ಆಟಗಾರರು ಇದ್ದಾರೆ ಸರಿ, ತರಬೇತುದಾರರು ಎಲ್ಲಿದ್ದಾರೆ?
-ಭಾರತ ಬ್ಯಾಡ್ಮಿಂಟನ್ ತರಬೇತುದಾರ ಪಿ.ಗೋಪಿಚಂದ್ ಎತ್ತಿದ ಮಹತ್ವದ ಪ್ರಶ್ನೆ
Team Udayavani, Sep 21, 2019, 5:31 AM IST
ಇಂದು ಭಾರತದ ಬ್ಯಾಡ್ಮಿಂಟನ್ ಎಂದಿನಂತಿಲ್ಲ. ವಿಶ್ವದಲ್ಲೇ ಅತಿಹೆಚ್ಚು ಪ್ರತಿಭೆಗಳ ಗಣಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇದೆಲ್ಲ ಸಾಧ್ಯವಾಗಿದ್ದು ಪಿ.ಗೋಪಿಚಂದ್ ಭಾರತ ಬ್ಯಾಡ್ಮಿಂಟನ್ ತಂಡದ ತರಬೇತುದಾರರಾದ ನಂತರ. ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಕೆ.ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್, ಸಾಯಿ ಪ್ರಣೀತ್, ಪ್ರಣಯ್ ಕುಮಾರ್, ಅಜಯ್ ಜಯರಾಮ್‌ರಂತಹ ಪ್ರತಿಭೆಗಳು ಹೊರಬಂದು ವಿಶ್ವಮಟ್ಟದಲ್ಲಿ ಮಿಂಚುತ್ತಿದ್ದಾರೆ. ಅದರಲ್ಲೂ ಸೈನಾ ನೆಹ್ವಾಲ್, ಪಿ.ವಿ.ಸಿಂಧು, ಕೆ.ಶ್ರೀಕಾಂತ್ ಯಶಸ್ಸಿನ ಶಿಖರವನ್ನೇ ತಲುಪಿದ್ದಾರೆ. ಅದರಲ್ಲೂ ಪಿ.ವಿ.ಸಿಂಧು, ಯಾವುದು ಸೈನಾ ನೆಹ್ವಾಲ್‌ಗೆ ಸಾಧ್ಯವಾಗಲಿಲ್ಲವೋ ಅದನ್ನೂ ಸಾಧಿಸಿ ಭಾರತೀಯರ ಗೌರವವನ್ನು ಹೆಚ್ಚಿಸಿದ್ದಾರೆ.
ಮೊನ್ನೆ ಆ.25ರಂದು ಸ್ವಿಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ವಿಶ್ವ ಕೂಟವನ್ನು ಸಿಂಧು ಗೆದ್ದರು, ಅದಕ್ಕೂ ಮುನ್ನ 2018ರಲ್ಲಿ ಬಿಡಬ್ಲ್ಯೂಎಫ್ ವಿಶ್ವ ಟೂರ್ ಪ್ರಶಸ್ತಿಯನ್ನು ಗೆದ್ದಿದ್ದರು. ಇಂತಹದೊಂದು ಸಾಧನೆಯನ್ನು ಈ ಹಿಂದೆ ಯಾವ ಭಾರತೀಯ ಬ್ಯಾಡ್ಮಿಂಟನ್ ತಾರೆಯೂ ಮಾಡಿರಲಿಲ್ಲ. ಸೈನಾ ನೆಹ್ವಾಲ್ ವಿಶ್ವ ನಂ.1 ಆಗಿದ್ದರು, ಒಲಿಂಪಿಕ್ಸ್ ಕಂಚು ಗೆದ್ದಿದ್ದರು, ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದಿದ್ದರು. ಇದೆಲ್ಲವನ್ನೂ ಸಾಧಿಸಿದ ಮೊದಲ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದರು. ಸಿಂಧು ವಿಶ್ವಕಪ್‌ನಲ್ಲಿ ಚಿನ್ನ ಗೆದ್ದರು, ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದು ಸೈನಾಗಿಂತ ಒಂದು ಹೆಜ್ಜೆ ಮುಂದೆ ಹೋದರು. ಈ ಎಲ್ಲ ಸಾಧನೆಗಳ ಮೂಲಕ ಭಾರತೀಯರು ವಿಶ್ವ ಕ್ರೀಡಾಜಗತ್ತಿಗೆ ಅದ್ಭುತವಾದ ಸಂದೇಶವೊಂದನ್ನು ನೀಡಿದ್ದಾರೆ. ಇಷ್ಟಾದ ಮೇಲೆ, ಇಂತಹ ದಿಗ್ಗಜರನ್ನು ರೂಪಿಸಿದ ಮೇಲೆ ಮಾಜಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್, ಪಿ.ಗೋಪಿಚಂದ್ ಎತ್ತಿದ ಪ್ರಶ್ನೆಯೊಂದು; ಉತ್ತರಿಸಲ್ಪಡದೇ ಹಾಗೆಯೇ ಉಳಿದುಕೊಂಡಿದೆ.
