ಚಳಿಗಾಲದ ವಿದೇಶಿ ಯಾತ್ರಿಕರು
ಫಾರಿನ್ ಹಕ್ಕಿಗಳ ಕರುನಾಡ ವಲಸೆ
Team Udayavani, Jan 18, 2020, 6:08 AM IST
ಪ್ರತಿ ಚಳಿಗಾಲದಲ್ಲೂ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ಪಟ್ಟೆ ತಲೆಯ ಬಾತು (ಬಾರ್ ಹೆಡ್ಡೆಡ್ ಗೀಸ್) ಹಕ್ಕಿಗಳು ಅತಿಥಿಗಳಾಗಿ ಬರುತ್ತವೆ. ಈ ಬಾರಿಯೂ ಅವು 12 ಸಾವಿರ ಕಿ.ಮೀ. ದೂರದ ಮಂಗೋಲಿಯಾದಿಂದ ಇಲ್ಲಿಗೆ ಹಾರಿಬಂದಿವೆ…
ಚಳಿಗಾಲಕ್ಕೆ ಮನುಷ್ಯ ಬೇಗ ಮನಸೋಲುತ್ತಾನೆ. ಆ ಮಂಜು, ಇಬ್ಬನಿ, ತಂಗಾಳಿಯ ಸುಖದ ಆಹ್ಲಾದವೇ ಚೆಂದ. ಮಡಿಕೇರಿ, ಊಟಿಯಂಥ ಊರುಗಳಿಗೆ ಚಳಿಯ ಸುಖ ಅನುಭವಿಸಲು ಪ್ರವಾಸಿಗರು ಹೋಗುವುದೂ ಇದೇ ಕಾರಣಕ್ಕಾಗಿಯೇ. ಮನುಷ್ಯ ಮಾತ್ರ ಅಲ್ಲ, ಪಕ್ಷಿಗಳಿಗೂ ಚಳಿಗಾಲ ಅಂದ್ರೆ ಪಂಚಪ್ರಾಣ. ಚಳಿಗಾಲಕ್ಕೆ ಸಾಕ್ಷಿಯಾಗಲು, ಅವು ವಿದೇಶಗಳಿಂದ ಹಾರಿಬರಲೂ ರೆಡಿ. ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ (ಗದಗ, ಹಾವೇರಿ ಹಾಗೂ ಧಾರವಾಡ) ಬಹುತೇಕ ಎಲ್ಲ ಕೆರೆಗಳೂ ಈಗ ಪಕ್ಷಿಕಾಶಿಯಾಗಿ ಮಾರ್ಪಟ್ಟಿವೆ. ಕಳೆದ ಎರಡು ತಿಂಗಳಿಂದ ಇಲ್ಲಿ ಎಲ್ಲಿ ನೋಡಿದರಲ್ಲಿ ಬರೀ ಹಕ್ಕಿಗಳು; ವಿದೇಶಿ ಬಾನಾಡಿಗಳು.
ಮಂಗೋಲಿಯಾದಿಂದ ಹಾರಿ ಬಂದು…: ಪ್ರತಿ ಚಳಿಗಾಲದಲ್ಲೂ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಗೆ ಪಟ್ಟೆ ತಲೆಯ ಬಾತು (ಬಾರ್ ಹೆಡ್ಡೆಡ್ ಗೀಸ್) ಹಕ್ಕಿಗಳು ಅತಿಥಿಗಳಾಗಿ ಬರುತ್ತವೆ. ಈ ಬಾರಿಯೂ ಅವು 12 ಸಾವಿರ ಕಿ.ಮೀ. ದೂರದ ಮಂಗೋಲಿಯಾದಿಂದ ಇಲ್ಲಿಗೆ ಹಾರಿಬಂದಿವೆ. ಇಡೀ ಕೆರೆ ಹಾಗೂ ಸುತ್ತಲಿನ ಹೊಲಗಳಲ್ಲಿ ದಂಡಿಯಾಗಿ ಕಡಲೆ ಗಿಡದ ಎಳೆ ಚಿಗುರನ್ನು ಮೇಯುತ್ತಿವೆ. “ಪ್ರತಿ ಚಳಿಗಾಲದಲ್ಲೂ ಈ ಹಕ್ಕಿಗಳು ಬರುತ್ತವೆ ಅಂತ ಗೊತ್ತು.
ಹಾಗಿದ್ದೂ, ಇಲ್ಲಿನ ರೈತರು ನಷ್ಟವನ್ನೂ ಲೆಕ್ಕಿಸದೆ, ಅರಣ್ಯ ಇಲಾಖೆ ಲೆಕ್ಕಿಸಿದಷ್ಟೇ ಪರಿಹಾರ ಪಡೆದು, ಕಡಲೆ ಬೆಳೆಯುತ್ತಾರೆ. ಪಟ್ಟೆ ತಲೆಯ ಬಾತು ಹಕ್ಕಿಗಳಿಗೆ ಕಡಲೆಯೆಂದರೆ, ಪಂಚಪ್ರಾಣ’ ಎನ್ನುತ್ತಾರೆ ಸ್ಥಳೀಯ ಕೃಷಿಕ ಬಸವರಾಜ ಮಠಪತಿ. ದೇಶದ ಗಡಿ ದಾಟಲು ಹಕ್ಕಿಗಳಿಗೆ ವೀಸಾವೇನೂ ಬೇಕಿಲ್ಲ. “ಯುರೋಪ್‌ನಿಂದ ಬಂದಿರುವ ಬೂದು ಕಾಲಿನ ಬಾತು (ಗ್ರೇ ಲೆಗ್ಗಡ್ ಗೂಸ್) ಕೂಡ ಮಾಗಡಿ ಮತ್ತು ಸಮೀಪದ ಹಿರೇಕೆರೆಗಳಲ್ಲಿ ಬಿಡಾರ ಹೂಡಿವೆ’ ಎನ್ನುವ ವಿವರವನ್ನು ಪಕ್ಷಿ ವೀಕ್ಷಕ, ಹುಬ್ಬಳ್ಳಿಯ ಪವನ್ ಮಿಸ್ಕಿನ್ ಕೊಡುತ್ತಾರೆ.
ಕೆರೆಗಳ ದಡವೇ ಬಿಡಾರ: ಕಲಘಟಗಿ, ಧಾರವಾಡ ಹಾಗೂ ಕುಂದಗೋಳ ಭಾಗದ ಅಳಿದುಳಿದ ಗುಡ್ಡ- ತಟಾಕುಗಳ ಮಧ್ಯದ ನೀರಿನಾಸರೆಗಳಲ್ಲಿ ವಲಸೆ ಹಕ್ಕಿಗಳಾದ ಬ್ಲ್ಯಾಕ್ ಟೇಲ್ಡ್ ಗಾಡ್ವಿಟ್, ಅಮೂರ್ ಫಾಲ್ಕನ್, ಗಾರ್ಗ್‌ನೇ, ಎಲ್ಲೋ ಬ್ರೆಸ್ಟೆಡ್ ಬಂಟಿಂಗ್, ರೆಡ್ ನಾಟ್, ಸ್ಪೂನ್‌ಬಿಲ್ಡ್ ಸ್ಯಾಂಡ್‌ಪೈಪರ್, ನಾರ್ದರ್ನ್ ಪಿನ್‌ಟೇಲ್, ಕೋಂಬ್ ಡಕ್, ಸ್ಪಾಟ್ ಬಿಲ್ಡ್ ಡಕ್, ಯುರೇಷಿಯನ್ ಸ್ಯಾಂಡ್ ಪೈಪರ್, ಬಾರ್ನ್ ಸ್ವಾಲ್ಲೋ, ಪೇಂಟೆಡ್ ಸ್ಟಾರ್ಕ್, ಸ್ಮಾಲರ್ ಫ್ಲೆಮಿಂಗೋ, ಪೆಲಿಕನ್, ಓಪನ್ ಬಿಲ್ಡ್ ಸ್ಟಾರ್ಕ್, ಸ್ಪೂನ್ ಬಿಲ್, ಬ್ಲಾಕ್- ವೈಟ್ ಐಬಿಸ್ ಪಕ್ಷಿಗಳು ಬಿಡಾರ ಹೂಡಿವೆ.
