ಟೀಚರ್ರೇ ಸ್ಕೂಲ್ ಡ್ರೈವರು
Team Udayavani, Jun 2, 2018, 11:50 AM IST
ಇದು ಅಪರೂಪದ ಇಬ್ಬರು ಶಿಕ್ಷಕರ ಕತೆ. ಕಳೆದ 10 ವರ್ಷಗಳಿಂದ ಕನ್ನಡ ಶಾಲೆಗಳ ಉಳಿವಿಗಾಗಿ ಇವರದ್ದು ನಿತ್ಯವೂ ಹೋರಾಟ. 8 ತಾಸು ಟೀಚರ್ ಕೆಲಸ ಮಾಡ್ತಾರೆ; 4 ತಾಸು ಅದೇ ಸ್ಕೂಲ್ ವ್ಯಾನ್‌ಗೆ ಡ್ರೈವರ್ ಆಗ್ತಾರೆ. ನಿತ್ಯವೂ 8-10 ಟ್ರಿಪ್‌ಗಳ ಮೂಲಕ ಮಕ್ಕಳನ್ನು ಮನೆಬಾಗಿಲಿನಿಂದ ಕರೆತಂದು, ಶಾಲೆ ಮುಗಿದ ಬಳಿಕ ಅಷ್ಟೇ ಜೋಪಾನದಲ್ಲಿ ಮನೆ ಬಾಗಿಲಿಗೆ ಮುಟ್ಟಿಸುತ್ತಾರೆ. ಮಂಗಳೂರು ಜಿಲ್ಲೆಯ ಬಂಟ್ವಾಳ ಸಮೀಪದ ಪಾಣೆಮಂಗಳೂರಿನ ದಾರುಲ್ ಇಸ್ಲಾಂ ಕನ್ನಡ ಶಾಲೆಯ ನೂರುದ್ದೀನ್ ಮತ್ತು ರಾಧಾಕೃಷ್ಣ ನಾಯಕ್‌ರ ಕೆಲಸವು ನಾಡಿನ ಕನ್ನಡ ಶಾಲೆಗಳಿಗೆ ಮಾದರಿ.
“ಸಮುದ್ರಕ್ಕೆ ಕಾಲು ಬಂದು ರಸ್ತೆ ಮೇಲೆ ಓಡಾಡಿಬಿಟ್ಟಿದೆ. ಅದಕ್ಕೇ ನನ್ನ ಅಂಬಾಸಡರ್ ಕೆಂಪಾಗಿ ಹೋಗಿದೆ’ ಎಂದು ಮಂಗಳೂರಿನ ಮಹಾಮಳೆಗೆ ರೂಪಕದ ಕೊಡೆ ಹಿಡಿದರು ನೂರುದ್ದೀನ್. ಅದನ್ನು ಕೇಳಿ ಅವರ ಕಾರಿನ ವೈಪರ್ ನಕ್ಕಿತೇನೋ, ಅತ್ತಿತ್ತ ಸರಿದಾಡಿತು. ಬಿಳಿ ಬಣ್ಣದ, ಸಾಧಾರಣ ಮೈಕಟ್ಟಿನ ಕಾರು. ಮಕ್ಕಳನ್ನು ಹೊತ್ತು, ಶಹರದ ಬೀದಿಗಳನ್ನು ದಾಟುವ ಉಪಕಾರದಿಂದಲೇ ಅದು ಊರಿಗೆಲ್ಲ ಫೇಮಸ್ಸು. ಬೆಳಗ್ಗೆ ಆರಕ್ಕಾಗಲೇ ಅದಕ್ಕೆ ಸೋಪಿನ ಪುಡಿಯ ಬುರುಗಿನಿಂದ ಜಲಾಭಿಷೇಕ ಸಾಂಗೋಪಾಂಗವಾಗಿ ನೆರವೇರುತ್ತಿತ್ತು. ನೂರುದ್ದೀನ್ ಗಣಿತ ಟೀಚರ್. ಅವರ ಮಾಸ್ತರಿಕೆ ಕೆಲಸ ಆ ಕಾರಿನಿಂದಲೇ ಶುರು!
