ಯಲಗೂರು ಆಂಜನೇಯ:ಏಳೂರಿಗೆ ಒಬ್ಬನೇ ದೇವರು !
ಇದು ಜಟಾಯು, ಶಬರಿಯ ನೆಲೆವೀಡು
Team Udayavani, Jun 22, 2019, 2:31 PM IST
ದೇವಾಲಯದ ಪ್ರಾಂಗಣದಲ್ಲಿ ಸೂರ್ಯನಾರಾಯಣನ ಚಿಕ್ಕ ಗುಡಿ ಕೂಡ ಇದೆ. ಗುಡಿಯ ಹಿಂದೆ ತುಳಸಿ ವೃಂದಾವನ ಇದೆ. ಮಹಾದ್ವಾರದ ಬದಿಗೆ ಎರಡು ಎತ್ತರದ ವೀರಗಲ್ಲುಗಳಿವೆ. ಅವುಗಳ ಮೇಲೆ ದ್ವಾರಪಾಲಕರನ್ನು ಕೆತ್ತನೆಗಳಿವೆ. ಗರ್ಭಗೃಹದಲ್ಲಿ ಸುಮಾರು 7 ಅಡಿ ಎತ್ತರದ ಆಂಜನೇಯನ ವಿಗ್ರಹವಿದೆ.
ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನಲ್ಲಿರುವ ಒಂದು ಪುಟ್ಟ ಗ್ರಾಮವೇ ಯಲಗೂರು. ಇದು ಆಂಜನೇಯನ ದೇವಾಲಯ ಹೊಂದಿದ ಪುಣ್ಯಕ್ಷೇತ್ರ. ಇಲ್ಲಿ ಆಂಜನೇಯನನ್ನು ಯಲಗೂರೇಶ ಎಂತಲೂ ಕರೆಯಲಾಗುತ್ತದೆ. ಚಂದ್ರಗಿರಿ, ಅಳಿಲುದಿನ್ನೆ, ಯಲಗೂರು, ಕಾಗಿನಕುಂಟೆ, ಬೂದಿಹಾಳ, ಮಸೂತಿ, ನಾಗಸಂಪಿಗೆ… ಹೀಗೆ ಏಳು ಊರಿಗೆ ಒಡೆಯನಾಗಿ ನೆಲೆ ನಿಂತಿದ್ದಾನೆ ಈ ಯಲಗೂರೇಷ. ಸಾಮಾನ್ಯವಾಗಿ ಊರಿಗೊಂದು ಆಂಜನೇಯನ ದೇವಾಲಯವಿರುತ್ತದೆ. ಆದರೆ, ಇಲ್ಲಿ ಏಳೂ ಊರುಗಳಿಗೆ ಒಬ್ಬನೇ ಆಂಜನೇಯ ಎಂಬುದೇ ವಿಶೇಷ.
ಈ ಊರಿನಲ್ಲಿ ಆಂಜನೇಯ ನೆಲೆನಿಂತ ಬಗ್ಗೆ ಸಾಕಷ್ಟು ದೃಷ್ಟಾಂತ ಕಥೆಗಳಿವೆ. ಉತ್ತರ ಭಾರತದಲ್ಲಿ ಗಂಗಾ ನದಿಗೆ ಎಷ್ಟು ಪ್ರಾಮುಖ್ಯತೆ ಇದೆಯೋ, ಅದೇ ರೀತಿ ದಕ್ಷಿಣ ಭಾರತದಲ್ಲಿ ಕೃಷ್ಣಾ ನದಿಗೆ ಬಹಳ ಪ್ರಾಮುಖ್ಯತೆ ಇದೆ. ಗಂಗಾ ತೀರದಲ್ಲಿರುವಂತೆ ಕೃಷ್ಣಾನದಿ ತೀರದಲ್ಲಿಯೂ ಸಾಕಷ್ಟು ತೀರ್ಥ ಕ್ಷೇತ್ರಗಳಿವೆ. ಅವುಗಳಲ್ಲಿ ಸೀತಾ ತೀರ್ಥ, ಕೃಷ್ಣ ತೀರ್ಥ, ಸಿದ್ಧ ತೀರ್ಥ ಹಾಗೂ ಆಂಜನೇಯ ತೀರ್ಥಗಳು ಪ್ರಮುಖವಾಗಿವೆ. ಇವುಗಳಲ್ಲಿ ಯಲಗೂರು ಕ್ಷೇತ್ರ ಕೂಡ ಆಂಜನೇಯ ತೀರ್ಥ ಎಂದೇ ಖ್ಯಾತಿಗಳಿಸಿದೆ.
