ನಡು ಕಾಡಿನ ಶಬರಿ
ಕುದುರೆಮುಖ ಗಣಿ ಕಂಪನಿ ನಿಂತ ಮೇಲೆ...
Team Udayavani, Dec 28, 2019, 6:15 AM IST
ಕುದುರೆಮುಖದ ಗುಡ್ಡದಲ್ಲಿ ಗರ್ಜಿಸುತ್ತಿದ್ದ ಬೃಹತ್ ಗಣಿ ಯಂತ್ರಗಳು ಮೌನವಾಗಿ ಕುಳಿತು, ಈಗ 14 ವರ್ಷಗಳು. 2005, ಡಿ.31ರಂದು ಅಲ್ಲಿ ಗಣಿ ಕಂಪನಿ ಬಾಗಿಲು ಮುಚ್ಚಿತ್ತು. ಒಂದು ಕಾಲದಲ್ಲಿ ಅದೇ ಗಣಿ ಕಂಪನಿಯಲ್ಲಿ ಪುಟ್ಟ ಕೆಲಸದಲ್ಲಿದ್ದ ಚಂದ್ರಮ್ಮ ಎಂಬಾಕೆಯ ಕತೆಯೊಂದು ಇಲ್ಲಿದೆ. ನಡುಕಾಡಿನಲ್ಲಿ ಶಬರಿಯಂತೆ ಪೇರಳೆ ಹಣ್ಣು ಮಾರುತ್ತಿದ್ದಾಳೆ. ಕುದುರೆಮುಖ ಅನ್ನೋ ಮಾಯಾಸ್ವರ್ಗ, ಹೀಗೆ ಅಸಂಖ್ಯ ಬಡಮುಖಗಳನ್ನು, ಕಾರ್ಮಿಕರನ್ನು ಬದುಕಿಸಿದೆ, ನಡುಕಾಡಿನಲ್ಲೇ ನಿರ್ದಯವಾಗಿ ಮುಳುಗಿಸಿದೆ, ಬದುಕು ರೂಪಿಸಿಕೊಳ್ಳುವ ಪಾಠವನ್ನೂ ಹೇಳಿಕೊಟ್ಟಿದೆ…
ಕುದುರೆಮುಖದ ಮಳೆಕಾಡುಗಳಲ್ಲಿ ಆಗಷ್ಟೇ ಮಳೆ ನಿಂತು ಎಳೆ ಬಿಸಿಲು, ಬೆಟ್ಟಗಳ ಮೇಲೆ ಚಾರಣ ಮಾಡಿತ್ತು. ಮಂಜೆಲ್ಲಾ ರಸ್ತೆಯಲ್ಲಿ ಚೆಲ್ಲಿ, ಬಿಸಿಲು ಚುರುಕಾದಂತೆಲ್ಲಾ ಬೆಣ್ಣೆಯ ತುಂಡಿನಂತೆ ಕರಗುತ್ತಿತ್ತು. ಅಲ್ಲೇ ಎಳೆಬಿಸಿಲಿನಿಂದ ಲಕ ಲಕ ಹೊಳೆಯುತ್ತಿದ್ದ ಮರವೊಂದರ ಕೆಳಗೆ ಮಂಜಿನಂತೆ ತಣ್ಣಗೆ ಕೂತಿದ್ದಳು ಚಂದ್ರಮ್ಮ. ಅವಳು ಕೂತಿದ್ದ ಉದ್ದನೆ ಕಲ್ಲು ಬೆಂಚಿನ ಮೇಲೆಲ್ಲಾ ತುಂಬಿದ್ದ ಕಾಡು ಪೇರಳೆಗಳು ಅವಳ ಸಖ್ಯದಲ್ಲಿ ಅಷ್ಟೊತ್ತು ಸುಖೀಯಾಗಿದ್ದರೂ, “ನಾವಿವತ್ತು ಯಾರ ಬಾಯಿಗೆ ಸೇರುವೆವೋ, ಪ್ರೀತಿಯ ಚಂದ್ರಮ್ಮನನ್ನು ಬಿಟ್ಹೋಗಬೇಕಲ್ಲಾ?’ ಅಂತ ದುಃಖದಿಂದಲೇ ಘಮಘಮಿಸುತ್ತಿದ್ದವು.
