ಆಗಲ್ಲ ಅನ್ನೋದು ಸುಳ್ಳು;ಉಸಿರಿರೋವರೆಗೂ ಕೆಲಸ ಮಾಡ್ತೀನಿ
Team Udayavani, Mar 31, 2017, 11:44 AM IST
“ಇತ್ತೀಚೆಗೆ ಯಾರೋ ಒಬ್ಬರು ನಿರ್ದೇಶಕರು ತಮ್ಮ ಚಿತ್ರದಲ್ಲಿ ನಟಿಸುವಂತೆ ಕೇಳಿದರು. ಒಪ್ಪಿಕೊಂಡೆ. ಸಂಭಾವನೆ ಎಷ್ಟು ತಗೋತೀರಾ ಎಂದರು. 10 ಸಾವಿರ ಎಂದೆ. ಆಯ್ತು ಎಂದರು. ಕೊನೆಗೆ ಆ ಸಿನಿಮಾದ ಪ್ರೊಡಕ್ಷನ್ ಮ್ಯಾನೇಜರ್ ಒಬ್ಬರು ಫೋನ್
ಮಾಡಿ 23ರಿಂದ 25ನೇ ತಾರೀಖೀನವರೆಗೂ ಡೇಟ್ ಬೇಕು ಎಂದರು. ಬೇರೆ ಊರಿನಲ್ಲಿ ಚಿತ್ರೀಕರಣ. ನನಗೆ ನೈಟ್ ಬಸ್ ಆಗಲ್ಲ.
ಬೆಳಿಗ್ಗೇನೇ ಹೊರಡುತ್ತೀನಿ ಅಂದೆ. ವಾಪಸ್ಸು ಮಾಡುತ್ತೀನಿ ಎಂದು ಹೇಳಿ ಫೋನ್ ಕಟ್ ಮಾಡಿದ ಅವರು, ಅರ್ಧ ಗಂಟೆ ಬಿಟ್ಟು
ಫೋನ್ ಮಾಡಿದರು. ನಿಮಗೆ ವಯಸ್ಸಾಗಿದೆ, ಮನೇಲಿರಿ ಎಂದರು.
ಬೆಂಗಳೂರಿನಲ್ಲಿ ಏನಾದರೂ ಶೂಟಿಂಗ್ ಇದ್ದರೆ ಬೇಕಾದರೆ ಮಾಡಿಸೋಣ ಎಂದರು …’ ಇಷ್ಟು ಹೇಳಿ ಒಂದು ಕ್ಷಣ ಮೌನವಾದರು ಹಿರಿಯ ನಟ ಉಮೇಶ್. “ಬಹಳ ನೋವಾಯ್ತು. ಎಲ್ಲರಿಗೂ ವಯಸ್ಸಾಗುತ್ತೆ. ಈ ವಯಸ್ಸಿನಲ್ಲಿ ನನಗೆ ಕೆಲಸ ಆಗಲ್ಲ ಅನ್ನೋ ಮಾತು ಸುಳ್ಳು. ನಾನು ಉಸಿರಿರುವವರೆಗೂ ಕೆಲಸ ಮಾಡುತ್ತಲೇ ಇರುತ್ತೀನಿ. ಒಂದು ಪಕ್ಷ ಆಗೋದಿಲ್ಲ ಎಂದರೆ ಬಿಟ್ಟುಬಿಡ್ತೀನಿ. ಇವತ್ತಿಗೂ ನಾನು ನಾಟಕ ಕಲಿಸಿದರೆ ಒಂದು ಲಕ್ಷ ದುಡಿಯಬಹುದು. ಎರಡು ತಿಂಗಳಲ್ಲಿ ನಾಟಕ ಕಲಿಸೋ ಸಾಮರ್ಥ್ಯವಿದೆ. ಆದರೆ, ನಾನು ಚಿತ್ರರಂಗವನ್ನೇ ನಂಬಿದ್ದೀನಿ. ಚಿತ್ರಂಗ ನನಗೆ ಎಲ್ಲವನ್ನೂ ಕೊಟ್ಟಿದೆ. ಈ ವಯಸ್ಸಿನಲ್ಲಿ ಇಂತಹ ಮಾತುಗಳನ್ನು ಕೇಳ್ಳೋಕೆ ನೋವಾಗುತ್ತದೆ’ ಎನ್ನುತ್ತಾರೆ ಉಮೇಶ್.
ಎಷ್ಟೇ ನೋವಾದರೂ, ಇಂತಹ ನೋವುಗಳೆಲ್ಲಾ ಕ್ಷಣಿಕ ಎಂದು ಅವರ ನಂಬಿಕೆ. “ಅವರು ಈ ತರಹದ ನೋವುಗಳನ್ನು ಸಾಕಷ್ಟು
ಅನುಭವಿಸಿದ್ದೀನಿ. ಬಣ್ಣ ಹಚ್ಚಿಕೊಂಡ ನಂತರ ಬೇಡ ಎಂದು ವಾಪಸ್ಸು ಕಳಿಸಿದೋರು ಇದ್ದಾರೆ. 67 ವರ್ಷಗಳ ಕಾಲ ನಟನೆ ಮಾಡಿದವನು ನಾನು. ಈಗಲೂ ಒಬ್ಬ ವ್ಯಕ್ತಿಯನ್ನು ಹೀಗೆ ಅಳೀತಾರಲ್ಲ ಅಂತ ಬೇಸರವಿದೆ. ಆದರೆ, ಇವೆಲ್ಲಾ ಚಲಿಸುವ
ಮೋಡಗಳು ಅಂತ ನನಗೆ ಗೊತ್ತು. ಇಲ್ಲಿ ಪ್ರಮುಖವಾಗಿ ಪ್ರತಿಭೆಗಿಂತ ಅದೃಷ್ಟ ಬಹಳ ಮುಖ್ಯ. ಆ ವಿಷಯದಲ್ಲಿ ನಾನು ಬಹಳ
ಅದೃಷ್ಟವಂತ. 57 ವರ್ಷಗಳ ಕಾಲ ಚಿತ್ರರಂಗ ಮತ್ತು 67 ವರ್ಷಗಳ ಕಾಲ ರಂಗಭೂಮಿಯ ನಂಟಿರುವವನು ನಾನು. ಮೂರೂ¾ರು
ತಲೆಮಾರುಗಳನ್ನು ನೋಡಿದ್ದೀನಿ. ಗುಬ್ಬಿ ವೀರಣ್ಣ, ಹಿರಣ್ಣಯ್ಯ, ಡಾ. ರಾಜಕುಮಾರ್ ಅವರ ಮೂರು ತಲೆಮಾರುಗಳ ಜೊತೆಗೆ ಕೆಲಸ
ಮಾಡಿದ್ದೀನಿ. ಅಂಥದ್ದೊಂದು ಸಾಮರ್ಥ್ಯವನ್ನು ಭಗವಂತ ಕೊಟ್ಟಿದ್ದಾನೆ. ಇದಕ್ಕಿಂತ ಬೇರೆ ಆಸ್ತಿ ಏನು ಬೇಕು’ ಎಂದು ಸಮಾಧಾನ
ಮಾಡಿಕೊಳ್ಳುತ್ತಾರೆ ಅವರು.
ಚೇತನ್ ನಾಡಿಗೇರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.