ಯಾರೂ ಇಲ್ಲದ ಊರು
ಬಾಂಬಿ ಎಂಬ ನತದೃಷ್ಟ ಗ್ರಾಮದ ಕಥೆ
Team Udayavani, Feb 22, 2020, 6:10 AM IST
ಇದು ಬಳ್ಳಾರಿಯ ಬಾಂಬಿ ಕಾಲೋನಿ ಎಂಬ ನತದೃಷ್ಟ ಗ್ರಾಮದ ಕತೆ. 10 ವರ್ಷಗಳ ಹಿಂದೆ ಈ ಊರು ಜನರಿಂದ ತುಂಬಿಕೊಂಡಿತ್ತು. ಶಾಲೆಯಲ್ಲಿ ಮಕ್ಕಳಿದ್ದರು. ಮನೆ ಮುಂದೆ ನಿತ್ಯವೂ ರಂಗೋಲಿ ಬೀಳುತ್ತಿತ್ತು. ಈಗ ಈ ಊರಿನಲ್ಲಿ ಯಾರೆಂದರೆ ಯಾರೂ ಇಲ್ಲ. ಮನೆಗಳು ಪಾಳುಬಿದ್ದಿವೆ. ಶಾಲೆ ಬಿಕೋ ಎನ್ನುತ್ತಿದೆ. ಏನಾಯಿತು ಈ ಊರಿಗೆ?
ಬಾಂಬಿ ಕಾಲೋನಿ! ಮಲೆನಾಡಿನ ಸೌಂದರ್ಯವನ್ನು ನೆನಪಿಸುವ, ಬಿಸಿಲನಾಡು ಬಳ್ಳಾರಿಯ ಗ್ರಾಮ. ಎಲ್ಲ ಗ್ರಾಮಗಳಂತೆ ಇಲ್ಲಿಯ ಜನ ಕೃಷಿ, ತೋಟಗಾರಿಕೆ, ಜೊತೆಗೆ ಕುಲಕಸುಬನ್ನು ಮಾಡಿಕೊಂಡು ಸುಖವಾಗಿದ್ದರು. ಆದರೆ, ಇದ್ದಕ್ಕಿದ್ದಂತೆ ಒಬ್ಬರ ನಂತರ ಒಬ್ಬರು ಮನೆ ಬಿಟ್ಟು ಹೋಗಲು ಶುರುಮಾಡಿದರು. ಕೆಲ ತಿಂಗಳಿನಲ್ಲಿಯೇ ಊರಿಗೇ ಊರೇ ಖಾಲಿ. ಇದಾಗಿ ಬರೋಬ್ಬರಿ ಹತ್ತು ವರುಷಗಳೇ ಕಳೆದಿವೆ. ಆದರೆ, ಆ ಗ್ರಾಮದಲ್ಲಿ ಈಗ ಯಾರೆಂದರೆ ಯಾರೂ ಇಲ್ಲ!
ಮನೆಗಳು ಪಳೆಯುಳಿಕೆಯಂತೆ ಕಾಣಿಸುತ್ತಿವೆ. ಮನೆಯ ವಸ್ತುಗಳು ಕಾಣೆಯಾಗಿವೆ. ಕುಸಿದ ಚಾವಣಿ, ಗಾಳಿ- ಮಳೆ- ಬಿಸಿಲಿಗೆ ಬಸವಳಿದ ಗೋಡೆಗಳು. ಹಳೆಯ ಗೋಡೌನ್‌ನಂತಿರುವ ಸರ್ಕಾರಿ ಶಾಲೆ. ಅಲ್ಲಿ ಮಕ್ಕಳಿಲ್ಲ. ದೇವಸ್ಥಾನಕ್ಕೆ ನಮಸ್ಕರಿಸಲು ಜನರೇ ಇಲ್ಲ. ಕಾಡುಪ್ರಾಣಿಗಳಿಗೆ ವಾಸಯೋಗ್ಯವಾದ ಗ್ರಾಮ. ಒಮ್ಮೆಲೆ ನೋಡಿದರೆ ಸ್ಮಶಾನದ ನೆನಪಾಗುತ್ತದೆ.