ಅಂಬಾಸಡರ್‌ಗೂ, ಇವರ ಮಾಸ್ತರಿಕೆಗೂ ಏನು ಸಂಬಂಧ? ಹಾಗಂತ ಇವರೇನು ಇರುವ ನಾಲ್ಕು ಚಕ್ರವನ್ನು ಕೂಡಿಸಿ, ಭಾಗಿಸಿ, ಗುಣಿಸಿ, ಎಂಟಾಗಿಸುವುದಿಲ್ಲ; ಪೈಥಾಗೋರಸನನ್ನೂ ತಂದು ಕಾರಿನ ಬ್ಯಾನೆಟ್ಟಿನ ಕೂರಿಸುವುದೂ ಇಲ್ಲ. ಬೇರೆಲ್ಲ ಮೇಷ್ಟ್ರ ಕೆಲಸ ಒಂದು ಸೀಮೆಸುಣ್ಣ ಹಿಡಿದೋ, ಪಠ್ಯಪುಸ್ತಕ ಹಿಡಿದೋ, ಹಾಜರಿ ಪುಸ್ತಕ ಹಿಡಿದೋ ಶುರುವಾದರೆ, ನೂರುದ್ದೀನ್‌ರ ಬೋಧಕವೃತ್ತಿಯ ಚೆಲುವೇ ವಿಭಿನ್ನ. ಅಂಬಾಸಡರ್ ಕಾರ್‌ಗೆ ಪಕ್ಕಾ ಡ್ರೈವರ್ ಆಗಿ, ಊರೂರು ಸುತ್ತಿಕೊಂಡು, ಮಕ್ಕಳ ಮನೆ ಬಾಗಿಲಿಗೇ ಹೋಗಿ, ಅವರನ್ನು ಜೋಪಾನವಾಗಿ ಕೂರಿಸಿಕೊಂಡು, ಶಾಲೆಗೆ ಮುಟ್ಟಿಸುತ್ತಾರೆ. ಮೂರು ಟ್ರಿಪ್‌ನಂತೆ ಒಟ್ಟು 60 ಮಕ್ಕಳನ್ನು ಶಾಲೆ ಬಾಗಿಲಿಗೆ ತಲುಪಿಸುತ್ತಾರೆ. 8 ತಾಸು ಟೀಚರ್ ಕೆಲಸ. ಆಚೆ ಈಚೆ ನಾಲಕ್ಕು ತಾಸು ಡ್ರೈವರ್ ಕೆಲಸ. ಈ ಚಾಲಕ ಕೆಲಸಕ್ಕೆ ಇವರೇನೂ ಸಂಭಾವನೆ ಪಡೆಯುವುದಿಲ್ಲ. 10 ವರ್ಷಗಳಿಂದ ಒಂದು ದಿನವೂ ಈ ಸೇವೆಯನ್ನು ನೂರುದ್ದೀನ್ ನಿಲ್ಲಿಸಿಯೇ ಇಲ್ಲ!
ಶಾಲೆಗೆ ಬರುವ ಹಾದಿಯಲ್ಲಿ ಇವರೇನು ಜುಮ್ಮನೆ ಡ್ರೈವ್ ಮಾಡಿಕೊಂಡು ಕೂರುವುದಿಲ್ಲ. ಕೆಲವು ಸಲ ಮಗ್ಗಿ, ಸೂತ್ರಗಳ ಪಠಣ ಕಾರಿನಲ್ಲೇ ಆಗಿಹೋಗುತ್ತೆ. ಶಾಲೆಗೆ ಬರುವ ಮೊದಲೇ ಮಕ್ಕಳ ತಲೆಯಲ್ಲಿ ಅಂಕಿ-ಸಂಖ್ಯೆಗಳು ಟೆಂಟ್ ಹಾಕಿ ಕೂತಿರುತ್ತವೆ. ಅಲ್ಲಿಯ ತನಕ ಡ್ರೈವರ್ ಆಗಿದ್ದ ನೂರುದ್ದೀನ್ ಶಾಲೆ ತಲುಪಿದಾಗ ಪಕ್ಕಾ ಗಣಿತದ ಮೇಷ್ಟ್ರಾಗಿ ರೂಪಾಂತರಗೊಳ್ಳುವರು. ಮಕ್ಕಳೊಂದಿಗೆ ಇವರ ಪಾಠವನ್ನೂ ತನ್ಮಯವಾಗಿ ಕೇಳುತ್ತಾ, ಅಂಬಾಸಡರ್ ಕೆಲಹೊತ್ತು ಅಲ್ಲಿಯೇ ವಿರಮಿಸುವ ಈ ವಿಸ್ಮಯ ಘಟಿಸುವುದು ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಒಂದು ಶಾಲೆಯಲ್ಲಿ. ಇಲ್ಲಿರುವ “ದಾರುಲ್ ಇಸ್ಲಾಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ’ಯ ಶಿಕ್ಷಕರ ಅಪರೂಪದ ಕೈಂಕರ್ಯವಿದು.
