ಮಹಿಳಾ ಫುಟ್‌ಬಾಲ್ ವಿಶ್ವಕಪ್ ನಡೆಸಿದರೆ ಸಾಕೇ?
Team Udayavani, Apr 13, 2019, 6:00 AM IST
–ಮುಂದಿನ ವರ್ಷ ಭಾರತದಲ್ಲಿ 17 ವಯೋಮಿತಿ ಮಹಿಳಾ ಫುಟ್‌ಬಾಲ್ ವಿಶ್ವಕಪ್
-ದೇಶದಲ್ಲಿ ಆಟಗಾರ್ತಿಯರಿಗೆ ಬರ, ಉಳಿದ 18 ತಿಂಗಳಲ್ಲಿ ಪವಾಡ ಸಾಧ್ಯವೇ?
ಇದನ್ನು ಹೇಗೆ ವರ್ಣಿಸುವುದು ಎಂಬುದು ತಿಳಿಯಲಿಕ್ಕೆ ಬಹುಶಃ 2020ರ 17 ವಯೋಮಿತಿ ಮಹಿಳಾ ಫುಟ್‌ಬಾಲ್ ವಿಶ್ವಕಪ್ ಮುಗಿಯಬೇಕೆಂದು ಕಾಣುತ್ತದೆ. ಭಾರತದಲ್ಲೇ ನಡೆಯುವ ಈ ಕೂಟವನ್ನು ಭಾರತದ ಮಹಿಳಾ ಫುಟ್‌ಬಾಲ್ ಪಾಲಿಗೆ ಅದೃಷ್ಟ ಲಕ್ಷ್ಮೀ ಎಂದು ಊಹಿಸಲಾಗಿದೆ, ವರ್ಣಿಸಲಾಗಿದೆ. ಪ್ರಸ್ತುತ ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ಗಿರುವ ದುರವಸ್ಥೆಯನ್ನು ಗಮನಿಸಿದರೆ, ಈಗ ಕಟ್ಟಿಕೊಂಡಿರುವ ಆಶಾಗೋಪುರಗಳು ಬಹಳ ಜಾಸ್ತಿಯೇ ಆಯಿತು ಎಂದು ಹೇಳುವುದು ಸರಿಯಾಗುತ್ತದೆ. 2017ರಲ್ಲಿ 17 ವಯೋಮಿತಿ ಪುರುಷರ ಫುಟ್‌ಬಾಲ್ ವಿಶ್ವಕಪ್ ಕೂಡ ಭಾರತದಲ್ಲೇ ನಡೆದಿತ್ತು. ಅದಾದ ನಂತರ ಪುರುಷರ ವಿಶ್ವಕಪ್ ಗುಣಮಟ್ಟ ಒಂದಷ್ಟು ಸುಧಾರಿಸಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಭಾರತ ಫುಟ್‌ಬಾಲ್ ಮಂಡಳಿ-ಎಐಎಫ್ಎಫ್, 2020ರಲ್ಲಿ ಮಹಿಳಾ ವಿಶ್ವಕಪ್ ನಡೆಸಿದರೆ, ಭಾರತದಲ್ಲಿ ಮಹಿಳಾ ಫುಟ್‌ಬಾಲ್ ಸ್ಥಿತಿಗತಿ ಸುಧಾರಿಸುತ್ತದೆ ಎಂದು ಲೆಕ್ಕಾಚಾರ ಮಾಡುತ್ತಿದೆ. ಇದು ಸರಿಯೋ, ತಪ್ಪೋ?