ಕುದುರೆಮುಖ ಅನ್ನೋ ಪಚ್ಚೆ ಭೂರಮೆಯ ಊರಿನ ಮೂಲಕ ಕಳಸ, ಬಾಳೆಹೊನ್ನೂರು, ಹೊರನಾಡು, ಕೊಪ್ಪದತ್ತ ಸಾಗುವವರಿಗೆ ಕಾಡು ಪೇರಳೆಯ ಕಾಡಿಸುವವಳು ಚಂದ್ರಮ್ಮ. ಇವಳಿಂದ ಪೇರಳೆ ತಿನ್ನುವವರಿಗೆ ಅದೊಂದು ರುಚಿ, ತತ್ಕಾಲಕ್ಕೆ ಹಸಿವು ನೀಗಿಸುವ ಹಣ್ಣಷ್ಟೇ. ಆದರೆ, ಚಂದ್ರಮ್ಮಗೆ ಪೇರಳೆ ಬರೀ ಹಣ್ಣಲ್ಲ, ಬದುಕಿನ ಏಕಾಂತ, ಸಂಭ್ರಮ, ಸಡಗರ, ನೋವುಗಳನ್ನೆಲ್ಲಾ ಕಾಣಿಸುವ ಕಣ್ಣು. ಕಾಡಿನ ಏಕತಾನತೆಯಲ್ಲಿ ಕೂತು, ಪೇರಳೆಗೆ ಉಪ್ಪು, ಮೆಣಸಿನ ಹುಡಿ ಬೆರೆಸಿ ಗ್ರಾಹಕರಿಗೆ ಕೊಟ್ಟರೆ ಆ ರುಚಿಯಲ್ಲಿ ಇಡೀ ಮಲೆನಾಡಿನ ಸೊಗಡಿರುತ್ತದೆ.
ನಿಮಗೆಲ್ಲ ಕುದುರೆಮುಖ ಅದಿರು ಕಂಪನಿ ನೆನಪಿರಬಹುದು. 1976ರಲ್ಲಿ ದಟ್ಟ ಕಾಡು ಗುಡ್ಡಗಳಿಂದಲೇ ತುಂಬಿದ್ದ ಕುದುರೆಮುಖ ಬೆಟ್ಟಗಳ 4,605 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣದ ಗಣಿಗಾರಿಕೆ ಮಾಡಲು ಐರನ್ ಕಂಪನಿ ಶುರುವಾದಾಗ, ಇಲ್ಲೊಂದು ಬೆಳಕು ಹುಟ್ಟಿತ್ತು. ಬಣ್ಣದ ಬದುಕು ಚಿಗುರಿತ್ತು. ನೂರಾರು ಕುಟುಂಬಗಳಿಗೆ ಉಸಿರಾಗಿದ್ದ ಕಂಪನಿ, ಚಂದ್ರಮ್ಮಳಿಗೂ ಕಿಂಡಿಯ ಬಾಗಿಲನ್ನು ತೆರೆದಿತ್ತು. ಕಸ ಗುಡಿಸೋದು, ಕಂಪನಿಯ ಪರಿಸರ ಅಂದಗಾಣಿಸುವುದು, ಯಾರೂ ನಡೆಯದ ಹಾದಿಯ ಕಳೆಗಳೆನ್ನೆಲ್ಲಾ ಕಿತ್ತು, ಹೊಸ ಹೆಜ್ಜೆಗಳಿಗೆ ದಾರಿತೋರಿಸೋ ಕೆಲಸ ಆಕೆಗೆ ಸಿಕ್ಕಿತ್ತು. ತಿಂಗಳ ಅಂಚಿನಲ್ಲಿ ಸಿಕ್ಕ ನಾಲ್ಕಾರು ನೋಟುಗಳನ್ನು ಸೆರಗಿನಲ್ಲಿ ಗಂಟು ಕಟ್ಟಿಕೊಂಡು, ಬೆವರೊರೆಸಿಕೊಳ್ಳುತ್ತಾ ಮನೆಗೆ ಸರಸರನೆ ಹೆಜ್ಜೆ ಇಡುತ್ತಿದ್ದಳು.
