26 ಸಿನಿಮಾ = 22 ಮಾರ್ಚ್! ಕಾಡುವ ಸಿನಿಮಾದ ಕುರಿತು ಆಡಿದ ಮಾತು
Team Udayavani, Aug 25, 2017, 6:40 AM IST
ಆ ಕಥೆಯನ್ನು ಹಲವು ವರ್ಷಗಳ ಹಿಂದೆಯೇ ಹೇಳಿದ್ದರಂತೆ ಕೋಡ್ಲು ರಾಮಕೃಷ್ಣ. ಆದರೆ, ಅನಂತ್‌ನಾಗ್ ಅವರೇ ತಡೆಯುತ್ತಿದ್ದರಂತೆ. ಅದಕ್ಕೆ ಕಾರಣವೂ ಇದೆ. ಅವರ ಮಾತಲ್ಲೇ ಹೇಳುವುದಾದರೆ, “ಈ ಕಥೆಯನ್ನ ಸಿನಿಮಾ ಮಾಡೋದು ಅಷ್ಟು ಸುಲಭ ಅಲ್ಲ. ತುಂಬಾ ದೊಡ್ಡ ಕ್ಯಾನ್ವಾಸ್‌ನ ಸಿನಿಮಾ ಇದು. ಹೆಚ್ಚು ದುಡ್ಡು ಕೇಳುವುದರ ಜೊತೆಗೆ, ಅದರ ಕಥಾ ಸಾರ ಬಹಳ ಆಳವಾಗಿದೆ. ಹಾಗಾಗಿ ಅಷ್ಟು ದುಡ್ಡು ಹಾಕುವ ನಿರ್ಮಾಪಕರು ಬರುವುದರ ಜೊತೆಗೆ, ನಿಮ್ಮ ಅನುಭವ ಸಹ ಬೆಳೆಯಲಿ ಅಂತ ಅವರಿಗೆ ಎಷ್ಟೋ ಸಾರಿ ಹೇಳಿದ್ದೆ. ಅದಕ್ಕೆ ಸರಿಯಾಗಿ ಅವರಿಗೆ ಹರೀಶ್ ಅವರ ಪರಿಚಯವಾಯಿತು. ಎಲ್ಲರೂ ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಹಿಂದೇಟು ಹಾಕುವಾಗ, ಅವರು ಮುಂದೆ ಬಂದರು …’ ಎನ್ನುತ್ತಾರೆ ಅನಂತ್‌ನಾಗ್.
ಹಲವು ವರ್ಷಗಳ ಹಿಂದೆ ಕೋಡ್ಲು ತಲೆಗೆ ಹೊಕ್ಕ ಕಥೆ, ಈಗಲೇ ಬೇಡ ಎಂದು ಅನಂತ್‌ನಾಗ್ ಹೇಳಿದ ಕಥೆ ಇಂದು ತೆರೆಯ ಮೇಲೆ “ಮಾರ್ಚ್ 22′ ಎಂಬ ಹೆಸರಿನಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ನೀರಿನ ಸಮಸ್ಯೆ ಮತ್ತು ಹಿಂದು-ಮುಸ್ಲಿಂ ಭಾವೈಕ್ಯತೆಯ ಕುರಿತಾಗಿ ಸಂದೇಶ ಸಾರುವ ಈ ಚಿತ್ರವನ್ನು ಅನಿವಾಸಿ ಭಾರತೀಯ ಹರೀಶ್ ಶೇರಿಗಾರ್ ನಿರ್ಮಿಸಿದ್ದಾರೆ. ಚಿತ್ರ ಬಿಡುಗಡೆಯಾಗುವ ಮುನ್ನಾ ವಾರ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಚಿತ್ರತಂಡದವರೆಲ್ಲಾ ಒಂದೆಡೆ ಜಮಾಯಿಸಿ, ಚಿತ್ರದ ಬಗ್ಗೆ ಹಲವು ಮಹತ್ವದ ವಿಷಯಗಳನ್ನು ಹಂಚಿಕೊಂಡರು.
“ಬಹಳಷ್ಟು ಜನ ಮನರಂಜನೆ ಮತ್ತು ಹಣಕ್ಕಾಗಿ ಚಿತ್ರ ಮಾಡಿದರೆ, ಅದನ್ನು ಲೆಕ್ಕಿಸದೆ, ಕೋಡ್ಲು ಮತ್ತು ಹರೀಶ್ ಒಂದು ಬೇರೆ ಪ್ರಯತ್ನ ಮಾಡಿದ್ದಾರೆ. ಈ ಚಿತ್ರದಲ್ಲಿ ನಾನು ಭೂವಿಜ್ಞಾನಿಯ ಪಾತ್ರ ಮಾಡಿದ್ದೀನಿ. ಐದು ವರ್ಷ ಸತತ ಬರವಿರುವ ಹಳ್ಳಿಗೆ ಬಂದು, ನೀರು ಹುಡುಕಿಕೊಡು ಪಾತ್ರದಲ್ಲಿ ನಾನು ನಟಿಸಿದ್ದೀನಿ. ನೀರಿನ ಮೂಲ ಹೇಳಿದ ನಂತರ, ಅಲ್ಲಿ ಏನೇನು ಸಮಸ್ಯೆಯಾಗುತ್ತದೆ ಎನ್ನುವುದೇ ಚಿತ್ರದ ಕಥೆ. ಈ ತರಹದ ಚಿತ್ರಗಳು ಗೆಲ್ಲೋದು ಬಹಳ ಮುಖ್ಯ. ಈ ತರಹದ ಸಿನಿಮಾಗಳು ಗೆದ್ದರೆ, ಆಗ ಇನ್ನೊಂದಿಷ್ಟು ಮಂದಿ ಬೇರೆ ತರಹದ ಚಿತ್ರಗಳನ್ನು ಮಾಡುವ ಪ್ರಯತ್ನ ಮಾಡುತ್ತಾರೆ’ ಎನ್ನುತ್ತಾರೆ ಅನಂತ್‌ನಾಗ್.