ಸಾವಿರಾರು ವರುಷಗಳ ಹಿಂದಿನ ವಿಜಯನಗರ ಸಾಮ್ರಾಜ್ಯ ಅಜರಾಮರ ಎನ್ನುವಂತೆ ಬದುಕಿತ್ತು. ಆದರೀಗ “ಹಾಳುಹಂಪೆ’ ಅಂತ ಜರಿಯುತ್ತಾರೆ. ಅದನ್ನು ಕೇಳಿದಾಗ ನಮಗೆಲ್ಲ ಬೇಸರವಾಗುತ್ತದೆ. ಬೀದಿಯಲ್ಲಿ ಚಿನ್ನ- ವಜ್ರ ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯ ಚರಿತ್ರೆ ಗೊತ್ತಿದ್ದವರ ಮನಸ್ಸಿಗೆ ಇನ್ನಷ್ಟು ಬೇಸರವಾಗುತ್ತದೆ. ಆದರೆ, ನಮ್ಮ- ನಿಮ್ಮಂತೆ ಬೆಳೆದ 120ಕ್ಕೂ ಹೆಚ್ಚು ಜನ ಆಡಿಬೆಳೆದ ಗ್ರಾಮ ಇದೀಗ ಕೇವಲ ಒಂದು ಹೆಸರಾಗಿ ಉಳಿದುಬಿಟ್ಟಿದೆ.
ಅಚ್ಚರಿಯೆಂದರೆ, ಬಾಂಬಿ ಕಾಲೋನಿ ಎನ್ನುವ ಒಂದು ಗ್ರಾಮವಿತ್ತು ಎನ್ನುವುದು ಅದೆಷ್ಟೋ ಜನರಿಗೆ ಗೊತ್ತಿಲ್ಲ. ಈಗಲೂ ಇಂಥ ನತದೃಷ್ಟ ಗ್ರಾಮಕ್ಕೆ ರಸ್ತೆಯಿಲ್ಲ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೇಕೊಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಪ್ಪೇನಹಳ್ಳಿ ಗ್ರಾ.ಪಂ.ನಲ್ಲಿ “ಬಾಂಬಿ’ ಕಾಣಸಿಗುತ್ತದೆ.
ಊರಿಗೆ ಊರೇ ಖಾಲಿ: ಇಲ್ಲಿ ಯಾರೂ ಇಲ್ಲ ಎಂದು ತಿಳಿದು ಅಲ್ಲಿಗೆ ಹೋದರೆ, ಅಸಲಿಗೆ ಈ ಗ್ರಾಮ ಎಲ್ಲಿ ಬರುತ್ತದೆ ಎಂದು ಕೇಳಿದರೆ ಯಾರೂ ಹೇಳ್ಳೋದಿಲ್ಲ. ಸುತ್ತಮುತ್ತಲಿನ ಹಳ್ಳಿಯ ಯುವಕರು, ಹುಡುಗರನ್ನು ಕೇಳಿದರೆ, ಈ ಬಗ್ಗೆ ಅವರಿಗೆ ಮಾಹಿತಿಯಿಲ್ಲ. ಹಿರಿಯರಿಗೆ ಗೊತ್ತಿದ್ದರೂ, ಇದರ ಗೊಡವೆಯೇ ಬೇಡವೆಂದು ಸುಮ್ಮನಾಗುತ್ತಾರೆ.
“ಬಾಂಬಿ’ಯ ಆ ದಿನಗಳು: ಇಲ್ಲಿನವರು ಹೆಚ್ಚಾಗಿ ಹಿಂದಿ ಭಾಷಿಕರಾಗಿದ್ದರಿಂದ ಈ ಗ್ರಾಮಕ್ಕೆ “ಬಾಂಬಿ ಕಾಲೊನಿ’ ಎಂಬ ಹೆಸರು ಬಂತಂತೆ. 120ಕ್ಕೂ ಹೆಚ್ಚು ಜನರಿದ್ದ ಗ್ರಾಮ. ಅದರಲ್ಲಿ ಅಲೆಮಾರಿಗಳೇ ಹೆಚ್ಚು. ಅಲೆಮಾರಿಯ ಗೊಂದಲಿಗ ಜಾತಿ, ಬುಡಬುಡಕೆ ಉಪ ಜಾತಿಯವರು ಇಲ್ಲಿರುತ್ತಿದ್ದರು. 30ಕ್ಕೂ ಹೆಚ್ಚು ಮನೆಗಳಿದ್ದವು. ಹೆಣ್ಣುಮಕ್ಕಳು ಕೌದಿ ಹೊಲೆದು, ಗಂಡಸರು ಬುಡುಬುಡಕೆ ನುಡಿಸಿ, ಗೊಂದಲಿಗರ ಪದ ಹಾಡಿ, ಹೊಟ್ಟೆ ತುಂಬಿಸಿಕೊಂಡು, ತಂಪಾಗಿದ್ದರು.
