ಶಾದಿ ಕೆ ಬಾದ್…
ನಟಿಯರ ಸಿನಿಮಾಯಾನ ಮುಂದುವರೆದಿದೆ
Team Udayavani, May 24, 2019, 6:00 AM IST
ಶಾದಿ ಕೆ ಆಫ್ಟರ್ ಎಫೆಕ್ಟ್…! – ಇದು ಬಾಲಿವುಡ್‌ನಲ್ಲಿ ಬಂದ ಸಿನಿಮಾದ ಹೆಸರು. ಈಗ ಇಲ್ಲೇಕೆ ಈ ಹೆಸರಿನ ಪ್ರಸ್ತಾಪ ಎಂಬ ಸಣ್ಣದ್ದೊಂದು ಪ್ರಶ್ನೆ ಕಾಡಬಹುದು. ಹಾಗಂತ, ಆ ಸಿನಿಮಾ ಮತ್ತೇನಾದರೂ ಇಲ್ಲಿ ರಿಮೇಕ್ ಆಗುತ್ತಾ ಎಂಬ ಅನುಮಾನವೂ ಮೂಡಬಹುದು. ಆದರೆ, ಇಲ್ಲೀಗ ಹೇಳ ಹೊರಟಿರುವ ವಿಷಯ “ಶಾದಿ ಕೆ ಆಫ್ಟರ್ ಎಫೆಕ್ಟ್’ ಸಿನಿಮಾ ಬಗ್ಗೆ ಅಲ್ಲ. ಬದಲಾಗಿ “ಶಾದಿ ಕೆ ಬಾದ್’ ಕುರಿತಾದ ವಿಷಯ. ಅರೇ, ಕನ್ನಡದಲ್ಲೇನಾದರೂ ಈ ಹೆಸರಿನ ಸಿನಿಮಾ ಶುರುವಾಗುತ್ತಿದೆಯಾ ಎಂಬ ಪ್ರಶ್ನೆಗೆ, ಇದು ಸಿನಿಮಾ ಹೆಸರಲ್ಲ. ಆದರೆ, ಇತ್ತೀಚೆಗಷ್ಟೇ ಮದುವೆಯಾದ ಕನ್ನಡ ನಟಿಯರ “ಶಾದಿ ಕೆ ಬಾದ್’ ಕುರಿತಾದ ಸುದ್ದಿ. ಮದುವೆ ಬಳಿಕವೂ ಬೆರಳೆಣಿಕೆ ನಟಿಯರು ನಾಯಕಿಯರಾಗಿ ಮಿಂಚುತ್ತಿದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಯಾರೆಲ್ಲಾ ಮದುವೆಯಾದರು, ಯಾವ್ಯಾವ ಚಿತ್ರದಲ್ಲಿ ಯಾರ್ಯಾರು ನಟಿಸುತ್ತಿದ್ದಾರೆ. ಮದುವೆ ಬಳಿಕವೂ ಅವರ ಸಿನಿಮಾ ಉತ್ಸಾಹ ಹೇಗೆಲ್ಲಾ ಇದೆ ಎಂಬಿತ್ಯಾದಿ ಕುರಿತು ಒಂದು ರೌಂಡಪ್.