ಹೌದು, ಸ್ವತಃ ಶಿಕ್ಷಕರೇ ಕಾರಿನ ಡ್ರೈವರ್ ಆಗಿ ಮಕ್ಕಳನ್ನು ಮನೆಬಾಗಿಲಿನಿಂದ ಕರಕೊಂಡು ಬಂದು, ಶಾಲೆಗೆ ಮುಟ್ಟಿಸುವ ಉದಾಹರಣೆ ರಾಜ್ಯದಲ್ಲಿ ಬೇರೆಲ್ಲೂ ಕಾಣಸಿಗದು. ಇದೇ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ರಾಧಾಕೃಷ್ಣ ನಾಯಕ್ ಕೂಡ ಹೀಗೆಯೇ ಮಕ್ಕಳನ್ನು ಕರೆತರುತ್ತಾರೆ. ವಿಟ್ಲದಿಂದ 8 ಗಂಟೆಗೆ ಹೊರಡುವ ಅವರೂ ಇಪ್ಪತ್ತಕ್ಕೂ ಅಧಿಕ ಮಕ್ಕಳನ್ನು ಓಮ್ನಿಯಲ್ಲಿ ಕೂರಿಸಿಕೊಂಡು ಬರುತ್ತಾರೆ. “ಶಾಲೆಗೆ ಬರುವ ಮಕ್ಕಳು ಬಡವರಾಗಿರುವುದರಿಂದ ಯಾವುದೇ ಶುಲ್ಕವನ್ನು ಅವರಿಂದ ಪಡೆಯುವುದಿಲ್ಲ. ಕಾರಿಗೆ ಬೇಕಾದ ಡೀಸೆಲ್, ಅದರ ನಿರ್ವಹಣೆಯ ವೆಚ್ಚವನ್ನೆಲ್ಲ ಶಿಕ್ಷಕರೇ ಸೇರಿ ಭರಿಸುತ್ತೇವೆ’ ಎನ್ನುತ್ತಾರೆ ಮುಖ್ಯ ಶಿಕ್ಷಕ ಪಕ್ರುದ್ದೀನ್!
ಯಾಕೆ ಶಿಕ್ಷಕರು, ಡ್ರೈವರ್ ಆದರು?
ಇಂಗ್ಲಿಷ್ ಸ್ಕೂಲ್‌ಗಳ ನಡುವೆ ಕನ್ನಡವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಪುಟ್ಟ ಚಳವಳಿ ಈ ಶಾಲೆಯದ್ದು. ಸುಮಾರು 400ಕ್ಕೂ ಅಧಿಕ ಮಕ್ಕಳನ್ನು ಹೊಂದಿದ್ದ ದಾರುಲ್ ಇಸ್ಲಾಂ ಶಾಲೆಯಲ್ಲಿ 2009ರ ವೇಳೆಗೆ ವಿದ್ಯಾರ್ಥಿಗಳ ಸಂಖ್ಯೆ 240ಕ್ಕೆ ಕುಸಿಯಿತಂತೆ. ಅಕ್ಕಪಕ್ಕದಲ್ಲಿ ಇಂಗ್ಲಿಷ್ ಸ್ಕೂಲ್‌ಗಳು ತಲೆ ಎತ್ತಿದ್ದವು. ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿ ಇಲ್ಲವೆಂದು ದೈಹಿಕ ಶಿಕ್ಷಕ ಮುಂತಾದ ಹುದ್ದೆಗಳಿಗೆ ಸರ್ಕಾರ ಸಂಬಳವನ್ನೂ ನೀಡದೇ ಸತಾಯಿಸಿತು. ವಿದ್ಯಾರ್ಥಿಗಳ ಸಂಖ್ಯೆ 280ಕ್ಕೆ ಏರಿಸಿದರಷ್ಟೇ ಸಂಬಳ ಕೊಡ್ತೀವಿ ಎನ್ನುವ ಕಂಡೀಷನ್ನೂ ಹೊರಬಿತ್ತು. ಅಧಿಕಾರಿಗಳ ಆ ಸೂಚನೆಯನ್ನೇ ಸವಾಲಾಗಿ ತೆಗೆದುಕೊಂಡರು, ಮುಖ್ಯ ಶಿಕ್ಷಕ ಫಕ್ರುದ್ದೀನ್ ಬಿ.ಕೆ.