ಪ್ರಶ್ನೆ 1: ಪ್ರಸ್ತುತ ಭಾರತೀಯ ಬ್ಯಾಡ್ಮಿಂಟನ್ ಶ್ರೀಮಂತವಾಗಿದೆ, ಸರಿ. ಆದರೆ ಈ ಇದನ್ನು ಮುಂದುವರಿಸಿಕೊಂಡು ಹೋಗಲು ಭಾರತದಲ್ಲಿ ಸೂಕ್ತ ತರಬೇತುದಾರರನ್ನೇ ತಯಾರಿಸುವ ವ್ಯವಸ್ಥೆಯಿಲ್ಲ! ಹೀಗಾದರೆ ಮುಂದಿನ ಪೀಳಿಗೆಯನ್ನು ತಯಾರಿಸುವುದು ಹೇಗೆ?
ಪ್ರಶ್ನೆ 2: ಸದ್ಯ ಭಾರತೀಯ ಬ್ಯಾಡ್ಮಿಂಟನ್ ಪ್ರತಿಭೆಗಳೆಲ್ಲ ತಯಾರಾಗುತ್ತಿರುವುದು ಹೈದರಾಬಾದ್‌ನಲ್ಲಿ. ಬಹುತೇಕ ಆಟಗಾರರೆಲ್ಲ ಹೈದರಾಬಾದ್‌ನವರೇ. ಹೀಗೆ ಒಂದೇ ಕೇಂದ್ರದಿಂದ ಅದ್ಭುತಗಳನ್ನು ಎಷ್ಟು ಸಮಯ ಸೃಷ್ಟಿಸಲು ಸಾಧ್ಯ? ಭಾರತದ ಮೂಲೆಮೂಲೆಯಿಂದ ಪ್ರತಿಭೆಗಳು ಹುಟ್ಟಿದರೆ ಮಾತ್ರ ಭವ್ಯ ಭವಿಷ್ಯ ತಾನೇ?
ಈ ಎರಡನೇ ಪ್ರಶ್ನೆಯನ್ನು ಗೋಪಿಚಂದ್ ಕೇಳಿದ್ದಲ್ಲ. ಆದರೆ ಅವರು ಕೇಳಿದ ಪ್ರಶ್ನೆಗೆ ಇದು ಪೂರಕವಾಗಿದೆ. ಭಾರತದಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೇಂದ್ರವಿರುವುದು ಹೈದರಾಬಾದ್‌ನಲ್ಲಿ. ಪಿ.ಗೋಪಿಚಂದ್ ಅವರ ಖಾಸಗಿ ಅಕಾಡೆಮಿಯಿರುವುದೂ ಹೈದರಾಬಾದ್‌ನಲ್ಲೇ. ಸದ್ಯ ಎಲ್ಲರನ್ನೂ ಗೋಪಿ ತಾನೇ ಆಸ್ಥೆಯಿಂದ ತರಬೇತು ಮಾಡುತ್ತಿದ್ದಾರೆ. ಇದು ಎಷ್ಟು ಸಮಯ ಸಾಧ್ಯ? ಗೋಪಿಯ ನಂತರ ಅಂತಹ ಸಮರ್ಥರು ಎಲ್ಲಿದ್ದಾರೆ? ಈಗಲೇ ಪರ್ಯಾಯ ಹುಡುಕದಿದ್ದರೆ ಮುಂದೆ ಅದೇ ದೊಡ್ಡ ಸವಾಲಾಗುವ ಸಾಧ್ಯತೆಯಿಲ್ಲವೇ? ಮುಖ್ಯ ತರಬೇತುದಾರ ಸ್ಥಾನಕ್ಕೆ ಮುಂದೆ ಸೈನಾ, ಸಿಂಧು ಇಂತಹವರು ಯಾರಾದರೂ ಬರಬಹುದು. ಆದರೆ ದೇಶದ ಮೂಲೆಮೂಲೆಗಳಲ್ಲಿ ಆಡುವ ಆಟಗಾರರಿಗೆ ಪ್ರಬಲ ತರಬೇತುದಾರರು ಎಲ್ಲಿದ್ದಾರೆ? ಇದನ್ನೇ ಗೋಪಿ ಪ್ರಶ್ನಿಸಿದ್ದು. ಬ್ಯಾಡ್ಮಿಂಟನ್ ಬರೀ ಹೈದರಾಬಾದ್‌ಗೆ ಮಾತ್ರ ಸೀಮಿತಗೊಂಡಿರುವುದರಿಂದ ಎಲ್ಲರೂ ಹೈದರಾಬಾದ್ ಆಸುಪಾಸಿಗೆ ಸೀಮಿತಗೊಂಡಿದ್ದಾರೆ ಅಥವಾ ಹೈದರಾಬಾದ್‌ಗೇ ಬರಬೇಕಾದ ಅನಿವಾರ್ಯತೆಯಿದೆ.
ವ್ಯವಸ್ಥೆ ವಿಕೇಂದ್ರೀಕರಣವಾಗದ ಹೊರತು ಅದನ್ನು ಬಲಿಷ್ಠಗೊಳಿಸಲು ಸಾಧ್ಯವೇಯಿಲ್ಲ. ಹಾಗೆ ಆಗಬೇಕಾದರೆ ಸ್ಥಳೀಯವಾಗಿಯೂ ತರಬೇತುದಾರರು ಉತ್ತಮ ಗುಣಮಟ್ಟ ಹೊಂದಿರಬೇಕು. ಆದ್ದರಿಂದ ಕರ್ನಾಟಕದಲ್ಲಿ ಸಿಂಧು, ಸೈನಾ ಮಟ್ಟದ ಬ್ಯಾಡ್ಮಿಂಟನ್ ಆಟಗಾರರು ಇಲ್ಲ. ಇದನ್ನು ಇತರೆಲ್ಲ ರಾಜ್ಯಗಳಿಗೂ ಅನ್ವಯಿಸಬಹುದು. ಬರೀ ಬ್ಯಾಡ್ಮಿಂಟನ್ ಮಟ್ಟಿಗೆ ಮಾತ್ರ ಹೇಳುತ್ತಿಲ್ಲ. ಕ್ರಿಕೆಟ್ ಹೊರತುಪಡಿಸಿ ಭಾರತದ ಎಲ್ಲ ಕ್ರೀಡೆಗಳಲ್ಲೂ ಇದೇ ಸ್ಥಿತಿಯಿದೆ. ಅಥ್ಲೆಟಿಕ್ಸ್‌ಗೆ ಬಂದರೆ ಕೇರಳ, ಒಡಿಶಾ, ಕುಸ್ತಿ-ಬಾಕ್ಸಿಂಗ್‌ಗೆ ಬಂದರೆ ಹರ್ಯಾಣ, ವೇಟ್‌ಲಿಫ್ಟಿಂಗ್ ಅಂದರೆ ತಮಿಳುನಾಡು, ಹಾಕಿ ಅಂದರೆ ಪಂಜಾಬ್…ಹೀಗೆ ಕ್ರೀಡೆಗಳೆಲ್ಲ ಒಂದೊಂದು ರಾಜ್ಯಕ್ಕೆ ಸೀಮಿತವಾಗಿದೆ. ಈ ಸ್ಥಿತಿಯನ್ನು ಒಟ್ಟಾರೆ ಬದಲಿಸಿದರೆ, ಕ್ರೀಡಾಭವಷ್ಯಕ್ಕೆ ಒಳಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.