ಸೀತಾರಾಮ್‌ಗೆ ಸ್ವೀಟ್ 70
Team Udayavani, Dec 1, 2018, 9:07 AM IST
ಮುಂದಿನ ಗುರುವಾರ (ಡಿ.6), ಕಿರುತೆರೆ ಕಿಂಗ್ ಎನಿಸಿಕೊಂಡಿರುವ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರಿಗೆ ಭರ್ತಿ 70 ವರ್ಷ. ಈಗಲೂ, ವಯಸ್ಸಿಗೆ ಬೆನ್ನು ಹಾಕಿ, ಎಲ್ಲರನ್ನೂ ನಾಚಿಸುವಂತೆ ಕ್ರಿಯಾಶೀಲರಾಗಿದ್ದಾರೆ. ರಂಗಭೂಮಿ, ಕಿರುತೆರೆ, ಸಿನಿಮಾರಂಗದಲ್ಲಿ ಇವರದು ಅಚ್ಚಳಿಯದ ಹೆಜ್ಜೆ. ಪುಟ್ಟಣ್ಣನವರ ಮಾನಸ ಪುತ್ರರಂತಿದ್ದ ಟಿನ್ನೆಸ್,ಕಿರುತೆರೆಯಲ್ಲಿ”ಮಾಯಾಮೃಗ’ವನ್ನು ಬಿಟ್ಟು “ಮುಕ್ತ ಮುಕ್ತ’ವಾಗಿ ಮಾಡಿದ “ಮನ್ವಂತರ’ಕ್ಕೆ ಎಲ್ಲರೂ ನಿಬ್ಬೆರಗು. ಹುಟ್ಟು ಹಬ್ಬದ ನೆಪದಲ್ಲಿ ಅವರ ಬದುಕಿನ ಹಲವು ಮಜಲುಗಳ ಪರಿಚಯ ಇಲ್ಲಿದೆ.
ಈ ಸಿಎಸ್‌ಪಿ ಹುಟ್ಟಿದ್ದು ಹೇಗೆ?
ನಾನು ದೊಡ್ಡಬಳ್ಳಾಪುರದಲ್ಲಿ ಲಾಯರ್ ಆಗಿದ್ದೆ. ಕಾರಣಾಂತರಗಳಿಂದ ಪ್ರಾಕ್ಟೀಸ್ ಮಾಡೋಕೆ ಆಗಲಿಲ್ಲ. ನಮ್ಮ ಸೀನಿಯರ್ ವಾಸುದೇವ್, ಕ್ರಾಸ್ ಎಗಾÕಮಿನೇಷನ್ ಮಾಡೋದನ್ನ ಬಹಳ ಚೆನ್ನಾಗಿ ಹೇಳಿಕೊಟ್ಟಿದ್ದರು. ಅದು ಮನಸ್ಸಲ್ಲಿ ಹಾಗೇ ಹೆಪ್ಪುಗಟ್ಟಿತ್ತು. ಅದನ್ನು ಇಟ್ಟುಕೊಂಡು ಮಾಯಾಮೃಗದಲ್ಲಿ ಸಣ್ಣ ಪ್ರಯತ್ನ ಮಾಡಿದೆ. ಹಿಟ್ ಆಯ್ತು. ಮನ್ವಂತರದಲ್ಲಿ ಅದನ್ನೇ ದೊಡ್ಡದಾಗಿ ಮುಂದುವರಿಸಿದೆ. ನನ್ನೊಳಗಿದ್ದ ಲಾಯರ್, ಸಿಎಸ್‌ಪಿ ಆಗಿ ಎಲ್ಲ ಧಾರಾವಾಹಿಗಳಲ್ಲಿ ಬರೋಕೆ ಶುರುಮಾಡಿದ. ಈ ಸಿಎಸ್‌ಪಿಗೆ ಈಗ 50ವರ್ಷ ಆಗಿದೆ.
ಕೋರ್ಟ್, ಕಾನೂನನ್ನು ಸೀರಿಯಲ್‌ಗೆ ತರೋದು ಸುಲಭವಾ?
