ಒಂಟಿ ಒಂಟಿಯಾಗಿರುವುದು…
Team Udayavani, Dec 23, 2017, 3:33 PM IST
ಹಳ್ಳಿಗಳು ವೃದ್ಧಾಶ್ರಮಗಳು ಅನ್ನೋ ಮಾತು ಈಗ ಹಳೆಯದಾಗುತ್ತಿದೆ. ನಗರ ಪ್ರದೇಶದಲ್ಲೇ ಎಷ್ಟೋ ಮನೆಗಳು ವೃದ್ಧಾಶ್ರಮಗಳಾಗುತ್ತಿವೆ. ನಗರದಲ್ಲಿರುವ ಮಕ್ಕಳು ಹೆತ್ತವರನ್ನು, ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಬಿಟ್ಟು ವರ್ಷಾನುಗಟ್ಟಲೆ ವಿದೇಶಕ್ಕೆ ಹೋಗುವುದುಂಟು. ಮಕ್ಕಳು ಹೆತ್ತವರನ್ನು ಬಿಟ್ಟು ಅಲ್ಲೇ ನೆಲೆಸಿ, ಆ ದೇಶದ ಪ್ರಜೆಯಾಗುವುದು ಉಂಟು. ಇಂಥ ಸಂದರ್ಭದಲ್ಲೇ ವೃದ್ಧಾಶ್ರಮಗಳು, ಒಂಟಿತನದ ಬದುಕು ಶುರುವಾಗುವುದು.
ಮಾಲ್‌ಗಳಲ್ಲಿ, ತರಕಾರಿ ಮಾರ್ಕೆಟ್‌ಗಳಲ್ಲಿ, ಸಿನಿಮಾ ಥಿಯೇಟರ್ ಗಳಲ್ಲಿ ಇವರು ಒಬ್ಬೊಬ್ಬರೇ ಅಥವಾ ಇಬ್ಬಿಬ್ಬರು ಓಡಾಡುತ್ತಿರುವರನ್ನೋ ನೋಡಿರುತ್ತೀರಿ. ಇವರ ಜೊತೆಗೆ ಯಾರೂ ಇರುವುದಿಲ್ಲ. ಇವರದೇ ಒಂದು ಪ್ರಪಂಚ. ಇವರೂ ಯಾರನ್ನೂ ನಂಬುವುದಿಲ್ಲ. ನಾನು, ನನ್ನ ಜೀವನ ಅನ್ನೋ ರೀತಿ ಬದುಕುತ್ತಿರುತ್ತಾರೆ. ಒಂಟಿತನ ಇವರ ಸಂಗಾತಿ. ಜೀವನದಲ್ಲಿ ಯಾರನ್ನೂ ನಂಬದವರು ಏಕಾಂತ, ಒಂಟಿತನವನ್ನು ಪ್ರೀತಿಸುತ್ತಾರೆ.
ಇನ್ನೂ ಕೆಲವರಿದ್ದಾರೆ. ಭೂತ ಬಂಗಲೆಯಂಥ ಮನೆಯಲ್ಲಿ ಬರೀ ಗಂಡ-ಹೆಂಡತಿ. ಅಡುಗೆ ತಿಂಡಿ ಮಾಡಲು ಕೆಲಸದಾಳು. ಪ್ರತಿ ದಿನ ಇವರ ಮುಖ ಅವರು, ಅವರ ಮುಖ ಇವರು ನೋಡಿಕೊಂಡೇ ಬದುಕನ್ನು ನೂಕುತ್ತಿರುತ್ತಾರೆ. ಜಗತ್ತಿನ ಸಂಪರ್ಕವೇ ಇವರಿಗಿರುವುದಿಲ್ಲ. ಸಂಬಂಧಿಕರು, ಸ್ನೇಹಿತರು, ದೂರದ ಬಂಧುಗಳೆಲ್ಲರೂ ಊಟಕ್ಕೆ ಉಪ್ಪಿನಕಾಯಿ ರೀತಿ. ಮದುವೆ, ಮುಂಜಿ, ಸತ್ಯನಾರಾಯಣ ಪೂಜೆ, ಹುಟ್ಟಿದ ಹಬ್ಬ, ನಾಮಕರಣ ಹೀಗೆ ಏನೇ ಸಂಭ್ರಮಗಳು ಇವರಿಗೆ ಖುಷಿಪಡಲು ನೆಪವಾಗಿರುವುದೇ ಇಲ್ಲ. ಮನೆಯಲ್ಲಿ ಹಳೇ ಸಿಂಹಗಳಂತೆ ಓಡಾಡಿಕೊಂಡೋ ಇರುವ ಈ ವೃದ್ಧ ದಂಪತಿಗಳ ಮನಸ್ಸು ಘೋರ. ಮಕ್ಕಳ ಪ್ರೀತಿ ಇಲ್ಲದೇ ಒದ್ದಾಡುತ್ತಿರುತ್ತಾರೆ.
