಣು ಬಿಡುತ್ತಿದ್ದಂತೆಯೇ, ನನ್ನ ಸುತ್ತಲೂ ಅದೇನೋ ಗುಸುಗುಸು ಸದ್ದು. ಯಾರೋ ಮಾತಾಡುವಂತೆ, ಕೂಗಾಡುವಂತೆ ಕೇಳಿಸುತ್ತಿತ್ತು. ಸುತ್ತಲೂ ಜನ ಜನ ಮತ್ತು ಜನ. ಇಷ್ಟು ವರ್ಷ ಕಾಣಿಸದೇ ಇದ್ದ ಇವರೆಲ್ಲ ಹೀಗೇಕೆ ನನ್ನನ್ನು ಆವರಿಸಿಕೊಂಡಿದ್ದಾರೆ ಎಂಬ ಸಣ್ಣ ಆತಂಕ ಮತ್ತು ಕುತೂಹಲ. ಕ್ಷಣಕಾಲ, ಏನಾಗುತ್ತಿದೆ ಇಲ್ಲಿ… ಅಂತ ಯೋಚಿಸುತ್ತಲೇ ಇದ್ದೆ. ಮೆಲ್ಲನೆ ನನ್ನ ಮೈಯೆಲ್ಲಾ ತಣ್ಣಗಾಯ್ತು. ಪೂರ್ತಿ ಕಣ್ತೆರೆದು ನೋಡಿದಾಗ, ನನ್ನೊಳಗೆ ಸಣ್ಣದಾಗಿ ನೀರು ಹರಿದು ಬರುತ್ತಿತ್ತು. ನಿಧಾನವಾಗಿ ಒದ್ದೆಯಾಗುತ್ತಲೇ ಇದ್ದೆ. ಇದು ಕನಸಾ, ನನಸಾ ಅಂತ ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. ಸುತ್ತಲಿದ್ದ ಜನರ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಹೌದು, ಇದು ಕನಸಲ್ಲ, ನಿಜ ಅನಿಸಿತು. ವರ್ಷಗಟ್ಟಲೆ ದಾಹದಿಂದ ಒದ್ದಾಡುತ್ತಿದ್ದ ನಾನು ಕೊಂಚ ದಣಿವಾರಿಸಿಕೊಂಡೆ. ಆಮೇಲೆ ನನಗೂ ಒಳಗೊಳಗೆ ಸಂತಸ, ಸಂಭ್ರಮ. ಯಾರೋ ಒಂದಷ್ಟು ಮಂದಿ ನನ್ನತ್ತ ನೀರು ಹರಿಸಲು ಹರಸಾಹಸ ಪಡುತ್ತಿದ್ದರು. ಅದನ್ನು ಕಣ್ತುಂಬಿಕೊಂಡೆ. ನನ್ನತ್ತ ಧಾವಿಸಿ ಬರುತ್ತಿದ್ದ ನೀರಿನಿಂದಾಗಿ ನಾನು ಕಣ್ತುಂಬಿಕೊಂಡಿದ್ದು ನನಗೇ ಗೊತ್ತಾಗಲಿಲ್ಲ! ಅಬ್ಟಾ, ನನ್ನೊಡಲು ತುಂಬದಿದ್ದರೂ, ನನ್ನ ನೋವಿಗೆ ಸ್ಪಂದನೆಯಾದರೂ ಸಿಕ್ಕಿತ್ತಲ್ಲ ಅಂದುಕೊಂಡು ನಿಟ್ಟುಸಿರು ಬಿಟ್ಟೆ. ಈಗ ನನ್ನ ಮೊಗದಲ್ಲಿ ಸಣ್ಣ ನಗುವಿದೆ. ಜನ ಅದೆಲ್ಲಿಂದಲೋ ನೀರು ತರಿಸಿಕೊಂಡು ನನ್ನ ಒಡಲನ್ನು ತುಂಬಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ. ನನಗೀಗ ಚೇತರಿಸಿಕೊಳ್ಳುವ ವಿಶ್ವಾಸ ಬಂದಿದೆ, ಮತ್ತದೇ ಗತವೈಭವಕ್ಕೆ ಮರಳುತ್ತೀನಿ ಎಂಬ ಆಶಾಭಾವನೆಯೂ ಇದೆ…
ನಾನೇಕೆ ಇಷ್ಟು ವರ್ಷಗಳ ಕಾಲ ಖಾಲಿ ಹೊಟ್ಟೆಯಲ್ಲಿ ಬಿದ್ದಿದ್ದೆ? ನನ್ನ ಕಥೆ ಮತ್ತು ವ್ಯಥೆ ಏನು ಎಂಬುದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು.