ಬಹಳ ಕಷ್ಟದ ಕೆಲಸ. ಐಪಿಸಿ, ಸಿಆರ್‌ಪಿ ಹೀಗೆ ಸೆಕ್ಷನ್‌ಗಳಿಗೆ ಬಾಧಕವಾಗದೆ, ಕೋರ್ಟಿನ ಪ್ರೊಸೀಜರ್ ಪ್ರಕಾರವೇ ಧಾರಾವಾಹಿ ಮೂಲಕ ಕಾನೂನ ಪಾಠ ಮಾಡ್ತೀವಿ. ನ್ಯಾಯಾಲಯದಲ್ಲಿ ಕಲಾಪ ಅಡ್ಜರ್ನ್ ಮಾಡಿದರೆ ಮೂರು ತಿಂಗಳಾಗಬಹುದು, ನಾವು ಮಾರನೇ ದಿನಕ್ಕೆ ಹಾಕ್ತೀವಿ. ಟಿ.ನ್. ಸೀತಾರಾಮ್, ಕೋರ್ಟ್ ನೋಡಿದ್ದರಿಂದ, ಈ ಸಿಎಸ್‌ಪಿನ ತರೋಕೆ ಸುಲಭವಾಗಿದ್ದು.
ಒಂದು ಪಕ್ಷ ನೀವು ಫುಲ್ ಟೈಂ ಲಾಯರ್ ಆಗಿದ್ದಿದ್ರೆ?
ಈ ಸಿಎಸ್‌ಪಿ ಇರ್ತಿರಲಿಲ್ಲ, ನಾನು ಸೀರಿಯಲ್ ಗಳನ್ನೂ ಮಾಡ್ತಿರಲಿಲ್ಲ. ಹೀಗೆ, ನಮ್ಮಲ್ಲೂ ಎಷ್ಟೋ ಜನ ಸಿಎಸ್‌ಪಿಗಳು ಇದ್ದಾರೆ. ಅವರೆಲ್ಲಾ ಸೀರಿಯಲ್ ಮಾಡ್ತಾ ಇಲ್ಲ ಅಷ್ಟೇ. ನಮ್ಮ ಸಿ.ಎಚ್. ಹನುಮಂತರಾಯಪ್ಪ, ಚಂದ್ರಮೌಳಿ, ನಾಗೇಶ್ ಇವರೆಲ್ಲಾ ತುಂಬಾ ಬುದ್ಧಿವಂತರಿದ್ದಾರೆ
ನಿಮ್ಮ ಸಿಎಸ್‌ಪಿ ಇಂಥವನೇನ?
ಹೌದು, ಸಿಎಸ್‌ಪಿ- ಮುಗªರು, ಅಸಹಾಯಕರ ಪರವಾಗಿ ಫೀ ಪಡೆಯದೆ ಹೋರಾಡ್ತಾನೆ. ಮನುಷ್ಯರಲ್ಲಿ ಮೂಲಭೂತವಾದ ಘನತೆ ಉಳಿಸಬೇಕು ಅನ್ನೋದು ಇವನ ಉದ್ದೇಶ. ಇದು ಆ ಕಾಲದಲ್ಲೇ ಲಾಯರ್‌ಗಳಲ್ಲಿ ಇತ್ತು.
ನೀವು ಸಿಎಸ್‌ಪಿ, ಟಿಎನ್‌ಎಸ್ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿ ಅಂದರೆ…
ಬಹಳ ಕಷ್ಟ. ಸಿಎಸ್‌ಪಿಯನ್ನು ಅಟ್ರ್ಯಾಕ್ಟಿವ್ ಆಗಿ ಕಾಣೋ ರೀತಿ ಮಾಡೋದು ಈ ಟಿಎನ್‌ಎಸ್. ಧಾರಾವಾಹಿಯಲ್ಲಿ ಅದಕ್ಕೊಂದು ಮಿತಿ ಇರುತ್ತೆ. ಅದನ್ನು ಅರಿತುಕೊಂಡು ನಟಿಸೋದು ಸಿಎಸ್‌ಪಿ ಕೆಲಸ. ಅದರಲ್ಲಿ ಹೆಂಗೇ ಮಾಡಿದರೂ ಸಿಎಸ್‌ಪಿ ನಿರ್ದೇಶಕರ ಮೇಲೇರಿ ಏನೂ ಮಾಡಕ್ಕಾಗಲ್ಲ.
