ದಾಖಲೆಗಳ ಧ್ವಂಸಕ್ಕೆ ಕೊಹ್ಲಿ; ಮತ್ತದೇ ಸಚಿನ್ ನೆನಪು!
Team Udayavani, Aug 11, 2018, 12:06 PM IST
ಅದೊಂದು ಕಾಲವಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಬರುತ್ತಿದ್ದ ಸಚಿನ್ ತೆಂಡುಲ್ಕರ್ ಔಟಾಗುತ್ತಿದ್ದಂತೆ ಸ್ಟೇಡಿಯಂನಿಂದ ಜನ ಹೊರಬರುತ್ತಿದ್ದರು. ಭಾರತಕ್ಕೆ ಸಚಿನ್ ವರವಾಗಿದ್ದಂತೆ ಶಾಪವೂ ಆಗಿದ್ದರು. ಅವರ ವಿಕೆಟ್ ಪಡೆದ ಎದುರಾಳಿಗಳಿಗೆ ಪಂದ್ಯ ಗೆಲ್ಲುವ ಅಸೀಮ ಆತ್ಮವಿಶ್ವಾಸ ಮೂಡಿದರೆ ಸಚಿನ್‌ರ ಸಹವರ್ತಿ 10 ಜನ ಆ ಕ್ಷಣಕ್ಕೇ ಸೋಲಿನ ಮಗ್ಗುಲಿಗೆ ಹೊರಳಿರುತ್ತಿದ್ದರು. ಇಂಗ್ಲೆಂಡ್ ವಿರುದ್ಧದ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮೊದಲ ಟೆಸ್ಟ್ ಮುಕ್ತಾಯದ ವೇಳೆ ಇಂಗ್ಲೆಂಡ್‌ನ ಮಾಜಿ ಆಟಗಾರ, ಪ್ರಮುಖ ಕ್ರಿಕೆಟ್ ವಿಶ್ಲೇಷಣೆಕಾರ ನಾಸಿರ್ ಹುಸೇನ್ ಹೇಳುತ್ತಿದ್ದರು. ಟೆಸ್ಟ್‌ನ 436 ರನ್‌ಗಳಲ್ಲಿ ಒಬ್ಬನೇ ಆಟಗಾರ 200 ರನ್‌ನ್ನು ಗಳಿಸಿರುವುದು ನೋಡಿದರೆ ಆತ ವಿಜಯಿ ತಂಡದಲ್ಲಿರಬೇಕಾಗಿತ್ತು. ವಿರಾಟ್‌ರ ಅಸಾಮಾನ್ಯ ಆಟದ ಹೊರತಾಗಿಯೂ ಭಾರತದ ಸೋಲಿನ ಕೆಲ ಜವಾಬ್ದಾರಿಗಳನ್ನು ಕೂಡ ಅವರೇ ತೆಗೆದುಕೊಳ್ಳಬೇಕಾಗುತ್ತದೆ!
ನಾಸಿರ್‌ರ ಮಾತುಗಳು ಸದಾ ಮೌಲ್ಯಯುತವಾಗಿರುತ್ತವೆ, ಇದೂ. ಕೇವಲ ಒಂದು ಟೆಸ್ಟ್ ಸೋಲಿನ ಪೋಸ್ಟ್‌ಮಾರ್ಟ್‌ಂ ಮಾಡುವುದು ಅಪೇಕ್ಷಣೀಯವಲ್ಲ. ಆದರೆ ಇದೇ ಭಾರತ ಮೊದಲ ಏಕದಿನ ಪಂದ್ಯದ ನಂತರ ಸತತ ಎರಡು ಪಂದ್ಯ ಸೋತು ಸರಣಿ ಕೈಬಿಟ್ಟಿದೆ. ಆ ಸೋಲುಗಳನ್ನು ಫಲಿತಾಂಶವಾಗಿ ನೋಡುವುದಕ್ಕಿಂತ ಆ ಸೋಲಿನ ಮಾದರಿಗಳನ್ನು ಗಮನಿಸಿದಾಗ ನಿರಾಶೆಯಾಗುತ್ತದೆ. ಒಂದೆಡೆ ಆಟಗಾರ ಕೊಹ್ಲಿ ಮಿಂಚುತ್ತಿದ್ದಾರೆ. ಬರ್ಮಿಂಗ್‌ಹ್ಯಾಮ್ ಪರಾಭವದ ನಂತರ ಅವರು ಟೆಸ್ಟ್ ಕ್ರಿಕೆಟ್‌ನ ಅಗ್ರಕ್ರಮಾಂಕಿತ ಬ್ಯಾಟ್ಸ್‌ಮನ್ ಸ್ಥಾನಕ್ಕೇರಿದರು. ಯಾಕೋ ಗೊತ್ತಿಲ್ಲ, ಮತ್ತೆ ಸಚಿನ್ ನೆನಪಾಗುತ್ತಾರೆ!
