ಅನಂತನ ಲಾಯರ್‌ಗಿರಿ
Team Udayavani, Sep 8, 2017, 1:10 PM IST
ಅನಂತಕೃಷ್ಣ ಕ್ರಮಧಾರಿತಾಯ ಎಲ್‌ಎಲ್‌ಬಿ..!
– ಹೀಗೊಂದು ನೇಮ್ ಪ್ಲೇಟ್. ಅದರ ಹಿಂದೆ ಕುಳಿತಿರುವ ಲಾಯರ್ ಅನಂತು. ಆ ಅನಂತು ಹಿಂದಿರುವ ನೂರಾರು ಕಾನೂನು ಪುಸ್ತಕಗಳ ಕಬೋರ್ಡು… ಇಷ್ಟು ಹೇಳಿದ ಮೇಲೆ ಇದೊಂದು ಲಾಯರ್ ಕುರಿತ ಚಿತ್ರ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಹೌದು, ವಿನಯ್ ರಾಜಕುಮಾರ್ ಅಭಿನಯದ “ಅನಂತು ವರ್ಸಸ್ ನುಸ್ರತ್’ ಸಿನಿಮಾದ ಪೋಸ್ಟರ್ ಗಳನ್ನು ನೋಡಿದರೆ ವಿನಯ್ ರಾಜ್‌ಕುಮಾರ್ ಇಲ್ಲಿ ಲಾಯರ್ ಅಂತ ನಂಬಲೇಬೇಕು. ಅದಕ್ಕೆ ಪೂರಕ ಎಂಬಂತೆ ಹೈಕೋರ್ಟ್ ಮುಂದೆ ಕಪ್ಪು ಕೋಟ್ ಧರಿಸಿ ನಡೆದಾಡುವ ಶೈಲಿಯಲ್ಲಿರುವ ಫೋಟೋಗಳು ಒಂದಷ್ಟು ಲಾಯರ್ ಕಥೆ ಹೇಳುವಂತಿವೆ. ಕಂಠೀರವ ಸ್ಟುಡಿಯೋದುದ್ದಕ್ಕೂ ಅಂತಹ ಫೋಟೋಗಳು ರಾರಾಜಿಸಿದ್ದರಿಂದ, ಅದೊಂದು ಲಾಯರ್ ಸಿನಿಮಾ ಅಂತ ಎಲ್ಲರೂ ಫಿಕ್ಸ್ ಆಗಿದ್ದರು.
ಹೇಳಿಕೇಳಿ ಇದು ವಿನಯ್‌ರಾಜ್‌ಕುಮಾರ್ ಅವರ ಮೂರನೇ ಚಿತ್ರ. ಹಾಗಾಗಿ, ಈ ಬಾರಿಯೂ ಪಕ್ಕಾ ತಯಾರಿಯೊಂದಿಗೇ ಕ್ಯಾಮೆರಾ ಮುಂದೆ ನಿಲ್ಲೋಕೆ ಅಣಿಯಾಗಿದ್ದಾರೆ ವಿನಯ್. ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭಕ್ಕೆ ಚಿತ್ರರಂಗದ ದಂಡು ಬಂದಿತ್ತು. ಪುನೀತ್ ಕ್ಲಾಪ್ ಮಾಡಿದರೆ, ಶಿವರಾಜ್‌ಕುಮಾರ್ ಕ್ಯಾಮೆರಾಗೆ ಚಾಲನೆ ಕೊಟ್ಟರು. ರಾಘವೇಂದ್ರ ರಾಜ್‌ಕುಮಾರ್ ದಂಪತಿ ಮಗನಿಗೆ ಆಶೀರ್ವದಿಸಿದ್ದೂ ಆಯ್ತು. ರಾಜ್ ಕುಟುಂಬದ ಹಾಜರಿಯೊಂದಿಗೆ “ಅನಂತು ವರ್ಸಸ್ ನುಸ್ರತ್’ಗೆ ಚಾಲನೆಯೂ ಸಿಕ್ಕಾಯ್ತು. ತಮ್ಮ ಮೂರನೇ ಸಿನಿಮಾ ಕುರಿತು ವಿನಯ್ ರಾಜಕುಮಾರ್ ತಂಬಾ ವಿಶ್ವಾಸದಿಂದಲೇ ಹೇಳುತ್ತಾ ಹೋದರು. “ನಾನು ಈ ಕಥೆ ಕೇಳಿದಾಗಲೇ ಥ್ರಿಲ್ ಆದೆ. ಕಥೆಯಲ್ಲೊಂದು ಜೋಶ್ ಇದೆ. ನಿರ್ದೇಶಕರು ಹೇಳಿದ ಸ್ಟೋರಿಲೈನ್‌ನಲ್ಲಿ ಎಂಥವರಿಗೂ ಸ್ಪಾರ್ಕ್ ಆಗದೇ ಇರದು. ಹಾಗಾಗಿ, ನನಗೆ ಹಿಂದಿನ ಚಿತ್ರಗಳಿಗಿಂತ ಭಿನ್ನವಾದ ಪಾತ್ರ ಇದರಲ್ಲಿದೆ ಅನಿಸಿತು. ಹಾಗಾಗಿ ಒಪ್ಪಿಕೊಂಡೆ. ಅದಾದ ಬಳಿಕ ನಾನು ಆ ಪಾತ್ರಕ್ಕಾಗಿ ವಿಶೇಷ ತಯಾರಿ ಮಾಡಿಕೊಳ್ಳಬೇಕಿತ್ತು.