ನಿಮ್ಮ ಕಾಲದ ಲಾಯರ್ ಗಿರಿ ಹೇಗಿತ್ತು?
ವಕೀಲಿಕೆಯಲ್ಲಿ ಅಂಥ ದುಡ್ಡೇನೂ ಬರ್ತಿರಲಿಲ್ಲ. ಆಗೆಲ್ಲ, ಸಿವಿಲ್, ಕ್ರಿಮಿನಲ್ ಅಂತ ಸೆಕ್ಷನ್ ಮಾತ್ರ ಇತ್ತು. ಈಗ ಕಾರ್ಪೋರೇಟ್, ಇಂಟಲೆಕುcಯಲ್ ಲಾ ಅಂತೆಲ್ಲ ಇದೆ. ಹಾಗಾಗಿ, ಈಗಿನ ಲಾಯರ್ ಗಳು ಸುಖವಾಗಿದ್ದಾರೆ. ಆಗ ನನ್ನ ಬಳಿ ಹಳ್ಳಿಯ ವರು ಬರೋರು. ತಾವು ಜಾಣರು ಅಂದುಕೊಂಡಿ ದ್ದರು. ಆದರೆ, ಪೇಟೆ ಜಾಣ್ಮೆ ಬೇರೆ, ಹಳ್ಳಿಯ ಜಾಣ್ಮೆ ಬೇರೆ ಅನ್ನೋದು ಅವರಿಗೆ ಗೊತ್ತಿರಲಿಲ್ಲ.
ಅವನ ಜನಪ್ರಿಯತೆ ನಿಮಗೆ ಹೊಟ್ಟೆ ಕಿಚ್ಚು ತರೋಲ್ವಾ?
ಹಹಹ..ಇಲ್ಲ, ನಾನು ಸೃಷ್ಟಿಸಿದ ಪಾತ್ರವನ್ನು ನಾನೇ ಮಾಡುವುದರಿಂದ ಸ್ವಲ್ಪ ಹೆಚ್ಚಿಗೆ ಪ್ರಾಮುಖ್ಯತೆ
ಕೊಡ್ತೀನಿ.
ಒಬ್ಬ ನಿರ್ದೇಶಕ ಸೃಷ್ಟಿದ ಪಾತ್ರ ಆತನಿಗಿಂತ ಹೆಚ್ಚು ಬೆಳೆದರೆ?
ಬೆಳೀಲಿ ಬಿಡೀ. ನಿರ್ದೇಶಕ ಸೃಷ್ಟಿಸುವ ಪಾತ್ರಗಳು ಒಂಥರಾ ಅವನ ಕೂಸುಗಳಿದ್ದಂತೆ. ಪಾತ್ರ ಹೆಚ್ಚು ಜನಪ್ರಿಯವಾದರೆ- ಮಕ್ಕಳ ಮೂಲಕ ಅಪ್ಪನನ್ನು ಗುರುತಿಸಿದಂತೆ ಆಗುತ್ತದೆ. ಇದು ಖುಷಿಯ ವಿಚಾರ ಅಲ್ಲವೇ?
ನಿಮ್ಮನ್ನು ಜನ ಏನಂತ ಗುರುತಿಸುತ್ತಾರೆ?
ಸೀತಾರಾಮ್ ಅನ್ನೋದನ್ನು ಮರೆತು ಸಿಎಸ್‌ಪಿ ಅಂತ ಪರಿಚಯಿಸುತ್ತಾರೆ. ಕಾರ್ಯಕ್ರಮಗಳಲ್ಲಿ ಈಗ ಸಿಎಸ್‌ಪಿ ಮಾತಾಡ್ತಾರೆ ಅಂತಲೂ, ಸಿಎಸ್‌ಪಿ ಮಾತನಾಡಿದ ನಂತರ ಅಧ್ಯಕ್ಷರು ಮಾತನಾಡುತ್ತಾರೆ ಅಂತಲೂ ಮೈಕಲ್ಲಿ ಹೇಳುತ್ತಿರುತ್ತಾರೆ. ಆಗ ಇದೆಲ್ಲ ವಿನೋದ ಅನಿಸುತ್ತದೆ.
