ಮೀನಿನಂತೆ ಈಜಿ, ಆದರೆ ಬದುಕು ಮೀನಿನಂತೆ ಆಗದಿರಲಿ!
Team Udayavani, Mar 30, 2019, 6:00 AM IST
ಸ್ವಚ್ಛಂದವಾಗಿ ನೀರಿನಲ್ಲಿ ಬದುಕುವ ಮೀನು ಮೀನುಗಾರನ ಗಾಳದ ತುದಿಯಲ್ಲಿ ಸಿಕ್ಕಿಸಿದ ಮಾಂಸದ ತುಂಡಿಗೋ, ಹುಳ-ಹುಪ್ಪಟೆಗೋ ಆಸೆಪಟ್ಟು ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತದೆ. ಇದೇ ರೀತಿ ಮನುಷ್ಯನೂ ಜಿಹ್ವಾಚಾಪಲ್ಯಕ್ಕೆ ಸಿಲುಕಿ ಸಾವನ್ನಪ್ಪುತ್ತಾನೆ.
ಸಂಪತ್ತು ನಮ್ಮ ಮನಸ್ಸನ್ನೂ ಕೆಡಿಸುತ್ತದೆ. ಮದ, ಮೋಹ, ಮತ್ಸರ, ಲೋಭ, ಕಾಮ, ಕ್ರೋಧಗಳೂ ನಮ್ಮನ್ನು ಕಾಡುತ್ತವೆ. ಇದರಿಂದಾಗಿ ಜೀವನದ ನೆಮ್ಮದಿ ಕೆಡುತ್ತದೆ.
ಬದುಕು ಜಗತ್ತಿನ ಎಲ್ಲವನ್ನೂ ಅವಲಂಬಿಸಿದೆ. ತುಂಬಾ ಆಳವಾಗಿ ಅವಲೋಕಿಸುವುದಾದರೆ ನಮ್ಮ ಬದುಕು ನಮ್ಮ ಸ್ವಂತದ್ದಲ್ಲ. ಹಾಗಾಗಿ ನಿಯಮಗಳನ್ನು ಪಾಲಿಸಬೇಕು. ಬಣ್ಣದಂಗಡಿಯಲ್ಲಿ ನಮಗೆ ಬೇಕಾದ ಬಣ್ಣವನ್ನು ಆರಿಸುವುದು ಸುಲಭವಲ್ಲ. ಅಲ್ಲಿ ಎಲ್ಲ ಬಣ್ಣಗಳೂ ನಮ್ಮದೇ ಎಂಬ ಭ್ರಮೆಯನ್ನು ಉಂಟುಮಾಡಬಹುದು.
ಅಥವಾ ನಾವೇ ನಮ್ಮದಲ್ಲದ ಬಣ್ಣದತ್ತ ಆಕರ್ಷಿತರಾಗಿ, ಇನ್ನಾವುದೋ ಸುಖವನ್ನು ಅರಸಿಕೊಂಡು ಹೋಗಬಹುದು. ಈ ಹುಡುಕಾಟದಲ್ಲೇ ಬದುಕು ಬರಡಾಗಿ ಬಿಡಬಹುದು. ನಮ್ಮ ಮನಸ್ಸನ್ನು ಚಂಚಲಗೊಳಿಸುವ ಸಂಗತಿಗಳು ಸಾವಿರಾರು; ಸಾವಿರದವು ಕೂಡ. ನಾವು ಈಜುತ್ತಿರುವುದೂ ಅಂಥ ಸಮುದ್ರದಲ್ಲಿಯೇ. ಕಾಲು ಸೋಲಬಾರದು, ಉಸಿರು ನಿಲ್ಲಬಾರದು. ಇಂಥ ಸಂದಿಗ್ಧದಲ್ಲಿಯೇ ನಾವು ಸುಲಭದ ದಾರಿಯತ್ತ ಸೆಳೆಯಲ್ಪಟ್ಟು, ಕೊನೆಯಲ್ಲಿ ಗುರಿ ತಲುಪದೆ ಅಸಮರ್ಥರಾಗಿ ಬಿಡುತ್ತೇವೆ. ನೀವು ಮೀನಿನಂತೆ ಸುಂದರವಾಗಿ, ಸುಭದ್ರವಾಗಿಯೇ ಈಜಿ. ಆದರೆ ಈ ಮೀನು ಮಾಡುವ ತಪ್ಪನ್ನು ನೋಡಿಯೂ ನೀವು ಮೀನಿನಂತಾಡದಿರಿ ಎನ್ನುತ್ತದೆ ಶ್ರೀಮದ್ಭಾಗವತ.