ಈ ಹಿಂದೆ ನಿರ್ದೇಶಿಸಿರುವ 26 ಚಿತ್ರಗಳಿಗೆ ಹಾಕಿರುವ ಶ್ರಮವೂ ಒಂದೇ, “ಮಾರ್ಚ್ 22’ಕ್ಕೆ ಹಾಕಿರುವ ಶ್ರಮವೂ ಒಂದೇ ಎನ್ನುತ್ತಾರೆ ಕೋಡ್ಲು ರಾಮಕೃಷ್ಣ. “ಚಿತ್ರ ನೋಡಿದವರೆಲ್ಲಾ ಕೋಡ್ಲು ಇಂಥಾ ಸಿನಿಮಾ ಮಾಡಿದ್ನಾ ಅಂತ ಹೇಳಬೇಕು. ಎಷ್ಟೋ ಸಿನಿಮಾಗಳು ನೋಡಿದ ದಿನವೇ ಮರೆತು ಹೋಗುತ್ತೆ. ಆದರೆ, ಇದು ಕೆಲವು ದಿನಗಳಾದರೂ ಕಾಡುವ ಸಿನಿಮಾ ಎಂದರೆ ತಪ್ಪಿಲ್ಲ. ಬರೀ ರಾಜ್ಯದಲ್ಲಷ್ಟೇ ಅಲ್ಲ, ನ್ಯಾಷನಲ್ ಲೆವೆಲ್‌ನಲ್ಲಿ ಚರ್ಚೆಯಾಗುವ ಸಿನಿಮಾ ಇದು. ಈ ಚಿತ್ರಕ್ಕೆ ಏನು ಬೇಕೋ ಅದೆಲ್ಲವನ್ನೂ ನಿರ್ಮಾಪಕರು ನನಗೆ ಕೊಟ್ಟಿದ್ದಾರೆ. ಅದನ್ನು ಉಪಯೋಗಿಸಿಕೊಂಡೂ, ನಾನೇನು ಮಾಡಿಲ್ಲ ಅಂತನಿಸಿದರೆ, ನಿರ್ಮಾಪಕರು ನನಗೆ ಬಯ್ಯಬಹುದು. ಆದರೆ, ನಾನು ಅದಕ್ಕೆ ಆಸ್ಪದ ಕೊಟ್ಟಿಲ್ಲ. ನಾನು “ಉದ್ಭವ’ ಚಿತ್ರ ಮಾಡಿದ ಸಂದರ್ಭದಲ್ಲಿ, ಭಾರತೀಯ ಚಿತ್ರರಂಗದಲ್ಲೇ ಅಪರೂಪಕ್ಕೆ ಬರುವ ಕಥೆ ಇದು ಅಂತ ಬರೆದಿದ್ದರು. ಈ ಚಿತ್ರದಲ್ಲಿ ಭಾರತೀಯ ಚಿತ್ರರಂಗದಲ್ಲೇ ಅಪರೂಪವೆನಿಸುವಂತ ಒಂದು ಕ್ಲೈಮ್ಯಾಕ್ಸ್ ಇದೆ’ ಎಂದು ಖುಷಿಯಿಂದ ಹೇಳಿಕೊಂಡರು ಕೋಡ್ಲು.
ನಿರ್ಮಾಪಕ ಹರೀಶ್ ಶೇರಿಗಾರ್ ಅವರಿಗೆ ಚಿತ್ರ ನಿರ್ಮಿಸುವ ಯೋಚನೆಯೇ ಇರಲಿಲ್ಲವಂತೆ. ಈ ಕಥೆ ಕೇಳಿ ಇಷ್ಟವಾಗಿ, ಮಾಡಿದರೆ ಇಂಥಾ ಚಿತ್ರ ಮಾಡಬೇಕು ಎಂಬ ತೀರ್ಮಾನಕ್ಕೆ ಬಂದು ಈ ಚಿತ್ರ ಮಾಡಿದರಂತೆ ಹರೀಶ್ ಶೇರಿಗಾರ್. ಇನ್ನು ಅಂದು ವೇದಿಕೆಯಲ್ಲಿ ವಿನಯಾ ಪ್ರಸಾದ್ ಜೈಜಗದೀಶ್, ಶರತ್ ಲೋಹಿತಾಶ್ವ, ಪದ್ಮಜಾ ರಾವ್, ಆರ್ಯವರ್ಧನ್, ಕಿರಣ್‌ರಾಜ್, ದೀಪ್ತಿ ಶೆಟ್ಟಿ, ಮೇಘಶ್ರೀ, ಸಂಗೀತ ನಿರ್ದೇಶಕರಾದ ಮಣಿಕಾಂತ್ ಮತ್ತು ರವಿರಾಜ್ ಮುಂತಾದವರು ಹಾಜರಿದ್ದರು ಮತ್ತು ಚಿತ್ರದ ಬಗ್ಗೆ ಮಾತನಾಡಿದರು.
– ಚೇತನ್ ನಾಡಿಗೇರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.