ಖಾಸಗಿ ಬದುಕಲ್ಲೂ ಸಿಎಸ್‌ಪಿ ಇದ್ದಾರಾ?
ಖಂಡಿತ. ಸಿ.ಹೆಚ್. ಹನುಮಂತರಾಯಪ್ಪ, ನನ್ನ ಖಾಸಗಿ ಲಾಯರ್ ಗೆಳೆಯರೆಲ್ಲ ಸಿಎಸ್‌ಪಿಗಳೇ. ಆದರೆ ಆ ಸಿಎಸ್‌ಪಿಯ ಖಾಸಗಿ ಬದುಕಲ್ಲಿಇವರ್ಯಾರೂ ಇಲ್ಲ.
ಮತ್ತೆ ಇನ್ಯಾರು?
ವೀಕ್ಷಕರ ಅಥವಾ ಮತ್ಯಾರ ಬದುಕು ಕೂಡ ಸಿಎಸ್‌ಪಿಯ ಖಾಸಗಿ ಬದುಕಾಗಬಹುದು. ಆತ ಎಲ್ಲರಿಗೂ ಸೇರಿದ್ದವನು. ಎಲ್ಲರ ಕಷ್ಟಕ್ಕೆ ಮಿಡಿಯುವವನು. ಸಿಎಸ್‌ಪಿ ಜನಪ್ರಿಯತೆಗೆ ಇದೂ ಒಂದು ಕಾರಣ.
ಕೀರಂ ಮತ್ತು ಪ್ರೇಮ ಪತ್ರ
ಸ್ಕೂಲಲ್ಲಿ ಪ್ರೇಮಪತ್ರ ಬರೆಯೋ ಸ್ಪರ್ಧೆಗೆ ಟಿಎನ್‌ಎಸ್ ರನ್ನು ಗೆಳೆಯರು ತಳ್ಳಿದ್ದರು. ಅಲ್ಲಿಂದ ವಾಪಸು ಬರೋದಕ್ಕೆ ಒದ್ದಾಡುತ್ತಿದ್ದರು. ಆಗ ಇವರಿಗೆ ಸೀನಿಯರ್ ಆಗಿದ್ದ ಕೀರಂ. ದೇವರಂತೆ ಬಂದರು. ಮನೆಯಲ್ಲಿ ಇದೆಲ್ಲಾ ಗೊತ್ತಾದ್ರೆ ಏನಂದು ಕೊಳ್ಳಲ್ಲ. ನನಗೆ ಪ್ರೇಮದ ಅನುಭವವಿಲ್ಲ. ಇನ್ನ ಬರೆಯೋದು ಹೇಗೆ? ಅಂತ ಅವರಲ್ಲಿ ಕಳವಳಿಸಿದರು. ಆಗ ಕೀರಂ. ಸಾಹಿತ್ಯದ ಓದನ್ನು ಪರಿಚಯಿಸಿ, ಇದಕ್ಕೆ ಅನುಭವ ಬೇಕಿಲ್ಲ ಅಂತ ಒಂದಷ್ಟು ಪೌಷ್ಟಿಕಯುಕ್ತ ಪದಗಳನ್ನು ಪೋಣಿಸಿಕೊಟ್ಟರು. ಅದನ್ನು ಸೇರಿಸಿ ಸ್ಪರ್ಧೆಗೆ ಪತ್ರ ಬರೆದರು ಟಿಎನ್‌ಎಸ್. ನೋಡಿದರೆ ಜಡ್ಜ್ – ಇದೇ ಕೀರಂ. ಪತ್ರದಲ್ಲಿ ಅನುಭವದ ಕೊರತೆ ಇದೆ ಅಂತ ಟಿಎನ್‌ಎಸ್‌ಗೆ ಎರಡನೇ ಬಹುಮಾನ ಕೊಟ್ಟರು.
