“ಗಡಿ’ ಗೋಪುರ
ಕ್ಲಾಕ್ ಟವರ್‌ಗಳ ವರುಷ- ಹರುಷ
Team Udayavani, Jan 4, 2020, 7:14 AM IST
ವರುಷ ಉರುಳಿದೆ. ಹಳೇ ಕ್ಯಾಲೆಂಡರ್ ಕಸದ ಬುಟ್ಟಿಗೆ ಸೇರಿ, ಆ ಜಾಗದಲ್ಲಿ ಹೊಸ ಕ್ಯಾಲೆಂಡರ್ ಬಂದು ಕುಳಿತಿದೆ. ಆದರೆ, ಕಾಲವನ್ನು ನಿರ್ಣಯಿಸುವ ಗಡಿಯಾರಗಳು ಮಾತ್ರ ಒಂದೂ ದಿನ ನಿಲ್ಲದಂತೆ ದುಡಿಯುತ್ತಲೇ ಇವೆ. ಈ ಗಡಿಯಾರಗಳ ದೊಡ್ಡಣ್ಣನಂತೆ ಕಾಣುವುದೇ, ಗಡಿಯಾರ ಗೋಪುರಗಳು. ನಾಡಿನ ಅಲ್ಲಲ್ಲಿ ಇವು ಚಾರಿತ್ರಿಕ ಚೆಲುವುಗಳಾಗಿ, ಒಂದೊಂದು ಕಥೆ ಹೇಳುತ್ತಿವೆ…
“ಈ ಗಂಟೆ ನೋಡಿ… ಇದರ ತೂಕ ಎಷ್ಟು ಗೊತ್ತೇ? ಬರೋಬ್ಬರಿ 550 ಕಿಲೋ. ಗಟ್ಟಿಮುಟ್ಟಾದ ಗಂಟೆಯ ಶರೀರದಲ್ಲಿ, ಎರಡು ಲೋಹಗಳು ಬೆರೆತಿವೆ. ತಾಸಿಗೊಮ್ಮೆ ಗಂಟೆ ಸದ್ದು ಮಾಡಿದರೆ, ಸಾಧನಕೇರಿಯ ಆಚೆಗೂ ಇದರ ಧ್ವನಿಯು ತರಂಗಗಳಾಗಿ ಮೊಳಗುತ್ತದೆ. ಸುತ್ತಲಿನ 3 ಕಿ.ಮೀ. ಪರಿಸರದಲ್ಲಿ ತನ್ನ ಪ್ರಭಾವದ ಅಲೆ ಬೀರುವ ಕಾಲದ ರಾಯಬಾರಿ ಇದು…’! ಧಾರಾನಗರಿಯ ಕರ್ನಾಟಕ ವಿಶ್ವವಿದ್ಯಾಲಯದ ಗೋಪುರದ ಗಡಿಯಾರದ ಪ್ರತಾಪವಿದು. ಆಗೆಲ್ಲ ವಾಚ್‌ಗಳಿಲ್ಲದ ಕಾಲದಲ್ಲಿ, ಇದರ ಸದ್ದೇ ಧಾರವಾಡದ ಕೆಲವು ಮಂದಿಗೆ ಕಾಲನಿರ್ಣಯ.