ಆ ಕಾಲದಲ್ಲೇ ಇಂದ್ರನ ನಂದನವನದಂತೆ ಅಹೋರಾತ್ರಿ ಮಿರಿ ಮಿರಿ ಮಿಂಚುತ್ತಿದ್ದ, ಸಾವಿರಾರು ಜೀವಗಳ ನರನಾಡಿಯಾಗಿದ್ದ, ಹತ್ತಾರು ಭಾಷೆಗಳಿಂದ ಮೀಯುತ್ತಿದ್ದ, ಪ್ರವಾಸಿಗರ ಕೇಕೆಗಳಿಂದ ನಗುತ್ತಿದ್ದ ಕುದುರೆಮುಖಕ್ಕೆ ಚಂದ್ರಮ್ಮನನ್ನು ಸಾಕುವುದು ದೊಡ್ಡ ಕಷ್ಟವೇನೂ ಆಗಲಿಲ್ಲ. ಆದರೆ, 2005ರಲ್ಲಿ ನೂರಾರು ಜೀವಗಳಿಗೆ ಉಸಿರು ಕೊಡುತ್ತಿದ್ದ ಕಂಪನಿಯ ಉಸಿರೇ ನಿಂತು ಹೋದಾಗ ಚಂದ್ರಮ್ಮ ಬಿಕ್ಕಿದಳು. ಕುಟುಂಬ ಆಕಾಶ ನೋಡಿತ್ತು. ತನ್ನನ್ನು ಪ್ರೀತಿಯಿಂದ ಪೊರೆದ ಕಂಪನಿ ಕಣ್ಣು ಮುಚ್ಚಿದಾಗ, ಅರೆಕ್ಷಣ ಮುಂದೇನು ಅನ್ನೋ ಚಿಂತೆ ತಬ್ಬಿತು. ದಿಕ್ಕುಗಳೆಲ್ಲ ಬಾಗಿಲು ಮುಚ್ಚಿದ ಸದ್ದಾಯಿತು. ಆಗ ಇವಳ ಕೈ ಹಿಡಿದು, ಮೇಲಕ್ಕೆತ್ತಿದ್ದು ಇದೇ ಪೇರಳೆಗಳು.
ಗತದ ವೈಭೋಗಳನ್ನೆಲ್ಲಾ ಕಳಚಿಕೊಂಡು ಬರೀ ಕಾಡೇ ಆಗಿಹೋಗಿರುವ ಕುದುರೆಮುಖದ ಬಸ್‌ಸ್ಟಾಪಿನ ಪಕ್ಕದಲ್ಲಿರುವ ಕಲ್ಲು ಬೆಂಚಿನ ಮೇಲೆ ಅವಳೀಗ ಕುಳಿತಿದ್ದಾಳೆ. ಪೇರಳೆಯ ರುಚಿ ಮಾತ್ರವಲ್ಲ, ಬಾಯ್ತುಂಬಾ ಸಿಹಿಮಾತುಗಳನ್ನೂ ಹಂಚುತ್ತಾಳೆ, ಚಂದ್ರಮ್ಮ. 10 ರೂ.ಗೆ ಒಂದರಂತೆ ಪೇರಳೆ ಪರರ ಪಾಲಾಗುತ್ತಿವೆ. ದಿನಕ್ಕೆ ಇನ್ನೂರೋ, ಮುನ್ನೂರೋ ಕಾಸು. ಯಾರೂ ಕೊಳ್ಳಲು ಬಂದಿಲ್ಲವೆಂದರೆ, ಶಬರಿಯಂತೆ ಕಾಯುವುದೇ ಲೇಸು. ಪುಡಿಗಾಸಿಲ್ಲದೆ, ಹಸಿವು ಎಂದು ಬಂದವರಿಗೆ, ಪೇರಳೆ ಕೊಟ್ಟು ಸಂತೈಸುವ ಈ ಅಮ್ಮ, ಆ ಹೊತ್ತಿನಲ್ಲಿ ಮುಖ ಬಾಡಿಸಿಕೊಳ್ಳುವುದನ್ನು ಸುತ್ತಲಿನವರಾರೂ ಕಂಡಿಲ್ಲ.