ಪೌರಾಣಿಕ ಹಿನ್ನೆಲೆ
ಮಾರೀಚನು ರಾವಣನ ಆದೇಶದಂತೆ ಚಿನ್ನದ ಜಿಂಕೆ ರೂಪದಲ್ಲಿ ಸೀತೆಯ ಗಮನ ಸೆಳೆದ ಊರು ಚಿಮ್ಮಲಗಿ. ಶಬರಿ ನೆಲೆಸಿದ್ದಳೆಂದು ಹೇಳಲಾದ ಊರು ಚಂದ್ರಗಿರಿ – ಅಳಿಲುದಿನ್ನೆ. ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಅವನನ್ನು ಅಡ್ಡಗಟ್ಟಿ ಪ್ರಾಣ ಕಳೆದುಕೊಂಡ ಪಕ್ಷಿಗಳ ರಾಜ ಜಟಾಯು ಪ್ರಾಣ ಬಿಟ್ಟಿದ್ದು ಇಲ್ಲಿನ ಅಡ್ಡಗಟ್ಟಿ ಗ್ರಾಮದಲ್ಲಿಯೇ ಎನ್ನುವ ಪ್ರತೀತಿ ಇದೆ. ಇದಲ್ಲದೇ, ಆಂಜನೇಯನು ಶ್ರೀರಾಮನ ಆದೇಶವನ್ನು ಪಾಲಿಸಲು ಈ ಯಲಗೂರು ಕ್ಷೇತ್ರದಲ್ಲಿ ನೆಲೆಸಿದನೆಂದು ಹೇಳಲಾಗುತ್ತಿದೆ.
ಕೃಷ್ಣಾನದಿಯ ತೀರದಲ್ಲಿರುವ ಯಲಗೂರೇಶನ ದೇವಾಲಯದ ಪ್ರಾಂಗಣ ವಿಶಾಲವಾಗಿದ್ದು ರಂಗಮಂಟಪವನ್ನು ಹೊಂದಿದೆ. ಇಲ್ಲಿನ ಕಂಬದಲ್ಲಿ ಆಂಜನೇಯನ ಚಿಕ್ಕದಾದ ಮೂರ್ತಿಯನ್ನು ಕೆತ್ತನೆ ಮಾಡಲಾಗಿದೆ. ಈ ಮಂಟದಲ್ಲಿಯೇ ಶಿವನ ಲಿಂಗ ಹಾಗೂ ಗಣಪತಿಯ ಭವ್ಯವಾದ ವಿಗ್ರಹವಿದೆ. ದೇವಾಲಯದ ಎರಡು ಬದಿಯಲ್ಲಿ ಆನೆಗಳ ಶಿಲಾ ಮೂರ್ತಿಗಳಿವೆ. ದೇವಾಲಯದ ಮುಖ್ಯ ಗೋಡೆಯ ಮೇಲೆ ಸಂಜೀವಿನಿ ಪರ್ವತವನ್ನು ಎತ್ತಿ ಹಿಡಿದಿರುವ ಆಂಜನೇಯನ ಮೂರ್ತಿಯನ್ನು ಕಾಣಬಹುದು. ದೇವಾಲಯದ ಪ್ರಾಂಗಣದಲ್ಲಿ ಸೂರ್ಯನಾರಾಯಣನ ಚಿಕ್ಕ ಗುಡಿ ಕೂಡ ಇದೆ. ಗುಡಿಯ ಹಿಂದೆ ತುಳಸಿ ವೃಂದಾವನ ಇದೆ. ಮಹಾದ್ವಾರದ ಬದಿಗೆ ಎರಡು ಎತ್ತರದ ವೀರಗಲ್ಲುಗಳಿವೆ. ಅವುಗಳ ಮೇಲೆ ದ್ವಾರಪಾಲಕರನ್ನು ಕೆತ್ತನೆಗಳಿವೆ. ಗರ್ಭಗೃಹದಲ್ಲಿ ಸುಮಾರು 7 ಅಡಿ ಎತ್ತರದ ಆಂಜನೇಯನ ವಿಗ್ರಹವಿದೆ. ಅದರ ಎಡಪಾದವು ರಾಕ್ಷಸನನ್ನು ತುಳಿಯುತ್ತಿರುವ ಭಂಗಿಯಲ್ಲಿದೆ. ಪ್ರಸನ್ನ ವದನನಾಗಿ ನಿಂತಿರುವ ಹನುಮ ಭಕ್ತಾದಿಗಳಿಗೆ ಅಭಯ ಮುದ್ರ ನೀಡುವುದು ಗೋಚರವಾಗುತ್ತದೆ. ಪ್ರಾಕಾರದ ಹೊರಗಡೆ ಗರುಡಗಂಭವಿದ್ದು ಅದಕ್ಕೆ ಪವಾಡ ದಾಸಯ್ಯನ ಕಂಬ ಎಂದು ಕರೆಯಲಾಗುತ್ತದೆ.