ಊರು ಖಾಲಿ ಆಗಿದ್ದೇಕೆ?: “2009ರಲ್ಲಿ ನಮ್ಮ ಗ್ರಾಮದ ಮುಖಂಡ, ಅಂದ್ರೆ ನಮ್ಮ ತಂದೆ ಹನುಮಂತಪ್ಪ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಆ ಕಿಡ್ನಾಪ್, ಬಾಂಬಿ ಕಾಲೋನಿಗೆ ಟ್ವಿಸ್ಟ್ ಕೊಟ್ಟಿತು. ಹನುಮಂತಪ್ಪ ಏನಾದರು? ಈಗ ಎಲ್ಲಿದ್ದಾರೆ? ಅಂದು ಏನಾಯಿತು?- ಈ ಬಗ್ಗೆ ಒಂದಿಂಚೂ ಮಾಹಿತಿಯಿಲ್ಲ’ ಎಂದು ಹನುಮಂತಪ್ಪ ಅವರ ಮಗ ರಮೇಶ್ ಹೇಳುತ್ತಾರೆ.
ರಮೇಶ್ ಕಣ್ಣಿನಲ್ಲಿ ಬಾಂಬಿ ಕಾಲೋನಿಯ ಚಿತ್ರಗಳು ಇನ್ನೂ ಅಳಿಸಿಲ್ಲ. “ಅಲೆಮಾರಿಗಳೇ ಇದ್ದರೂ, ಖುಷಿ ಅಲ್ಲಿ ಅರಮನೆ ಕಟ್ಟಿತ್ತು. ಅಣ್ಣ- ತಮ್ಮ, ಅಕ್ಕ- ತಂಗಿ, ದೊಡ್ಡಪ್ಪ- ದೊಡ್ಡಮ್ಮ, ಚಿಕ್ಕಪ್ಪ- ಚಿಕ್ಕಮ್ಮ… ಹೀಗೇ ಇಡೀ ಊರಿಗೇ ಊರೇ ಒಂದು ಸಂಸಾರದಂತಿತ್ತು. ಚೆಂದದ ಸರ್ಕಾರಿ ಶಾಲೆಯಿತ್ತು. ನಿತ್ಯ ಸಂಜೆ ಮಕ್ಕಳು ಬೀದಿಗಳಲ್ಲಿ ಆಡುತ್ತಿದ್ದರು. ನಮ್ಮೂರ ಪುಟ್ಟ ಗುಡಿಗೆ ಹೋಗಿ ದೇವರಿಗೆ ನಮಸ್ಕರಿಸುತ್ತಿದ್ದೆವು’.
“ನಮಗೆ ಊರಿಗೆ ಹೋಗಲು ಕಾಲುದಾರಿಯೊಂದೇ ಇದ್ದಿದ್ದು. ಸುತ್ತಲೂ ಗದ್ದೆ- ತೋಟಗಳ ಮಧ್ಯೆಯಿದ್ದ ನಮ್ಮೂರಿಗೆ ಸರಿಯಾಗಿ ಮಳೆಯಾದ್ರೆ, ನಮ್ಮ ಮನೆಯಲ್ಲಿ ಹೊರಗೆ ಹೋಗಿ ದುಡಿಯುತ್ತಿರಲಿಲ್ಲ. ನಮ್ಮ ಹೊಟ್ಟೆ ತುಂಬಿಸಲು ಕೃಷಿಯೇ ಸಾಕಿತ್ತು. ಆದರೆ, ಯಾವಾಗ ಆ ಘಟನೆ ನಡೆಯಿತೋ ಒಬ್ಬರಾದ ಮೇಲೆ ಒಬ್ಬರು ಊರು ಬಿಡತೊಡಗಿದರು. ಈಗ ಬಾಂಬಿ ಕಾಲೋನಿಗೆ ಹೋಗಿ ನೋಡಿದರೆ ಬೇಸರ ಉಕ್ಕುತ್ತದೆ’ ಎಂದು ರಮೇಶ್ ಕಣ್ಣೀರು ಹಾಕ್ತಾರೆ.