ಮೀನಿನ ಬದುಕನ್ನು ಬಹಳ ಹತ್ತಿರದಿಂದ ನೋಡುವವರು ನಾವು. ಸ್ವತ್ಛಂದವಾಗಿ ನೀರಿನಲ್ಲಿ ಬದುಕುವ ಮೀನು ಮೀನುಗಾರನ ಗಾಳದ ತುದಿಯಲ್ಲಿ ಸಿಕ್ಕಿಸಿದ ಮಾಂಸದ ತುಂಡಿಗೋ, ಹುಳ-ಹುಪ್ಪಟೆಗೋ ಆಸೆಪಟ್ಟು ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತದೆ. ಇದೇ ರೀತಿ ಮನುಷ್ಯನೂ ಜಿಹ್ವಾಚಾಪಲ್ಯಕ್ಕೆ ಸಿಲುಕಿ ಸಾವನ್ನಪ್ಪುತ್ತಾನೆ. ಇಂದ್ರಿಯಗಳ ಮೇಲೆ ನಿಯಂತ್ರಣವಿಲ್ಲದೇ ಇದ್ದಾಗ ಜಿಹ್ವಾಚಾಪಲ್ಯಗಳು ಹೆಚ್ಚುತ್ತವೆ. ಜಿಹೆÌ ಎಂದರೆ ನಾಲಿಗೆ. ನಾಲಿಗೆ ಬಯಸುವುದೇ ರುಚಿಯನ್ನು. ನಾಲಿಗೆಗೆ ಇದು ಸಿಹಿ, ಇದು ಖಾರ, ಇದು ಹುಳಿ, ಇದು ಕಹಿ ಹೀಗೆ ಎಲ್ಲಾ ಬಗೆಯ ರುಚಿ ತಿಳಿಯುತ್ತದೆ. ಆದರೆ, ಅದು ತಿನ್ನಲು ಅರ್ಹವೇ? ಈ ವಸ್ತುವನ್ನು ತಿಂದಾಗ ನಮಗೆ ಉತ್ತಮ ಆರೋಗ್ಯ ಸಿಗುತ್ತದೆಯೆ?
ಆರೋಗ್ಯವೇ? ಎಂಬುದನ್ನು ನಾಲಿಗೆ ನಿರ್ಧರಿಸದು. ಈ ನಿರ್ಧಾರ ಮನಸ್ಸಿಗೆ ಬಿಟ್ಟ ವಿಚಾರ. ನಾಲಿಗೆಗೆ ರುಚಿಯಾಗಿದ್ದರ ಕಡೆಯೇ ಮನಸ್ಸು ಕೇಂದ್ರೀಕೃತವಾಗುವುದು ನಮ್ಮ ದೌರ್ಬಲ್ಯ. ಆ ಮೀನಿಗೂ ನಮಗೂ ವ್ಯತ್ಯಾಸವಿರದು. ಆಹಾರ ದೇಹಕ್ಕೆ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯಕ್ಕೂ ಅಷ್ಟೇ ಮುಖ್ಯ ಎಂಬುದು ಎಲ್ಲರಿಗೂ ಗೊತ್ತು. ಕೆಲವು ಆಹಾರವಸ್ತುಗಳು ಮನಸ್ಸಿನ ಏಕಾಗ್ರತೆಯನ್ನೂ ಕೆಡಿಸುತ್ತವೆಂಬುದೂ ಗೊತ್ತಿರುವ ಸಂಗತಿಯೇ. ಹಾಗಾಗಿ, ಜಿಹ್ವಾಚಾಪಲ್ಯಕ್ಕೆ ಒಳಗಾಗದೇ, ಆಹಾರವನ್ನು ನಿಯಂತ್ರಿಸುವ ಜಾಣ್ಮೆಯನ್ನು ಈ ಮೀನಿನ ಬದುಕು ಹೇಳುವ ಪಾಠದಿಂದ ಅರಿತು ಬೆಳಸಿಕೊಳ್ಳಬೇಕು.