ಮೊದಲು ನಾನು ಮಾಡಿದ ಕೆಲಸ, ನನ್ನ ತಾತನ (ಡಾ.ರಾಜ್ ಕುಮಾರ್) “ಚಲಿಸುವ ಮೋಡಗಳು’ ಹಾಗೂ “ಧ್ರುವತಾರೆ’ ಚಿತ್ರಗಳನ್ನು ನೋಡಿದೆ. ಅವರ ಯಾವುದೇ ಚಿತ್ರವಿರಲಿ, ಇತರರಿಗೆ ಸ್ಫೂರ್ತಿ. ನನ್ನ ವಿಷಯದಲ್ಲೂ ಅಷ್ಟೇ, ನಾನು ಅದೆಷ್ಟೋ ತಾತನ ಚಿತ್ರಗಳನ್ನು ನೋಡಿ ಖುಷಿಗೊಂಡಿದ್ದೇನೆ.
ಅವರ ಪಾತ್ರದ ಮೂಲಕ ಅರಿತುಕೊಂಡಿದ್ದೇನೆ. ಇಲ್ಲಿ ನನ್ನದು ಲಾಯರ್ ಪಾತ್ರ. ಹಾಗಂತ, ಸಿನಿಮಾದುದ್ದಕ್ಕೂ ಅದೇ ಇರೋದಿಲ್ಲ. ಒಂದು ರೀತಿಯ ಚಾಲೆಂಜಿಂಗ್ ಪಾತ್ರವದು. ಜಡ್ಜ್ ಮುಂದೆ ಹೇಗೆ ಮಾತನಾಡಬೇಕು, ಸಂಭಾಷಣೆ ಜತೆ ಹೇಗೆಲ್ಲಾ ಬಾಡಿಲಾಂಗ್ವೇಜ್ ಇಟ್ಟುಕೊಳ್ಳಬೇಕೆಂಬುದನ್ನು
ಸೂಕ್ಷ್ಮವಾಗಿ ಅರಿತಿದ್ದೇನೆ. ಕೋರ್ಟ್ ರೂಮ್‌ನಲ್ಲಿ ವಾದಮಂಡನೆ ಇದ್ದರೂ, ಇಲ್ಲಿ ಸೀರಿಯಸ್ ವಿಷಯ ಕಡಿಮೆ. ಒಂದೊಳ್ಳೆಯ ಮನರಂಜನೆ ಇಲ್ಲಿರಲಿದೆ’ ಎಂದು ಹೇಳಿಕೊಳ್ಳುತ್ತಾರೆ ವಿನಯ್ ರಾಜಕುಮಾರ್.
