ಬಾಬಾ ತಂಗಿದ ಮನೆ
ಉಪ್ಪರಿಗೆ ಮೇಲೆ ಪುಟ್ಟಪರ್ತಿ ಸಂತನ ನೆನಪು
Team Udayavani, Dec 21, 2019, 6:11 AM IST
ಆಗುಂಬೆ ಸನಿಹದ ನಾಲೂರಿನ ಈ ಮನೆಯಲ್ಲಿ ಪುಟ್ಟಪರ್ತಿ ಸಾಯಿಬಾಬಾರ ನೆನಪುಗಳಿವೆ. 57 ವರುಷಗಳ ಹಿಂದೆ ಬಾಬಾರವರು ಇಲ್ಲಿಗೆ ಭೇಟಿ ಕೊಟ್ಟಾಗ, ಬಳಸಿದ ವಸ್ತುಗಳನ್ನು ಹಾಗೆಯೇ ಸಂರಕ್ಷಿಸಿಡಲಾಗಿದೆ….
ಆಗುಂಬೆಗೆ ಹತ್ತು ಕಿ.ಮೀ. ಸನಿಹದ ನಾಲೂರು, ಶಿವಮೊಗ್ಗ- ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಪುಟ್ಟ ಊರು. ಹಾದಿಯ ಪಕ್ಕದಲ್ಲೇ ಒಂದು ಹಳೇ ಚೆಲುವು ತುಂಬಿಕೊಂಡ ಮನೆ. ಊರಿನ ಪರಿಚಿತರು ರಸ್ತೆಯಲ್ಲಿ ಹೋಗುವಾಗ, ಹಳೇಮನೆಯ ಉಪ್ಪರಿಗೆಯತ್ತ ಭಕ್ತಿಯ ಪುಳಕದಿಂದ ನೋಡುವುದು ವಾಡಿಕೆ. 57 ವರುಷಗಳ ಹಿಂದೆ ಪುಟ್ಟಪರ್ತಿ ಶ್ರೀ ಸತ್ಯಸಾಯಿ ಬಾಬಾ ಅವರು ತಂಗಿದ್ದ ಕೋಣೆ, ಆ ಉಪ್ಪರಿಗೆಯ ಸೆಳೆತ.
ಮಾರ್ಚ್ 23, 1963ರ ಸಂದರ್ಭ. ಚಿನ್ನಪ್ಪಗೌಡರ ಈ ಮನೆಯಲ್ಲಿ ಬಾಬಾ, 3 ದಿನಗಳ ಕಾಲ ತಂಗಿದ್ದರು. ಅಂದು ಬಾಬಾ ಅವರ ದರ್ಶನ ಪಡೆದ ಪುಳಕವನ್ನು ಈ ಮನೆಯ ಸದಸ್ಯರು, ಊರಿನವರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅಂದು ಸಾಯಿಬಾಬಾ ಅವರು ಮಲಗಿದ್ದ ಮಂಚದ ಮೇಲಿನ ಹಾಸಿಗೆ ಹಾಗೂ ದಿಂಬನ್ನು ಇಂದಿಗೂ ಹಾಗೆಯೇ ಉಳಿಸಿಕೊಂಡಿದ್ದಾರೆ. “ಅಂದಿನಿಂದ ಇಂದಿನವರೆಗೂ ಈ ಹಾಸಿಗೆಯ ಮೇಲೆ ಬೇರೆ ಯಾರೂ ಮಲಗಿಲ್ಲ’ ಎನ್ನುತ್ತಾರೆ, ಚಿನ್ನಪ್ಪಗೌಡರ ಮರಿಮೊಮ್ಮಗ ರಘುಮಯಿ.
ನೆನಪುಗಳು ಜೀವಂತ: ಅಂದು ಬಾಬಾ ಬಳಸಿದ್ದ ಬಿನಕಾ ಟೂತ್‌ಪೇಸ್ಟ್, ಪಾದರಕ್ಷೆಯನ್ನೂ ಹಾಗೆಯೇ ಸಂರಕ್ಷಿಸಿಡಲಾಗಿದೆ. ಈ ಕೊಠಡಿಯ ಪಕ್ಕದಲ್ಲಿರುವ ವರಾಂಡದ ಗೋಡೆಯಲ್ಲಿ ಬಾಬಾರವರ ಹತ್ತಾರು ಭಂಗಿಗಳ ಫೋಟೋಗಳನ್ನು ನೇತುಹಾಕಲಾಗಿದೆ. ಅಂದು, ಮನೆಯ ಕೆಳ ಅಂತಸ್ತಿನ ಪೂಜಾಕೋಣೆಯನ್ನು ಸಾಯಿಬಾಬಾರಿಗೆ ಮೀಸಲಿಡಲಾಗಿತ್ತು. ಅಲ್ಲಿ ಇಂದು ಬಾಬಾರವರ ಹಲವು ಫೋಟೋಗಳನ್ನು ಕಾಣಬಹುದಾಗಿದೆ. ನಿತ್ಯವೂ ಅವುಗಳಿಗೆ ಪೂಜೆ ನಡೆಯುತ್ತದೆ.
