ಭರತನಾಟ್ಯದಲ್ಲಿ ಅರುಣೋದಯ
Team Udayavani, Feb 3, 2018, 3:46 PM IST
ಭರತನಾಟ್ಯ ಎಂದಮೇಲೆ ಅದಕ್ಕೆ ಮೃದಂಗದ ಸಾಥ್ ಇರಲೇಬೇಕು. ಮೃದಂಗ ಇಲ್ಲದ ಭರತನಾಟ್ಯವನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಅನ್ನೋ ಮಟ್ಟಿಗೆ ಅದನ್ನು ನಾಟ್ಯದ ಭಾಗ ಮಾಡಿಕೊಳ್ಳಲಾಗಿದೆ. ಹೀಗಿರುವಾಗ ಇಡೀ ಸಂಗೀತ ಜಗತ್ತು ಇತ್ತ ನೋಡುವಂತೆ ಮೃದಂಗದ ಬದಲಿಗೆ ಡ್ರಮ್ಸ್ ನುಡಿಸಿದ್ದಾರೆ ವಿದ್ವಾನ್ ಅರುಣ ಸುಕುಮಾರ್. ಭಾರತೀಯ ಕಲೆಗೆ ವಿದೇಶಿ ವಾದ್ಯವನ್ನು ಒಗ್ಗಿಸಿದ್ದು ಹೇಗೆ? ಇಲ್ಲಿ ಮಾತಾಗಿದ್ದಾರೆ.
ನೀವು ಭರತನಾಟ್ಯಕ್ಕೆ ಡ್ರಮ್ ನುಡಿಸಿದ್ದೀರಂತಲ್ಲಾ?
ಹೌದು, ಭರತನಾಟ್ಯದಲ್ಲಿ ಅಲ್ಲಾರಿಪು ಒಂದು ಭಾಗ. ಅದಕ್ಕೆ ನುಡಿಸಿದ್ದೇನೆ. ಇದೊಂದು ವಿಶಿಷ್ಟ ಪ್ರಯತ್ನ. ಅಲ್ಲಾರಿಪುವಿನಲ್ಲಿ ತಿಶ್ರಾ, ಚತುಶ್ರ, ಖಂಡ, ಮಿಶ್ರಾ, ಸಂಕೀರ್ಣ ತಾಳಗಳಿವೆ. ನಾನು ಖಂಡ ತಾಳವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅರಂಗೇಟ್ರಂಗಳಿಗೆ ರಿದಂ ಪ್ಯಾಡ್‌ಗಳನ್ನು ಬಳಸುವುದು ಹೊಸತೇನಲ್ಲ. ನಾನು ನೂರಾರು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಆದರೆ ಪರಿಪೂರ್ಣ ಶಾಸ್ತ್ರೀಯ ನೃತ್ಯಕ್ಕೆ ಡ್ರಮ್ಸ್ ಅನ್ನು ಬಳಸಿರುವುದು ಇದೇ ಮೊದಲು ಅನಿಸುತ್ತದೆ. ಡೇವ್‌ಬ್ರೂ ಬೇಕ್ ಹೆಸರಾಂತ ಜಾಸ್ ಸಂಗೀತಗಾರ, ಕಂಪೋಸರ್. ಇವರದು ಟೇಕ್ ಫೈ ಅನ್ನೋ ಕಂಪೋಸಿಷನ್‌ನಲ್ಲಿ ಪಿಯಾನೋ ಲೂಪ್ ಇದೆ. ಅದಕ್ಕೆ ಡ್ರಮ್ಸ್ ಅನ್ನು ಸೇರಿಸಿದ್ದೇನೆ. ಕಲಾವಿದೆ ಪ್ರೀತಿ ಭಾರದ್ವಾಜ್ ಭರತನಾಟ್ಯ ಮಾಡಿದ್ದಾರೆ.
ಅಲ್ಲಾ, ನಿಮ್ಮ ಡ್ರಮ್ ಪಾಶ್ಚಾತ್ಯ ವಾದ್ಯ. ಭರತನಾಟ್ಯ, ಸಾಂಪ್ರದಾಯಿಕ ಕಲೆ. ಹೀಗಿರಬೇಕಾದರೆ ಹೊಂದಾಣಿಕೆ ಹೇಗೆ ಸಾಧ್ಯ?