ಬಾಗಲಕೋಟೆ ಮತ್ತು ವಿಜಯಪುರ ಗಡಿಯಲ್ಲಿ ಕೃಷ್ಣಾ ನದಿಗೆ ಕಟ್ಟಲಾದ ಕೊರ್ತಿ ಮತ್ತು ಕೊಲ್ಹಾರದ ಸೇತುವೆ ಅಕ್ಕಪಕ್ಕ ಸ್ಮಾಲರ್ ಫ್ಲೆಮಿಂಗೋಗಳು ಮೀನು ಹೆಕ್ಕುವ ಪರಿಯೇ ಸಮ್ಮೊಹನಕಾರಿ. ಉತ್ತರ ಕನ್ನಡ ಜಿಲ್ಲೆ ಮುಂಡಗೋಡ ಬಳಿಯ ಅತ್ತಿವೇರಿ ಪಕ್ಷಿ ಧಾಮದಲ್ಲಿಯೂ ಈ ಬಾರಿ ಸ್ಥಳೀಯ ವಲಸೆ ಹಕ್ಕಿಗಳ ಕಲರವ ಗಮನ ಸೆಳೆಯುತ್ತಿದೆ. ಬಣ್ಣದ ಕೊಕ್ಕರೆ, ತೆರೆದ ಕೊಕ್ಕಿನ ಬಕ, ಬಿಳಿ ಬಣ್ಣದ ಕಪ್ಪು ಕತ್ತಿನ ಕೊಕ್ಕರೆ ಹಾಗೂ ಕಪ್ಪು ಬಣ್ಣದ ಕೆಂಪು ತುರಾಯಿಯ ಕೊಕ್ಕರೆ ಬ್ಲಾಕ್ ಐಬಿಸ್‌ಗಳು ಇಲ್ಲಿ ನೀರುಕಾಗೆಗಳೊಂದಿಗೆ ರೆಕ್ಕೆ ಬಿಚ್ಚಿ, “ಯಾರ ರೆಕ್ಕೆ, ಯಾರದ್ದಕ್ಕಿಂತ ದೊಡ್ಡದು?’ ಎಂಬ ಸ್ಪರ್ಧೆಗಿಳಿದಿವೆ.
ಮನುಷ್ಯನಿಗೆ ಕೆಲವು ಪ್ರಶ್ನೆಗಳು: ಈ ಹಕ್ಕಿಗಳು ಬಿಡಾರ ಹೂಡಿರುವ ಕೆರೆಯಂಗಳನ್ನು ನಾವು ಹೇಗೆ ಕಾಪಾಡಿಕೊಂಡಿದ್ದೇವೆ? ಕೆರೆಯ ಅಂಗಳಗಳನ್ನು ನಿವೇಶನಗಳನ್ನಾಗಿಸುವರಿಗೆ; ಕೆರೆ-ಕುಂಟೆ, ಕಾಲುವೆ- ಹರಿ- ತೊರೆಗಳನ್ನು ಕಸ, ತ್ಯಾಜ್ಯ, ಹೊಲಸಿನಿಂದ ತುಂಬಿ, ಧುಮ್ಮಸ್ ಬಡಿದು ಕಾರ್ಖಾನೆಗಳನ್ನು ಎಬ್ಬಿಸುವ ಉದ್ದಿಮೆದಾರರಿಗೆ; ವಿಷಯುಕ್ತ ರಾಸಾಯನಿಕಗಳನ್ನು ಸದ್ದಿಲ್ಲದೆ, ಕೆರೆಗಳಿಗೆ ಹರಿಸಿ ಕೈತೊಳೆದುಕೊಳ್ಳುವ ಫ್ಯಾಕ್ಟರಿಮಂದಿಗೆ; ಒತ್ತುವರಿಯ ಕನಸು ಕಾಣುವ ಸಿರಿವಂತರಿಗೆ, ಹಕ್ಕಿಗಳ ಈ ಸೌಂದರ್ಯವೇ ಕಾಣಿಸುತ್ತಿಲ್ಲ ಎನ್ನುವುದು ನಿಜಕ್ಕೂ ದುಃಖಕರ.