“ಸುಮಾರು ಮೂವತ್ತು ವರ್ಷಗಳ ಹಿಂದಿನ ಮಾತು. ಈ ಊರ ಜನರಷ್ಟೇ ಅಲ್ಲ, ಸುತ್ತಮುತ್ತಲ ಊರಿನ ಜನ, ಜಾನುವಾರುಗಳೆಲ್ಲವೂ ನನ್ನೊಂದಿಗೆ ಅಪಾರ ನಂಟು ಬೆಳೆಸಿಕೊಂಡಿದ್ದರು. ನನ್ನೊಡಲ ಪಕ್ಕದಲ್ಲೇ ಇದ್ದ ಸಾವಿರಾರು ಅಡಕೆ, ತೆಂಗು, ಹಲಸು, ಮಾವು ಮರಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಹೊಲ, ಗದ್ದೆಗಳು ಹಸಿ ಹಸಿರಾಗಿ ಸ್ವತ್ಛಂದದ ಬೆಳೆ ಕೊಡುತ್ತಿದ್ದವು. ನನ್ನ ಸಮೀಪದಲ್ಲೇ ಹಾದು ಹೋದ ಕಾಲುವೆಗಳಲ್ಲಿ ಮಕ್ಕಳು ಈಜುತ್ತಿದ್ದರು, ಮಹಿಳೆಯರು ಬಟ್ಟೆ ತೊಳೆಯುತ್ತಿದ್ದರು, ದನ, ಕರುಗಳು ಮಿಂದೇಳುತ್ತಿದ್ದವು. ಇಡೀ ಊರಿಗೆ ಊರೇ ಕೊಂಡಾಡುತ್ತಿದ್ದ ನನ್ನ ಒಡಲಲ್ಲಿ ರಾಶಿ ರಾಶಿ ಮೀನುಗಳೂ ಓಡಾಡುತ್ತಿದ್ದವು. ಅದೆಷ್ಟೋ ಮಂದಿ, ನನ್ನ ಕೃಪೆಯಿಂದಾಗಿ ಉದ್ಯಮಿಗಳಾದರು. ಹಣ ಸಂಪಾದಿಸಿದರು. ನಿಜಕ್ಕೂ ಅದೊಂದು ಪರ್ವಕಾಲ. ಆದರೆ…
ಅದೇನಾಯೊ¤à ಏನೋ, ಇದ್ದಕ್ಕಿದ್ದಂತೆ ವರುಣ ಮುನಿಸಿಕೊಂಡ. ಕಾಲಕ್ರಮೇಣ ನನ್ನ ಒಡಲು ಬರಿದಾಗುತ್ತಾ ಬಂತು. ಅಕ್ಕಪಕ್ಕದಲ್ಲಿದ್ದ ಹೊಲ ಗದ್ದೆಗಳು ಬತ್ತಿಹೋದವು. ಅಡಕೆ, ತೆಂಗು, ಹಲಸು, ನೇರಳೆ ಮತ್ತು ಮಾವಿನ ಮರಗಳು ನೆಲಕಚ್ಚಿದವು. ಪಕ್ಕದಲ್ಲೇ ಇದ್ದ ಅದೆಷ್ಟೋ ಬಾವಿಯೊಳಗಿನ ಅಂತರಗಂಗೆ ಪಾತಾಳ ಸೇರಿದಳು. ನನ್ನ ಒಡಲು ಸಂಪೂರ್ಣ ಒಣಗಿ ಹೋಯಿತು. ವರ್ಷ ಕಾದೆ, ಎರಡು ವರ್ಷ ಕಾದೆ ವರುಣನ ಆಗಮನಕ್ಕಾಗಿ… ಐದು, ಹತ್ತು ಹದಿನೈದು ಇಪ್ಪತ್ತು ವರ್ಷವಾದರೂ, ಮುನಿಸಿಕೊಂಡ ವರುಣ, ಒಲಿಯಲೇ ಇಲ್ಲ. ನನ್ನ ಸಂಕಟ, ನೋವು ಯಾರೊಬ್ಬರಿಗೂ ಅರ್ಥವಾಗಲಿಲ್ಲ. ಸ್ವತ್ಛವಾಗಿದ್ದ ನನ್ನ ಒಡಲನ್ನು ಒಂದಷ್ಟು ಕಿಡಿಗೇಡಿಗಳು