ಆಗುತ್ತೆ. ಎರಡರ ಸಿಲಬಸ್ ಬೇರೆ. ಗಣಿತ ಒಂದೇ. ಮೃದಂಗದ ಗಣಿತವೇ ಇಲ್ಲಿರುತ್ತದೆ. ಪಂದನಲ್ಲು ಶಾಲೆ, ತಂಜಾವೂರು ಶಾಲೆ, ಮೈಸೂರು ಶಾಲೆ.. ಹೀಗೆ ನಾನಾ ಕಡೆ ನಾನಾ ರೀತಿ ಹೇಳಿಕೊಡುತ್ತಾರೆ. ನನಗೆ ಈಗಾಗಲೇ ಮೃದಂಗದ ಗಣಿತವನ್ನು ಡ್ರಮ್ಸ್‌ನಲ್ಲಿ ನುಡಿಸಿದ ಅನುಭವವಿರುವುದರಿಂದ ಭರತನಾಟ್ಯಕ್ಕೆ ನುಡಿಸೋದು ಕಷ್ಟವೇನೂ ಆಗಲಿಲ್ಲ. ಮೃದಂಗದಲ್ಲಿ ತಕಧಿಮಿ ತಕಜಣು, ತಕಧಿಮಿ ತಕಜಣು ಅಂದರೆ ಭರತನಾಟ್ಯದಲ್ಲಿ ಥೈ ಥೈ ದಿದಿ ಥೈ ಅಂತಾರೆ.
ಮೃದಂಗವಿಲ್ಲದ ಭರತನಾಟ್ಯವನ್ನು ಹೇಗೆ ಕಲ್ಪಿಸಿಕೊಳ್ಳೋದು? ಕಷ್ಟ ಅಲ್ಲವೇ?
ಖಂಡಿತ, ನೂರಾರು ವರ್ಷಗಳಿಂದ ಮೃದಂಗದೊಂದಿಗೆ ಭರತನಾಟ್ಯವನ್ನು ನೋಡಿದ್ದರಿಂದ ಆ ಜಾಗದಲ್ಲಿ ಡ್ರಮ್ ಕಂಡಾಗ ಸ್ವಲ್ಪ ನಾದ ಬದಲಾವಣೆಯಾಗುತ್ತದೆ. ಮೃದಂಗದ ಗುಮಕಿ, ಛಾಪುಗಳು ಮಿಸ್ ಆಗುತ್ತವೆ. ಹೊಸ ಪ್ರಯೋಗ ಅಂತ ಮಾಡಬೇಕಾದರೆ ಸಾಂಪ್ರದಾಯಿಕ ನಡೆಯಲ್ಲಿ ಬ್ರೇಕ್ ಆಗುವುದು ಸಹಜ. ಈ ಮಿಸ್ ಆಗುತ್ತಲ್ಲ. ಅಲ್ಲಿಯೇ ಹೊಸತೇನಾದರೂ ಹುಟ್ಟೋದು. ಅಲ್ವೇ?
ನಿಮ್ಮ ಈ ಪ್ರಯೋಗಕ್ಕೆ ಪ್ರತಿಕ್ರಿಯೆ ಹೇಗಿತ್ತು?
ನನ್ನ ವಯೋಮಾನದವರಿಗೆ ಇಷ್ಟವಾಯಿತು.ಹೆಚ್ಚೆಚ್ಚು ಶಾಸ್ತ್ರೀಯತೆಯನ್ನು ನಿರೀಕ್ಷಿಸುವವರಿಗೆ ಇದು ಇಷ್ಟವಾಗಲಿಲ್ಲ ಎನಿಸುತ್ತದೆ. ಇಲ್ಲಿ ಕಮ್ಯುನಿಕೇಷನ್ ಮುಖ್ಯ. ಮೃದಂಗ ಕೂಡ ಅದೇ ಮಾಡೋದು. ಹಾಗಂತ ನಾನೇನು ತಪ್ಪು ಮಾಡ್ತಿಲ್ಲವಲ್ಲ? ಹೊಸದೊಂದು ಪ್ರಯೋಗ ಮಾಡ್ತಾ ಇದ್ದೀನಿ ಅಷ್ಟೆ. ಹಿಂದೆ ರಮಾಮಣಿ ಮೇಡಮ್ ವೋಕಲ್‌ಗೆ ಡ್ರಮ್ ನುಡಿಸಿದಾಗ ಇದೇ ರೀತಿ ಮೃದಂಗ ಮಿಸ್ ಆಯ್ತು ಅನ್ನೋ ಮಾತು ಕೇಳಿದ್ದೆ. ಎಷ್ಟೋ ಜನ ಎರಡೂವರೆ ಗಂಟೆ ಬರೀ ಡ್ರಮ್ ಒಂದೇನೇ ಕೇಳಕ್ಕಾಗಲ್ಲ ಅಂದಿದ್ದರು. ಇದು ನಿಜ. ವಾಸ್ತವ ಕೂಡ. ನಾನು ಒಪ್ಪಿಕೊಳ್ತೀನಿ. ಆದರೆ ಪ್ರಯೋಗ ಅಂತೇನಾದರೂ ಮಾಡಬೇಕಲ್ವಾ?