ಬದುಕಿನ ಎಪಿಸೋಡ್‌ಗಳು
ಆಗಲೇ ಸಿಎಸ್‌ಪಿ
ಸೀತಾರಾಮ್ ಅವರ ಅಪ್ಪ-ತಾತ ಇಬ್ಬರೂ ನಾಟಕಪ್ರಿಯರು. ಅಜ್ಜಿಯ ಮರಣದ ನಂತರ ತಾತ ಇನ್ನೊಂದು ಮದುವೆಯಾಗದೆ, ಓದು, ನಾಟಕ ಅಂತ ಮಗನ ಜೊತೆಗೆ ತಿರುಗಾಡುತ್ತಿದ್ದರು. ತಂದೆ
ಕಂಸ, ಜರಾಸಂಧ, ಕೃಷ್ಣ, ರಾಮನ ಪಾತ್ರಗಳನ್ನು ಮಕ್ಕಳ ಎದುರು ಮಾಡಿ ತೋರಿಸುತ್ತಿದ್ದರು. ಅಪ್ಪನ
ಎತ್ತರದ ನಿಲುವು, ದೊಡ್ಡ ಗಂಟಲು, ಹಿಟ್ಲರ್ ಮೀಸೆ ಮುಖದಿಂದ ಹೊರಡುತ್ತಿದ್ದ ಕಂದ ಪದ್ಯಗಳನ್ನು
ಕೇಳಿದ ಮೇಲೆ- ಟಿಎನ್‌ಸ್‌ಗೂ ನಾನೂ ಹಾಗೇ ಆಗಬೇಕು ಅನಿಸಿಬಿಡುತ್ತಿತ್ತಂತೆ. ಅಪ್ಪನಿಗೆ ಮಾಸ್ತಿ
ಅಂದರೆ ಭಕ್ತಿ. ದೊಡ್ಡಪ್ಪ ಲಾಯರ್. ಆತ ಕೋರ್ಟ್‌ನಲ್ಲಿ ಹೇಗೆ ವಾದ ಮಾಡುತ್ತಿದ್ದರು ಅನ್ನೋದನ್ನು
ಅಪ್ಪ ಮನೆಯಲ್ಲಿ ಏಕಪಾತ್ರ ಅಭಿನಯ ಮಾಡಿ ತೋರಿಸುತ್ತಿದ್ದರು. ಆಗಲೇ ಅಂದರೆ, 50 ವರ್ಷಗಳ
ಹಿಂದೆಯೇ ಅವರೊಳಗೊಬ್ಬ ಸಿಎಸ್‌ಪಿ ಮೊಳೆತದ್ದು.
ಅಂಡರ್ ಏಜ್
ಟಿಎನ್‌ಎಸ್, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ತಾಲೂಕಿಗೇ ಮೊದಲು ಬಂದರು. ಆಗ, ಎಂಜಿನಿಯರ್ ಆಗುವ ಆಸೆ ಟಿಸಿಲೊಡೆಯಿತು. ಸೀಟೂ ಸಿಕ್ಕಿತು. ಕಾಲೇಜಿಗೆ ಸೇರಲು ಹೋದಾಗ “ಸೀತಾರಾಮು, ನಿನಗೆ ವಯಸ್ಸು ಕಡಿಮೆ ಕಣಯ.. ಎಂಜಿನಿಯರಿಂಗ್ ಓದಬೇಕೆಂದರೆ, ಕನಿಷ್ಠ 17 ದಾಟಬೇಕು’ ಅಂತ ವಾಪಸ್ಸು ಕಳುಹಿಸಿದ ಮೇಲೆ ಬಿಎಸ್‌ಸಿ ಕಡೆ ಮುಖ ಮಾಡಿದರು.
ಅಮ್ಮ ಕೊಡಿಸಿದ ಚಪ್ಪಲಿ..