ನಿಜಕ್ಕೂ ಭಾರತದಲ್ಲಿ ಮಹಿಳಾ ಫುಟ್‌ಬಾಲ್ ಎನ್ನುವುದು ಇದೆಯೇ ಎಂದೇ ಕೇಳಿಕೊಳ್ಳುವ ಪರಿಸ್ಥಿತಿಯಿದೆ. ಪುರುಷರ ವಿಭಾಗವನ್ನು ಗಣನೆಗೆ ತೆಗೆದುಕೊಂಡರೆ, ಇಲ್ಲಿ ಹಲವು ಖ್ಯಾತನಾಮ ಆಟಗಾರರು ಕಾಣುತ್ತಾರೆ. ದಶಕದ ಹಿಂದೆ ಚಿನ್ನದ ಕಾಲು ಎನಿಸಿಕೊಂಡಿದ್ದ ಐ.ಎಂ.ವಿಜಯನ್, ಅದಾದ ನಂತರ ದಂತಕಥೆಯ ಮಟ್ಟಕ್ಕೇರಿದ ಬೈಚುಂಗ್ ಭುಟಿಯಾ, ಈಗ ಆ ಪರಂಪರೆಯನ್ನು ಮುಂದುವರಿಸುತ್ತಿರುವುದು ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ. ಇವರಂತೂ ಸಮಕಾಲೀನ ಫುಟ್‌ಬಾಲಿಗರ ಪೈಕಿ ವಿಶ್ವದಲ್ಲೇ ಮೂರನೇ ಗರಿಷ್ಠ ಗೋಲು ದಾಖಲಿಸಿದ ಆಟಗಾರ. ಇವರ ನೇತೃತ್ವದಲ್ಲಿ ಹಲವು ವಿಕ್ರಮಗಳು ದಾಖಲಾಗಿವೆ. ಇದೇ ವರ್ಷ ನಡೆದ ಎಎಫ್ಸಿ ಏಷ್ಯನ್ ಕ್ರೀಡಾಕೂಟದಲ್ಲಿ, ಭಾರತ ಬಲಿಷ್ಠ ಥಾಯ್ಲೆಂಡ್ ವಿರುದ್ಧ 4-0 ಜಯ ಗಳಿಸಿ, ಕ್ವಾರ್ಟರ್‌ಫೈನಲ್‌ಗೇರಿ ಇತಿಹಾಸ ನಿರ್ಮಿಸುವ ಸುಳಿವು ನೀಡಿತ್ತು. ಇದಕ್ಕೆ ಕಾರಣ ಚೆಟ್ರಿ. ತಂಡದಲ್ಲಿ ಅವರಲ್ಲದೇ ಜೆಜೆ ಲಾಲ್ ಪೆಖುವ, ಗುರುಪ್ರೀತ್ ಸಿಂಗ್ ಸಂಧು, ಉದಾಂತ ಸಿಂಗ್ ಎಂಬಂತಹ ಖ್ಯಾತನಾಮರು ಹುಟ್ಟಿಕೊಂಡಿದ್ದಾರೆ. ಭಾರತ ಫುಟ್‌ಬಾಲ್ ತಂಡ ಏಕ ವ್ಯಕ್ತಿ ಸೇನೆ ಎನ್ನುವ ಅಪಖ್ಯಾತಿಯಿಂದ ನಿಧಾನಕ್ಕೆ ಹೊರಬರುತ್ತಿದೆ. ತಂಡದಲ್ಲಿ ಪ್ರತಿಭಾವಂತರು ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನೊಂದು ಕಡೆ ಇಂಡಿಯನ್ ಸೂಪರ್ ಲೀಗ್ ಎಂಬ ದೇಶೀಯ ಕೂಟ ಶುರುವಾಗಿದೆ. ಇಲ್ಲಿ ವಿದೇಶಿ ಆಟಗಾರರೊಂದಿಗೆ, ತರಬೇತುದಾರರೊಂದಿಗೆ ಭಾರತೀಯರು ಆಡುತ್ತಿದ್ದಾರೆ. ನಿಧಾನಕ್ಕೆ ಆ ತಂತ್ರಗಾರಿಕೆ, ಆಕ್ರಮಣಶೀಲತೆಯನ್ನು ಕಲಿಯುತ್ತಿದ್ದಾರೆ. ಇದು ಅದ್ಭುತ ಪರಿಣಾಮ ಬೀರಿದೆ. ಭಾರತ ಅಂತಾರಾಷ್ಟ್ರೀಯ ತಂಡ ಕೂಡ ಪ್ರಬಲವಾಗುತ್ತಿದೆ. ಪುರುಷರ ತಂಡ ಸತತವಾಗಿ ಒಂದಲ್ಲ ಒಂದು ಕೂಟದಲ್ಲಿ ಆಡುತ್ತಲೇ ಇರುತ್ತದೆ. ಆದ್ದರಿಂದ ಆ ತಂಡದಲ್ಲಿ ಒಂದು ಬದಲಾವಣೆ ಕಾಣುತ್ತಿದೆ. ಆದ್ದರಿಂದಲೇ ವಿಶ್ವ ಫುಟ್‌ಬಾಲ್ ಸಂಸ್ಥೆ-ಫಿಫಾ, ಭಾರತವನ್ನು ನಿದ್ರಿಸುತ್ತಿರುವ ದೈತ್ಯ ತಂಡ ಎಂದು ಕರೆದಿದ್ದು.
ಮಹಿಳೆಯರ ಪರಿಸ್ಥಿತಿ ವ್ಯತಿರಿಕ್ತ
ಇದೇ ಮಾತನ್ನು ಭಾರತೀಯ ಮಹಿಳಾ ಫುಟ್‌ಬಾಲ್ ಬಗ್ಗೆ ಹೇಳುವಂತೆಯೇ ಇಲ್ಲ. ಭಾರತ ಮಹಿಳಾ ತಂಡ ವಿಶ್ವ ಫುಟ್‌ಬಾಲ್ ಶ್ರೇಯಾಂಕದಲ್ಲಿ 63ನೇ ಸ್ಥಾನ ಹೊಂದಿದೆ. ಏಷ್ಯಾ ಮಟ್ಟದಲ್ಲಿ 13ನೇ ಸ್ಥಾನ ಹೊಂದಿದೆ. ವಿಶ್ವ ಮಟ್ಟದಲ್ಲಿ ಭಾರತ ಪುರುಷರ ತಂಡ 101ನೇ ಶ್ರೇಯಾಂಕ ಪಡೆದಿರುವುದನ್ನು ಗಮನಿಸಿದರೆ, ಮಹಿಳಾ ತಂಡ 63ನೇ ಸ್ಥಾನ ಪಡೆದಿರುವುದು ಅಚ್ಚರಿ ಮೂಡಿಸುತ್ತದೆ. ಇದಕ್ಕೆ ಕಾರಣ ಭಾರತದಲ್ಲಿ ಮಹಿಳಾ ಫುಟ್‌ಬಾಲ್ ಉತ್ತಮ ಸ್ಥಿತಿಯಲ್ಲಿದೆ ಎನ್ನುವುದಲ್ಲ, ವಿಶ್ವದಲ್ಲೇ ಮಹಿಳಾ ಫುಟ್‌ಬಾಲ್ ಸ್ಥಿತಿ ಅಧೋಗತಿಯಲ್ಲಿದೆ ಎನ್ನುವುದು. ಮಹಿಳಾ ವಿಶ್ವಕಪ್, ಖಂಡಗಳ ಮಟ್ಟದ ಕೂಟ, ವಿವಿಧ ದೇಶಗಳೊಳಗೆ ನಡೆಯುವ ಲೀಗ್ ಎಲ್ಲವನ್ನೂ ಪರಿಗಣಿಸಿದರೆ, ವಿಶ್ವಮಟ್ಟದಲ್ಲಿ ಕೆಟ್ಟ ಸ್ಥಿತಿಯಿದೆ. ಮಹಿಳಾ ಲೀಗ್‌ಗಳು ಜನಪ್ರಿಯವಾಗಿಲ್ಲ, ಮಹಿಳಾ ವಿಶ್ವಕಪ್‌ಗ್ೂ ಜನಪ್ರಿಯತೆಯಿಲ್ಲ. ವಿಶ್ವದಲ್ಲೇ ಅಂತಹ ಸಂದಿಗ್ಧವಿರುವಾಗ, ಮಹಿಳಾ ಫುಟ್‌ಬಾಲ್ ಎನ್ನುವುದು ನಾಮಕೇವಾಸ್ತೆಗೆ ಮಾತ್ರ ಇರುವ ಭಾರತದಂತಹ ದೇಶದ ಶ್ರೇಯಾಂಕ 63 ಆಗಿದ್ದರೆ, ಅದು ಹೆಗ್ಗಳಿಕೆಯಾಗುವುದಿಲ್ಲ!