1962ರಿಂದಲೂ ಒಂದು ದಿನವೂ ದಣಿಯದಂತೆ, ಚಲಿಸುತ್ತಲೇ ಇರುವ ಗೋಡೆ ಗಡಿಯಾರದ ಗೋಪುರದಲ್ಲಿ ನಿಂತು, ಸೆಂಟ್ರಲ್ ವರ್ಕ್‌ಶಾಪ್‌ನ ಸಿಬ್ಬಂದಿ, ಗಿರೀಶ ಘೋಡ್ಕೆ, ಇದರ ಕಥೆ ಹೇಳುತ್ತಿದ್ದರು. ಆ ಬೃಹತ್ ಲೋಹದ ಗಂಟೆ ಒಮ್ಮೆ ಬಾರಿಸಿದರೆ, ಗೋಪುರವೇ ಕಂಪಿಸಿದ ಅನುಭವ. ಪ್ರತಿ ಗಂಟೆಗೊಮ್ಮೆ, ಕಟ್ಟಡದಲ್ಲಿ ಈ ಅನುಭವ ದಕ್ಕಿಸಿಕೊಳ್ಳುವುದೇ ಒಂದು ಪುಳಕ. ಇಲ್ಲಿನ ಗಡಿಯಾರಕ್ಕೆ ಸೆಂಟ್ರಲ್ ವರ್ಕ್‌ಶಾಪೇ ಅಪ್ಪ- ಅಮ್ಮ. ಐವತ್ತೆಂಟು ವರುಷದ ಹಿಂದೆ, ಡಿ.ಸಿ. ಪಾವಟೆಯವರು ವೈಸ್ ಛಾನ್ಸಲರ್ ಆಗಿದ್ದಂಥ ಕಾಲ. ಅವರ ಇಚ್ಛಾಶಕ್ತಿಯಂತೆ ಈ ಗಡಿಯಾರ ಇಂಗ್ಲೆಂಡಿನಿಂದ ಬಂತು.
ಆ ಕಾಲದಲ್ಲಿ ಬಾಂಬೆಯ “ಟೆ„ಮ್ ಕಂಟ್ರೋಲ್ ಬಾಂಬೆ’ ಎಂಬ ಕಂಪನಿ, ದೇಶದ ಹಲವೆಡೆ ಗಡಿಯಾರಗಳನ್ನು ಸ್ಥಾಪಿಸಿ, ಖ್ಯಾತಿ ಪಡೆದಿತ್ತು. ಅದೇ ಕಂಪನಿ ಈ ಬೃಹತ್ ಗೋಡೆ ಗಡಿಯಾರವನ್ನೂ ಆಮದು ಮಾಡಿಕೊಂಡು, 1962ರಲ್ಲಿ ಇಲ್ಲಿ ಸ್ಥಾಪಿಸಿತಂತೆ. ಆಂಧ್ರದಿಂದ ತಂದ ಕಲ್ಲುಗಳಿಂದ ನಿರ್ಮಿತವಾದ, ಅಜಮಾಸು 105 ಅಡಿ ಎತ್ತರದ ಗೋಪುರದ ತುದಿಯಲ್ಲಿ ಚತುರ್ಮುಖೀ ಗಡಿಯಾರ ವಿರಾಜಮಾನವಾಗಿದೆ. ಕಂಪನಿಯು 20 ವರ್ಷಗಳ ವಾರೆಂಟಿ ನೀಡಿತ್ತಾದರೂ, 58 ವರ್ಷದಿಂದಲೂ ಗಡಿಯಾರ ಗಟ್ಟಿಮುಟ್ಟಾಗಿಯೇ ಕೆಲಸ ಮಾಡುತ್ತಿದೆ.
ಏಳಡಿ ಅಂತಸ್ತಿನ ಗೋಪುರದಲ್ಲಿ, ಆರನೇ ಮಹಡಿಯಲ್ಲಿ ಈ ಗಡಿಯಾರದ ನಿರ್ವಹಣೆಯ ದೃಶ್ಯಗಳು ಕಾಣಸಿಗುತ್ತವೆ. ಗಡಿಯಾರದ ನಿಮಿಷದ ಮುಳ್ಳೇ ಐದೂವರೆ ಅಡಿ ಉದ್ದ. ಮೂರು ಅಡಿ ಉದ್ದದ ಗಂಟೆ ಮುಳ್ಳು. ಮಳೆಯೇ ಇರಲಿ, ಚಳಿಯೇ ಇರಲಿ… ಗಡಿಯಾರ ಮುಳ್ಳುಗಳು ಹೀಗೆ ಶ್ರದ್ಧೆಯಿಂದ ತಿರುಗಬೇಕಾದರೆ, ಅದರ ಹಿಂದೆ ಕಾಣುವ ತಪಸ್ವಿಯೇ ಎ.ಎ. ಛೋಪಾರ್. ಗಡಿಯಾರಕ್ಕೆ ಹಸಿವಾದಾಗವೆಲ್ಲ, ಕೀಲಿ ಕೊಟ್ಟು ಅದರ ಜೀವಂತಿಕೆ ಕಾಪಾಡಿಕೊಂಡ ಬಂದ “ಕೀಮ್ಯಾನ್’.