“ಇನ್ನು, ಕೋರ್ಟ್ ರೂಮ್‌ನ ಆಚೆ ಕಡೆ ಹೇಳುವುದಾದರೆ, ನಾಯಕಿ ಸೇರಿದಂತೆ ಇತ್ಯಾದಿ ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ನಾಯಕಿ ಯಾರೆಂಬುದು ಸಸ್ಪೆನ್ಸ್. ನುಸ್ರತ್ ಅನ್ನೋದು ನಾಯಕಿನಾ ಅನ್ನುವುದಕ್ಕೂ ನೀವು ಸಿನಿಮಾ ನೋಡಲೇಬೇಕು. ಇಲ್ಲಿ ನಾಯಕ ಲಾಯರ್ ಅಂದಮೇಲೆ, ನಾಯಕಿಯೂ ಲಾಯರ್ ಇರಬಾರದೇಕೆ ಎಂಬ ನಿಮ್ಮ ಪ್ರಶ್ನೆಗೆ ಈಗಲೇ ಉತ್ತರಿಸುವುದು ಕಷ್ಟ.
ಸಿನಿಮಾದಲ್ಲಿ ಮಾತು ಜಾಸ್ತಿ ಇದ್ದರೂ, ಎಲ್ಲವೂ ಕಾಮಿಡಿಯಾಗಿರುತ್ತೆ. ನಾಯಕನದು ಲಾಯರ್ ಪಾತ್ರ ಅನ್ನೋದನ್ನು ಹೊರತುಪಡಿಸಿದರೆ, ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ ಅನ್ನೋದು ಪಕ್ಕಾ. ಇಲ್ಲಿ ಯಾವುದೇ ಆ್ಯಕ್ಷನ್ ಇಲ್ಲ. ಆದರೆ, ಹೀರೋ ಪಾತ್ರ ತುಂಬಾ ಪವರ್‌ಫುಲ್ ಆಗಿದೆ. ನಾನು ಈ ಚಿತ್ರದ ಕಥೆ ಆಯ್ಕೆ ಮಾಡಿಕೊಳ್ಳೋಕೆ ಕಾರಣ, ನಿರ್ದೇಶಕರು ಮಾಡಿಕೊಂಡಿರುವ ಪ್ಲಾನಿಂಗ್. ಒನ್‌ಲೈನ್ ಸ್ಟೋರಿಯಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮಾಸ್ ಚಿತ್ರ ಬಿಟ್ಟು, ಈ ರೀತಿಯ ಸಿನಿಮಾ ಮಾಡಬೇಕು ಅನ್ನೋದು ನನ್ನ ಆಸೆಯಾಗಿತ್ತು. ಕಾರಣ, ನನಗಿನ್ನೂ ಮೆಚೂರಿಟಿ ಬೇಕು. ಹಾಗಾಗಿ, ಮೂರನೇ ಸಿನಿಮಾದ ಆಯ್ಕೆ ಹೀಗಿದೆ. ನನ್ನ ಇಷ್ಟದ ಕಥೆ ಅನಿಸಿತು.
ಅಪ್ಪನಿಗೆ ಹೇಳಿದೆ. ಅಪ್ಪನಿಗೂ ಕಥೆ ಇಷ್ಟವಾಯ್ತು. ಈಗ ಚಿತ್ರಕ್ಕೆ ಚಾಲನೆ ಸಿಕ್ಕಿದೆ’ ಎಂದು ವಿವರ ಕೊಡುತ್ತಾರೆ ವಿನಯ್. ಹಾಗಾದರೆ, ಇಲ್ಲಿ ಲಾಯರ್ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತಾನಾ? ಈ ಪ್ರಶ್ನೆಗೆ, ವಿನಯ್ ಉತ್ತರಿಸಿದ್ದು ಹೀಗೆ: “ಅದನ್ನು ಈಗಲೇ ಹೇಳಿಬಿಟ್ಟರೆ, ಕುತೂಹಲ ಇರೋದಿಲ್ಲ. ಒಟ್ನಲ್ಲಿ ಇಲ್ಲಿ ಪ್ರೀತಿ, ಗೀತಿ ಇತ್ಯಾದಿ ಇರಲಿದೆ’ ಅಂತ ಹೇಳಿ ನಿರ್ದೇಶಕರಿಗೆ ಮೈಕ್ ಕೊಟ್ಟರು ವಿನಯ್. ನಿರ್ದೇಶಕ ಸುಧೀರ್ ಶಾನ್‌ಭೋಗ್ ಅವರಿಗೆ ಇದು ಮೊದಲ ಚಿತ್ರ. ಈ ಹಿಂದೆ ಬೆರಳೆಣಿಕೆ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಥೆ, ಇತ್ಯಾದಿ ಬರೆದಿದ್ದಾರೆ.