ದೇಶದಲ್ಲಿ ಮಹಿಳಾ ಫುಟ್‌ಬಾಲ್ ಅವಸ್ಥೆ ಹೇಗಿದೆ?
17 ವಯೋಮಿತಿ ಮಹಿಳಾ ವಿಶ್ವಕಪ್ ಆಯೋಜಿಸಿ, ಮಹಿಳಾ ಫುಟ್‌ಬಾಲನ್ನು ಉದ್ಧಾರ ಮಾಡಲು ಸಾಧ್ಯ ಎಂದು ಭ್ರಮಿಸಿರುವವರ ಯೋಚನೆ ಭ್ರಮೆ ಎಂದು ಅರ್ಥ ಮಾಡಿಕೊಳ್ಳಲು ಭಾರತದಲ್ಲಿನ ಮಹಿಳಾ ಫುಟ್‌ಬಾಲ್ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅದಕ್ಕಾಗಿ ಮಹಿಳಾ ಫುಟ್‌ಬಾಲನ್ನು ಮೇಲಿನಿಂದ ಕೆಳಗಿನವರೆಗೆ ಅವಗಾಹನೆ ಮಾಡಬೇಕು. ಕಳೆದ ಹಲವಾರು ವರ್ಷಗಳಲ್ಲಿ ಮಹಿಳೆಯರು ಆಡಿರುವ ಮಹತ್ವದ ಕೂಟವೆಂದರೆ 2014ರ ಏಷ್ಯನ್ ಗೇಮ್ಸ್ ಮಾತ್ರ! ಅಲ್ಲೂ ಪರಿಸ್ಥಿತಿ ಹೇಗಿತ್ತೆಂದರೆ ಕೂಟದ ಉದ್ಘಾಟನಾ ಸಮಾರಂಭ ಆಗುವುದಕ್ಕೆ ಮುನ್ನವೇ ಭಾರತ ಹೊರಬಿದ್ದಾಗಿತ್ತು. ಅಂದರೆ ಮುಖ್ಯಸುತ್ತಿಗೆ ಅರ್ಹತೆಯನ್ನೇ ಪಡೆಯಲಿಲ್ಲ. ಅಲ್ಲಿ ಭಾರತ ಥಾಯ್ಲೆಂಡ್ ಮತ್ತು ದ.ಕೊರಿಯಾಗಳೆದುರು ತಲಾ 10-0 ಗೋಲುಗಳ ಅಂತರದಿಂದ ಸೋತು ಹೋಗಿತ್ತು. 2 ವರ್ಷಗಳ ಹಿಂದೆ ಜೋರ್ಡಾನ್‌ನಲ್ಲಿ ನಡೆದ ಏಷ್ಯನ್ ಕಪ್‌ನಲ್ಲಿ ಪರಿಸ್ಥಿತಿ ಇನ್ನೂ ಅಧೋಗತಿಯಲ್ಲಿತ್ತು. ಆ ಕೂಟಕ್ಕಾಗಿ ನಡೆದ ಅರ್ಹತಾ ಸುತ್ತಿನಲ್ಲಿ, ಉತ್ತರ ಕೊರಿಯ ವಿರುದ್ಧ 8-0, ದ.ಕೊರಿಯ ವಿರುದ್ಧ 10-0, ಉಜ್ಬೆಕಿಸ್ತಾನ ವಿರುದ್ಧ 7-1ರಿಂದ ಭಾರತ ಸೋತು ಹೋಗಿತ್ತು.