ಮೃದಂಗದ ಫೀಲ್ ಹಿಡಿಯಲು ಏನು ಮಾಡಬೇಕು ಅಂತೀರ?
ಎಲೆಕ್ಟ್ರಾನಿಕ್ಸ್ ಸ್ಯಾಂಪ್ಲರ್‌ಗಳನ್ನು ಬಳಸಿ ಫೀಲ್ ತರಬಹುದು. ಆದರೆ ಮೃದಂಗದ ಜಾಗ ತುಂಬಕ್ಕಾಗಲ್ಲ. ಅದು ರಾಜವಾದ್ಯ. ನಮ್ಮ ಸಂಗೀತ ವಾದ್ಯಗಳಲ್ಲಿ ವಿಶೇಷ ಝೇಂಕಾರ ಇರುತ್ತದೆ. ಉದಾಹರಣೆಗೆ ಮೃದಂಗದ ಛಾಪು, ಉರುಟುಗಳು. ಇವನ್ನು ನಮ್ಮ ಎಲೆಕ್ಟ್ರಾನಿಕ್ ವಾದ್ಯಗಳಲ್ಲಿ ತರುವುದು ಕಷ್ಟ. ಹೀಗಾಗಿ ಎಲೆಕ್ಟ್ರಾನಿಕ್ ಸ್ಯಾಂಪ್ಲರ್‌ಗಳನ್ನು ಬಳಸುತ್ತಾ, ಅಡಗು, ತಟ್ಟಡಗು ಬಂದಾಗ ಡ್ರಮ್ಸ್ ನುಡಿಸುವ ಪ್ರಯೋಗ ಮಾಡಬೇಕು. ಆಗ ಕೇಳುಗರಿಗೆ ಮೃದಂಗವನ್ನು ಮಿಸ್ ಮಾಡಿಕೊಂಡ ಫೀಲ್ ಹುಟ್ಟೋಲ್ಲ.
ನಿಮ್ಮ ಪ್ರಯೋಗವನ್ನು ಭರತ ನಾಟ್ಯ ಕಲಾವಿದರು ಒಪ್ಪುತ್ತಾರಾ?
ಖಂಡಿತ ಒಪ್ಪುತ್ತಾರೆ. ಇಲ್ಲಿ ನನ್ನದೇನೂ ಇಲ್ಲ. ಅವರು ಹೇಳಿದ್ದನ್ನು ನನ್ನ ಡ್ರಮ್ ಭಾಷೆಯಲ್ಲಿ ನುಡಿಸುತ್ತೇನೆ. ನನ್ನ ನುಡಿಸಾಣಿಕೆ ಅವರಿಗೆ ಡಿಸ್ಟರ್ಬ್ ಆಗಬಾರದು. ಹೀಗೆ ಆಗಬಾರದು ಅಂದರೆ ಡ್ರಮ್ಮರ್‌ಗೆ ಕರ್ನಾಟಕ ಸಂಗೀತ, ಪಾಶ್ಚಾತ್ಯ ಸಂಗೀತ ಎರಡೂ ಗೊತ್ತಿರಬೇಕು. ಸಂಗತಿಗಳನ್ನು ಹೇಗೆ ಭರತನಾಟ್ಯಕ್ಕೆ ಒಗ್ಗಿಸಬೇಕು ಅನ್ನೋದು ತಿಳಿದಿರಬೇಕು.
ಈ ಹಿಂದೆ ಇಂಥ ಪ್ರಯೋಗ ಮಾಡಿದ್ದಿರಾ?
ಬೇಕಾದಷ್ಟು. ನಮ್ಮ ಮೇಷ್ಟ್ರು ಆನೂರು ಅನಂತಕೃಷ್ಣ ಶರ್ಮ ಅವರ ವೋಕಲ್‌ಗೆ ಹಾಗೂ ತವಿಲ್‌ಗೆ ರಿದಂ ಪ್ಯಾಡ್ ಅನ್ನು ಒಗ್ಗಿಸುವ ಪ್ರಯೋಗಗಳನ್ನು ಮಾಡಿದ್ದೇನೆ. ಅವು ಯಶಸ್ವಿಯೂ ಆಗಿವೆ. ನನಗೆ ಕರ್ನಾಟಕಿ ಮತ್ತು ಡ್ರಮ್‌ನ ಪಾಶ್ಚಾತ್ಯ ಸಂಗೀತ ಭಾಷೆ ಗೊತ್ತಿರುವುದರಿಂದ ಒಗ್ಗಿಸುವುದು ಕಷ್ಟವಾಗುತ್ತಿಲ್ಲ. ನಮ್ಮ ಹಿರಿಯರು ಬಹಳಷ್ಟು ಮಾಡಿಟ್ಟಿದ್ದಾರೆ. ಬಾಲಮುರಳಿ ಅವರ ತಿಲ್ಲಾನಗಳು, ಆನೂರು ಸೂರಿ ಅವರ ಪುಷ್ಪಾಂಜಲಿ ಇವೆ. ಅದರ ಮೇಲೆ ಡ್ರಮ್ ನುಡಿಸಿದರೆ ಸಾಕು. ಎಲ್ಲ ಅಂಶಗಳಿಂದ ಭರತನಾಟ್ಯಕ್ಕೆ ನುಡಿಸೋದೇ ಪ್ಯಾಷನೇಟ್‌ನನಗೆ. ಭರತನಾಟ್ಯದ ರಿದಮಿಕ್ ಬಹಳ ಇಷ್ಟ. ಹಾಗಾಗಿ ಇಂಥ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ.