ಬಗೆದರು. ಬಗೆಯುತ್ತಲೇ ಇದ್ದರು. ಸಾವಿರಾರು ಮಂದಿಗೆ ನೀರುಣಿಸುತ್ತಿದ್ದ ನನಗೆ ದಾಹ ಹೆಚ್ಚಾಗಿತ್ತು. ದಾಹ ತಡೆಯಲಾಗದೆ ದುಃಖೀಸಿದೆ. ನನ್ನ ಅಳುವಿನ ದನಿ ಯಾರೊಬ್ಬರಿಗೂ ಕೇಳಿಸಲಿಲ್ಲ. ನನ್ನೊಡಲಲ್ಲಿ ಗಿಡ-ಗಂಟೆಗಳು ಬೆಳೆದವು. ನಿತ್ಯವೂ ನನ್ನನ್ನು ನೋಡಲು ಬರುತ್ತಿದ್ದ ಮಂದಿ, ನನ್ನ ಕಡೆ ಮುಖ ಕೂಡ ತಿರುಗಿ ನೋಡದೆ ಹೋಗುತ್ತಿದ್ದರು. ನನ್ನ ಸಮೀಪದಲ್ಲೇ ಜನ ವಾಸ ಮಾಡಿದರೂ, ನನ್ನ ಬಗ್ಗೆ ಯಾರೂ ಕಾಳಜಿ ತೋರಲಿಲ್ಲ. ನನ್ನೊಡಲನ್ನು ಬಗೆದು ಬಗೆದು ದೊಡ್ಡ ದೊಡ್ಡ ಗುಂಡಿ ಮಾಡಿದರೇ ಹೊರತು, ನನ್ನ ನೋವು ಸಂಕಟ, ಯಾತನೆ ಯಾರಿಗೂ ಗೊತ್ತಾಗಲಿಲ್ಲ. ನನ್ನಿಂದ ಅದೆಷ್ಟೋ ಒಳಿತನ್ನ ಕಂಡವರು, ನನ್ನ ಸಮಸ್ಯೆ ಅರಿಯಲೇ ಇಲ್ಲ. ನಾನು ಪಡಕೊಂಡು ಬಂದದ್ದು ಇಷ್ಟೇ ಇರಬೇಕು ಅಂದುಕೊಂಡು ಸುಮ್ಮನೆ ಮಲಗಿಬಿಟ್ಟೆ…
ಒಳ್ಳೆಯ ಕಾಲಕ್ಕಾಗಿ ನಾನು ಕಳೆದ ವರ್ಷಗಳನ್ನು ನೆನಪಿಸಿಕೊಂಡರೆ ಈಗ ಕಣ್ಣೀರು ಉಕ್ಕಿಬರುತ್ತೆ. ರಾತ್ರಿ, ಹಗಲು, ಮಳೆ, ಚಳಿ, ಬಿಸಿಲು ಏನೇ ಬಂದರೂ, ನನ್ನ ಪಾಡಿಗೆ ನಾನು ಮೂಕವೇದನೆಯಲ್ಲೇ ನರಳುತ್ತ ದಿನ ಕಳೆಯುತ್ತಿದ್ದೆ. ಹೀಗಿದ್ದಾಗಲೇ, ಕೆಲವರಿಗೆ ನನ್ನ ಬಗ್ಗೆ ಕರುಣೆ ಬಂತು. ಆ ಅನುಕಂಪದಿಂದಲೇ ನಾನೀಗ ಮೈ ಒದ್ದೆ ಮಾಡಿಕೊಂಡಿದ್ದೇನೆ. ತುಸು ದಾಹ ತೀರಿಸಿಕೊಂಡು ಚೇತರಿಸಿಕೊಂಡಿದ್ದೇನೆ. ನನ್ನ ಬಗ್ಗೆ ಕಾಳಜಿ ತೋರಿದ ಮಹಾನುಭಾವರಿಗೆ ಕೃತಜ್ಞತೆಗಳು. ನನ್ನಿಂದ ಮೊದಲಿನಂತೆ ಎಲ್ಲರ ದಾಹ ತೀರಿಸಲು ಆಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಹೀಗೇ ಕಾಳಜಿಯಿಂದ, ಅಕ್ಕರೆ ತೋರಿ ಪ್ರೀತಿಸಿದರೆ, ಖಂಡಿತವಾಗಿಯೂ ಎಲ್ಲರ ಒಳಿತಿಗೆ ಮುಂದಾಗಬಲ್ಲೆ. ನನ್ನ ಹಳೆಯ ವೈಭವ ಮರುಕಳಿಸದಿದ್ದರೂ “ಸಾಗರ’ದಂತಿರುವ ನಾನು, ಒಂದಷ್ಟು ಜನರ ಮೊಗದಲ್ಲಿ ಮಂದಹಾಸ ಮೂಡಿಸುವ ಭರವಸೆ ಕೊಡಬಲ್ಲೆ. ನನ್ನೊಡಲಲ್ಲೇ ಹುಲುಸಾಗಿ ಬೆಳೆದು ನಿಂತವರು ನನ್ನನ್ನು ಅರ್ಥ ಮಾಡಿಕೊಂಡರೆ, ವರುಣ ಮತ್ತೆ ದಯೆ ತೋರಿದರೆ ಭರಮಣ್ಣ ನಾಯಕನಾಣೆಗೂ ನಾನು ಮತ್ತದೇ “ಸಾಗರ’ವಾಗುತ್ತೇನೆ.
ಸೋದರ ಸೋದರಿಯರೇ ಈವರೆಗೂ ಓದಿದಿರಲ್ಲ; ಇದು ಭರಮಸಾಗರ ಎಂಬ ದೊಡ್ಡ ಕೆರೆಯ ಕಥೆ!! ಸುಮಾರು 864 ಎಕರೆಯಷ್ಟು ವಿಶಾಲವಾಗಿರುವ ಕೆರೆ ಇದು. ಆಗಿನ ಭರಮಣ್ಣ ನಾಯಕ ಕಟ್ಟಿಸಿದ ಕೆರೆ. ಸಾಗರದಂತೆ ಕಟ್ಟಿಸಿದ್ದರಿಂದ, ಭರಮಣ್ಣ ನಾಯಕನ ಸಾಗರದಂಥ ಕೆರೆ ಎಂಬ ಮಾತು ಜನಜನಿತವಾಯಿತು. ಆ “ಸಾಗರ’ದ ಮಡಿಲಲ್ಲಿರುವ ಊರಿಗೆ “ಭರಮಸಾಗರ’ ಅಂತಲೂ ಹೆಸರು ಬಂತು ಎಂಬ ಪ್ರತೀತಿ ಇದೆ. ಸರಿ ಸುಮಾರು ಮೂರು ದಶಕಗಳಿಂದಲೂ ಬರಿದಾಗಿದ್ದ ಕೆರೆಗೆ ಕಳೆದ 2009ರಲ್ಲಿ ಸಣ್ಣ ಪ್ರಮಾಣದ ನೀರು ಬಂದಿತ್ತು. ಅದು ಬಿಟ್ಟರೆ, ಒಂದು ಕಾಲದಲ್ಲಿ ಮೈದುಂಬಿಕೊಂಡಿದ್ದ ಕೆರೆ ಬತ್ತಿ, ಬಣಗುಟ್ಟುತ್ತಿತ್ತು. ಇಂಥ ಅದೆಷ್ಟೋ ಬತ್ತಿದ ಕೆರೆಗಳಿಗೆ ನೀರುಣಿಸಬೇಕೆಂಬ ಕಾಯಕಲ್ಪಕ್ಕೆ ಮುಂದಾಗಿದ್ದು ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ. ರಾಜನಹಳ್ಳಿ ಏತನೀರಾವರಿ ಯೋಜನೆಯಡಿ, ಪೈಪ್‌ಲೈನ್ ಮೂಲಕ ದಾವಣಗೆರೆ ಜಿಲ್ಲೆಯ 22 ಕೆರೆಗಳಿಗೆ ನೀರು ಹರಿಸುವ ಯೋಜನೆಯನ್ನು ಮುಂದುವರಿಸಿ, ಅದನ್ನು ಭರಮಸಾಗರ ಸುತ್ತಮುತ್ತಲ ಕೆರೆಗಳಿಗೂ ವಿಸ್ತರಿಸಬೇಕು ಎಂದು ಸರ್ಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಒತ್ತಡ ತಂದರು. ಮೂರು ವರ್ಷಗಳ ಹಿಂದೆ ಶ್ರೀಗಳ ಬೇಡಿಕೆಗೆ ಸ್ಪಂದಿಸಿದ ಸರ್ಕಾರ, ಅನುದಾನ ಬಿಡುಗಡೆ ಮಾಡಿತು. ಆಗ ಸಚಿವರಾಗಿದ್ದ ಎಚ್.