ಕಪ್ಪು-ಬಿಳುಪಿನ ಕಾಲದಿಂದಲೂ ಸೂಕ್ಷ್ಮವಾಗಿ ಗಮನಿಸಿದರೆ, ನಾಯಕಿಯರು ಮದುವೆ ಬಳಿಕ ನಾಯಕಿಯರಾಗಿ ಮಿಂಚಿದ್ದು ತೀರಾ ವಿರಳ. ಮೊದಲೆಲ್ಲಾ ಹೆಣ್ಮಕ್ಕಳು ಸಿನಿಮಾಗೆ ಬರುವುದೇ ದೊಡ್ಡ ವಿಷಯವಾಗಿತ್ತು. ಕಾಲ ಕ್ರಮೇಣ, “ಹೆಣ್ಮಕೂ ಸ್ಟ್ರಾಂಗು’ ಅನ್ನೋದು ಸಾಬೀತಾಗುತ್ತಿದ್ದಂತೆಯೇ, ನಾಯಕಿಯರ ಸಂಖ್ಯೆ ಹೆಚ್ಚಾಗತೊಡಗಿತು. ಇನ್ನು, ಮದುವೆ ಬಳಿಕ ದಶಕದವರೆಗೆ ಗ್ಯಾಪ್ ಪಡೆದು, ಆ ಬಳಿಕ ಅಕ್ಕ, ಅತ್ತಿಗೆ ಅಥವಾ ಅಮ್ಮನ ಪಾತ್ರಗಳ ಮೂಲಕ ತೆರೆಯ ಮೇಲೆ ಆವರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಟ್ರೆಂಡ್ ಬದಲಾಗುತ್ತಾ ಹೋಯ್ತು. ಮದುವೆ ಆಗದ ನಟಿಮಣಿಯರೂ ಅಕ್ಕ, ಅತ್ತಿಗೆ, ಅಮ್ಮನ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದೂ ಹೌದು. ಈಗ ಕನ್ನಡದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಈಗಿನ ಕೆಲ ನಟಿಯರು, ಮದುವೆ ನಂತರವೂ ಸಿನಿಮಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅದರಲ್ಲೂ ನಾಯಕಿಯರಾಗಿಯೇ ತೆರೆ ಮೇಲೆ ಮಿಂಚುತ್ತಿದ್ದಾರೆ ಅನ್ನೋದೇ ವಿಶೇಷ. ಸಿನಿಮಾಗಳ ಮೂಲಕ ಛಾಪು ಮೂಡಿಸಿದ ನಟಿಮಣಿಗಳಾದ ಪ್ರಿಯಾಮಣಿ, ರಾಧಿಕಾ ಪಂಡಿತ್, ಮೇಘನಾರಾಜ್, ಸಿಂಧುಲೋಕನಾಥ್, “ಜಾಕಿ’ ಭಾವನಾ’ ಸೇರಿದಂತೆ ಇನ್ನು ಅನೇಕ ನಟಿಯರು ಸಿನಿಮಾದಲ್ಲಿ ನಟಿಸುವ ಮೂಲಕ ಅಭಿಮಾನಿಗಳನ್ನು ಇನ್ನಷ್ಟು ರಂಜಿಸಲು ನಿರ್ಧರಿಸಿದ್ದಾರೆ. ಆ ಕಾರಣಕ್ಕೆ, ಈಗ ಎಲ್ಲರೂ ಒಂದಷ್ಟು ಚಿತ್ರಗಳಲ್ಲಿ ನಾಯಕಿಯರಾಗಿ ಬಿಜಿಯಾಗಿದ್ದಾರೆ.
ಪ್ರಿಯಾಮಣಿ ತಮ್ಮ ಮದುವೆ ಬಳಿಕ ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆ ಇತ್ತು. ಆದರೆ, ಮದುವೆಯಾದ ಬೆರಳೆಣಿಕೆ ದಿನಗಳಲ್ಲೇ ಅವರು ಕ್ಯಾಮೆರಾ ಮುಂದೆ ನಿಂತುಕೊಂಡರು. “ನನ್ನ ಪ್ರಕಾರ’ ಹಾಗೂ “ಡಿ 56′ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಆ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅತ್ತ, ತೆಲುಗು, ತಮಿಳು ಚಿತ್ರರಂಗದಲ್ಲೂ ತಮ್ಮ ಸಿನಿಮಾ ಯಾನ ಮುಂದುವರೆಸಿದ್ದಾರೆ. ಈ ನಡುವೆ ಅವರು “ವೈಟ್’ ಎಂಬ ಕಿರುಚಿತ್ರದಲ್ಲೂ ಪ್ರಿಯಾಮಣಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರದ ವಿಶೇಷವೆಂದರೆ, ಅದರಲ್ಲಿ ಅವರಿಗೆ ಮಾತುಗಳೇ ಇಲ್ಲ. ಹೀಗೆ ಮದುವೆ ಬಳಿಕವೂ ಸಿನಿಮಾದಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ಕಲಾಪ್ರೀತಿ ಮೆರೆಯುತ್ತಿದ್ದಾರೆ.