ಔಟ್ ಆಫ್ ಫಾರಂ ಸ್ಪರ್ಧೆ!
ಕೊಹ್ಲಿ ಇಂಗ್ಲೆಂಡ್‌ನಲ್ಲಿ 2014ರಲ್ಲಿ ಹೀನಾಯವಾಗಿ ವಿಫಲರಾಗಿದ್ದರು. ಅವತ್ತಿನ ಐದು ಟೆಸ್ಟ್‌ಗಳಲ್ಲಿ ಕೇವಲ 13.4 ಸರಾಸರಿ. ಆಸ್ಟ್ರೇಲಿಯಾದಲ್ಲಿ ಐದು, ದಕ್ಷಿಣ ಆಫ್ರಿಕಾದಲ್ಲಿ ಎರಡು ಶತಕ ಬಾರಿಸಿದ ಭಾರತದ ಯಶಸ್ವಿ ನಾಯಕ ಕೇವಲ ವೈಯುಕ್ತಿಕ ದಾಖಲೆ ಸುಧಾರಿಸಲು ಮನಸ್ಸು ಮಾಡಿದರೆ? ಅಭ್ಯಾಸ ಪಂದ್ಯದಲ್ಲಿ ಎರಡು ಚಿನ್ನದ ಮೊಟ್ಟೆಗಳನ್ನು ಸಂಪಾದಿಸಿದ ಶಿಖರ್ ಧವನ್, ಹಲವು ದಿನಗಳಿಂದ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದು ಅರ್ಧ ಶತಕ ಕೂಡ ಗಳಿಸಲಾಗದೆ ಒದ್ದಾಡುತ್ತಿರುವ ಚೇತೇಶ್ವರ ಪೂಜಾರ, ಟೆಸ್ಟ್ ಎಂದರೆ ಒಂದೆರಡು ಬೌಂಡರಿಗಳಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳದ ಕೆ.ಎಲ್.ರಾಹುಲ್‌ರಂತವರ ನಡುವೆ ಆಯ್ಕೆಯ ಪ್ರಶ್ನೆ ಗಂಭೀರ. ಆಯ್ಕೆಗಾರರು ಫಾರಂನಲ್ಲಿಲ್ಲದ ಆಟಗಾರರನ್ನೇ ಆರಿಸಿದಾಗ ನಾಯಕನ ಕೆಲಸ ಇನ್ನಷ್ಟು ಸಂಕೀರ್ಣ.
ಆಫ್ಘಾನಿಸ್ತಾನ ವಿರುದ್ಧ ಶತಕ ಹಾಗೂ ಏಕದಿನ ಸರಣಿಯಲ್ಲಿ 40, 36 ಹಾಗೂ 44 ರನ್ ಹೊಡೆದ ಧವನ್, ಆಫ್ಘಾನಿಸ್ತಾನದ ಎದುರೂ ಕೇವಲ 35 ಹೊಡೆದ ಪೂಜಾರಕ್ಕಿಂತ ಉತ್ತಮ ಆಯ್ಕೆ ಆಗುತ್ತಾರೆ. ಭಾರತ ತಂಡದ ಆಯ್ಕೆಯಲ್ಲಿ ಇರುವ ಕನ್ಸಿಸ್ಟೆನ್ಸಿ ಆಡುವ ಹನ್ನೊಂದರಲ್ಲಿಲ್ಲ. ಆಟಗಾರರ ಬ್ಯಾಂಟಿಂಗ್ ಕ್ರಮಾಂಕ ಪದೇ ಪದೆ ಬದಲಾಗುತ್ತಿದೆ. ಧವನ್ ವಿಫಲರಾದರು, ರಾಹುಲ್ ರನ್ ಹೊಡೆಯಲಿಲ್ಲ ಎಂಬುದರ ಹೊರತಾಗಿಯೂ ಕನಿಷ್ಟ ಮೂರು ಟೆಸ್ಟ್‌ಗಳಲ್ಲಿ ಅವರನ್ನು ಅದದೇ ಸ್ಥಾನದಲ್ಲಿ ಆಡಿಸದಿದ್ದರೆ ನಿಶ್ಚಿತ ಬ್ಯಾಟಿಂಗ್ ಆರ್ಡರ್ ರೂಪಗೊಳ್ಳುವುದಿಲ್ಲ. ಮತ್ತೂಂದು ನೆನಪಿಗೆ ಹೋಗುವುದಾದರೆ, 2002ರಲ್ಲಿ ಇಂಗ್ಲೆಂಡ್‌ನಲ್ಲಿ ಸೌರವ್ ಗಂಗೂಲಿ ವೀರೇಂದ್ರ ಸೆಹ್ವಾಗ್‌ಗೆ ತಂಡದ ಆರಂಭಿಕರಾಗಿ ಭಡ್ತಿ ಕೊಡುತ್ತಾರೆ. ಸಂಪೂರ್ಣ ಪ್ರವಾಸದಲ್ಲಿ ವೈಫಲ್ಯಗಳ ಹೊರತಾಗಿಯೂ ಸೆಹ್ವಾಗ್ ಆ ಸ್ಥಾನದಲ್ಲಿಯೇ ಗಟ್ಟಿಯಾಗಿ ಇರಲು ಬಿಡಲಾಗುತ್ತದೆ. ಮುಂದಿನ ಇತಿಹಾಸ ಎಲ್ಲರಿಗೂ ಈಗ ಗೊತ್ತು!
