ವಿದ್ಯೆ ಎಂಬುದು ಕದಿಯಲಾಗದ ಸಂಪತ್ತು
Team Udayavani, May 4, 2019, 9:04 AM IST
ಮನುಷ್ಯ ಗಡ್ಡೆಗೆಣಸುಗಳನ್ನು ತಿಂದುಕೊಂಡಿದ್ದ ಕಾಲದಲ್ಲಿಯೂ ಯಾವುದನ್ನು ತಿನ್ನಬೇಕು? ಯಾವುದನ್ನು ತಿನ್ನಬಾರದು? ಎಂಬ ಜ್ಞಾನ ಬೇಕೇ ಬೇಕಿತ್ತು. ಕಾಡಿನಲ್ಲಿ ಸಿಗುವ ಎಲ್ಲಾ ಗೆಡ್ಡೆಗೆಣಸು ಅಥವಾ ಹಣ್ಣುಗಳು ತಿನ್ನಲು ಯೋಗ್ಯವಾದವುಗಳಲ್ಲ. ಕೆಲವು ವಿಷಪೂರಿತ ಗಡ್ಡೆಹಣ್ಣುಗಳೂ ಇವೆ. ಹಾಗಾಗಿ,ಯಾವುದು ಯೋಗ್ಯ ಎಂಬುದನ್ನು ಅರಿತುಕೊಳ್ಳುವ ಜ್ಞಾನ ಬೇಕೇ ಬೇಕು. ಈ ರೀತಿ ಬದುಕಿನ ವಿವೇಚನೆ ತಿಳಿಸುವ ವಿದ್ಯೆ ನಮ್ಮೊಳಗೆ ನಾವು ಬೆಳೆಸಿಕೊಳ್ಳುವ, ನಮ್ಮನ್ನು ನಾವು ಬೆಳೆಸಿಕೊಳ್ಳುವ ವಿಶೇಷವಾದ ಬುದ್ಧಿಯ ರೂಪ. ಬದುಕನ್ನು ರೂಪಿಸಿಕೊಳ್ಳಲು ಬೇಕಾಗುವ ವಿಶೇಷವಾದ ಪರಿಕರ ಈ ವಿದ್ಯೆ.
ಒಂದು ಸಂಸ್ಕಾರ, ಒಂದು ಸನ್ನಡತೆ, ಒಂದು ಸದ್ವಿಚಾರ, ಒಂದು ಸುಖಜೀವನ, ಒಂದು ಸುಂದರ ದಾಂಪತ್ಯ, ಒಂದು ಸರಳ ಸಂಸಾರ, ಒಂದು ಶಕ್ತಿಯುತ ಸಮಾಜ, ಒಂದು ವಿಶೇಷವಾದ ದೇಶ ಆಮೇಲೆ ಜಗತ್ತು ಎಲ್ಲವಕ್ಕೂ ವಿದ್ಯೆ ಎಂಬ ಸಾಧನ ಅಗತ್ಯ. ಗೆಲುವಿಗೆ ಮೊದಲು ಆತ್ಮವಿಶ್ವಾಸ ಬೇಕು. ಈ ಆತ್ಮವಿಶ್ವಾಸ ಹೆಚ್ಚಲು ಅಥವಾ ಸರಿಯಾದ ಮಾರ್ಗದಲ್ಲಿ ಗುರಿ ತಲುಪಲು ವಿದ್ಯೆ ಬೇಕು. ಈ ವಿದ್ಯೆ ಬದುಕನ್ನು ಹಸನಾಗಿಸುವಲ್ಲಿ ಒಂದಲ್ಲ, ಸಾವಿರ ದಾರಿ ತೋರುತ್ತದೆ. ವಿದ್ಯೆಯ ವಿಶೇಷ ಗುಣವೆಂದರೆ ಅದು ಕೇವಲ ಒಬ್ಬನ ಜೀವನವನ್ನು ಕಟ್ಟಿಕೊಡುವುದಷ್ಟೇ ಅಲ್ಲ, ಒಂದು ದೇಶದ ಬೆಳವಣಿಗೆಯನ್ನೂ ಆ ದೇಶದ ಸಂಸ್ಕೃತಿಯನ್ನೂ ಉನ್ನತ ಹಂತಕ್ಕೆ ಕೊಂಡೊಯ್ಯುತ್ತದೆ. ವಿದ್ಯೆ ಸಂಪತ್ತೂ ಹೌದು; ಸಂಸ್ಕಾರವೂ ಹೌದು.