ಅತ್ತ, ರಾಧಿಕಾ ಪಂಡಿತ್ ಯಶ್ ಅವರನ್ನು ಮದುವೆ ಆದ ಬಳಿಕವೂ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದರು. ನಟ ಯಶ್ ಕೂಡ ಒಳ್ಳೆಯ ಸ್ಕ್ರಿಪ್ಟ್ ಬಂದರೆ, ಖಂಡಿತ ಸಿನಿಮಾ ಮಾಡುತ್ತಾರೆ ಅಂತಾನೇ ಹೇಳಿದ್ದರು. ಅದರಂತೆ, ರಾಧಿಕಾ ಪಂಡಿತ್ ಅವರು ಈಗಾಗಲೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ “ಆದಿಲಕ್ಷ್ಮೀ ಪುರಾಣ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರಿಗೆ ನಿರೂಪ್ ಭಂಡಾರಿ ಜೋಡಿಯಾಗಿದ್ದಾರೆ. ಇನ್ನೂ, ಒಳ್ಳೆಯ ಕಥೆ, ಪಾತ್ರ ಹುಡುಕಿ ಬಂದರೆ ಅವರು ನಟಿಸುವುದಾಗಿಯೂ ಹಿಂದೆ ಹೇಳಿದ್ದರು. ಸದ್ಯಕ್ಕೆ “ಆದಿಲಕ್ಷ್ಮೀ ಪುರಾಣ’ ಚಿತ್ರ ಬಿಡುಗಡೆಯಾಗಬೇಕಿದೆ.
“ಜಾಕಿ’ ಭಾವನಾ ಕೂಡಾ ನಿರ್ಮಾಪಕ ನವೀನ್ ಅವರನ್ನು ಕೈ ಹಿಡಿದ ಬಳಿಕ ಇನ್ನೇನು ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಕಷ್ಟ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, “ಜಾಕಿ’ ಭಾವನಾ ಮಾತ್ರ, ತಾನಿನ್ನೂ ಸ್ಕ್ರೀಜ್ ಬಿಟ್ಟಿಲ್ಲ ಅಂತ ಪುನಃ ಸಿನಿಮಾಗಳ ಮೇಲೆ ಸಿನಿಮಾ ಮಾಡುವ ಮೂಲಕ ಸುದ್ದಿಯಾದರು. ಮದುವೆ ಬಳಿಕ ಒಪ್ಪಿಕೊಂಡ ಸಿನಿಮಾ “ಇನ್ಸ್‌ಪೆಕ್ಟರ್ ವಿಕ್ರಂ’. ಈ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಹೀರೋ. ಮದುವೆ ನಂತರ “ಟಗರು’ ಚಿತ್ರದಲ್ಲೂ ಕಾಣಿಸಿಕೊಂಡಿದ್ದು ವಿಶೇಷ. ಇನ್ನು, ಗಣೇಶ್ ಜೊತೆ “99′ ಚಿತ್ರದಲ್ಲೂ ಭಾವನಾ ನಾಯಕಿಯಾಗಿ ನಟಿಸಿದರು. ಈಗ “ಭಜರಂಗಿ 2′ ಚಿತ್ರದಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸಿಂಧುಲೋಕನಾಥ್ ಸಹ ಮದುವೆ ನಂತರ ಸಿನಿಮಾ ಆಸೆ ಕಳೆದುಕೊಳ್ಳದೆ ಪುನಃ ನಾಯಕಿಯಾಗಿ ನಟಿಸುವ ಮೂಲಕ ಫೀಲ್ಡ್‌ಗೆ ಎಂಟ್ರಿಕೊಟ್ಟರು. ಮದುವೆ ನಂತರ “ಕಾಣದಂತೆ ಮಾಯವಾದನು’ ಸಿನಿಮಾ ಮಾಡಿದರು. “ಹೀಗೊಂದು ದಿನ’ ಚಿತ್ರದಲ್ಲೂ ಕಾಣಿಸಿಕೊಂಡರು. ಈಗ “ಕೃಷ್ಣ ಟಾಕೀಸ್’ ಬಳಿ ನಿಂತಿದ್ದಾರೆ. ಮೇಘನಾರಾಜ್ ಸಹ ನಟ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾದ ಬಳಿಕ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದು ವಿಶೇಷ. ಮಕ್ಕಳ ಚಿತ್ರಕ್ಕೆ ನಿರ್ಮಾಪಕಿಯಾದ ಮೇಘನಾರಾಜ್, ಈಗ ಉಪೇಂದ್ರ ಹಾಗೂ ಸೃಜನ್ ಲೋಕೇಶ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಉಳಿದಂತೆ ಪ್ರಿಯಾಂಕ ಉಪೇಂದ್ರ, “ಮಮ್ಮಿ ಸೇವ್ ಮಿ’, “ದೇವಕಿ’ ಚಿತ್ರಗಳ ಮೂಲಕ ನಾಯಕಿ ಪ್ರಧಾನ ಚಿತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಹಾಸನ್ ಕೂಡ ನಿರ್ದೇಶನ, ನಿರ್ಮಾಣ ಮತ್ತು ನಟನೆ ಜೊತೆಗೆ ನಾಯಕಿ ಪ್ರಧಾನದ ಆ್ಯಕ್ಷನ್ ಚಿತ್ರಗಳಲ್ಲಿ ಮಿಂಚುತ್ತಿದ್ದಾರೆ. ಕಿರುತೆರೆಯಲ್ಲಿ ಮೋಡಿ ಮಾಡಿದ್ದ ನಟಿ ಶ್ವೇತಾ ಪ್ರದೀಪ್ ಸಹ ಇತ್ತೀಚೆಗೆ “ಕಳ್ಬೆಟ್ಟದ ದರೋಡೆಕೋರರು’ ಚಿತ್ರದಲ್ಲಿ ನಟಿಸಿದ್ದರು.
ಇವರಷ್ಟೇ ಅಲ್ಲ, ಮದುವೆ ಬಳಿಕವೂ ನಟಿಯರಾದ ಮಾನಸ ಜೋಶಿ, ಸೋನುಗೌಡ, ಶ್ವೇತಾ ಶ್ರೀವಾತ್ಸವ್, ಶ್ರುತಿಹರಿಹರನ್ ಚಿತ್ರಗಳಲ್ಲಿ ತೊಡಗಿಕೊಂಡಿರುವುದು ಅವರೊಳಗಿನ ಸಿನಿಮಾ ಪ್ರೀತಿಗೆ ಸಾಕ್ಷಿ.
ಮದುವೆ ನಂತರ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕುರಿತು ಮೇಘನಾರಾಜ್ ಮತ್ತು ಸಿಂಧುಲೋಕನಾಥ್ ಸಂತಸ ವ್ಯಕ್ತಪಡಿಸುತ್ತಾರೆ. ಸಿನಿಮಾ ನಮ್ಮ ಪ್ಯಾಷನ್. ಅದೊಂದು ವೃತ್ತಿ. ಅದನ್ನು ಯಾವತ್ತಿಗೂ ಮರೆಯಲ್ಲ ಮತ್ತು ಬಿಡೋದಿಲ್ಲ ಎನ್ನುವ ಅವರು, ಮ್ಯಾರೇಜ್ ಲೈಫ್ ಜೊತೆ ಸಿನಿಮಾ ಲೈಫ್ ಕೂಡ ಮುಖ್ಯ ಎಂಬುದನ್ನು ಹೇಳಿದ್ದಾರೆ. ಆ ಕುರಿತು ಅವರು “ಉದಯವಾಣಿ’ಗೆ ಹೇಳಿದ್ದಿಷ್ಟು.
ಕುಟುಂಬದ ಪ್ರೋತ್ಸಾಹ ಕಾರಣ
“ಸಿನಿಮಾ ಅಂದರೆ ಹಾಗೇನೆ. ಮದುವೆಯಾದ ಹೆಣ್ಮಕ್ಕಳು ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆ ದೊಡ್ಡದಾಗಿತ್ತು. ಹಾಗೊಂದು ವೇಳೆ ಸಿನಿಮಾದಲ್ಲಿ ನಟಿಸಿದರೆ, ಅದು ಸುದ್ದಿಯೂ ಆಗುತ್ತಿತ್ತು. ಅದು ಆಗ. ಕೆಲವು ವರ್ಷಗಳು ಹಾಗೆ ಅನಿಸಿದ್ದವು. ಆದರೆ, ಈಗ ಕಾಲ ಬದಲಾಗಿದೆ. ನನ್ನ ಬಗ್ಗೆ ಹೇಳುವುದಾದರೆ, ಮದುವೆ ನಂತರ, ಅತ್ತೆ ಮನೆಯಲ್ಲಿ, ಅಮ್ಮನ ಮನೆಯಲ್ಲಿ ಯಾವಾಗ ವಾಪಾಸ್ ಸಿನಿಮಾ ಮಾಡ್ತೀಯಾ, ಬೇಗ ಮಾಡು, ಸುಮ್ಮನೆ ಮನೆಯಲ್ಲಿ ಕೂರಬೇಡ ಅಂತ ಹೇಳ್ಳೋರು. ಮದುವೆ ಎಂಬುದು ಪ್ರತಿಯೊಬ್ಬರಿಗೂ ವಿಶೇಷವೆ. ಆದರೆ, ತಮ್ಮ ಕೆರಿಯರ್‌ಗೆ ಮ್ಯಾರೇಜ್ ಅಡ್ಡಿಯಾಗಬಾರದು, ಯಾವತ್ತೂ ಸಮಸ್ಯೆ ಆಗಬಾರದು ಅಂತ ಎರಡು ಫ್ಯಾಮಿಲಿಯಲ್ಲೂ ಆ ಬಗ್ಗೆ ಪ್ರೀತಿ ಇತ್ತು. ಮದುವೆ ನಂತರವೂ ನಾನು ಅನೇಕ ಕಥೆ ಕೇಳಿದ್ದೆ. ಆದರೆ, ಸಿನಿಮಾ ಮಾಡಲು ಸಮಯ ಇರಲಿಲ್ಲ. ಕಾರಣ, ಆಗಷ್ಟೇ ಮದುವೆಯಾಗಿದ್ದೆ, ಚಿರು ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಬಿಜಿಯಾಗಿದ್ದರು. ನನಗೂ ಸ್ವಲ್ಪ ಸಮಯ ಬೇಕಾಗಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ ಕಂಫರ್ಟ್ ಜೋನ್ ಬೇಕಿತ್ತು. ಆದರೂ, ಮನೆಯಲ್ಲಿ ಪ್ರೀತಿಯಿಂದಲೇ ಸಿನಿಮಾ ಮಾಡು, ನಿನಗೆ ಒಪ್ಪಿದ ಕಥೆ ಆಯ್ಕೆ ಮಾಡಿಕೋ ಎಂಬ ಬೆಂಬಲ ಇತ್ತು. ಒಂದು ವರ್ಷ ಅರಾಮವಾಗಿ ಮನೆಯಲ್ಲಿರಬೇಕೆಂದುಕೊಂಡಿದ್ದೆ. ಆಗ “ಇರುವುದೆಲ್ಲವ ಬಿಟ್ಟು’ ಚಿತ್ರ ರಿಲೀಸ್‌ಗೆ ರೆಡಿಯಾಗಿತ್ತು. ಅದರ ಪ್ರಮೋಶನ್‌ಗೆ ಓಡಾಟ ಮಾಡಿದೆ. ನಂತರ, ಮದುವೆ ಮುನ್ನ ಒಪ್ಪಿದ್ದ “ಒಂಟಿ’ ಎಂಬ ಸಿನಿಮಾ ಅರ್ಧಕ್ಕೆ ಬಿಟ್ಟಿದ್ದೆ. ಮದ್ವೆ ಬಳಿಕ ಆ ಸಿನಿಮಾದ ಬ್ಯಾಲೆನ್ಸ್ ಸೀನ್, ಸಾಂಗ್ ಮುಗಿಸಿಕೊಟ್ಟೆ. ಆ ಮಧ್ಯೆಯೂ ಒಳ್ಳೆಯ ಸ್ಕ್ರಿಪ್ಟ್ ಬಂದವು. ಮಾಡಲಾಗಲಿಲ್ಲ. ಈಗ ಉಪೇಂದ್ರ ಅವರ ಜೊತೆಗೊಂದು ಸಿನಿಮಾ ಮಾಡುತ್ತಿದ್ದೇನೆ. ಸೃಜನ್ ಲೋಕೇಶ್ ಜೊತೆಗೂ ಒಂದು ಸಿನಿಮಾ ಇದೆ. ಉಪೇಂದ್ರ ಅವರ ಜೊತೆ ಫೆಬ್ರವರಿಯಲ್ಲೇ ಮಾಡಬೇಕಿತ್ತು. ಕಾರಣಾಂತರದಿಂದ ಆಗಲಿಲ್ಲ. ಈಗ ಶುರುವಾಗಲಿದೆ. ಅತ್ತ, ನನ್ನ ಪ್ರೊಡಕ್ಷನ್ ಕೂಡ ನಡೆಯುತ್ತಿದೆ. ಆ್ಯಕ್ಟರ್ ಆಗಿ ಅನುಭವ ಗೊತ್ತು. ಈಗ ಪ್ರೊಡ್ಯುಸರ್ ಆಗಿದ್ದೇನೆ. ನಿರ್ದೇಶನ ಯಾವಾಗ ಅಂತ ಬಹಳಷ್ಟು ಜನ ಕೇಳ್ತಾರೆ. ದುಡ್ಡು ಹಾಕಿ ಸಿನಿಮಾ ನಿರ್ಮಾಣ ಮಾಡಿಬಿಡಬಹುದು. ಆದರೆ, ನಿರ್ದೇಶನದ ಜವಾಬ್ದಾರಿ ದೊಡ್ಡದು. ಇಡೀ ಸಿನಿಮಾ ನಿರ್ದೇಶಕ ಹೊರಬೇಕು. ಅಷ್ಟೊಂದು ಅನುಭವ ಇಲ್ಲ. ಆಸೆಯಂತೂ ಇದೆ ಮುಂದೆ ನೋಡೋಣ’ ಎಂದೇ ಹೇಳುತ್ತಿದ್ದೇನೆ. ಇನ್ನು, ಚಿರು ಜೊತೆಗೆ “ಆಟಗಾರ’ ಮಾಡಿದ್ದೆ. ಖಂಡಿತ ಇಬ್ಬರೂ ಒಂದು ಸಿನಿಮಾ ಮಾಡ್ತೀವಿ. ಒಂದು ಇಂಟ್ರೆಸ್ಟಿಂಗ್ ಲವ್‌ಸ್ಟೋರಿಯೂ ಬಂದಿದೆ. ಆದರೆ, ಚಿರು ಬಿಜಿ ಇದ್ದಾರೆ. ಇಬ್ಬರಿಗೂ ಕಥೆ ಇಷ್ಟವಾಗಿದೆ. ನೋಡಬೇಕು. 2020 ರಲ್ಲಿ ಇಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ತೀವಿ’ ಎನ್ನುತ್ತಾರೆ ನಟಿ, ನಿರ್ಮಾಪಕಿ, ಮೇಘನಾರಾಜ್.
ಮದ್ವೆ ಬಳಿಕ ಆಫೀಸ್‌ಗೆ ಹೋಗಬಹುದು, ಸಿನ್ಮಾ ಮಾಡಬಾರದಾ?