ಆಂಜನೇಯ, ಕಾಳಜಿ ವಹಿಸಿದರು. ಪರಿಣಾಮ, ಭರಮಸಾಗರ ಹಾಗೂ ಇತರೆ ಕೆರೆಗೆ ನೀರು ಹರಿಸುವ ಕಾರ್ಯಕ್ಕೆ ಜಯ ಸಿಕ್ಕಿತು. ಇದರ ಹಿಂದೆ ಸ್ಥಳೀಯ ಮುಖಂಡರ ಪಾಲು ದೊಡ್ಡದಿದೆ. ಶ್ರೀಗಳ ಶ್ರಮಕ್ಕೆ ಪ್ರತಿಫಲವೂ ಸಿಕ್ಕಿದೆ.
ಈಗ ಪೈಪ್ ಮೂಲಕ ತುಂಗಭದ್ರಾ ನದಿ ನೀರನ್ನು ಒಂದೆಡೆ ಸಂಗ್ರಹಿಸಿ, ಆ ನೀರನ್ನು ಸದ್ಯ ಕೆರೆಗೆ ಹರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಇದು ಪ್ರಾಯೋಗಿಕವಾಗಿ ಸಫಲವಾಗಿದೆ. ಸದ್ಯ, ಅಲ್ಲಲ್ಲಿ ದುರಸ್ತಿಯಾಗಬೇಕಿದೆ. ಪ್ರಯೋಗ ಎಂಬಂತೆ ನೀರು ಕೆರೆಗೆ ಬಂದಿದೆ. ಮುಂದಿನ ದಿನಗಳಲ್ಲಿ, ತುಂಗಭದ್ರಾ ನದಿ ನೀರು, ಭರಮಸಾಗರ ಕೆರೆಗೆ ಹರಿಯಲಿದೆ.
ಹೀಗೆ ಆಗಿಬಿಟ್ಟರೆ, ಆನಂತರದಲ್ಲಿ ಸುತ್ತಮುತ್ತಲ ಬೋರ್‌ವೆಲ್ ತುಂಬಿಕೊಳ್ಳುತ್ತವೆ. ರೈತರಿಗೆ, ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಸಿರಿಗೆರೆ ಶ್ರೀಗಳು ಮುತುವರ್ಜಿ ವಹಿಸಿದ್ದರಿಂದ ಇಷ್ಟೆಲ್ಲಾ ಸಾಧ್ಯವಾಗಿದೆ. ಶ್ರೀಗಳು 33 ಕೆರೆಗಳಿಗೆ ಶಾಶ್ವತ ನೀರಿನ ಸೌಕರ್ಯ ಕಲ್ಪಿಸಬೇಕೆಂದು ಹಿಂದೆಯೇ ಹೋರಾಡಿದ್ದಾರೆ. ಹೋರಾಡುತ್ತಲೇ ಇದ್ದಾರೆ. ಸುಮಾರು 250 ಕೋಟಿ ರೂ. ಯೋಜನೆ ಜಾರಿಯಾದರೆ, ಮುಂದಿನ ದಿನಗಳಲ್ಲಿ ಭರಮಸಾಗರ ಸುತ್ತಮುತ್ತಲ 33 ಕೆರೆಗಳಿಗೆ ನೀರು ಲಭ್ಯವಾಗಲಿದೆ. ಅಂಥದೊಂದು ಕೆಲಸ ತುಂಬ ಬೇಗನೆ ಆಗಿಬಿಡಲಿ. “ಭರಮಸಾಗರ’ದ ಒಡಲಿನಲ್ಲಿ “ಗಂಗವ್ವ’ ಉಳಿದುಬಿಡಲಿ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.