ನಾಯಕ ಕೊಹ್ಲಿ ತನ್ನ ಮೇಲಿನ ಆಟಗಾರರ ಬ್ಯಾಟಿಂಗ್ ಆರ್ಡರ್‌ನಲ್ಲಿ ಚಂಚಲತೆ ತೋರದೆ ಆಮೂಲಾಗ್ರವಾಗಿ ಬೆಂಬಲಿಸಬೇಕಾಗಿದೆ. ಇಂದು ಐಪಿಎಲ್, ಟಿ20, ಏಕದಿನ, ಟೆಸ್ಟ್‌ಗಳ ಒಟ್ಟು ಸಂಖ್ಯೆ ಹೆಚ್ಚಿರುವುದು ಕೂಡ ಆಟಗಾರರಲ್ಲಿ ರನ್ ಹಸಿವನ್ನು ಕಡಿಮೆ ಮಾಡಿರುವಂತಿದೆ. ಇಷ್ಟು ಅವಕಾಶ ನಿಮ್ಮದು, ಆನಂತರವೂ ಸಫಲರಾಗದಿದ್ದರೆ ತಂಡದಿಂದ ಔಟ್, ವಾಪಾಸು ಕಷ್ಟ ಎಂಬಂತಹ ಸಂದೇಶ ರವಾನೆಯಾಗಲೇಬೇಕು.ಕಳೆದ ವರ್ಷಾರಂಭದಲ್ಲಿ ಕೊಹ್ಲಿ ಆಸ್ಟ್ರೇಲಿಯಾ ಎದುರು ಸ್ವದೇಶಿ ಸರಣಿಯ ಮೊದಲ ಮೂರು ಟೆಸ್ಟ್‌ಗಳಲ್ಲಿ 10ಕ್ಕಿಂತ ಕಡಿಮೆ ಸರಾಸರಿಯಲ್ಲಿ ರನ್ ಗಳಿಸಿದ್ದರು. ಅದೇ ವಷಾಂತ್ಯಕ್ಕೆ ಸಂಗಕ್ಕರ, ರಿಕಿ ಪಾಂಟಿಂಗ್ ನಂತರದ ಅತಿ ಹೆಚ್ಚಿನ ಗಳಿಕೆ ಅವರದಾಗಿತ್ತು, 2818 ರನ್!
ನಾಯಕ ಕೊಹ್ಲಿಗಿನ್ನೂ 29!