ಇವರು ಮಾಡಿದ್ದಿಷ್ಟೇ… ಎಲ್ಲ ಶಿಕ್ಷಕರೂ ಸೇರಿ, ಚಿಟ್ ಫಂಡ್‌ನಲ್ಲಿ ಹಣ ಹೂಡಿ, ಎರಡು ಹಳೇ ಕಾರನ್ನು ಖರೀದಿಸಿದರು. ಒಂದು ಓಮ್ನಿ, ಮತ್ತೂಂದು ಅಂಬಾಸಡರ್. ಇದಕ್ಕೆ ಡ್ರೈವರುಗಳನ್ನು ನೇಮಿಸುವ ಬದಲು, ಡ್ರೈವಿಂಗ್ ತಿಳಿದಿದ್ದ ನೂರುದ್ದೀನ್ ಮತ್ತು ರಾಧಾಕೃಷ್ಣ ನಾಯಕ್ ಅವರು ಚಾಲಕನ ಸೀಟಿನಲ್ಲಿ ಕುಳಿತರು. ಈ ಇಬ್ಬರೂ ಶಿಕ್ಷಕರು ನಿತ್ಯವೂ 8-10 ಟ್ರಿಪ್ ಹೊಡೆಯುತ್ತಾರೆ. ಮಕ್ಕಳ ಬ್ಯಾಗ್‌ಗಳನ್ನು ತಾವೇ ಎತ್ತಿಕೊಂಡು, ಡಿಕ್ಕಿಯಲ್ಲಿ ಹಾಕಿ, ಜೋಪಾನವಾಗಿ ಅವರನ್ನು ಕೂರಿಸಿ, ಬಾಗಿಲು ಹಾಕುತ್ತಾರೆ. ಆ ಹೊತ್ತಿನಲ್ಲಿ ಇವರು ತಾನೊಬ್ಬ ಶಿಕ್ಷಕ ಎಂಬ ಹಮ್ಮಿನಲ್ಲಿರದೇ, ವೃತ್ತಿಪರ ಚಾಲಕನಂತೆಯೇ ನಡೆದುಕೊಳ್ಳುತ್ತಾರೆ.
“ಸಂಜೆ ಮೂರು ಟ್ರಿಪ್ಪಿನಂತೆ ಮಕ್ಕಳನ್ನೆಲ್ಲ ಜೋಪಾನವಾಗಿ ಮನೆಗೆ ಬಿಟ್ಟು, ನಾನು ಮನೆಗೆ ಸೇರುವಾಗ ರಾತ್ರಿ 7 ಗಂಟೆ ಆಗಿರುತ್ತೆ. ಮನೆಯಲ್ಲಿ ಏನಾದರೂ ಶುಭ- ಸಮಾರಂಭ ಇದ್ದಾಗಲೂ, ಮಕ್ಕಳ ಟ್ರಿಪ್‌ಗೆ ಕಡ್ಡಾಯವಾಗಿ ಹೋಗುತ್ತೇನೆ. ಯಾವತ್ತೂ ಅದನ್ನು ತಪ್ಪಿಸಿಲ್ಲ’ ಎನ್ನುತ್ತಾರೆ ನೂರುದ್ದೀನ್.
ಎಲ್ಲರ ಕಾರಿನಂತಲ್ಲ, ಮೇಷ್ಟ್ರು ಕಾರು!