ಇಂತಹ ದುಸ್ಥಿತಿಗೆ ಕಾರಣ, ಭಾರತ ಅಂತಾರಾಷ್ಟ್ರೀಯ ಪಂದ್ಯಗಳನ್ನು ಅಪರೂಪಕ್ಕೆ ಮಾತ್ರ ಆಡುತ್ತಿರುವುದು. ಇಡೀ 2017, 2018ರಲ್ಲಿ ಭಾರತ ಆಡಿದ್ದು ಕೇವಲ 2 ಸ್ನೇಹ ಪಂದ್ಯ. ಅದೂ ಬರೀ ಏಷ್ಯಾ ಮಟ್ಟದ ರಾಷ್ಟ್ರಗಳ ವಿರುದ್ಧ. ಜೊತೆಗೆ ಏಷ್ಯನ್ ಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಆಡಿದೆ. ಕೇವಲ ಇಷ್ಟರಿಂದ ಪ್ರಬಲ ಅಂತಾರಾಷ್ಟ್ರೀಯ ಆಟಗಾರ್ತಿಯರು ಹೊರಹೊಮ್ಮಲು ಸಾಧ್ಯವೇ? ಇಂತಹ ಸ್ಥಿತಿಯಲ್ಲಿರುವಾಗ ಮಹಿಳೆಯರು ಈ ಕ್ರೀಡೆಯನ್ನು ಸ್ವೀಕರಿಸಲು ಮುಂದೆ ಬರುತ್ತಾರೆಯೇ?
ಕಿರಿಯರ ಕೂಟಗಳು ಎಲ್ಲಿವೆ?
ಹಿರಿಯರ ತಂಡಕ್ಕೆ ಆಟಗಾರ್ತಿಯರನ್ನು ಪೂರೈಸುವುದು ಕಿರಿಯರ ತಂಡಗಳು. ಅರ್ಥಾತ್ ಕಿರಿಯ ಆಟಗಾರ್ತಿಯರನ್ನು ಬೆಳೆಸುವ ವ್ಯವಸ್ಥೆ ಪ್ರಬಲವಾಗಿದ್ದರೆ, ಸಹಜವಾಗಿ ಅವರೇ ಮುಂದೆ ಹಿರಿಯ ಆಟಗಾರ್ತಿಯರ ಸ್ಥಾನದಲ್ಲಿ ನಿಲ್ಲುತ್ತಾರೆ. ಭಾರತದಲ್ಲಿ ಈ ವ್ಯವಸ್ಥೆ ಹೇಗಿದೆ ಎಂದರೆ, ಅತ್ಯಂತ ದಯನೀಯವಾಗಿದೆ ಎಂದು ಉತ್ತರಿಸಬೇಕಾಗುತ್ತದೆ. ದೇಶದ ಯಾವುದೇ ರಾಜ್ಯದಲ್ಲೂ 13 ವಯೋಮಿತಿ, 15 ವಯೋಮಿತಿ, 18 ವಯೋಮಿತಿ ಮಹಿಳೆಯರಿಗಾಗಿ ಕ್ರೀಡಾಕೂಟಗಳು ನಡೆಯುತ್ತಿಲ್ಲ. ಕೇವಲ 11 ರಾಜ್ಯಗಳಲ್ಲಿ ಮಾತ್ರ ಹಿರಿಯರ ತಂಡದ ಕೂಟಗಳು ನಡೆಯುತ್ತಿವೆ. ಇದನ್ನು ಎಐಎಫ್ಎಫ್ ವೃತ್ತಿಪರ ಕ್ರೀಡಾಕೂಟ ಎಂದು ಕರೆಯುತ್ತದೆ. ಆದರೆ ಇಲ್ಲಿ ಹಲವು ಕ್ರೀಡಾಪಟುಗಳಿಗೆ ಸರಿಯಾಗಿ ಹಣ ಪಾವತಿಯಾಗುತ್ತಿಲ್ಲ. ಇದು ವೃತ್ತಿಪರ ಆಗುವುದಾದರೂ ಹೇಗೆ?
ಸ್ವತಃ ಎಐಎಫ್ಎಫ್, ಪ್ರತಿ ವಯೋಮಿತಿಗಾಗಿ ವರ್ಷದಲ್ಲಿ ಒಂದು ಕ್ರೀಡಾಕೂಟ ಮಾತ್ರ ನಡೆಸುತ್ತಿದೆ. ಆದರೆ ಇದಕ್ಕಾಗಿ ಒಂದು ವ್ಯವಸ್ಥೆಯಿಲ್ಲ. ಆಟಗಾರ್ತಿಯರ ಗುಂಪಿಲ್ಲ, ರಾಜ್ಯಮಟ್ಟದಲ್ಲಿ ಸರಿಯಾದ ತಂಡಗಳು, ಅವಕ್ಕೆ ಬೇಕಾದ ವ್ಯವಸ್ಥೆಗಳು ಇಲ್ಲ. ಇಂತಹ ಸ್ಥಿತಿಯಲ್ಲಿ ಎಐಎಫ್ಎಫ್ ವಿಶ್ವಕಪ್ ನಡೆಸಿ ಏನೋ ಒಂದು ಪವಾಡ ಮಾಡುವ ಕನಸನ್ನು ಕಾಣುತ್ತಿದೆ. ಅದರ ಈ ಭರವಸೆಗೆ ಕಾರಣ 2017ರಲ್ಲಿ ಅದು ಆಯೋಜಿಸಿ, ಯಶಸ್ವಿಯಾಗಿದ್ದ 17 ವಯೋಮಿತಿಯೊಳಗಿನ ಬಾಲಕರ ವಿಶ್ವಕಪ್. ಆದರೆ ಆಗ ಬಾಲಕರ ತಂಡಕ್ಕೆ, ಕೂಟಕ್ಕೆ ಸಿದ್ಧವಾಗಲು 4 ವರ್ಷಗಳ ಸಮಯವಿತ್ತು. ಅದೇ ಬಾಲಕಿಯರ ಪರಿಸ್ಥಿತಿ ತೀರಾ ವಿಚಿತ್ರವಾಗಿದೆ. 2018ರ ಸೆಪ್ಟೆಂಬರ್‌ನಲ್ಲಿ ಮಹಿಳಾ ವಿಶ್ವಕಪ್‌ಗಾಗಿ ಭಾರತ ಬಿಡ್ ಸಲ್ಲಿಸಿತು. ಈ ವರ್ಷ ಮಾರ್ಚ್‌ನಲ್ಲಿ ಭಾರತಕ್ಕೆ ಆತಿಥ್ಯ ಲಭಿಸಿತು. ಮುಂದಿನ ವಷ್ಯಾತ್ಯದಷ್ಟೊತ್ತಿಗೆ ಅಂದರೆ ಇನ್ನು 18 ತಿಂಗಳಲ್ಲಿ ಭಾರತ ಕೂಟಕ್ಕೆ ಸಿದ್ಧವಾಗಬೇಕು. ಅಷ್ಟು ಕಡಿಮೆ ಅವಧಿಯಲ್ಲಿ ಭಾರತ ವಿಶ್ವಕಪ್‌ಗೆ ಸಿದ್ಧವಾಗಲು ಸಾಧ್ಯವೇ?
ಆತಿಥೇಯ ತಂಡವೆಂಬ ಕಾರಣಕ್ಕೆ ಭಾರತಕ್ಕೂ ವಿಶ್ವಕಪ್‌ನಲ್ಲಿ ಆಡಲು ಅವಕಾಶವೇನೋ ಸಿಗುತ್ತದೆ. ಆದರೆ ಭಾರತ ಸೆಣಸಬೇಕಿರುವುದು ಇತರೆ 15 ಬಲಾಡ್ಯ ತಂಡಗಳ ವಿರುದ್ಧ ಅನ್ನುವುದು ನಮಗೆ ಗೊತ್ತಿರಬೇಕು. ಇಂತಹ ತಂಡಗಳ ವಿರುದ್ಧ ವಿಶ್ವಕಪ್‌ನಲ್ಲಿ ಕನಿಷ್ಠ ಮರ್ಯಾದೆಯುಳಿಸಿಕೊಳ್ಳುವ ಮಟ್ಟದಲ್ಲಿ ಭಾರತ ಆಡಬೇಕಾದರೆ, ಕನಿಷ್ಠ 5 ವರ್ಷದ ಅಭ್ಯಾಸ ಬೇಕು. ಆದರೆ ಈಗಿನ ಪರಿಸ್ಥಿತಿ ಸಂಪೂರ್ಣ ಉಲ್ಟಾ. ಇದನ್ನು ಯೋಚಿಸಿದರೆ, ಭಾರತಕ್ಕೆ ಸಿಗಬಹುದಾದ ಸೋಲಿನ ಅಂತರದ ಲೆಕ್ಕಾಚಾರ ಈಗಲೇ ಸಿಕ್ಕುತ್ತದೆ.