“ಅನಂತು ಮತ್ತು ನುಸ್ರತ್ ಕಥೆಯನ್ನು ಚಿತ್ರದಲ್ಲೇ ನೋಡಬೇಕು. ಈ ಕಥೆಯನ್ನು ರಾಘಣ್ಣ ಮತ್ತು ವಿನಯ್ ಕೇಳಿ ಒಪ್ಪಿಕೊಂಡಾಗಲೇ ನಾನು ಶೇ.50 ರಷ್ಟು ಗೆದ್ದಷ್ಟು ಖುಷಿಯಾಯ್ತು. ಇನ್ನರ್ಧ ಗೆಲುವು ನನ್ನ ತಂಡದ ಶ್ರಮ, ಜನರು ತೋರುವ ಪ್ರೀತಿ ಮೇಲಿದೆ. ಊಟಿ, ಬೆಂಗಳೂರು, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಸೆಪ್ಟೆಂಬರ್ ಅಂತ್ಯದಿಂದ ಶೂಟಿಂಗ್ ಶುರುವಾಗಲಿದೆ. ಸಿನಿಮಾಗಾಗಿ ಕೋರ್ಟ್‌ನ ವಿಶೇಷ ಸೆಟ್ ಹಾಕಲಾಗುವುದು. ಪೋಸ್ಟರ್ ಸೀರಿಯಸ್ ಆಗಿದ್ದರೂ, ತುಂಬಾ ಹಾಸ್ಯಮಯವಾಗಿಯೇ ಸಿನಿಮಾ ಸಾಗಲಿದೆ’ ಎನ್ನುತ್ತಾರೆ ನಿರ್ದೇಶಕರು.
ಚಿತ್ರಕ್ಕೆ ಕೆಂಪೇಗೌಡ ನಿರ್ಮಾಪಕರು. ಅವರಿಗೆ ಇದು ಮೊದಲ ಚಿತ್ರ. ಪಕ್ಕಾ ರಾಜ್‌ಕುಮಾರ್ ಅಭಿಮಾನಿ. ಅವರು ಮೈಸೂರಿನಲ್ಲಿದ್ದಾಗ “ತಾಯಿಗೆ ತಕ್ಕ ಮಗ’ ಸಿನಿಮಾಗೆ ಬ್ಲ್ಯಾಕ್ ಟಿಕೆಟ್ ಮಾರುತ್ತಿದ್ದರಂತೆ. ಈಗ ಅವರ ಕುಟುಂಬದವರ ಜತೆ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿ ಇದೆಯಂತೆ. ನನಗೆ ಇದು ಹೊಸ ಫಿಲ್ದು. ಕಥೆ ಬಗ್ಗೆ ಏನೂ ಗೊತ್ತಿಲ್ಲ. ನನ್ನ ಮಗ ಒಂದು ಸಿನಿಮಾ ಮಾಡ್ತೀನಿ ಅಂದಾಗ, ನಾನು ಜತೆಗೆ ನಿಂತಿದ್ದೇನಷ್ಟೇ. ರಾಜ್ ಪುತ್ರರ ಸಹಕಾರ ನಮಗಿದೆ. ಹಾಗಾಗಿ ಈ ಚಿತ್ರ ಮಾಡುತ್ತಿದ್ದೇನೆ. ನಿಮ್ಮ ಪ್ರೋತ್ಸಾಹವೂ ಇರಲಿ ಅಂದರು ಕೆಂಪೇಗೌಡ.
ನಿರಂಜನ್ ಚಿತ್ರಕ್ಕೆ ಕತ್ತರಿ ಹಿಡಿದರೆ, ಸುನಾದ್ ಗೌತಮ್ ಸಂಗೀತವಿದೆ. ಅಭಿಷೇಕ್ ಛಾಯಗ್ರಾಹಕರು. ಅಂದು ಇವರೆಲ್ಲರೂ “ಅನಂತು ಮತ್ತು ನುಸ್ರತ್ ಬಗ್ಗೆ ಮಾತಾಡುವ ಹೊತ್ತಿಗೆ ಸಮಯ ಮೀರಿತ್ತು. ಮಾತುಕತೆಗೂ ಬ್ರೇಕ್ ಬಿತ್ತು.
ವಿಜಯ್ ಭರಮಸಾಗರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.