ರಂಗನತಿಟ್ಟು ಮೀನೂಟ: ಕೇವಲ ಉತ್ತರ ಕರ್ನಾಟಕ ಮಾತ್ರವೇ ಅಲ್ಲ. ಕಾವೇರಿ ನದಿ ತೀರದ ರಂಗನತಿಟ್ಟು ಪಕ್ಷಿಧಾಮದಲ್ಲೂ ವಲಸೆ ಹಕ್ಕಿಗಳು, ಚಳಿಗೆ ಮೈಯ್ಯೊಡ್ಡಿ ಕುಳಿತಿವೆ. ಸೈಬೀರಿಯಾ, ಲ್ಯಾಟಿನ್ ಅಮೆರಿಕದಿಂದಲೂ ಇಲ್ಲಿಗೆ ಸಹಸ್ರಾರು ಪಕ್ಷಿಗಳು ಬರುತ್ತವೆ. ತಂದೆ- ತಾಯಿ, ಮೂರು ಮರಿ ಇರುವ 2000 ಪಕ್ಷಿಗಳ ಕುಟುಂಬಕ್ಕೆ ದಿನವೊಂದಕ್ಕೆ ಇಲ್ಲಿ 40- 60 ಕ್ವಿಂಟಲ್‌ಗಟ್ಟಲೆ ಮೀನುಗಳು ಆಹಾರವಾಗಿ ಬೇಕು. ಬಣ್ಣದ ನೀರ್ಕೋಳಿಗಳ ಸಂಖ್ಯೆಯಂತೂ ಇಲ್ಲಿ ಅಧಿಕವಿದ್ದು, ಇವುಗಳಿಗೂ ಮೀನೇ ಆಹಾರ. ನೀವೇ ಊಹಿಸಿ, ಬಕ ಪಕ್ಷಿ, ಹೆಜ್ಜಾರ್ಲೆ,
ಬೆಳ್ಳಕ್ಕಿ, ಫ್ಲೆಮಿಂಗೋಗಳ ಜತೆಗೆ ಗ್ರೇಟ್ ಸ್ಟೋನ್ ಪ್ಲೋವರ್‌ನಂಥ ವಿದೇಶಿ ಹಕ್ಕಿಗಳು- ಹೀಗೆ ಎಲ್ಲವಕ್ಕೂ ಒಟ್ಟು ಲೆಕ್ಕ ಹಾಕಿದರೆ, ಮೀನಿನ ಪ್ರಮಾಣ 500 ಕ್ವಿಂಟಲ್‌ಗಳಿಗಿಂತಲೂ ಹೆಚ್ಚು! ಒಂದು ಕಾಲದಲ್ಲಿ ಪಕ್ಷಿಗಳ ಈ ದೈನಂದಿನ ಬೇಡಿಕೆಯನ್ನು ಪೂರೈಸುವಷ್ಟು ನಮ್ಮ ಕೆರೆಗಳು ಸಮೃದ್ಧವಾಗಿದ್ದವು! ಭೀಮೇಶ್ವರ, ಮುತ್ತತ್ತಿ ಮತ್ತು ಸಂಗಮಗಳಿಗೆ ಅಮೆರಿಕ, ಬ್ರಿಟನ್, ಸ್ವೀಡನ್, ಸಿಂಗಾಪುರ, ಸ್ಕಾಟ್ಲೆಂಡ್, ಜಪಾನ್, ಜರ್ಮನಿ ಮುಂತಾದ ದೇಶಗಳಿಂದ ವರ್ಷವರ್ಷವೂ ತಂಡೋಪತಂಡವಾಗಿ ಹಕ್ಕಿಗಳು ಬಂದು ಬಿಡಾರ ಹೂಡುತ್ತವೆ. ಈ ಬಾರಿಯೂ ಬಂದಿಳಿದಿವೆ. ಹೀಗೆ ಬಂದ ಮೀನುಗಳಿಗೆ ಇಲ್ಲಿನ ಆಹಾರ, ಮಶೀರ್ ಮೀನುಗಳು.
ನಾವು, ನಮ್ಮ ಬಟ್ಟೆ- ವಾಹನಗಳನ್ನು ಶುದ್ಧವಾಗಿಟ್ಟುಕೊಳ್ಳಲು ಸುತ್ತಲಿನ ಪರಿಸರವನ್ನೇ ರಾಡಿ ಎಬ್ಬಿಸುತ್ತಿದ್ದೇವೆ. 40ಕ್ಕೂ ಹೆಚ್ಚು ಪ್ರಜಾತಿಯ ವಲಸೆ ಹಕ್ಕಿಗಳು ಬಂದಿಳಿಯುತ್ತಿದ್ದ ನವಿಲೂರು, ಕೆಲಗೇರಿ ಕೆರೆಯ ತರಿಭೂಮಿ ಇಂದು ಅಕ್ಷರಶಃ ನರಕವೇ ಆಗಿದೆ. ನಮಗಿಂತ ಮೊದಲೇ ಈ ಭೂಮಿಗೆ ಬಂದ ಅನೇಕ ಜೀವಿಗಳು ತಮ್ಮ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುತ್ತವೆ. ಆದರೆ, ಮನುಷ್ಯನಿಗೆ ಮಾತ್ರ ಅವುಗಳ ಬುದ್ಧಿ ಬಂದಿಲ್ಲ.
-ಪ್ರೊ. ಗಂಗಾಧರ ಕಲ್ಲೂರ, ಪರಿಸರವಾದಿ, ಪಕ್ಷಿ ತಜ್ಞ
* ಹರ್ಷವರ್ಧನ್ ವಿ. ಶೀಲವಂತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.