ಬಾಬಾ ಆ ಮನೆಗೇಕೆ ಬಂದರು?: ಇದಕ್ಕೊಂದು ಕುತೂಹಲಕಾರಿ ಕಥೆ ಇದೆ. 60ರ ದಶಕದಲ್ಲಿ ನಾಲೂರು ಚಿನ್ನಪ್ಪಗೌಡರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದಿದೆ ಎಂದು ಎಕ್ಸ್‌ರೇಯಲ್ಲಿ ಗೊತ್ತಾಯಿತು. ಶಸ್ತ್ರ ಚಿಕಿತ್ಸೆ ಮಾಡಿ, ಗೆಡ್ಡೆ ತೆಗೆಯಬೇಕು ಎಂದು ವೈದ್ಯರು ಸೂಚಿಸಿದಾಗ ಚಿನ್ನಪ್ಪಗೌಡರು ಶಸ್ತ್ರ ಚಿಕಿತ್ಸೆಗೆ ಒಪ್ಪಲಿಲ್ಲ.
ಆ ಸಂದರ್ಭದಲ್ಲಿ ಚಿನ್ನಪ್ಪಗೌಡರಿಗೆ ಆತ್ಮೀಯರೊಬ್ಬರು, “ಪುಟ್ಟಪರ್ತಿಗೆ ಹೋಗಿ, ಶ್ರೀ ಸತ್ಯಸಾಯಿಬಾಬಾರ ದರ್ಶನ ಮಾಡಿದರೆ ನಿಮ್ಮ ಅನಾರೋಗ್ಯ ಗುಣವಾಗಬಹುದು’ ಎಂದು ಸೂಚಿಸಿದರಂತೆ. ಅದರಂತೆ, ಗೌಡರು ಬಾಬಾ ಅವರ ದರ್ಶನ ಪಡೆದು, ಅಲ್ಲಿ ನೀಡಿದ ಮಾತ್ರೆ ತರಹದ ಗುಳಿಗೆಗಳನ್ನು ಸ್ವೀಕರಿಸಿ, ನುಂಗಿದ ಮೇಲೆ ಅವರ ಹೊಟ್ಟೆಯಲ್ಲಿದ್ದ ಗಡ್ಡೆ ಕರಗಿರುವುದು ಎಕ್ಸ್‌ರೇಯಲ್ಲಿ ಗೊತ್ತಾಯಿತು ಎಂದು ಕುಟುಂಬದವರು ಹೇಳುತ್ತಾರೆ.
ಆನಂತರ ಚಿನ್ನಪ್ಪಗೌಡರು ಶ್ರೀ ಸಾಯಿಬಾಬಾ ಅವರ ಅಪ್ಪಟ ಭಕ್ತರಾದರು. ಇದಾದ ಕೆಲವೇ ತಿಂಗಳ ನಂತರ ಬಾಬಾ ಅವರು ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಯಲ್ಲಿ ತಮ್ಮ ಪುಟಪರ್ತಿಯ ಸಾಯಿ ಕ್ಯಾನ್ಸರ್ ವಿಭಾಗ ಆರಂಭಿಸುವ ಸಂಬಂಧ ಆಗಮಿಸುತ್ತಾರೆ. ಈ ವೇಳೆ ಬಾಬಾ, ನಾಲೂರಿನ ಚಿನ್ನಪ್ಪಗೌಡರ ಮನೆಗೆ ಆಗಮಿಸಿ, ವಾಸ್ತವ್ಯ ಹೂಡಿದ ನೆನಪುಗಳು ಇಂದಿಗೂ ಇಲ್ಲಿನವರ ಮನದಲ್ಲಿ ಸ್ಮಾರಕದಂತೆ ಹಾಗೆಯೇ ಉಳಿದಿವೆ.
ಮನೆಯ ಉಪ್ಪರಿಗೆಯಲ್ಲಿ ಸಾಯಿಬಾಬಾ ಅವರು ಅಂದು ಮಲಗಿದ ಮಂಚ, ಹಾಸಿಗೆ ಈಗಲೂ ಹಾಗೆಯೇ ಇದೆ. ಅಂದಿನಿಂದ ಇಂದಿನವರೆಗೆ ಅಲ್ಲಿ ಯಾರೂ ಮಲಗಿಲ್ಲ.
-ರಘುಮಯಿ, ಚಿನ್ನಪ್ಪಗೌಡರ ಮರಿಮೊಮ್ಮಗ
* ರಾಂಚಂದ್ರ ಕೊಪ್ಪಲು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.