ಆರಂಭದ ಪ್ರಶ್ನೆಗೆ ಕೊನೆಯಲ್ಲಿ ಉತ್ತರ
Team Udayavani, Jun 22, 2018, 6:00 AM IST
“ಒಂದು ಸಿನಿಮಾ, ಮೂರು ಕಥೆ, ಒಂದೊಂದು ವ್ಯಥೆ, ಒಂದಷ್ಟು ಪಾತ್ರ…’
– ಇದು “ಮಿಸ್ಟರ್ ಚೀಟರ್ ರಾಮಾಚಾರಿ’ ಚಿತ್ರದೊಳಗಿನ ಅಂಶ. ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವ
ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ನಿರ್ದೇಶಕ ರಾಮಾಚಾರಿ, ತಮ್ಮ ತಂಡದೊಂದಿಗೆ ಪತ್ರಕರ್ತರ ಎದುರು ಕುಳಿತಿದ್ದರು.
ಮೊದಲು ಮೈಕ್ ಎತ್ತಿಕೊಂಡು ಮಾತಿಗಿಳಿದ ರಾಮಾಚಾರಿ ಹೇಳಿದ್ದಿಷ್ಟು. “ಬಹುತೇಕ ರಾಯಚೂರು ಭಾಗದವರೇ
ಸೇರಿ ಮಾಡಿದ ಚಿತ್ರವಿದು. ಹಾಗಂತ, ಅಲ್ಲಿನ ಭಾಷೆಯೇ ಇಲ್ಲಿ ಹೈಲೆಟ್ ಅಲ್ಲ. ಇಲ್ಲಿ ಈಗಿನ ವಾಸ್ತವತೆಯ ಅಂಶಗಳಿವೆ.
ವಸ್ತುಸ್ಥಿತಿಗತಿಯ ಚಿತ್ರಣವಿದೆ. ಮೂರು ಕಥೆಯಲ್ಲೂ ಒಂದೊಂದು ವಿಶೇಷತೆ ಇದೆ. ಆರಂಭದಿಂದಲೇ ಚಿತ್ರ ನೋಡಬೇಕು. ಏಕೆಂದರೆ,ಆರಂಭದ ದೃಶ್ಯಗಳಿಗೆ ಕೊನೆಯ ಐದು ನಿಮಿಷದ ಕ್ಲೈಮ್ಯಾಕ್ಸ್‌ನಲ್ಲಿ ಅರ್ಥ ಕೊಡಲಾಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ. ಹಾಗಂತ, ಇಲ್ಲಿ ಎಲ್ಲೂ ಅಶ್ಲೀಲತೆ ಇಲ್ಲ. ವೇಶ್ಯವಾಟಿಕೆಯ ಅಂಶಗಳಿದ್ದುದರಿಂದ “ಎ’ ಪ್ರಮಾಣ ಪತ್ರ ಕೊಡಲಾಗಿದೆ’ ಎನ್ನುತ್ತಾರೆ ಅವರು.
ನಿರ್ಮಾಪಕಿ ಪ್ರವೀಣಾ ರವೀಂದ್ರ ಕುಲಕರ್ಣಿ ಅವರಿಗೆ ಇದು ಮೊದಲ ಅನುಭವ. “ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತಿದೆ. ಇಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ಕಥೆಯೇ ಎಲ್ಲಾ ಪಾತ್ರಗಳನ್ನೂ ಪ್ರತಿನಿಧಿಸುತ್ತದೆ’ ಎಂದು ಮಾಹಿತಿ ಕೊಟ್ಟರು.
ಶಾಲಿನಿ ಭಟ್‌ಗೆ ಚಿತ್ರ ಬಿಡುಗಡೆಯಾಗುತ್ತಿರುವ ಸುದ್ದಿ ಕೇಳಿ ಖುಷಿಯಾಗಿದೆಯಂತೆ. ಅವರಿಗಿಲ್ಲಿ ಭ್ರಷ್ಟರಾಜಕಾರಣಿಯ ಪಾತ್ರ ಸಿಕ್ಕಿದೆಯಂತೆ. ಇದು ಈಗಿನ ಪರಿಸ್ಥಿತಿಯನ್ನು ಅನಾವರಣ ಮಾಡುವ ಚಿತ್ರಣ ಹೊಂದಿದೆ’ ಅಂದರು ಶಾಲಿನಿ ಭಟ್. ಗಾಯಕಿ ಶಾಂತ ಕುಲಕರ್ಣಿ ಅವರು ಚಿತ್ರದಲ್ಲಿ “ಅಮ್ಮ ಅಮ್ಮ’ ಎಂಬ ಗೀತೆಯನ್ನು ಹಾಡಿದ್ದರ ಬಗ್ಗೆ ಹೇಳಿಕೊಂಡರು. ಪ್ರದ್ಯೋತನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಶ್ರೀಕಾಂತ್, ಮೇಘನಾ ಗೌಡ, ರಾಮಾಂಜನೇಯ, ಮೇಘನಾ ಕೃಷ್ಣಮೂರ್ತಿ ಇತರರು ಮಾತನಾಡುವ ಹೊತ್ತಿಗೆ ಸಮಯ ಮೀರಿತ್ತು. ಚಿತ್ರವನ್ನು ವೆಂಕಟ್‌ಗೌಡ ವಿತರಣೆ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.