ಅಂದು ಆಗಿದ್ದೇನು?: 2009ರಲ್ಲಿ ಹನುಮಂತಪ್ಪ ಕಾಣೆಯಾದಾಗ, ಆ ಸಂಬಂಧ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗುತ್ತದೆ. ಪೊಲೀಸರು ತನಿಖೆ ನಡೆಸುತ್ತಾರೆ. ಕೇಸ್ ನಮ್ಮ ಮೇಲೆ ಬರುತ್ತದೆ ಎಂಬ ಭಯಕ್ಕೋ, ದಾಯಾದಿ ಕಲಹಗಳಿಗೆ ಹೆದರಿಯೋ, ಪೊಲೀಸ್ ಸ್ಟೇಷನ್- ಕೋರ್ಟು- ಕಚೇರಿ ಎಂದು ಅಲೆದಾಡುವುದು ಕಷ್ಟ ಎಂಬ ಲೆಕ್ಕಾಚಾರದಿಂದಲೋ ಅಲ್ಲಿದ್ದ ಗ್ರಾಮಸ್ಥರು ಒಬ್ಬೊಬ್ಬರಾಗಿ ಗ್ರಾಮವನ್ನೇ ಬಿಟ್ಟು ತೆರಳಿದ್ದಾರೆ.
ಈ ಬಗ್ಗೆ ಬಳ್ಳಾರಿ ಜಿಲ್ಲಾ ಎಸ್‌ಪಿ ಸಿ.ಕೆ. ಬಾಬಾ ಅವರನ್ನು ಕೇಳಿದರೆ, ಬಾಂಬಿ ಕಾಲೋನಿ ಗ್ರಾಮದ ಮುಖಂಡ ಹನುಮಂತಪ್ಪ ಕೊಲೆಯಾಗಿದ್ದನ್ನು ಖಚಿತಪಡಿಸುತ್ತಾರೆ. ಕೊಲೆ ಆರೋಪಿಗಳು ಅದೇ ಬಾಂಬಿ ಕಾಲೋನಿ ಗ್ರಾಮಸ್ಥರೇ! ಪ್ರಕರಣ ದಾಖಲಾಗಿ 12 ಆರೋಪಿಗಳಿಗೆ ಜಾಮೀನು ದೊರೆತಿದೆ ಎನ್ನುವುದು ಎಸ್.ಪಿ. ಅವರ ಮಾತು.
ಮತ್ತೆ ಊರು ಸೇರುವಾಸೆ…: ಬಾಂಬಿ ಕಾಲೋನಿಯ ನಿವಾಸಿಯಾಗಿದ್ದ ಅಂಜಿನಪ್ಪ ಅವರಿಗೂ ಆ ಊರು ಕಾಡುತ್ತಿದೆ. “ಹತ್ತು ವರುಷಗಳ ಹಿಂದೆ ಹನುಮಂತಪ್ಪ ಅವರ ಕಿಡ್ನಾಪ್ ಆಯಿತು. ಮತ್ತೇನಾಯಿತು ಎಂಬುದು ನಮಗ್ಯಾರಿಗೂ ತಿಳಿದಿಲ್ಲ. ನನ್ನನ್ನೂ ಸೇರಿದಂತೆ ಹಲವರ ಮೇಲೆ ಕೇಸು ಬಿದ್ದು, ಬಂಧನವಾಯಿತು. ನಮ್ಮ ಮನೆಯವರನ್ನೆಲ್ಲ ಬೇರೆ ಊರಿಗೆ ಹೋದರು. ನಮ್ಮ ರೀತಿ ಊರಿನಲ್ಲಿದ್ದವರು ಮನೆ ತೊರೆದು, ಗಂಟುಮೂಟೆ ಕಟ್ಟಿಕೊಂಡು ಹೊರಗಡೆ ಹೋಗಿದ್ದಾರೆ.