ಇವರೇಕೆ ಒಂಟಿ?
ಕೆಲವರಿಗೆ ಮಕ್ಕಳೇ ಇಲ್ಲದೇ, ಕೆಲವರಿಗೆ ಮಕ್ಕಳಿದ್ದರೂ ವಿದೇಶಕ್ಕೆ ಹಾರಿಬಿಟ್ಟು ಪ್ರೀತಿ ಕಳೆದುಕೊಂಡವರು. ಇನ್ನೂ ಕೆಲವರು ಗಂಡನನ್ನೋ, ಹೆಂಡತಿಯನ್ನೋ ಕಳೆದುಕೊಂಡು ಒಂಟಿಯಾಗಿರುವವರು. ನಾನಿರುವಾಗ ನಿಮಗೇತಕ್ಕೆ ಭಯ ಅನ್ನೋ ಮಕ್ಕಳು ಇವರಿಗೆ ಇಲ್ಲ. ಅಂಥ ಕೊರಗು ಅವರ ಜೀವನದ ದಿಕ್ಕನ್ನೇ ಬದಲಿಸಿರುತ್ತದೆ. ಬೆಂಗಳೂರಂಥ ಮೆಟ್ರೋ ಸಿಟಿಗಳು ಎಷ್ಟೇ ಭದ್ರವಾಗಿದ್ದರೂ ಇಂಥ ವರ್ಗ ಯಾವತ್ತೂ ಅಭದ್ರವೇ. ಕೂಡು ಕುಟಂಬಗಳಿದ್ದಾಗ ಇಂಥ ಭಾವನೆ ಇರಲಿಲ್ಲ. ಈಗ ನಾನು, ನನ್ನ ಮಕ್ಕಳು ಎನ್ನುವ ನ್ಯೂಕ್ಲಿಯರ್ ಫ್ಯಾಮಿಲಿ ತತ್ವ ಹೆಚ್ಚಿರುವುದರಿಂದ, ಮೆಟ್ರೋ ಸಿಟಿಗಳ ಒಂಟಿ ಬದುಕಂತೂ ಯಾತನಾಮಯ. ನಗರಗಳು ಎಷ್ಟೇ ಸೇಫ್ ಆಗಿರಲಿ, ಎಷ್ಟೇ ಸೌಲಭ್ಯಗಳು ನೀಡಿರಲಿ. ಮಕ್ಕಳಿಲ್ಲದ, ಇದ್ದೂ ದೂರವಾಗಿರುವ, ಆಗತಾನೇ ತವರಿಗೆ ಕಳುಹಿಸಿದ ಹೆತ್ತವರ ವರ್ಗ ಈ ಅಜ್ಜ, ಅಜ್ಜಿಯಂತೆಯೇ ಪರಿತಪಿಸುತ್ತಾ ಜೀವನ ಸಮುದ್ರದ ನಾವಿಕರಾಗಿರುತ್ತಾರೆ. ಯಾವಾಗ ಅಲೆಗಳು ಅಪ್ಪಳಿಸುತ್ತವೋ ಎನ್ನುವಆಂತಕ ಇವರನ್ನು ಸದಾ ಕಾಡುತ್ತಿರುತ್ತದೆ.
ಮುಂದಿನ ಬದುಕು ಹೇಗಿರಬೇಕು? ಅದಕ್ಕೆ ನಾವು ಏನು ಮಾಡಬೇಕು? ನಮ್ಮ ಊಟ, ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು? ವೃದ್ಧಾಪ್ಯದ ಬದುಕು ಹೇಗಿರಬೇಕು? ನಮ್ಮ ನಂತರ ಆಸ್ತಿ ಯಾರಿಗೆ ಸೇರಬೇಕು? ಎಲ್ಲದಕ್ಕೂ ಇವರು ಹಲವು ವರ್ಷಗಳಿಂದಲೇ ಪ್ರಿಪೇರ್ ಆಗಿಬಿಟ್ಟಿರುತ್ತಾರೆ. ಅದಕ್ಕಾಗಿ ತಮಗೆ ಸೇಫ್ ಆನ್ನೋ ನಂಬಿಕೆ ಇರೋ ಕಡೆ ಮನೆ ಮಾಡುತ್ತಾರೆ, ರಾತ್ರಿ ಹೊತ್ತು ಹೊರಬಾಗಿಲನ್ನು ಭದ್ರಪಡಿಸಿದರೂ ರೂಮಿನ ಬಾಗಿಲು ಹಾಕದೇ ಮಲಗುತ್ತಾರೆ, ಔಷಧಿಗಳೆಲ್ಲವೂ ಕೈಗೆ ಸಿಗುವಂತೆ ಇಟ್ಟುಕೊಂಡಿರುತ್ತಾರೆ. ಇಷ್ಟಾದರೂ ಅಭದ್ರತೆ, ಭಯದ ಸುತ್ತಲೇ ಜೀವನ ಹಂಚಿಕೊಂಡಿರುತ್ತಾರೆ.