ಗಡಿಯಾರ ಇವರೊಳಗಿನ ಹೃದಯವೇ ಆಗಿ, ಅದರ ಚಲನೆಯೂ, ಇವರ ಜೈವಿಕ ಕ್ರಿಯೆಗಳಲ್ಲಿ ಒಂದಾದಂತೆ ಬೆರೆತಿದೆ. ಗಡಿಯಾರದ ಯಂತ್ರದಲ್ಲಿ ವಿದ್ಯುತ್ ಚಾಲಿತ ವ್ಯವಸ್ಥೆ ಇದ್ದರೂ, ವೋಲ್ಟೆಜ್ ವ್ಯತ್ಯಾಸದ ಕಾರಣ, ಪ್ರತಿ 32 ಗಂಟೆಗೊಮ್ಮೆ ಇವರೇ ಮ್ಯಾನುವೆಲ್ ಆಗಿ ಕೀಲಿ ಕೊಡುತ್ತಾರೆ. “ಕೆಲವೊಮ್ಮೆ ಈ ಗಡಿಯಾರದ ಕೀಲಿ ನಡುರಾತ್ರಿಯ ಹೊತ್ತಿಗೆ ಮುಗಿಯುತ್ತಾ ಬಂದಿದ್ದೂ ಉಂಟು. ಆಗಲೂ ಬಂದು ಕೀಲಿ ಕೊಟ್ಟಿದ್ದೇನೆ. ಸತತ ರಜೆ ಇದ್ದಾಗಲೂ, ಇದನ್ನು ನಿಲ್ಲಲು ಬಿಟ್ಟಿಲ್ಲ’ ಎಂದು ಹೇಳುವಾಗ, ಛೋಪಾರ್‌ರ ಮನಸ್ಸಿನ ಮಗನಾಗಿ, ಈ ಗಡಿಯಾರ ತೋರುತ್ತಿತ್ತು.
ಕಾಲ ಉರುಳಿ, ಡಿಜಿಟಲ್ ಯುಗಕ್ಕೆ ಬಂದಾಗಿದೆ. ಆದರೂ, ಹಿಂದಿನ ಆವಿಷ್ಕಾರ, ಅವುಗಳ ಸದೃಢತೆಗಳು ಈಗಲೂ ಬೆರಗು ಹುಟ್ಟಿಸುತ್ತಲೇ ಇವೆ. ಆ್ಯಂಟಿಕ್ ಪೀಸ್‌ನಂತೆ ಇರುವ ಕವಿವಿ ಗೋಪುರದ ಗಡಿಯಾರ, ಆರು ದಶಕವಾದರೂ ಒಂಚೂರೂ ತುಕ್ಕುಹಿಡಿದಿಲ್ಲ. 60ರ ದಶಕದಲ್ಲಿ “ಟೆ„ಮ್ ಕಂಟ್ರೋಲ್ ಬಾಂಬೆ’ ಕಂಪನಿ ಅಳವಡಿಸಿದ ಗಡಿಯಾರಗಳಲ್ಲಿ ಇಂದಿಗೂ ಚಾಲ್ತಿಯಲ್ಲಿರುವುದು ಈ ಗಡಿಯಾರ ಮಾತ್ರವೇ ಎನ್ನುವುದೂ ಒಂದು ಹೆಗ್ಗಳಿಕೆ.