375 ಅಂತಾರಾಷ್ಟ್ರೀಯ ಇನಿಂಗ್ಸ್‌ಗಳಲ್ಲಿ 57 ಶತಕ ಬಾರಿಸಿದ ಕೊಹ್ಲಿ ಸರಾಸರಿಯಲ್ಲಿ ಪ್ರತಿ ಏಳು ಇನಿಂಗ್ಸ್‌ಗೊಂದು ಶತಕ ಬಾರಿಸಿದ್ದಾರೆ. ಈ ವರ್ಷದ 24 ಇನ್ನಿಂಗ್ಸ್‌ಗಳಲ್ಲಿ 19 ಬಾರಿ ಬ್ಯಾಟ್ ಮಾಡಿದ್ದು, ತಲಾ ಐದು ಶತಕ, ಐದು ಅರ್ಧಶತಕ ಹಾಗೂ ಮತ್ತೆçದು ಬಾರಿ 40 ಪ್ಲಸ್ ರನ್ ಕೂಡಿಹಾಕಿದ್ದಾರೆ. ಬ್ಯಾಟ್ಸ್‌ಮನ್‌ಗಳು ತಮ್ಮ 30ರ ವಯಸ್ಸಿನ ನಂತರ ಪ್ರಖರಗೊಳ್ಳುತ್ತಾರೆ ಎಂಬುದನ್ನು ಹೇಳಲಾಗುತ್ತದೆ. ವೆಸ್ಟ್‌ಇಂಡೀಸ್‌ನ ಚಂದ್ರಪಾಲ್, ಶ್ರೀಲಂಕಾದ ಕುಮಾರ ಸಂಗಕ್ಕರ, ಸಚಿನ್, ದ.ಆಫ್ರಿಕಾದ ಜಾಕ್ ಕಾಲಿಸ್, ಪಾಕಿಸ್ತಾನದ ಮಿಸ್ಬಾ ಉಲ್ ಹಕ್ ತಮ್ಮ 30ನೇ ಹುಟ್ಟುಹಬ್ಬದ ನಂತರ ರನ್ ಸೂರೆ ಮಾಡಿದವರು. ಚಂದ್ರಪೌಲ್, ಸಚಿನ್, ಕಾಲಿಸ್ ಕೇವಲ ಟೆಸ್ಟ್ ಕ್ರಿಕೆಟ್‌ಗೆ ಸೀಮಿತರಾಗಿ ಫಿಟ್‌ನೆಸ್ ಉಳಿಸಿಕೊಂಡಿದ್ದರು. ಸ್ವಾರಸ್ಯ ಎಂದರೆ, ಕೊಹ್ಲಿಗಿನ್ನೂ 29!
ಯಶಸ್ಸಿನತ್ತ ಓಟ, ಓಟ!
ಫಿಟ್‌ನೆಸ್ ವಿಚಾರದಲ್ಲಿ ವಿರಾಟ್ ವಿರಾಟರೇ. ಈ ವರ್ಷ ಏಕದಿನ ಪಂದ್ಯವೊಂದರಲ್ಲಿ ದಕ್ಷಿಣ ಆಫ್ರಿಕಾ ಎದುರು 159 ಎಸೆತಗಳ 160 ರನ್ ಇನಿಂಗ್ಸ್‌ನಲ್ಲಿ 100 ರನ್ ಓಡಿಯೇ ಗಳಿಸಿದ್ದು ನೆನಪಾಗುತ್ತದೆ. 72 ಸಿಂಗಲ್, 22 ಡಬಲ್, ಮುರು ಟ್ರಿ$›ಪಲ್. 2016ರ ಐಸಿಸಿ ಟಿ20 ವಿಶ್ವಕಪ್‌ನ ಉಪಾಂತ್ಯದಲ್ಲಿ ವಿಂಡೀಸ್ ಎದುರಿನ 47 ಎಸೆತಗಳ ಅಜೇಯ 89ರಲ್ಲೊಮ್ಮೆ ಕೊಹ್ಲಿ 5 ಎಸೆತಗಳಲ್ಲಿ ನಾಲ್ಕು ಬಾರಿ ಎರಡೆರಡು ರನ್ ಓಡಿದ್ದರು. ಫಿಟ್‌ನೆಸ್ ಹಾಗೂ ರನ್ ದಾಹ ಆಟಗಾರನನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. ಪಾಕ್‌ನ ಮಿಸ್ಬಾ 43ರಲ್ಲೂ ಆಡಿದ್ದರು. ಆ ಲೆಕ್ಕದಲ್ಲಿ ಕೊಹ್ಲಿ ಇನ್ನೂ 14 ವರ್ಷ ಇದೇ ಮಟ್ಟದಲ್ಲಿ ಆಡಿದರೆ ಏನಾದೀತು ಎಂಬುದನ್ನು ಕೇವಲ ಊಹೆಗಳಿಗೆ ಬಿಡೋಣ. ಸದ್ಯಕ್ಕೆ ಅವರು ಭಾರತ ತಂಡವನ್ನು ಕೂಡ ತಮ್ಮ ಅರ್ಧ ಸಾಮರ್ಥ್ಯದಿಂದರೂ ಆಡಿಸಿದರೆ ಸಾಕು. ಇಲ್ಲದಿದ್ದರೆ ಕೊಹ್ಲಿ ಔಟ್ ಆಗುತ್ತಿದ್ದಂತೆ ಪ್ರೇಕ್ಷಕ ಸ್ಟೇಡಿಯಂ ಬಿಟ್ಟು ತೆರಳಬೇಕಾಗುತ್ತದೆ.
ಮಾ.ವೆಂ.ಸ.ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.