ಆಟಗಾರ್ತಿಯರಿಗೆ ಬರ!
ಭಾರತದ ಮಹಿಳಾ ಫುಟ್‌ಬಾಲ್ ಸ್ಥಿತಿ ಶೋಚನೀಯವಾಗಿದೆ. ಇಲ್ಲಿ ದೇಶಾದ್ಯಂತ ಮಹಿಳಾ ಫುಟ್‌ಬಾಲ್ ಜನಪ್ರಿಯತೆ ಹೊಂದಿಲ್ಲದಿರುವುದರಿಂದ, ರಾಷ್ಟ್ರೀಯ ತಂಡದ ಶೇ.70ರಷ್ಟು ಆಟಗಾರ್ತಿಯರು ಈಶಾನ್ಯ ಭಾರತಕ್ಕೆ ಸೇರಿರುತ್ತಾರೆ. ಅದರಲ್ಲೂ ಮಣಿಪುರದವರಾಗಿರುತ್ತಾರೆ. ಆ ರಾಜ್ಯದಲ್ಲಿ ಪುರುಷರ ಫುಟ್‌ಬಾಲ್ ಪ್ರಬಲವಾಗಿರುವುದರಿಂದ, ಮಹಿಳಾ ಫುಟ್‌ಬಾಲ್ ಕೂಡ ಸಶಕ್ತವಾಗಿದೆ. ಇದನ್ನೇ ಉಳಿದ ರಾಜ್ಯಗಳಿಗೆ ಅನ್ವಯಿಸಿದರೆ, ಮಹಿಳಾ ಆಟಗಾರ್ತಿಯರನ್ನು ಹುಡುಕಬೇಕು. ಆಂಧ್ರಪ್ರದೇಶದಲ್ಲಿ ಒಮ್ಮೆ ಕಿರಿಯರ ತಂಡವನ್ನು ರಚಿಸಲು ಹೋದಾಗ, ಕನಿಷ್ಠ 30 ಸಂಭಾವ್ಯರನ್ನು ಸಿದ್ಧಪಡಿಸಲಾಗದೇ ಪರದಾಡಲಾಗಿದೆ. ಹೀಗಿರುವಾಗ ಬರೀ ಒಂದು ವಿಶ್ವಕಪ್ ಆಯೋಜನೆಯಿಂದ ಏನು ಸಾಧ್ಯವಾಗಬಹುದು?
ಇಷ್ಟಾದರೇ ಸಾಕೇ?
17 ವಯೋಮಿತಿ ಮಹಿಳಾ ಫುಟ್‌ಬಾಲ್ ಆಯೋಜನೆಯಿಂದ, ಒಂದಷ್ಟು ಲಾಭಗಳಾಗುತ್ತವೆ. ಮೈದಾನಗಳಲ್ಲಿ ಇದುವರೆಗೆ ಮಹಿಳೆಯರಿಗೆ ಇಲ್ಲದೇ ಇರುವ ಸೌಲಭ್ಯಗಳು ಸಿದ್ಧವಾಗುತ್ತವೆ. ತರಬೇತಿ ಸಿಬ್ಬಂದಿ ಹೆಚ್ಚಾಗುತ್ತಾರೆ. ಆರ್ಥಿಕವಾಗಿ ಒಂದಷ್ಟು ಪರಿಸ್ಥಿತಿ ಸುಧಾರಿಸುತ್ತದೆ. ಇಷ್ಟಾದರೆ ಸಾಕೇ? ದೇಶದಲ್ಲಿ ಬೇರು ಮಟ್ಟದಿಂದ ಆಟಗಾರ್ತಿಯರನ್ನು ತಯಾರಿಸುವ ವ್ಯವಸ್ಥೆಗಳು, ಲೀಗ್‌ಗಳು ಇಲ್ಲದೇ ಹೋದರೆ, ಮೊಗ್ಗು ಅರಳಿ ಹೂವಾಗುವುದಾದರೂ ಹೇಗೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.