ಟಿಎನ್‌ಎಸ್ ಒಳ್ಳೇ ಚಪ್ಪಲಿ ನೋಡಿದ್ದೇ ಹೈಸ್ಕೂಲ್‌ನಲ್ಲಿ. ಒಂದು ಸಲ ಗೆಳೆಯ ಪ್ರಹ್ಲಾದ ಸ್ಕೂಲಿಗೆ ಕೆಂಪು ಬಣ್ಣದ ಬೆಲ್ಟ್ ಚಪ್ಪಲಿ ಹಾಕಿಕೊಂಡು ಬಂದಾಗ, ತನಗೂ ಬೇಕು ಅನ್ನೋ ಆಸೆ ರೊಚ್ಚಿಗೆದ್ದು, ಅಮ್ಮನ ಮುಂದೆ ವರಾತ ತೆಗೆದರು. ಅಮ್ಮನ ಬಳಿ ಎಲ್ಲಾ ಮಕ್ಕಳಿಗೆ ಕೊಡಿಸು ವಷ್ಟು ಹಣ ಇರಲಿಲ್ಲ. ಹಾಗಾಗಿ, ಮಿಕ್ಕವರು ಕೇಳಿಯಾರು ಅಂತ-ನೀನು ಸ್ಕೂಲ್ ಹತ್ತಿರ ಮಾತ್ರ ಚಪ್ಪಲಿ ಹಾಕ್ಕೊಬೇಕು ಅಂತ ಕಂಡೀಷನ್ ಹಾಕಿ, ಆಣೆ-ಪ್ರಮಾಣ ಮಾಡಿಸಿಕೊಂಡು 11ರೂ. ಕೊಟ್ಟು ಚಪ್ಪಲಿ ಕೊಡಿಸಿದರು. ಟಿಎನ್‌ಎಸ್ ಮನೇಲಿ ಎಲ್ಲರಿಗೂ ಗೊತ್ತಾಗುತ್ತೆ ಅಂತ ದಿನಾ ಬ್ಯಾಗಲ್ಲಿ ಚಪ್ಪಲಿ ಇಟ್ಟುಕೊಂಡು ಹೋಗಿ, ಶಾಲೆಯಲ್ಲಿ ಎಲ್ಲರಿಗೂ ತೋರಿಸಿ, ಬೀಗಿದರು. ಒಬ್ಬ ಅಕ್ಕನಿಗೆ ಈ ವಿಚಾರ ತಿಳಿದು “ಕೊಡೋ, ಘಾಟಿ ಜಾತ್ರೆಗೆ ಹಾಕ್ಕೊಂಡೋಗಿ ಕೊಡ್ತೀನಿ’ ಅಂತ ಪುಸಲಾಯಿಸಿ, ಇಸಿದುಕೊಂಡು ಅದನ್ನು ಅಲ್ಲೇ ಬಿಟ್ಟು ಬಂದಳು. ಕೊನೆಗೆ, ಟಿಎನ್‌ಎಸ್ ಕೆಲಸಕ್ಕೆ ಅಂತ ಬೆಂಗಳೂರಿಗೆ ಬಂದ ಮೇಲೆ- ಅವಿನ್ಯೂ ರಸ್ತೆಯಲ್ಲಿ ಅಂಥದೇ ಕೆಂಪು ಬೆಲ್ಟ್ ಚಪ್ಪಲಿ ಹುಡುಕಾಡಿದರು. ಸಿಗಲಿಲ್ಲ.