ಕೆಸಿಡಿ, ಮೂರು ಸಾವಿರ ಮಠದಲ್ಲೂ ಇವೆ: ಧಾರವಾಡದ ಕವಿವಿಯಂತೆಯೇ, ನಗರದ ಕರ್ನಾಟಕ ಕಾಲೇಜಿನಲ್ಲೂ (ಕೆಸಿಡಿ) ಹಳೆಯ ಗೋಡೆ ಗಡಿಯಾರವಿದೆ. ಆದರೆ, ಅದು ತುಸು ಚಿಕ್ಕದು. ಶತಮಾನಗಳ ನಂಟು ಇದಕ್ಕಿದೆ. ಸದರ್ನ್ ಮಹಾರಾಷ್ಟ್ರ ರೇಲ್ವೆ ಹೆಡ್ ಕ್ವಾಟ್ರಸ್ 1920ರ ವೇಳೆಗೆ ಧಾರವಾಡದಿಂದ ಸ್ಥಳಾಂತರಗೊಂಡ ಮೇಲೆ, ಕಟ್ಟಡವು ಕರ್ನಾಟಕ ಮಹಾವಿದ್ಯಾಲಯಕ್ಕೆ ಹಸ್ತಾಂತರಗೊಂಡಿತು. ಆ ವೇಳೆಗಾಗಲೇ ಕಟ್ಟಡದಲ್ಲಿ ಇಂಗ್ಲೆಂಡ್ ನಿರ್ಮಿತ ಗಡಿಯಾರ ಆಳವಡಿಕೆಯಾಗಿತ್ತು.
ನಂತರದಲ್ಲಿ ಪೆಂಡಲೂಮ್ ಪಾರ್ಟ್‌ಗಳನ್ನು ದಕ್ಷಿಣ ಆಫ್ರಿಕದ ಜೊಹಾನ್ಸ್‌ಬರ್ಗ್‌ನಿಂದ ತಂದು ಅಳವಡಿಸಲಾಗಿದೆ. 2011ರವರೆಗೂ ಇಲ್ಲಿನ ಗಡಿಯಾರ ಕೆಲಸ ಮಾಡಿದ್ದು, ನಿರ್ವಹಣೆ ಸಮಸ್ಯೆಯಿಂದ ಆ ಬಳಿಕ ಸಮಯ ತೋರುವುದನ್ನು ನಿಲ್ಲಿಸಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಪ್ರವೇಶದ್ವಾರ ಗೋಪುರದ ಮೇಲೆಯೂ ಬೃಹತ್ ಗಡಿಯಾರವಿದೆ. ಅವಳಿನಗರದಲ್ಲಿ ಮುಖ್ಯವಾಗಿ 3 ಗಡಿಯಾರಗಳು ಕಾಲದ ಅಸ್ತಿತ್ವ ಸಾರುತ್ತಿವೆ.
* ದೀಪಕ್ ಹೆಗಡೆ
***
5ನೇ ಜಾರ್ಜ್ ನೆನಪಿನಲ್ಲಿ…
ಕೊಡಗಿನ ವಿರಾಜಪೇಟೆ ಅಂದಾಕ್ಷಣ ಪಕ್ಕನೆ ನೆನಪಿಗೆ ಬರುವುದು ಅಲ್ಲಿಯ ಹೃದಯ ಭಾಗದಲ್ಲಿರುವ ಗಡಿಯಾರದ ಕಂಬ. ಇದರ ಬಳಿ ಬಸ್ ಬಂದಾಗಲೆಲ್ಲ ಕಂಡಕ್ಟರ್ “ಗಡಿಯಾರದ ಕಂಬ… ಯಾರಿಲ್ಲಿ…? ಇಳೀರಿ… ಇಳೀರಿ…’ ಅಂತ, ಪ್ರಯಾಣಿಕರಿಗೆ ಎಚ್ಚರಿಸುತ್ತಾರೆ. ಕಂಡಕ್ಟರ್‌ನ ಕರೆಗೆ ಎಚ್ಚೆತ್ತು ಅದೆಷ್ಟು ಜನರು ಇಲ್ಲಿ ಇಳಿದು ಹೋಗಿದ್ದಾರೋ? ಬಹುಶಃ ಆ ಕಂಬವೂ ಲೆಕ್ಕವಿಟ್ಟಿರಲಾರದು. ಇಲ್ಲಿನ ಹೆಗ್ಗುರುತೇ ಆಗಿರುವ ಈ ಗಡಿಯಾರ ಕಂಬಕ್ಕೂ ಚೆಂದದ ಇತಿಹಾಸವುಂಟು.