ನೀತಿ ಶತಕ ವಿದ್ಯೆಯ ಬಗ್ಗೆ ಹೀಗೆ ಹೇಳಿದೆ;
ವಿದ್ಯಾ ನಾಮ ನರಸ್ಯ ರೂಪಮಧಿಕಂ ಪ್ರಚ್ಚನ್ನಗುಪ್ತಮ… ಧನಂ
ವಿದ್ಯಾ ಭೋಗಕರೀ ಯಶಸ್ಸುಖಕರೀ ವಿದ್ಯಾ ಗುರೂಣಾಂ ಗುರುಃ |
ವಿದ್ಯಾ ಬಂಧುಜನೋ ವಿದೇಶಗಮನೇ ವಿದ್ಯಾ ಪರದೇವತಾ
ವಿದ್ಯಾ ರಾಜಸು ಪೂಜಿತಾ ನ ತು ಧನಂ ವಿದ್ಯಾವಿಹೀನಃ ಪಶುಃ ||
ವಿದ್ಯೆ ಎಂಬುದು ಮನುಷ್ಯನ ವಿಶೇಷವಾದ ರೂಪ; ಮತ್ತು ಅದು ಅವನ ಬಚ್ಚಿಡಲ್ಪಟ್ಟ ಹಣ. ವಿದ್ಯೆಯೇ ಅವನಿಗೆ ಸುಖಾಸುಖಗಳನ್ನೂ ಕೀರ್ತಿಯನ್ನೂ ಉಂಟು ತಂದುಕೊಡುತ್ತದೆ. ಅದು ಅವನ ಗುರುಗಳಿಗೆ ಗುರು! ಪರದೇಶಗಳಿಗೆ ಹೊರಟಾಗ ಅದೇ ಅವನ ಬಂಧು. ಅದೇ ಅವನಿಗೆ ಪರದೈವ. ಅದು ರಾಜರಲ್ಲಿ ಪೂಜಿಸಲ್ಪಟ್ಟಿದೆ; ಆದರೆ, ಹಣವಲ್ಲ. ವಿದ್ಯೆ ಇಲ್ಲದವನು ಪಶುವಿಗೆ ಸಮಾನ!
ಇವಿಷ್ಟು ಸಾಕು, ವಿದ್ಯೆ ಎಂಬ ಶಕ್ತಿಯ ನಿಜವಾದ ಬಲ, ಆಳ ಮತ್ತು ವಿಶಾಲವನ್ನು ತಿಳಿಯಲು. ವಿದ್ಯೆ ಎಂಬುದು ನಮ್ಮೊಳಗಿನ ವಿಶೇಷ ರೂಪ. ಭಿಕ್ಷೆ ಬೇಡಿಯಾದರೂ ವಿದ್ಯೆಯನ್ನು ಸಂಪಾದಿಸಿಕೊಂಡವನಿಗೆ ಜೀವನ ಸಾಗಿಸಲು ಜೀವನಕ್ಕಾಗಿ ಪರದಾಡುವ ಸ್ಥಿತಿ ಬಾರದು. ವಿದ್ಯೆ ಎಂಬ ಬಂಧು ನಮ್ಮ ಜೋಳಿಗೆಯಲ್ಲಿ ಇ¨ªಾಗ ಬದುಕು ದಿಕ್ಕು ತಪ್ಪುವುದಿಲ್ಲ. ಸ್ವದೇಶವಾಗಲೀ ವಿದೇಶವಾಗಲೀ ಜಯಿಸುವುದಕ್ಕೆ ಈ ವಿದ್ಯೆ ಎಂಬ ಅಸ್ತ್ರ ಸಾಕು. ವಿದ್ಯೆ ಎಂಬುದು ಯಾರೂ ದೋಚಲಾಗದ, ಎಲ್ಲಾ ಸಂಪತ್ತಿಗಿಂತ ಮಿಗಿಲಾದ ಸಂಪತ್ತು. ದೇಶದ ದೊರೆ ಕೂಡ ವಿದ್ಯೆಗೆ ತಲೆ ಬಾಗುತ್ತಾನೆ. ವಿದ್ಯೆ ಇದ್ದವನು ರಾಜನಿಂದಲೂ ಪುರಸ್ಕೃತನಾಗುವನು. ವಿದ್ಯೆ ಇಲ್ಲದವ ಪ್ರಾಣಿಗಿಂತ ಕಡೆ!
ಗುರುವಿಗೆ ಗುರುವೇ ವಿದ್ಯೆ. ವಿದ್ಯೆ ಪಡೆಯಲೊಬ್ಬ ಗುರು ಬೇಕು. ಆ ಗುರುವನ್ನು ಗುರುವಾಗಿಸಿದ್ದು ಈ ವಿದ್ಯೆ. ಗುರು ಕಲಿಸುತ್ತಾ ಕಲಿಯುತ್ತಾನೆ. ವಿದ್ಯೆಯೇ ಗುರುವಿಗೆ ಗುರುವಾಗಲು ಅರಿವಿನ ಹಾದಿ. ಈ ಗುರುವಿನ ಗುರು ಸಂಸ್ಕಾರದ ಪರಿಧಿ; ಬದುಕಿನ ಅನಂತತೆ!
ಭಾಸ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.