ಇದಕ್ಕೆ ಯಾರು ಕಾರಣ?
ಇವರ ಈ ಸ್ಥಿತಿಗೆ ಇಂಥವರೇ ಕಾರಣ ಎಂದು ಬೊಟ್ಟು ಮಾಡುವುದು ಕಷ್ಟ. ಇಡೀ ನಮ್ಮ ವ್ಯವಸ್ಥೆ ಇದರ ಹಿಂದೆ ಇದೆ. ಒಂದು ರೀತಿ ವಿದೇಶ ಸಂಸ್ಕೃತಿಯ ಬಳುವಳಿ. ನಮ್ಮಲ್ಲಿ ಕೂಡು ಕುಟುಂಬ ವ್ಯವಸ್ಥೆ ಇದ್ದಾಗ ಇಂಥ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ನ್ಯೂಕ್ಲಿಯರ್ ಫ್ಯಾಮಿಲಿಗಳು ಹೆಚ್ಚಾಗುತ್ತಿರುವುದರಿಂದ ಒಬ್ಬರನ್ನು ಒಬ್ಬರು ಅವಲಂಬಿಸುವ ಸಾಧ್ಯತೆ ಹೆಚ್ಚು. ಇಲ್ಲಿ ಒಂದು ಸರಪಳಿ ತುಂಡಾದರೂ ಏಕಾಂತ ಎಂಬ ಸಮುದ್ರಕ್ಕೆ ಧುಮುಕುತ್ತಾರೆ. ಇಂಥವರ ಬದುಕಿನ ವಿಚಾರದಲ್ಲಿ ಏಕಾಂತ ಸ್ವಲ್ಪ ಡೇಂಜರ್. ಭಾವನಾತ್ಮಕ, ದೈಹಿಕ, ಮನೋಸಾಮಾಜಿಕ ಪರಿಣಾಮಗಳನ್ನು ಇದೇ ಒಂಟಿತನ ಬೀರುತ್ತದೆ. ಯೋಚನಾ ಶಕ್ತಿ ವಯಸ್ಸಾದಂತೆ ಕಡಿಮೆಯಾಗುತ್ತದೆ. ರಕ್ತ ಬಿಸಿಯಾಗಿದ್ದಾಗ ಏಕಾಂತ/ಒಂಟಿತನವನ್ನು ಸಂಭಾಳಿಸುವುದು ತೀವ್ರ ಕಷ್ಟ ಎನಿಸುವುದಿಲ್ಲ. ಆದರೆ ವಯಸ್ಸಾದ ನಂತರದ ಪರಿಸ್ಥಿತಿ ಬೇರೆ. ಅವರು ವಾಸ್ತವವನ್ನು ಒಪ್ಪುವುದಿಲ್ಲ. ಬದಲಾಗಿ ಗತಕಾಲದ ನೆನಹುಗಳಲ್ಲೇ ಬದುಕುತ್ತಿರುತ್ತಾರೆ.ಇಂಥವರು ಒಂಟಿಯಾಗಿ ಬದುಕುವಂತಾದರೆ ಎಮಿrನೆಸ್ ಸಿಂಡ್ರೋಮ್‌ಗೆ ಕಾರಣವಾಗಬಹುದು. ಹೇಳಿಕೊಳ್ಳಲು ಯಾರೂ ಇರುವುದಿಲ್ಲ.