ಒಂದಿನ ಯಾರೋ ಪುಣ್ಯಾತ್ಮ ಕಾರು ನಿಲ್ಲಿಸಿ, “ಎಲ್ಲ ಪೇರಳೆ ಕೊಟ್ಟು ಬಿಡಿ’ ಎಂದ. ಈಕೆ ಇದ್ದಬದ್ದ ಪೇರಳೆಗಳನ್ನೆಲ್ಲ ಆ ವ್ಯಕ್ತಿಯ ಚೀಲಕ್ಕೆ ತುಂಬಿದಳು. “500 ಆಯ್ತು’ ಅಂದಳು. “ಏನ್ ಸಾಮಿ, ನೀವೇನಾದ್ರೂ ಪೇರಳೆ ವ್ಯಾಪಾರ ಮಾಡ್ತೀರಾ? ಇಷ್ಟೊಂದೆಲ್ಲಾ ಪೇರಳೆ ಎಂತಕ್ಕೆ?’ ಅಂತ ಕೇಳಿದಾಗ ಆ ವ್ಯಕ್ತಿ, “ಅಮ್ಮಾ… ನಾನು ಆಯುರ್ವೇದಿಕ್ ಡಾಕುó. ಈ ಪೇರಳೆ ಕೆಲವು ಕಾಯಿಲೆಗಳಿಗೆ ಮದ್ದೂ ಹೌದು. ಇದನ್ನು ಪೌಡರ್ ಮಾಡಿದ್ರೆ ಬೆಸ್ಟ್ ಮೆಡಿಸಿನ್ ಆಗುತ್ತೆ’ ಅಂತ ಅಂದರಂತೆ. ಅದನ್ನು ಕೇಳಿ, ಚಂದ್ರಮ್ಮ ಉಬ್ಬಿ ಹೋಗಿದ್ದಳು.
ಗಂಡ ಕ್ಯಾನ್ಸರ್‌ನಿಂದ ಅದಾಗಲೇ ತೀರಿ ಹೋಗಿದ್ದಾನೆ. ಮಗ ಮೇಸ್ತ್ರಿ ಕೆಲಸ ಹಿಡಿದಿದ್ದಾನೆ. ಕಾಡಿನ ಚುಮುಗುಡುವ ಚಳಿಯಲ್ಲಿ ಚಂದ್ರಮ್ಮ, ತಾಜಾ ಪೇರಳೆಗಳನ್ನು ಆಯ್ದು ಕುದುರೆಮುಖದ ಬೆಟ್ಟಗಳನ್ನು ನೋಡುತ್ತ, ವ್ಯಾಪಾರಕ್ಕೆ ಕೂತಿದ್ದಾಳೆ. ಹಾಗೆ ಕುಳಿತಾಗಲೆಲ್ಲ, ಅವಳಿಗೆ ಒಂದಾನೊಂದು ಕಾಲದ ಕುದುರೆಮುಖ ಅನ್ನೋ ಮಾಯಾಲೋಕ ಕಣ್ಣ ಮುಂದೆ ಬಂದಂತಾಗುತ್ತದೆ. ಗಣಿ ಕಾರ್ಮಿಕರು ಕೂಗು ಹಾಕಿದಂತೆ, ದೊಡ್ಡ ದೊಡ್ಡ ಮಶೀನುಗಳು ಕಿರುಚಿದಂತೆ, ಸೈರನ್ನು ಪ್ರತಿಧ್ವನಿಸಿದಂತೆ, ತೀರಿಹೋದ ಗಂಡ ಕೆಲಸ ಮುಗಿಸಿ ದಣಿದು ಬಂದಂತೆ, ತಾನು ಗಣಿಕಾಲನಿಯ ಕಸ ಗುಡಿಸಿದಂತೆ, ಸಕಲ ಚಿತ್ರಗಳು ಆ ಟಾರು ರೋಡಿನಲ್ಲಿ ಸಾಲಾಗಿ ಹೊರಟಂತೆ ಅನ್ನಿಸುತ್ತದೆ.