ಬೆಟ್ಟದ ಅಡಿಯಲ್ಲಿರುವ ಗೋವಿಂದರಾಜ ಕೆರೆಯ ಸಮೀಪದಲ್ಲಿರುವ ಶ್ರೀ ವೆಂಕಟೇಶ್ವರ ಮತ್ತು ಶ್ರೀ ದೇವಿಯರ ವಿಗ್ರಹದ ಮಧ್ಯಭಾಗದಲ್ಲಿ ದೊಡ್ಡದಾದ ಬಂಡೆಗಲ್ಲು ಇದೆ. ಅದರಲ್ಲಿ ನಾನಿದ್ದೇನೆಂದು ಒಮ್ಮೆ ಯಲಗೂರೇಶ ಒಬ್ಬ ಪುರೋಹಿತರ ಕನಸಿನಲ್ಲಿ ಬಂದು ಹೇಳಿದನಂತೆ.
ಆ ಪುರೋಹಿತರು ಆ ಬಂಡೆಗಲ್ಲನ್ನು ಒಡೆದು ಯಲಗೂರೇಶನನ್ನು ಹೊರಗೆ ತೆಗೆಯುವ ಸಂದರ್ಭದಲ್ಲಿ ಆ ಮೂರ್ತಿ ಭಗ್ನಗೊಂಡಿತಂತೆ. ಇದರಿಂದ ಚಿಂತಿತರಾದ ಪುರೋಹಿತರ ಕನಸಿನಲ್ಲಿ ಮತ್ತೆ ಕಾಣಿಸಿಕೊಂಡ ಯಲಗೂರೇಶ ಆ ಭಗ್ನಗೊಂಡ ವಿಗ್ರಹವನ್ನು ಏಳು ದಿನಗಳ ಕಾಲ ದೇವಸ್ಥಾನದ ಗರ್ಭಗೃಹದಲ್ಲಿ ಇರಿಸಿ ಬೀಗ ಹಾಕಿಬಿಡಿ, ಏಳು ದಿನಗಳ ಕಾಲ ಬೀಗ ತೆರೆಯಬಾರದು ಎಂದು ಕಟ್ಟಪ್ಪಣೆ ಮಾಡಿದನಂತೆ. ಆದರೆ, ಕುತೂಹಲಕ್ಕೆ ಆ ಪುರೋಹಿತರು 7ನೇ ದಿನ ಮುಂಜಾನೆಯ ಸಮಯದಲ್ಲಿ ಬಾಗಿಲು ತೆಗೆದು ನೋಡಿದಾಗ ಈ ಯಲಗೂರೇಷನ ವಿಗ್ರಹದ ಮೇಲಿನ ಭಾಗ ಮಾತ್ರ ಕೂಡಿಕೊಂಡಿತ್ತಂತೆ. ಕೆಳಗಿನ ಸ್ವಲ್ಪ ಭಾಗ ಕೂಡಿಕೊಂಡಿರಲಿಲ್ಲ. ಆಗ, ಸ್ವಾಮಿಯ ಆಜ್ಞೆಯಂತೆ ಪುರೋಹಿತರು ಕೃಷ್ಣಾನದಿಯ ನೀರು ತಂದು ಅಭೀಷೇಕ ಮಾಡಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರಂತೆ. ಇಂದಿಗೂ ಕೂಡ ಯಲಗೂರೇಶನ ಮೂರ್ತಿಯ ಕೆಳಭಾಗ ಸ್ವಲ್ಪ ಹೊಂದಿಕೊಂಡಂತೆ ಕಾಣಿಸುವುದಿಲ್ಲ.
ಇನ್ನೊಂದು ದಂತಕಥೆಯ ಪ್ರಕಾರ, ಈ ಪ್ರದೇಶವನ್ನು ಆಳುತ್ತಿದ್ದ ಪಾಳೇಗಾರ ನಿಪ್ಪಾಣಿಕರ ಅವರ ಹತ್ತಿರ ಇರುವ ಆಕಳುಗಳನ್ನು ಒಬ್ಬ ಗೋಪಾಲಕ ಪ್ರತಿದಿನ ಹುಲ್ಲು ಮೇಯಿಸಲು ಈ ಪ್ರದೇಶಕ್ಕೆ ಕರೆದುಕೊಂಡು ಹೋಗುತ್ತಿದ್ದನಂತೆ. ಅದರಲ್ಲಿ ಒಂದು ಆಕಳು ದಿನಂಪ್ರತಿ ಒಂದು ಹುತ್ತಕ್ಕೆ ಹಾಲೆರೆಯುತ್ತಿತ್ತಂತೆ. ದಿನವೂ ಮನೆಗೆ ತಿರುಗಿ ಬಂದ ನಂತರ ಎಲ್ಲ ಆಕಳುಗಳೂ ಹಾಲು ಕರೆದರೆ ಈ ಆಕಳು ಮಾತ್ರ ಹಾಲು ಕರೆಯುತ್ತಿರಲಿಲ್ಲ. ಇದರಿಂದ ಕೋಪಗೊಂಡ ಪಾಳೇಗಾರರು ಗೋಪಾಲಕನನ್ನು ದಂಡಿಸಿದರಂತೆ. ಆಗ ಅವರ ಕನಸಿನಲ್ಲಿ ಬಂದ ಯಲಗೂರೇಶ, ನೀವು ಗೋಪಾಲಕನನ್ನೇಕೆ ದಂಡಿಸಿದಿರಿ? ಆ ಆಕಳು ಹುತ್ತದಲ್ಲಿರುವ ನನಗೆ ದಿನವೂ ಹಾಲು ಕೊಡುತ್ತಿದೆ ಎಂದು ಹೇಳಿ, ಆ ಹುತ್ತದಲ್ಲಿರುವ ಮೂರ್ತಿಯನ್ನು ಅದೇ ಜಾಗದಲ್ಲಿ ಪ್ರತಿಷ್ಠಾಪಿಸಲು ಆಜ್ಞೆ ಮಾಡಿದನಂತೆ. ಆಗ ಆ ಪಾಳೇಗಾರ ಏಳು ಊರಿನ ಜನರ ಎದುರಿಗೆ ಈ ಮೂರ್ತಿಯನ್ನು ಪ್ರತಿಷ್ಠಾಪಿಸಿದರಂತೆ. ಹೀಗಾಗಿ, ಸುತ್ತಲಿನ ಏಳು ಊರುಗಳಲ್ಲಿ ಹನುಮಪ್ಪನ ದೇವಾಲಯಗಳೇ ಇಲ್ಲ. ಪ್ರತಿವರ್ಷ ಮಾಘಮಾಸದ ಕೃಷ್ಣ ಪಕ್ಷದ ಮೊದಲ ಶನಿವಾರ ಮತ್ತು ಭಾನುವಾರಗಳಂದು ಕಾರ್ತಿಕೋತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ನಾಡಿನ ವಿವಿಧ ಭಾಗಗಳಿಂದ ಬರುವ ಭಕ್ತರು ಯಲಗೂರೇಶನಿಗೆ ಹೋಳಿಗೆ ನೈವೇದ್ಯ ಅರ್ಪಿಸಿ ತಮ್ಮ ಭಕ್ತಿ ತೋರಿಸುತ್ತಾರೆ.
ಆಶಾ ಎಸ್. ಕುಲಕರ್ಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.