ಪಟ್ಟಣದಿಂದ ಪಟ್ಟಣಕ್ಕೆ
ಹಳ್ಳಿಗಳು ವೃದ್ಧಾಶ್ರಮಗಳು ಅನ್ನೋ ಮಾತು ಈಗ ಹಳೆಯದಾಗುತ್ತಿದೆ. ನಗರ ಪ್ರದೇಶದಲ್ಲೇ ಎಷ್ಟೋ ಮನೆಗಳು ವೃದ್ಧಾಶ್ರಮಗಳಾಗುತ್ತಿವೆ. ನಗರದಲ್ಲಿರುವ ಮಕ್ಕಳು ಹೆತ್ತವರನ್ನು, ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಬಿಟ್ಟು ವರ್ಷಾನುಗಟ್ಟಲೆ ವಿದೇಶಕ್ಕೆ ಹೋಗುವುದುಂಟು. ಮಕ್ಕಳು ಹೆತ್ತವರನ್ನು ಬಿಟ್ಟು ಅಲ್ಲೇ ನೆಲೆಸಿ, ಆ ದೇಶದ ಪ್ರಜೆಯಾಗುವುದು ಉಂಟು. ಇಂಥ ಸಂದರ್ಭದಲ್ಲೇ ವೃದ್ಧಾಶ್ರಮಗಳು, ಒಂಟಿತನದ ಬದುಕು ಶುರುವಾಗುವುದು. ಮಕ್ಕಳಿಲ್ಲದ ಇವರು ಜೀವನದಲ್ಲಿ ಒಂದು ಅನಾಥ ಮನೋಭಾವನೆಯಲ್ಲೇ ಬದುಕುವುದು.ಯಾರಿಗೋಸ್ಕರ ಸಂಪಾದನೆ ಮಾಡಬೇಕು? ಸಂಪಾದನೆ ಮಾಡಿ ಯಾರನ್ನು ಸಾಕಬೇಕು? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಲೇ ಇರುತ್ತಾರೆ. ಇವರಿಗೆ ಸಾವು ನೆರಳಾಗಿರುತ್ತದೆ ಅಥವಾ ಸಾವು ನಮ್ಮ ಜೊತೆಯಲ್ಲೇ ಇದೆ ಅನ್ನೋದು ಇವರಿಗೆ ಫೋಬಿಯಾ. ಇಬ್ಬರಲ್ಲಿ ಒಬ್ಬರು ಸತ್ತರೆ ಇನ್ನೊಬ್ಬರ ಸ್ಥಿತಿ ಹೇಗೆ? ಅನ್ನೋದು ಮನಸಲ್ಲಿ ಕೊರೆಯುತ್ತಿರುತ್ತದೆ. ಆದರೆ ಆ ಪರಿಸ್ಥಿತಿಯನ್ನು ಊಹಿಸಿ ಕೊಳ್ಳುವುದಕ್ಕೂ ಹಿಂಜರಿಕೆ. ಇವರು ಸಾವಿನ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ. ಪಕ್ಕದ ಮನೆಯಲ್ಲೋ, ಸಂಬಂಧಿಕರೋ ಸತ್ತ ಸುದ್ದಿಯನ್ನು ಕಿವಿಗೆ ಹಾಕಿ ಕೊಳ್ಳದೇ ಏನೂ ಆಗಿಲ್ಲ ಅನ್ನೋ ರೀತಿ ಇರುತ್ತಾರೆ. ತೀರಾ ಆತ್ಮೀಯರಾಗಿದ್ದ ಸ್ನೇಹಿತರು ಸತ್ತರೆ ಮನಸ್ಸಿನ ಬುಡ ನಲುಗುತ್ತದೆ. ನಾಳೆ ನಮ್ಮದೂ ಇದೇ ಸ್ಥಿತಿ ಅನ್ನೋದು ಇವರನ್ನು ಕನಸಿನಂತೆ ಬಂದು ಆಗಾಗ ಕಂಗೆಡಿಸುತ್ತದೆ.
ಇವರೇಕೆ ವಿದೇಶಕ್ಕೆ ಹಾರುವುದಿಲ್ಲ?