ಕೋರ್ಟ್- ಕೇಸು ಎಂದು ಹೆದರಿ ಊರಿನವೆಲ್ಲ ಬಿಟ್ಟುಹೋದರು’ ಎನ್ನುತ್ತಾರೆ, ಅಂಜಿನಪ್ಪ. “ಇದೀಗ ನಮ್ಮೂರಿನವೆರಲ್ಲ ಸೇರಿ (30 ಮನೆಯವರು) ಬಳ್ಳಾರಿ ಜಿಲ್ಲಾಡಳಿತಕ್ಕೆ ಮನವಿಪತ್ರ ನೀಡಿದ್ದೇವೆ. ಮತ್ತೆ ನಮ್ಮ ಗ್ರಾಮಕ್ಕೆ 30 ಮನೆಯವರು ಹೋಗಬೇಕು ಎಂಬ ಆಸೆಯಿದೆ. ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದೇವೆ. ಈಗಾಗಲೇ ನಮ್ಮೂರಿಗೆ ನೀರಿನ ವ್ಯವಸ್ಥೆಯಾಗಿದೆ.
ಅದಕ್ಕೆ ನಾವು ಸೇರಿದಂತೆ ಮೂರು ಮನೆಯವರು 15 ದಿನದಿಂದ ಈಚೆಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಹಳೆಯ ಮನೆಯನ್ನು ಚೊಕ್ಕಗೊಳಿಸಿದ್ದೇವೆ. ಊರಿಗೆ ಕರೆಂಟ್ ಇಲ್ಲ. ನಮ್ಮಂತೆ ಈಗ ಬೇರೆ ಮೂರು ಮನೆಯವರು ಬಂದಿದ್ದಾರೆ. ಇದೇ ರೀತಿ ನಮ್ಮೂರಿನವರೆಲ್ಲ ಮೊದಲು ಹೇಗೆ ಅನ್ಯೋನ್ಯವಾಗಿದ್ದೆವೋ, ಅದೇ ರೀತಿ ಎಲ್ಲರೂ ಮತ್ತೆ ಸೇರಬೇಕು, ಇರಬೇಕು ಎಂಬುದು ನಮ್ಮ ಮಹದಾಸೆ’ ಎನ್ನುತ್ತಾರೆ, ಅಂಜಿನಪ್ಪ.
“ಇಷ್ಟು ದಿನ ನಮ್ಮೂರು ಪಾಳು ಬಿದ್ದಿತ್ತು. ಈಗ ನಮ್ಮೂರಿನವರು ಮತ್ತೆ ಬಾಂಬಿ ಕಾಲೋನಿಗೆ ಹೋಗಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸದ್ಯ 30 ಮನೆಯ, 110ಕ್ಕೂ ಹೆಚ್ಚು ಜನ ಬರಲಿಕ್ಕೆ ರೆಡಿಯಿದ್ದಾರೆ. ಇವರೆಲ್ಲ ಸುತ್ತಮುತ್ತಲ ಕೂಡ್ಲಿಗಿ, ರಾಂಪುರ, ಸುತ್ತಮುತ್ತಲ ಹಳ್ಳಿಯಲ್ಲಿ, ಬಾಂಬಿ ಕಾಲೋನಿ ಸಮೀಪದ ತೋಟದಲ್ಲಿಯೇ ಮನೆ ಮಾಡಿಕೊಂಡಿದ್ದಾರೆ. ಇದೀಗ ನಾಲ್ಕೈದು ಮನೆಯವರು ಮನೆ ಮಾಡಲು ಮುಂದಾಗಿದ್ದಾರೆ’.
-ರಮೇಶ್, ಬಾಂಬಿ ಕಾಲೋನಿ
* ನಮನ ಹಂಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.