ಕೆಎ 45, ಎಂ-0157 ನಂಬರಿನ ಅಂಬಾಸಡರ್ ಕಾರು ಬಂತು ಅಂದ್ರೆ ಗ್ಯಾರೇಜಿನಲ್ಲಿ ಅದಕ್ಕೆ ವಿಶೇಷ ಮರ್ಯಾದೆ. ಶಾಲೆಯ ಈ ಕಾರು ತುಸು ಹಾಳಾದರೂ, ಅದು ಚಿಕಿತ್ಸೆ ಪಡೆಯುವುದು ಇದೇ ಸ್ಕೂಲಿನ ಹಳೇ ವಿದ್ಯಾರ್ಥಿ ಯೋಗೀಶ್‌ರ ಗ್ಯಾರೇಜಿನಲ್ಲಿ. ಕನ್ನಡ ಶಾಲೆಯ ಉಳಿವಿಗಾಗಿ ಮೇಷ್ಟ್ರು ಇಷ್ಟೆಲ್ಲ ಶ್ರಮವಹಿಸುತ್ತಿರುವಾಗ, ತಾನು ರಿಪೇರಿಯ ಶುಲ್ಕ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅವರು ನಯಾಪೈಸೆಯನ್ನೂ ಕೇಳುವುದಿಲ್ಲ. ಪುಕ್ಕಟೆಯಾಗಿ ಸರಿಮಾಡಿಕೊಡುತ್ತಾರೆ. ಅಕಸ್ಮಾತ್ ಅವರಿಲ್ಲ ಎಂದಾಗ, ಸಹೋದ್ಯೋಗಿಗೆ, “ನೋಡೂ, ಇದು ಎಲ್ಲರ ಕಾರಿನಂತಲ್ಲ, ಮೇಷ್ಟ್ರು ಕಾರು’ ಅಂತೆØàಳಿಯೇ ರಿಪೇರಿ ಮಾಡಲು ಸೂಚಿಸುತ್ತಾರೆ.
ಇಂಗ್ಲಿಷ್ ಶಾಲೆಗಳಿಗೇ ಪೈಪೋಟಿ!
ಈಗ ಈ ಶಾಲೆಯ ಮಕ್ಕಳ ಸಂಖ್ಯೆ 180. ಸುತ್ತಮುತ್ತಲಿನ ಶಾಲೆಗಳಿಗೆ ಹೋಲಿಸಿದರೆ, ಉತ್ತಮ ಹಾಜರಾತಿಯೇ ಎನ್ನಬಹುದು. ಈ ವರ್ಷ 55 ಮಕ್ಕಳು ಹೊಸದಾಗಿ ಸೇರ್ಪಡೆ ಆಗಿದ್ದಾರೆ. “ಕನ್ನಡ ಶಾಲೆಗಳಲ್ಲಿ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವುದೇ ಇಂದು ದೊಡ್ಡ ಸಾಹಸ. ಮನೆ ಬಾಗಿಲಿಗೆ ವ್ಯಾನ್ ಬರುತ್ತೆ ಅಂದ್ರೆ ಪೋಷಕರಿಗೂ ಒಂದು ನಿಶ್ಚಿಂತೆ. ಮಕ್ಕಳಿಗೂ ನಾವು ಕಾರ್‌ನಲ್ಲಿ ಸ್ಕೂಲ್‌ಗೆ ಹೋಗ್ತಿàವಿ ಎನ್ನುವ ಖುಷಿ. ಈ ಕಾರಣದಿಂದ ನಮ್ಮ ಕಾರ್ ಟ್ರಿಪ್ ಯೋಜನೆ ಯಶಸ್ವಿಯಾಯಿತು’ ಎನ್ನುತ್ತಾರೆ ಫಕ್ರುದ್ದೀನ್. “ಕನ್ನಡ ಶಾಲೆಯೇ ಆದರೂ ಇಲ್ಲಿನ 2ನೇ ತರಗತಿಯ ಮಕ್ಕಳೂ ಇಂಗ್ಲಿಷ್ ಪತ್ರಿಕೆಯನ್ನು ಸರಾಗವಾಗಿ ಓದುತ್ತಾರೆ’ ಎನ್ನುವ ಖುಷಿ ಇಲ್ಲಿನ ಶಿಕ್ಷಕರದು.
ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳ ವಿದ್ಯಾರ್ಥಿಗಳೆಲ್ಲ ಒಟ್ಟಿಗೆ ಕಲಿಯುತ್ತಿರುವ ಈ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಕೊಡುಗೆಯೂ ಸಾಕಷ್ಟಿದೆ. ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಸಮವಸ್ತ್ರದ ನೆರವು ನೀಡುತ್ತಾರೆ. ಒಬ್ಬರು ಶಿಕ್ಷಕರನ್ನು ನೇಮಿಸಿಕೊಂಡು, ಅವರ ಸಂಬಳವನ್ನೂ ಇತರ ಶಿಕ್ಷಕರೆಲ್ಲ ಒಟ್ಟಾಗಿ ಭರಿಸುತ್ತಾರೆ. ಈ ಎರಡೂ ಕಾರುಗಳ ರಿಪೇರಿಗೆ, ನಿರ್ವಹಣೆಗೆ ಏನಿಲ್ಲವೆಂದರೂ ವಾರ್ಷಿಕವಾಗಿ 2 ಲಕ್ಷ ಖರ್ಚಾಗುತ್ತದೆ. ಚಿಟ್ ಫಂಡ್ ಹಣವಲ್ಲದೇ, ಶಿಕ್ಷಕರು ತಮ್ಮ ಸಂಬಳದಲ್ಲಿ ಉಳಿಸಿ, ಈ ಕಾರುಗಳನ್ನು ಉಪಚರಿಸುತ್ತಿದ್ದಾರೆ.
ಒಟ್ಟಿನಲ್ಲಿ ಇವರೆಲ್ಲರ ಕಾಳಜಿ ಇಷ್ಟೇ; ಇಂಗ್ಲಿಷ್ ಸ್ಕೂಲ್‌ಗಳ ಮುಂದೆ ಕನ್ನಡ ಶಾಲೆಗಳು ಮಂಡಿಯೂರಬಾರದು. ಬಡಮಕ್ಕಳು ಎಲ್ಲಿದ್ದರೂ ಸೈ, ಅವರ ಮನೆಗೆ ಹೋಗಿಯಾದರೂ, ಶಾಲೆಗೆ ಕರೆತರಬೇಕು. ಕನ್ನಡದ ರಥದಂತೆ ಕಾಣಿಸುವ ಈ ಶಾಲೆಯ ಓಮ್ನಿ, ಅಂಬಾಸಡರ್ ಇನ್ನಷ್ಟು ಮಕ್ಕಳನ್ನು ಈ ಶಾಲೆಗೆ ಸೇರಿಸಲಿ. ಇಂಥದ್ದೇ ಅಂಬಾಸಡರ್‌ಗಳು ನಾಡಿನುದ್ದಗಲ ನೂರಾಗಲಿ ಎಂದು ಆಶಿಸೋಣ.
ಬೇಸಿಗೆ ರಜೆ ತೆಗೆದುಕೊಳ್ಳದ ಶಿಕ್ಷಕರು!
ಬೇಸಿಗೆ ರಜೆಯೆಂದರೆ, ಮಕ್ಕಳಿಗೆಷ್ಟು ಖುಷಿಯೋ, ಮೇಷ್ಟ್ರಿಗೂ ಅಷ್ಟೇ ಖುಷಿ. ಆದರೆ, ದಾರುಲ್ ಇಸ್ಲಾಂ ಶಾಲೆಯ ಮುಖ್ಯ ಶಿಕ್ಷಕರು ಫಕ್ರುದ್ದೀನ್ ಮತ್ತು ಇತರೆ ಆ ಸಮಯದಲ್ಲಿ ಶಿಕ್ಷಕರು ಸುಮ್ಮನೆ ಮನೆಯಲ್ಲಿ ಕೂರುವುದಿಲ್ಲ. ಹಾಗಂತ ಕುಟುಂಬ ಸಮೇತ ಪಿಕ್ನಿಕ್‌ಗೆ ಹೋಗಿಯೂ ಕಾಲ ಕಳೆಯುವುದಿಲ್ಲ. ಪಾಣೆಮಂಗಳೂರಿನ ಸುತ್ತಮುತ್ತಲಿನ ಪ್ರತಿ ಹಳ್ಳಿಹಳ್ಳಿಗಳಿಗೆ ಧಾವಿಸಿ, ಮಕ್ಕಳನ್ನು ಶಾಲೆಗೆ ಸೇರಿಸಲು ಮನವಿ ಮಾಡುತ್ತಾರೆ. ಇಂಗ್ಲಿಷ್ ಶಾಲೆಗೆ ಸೇರಿ, ಸ್ಕೂಲ್‌ನ ಸಹವಾಸವೇ ಸಾಕು ಎನ್ನುವ ಮಕ್ಕಳಿಗೆ “ಬನ್ನಿ, ನಮ್ಮ ಶಾಲೆಗೆ ಸೇರಿ’ ಎಂದು ಸ್ವಾಗತಿಸುತ್ತಾರೆ. ಇದೇ ಕಾರಣಕ್ಕಾಗಿಯೇ ಬೇರೆ ಕನ್ನಡ ಶಾಲೆಗಳಿಗೆ ಹೋಲಿಸಿದರೆ, ಈ ಶಾಲೆಯಲ್ಲಿ ದಾಖಲಾತಿ ಸಂಖ್ಯೆ ಅತಿಹೆಚ್ಚು!