ಲಂಕೇಶರ ನಂಟು
ಲಂಕೇಶ್‌ರ “ಪಲ್ಲವಿ’ ಚಿತ್ರದಲ್ಲಿ ಹೀರೋ ಆದ ನಂತರ ಜನ ಗುರುತಿಸತೊಡಗಿದರು. ಆಗ ಒಂದು ಘಟನೆ ನಡೆಯಿತು. ಮಲ್ಲೇಶ್ವರದ ಬ್ರಿàಜ್ ಹೋಟೆಲ್‌ನಲ್ಲಿ ಸ್ನೇಹಿತರ ಜೊತೆ ಟಿಎನ್‌ಎಸ್ ಕುಳಿತಿದ್ದಾಗ, ಎದುರು ಬೆಂಚಲ್ಲಿ ಸ್ವಲ್ಪ ಕಪ್ಪಗೆ, ದಪ್ಪಗಿದ್ದ ವ್ಯಕ್ತಿ ಇವರನ್ನೇ ದುರುಗುಟ್ಟಿ ನೋಡುತ್ತಿದ್ದ. ಇವರು ಮನಸ್ಸಲ್ಲಿ -ಪಲ್ಲವಿ ಹೀರೋ ನೀವೇನಾ ಅಂತ ಕೇಳುತ್ತಾನೆ. ಅದಕ್ಕೆ ಹೌದು, ಅಂತೇಳಿ ಬೀಗುವಾ ಅಂತ ಯೋಚಿಸಿದ್ದರು. ಆ ವ್ಯಕ್ತಿ ಇವರ ಬಳಿ ಬಂದು “ನಿಮ್ಮನ್ನ ಎಲ್ಲೋ ನೋಡಿದ ನೆನಪು’ ಅಂದ. “ನೀವೇ ಜ್ಞಾಪಿಸಿಕೊಳ್ಳಿ, ಎಲ್ಲಿ ಅಂತ’ ಎಂದು ಹಮ್ಮಿನಿಂದ ಹೇಳಿದರು ಸೀತಾರಾಂ. ಆತ, ನಮ್ಮನೆಗೆ ಹಾಲು ಹಾಕೋಕೆ ಬರ್ತಿದ್ದೆ ಅಲ್ವಾ, ಇತ್ತೀಚೆಗೆ ಏಕೆ ಬರಲಿಲ್ಲ ಅಂದು ಬಿಟ್ಟ. ಈಗ ಬಿಡುವಿಲ್ಲ ಅಂತ ಕಸಿವಿಸಿಯಾಗಿ ಹೇಳಿದರು. ಆಗ ನೆತ್ತಿ ಮೇಲಿದ್ದ ಹೀರೋ ಭ್ರಮೆ ಜರ್ರನೆ ಇಳಿಯಿತು.
ಮತ್ತೆ ಕೋಟು ಬಿಚ್ಚಿ…
ಗೌರಿಬಿದನೂರಿನ ಮಾದನಹಳ್ಳಿಯ ಬಳಿ ಪಿನಾಕಿನ ನದಿ ದಂಡೆ ಮೇಲೆ ಅಪ್ಪನ ಜಮೀನು, ಅದರಲ್ಲೇ ಮನೆ ಇತ್ತು. ಆದರೆ ರಸ್ತೆ ಇಲ್ಲ. ಪಕ್ಕದ ಜಮೀನನ್ನು ದಾಟಿಯೇ ಅಲ್ಲಿಗೆ ಬರಬೇಕು. ಹೀಗೇ ಬಂದ ಒಬ್ಬ ವ್ಯಕ್ತಿ ಬಾಗಿಲು ತಟ್ಟಿದರು. ನೋಡಿದರೆ ಪುಟ್ಟಣ್ಣ ಕಣಗಾಲ್ ! “ಮದರಾಸಲ್ಲಿ ನಿಮ್ಮ “ಆಸ್ಫೋಟ’ ನಾಟಕ ನೋಡಿದೆ- ಅದ್ಭುತವಾಗಿದೆ. ಸೀತಾರಾಮ್, ನೀವು ನನ್ನ ಜೊತೆ ಸಿನಿಮಾಕ್ಕೆ ಕೆಲಸ ಮಾಡಿ’ ಅಂದರು. ಟಿಎನ್‌ಎಸ್ ನಾಟಕ ಬರೆಯುತ್ತಿದ್ದರು, ಪಾತ್ರಗಳನ್ನು ಮಾಡುತ್ತಿದ್ದರು. ಆದರೆ ಹೊಟ್ಟೆ ತುಂಬಬೇಕಲ್ಲ? ಅದಕ್ಕೆ ವಕೀಲಿ ಮಾಡೇ ತೀರುತ್ತೇನೆ ಅಂತ ತೀರ್ಮಾನಿಸಿದ್ದವರು, ಮತ್ತೆ ಕೋಟು ಬಿಚ್ಚಿದರು.
ಕಟ್ಟೆ ಗುರುರಾಜ್
ಚಿತ್ರ- ಡಿ.ಸಿ.ನಾಗೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.