ಹೆತ್ತವರು ಮಕ್ಕಳು ಇಂಜಿನಿಯರ್, ಡಾಕ್ಟರ್ ಆಗಬೇಕು ಎಂದು ಕನಸು ಕಾಣುತ್ತಾರೆ. ಅದಕ್ಕೆ ಅಹೋ ರಾತ್ರಿ ದುಡಿದು, ಸಾಲ ಸೋಲ ಮಾಡಿ ಗುರಿ ಮುಟ್ಟಿಸುತ್ತಾರೆ. ಈ ಭರದಲ್ಲಿ ಅವರು ಭವಿಷ್ಯದ ಬಗ್ಗೆ ಚಿಂತೆಯೇ ಮಾಡುವುದಿಲ್ಲ. ಮಕ್ಕಳು ವಿದೇಶಕ್ಕೆ ಹಾರಿಹೋಗಿ ಅಲ್ಲಿನ ಮೋಹಕ್ಕೆ ಒಳಗಾಗುತ್ತಾರೆ. ಇಲ್ಲಿ ಹೆತ್ತವರಿಗೆ ಮಗ ವಿದೇಶದಲ್ಲಿದ್ದಾನೆ ಎನ್ನುವುದು ಒಂದೇ ಹೆಮ್ಮೆ. ಆದರೆ ಇವರು ಯಾವ ಕಾರಣಕ್ಕೂ ವಿದೇಶಕ್ಕೆ ಹೋಗಿ ಮಕ್ಕಳ ಜೊತೆ ಇರಲು ಇಷ್ಟಪಡುವುದಿಲ್ಲ. ಇದಕ್ಕೆ ಕಾರಣ ಅಲ್ಲಿನ ಸಂಸ್ಕೃತಿ, ವಾತಾವರಣ, ಆಹಾರ ಹೊಂದಾಣಿಕೆ ಆಗದೇಹೋಗುವುದು. ಇಂಥವರ ಅಭಿರುಚಿಗಳು ಬಹಳ ವಿಭಿನ್ನ. ಹೋಟೆಲ್‌ನಲ್ಲಿ ಪಾರ್ಟಿಗೆ ಕರೆದರೂ ರಾತ್ರಿ 8 ಗಂಟೆಗೆ ಮುಗಿಯಬೇಕು ಅನ್ನೋ ಕಂಡೀಷನ್. ಸರಿ ಹೊತ್ತಲ್ಲಿ ಬರುವಾಗ ಯಾರಾದರೂ ತೊಂದರೆ ಕೊಟ್ಟರೆ, ದುಡ್ಡಿಗಾಗಿ ಸುಲಿಗೆ ಮಾಡಿದರೆ? ಇರುವುದು ತಾವಿಬ್ಬರೇ. ನಮಗೆ ಏನಾದರೂ ಆದರೆ ಯಾರು ಜವಾಬ್ದಾರಿ ಅನ್ನೋದು ಅವರ ಕಾಳಜಿ. ಆದರೆ ಜಗತ್ತಿಗೆ ಇದು ಬೇರೆಯದೇ ಅರ್ಥ ಕೊಡುತ್ತದೆ.
ಅಜ್ಜ ಅಜ್ಜಿ ಎಷ್ಟು ಹುಷಾರು ಎಂದರೆ ರಾತ್ರಿ ಮಲಗುವ ಮುಂಚೆ ಎಲ್ಲಾ ಬಾಗಿಲುಗಳನ್ನು ಹಾಕಿದೆಯೇ ಅಂತ ಚೆಕ್ ಮಾಡುತ್ತಾರೆ. ಆದರೆ ಇವರು ರೂಮಿನ ಬಾಗಿಲು ಮಾತ್ರ ಲಾಕ್ ಮಾಡುವುದಿಲ್ಲ. ಒಂದು ಪಕ್ಷ ಇಬ್ಬರಲ್ಲಿ ಒಬ್ಬರ ಪ್ರಾಣ ಹೋದರೆ ತಕ್ಷಣ ಬಾಗಿಲು ತೆರೆಯಲು ಅನುಕೂಲ ಆಗಲಿ ಎಂದು.ಸಾವು ಯಾವಾಗ ಅನ್ನೋದು ಗೊತ್ತಿಲ್ಲ. ಆದರೆ ಮನೆಯ ಮೂಲೆಯಲ್ಲಿ ಸಾವಿದೆ ಅನ್ನೋ ರೀತಿ ಬದುಕುತ್ತಾರೆ. ಇವರು ಸೈಕಾಲಜಿ ಬಹಳ ವಿಚಿತ್ರವಾಗಿರುತ್ತದೆ. ಜನ ಜಂಗುಳಿ ಇವರಿಗೆ ಆಗೋಲ್ಲ. ಮದುವೆ, ಸಮಾರಂಭ ಎಂದರೆ ಅಲರ್ಜಿ. ಹೌದು. ಮಕ್ಕಳಿಲ್ಲದ, ಮಕ್ಕಳನ್ನು ದೂರು ಕಳುಹಿಸಿರುವವರು ಇಂಥ ಒಂಟಿತನದಲ್ಲಿ ಬದುಕುತ್ತಿರುತ್ತಾರೆ. ಇವರಿಗೆ ಬಿಡುಗಡೆಯ ಭಾಗ್ಯವೇ ಇಲ್ಲ. ಮೆಟ್ರೋ ಸಿಟಿಗಳಲ್ಲಿ ಇಂಥ ವರ್ಗ ಬಹಳ ದೊಡ್ಡದಿದೆ.
ನಾದಸ್ವರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.