ಶಾಲೆಗೆ ಬರುವ ಮಕ್ಕಳು ಬಡವರಾಗಿರುವುದರಿಂದ ಯಾವುದೇ ಶುಲ್ಕವನ್ನು ಅವರಿಂದ ಪಡೆಯುವುದಿಲ್ಲ. ಕಾರು ಚಲಾಯಿಸುವ ಶಿಕ್ಷಕರಿಗೂ ಸಂಬಳ ನೀಡುವುದಿಲ್ಲ. ಕಾರಿಗೆ ಬೇಕಾದ ಡೀಸೆಲ್, ಅದರ ನಿರ್ವಹಣೆಯ ವೆಚ್ಚವನ್ನೆಲ್ಲ ಶಿಕ್ಷಕರೇ ಸೇರಿ ಭರಿಸುತ್ತೇವೆ.
– ಫಕ್ರುದ್ದೀನ್, ಮುಖ್ಯ ಶಿಕ್ಷಕ
ಬೆಳಗ್ಗೆ ಮೂರು ಟ್ರಿಪ್, ಸಂಜೆ ಮೂರು ಟ್ರಿಪ್ ಹೊಡೆಯುತ್ತೇನೆ. ಸಂಜೆ ಮಕ್ಕಳನ್ನೆಲ್ಲ ಜೋಪಾನವಾಗಿ ಮನೆಗೆ ಬಿಟ್ಟು, ನಾನು ಮನೆಗೆ ಸೇರುವಾಗ ರಾತ್ರಿ 7 ಗಂಟೆ ಆಗಿರುತ್ತೆ. ಮನೆಯಲ್ಲಿ ಏನಾದರೂ ಶುಭ- ಸಮಾರಂಭ ಇದ್ದಾಗಲೂ, ಮಕ್ಕಳ ಟ್ರಿಪ್‌ಗೆ ಕಡ್ಡಾಯವಾಗಿ ಹೋಗುತ್ತೇನೆ. ಯಾವತ್ತೂ ಅದನ್ನು ತಪ್ಪಿಸಿಲ್ಲ.
– ನೂರುದ್ದೀನ್, ಗಣಿತ ಶಿಕ್ಷಕ
ಕೀರ್ತಿ ಕೋಲ್ಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Aranthodu: ವಾಹನ ಡಿಕ್ಕಿ ಹೊಡೆದು ಕಾಡು ಹಂದಿ ಸಾವು
Artificial Intelligence: ಎಐ ಯುಗದಲ್ಲಿ ನಾವು ನೀವು?
Pushpa 2 Movie: ವರ್ಷದ ಅತೀ ಉದ್ದದ ಸಿನಿಮಾ..? ʼಪುಷ್ಪ-2ʼ ರನ್ ಟೈಮ್ ಎಷ್ಟು?
Chikkamagaluru: 92 ರ ಹರೆಯದಲ್ಲಿ ಬೀದಿಗೆ ಬಿದ್ದ ಜಿಲ್ಲಾ ಬಿಜೆಪಿ ಭೀಷ್ಮ ವಿಟ್ಠಲ ಆಚಾರ್ಯ
Kushtagi: ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.