ಇದು ಬ್ರಿಟಿಷ್ ಆಳ್ವಿಕೆಯ ಕಾಲದ್ದು. ಆಗಿನ ಚೀಫ್ ಕಮೀಷನರ್ ಆಗಿದ್ದ ಸರ್. ಹಗಾxಲಿ, 1914 ಫೆ.5ಕ್ಕೆ ಶಿಲಾನ್ಯಾಸ ಮಾಡಿ, ವಿರಾಜಪೇಟೆಯ ಸಮೀಪದ ದೇವಣಗೇರಿಯ ಸುಭೇದಾರ್ ಮುಕ್ಕಾಟೀರ ಮುದ್ದಣ್ಣನವರ ಪುತ್ರ ಅಯ್ಯಪ್ಪನವರು ಈ ಕಂಬವನ್ನು ಕಟ್ಟಿಸಿದರಂತೆ. 1911ರಲ್ಲಿ ಬ್ರಿಟಿಷ್ ರಾಜ 5ನೇ ಜಾರ್ಜ್, ದೆಹಲಿಯಲ್ಲಿ ನಡೆದ ಪಟ್ಟಾಭಿಷೇಕದ ಸ್ಮರಣಾರ್ಥವಾಗಿ ಈ ಗೋಪುರ ರೂಪು ತಳೆಯಿತು.
1915ರ ಜನವರಿಯಲ್ಲಿ ಅಂದಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಆರ್.ಕೆ . ಎಲ್ಲಿಸ್, ಗಡಿಯಾರ ಕಂಬವನ್ನು ಉದ್ಘಾಟಿಸಿದರು. ಅದೇ ದಿನ ಈ ಗೋಪುರವನ್ನು ಮುಕ್ಕಾಟೀರ ಅಯ್ಯಪ್ಪನವರು ಅಂದಿನ ಪುರಸಭೆಗೆ ಹಸ್ತಾಂತರಿಸಿದ್ದರು. 1977ರಲ್ಲಿ ವಿರಾಜಪೇಟೆಯ ಮುಖ್ಯ ಬೀದಿಗಳ ವಿಸ್ತರಣೆಯ ಸಂದರ್ಭ ಬಂದಾಗ, ಈ ಕಂಬವನ್ನು ಕೆಡಹುವ ಪ್ರಸ್ತಾಪ ಬಂದಿತ್ತು. ಸಾರ್ವಜನಿಕರ ತೀವ್ರ ಪ್ರತಿಭಟನೆಯ ಫಲಶೃತಿಯಾಗಿ ಈ ಗೋಪುರ ಹಾಗೆಯೇ ಉಳಿದುಕೊಂಡಿದೆ.
* ಸ್ಮಿತಾ ಅಮೃತರಾಜ್ ಸಂಪಾಜೆ
***
ಮೈಸೂರಿನ ಟಿಕ್ ಟಿಕ್ ಚೆಲುವು
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಪ್ರಸ್ತುತ ತ್ರಿವಳಿ ಗಡಿಯಾರ ಗೋಪುರಗಳಿವೆ. ಅವುಗಳ ನಿರ್ಮಾಣದಲ್ಲಿ ಅಂತರ, ವ್ಯತ್ಯಾಸಗಳಿದ್ದರೂ ಮೈಸೂರಿನ ಜನರಿಗೆ ಇವು ಹೆಮ್ಮೆಯ ಪ್ರತೀಕವಾಗಿವೆ. ಮೊದಲು ಮೈಸೂರಿನಲ್ಲಿ ನಿರ್ಮಾಣವಾಗಿದ್ದು, ಚಿಕ್ಕ ಗಡಿಯಾರ ಗೋಪುರ; ಅದು ಸುಮಾರು 1886ರಲ್ಲಿ. 133 ವರ್ಷಗಳ ಭವ್ಯ ಇತಿಹಾಸ ಇದಕ್ಕಿದೆ. ಮೈಸೂರು ನಗರದ ಬಸ್ಸು ನಿಲ್ದಾಣದ ಬಳಿ ಇರುವ, ದೇವರಾಜ ಮಾರುಕಟ್ಟೆಯ ಎದುರಿಗೆ, ಸೌಂದರ್ಯದ ಪ್ರತೀಕವಾಗಿ ಸೆಳೆಯುತ್ತದೆ. ಇದಕ್ಕೆ “ಡೆಫರಿನ್ ಕ್ಲಾಕ್ ಟವರ್’ ಎಂಬ ಮತ್ತೂಂದು ಹೆಸರೂ ಉಂಟು.
ವಸಾಹತು ಭಾರತದ ಮೊದಲ ಬ್ರಿಟಿಷ್ ವೈಸ್‌ರಾಯ್ ಲಾರ್ಡ್ ಡೆಫರಿನ್ 1884ರಿಂದ 1888ರವರೆಗೆ ಭಾರತದಲ್ಲಿದ್ದನು. ಈ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ 10ನೇ ಚಾಮರಾಜ ಒಡೆಯರ್ ಅವರ ಸ್ನೇಹಪೂರ್ವಕ ಆಹ್ವಾನದ ಮೇರೆಗೆ 1886ರಲ್ಲಿ ಡೆಫರಿನ್ ಮೈಸೂರಿಗೆ ಭೇಟಿ ನೀಡಿದ್ದರು. ಆ ಭೇಟಿಯ ಸ್ಮರಣಾರ್ಥವಾಗಿ ದೇವರಾಜ ಮಾರುಕಟ್ಟೆಯ ಎದುರು ಚಿಕ್ಕ ಗಡಿಯಾರ ನಿರ್ಮಿಸಿ, ಅದಕ್ಕೆ ಅವರ ಹೆಸರನ್ನೇ ಇಡಲಾಗಿದೆ. 2012ರಲ್ಲಿ ಇದಕ್ಕೆ ಮರುಜೀವ ನೀಡಲಾಗಿದೆ.
ಅದು ದೊಡ್ಡ ಗಡಿಯಾರ…: 1927ರಲ್ಲಿ ನಾಲ್ವಡಿ ಕೃಷ್ಣದೇವರಾಜ ಒಡೆಯರ್ ಅವರ ಆಡಳಿತಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ, ಬೆಳ್ಳಿ ಮಹೋತ್ಸವದ ಸ್ಮರಣಾರ್ಥವಾಗಿ, ಅರಮನೆಯಲ್ಲಿದ್ದ ನೌಕರರು, ಅಧಿಕಾರಿಗಳು ಹಣ ಸಂಗ್ರಹಿಸಿ ದೊಡ್ಡ ಗೋಪುರ ಗಡಿಯಾರವನ್ನು ನಿರ್ಮಿಸಿದರು. ರಾಜರ ಖಜಾನೆಯಿಂದ ಒಂದು ರೂಪಾಯಿಯನ್ನೂ ಇದಕ್ಕೆ ಬಳಸಿಲ್ಲವೆಂಬುದು ವಿಶೇಷ. ಇದಕ್ಕೆ “ಜ್ಯುಬಿಲಿ ಗಡಿಯಾರ ಗೋಪುರ’ವೆಂದು ಕರೆಯುವರು. ಇದಕ್ಕೆ 92 ವರ್ಷಗಳಾಗಿವೆ.
ಜ್ಯುಬಿಲಿ ಗಡಿಯಾರ ಗೋಪುರವನ್ನು 75 ಅಡಿ ಎತ್ತರ, 2.5 ಅಡಿ ವೃತ್ತದಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿನ ಗಡಿಯಾರವು 5 ಅಡಿವ್ಯಾಸವಾಗಿದ್ದು, ಮೇಲ್ಭಾಗದಲ್ಲಿ ಸ್ವಲ್ಪ ಕೆಳಗೆ ಇದೆ. ಇದು ಚದರ ಆಕಾರವನ್ನು ಹೊಂದಿದ್ದು, ಇಂಡೋ- ಸಾರ್ಸೆನಿಕ್ ಶೈಲಿಯಲ್ಲಿದೆ. ಗಡಿಯಾರದ ಮೇಲ್ಭಾಗದ ಗೋಪುರದಲ್ಲಿ ಹಿತ್ತಾಳೆ ಗಂಟೆಯಿದ್ದು, ಗಂಟೆಗೆ ಕಬ್ಬಿಣದ ಸುತ್ತಿಗೆಯಿಂದ ಹೊಡೆದಾಗ, ಶಬ್ದ ಅಲೆ ಅಲೆಯಾಗಿ ಕೇಳಿ ಬರುತ್ತದೆ. 1 ಗಂಟೆಗೊಮ್ಮೆ ಇದು ಸದ್ದುಮಾಡುತ್ತಿತ್ತು.