“ಮದ್ವೆ ನಂತರವೂ ನಾನು ಸಮ್ಮನೆ ಕೂತಿಲ್ಲ. “ಕಾಣದಂತೆ ಮಾಯವಾದನು’ ಚಿತ್ರ ಮಾಡಿದೆ. ಕಳೆದ ವರ್ಷವೇ “ಹೀಗೊಂದು ದಿನ’ ರಿಲೀಸ್ ಆಯ್ತು. ಈಗ ಪುನಃ “ಕೃಷ್ಣ ಟಾಕೀಸ್’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ನನ್ನ ಪ್ರಕಾರ ಸಿನಿಮಾದಲ್ಲಿ ಕೆಲಸ ಮಾಡೋದು, ಒಂದು ಆಫೀಸ್‌ನಲ್ಲಿ ಕೆಲಸ ಮಾಡೋದು ಎರಡೂ ಒಂದೇ. ಮದುವೆ ಬಳಿಕ ಆಫೀಸ್‌ಗೆ ಹೋಗಬಹುದು. ಸಿನಿಮಾಗೆ ಹೋಗಬಾರದು ಅಂದರೆ ಹೇಗೆ? ಸಿನಿಮಾವನ್ನು ಯಾಕೆ ಬಿಡಬೇಕು. ಅದು ನಮ್ಮ ಆಯ್ಕೆ. ಬೇರೆಯವರ ಬಗ್ಗೆ ನಾನು ಏನೂ ಹೇಳಲ್ಲ. ನಾನು ಯಾವತ್ತೂ ಅಂದುಕೊಂಡಿದ್ದನ್ನೇ ಮಾಡಿದವಳು. ಈ ವಿಷಯದಲ್ಲಿ ನನ್ನ ಮನೆಯಲ್ಲಿ ತುಂಬಾನೇ ಸಹಕಾರವಿದೆ, ಪ್ರೋತ್ಸಾಹವೂ ಇದೆ. ಎಲ್ಲಿಯವರೆಗೆ ನಿನಗೆ ಇಷ್ಟ ಇರುತ್ತೋ, ಅಲ್ಲಿಯವರೆಗೂ ಸಿನಿಮಾ ಕೆಲಸ ಮಾಡು ಅಂತ ಮನೆಯವರೆಲ್ಲಾ ಬೆಂಬಲ ಕೊಟ್ಟು, ಉತ್ಸಾಹ ತುಂಬಿದ್ದಾರೆ. ಮದುವೆ ನಂತರ ಹಲವು ಕಥೆ ಬಂದಿದ್ದವು. ನಾನು ಈಗಲೂ ಒಳ್ಳೆಯ ಕಥೆ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಮದುವೆಗೂ ಮುನ್ನ ನಾನು ಬೋಲ್ಡ್ ಪಾತ್ರ ಮಾಡಿಲ್ಲ. ಒಂದೇ ರೀತಿಯ ಪಾತ್ರ ಮಾಡಿಕೊಂಡು ಬಂದವಳು. ಅದೇ ರೀತಿಯ ಪಾತ್ರಗಳೇ ಹುಡುಕಿ ಬರುತ್ತಿವೆ. ನನ್ನ ಕಂಫರ್ಟ್ ಜೋನ್‌ನಲ್ಲೇ ಕೆಲಸ ಮಾಡೋಕೆ ಇಷ್ಟ ಪಡ್ತೀನಿ. ಇದುವರೆಗೆ ಹಾಗೆಯೇ ಇದ್ದೇನೆ. ಮುಂದೆ ಯಾವುದೇ ಸಿನಿಮಾ ಮಾಡಿದರೂ ಅದೇ ಜೋನ್‌ನಲ್ಲೇ ಕೆಲಸ ಮಾಡ್ತೀನಿ. “ಕೃಷ್ಣ ಟಾಕೀಸ್’ಗೆ ಜೂನ್‌ನಲ್ಲಿ ನನ್ನ ಭಾಗದ ಚಿತ್ರೀಕರಣ ಶುರುವಾಗಲಿದೆ. ಸದ್ಯ ಪರಭಾಷೆಯಿಂದಲೂ ಮಾತುಕತೆ ನಡೆಯುತ್ತಿದೆ. ಒಳ್ಳೇ ಅವಕಾಶ ಎನಿಸಿದರೆ ಖಂಡಿತ ಮಾಡ್ತೀನಿ’ ಎಂದು ನಟಿ ಸಿಂಧು ಲೋಕನಾಥ್ ಹೇಳುತ್ತಾರೆ.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.