ಅಷ್ಟೊತ್ತಿಗೆ “ಪೇರಳೆ ಕೊಡಿ ಅಮ್ಮಾ…’ ಅನ್ನೋ ಧ್ವನಿ ಕಿವಿಗೆ ಬೀಳುತ್ತೆ. ಮನಸ್ಸು, ಮಾತು ಪೇರಳೆಯಂತೆ ಸಿಹಿಯಾಗುತ್ತೆ. ಸಂಜೆ ಕರಗುತ್ತೆ. ಕಾಡು ಕಪ್ಪಾಗುತ್ತೆ. ಕಾಡು ಕೋಣಗಳ ಸದ್ದು ಸುತ್ತೆಲ್ಲಾ ಕೇಳಿಸುತ್ತೆ. ಚಿರತೆಗಳು ಇಲ್ಲೇ ಬಂದಿವೆಯೆಂಬ ಸುದ್ದಿ ಕಿವಿಗೆ ಬಿದ್ದರೂ, ಚಂದ್ರಮ್ಮ ಕಂಪಿಸುವುದಿಲ್ಲ. ಇದು ತಾನು ನಂಬಿಕೊಂಡು ಬಂದ ಕಾಡು. 29 ವರ್ಷಗಳಿಂದ ತನ್ನೊಳಗೆ ಉಸಿರಾಡುತ್ತಿರುವ ಕಾಡು, ಯಾವ ಕಾಡುಪ್ರಾಣಿಗಳ ಭಯವೇಕೆ?- ಎಂದುಕೊಂಡು ಧೈರ್ಯದಿಂದ ಉಸಿರುಬಿಡುತ್ತಾಳೆ. ಆ ದಿನದ ಉಳಿದ ಪೇರಳೆಗಳನ್ನು ಗಂಟು ಕಟ್ಟುತ್ತಾ, ಕಳಸದಿಂದ ಬರುವ ಬಸ್ಸಿಗೆ ಕೈಯೊಡ್ಡುತ್ತ, ಬಸ್ಸನ್ನೇರಿ, ಮನೆಯ ದಾರಿ ಹಿಡಿಯುತ್ತಾಳೆ.
ಕುದುರೆಮುಖ ಅನ್ನೋ ಮಾಯಾಸ್ವರ್ಗ, ಹೀಗೆ ಅಸಂಖ್ಯ ಬಡಮುಖಗಳನ್ನು, ಕಾರ್ಮಿಕರನ್ನು ಬದುಕಿಸಿದೆ, ನಡುಕಾಡಿನಲ್ಲೇ ನಿರ್ದಯವಾಗಿ ಮುಳುಗಿಸಿದೆ. ಚಿಂತೆಗಳನ್ನೆಲ್ಲ ಕರಗಿಸಿ, ಬದುಕುವ ಪಾಠಗಳನೂ ಹೇಳಿಕೊಟ್ಟಿದೆ. ಕಾಡಿನ ಆ ವಿದ್ಯಾರ್ಥಿಗಳಲ್ಲಿ, ಒಬ್ಬಳು ನಮ್ಮ ಚಂದ್ರಮ್ಮ.
* ಪ್ರಸಾದ್ ಶೆಣೈ ಆರ್.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.