ವಿವೇಕವುಳ್ಳವನು ಇಂದ್ರಿಯಗಳನ್ನು ಗೆಲ್ಲುವುದಕ್ಕಾಗಿಯೇ ಜಿಹ್ವಾಚಾಪಲ್ಯದ ಭೋಜನವನ್ನು ನಿಲ್ಲಿಸುತ್ತಾನೆ.
ಆತ ಜಿಹ್ವಾಚಾಲಪ್ಯದ ವಶನಾಗುವುದಿಲ್ಲ. ಶ್ರೀಮದ್ಭಾಗವತದ ಪ್ರಕಾರ, ಎಲ್ಲ ಇಂದ್ರಿಯಗಳನ್ನು ಗೆದ್ದವನೂ ಕೂಡ ರಸನೇಂದ್ರಿಯವನ್ನು ಗೆಲ್ಲದೆ ಜಿತೇಂದ್ರಿಯನಾಗಲಾರ. ಇಂದ್ರಿಯಗಳನ್ನು ಗೆಲ್ಲುವುದು ಸುಲಭವಲ್ಲ. ಮೀನನ್ನು ಮಾಂಸದ ತುಣುಕೊಂದು ಎಳೆಯುವಂತೆ ನಮ್ಮನ್ನೂ ಆಕರ್ಷಿಸುವ ರಸನೇಂದ್ರಿಯದ ಮೂಲಕ ಸೋಲಿಸುವ ಅಂಶಗಳೇ ತುಂಬಿರುವ ಜಗತ್ತಿನಲ್ಲಿ ಸಮೃದ್ಧವಾದ ಜೀವನವನ್ನು ಹೊಂದಲು ಇಂಥ ಪಾಠಗಳನ್ನು ಕಲಿಯುವತ್ತ, ಅಳವಡಿಸಿಕೊಳ್ಳುತ್ತ ಬದುಕನ್ನು ಕಟ್ಟಬೇಕು.
ಆಪತ್ತಿನ ಮೂಲ ಎಲ್ಲಿದೆ?
ಜೀವನದಲ್ಲಿ ನಮಗೆ ಏನು ಬೇಕು? ಎಂಬುದನ್ನು ನಿಮ್ಮಲ್ಲಿಯೇ ನೀವು ಕೇಳಿಕೊಳ್ಳಿ. ಉತ್ತರಗಳು ಸಾವಿರಾರು. ಇಷ್ಟು ಬೇಕು, ಇದಿಷ್ಟೇ ಸಾಕು ಎಂದು ಅನಿಸುವುದೇ ಇಲ್ಲ. ಒಮ್ಮೆ ಹಣ ಬೇಕು, ಇನ್ನೊಮ್ಮೆ ಸಂಪತ್ತು, ಮತ್ತೂಮ್ಮೆ ದೊಡ್ಡ ಬಂಗಲೆ, ಚಿನ್ನ, ನಿದ್ರೆ, ಆಯುಷ್ಯ, ಆರೋಗ್ಯ… ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನಮಗೆ ಬೇಕಾದದ್ದು ಅದೂ ಅಲ್ಲ, ಇದೂ ಅಲ್ಲ. ಕೊನೆಯಲ್ಲಿ ಬಂದು ನಿಲ್ಲುವುದು ನೆಮ್ಮದಿ ಅಥವಾ ಸುಖೀ ಜೀವನ ಎಂಬ ಉತ್ತರಕ್ಕೆ. ಹೌದು, ಏನೇನಿದ್ದರೂ ನೆಮ್ಮದಿಯೇ ಇಲ್ಲದಿದ್ದರೆ ಏನು ಪ್ರಯೋಜನ ಎಂಬ ಮಾತು ಎಲ್ಲರಿಗೂ ಗೊತ್ತು. ಇದು ಲೋಕಾನುಭವ. ಚಿನ್ನ ಸಿಕ್ಕಿದವನಿಗೆ ಚಿಂತೆ, ಕಬ್ಬಿಣ ಸಿಕ್ಕರೆ ಒಳ್ಳೆಯದು ಎಂಬ ಮಾತು ಬಂದಿದ್ದೇ ಈ ಲೋಕಾನುಭವದಿಂದ. ಈ ಸುಖ ಅಥವಾ ನೆಮ್ಮದಿ ಇರಬೇಕೆಂದರೆ ಆಪತಿಲ್ಲದ ಜೀವನ ನಮ್ಮದಾಗಬೇಕು. ಆ ಸುಖ ಎಲ್ಲಿದೆ? ಎಂದು ಹುಡುಕುತ್ತ ಹೋದರೆ ಎಲ್ಲಿ ಏನೂ ಇಲ್ಲವೋ ಅಲ್ಲಿಯೇ ಸುಖವಿದೆ. ಬರಿಗೈಯಲ್ಲಿರುವವನೇ ಪ್ರಪಂಚದಲ್ಲಿ ಹೆಚ್ಚು ಸುಖೀ.
ಆಪತ್ತಿನ ಮೂಲ ಸಂಪತ್ತು
ಆಪತ್ತಿನ ಮೂಲ ಎಲ್ಲಿದೆ? ಎಂಬುದನ್ನು ಶ್ರೀಮದ್ಭಾಗವತ ಒಂದು ಪಕ್ಷಿಯ ದೃಷ್ಟಾಂತದ ಮೂಲಕ ಹೇಳುತ್ತದೆ. ಕುರರ ಪಕ್ಷಿ ಸ್ವಚ್ಛಂದವಾಗಿ ಕಾಡುಮೇಡುಗಳಲ್ಲಿ ಹಾರುತ್ತ, ಕೊಳದ ನೀರಲ್ಲಿ ಮುಳುಗೇಳುತ್ತ, ಮರದಿಂದ ಮರಕ್ಕೆ ಹಾರಿ ವಿರಮಿಸುತ್ತ, ಬಗೆಬಗೆಯ ಹಣ್ಣುಗಳನ್ನು ಕಚ್ಚಿ ತಿನ್ನುತ್ತ, ಚಿಲಿಪಿಲಿ ಉಲಿಯುತ್ತ, ರಾತ್ರಿಯಾಗುತ್ತಲೇ ತನ್ನ ಗೂಡನ್ನ ಸೇರಿ ಮಲಗಿ ನಿದ್ರಿಸುತ್ತಿತ್ತು. ಒಂದು ದಿನ ಕಾಡನ್ನು ಅಲೆಯುತ್ತಿದ್ದಾಗ ಆ ಕುರರ ಪಕ್ಷಿಗೆ ಮಾಂಸದ ತುಂಡೊಂದು ಸಿಕ್ಕಿತು. ಸಣ್ಣ ಚೂರನ್ನು ತಿಂದು ನೋಡಿತು. ಇದನ್ನು ತನ್ನ ಗೂಡಿಗೆ ತೆಗೆದುಕೊಂಡು ಹೋಗಿ, ಕುಳಿತು ನಿಧಾನವಾಗಿ ಸವಿಯುತ್ತ ತಿನ್ನಬೇಕು ಎಂದು ನಿರ್ಧರಿಸಿ, ತನ್ನ ಗೂಡಿನತ್ತ ಹಾರಿತು. ಮಾಂಸದ ರುಚಿಯನ್ನು ಅದಾಗಲೇ ಕಂಡಿದ್ದ ಹಲವಾರು ಪಕ್ಷಿಗಳ ಕಣ್ಣಿಗೆ ಕುರರ ಪಕ್ಷಿ ಬಿತ್ತು. ಆ ಪಕ್ಷಿಗಳು ಮಾಂಸದ ಆಸೆಗೆ ಕುರರ ಪಕ್ಷಿಯನ್ನು ಮುತ್ತಿ ಪೀಡಿಸತೊಡಗಿದವು. ಆಗ ಕುರರ ಪಕ್ಷಿಗೆ, ಇಷ್ಟಕ್ಕೆಲ್ಲ ಕಾರಣ ತನ್ನ ಬಾಯಿಯಲ್ಲಿರುವ ಮಾಂಸದ ತುಂಡು ಎಂಬುದು ಅರಿವಾಗಿ ತಕ್ಷಣ ಆ ಮಾಂಸದ ತುಂಡನ್ನು ಕೆಳಕ್ಕೆ ಹಾಕಿತು. ಆ ಎಲ್ಲಾ ಪಕ್ಷಿಗಳೂ ಕುರರ ಪಕ್ಷಿಯನ್ನು ಬಿಟ್ಟು ಮಾಂಸದತ್ತ ಹಾರಿದವು. ಕುರರ ಪಕ್ಷಿಯು ಈಗ ನಿರಾಳವಾಯಿತು. ತನಗೆ ಬಂದ ಆಪತ್ತಿನಿಂದಲೂ ಪಾರಾಯಿತು. ಇದರ ಅರ್ಥ ಆಪತ್ತಿನ ಮೂಲವೇ ಸಂಪತ್ತು.
ಸಂಪತ್ತು ಹೆಚ್ಚಿದಂತೆ ನಮ್ಮನ್ನು ಪೀಡಿಸಲು ಬರುವ ಜನಗಳೇ ಹೆಚ್ಚು. ಅಂತೆಯೇ ಸಂಪತ್ತು ನಮ್ಮ ಮನಸ್ಸನ್ನೂ ಕೆಡಿಸುತ್ತದೆ. ಮದ, ಮೋಹ, ಮತ್ಸರ, ಲೋಭ, ಕಾಮ, ಕ್ರೋಧಗಳೂ ನಮ್ಮನ್ನು ಕಾಡುತ್ತವೆ. ಸಂಪತ್ತು ನಮ್ಮಲ್ಲಿ ದುರಾಸೆಯನ್ನು ಹುಟ್ಟಿಸುವುದಲ್ಲದೆ, ಪರರೂ ದುರಾಸೆಯಿಂದ ನಮ್ಮನ್ನು ಹಿಂಸಿಸುವಂತೆ ಮಾಡುತ್ತದೆ. ಇದರಿಂದಾಗಿ ಜೀವನದ ನೆಮ್ಮದಿ ಕೆಡುತ್ತದೆ. ಆಪತ್ತಿಗೆ ನಾವೇ ಕಾರಣರಾಗಿ ಬಿಡುತ್ತೇವೆ. ಬದುಕಿನಲ್ಲಿ ಎಲ್ಲವೂ ಕ್ಷಣಿಕ. ಈ ಸಂಪತ್ತು ಕ್ಷಣಿಕವಾಗಿದ್ದರೂ ಅದರಿಂದ ಉಂಟಾಗುವ ಆಪತ್ತು ಮಾತ್ರ ಶಾಶ್ವತ. ಹಾಗಾಗಿ ಅಗತ್ಯಕ್ಕಿಂತ ಹೆಚ್ಚು ಸಂಪತ್ತನ್ನು ಹೊಂದದೆ, ಬೇಕಾದಷ್ಟನ್ನೇ ಹೊಂದುವುದು ಉತ್ತಮ.
ವಿಷ್ಣು ಭಟ್ ಹೊಸಮನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.