1990ರ ವರೆಗೂ ಇದರ ಘಂಟಾನಾದ 5 ಕಿ.ಮೀ ವರೆಗೂ ಕೇಳಿಸುತ್ತಿತ್ತು. ನಂತರ ಇದನ್ನು ಸ್ಥಗಿತಗೊಳಿಸಲಾಗಿದೆ. 4 ವರ್ಷಗಳ ಹಿಂದೆ, ಅಂದರೆ 2015ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಂಭ್ರಮದ ವೇಳೆ, ಮಾನಸ ಗಂಗೋತ್ರಿಯ ರೌಂಡ್ ಕ್ಯಾಂಟಿನ್ ಎದುರು ಒಂದು ಗಡಿಯಾರ ಗೋಪುರ ನಿರ್ಮಾಣವಾಗಿದೆ. ಇದು ಕೂಡ ದೊಡ್ಡ ಗಡಿಯಾರ ಗೋಪುರದ ಮಾದರಿಯಲ್ಲೇ ಇದೆ. ಇದರ ಎತ್ತರ 65 ಅಡಿ.
ಮೊಟ್ಟ ಮೊದಲ ಗೋಪುರ ಗಡಿಯಾರ: ವಿಜ್ಞಾನಿ ಗೆಲಿಲಿಯೋ ಲೋಲಕವನ್ನು ಕಂಡುಹಿಡಿದ ಮೇಲೆ ಗೋಪುರ ಗಡಿಯಾರಗಳು ಎಲ್ಲೆಡೆ ಬಳಕೆಗೆ ಬಂದವು. ಈ ದೊಡ್ಡ ಗಡಿಯಾರಗಳಲ್ಲಿ ವಿವಿಧ ಗಾತ್ರದ ಕಚ್ಚು, ಗಾಡಿಗಳನ್ನು ಬಳಸಲಾಗುತ್ತಿತ್ತು. ತೂಕದ ಗುಂಡುಗಳನ್ನು ಇಳಿಬಿಟ್ಟು ಆ ಒತ್ತಡಕ್ಕೆ ಗಡಿಯಾರ ಚಾಲನೆಗೊಳ್ಳುವಂತೆ ಮಾಡಲಾಗುತ್ತಿತ್ತು.
14ನೇ ಶತಮಾನದ ಹೊತ್ತಿಗೆ ವಿಶ್ವದ ದೊಡ್ಡ ದೊಡ್ಡ ನಗರಗಳ ಟೌನ್‌ಹಾಲ್‌ಗಳಲ್ಲಿ ದೊಡ್ಡ ಗಡಿಯಾರಗಳು ಕಾಣಿಸಿಕೊಳ್ಳ ತೊಡಗಿದವು. ಕೆಲವು ದೇಶಗಳಲ್ಲಿ ಈ ಗಡಿಯಾರಗಳು ಪ್ರತಿಷ್ಠೆಯ ಸಂಕೇತವಾಗಿ ಕಾಣಿಸಿಕೊಂಡವು. ಕ್ರಿ.ಶ.1335ರಲ್ಲಿ ಮೊಟ್ಟ ಮೊದಲ ಗೋಪುರ ಗಡಿಯಾರವನ್ನು ಇಟಲಿಯಲ್ಲಿನ ಮಿಲಾನ್ ನಗರದಲ್ಲಿ ಸ್ಥಾಪಿಸಲಾಯಿತು.
* ಡಾ.ಕೆ. ಸೌಭಾಗ್ಯವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.