ನಿಮ್ಮದು ಡ್ರಮ್ ಕುಟುಂಬ, ಭರತ ನಾಟ್ಯದ ನಂಟು ಹೇಗೆ ಬೆಳೀತು?
ನಮ್ಮ ಮನೆಯಲ್ಲಿ ಡ್ರಮ್ ಗಿಂತ ಮೊದಲು ಭರತ ನಾಟ್ಯವಿತ್ತು. ನಮ್ಮ ಅತ್ತೆ ಬಿ.ಎಸ್. ಸುನಂದಾ ದೇವಿ ಆ ಕಾಲದ ದೊಡ್ಡ ಭರತನಾಟ್ಯ (ಕೂಚುಪುಡಿ) ಕಲಾವಿದೆ. ನಟರಾಜ ರಾಮಕೃಷ್ಣರ ಶಿಷ್ಯೆಯಾಗಿದ್ದರು. ಆಮೇಲೆ ಆನೂರು ಸೂರಿ ಅವರ ಪ್ರಭಾವ ದಟ್ಟವಾಗಿತ್ತು. ಸೂರಿ ತಾತ ಭರತನಾಟ್ಯದಲ್ಲಿ ನಟುವಾಂಗ, ಜತಿ ಹೇಳಿಕೊಂಡು ಹಾಡುವ ಏಕೈಕ ಕಲಾವಿದರಾಗಿದ್ದರು. ಹೀಗಾಗಿ ನಾನೂ ಸೂರಿ ತಾತನಿಂದ ಭರತನಾಟ್ಯ ಕಲಿತೆ. ಆನಂತರ ನಮ್ಮ ಅತ್ತೆ ಹೇಳಿಕೊಟ್ಟರು. ಅಪ್ಪನ ಪ್ರಭಾವದಿಂದ ಡ್ರಮ್ ಕಲಿಯಲು ಮುಂದಾದೆ. ಆಮೇಲೆ ಮೃದಂಗ ಕಲಿತೆ. ಹೀಗಾಗಿ ಭರತನಾಟ್ಯದ ಬೇಸಿಕ್, ಮೃದಂಗದ ನುಡಿಸಾಣಿಕೆ ಪರಿಚಯವಿದ್ದುದರಿಂದ.. ಡ್ರಮ್ ಅನ್ನೋ ಪಾಶ್ಚಾತ್ಯ ವಾದ್ಯವನ್ನು ಭರತನಾಟ್ಯಕ್ಕೆ ಏಕೆ ಒಗ್ಗಿಸಬಾರದು ಅಂತ ಈ ಪ್ರಯೋಗ ಮಾಡಿದೆ.
ಬೇರೆಯವರು ಏಕೆ ಇಂಥ ಪ್ರಯೋಗಕ್ಕೆ ಕೈ ಹಾಕೋಲ್ಲ?
ವಾಸ್ತವ ಏನೆಂದರೆ, ಪ್ರಯೋಗ ಮಾಡುವ ಕಲಾವಿದರಿಗೆ, ಕರ್ನಾಟಕ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಈ ಎರಡೂ ತಿಳಿದಿದ್ದರೆ ಮಾತ್ರ ಇದು ಸಾಧ್ಯ. ಮುಖ್ಯವಾಗಿ ಎರಡೂ ತಿಳಿದಿದ್ದರೂ ಹೀಗೂ ಮಾಡಬಹುದಲ್ಲ ಎನ್ನುವ ಆಸಕ್ತಿ, ಕುತೂಹಲ ಕೂಡ ಇರಬೇಕಾಗುತ್ತದೆ. ನಮ್ಮ ಎರಡೂ ಶಾಸ್ತ್ರಗಳನ್ನು, ಗಣಿತಗಳನ್ನು ತಿಳಿದವರು ಬಹಳ ಕಡಿಮೆ.
ಕಟ್ಟೆ ಗುರುರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.